ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಇದು ಪಾಸ್‌ ಪೋರ್ಟ್‌ ಸ್ಥಾನ ಪುರಾಣ..

ನಾನು ಪಾಸ್‌ಪೋರ್ಟ್ ಮಾಡಿಸಿದ್ದೇನೆ. ಇನ್ನು ಯಾವ ದೇಶಕ್ಕಾದರೂ ಹೋಗಬಹುದು" ಎಂದು ಕೆಲವರು ಹೇಳುವುದಿದೆ. ಅಂಥವರು ಪಾಸ್‌ಪೋರ್ಟ್ ಇದ್ದರೆ ತಾವು ಎಲ್ಲಿ ಬೇಕಾದರೂ ಹೋಗಬಹುದು ಎಂದು ತಿಳಿದಿರುತ್ತಾರೆ. ಕೇವಲ ಪಾಸ್‌ಪೋರ್ಟ್ ಇದ್ದರೆ ಸಾಲದು, ಯಾವುದೇ ಒಂದು ದೇಶಕ್ಕೆ ಹೋಗಬೇಕು ಎಂದಾದರೆ ಆ ದೇಶದ ವೀಸಾ ಕೂಡ ಬೇಕಾಗುತ್ತದೆ ಎಂದು ಅವರಿಗೆ ತಿಳಿದಿರುವುದಿಲ್ಲ. ಈ ವಿಷಯದಲ್ಲಿ ನಮ್ಮ ಶಾಲೆಗಳ ಲ್ಲಿಯೂ ಯಾವುದೇ ಪಾಠ ಇದ್ದಂತಿಲ್ಲ.

Kiran Upadhyay Column: ಇದು ಪಾಸ್‌ ಪೋರ್ಟ್‌ ಸ್ಥಾನ ಪುರಾಣ..

-

ವಿದೇಶವಾಸಿ

ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್, ಫ್ರಾನ್ಸ್‌ ನಂಥ ದೇಶಗಳನ್ನೆಲ್ಲ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ. ಹೀಗೆಯೇ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತದೆ ಎಂಬ ವರದಿ ಯಿದೆ. ಹಾಗಿರು ವಾಗ ಶಕ್ತಿಯುತ ಪಾಸ್ ಪೋರ್ಟ್ ಹೊಂದುವುದರಲ್ಲಿ ಭಾರತ ಏಕೆ ವಿಫಲವಾಗುತ್ತಿದೆ ಎನ್ನುವ ಪ್ರಶ್ನೆ ಕಾಡುವುದು ಸಹಜ.

ನಾನು ಪಾಸ್‌ಪೋರ್ಟ್ ಮಾಡಿಸಿದ್ದೇನೆ. ಇನ್ನು ಯಾವ ದೇಶಕ್ಕಾದರೂ ಹೋಗಬಹುದು" ಎಂದು ಕೆಲವರು ಹೇಳುವುದಿದೆ. ಅಂಥವರು ಪಾಸ್‌ಪೋರ್ಟ್ ಇದ್ದರೆ ತಾವು ಎಲ್ಲಿ ಬೇಕಾದರೂ ಹೋಗಬಹುದು ಎಂದು ತಿಳಿದಿರುತ್ತಾರೆ. ಕೇವಲ ಪಾಸ್‌ಪೋರ್ಟ್ ಇದ್ದರೆ ಸಾಲದು, ಯಾವುದೇ ಒಂದು ದೇಶಕ್ಕೆ ಹೋಗಬೇಕು ಎಂದಾದರೆ ಆ ದೇಶದ ವೀಸಾ ಕೂಡ ಬೇಕಾಗುತ್ತದೆ ಎಂದು ಅವರಿಗೆ ತಿಳಿದಿರುವುದಿಲ್ಲ. ಈ ವಿಷಯದಲ್ಲಿ ನಮ್ಮ ಶಾಲೆಗಳ ಲ್ಲಿಯೂ ಯಾವುದೇ ಪಾಠ ಇದ್ದಂತಿಲ್ಲ.

ಇದೊಂದು ರೀತಿಯಲ್ಲಿ ‘ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇದೆಯೇ?’ ಎಂದು ಕೇಳಿದಾಗ, ‘ಲರ್ನರ್ಸ್ ಲೈಸೆನ್ಸ್ ಇದೆ’ ಎಂದ ಹಾಗೆಯೇ. ವೀಸಾ ಇಲ್ಲದೆ, ಖಾಲಿ ಪಾಸ್ ಪೋರ್ಟ್ ಮಾತ್ರ ಇದ್ದರೆ ಯಾವ ದೇಶವೂ ಇನ್ನೊಂದು ದೇಶದ ಪ್ರಜೆಯನ್ನು ತನ್ನೊಳಗೆ ಬಿಟ್ಟುಕೊಳ್ಳುವು ದಿಲ್ಲ. ‌

ಹಾಗಂತ ಪಾಸ್‌ಪೋರ್ಟ್ ಇಲ್ಲದೆ ವೀಸಾ ಪಡೆಯಲೂ ಸಾಧ್ಯವಿಲ್ಲ. ವೀಸಾ ಬೇಕು ಎಂದಾ ದರೆ ಒಬ್ಬ ವ್ಯಕ್ತಿ ಮಾಡಬೇಕಾದ ಕನಿಷ್ಠ ಮತ್ತು ಮತ್ತು ಮೊದಲ ಕೆಲಸ ಎಂದರೆ, ಪಾಸ್‌ ಪೋರ್ಟ್ ಮಾಡಿಸುವುದು. ಇರಲಿ, ವಿದೇಶ ಪ್ರಯಾಣಕ್ಕೆ ಅವಶ್ಯವಾಗಿರುವ ಪಾಸ್‌ಪೋರ್ಟ್ ಮಾಡಿಕೊಡಲೂ ಇಂದು ಏಜೆನ್ಸಿಗಳಿವೆ.

ಇದನ್ನೂ ಓದಿ: Kiran Upadhyay Column: ನಿಸರ್ಗ ಎಂದಾಕ್ಷಣ ಮನುಷ್ಯ ನೆನಪಾಗುತ್ತಾನಾ ?

ಪ್ರತಿಯೊಂದು ದೇಶದ ಪಾಸ್ ಪೋರ್ಟ್‌ಗೂ ಒಂದು ವ್ಯಾಲ್ಯೂ ಇದೆ, ಒಂದು ಸ್ಥಾನವಿದೆ. ಅದನ್ನು ಹೇಳುವುದಕ್ಕೆ ಒಂದು ಸಂಸ್ಥೆಯೂ ಇದೆ. ಒಂದು ದೇಶದ ಪಾಸ್‌ಪೋರ್ಟ್‌ನ ಮೌಲ್ಯ ಅಥವಾ ಘನತೆ ಎಷ್ಟು ಎಂದು ಅಳೆದು ಹೇಳುವ ಸಂಸ್ಥೆ ಹೆನ್ಲಿ. ಜಾಗತಿಕ ಪೌರತ್ವ ಮತ್ತು ನಿವಾಸ ಸಲಹೆಯ ಸಮೀಕ್ಷೆ ನಡೆಸುವ ಹೆನ್ಲಿ ಸಂಸ್ಥೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆ ಹೋಗಿ ಅಲ್ಲಿಯ ಪೌರತ್ವ ಪಡೆಯಲು ಸಹಕರಿಸುತ್ತದೆ.

ಒಂದು ಅರ್ಥದಲ್ಲಿ, ಇದು ವಿಶ್ವದ ನೂರ ತೊಂಬತ್ತೊಂಬತ್ತು ದೇಶಗಳ ಪಾಸ್‌ಪೋರ್ಟ್‌ನ ಟಿಆರ್‌ಪಿ ಎಷ್ಟು ಎಂದು ಹೇಳುತ್ತದೆ ಎಂದರೂ ಅಡ್ಡಿಯಿಲ್ಲ. ಲಂಡನ್ ಮೂಲದ ಈ ಸಂಸ್ಥೆ ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (ಐಎಟಿಎ) ಸಂಸ್ಥೆಯೊಂದಿಗೆ ಸೇರಿ 2023ರ ಪಾಸ್‌ಪೋರ್ಟ್ ಸೂಚ್ಯಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಆ ಸೂಚ್ಯಂಕದ ಪ್ರಕಾರ, ಭಾರತದ ಪಾಸ್‌ಪೋರ್ಟ್ ವಿಶ್ವದಾದ್ಯಂತ ಇರುವ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಎಂಬತ್ತೈದನೆಯ ಸ್ಥಾನದಲ್ಲಿದೆ.

ಕಳೆದ ವರ್ಷ ಭಾರತ ಎಂಬತ್ತೇಳನೆಯ ಸ್ಥಾನದಲ್ಲಿತ್ತು. ಅಂದರೆ ಈ ವರ್ಷ ಎರಡು ಸ್ಥಾನ ಮೇಲಕ್ಕೇರಿದೆ. ಮುಂದುವರಿಯುವುದಕ್ಕಿಂತ ಮೊದಲು ಪಾಸ್‌ಪೋರ್ಟ್ ಮತ್ತು ವೀಸಾ ನಡುವಿನ ಅಂತರ ತಿಳಿಯೋಣ. ಹೆಚ್ಚಿನ ಜನರಿಗೆ ತಿಳಿವಳಿಕೆ ಇದೆಯಾದರೂ, ಪಾಸ್‌ ಪೋರ್ಟ್ ಇದ್ದರೆ ಬೇರೆ ದೇಶಕ್ಕೆ ಹೋಗಬಹುದು ಎಂದು ತಿಳಿದ ಕೆಲವು ಜನ ಇನ್ನೂ ನಮ್ಮ ನಡುವೆ ಇದ್ದಾರೆ.

Passport R

ಪಾಸ್ ಪೋರ್ಟ್ ವ್ಯಕ್ತಿಯ ಹೆಸರು, ವಿಳಾಸ, ವಯಸ್ಸು, ಪೌರತ್ವ ಇತ್ಯಾದಿಗಳನ್ನು ತಿಳಿಸುವ ಅಧಿಕೃತ ದಾಖಲೆ. ವೀಸಾ ಒಂದು ದೇಶದೊಳಗೆ ಪ್ರವೇಶ ಮಾಡಲು ಆ ದೇಶ ನೀಡುವ ಪರವಾನಗಿ. ಪ್ರವಾಸಕ್ಕೆ, ನೌಕರಿಗೆ, ಭೇಟಿಗೆ ಅಥವಾ ಇನ್ಯಾವುದೇ ಕಾರಣಕ್ಕೆ ಒಂದು ದೇಶದ ಒಳಗೆ ಹೋಗಲು ಕೇವಲ ಪಾಸ್‌ಪೋರ್ಟ್ ಇದ್ದರೆ ಸಾಲದು, ಆ ದೇಶದ ವೀಸಾ ಕೂಡ ಅವಶ್ಯಕವಾಗುತ್ತದೆ. ಎರಡು ದೇಶಗಳ ನಡುವಿನ ಒಪ್ಪಂದದಿಂದ ಕೆಲವೊಮ್ಮೆ ಕೆಲವು ದೇಶಗಳಿಗೆ ಹೋಗಲು ಮುಂಚಿತವಾಗಿ ಪರವಾನಗಿ ಪಡೆಯುವ ಅವಶ್ಯಕತೆ ಇರುವುದಿಲ್ಲ.

ಉದಾಹರಣೆಗೆ, ಭಾರತದಿಂದ ನೇಪಾಳ ಅಥವಾ ಥಾಯ್ಲೆಂಡ್‌ಗೆ ಹೋಗಲು ಮೊದಲೇ ವೀಸಾ ಪಡೆಯುವ ಅವಶ್ಯಕತೆ ಇಲ್ಲ. ಆ ದೇಶಕ್ಕೆ ಹೋಗಿ ತಲುಪಿದ ನಂತರ ವೀಸಾ ಪಡೆಯಬಹುದು. ಕೆಲವು ದೇಶಗಳಿಗೆ ಆನ್‌ಲೈನ್ ಮೂಲಕ ಮುಂಚಿತವಾಗಿ ವೀಸಾ ಪಡೆಯುವ ಸೌಲಭ್ಯವಿದ್ದರೆ, ಅಮೆರಿಕದಂಥ ದೇಶಗಳಿಗೆ ವೀಸಾ ಪಡೆಯಬೇಕಾದರೆ ದೂತಾವಾಸಕ್ಕೆ ಹೋಗಿ ಅದನ್ನು ಪಡೆಯಬೇಕಾಗುತ್ತದೆ. ಅಂದ ಹಾಗೆ, ಈಗ ಅಮೆರಿಕದ ವೀಸಾ ಬೇಕೆಂದರೆ ಹೆಚ್ಚು ಕಮ್ಮಿ ಒಂದು ಸಾವಿರ ದಿನ ಕಾಯಬೇಕಂತೆ!

ವೀಸಾದಂತೆಯೇ ಪಾಸ್‌ಪೋರ್ಟ್‌ನಲ್ಲಿಯೂ ಬೇರೆ ಬೇರೆ ಬಗೆಗಳಿವೆ. ಭಾರತ ಸರಕಾರವು, ಸಾಮಾನ್ಯವಾಗಿ ಕಾಣುವ ಕಡುನೀಲಿ ಬಣ್ಣದ ಪಾಸ್‌ಪೋರ್ಟ್ ಹೊರತಾಗಿ ಬಿಳಿ ಮತ್ತು ಕಡುಗೆಂಪು ಬಣ್ಣದ ಪಾಸ್‌ಪೋರ್ಟ್ ಅನ್ನೂ ವಿತರಿಸುತ್ತದೆ. ಕಡುಗೆಂಪು ಬಣ್ಣದ ಪಾಸ್ ಪೋರ್ಟ್ ಅನ್ನು ಮಂತ್ರಿಗಳು, ಇತರೆ ರಾಜತಾಂತ್ರಿಕ ವರ್ಗದವರಿಗೂ, ಬಿಳಿ ಬಣ್ಣದ ಪಾಸ್ ಪೋರ್ಟ್ ಅನ್ನು ಕೇಂದ್ರ ಸರಕಾರದ ಪ್ರಮುಖ ಅಧಿಕಾರಿಗಳಿಗೂ ನೀಡುತ್ತಾರೆ.

ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದ್ದರೆ ಬಹುತೇಕ ದೇಶಗಳಿಗೆ ವೀಸಾ ಇಲ್ಲದೆಯೇ ಪ್ರವೇಶ ಪಡೆಯಬಹುದಾಗಿದೆ. ಅಷ್ಟೇ ಅಲ್ಲ, ಅವರನ್ನು ವಿಮಾನ ನಿಲ್ದಾಣದಲ್ಲಿ ಬೇರೆ ಮಾರ್ಗದಿಂದ ವಿಶೇಷ ಗೌರವದೊಂದಿಗೆ ಕರೆದೊಯ್ಯಲಾಗುತ್ತದೆ. ಯಾವ ದೇಶದ ಪಾಸ್‌ ಪೋರ್ಟ್ ಶಕ್ತಿಶಾಲಿ ಎನ್ನುವುದನ್ನು ನೋಡಲು ಸಮೀಕ್ಷೆ ನಡೆಯುತ್ತದೆ ಎಂದೆನಲ್ಲ, ಆ ಸಮೀಕ್ಷೆಯ ಪ್ರಕಾರ ಯಾವ ದೇಶದ ಪಾಸ್‌ಪೋರ್ಟ್ ಅತ್ಯಂತ ಶಕ್ತಿಯುತವಾಗಿದೆ ಊಹಿಸ ಬಲ್ಲಿರಾ? ದೊಡ್ಡಣ್ಣ ಅಮೆರಿಕ? ಅಲ್ಲ ಎಂದರೆ ಆಶ್ಚರ್ಯ ಪಡಬೇಡಿ! ಯುನೈ ಟೆಡ್ ಕಿಂಗ್‌ಡಮ್ ಕೂಡ ಅಲ್ಲ.

ಫ್ರಾನ್ಸ್, ಜರ್ಮನಿ, ಇಟಲಿ? ಯುರೋಪ್ ಅಥವಾ ಅಮೆರಿಕದ ಇತರ ದೇಶಗಳು? ಊಹೂಂ... ಸಮೀಕ್ಷೆಯ ಪ್ರಕಾರ ಮೊದಲನೆಯ ಸ್ಥಾನದಲ್ಲಿರುವುದು ಜಪಾನ್. ಜಪಾನ್ ಶಕ್ತಿಯುತ ಪಾಸ್ ಪೋರ್ಟ್ ಹೊಂದಿದ ದೇಶವಾಗಿ ನಿಂತಿರುವುದು ಇದೇ ಮೊದಲ ಸಲವಲ್ಲ. ಕಳೆದ ಕೆಲವು ವರ್ಷಗಳಿಂದ ಜಪಾನ್ ತನ್ನ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಎರಡನೆಯ ಸ್ಥಾನದಲ್ಲೂ ಏಷ್ಯಾ ಖಂಡದ ದೇಶಗಳೇ ಆದ ಸಿಂಗಾಪುರ ಮತ್ತು ದಕ್ಷಿಣ ಕೋರಿಯಾ. ‌

ಮೂರನೆಯ ಸ್ಥಾನದಲ್ಲಿ ಜರ್ಮನಿ ಮತ್ತು ಸ್ಪೇನ್ ಇವೆ. ಈ ಶಕ್ತಿ ಸ್ಪರ್ಧೆಯಲ್ಲಿ ಯುಕೆ, -, ಐರ್ಲೆಂಡ್, ಪೋರ್ಚುಗಲ್ ದೇಶಗಳು ಆರನೆಯ ಸ್ಥಾನ ಪಡೆದರೆ, ಅಮೆರಿಕ ಏಳನೆಯ ಸ್ಥಾನದಲ್ಲಿದೆ. ಈಗಾಗಲೇ ಹೇಳಿದಂತೆ ಭಾರತ ಎಂಬತ್ತೈದನೆಯ ಸ್ಥಾನದಲ್ಲಿದೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಭಾರತ ಎಂಬತ್ತೆರಡರಿಂದ ಎಂಬತ್ತೇಳರ ಮಧ್ಯೆ ಗಿರಕಿ ಹೊಡೆಯುತ್ತಿದೆ.

ಇರಲಿ, ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ದೇಶ ಯಾವುದು ಗೊತ್ತೇ? ಅಫ್ಘಾನಿ ಸ್ತಾನ. ಇರಾಕ್ ಅದಕ್ಕಿಂತ ಒಂದು ಮನೆ ಮೇಲೆ. ಹಾಗಾದರೆ ಇದನ್ನು ಅಳೆಯುವುದಕ್ಕೆ ಮಾಪನ ಯಾವುದು? ಈ ಕಾರ್ಯಕ್ಕೆ ಪ್ರಮುಖವಾಗಿ ಒಂದು ದೇಶದ ಪ್ರಜೆ ಎಷ್ಟು ದೇಶಕ್ಕೆ ಮುಂಚಿತವಾಗಿ ವೀಸಾ ಪಡೆಯದೆ ಪ್ರವೇಶ ಪಡೆಯಬಹುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಉದಾಹರಣೆಗೆ, ಜಪಾನ್ ದೇಶದ ಪಾಸ್‌ಪೋರ್ಟ್ ಹೊಂದಿದವರು ನೂರ ತೊಂಬತ್ಮೂರು ದೇಶಗಳಿಗೆ ಮುಂಗಡ ವೀಸಾ ಪಡೆಯದೆ ಪ್ರವೇಶಿಸಬಹುದಾಗಿದೆ. ಸಿಂಗಾಪುರ, ದಕ್ಷಿಣ ಕೊರಿಯಾದ ಪ್ರಜೆಗಳು ನೂರತೊಂಬತ್ತೆರಡು ದೇಶಕ್ಕೆ ಪ್ರವೇಶ ಪಡೆಯಬಹುದಾಗಿದೆ. ವರ್ತಮಾನದಲ್ಲಿ ಭಾರತದ ಪಾಸ್‌ಪೋರ್ಟ್ ಹೊಂದಿದವರು ಐವತ್ತೊಂಬತ್ತು ದೇಶಕ್ಕೆ ಪ್ರವೇಶ ಪಡೆಯಬಹುದಾಗಿದೆ.

ಇದುವರೆಗೂ ಭಾರತದ ಪ್ರಜೆಗಳಿಗೆ ಉಚಿತ ಪ್ರವೇಶ ನೀಡುತ್ತಿದ್ದ ಸರ್ಬಿಯ ಇದೇ ಜನವರಿ ಯಿಂದ ಉಚಿತ ಪ್ರವೇಶವನ್ನು ರದ್ದುಗೊಳಿಸಿದೆ. ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್‌ನಂಥ ದೇಶಗಳನ್ನೆಲ್ಲ ಹಿಂದಿಕ್ಕಿ ಐದನೆಯ ಸ್ಥಾನಕ್ಕೇರಿದೆ.

ಹೀಗೆಯೇ ಮುಂದುವರಿದರೆ ಇನ್ನು ನಾಲ್ಕು-ಐದು ವರ್ಷದಲ್ಲಿ (ರಷ್ಯಾ-ಉಕ್ರೇನ್ ಯುದ್ಧ ಮುಂದುವರಿದರೆ ಇನ್ನೂ ಬೇಗ!) ಜಪಾನ್, ಜರ್ಮನಿಯನ್ನೂ ಹಿಂದಿಕ್ಕಿ ಮುನ್ನಡೆಯುತ್ತದೆ ಎಂಬ ವರದಿಯಿದೆ. ಹಾಗಿರುವಾಗ ಶಕ್ತಿಯುತ ಪಾಸ್‌ಪೋರ್ಟ್ ಹೊಂದುವುದರಲ್ಲಿ ಏಕೆ ವಿಫಲವಾಗುತ್ತಿದೆ ಎನ್ನುವ ಪ್ರಶ್ನೆ ಕಾಡುವುದು ಸಹಜ.

ಅಸಲಿಗೆ ಒಂದು ದೇಶವು ಆರ್ಥಿಕ ವಾಗಿ ಬಲಶಾಲಿಯಾಗಿದ್ದರೆ ಆ ದೇಶದ ಪಾಸ್‌ಪೋರ್ಟ್ ಶಕ್ತಿಯುತವಾಗಿರಲೇಬೇಕೆಂದೇನೂ ಇಲ್ಲ. ಒಂದು ದೇಶದ ಮಿಲಿಟರಿ ಬಲಶಾಲಿಯಾಗಿದ್ದರೆ ಆ ದೇಶದ ಪಾಸ್‌ಪೋರ್ಟ್ ಕೂಡ ಬಲಶಾಲಿಯಾಗಿರಬೇಕೆಂದೂ ಇಲ್ಲ. ಹಾಗೇನಾದರೂ ಇದ್ದರೆ ಅಮೆರಿಕದ ಪಾಸ್‌ಪೋರ್ಟ್ ಮೊದಲನೆಯ ಸ್ಥಾನದಲ್ಲಿರಬೇಕಿತ್ತು.

ಇಲ್ಲಿ ಪ್ರಮುಖವಾಗಿ ಗಣನೆಗೆ ಬರುವುದು ವೀಸಾ. ವೀಸಾ ಇಲ್ಲದೇ ಪ್ರವೇಶ ಪಡೆಯುವುದಕ್ಕೆ ಇರುವ ಮೂರು ಪ್ರಮುಖ ಅಂಶಗಳಲ್ಲಿ ಮೊದಲನೆಯದು, ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ. ಎರಡನೆಯದು, ಒಂದು ದೇಶದ ಪ್ರಜೆಗಳು ಉದ್ಯೋಗಕ್ಕೋ, ಪ್ರವಾಸಕ್ಕೋ ಇನ್ನೊಂದು ದೇಶಕ್ಕೆ ಹೋದಾಗ ಆ ದೇಶದಲ್ಲಿ ನಡೆದುಕೊಳ್ಳುವ ರೀತಿ. ಮೂರನೆಯದು, ಒಂದು ದೇಶದ ಒಳಗಿನ ಆರ್ಥಿಕತೆ, ಸುರಕ್ಷತೆ ಇತ್ಯಾದಿಗಳು. ಈ ಮೂರೂ ಕ್ಷೇತ್ರದಲ್ಲಿ ಹೆಚ್ಚಿನ ಅಂಕ ಪಡೆದಷ್ಟೂ ಆ ದೇಶದ ಪಾಸ್ ಪೋರ್ಟ್ ಶಕ್ತಿಯುತವಾಗುತ್ತದೆ.

ಪ್ರವಾಸಕ್ಕೆ ಹೋದ ದೇಶದ ವಿಮಾನ ನಿಲ್ದಾಣದಲ್ಲಿ, ಇಮಿಗ್ರೇಷನ್‌ನಲ್ಲಿ ಅದಕ್ಕೆ ತಕ್ಕಂತೆ ಮರ್ಯಾದೆ ಸಿಗುತ್ತದೆ. ಅಲ್ಲಿಗೆ, ಪಾಸ್‌ಪೋರ್ಟ್ ಶಕ್ತಿಯುತವಾಗುವುದಕ್ಕೆ ರಾಜತಾಂತ್ರಿಕ ಸಂಬಂಧ ಉತ್ತಮಗೊಳ್ಳುವುದರ ಜತೆಗೆ ಆ ದೇಶಕ್ಕೆ ಹೋದ ಪ್ರವಾಸಿಗರ ವರ್ತನೆಯೂ ಅಷ್ಟೇ ಉತ್ತಮವಾಗಿರಬೇಕು ಎನ್ನುವುದನ್ನೂ ಒಪ್ಪಬೇಕು.

ಭಾರತೀಯರೇ ಆಗಲಿ, ಅಫ್ಘಾನಿಸ್ತಾನದ ಪ್ರಜೆಗಳೇ ಆಗಲಿ ಯಾವುದೇ ದೇಶಕ್ಕೆ ಹೋಗುವಾಗ ತಮಗಲ್ಲದಿದ್ದರೂ, ತಮ್ಮ ದೇಶಕ್ಕೆ ಒಂದಷ್ಟು ಗೌರವ ಸಿಗಬೇಕೆಂದು ಅಪೇಕ್ಷಿಸುತ್ತಾರೆ. ವಿಮಾನ ನಿಲ್ದಾಣ ಅಥವಾ ಭೂಮಿ, ಜಲ ಪ್ರದೇಶದ ಗಡಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಸುರಳೀತವಾಗಿ ದೇಶದ ಒಳಕ್ಕೆ ಪ್ರವೇಶ ಪಡೆಯಲು ಬಯಸುತ್ತಾರೆ. ಎಷ್ಟೆಂದರೂ, ಗಡಿಯಲ್ಲಿ ಅಥವಾ ವಿಮಾನ ನಿಲ್ದಾಣದಲ್ಲಿ ರಾಜಾರೋಷವಾಗಿ ನಡೆಯುವುದಕ್ಕೂ, ಸಾಲಿನಲ್ಲಿ ಕಾದು ನಿಂತು ಮುಂದುವರಿಯುವುದಕ್ಕೂ ವ್ಯತ್ಯಾಸ ಇದೆಯಲ್ಲ? ಸರತಿಯ ಸಾಲಿನಲ್ಲಿ ನಿಂತಾಗ ನಮ್ಮ ದೇಶದ ಪಾಸ್‌ಪೋರ್ಟ್ ಇನ್ನಷ್ಟು ಶಕ್ತಿಯುತವಾಗಿರಬೇಕಿತ್ತು ಎಂದೆನಿಸದೆ ಇರದು.

ಒಂದು ದೇಶವು ತಂತ್ರಜ್ಞಾನದಲ್ಲಿ ಮುಂದುವರಿದರೆ, ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಿದರೆ, ಸೈನ್ಯ ಬಲಶಾಲಿಯಾದರೆ, ವ್ಯಾಪಾರ-ವಹಿವಾಟಿನಲ್ಲಿ ಮುಂದುವರಿದರೆ ಆ ದೇಶದ ಪಾಸ್‌ಪೋರ್ಟ್ ಶಕ್ತಿಯುತವಾಗುತ್ತದೆ ಎನ್ನುವುದು ಮಿಥ್ಯ. ಹೌದು, ಪಾಸ್‌ ಪೋರ್ಟ್ ಶಕ್ತಿಯುತವಾಗಿ ಏನಾಗಬೇಕಿದೆ ಎನ್ನಬೇಡಿ. ಹೇಗೆ ವಿದ್ಯಾರ್ಥಿಯ ಜೀವನದಲ್ಲಿ ಪಠ್ಯಕ್ರಮದಲ್ಲಿ ಹೆಚ್ಚು ಅಂಕ ಗಳಿಸುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚಿನ ಅಂಕ ಪಡೆಯುವುದು ಮುಖ್ಯವೋ, ಹಾಗೆಯೇ ಪ್ರಪಂಚದ ಭೂಪಟದಲ್ಲಿ ಒಂದು ದೇಶವು ಘನತೆ, ಗೌರವ ಗಳಿಸಬೇಕಾದರೆ ಪ್ರತಿಯೊಂದು ಅಂಶವೂ ಮುಖ್ಯ.