ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surendra Pai Column: ಮಾತು ಬೆಳ್ಳಿ, ಮೌನ ಬಂಗಾರ ಎಂದು ನೆನಪಿಸುವ ಸಮಯವಿದು !

ಭಾರತ ವರ್ಷಕ್ಕೆ ಕೇವಲ ಎರಡು ಟನ್ ಚಿನ್ನವನ್ನು ರಾಯಚೂರಿನ ಹಟ್ಟಿ ಚಿನ್ನದ ಗಣಿಗಳಿಂದ ಉತ್ಪಾದನೆ ಮಾಡುತ್ತಿದೆ. ನಮ್ಮ ಕೋಲಾರ ಚಿನ್ನದ ಗಣಿಗಳ ಗತವೈಭವವನ್ನು ನೆನೆಸಿಕೊಂಡರೆ ಕೋಲಾರ ಚಿನ್ನದ ಗಣಿಗಳು 1880-2001ರ (121 ವರ್ಷಗಳು) ಮಧ್ಯೆ ಹೆಚ್ಚು ಕಡಿಮೆ ಒಂದು ಸಾವಿರ ಟನ್‌ಗಳಿಗಿಂತ ಹೆಚ್ಚು ಚಿನ್ನವನ್ನು ಭೂ ನೆಲದ ೩.೩೦ ಕಿಲೋಮೀಟರ್ ಆಳದಿಂದ ಉತ್ಪಾದನೆ ಮಾಡಿದ್ದವು.

ಸ್ವರ್ಣಕಾಲ

ಸುರೇಂದ್ರ ಪೈ, ಭಟ್ಕಳ

ನಿಜವಾದ ಚಿನ್ನ ಕರಗಬೇಕಾದರೆ 1064 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಬೇಕು ಅಂಥ ನಿಮಗೆ ಗೊತ್ತಾ!. ಒಂದು ಗ್ರಾಂ ಚಿನ್ನವನ್ನು ಸುಮಾರು ಒಂದು ಚದರ ಮೀಟರ್ ಪ್ರದೇಶದಷ್ಟು ತೆಳುವಾದ ಹಾಳೆಯಾಗಿ ಹರಡಬಹುದು. 23.8 ಗ್ರಾಂ ಚಿನ್ನದಿಂದ ೮ ಕಿ ಮೀ ಉದ್ದದ ದಾರವನ್ನಾಗಿ ಅಥವಾ ೧೦೦ ಚದರ ಅಡಿ ಹಾಳೆಯನ್ನಾಗಿ ಹರಡಬಹುದು. ಏರುತ್ತಿರುವ ಬಂಗಾರದ ದರ ನೋಡಿಯೇ ‘ಮಾತು ಬೆಳ್ಳಿ, ಮೌನ ಬಂಗಾರ’ ಎಂದಿರಬೇಕು ಅನಿಸ್ತಿದೆ. ಈಗ ಎಡೆ ಬಂಗಾರ ಎಂದಾಕ್ಷಣ ಕಾಣುವುದು ಬರೀ ಮೌನ ಮಾತ್ರ.

ಅಂದು ಬೆಳಿಗ್ಗೆ ಗಂಡ ಆಫೀಸ್‌ಗೆ ಹೋಗುವಾಗ ‘ರೀ ಇಂದು ನಮ್ಮ 23ನೇ ಮದುವೆ ವಾರ್ಷಿಕೋ ತ್ಸವದ ದಿನ ಕಣ್ರೀ ನೆನಪಿದೆಯಾ’ ಎಂದಳು. ಅಯ್ಯೋ ‘ ನನ್ನ ಚಿನ್ನಾ..ನನ್ನ ಬಂಗಾರಾ..’ ಅದನ್ನು ಹೇಗೆ ಮರೆಯಲಿ ಸಾಧ್ಯ, ಎಲ್ಲಾ ನೆನಪಿದೆ. ಇಂದು ಶನಿವಾರ, ವೀಕೆಂಡ್ ಬೇರೆ.

ಸಂಜೆ ಬೇಗ ಬರ್ತಿನಿ, ಹೊರಗಡೆ ಹೋಗಿ ಶಾಪಿಂಗ್ , ಡಿನ್ನರ್ ಮಾಡಿ, ಸಿನಿಮಾ ನೋಡ್ಕೊಂಡು ಬರೋಣಾ’ ಎಂದ. ಅಂದು ಆಫೀಸ್ ನಲ್ಲಿ ತುರ್ತು ಕೆಲಸ ಬಂದ ಕಾರಣ, ಕೆಲಸದ ಮರೆತವನು ವಾಚ್ ನೋಡಿದಾಗ ರಾತ್ರಿ ಒಂಭತ್ತಾಗಿತ್ತು. ನನ್ನವಳು ಕಾದು ಕಾದು ಕೆಂಡಾಮಂಡಲ ಆಗಿರುತ್ತಾಳೆ ಎಂದು ಊಹಿಸಿದ. ಏನಾದ್ರೂ ಆಗ್ಲಿ ಎಂದು ಒಂದಿಷ್ಟು ಸಿಹಿ ತಿಂಡಿ ಹಾಗೂ ಮಲ್ಲಿಗೆ ಹೂವು ಕಟ್ಟಿಸಿಕೊಂಡು ಮನೆಗೆ ಹೋದರೆ ನಿರೀಕ್ಷೆಯು ಹುಸಿಯಾಗಲಿಲ್ಲ.

ಸಾರಿ ನನ್ನ ಚಿನ್ನಾ...ನನ್ನ ಬಂಗಾರ ಎಂದೆ ಪುಸಲಾಯಿಸಿ ಕೊನೆಗೂ ಎಂದಿನಂತೆ ಆಕೆಯನ್ನು ಸಮಾಧಾನ ಪಡಿಸುತ್ತಾನೆ. ಇಂತಹದೊಂದು ಘಟನೆ ಈಗೇಕೆ ನೆನಪಾಯ್ತು ಅಂತಿದ್ದೀರಾ? ಕಳೆದ ಹಲವು ತಿಂಗಳಿಂದ ಒಂದೇ ಸಮನೆ ಏರಿಕೆ ಕಾಣುತ್ತಿರುವ ಬಂಗಾರದ ದರ ನೋಡಿದಾಗ ಇದೆ ನೆನಪಿಗೆ ಬಂತು. ಮನೆಯಾಕೆಯನ್ನು ‘ನನ್ನ ಚಿನ್ನಾ.ನನ್ನ ಬಂಗಾರ’ ಎಂದ್ರೆ ಸಾಕು ಆಕೆಯ ಕೋಪ ಕ್ಷಣಮಾತ್ರದಲ್ಲಿ ಕರಗುತ್ತೆ. ಆದರೆ ನಿಜವಾದ ಚಿನ್ನ ಕರಗಬೇಕಾದರೆ 1,064 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಬೇಕು ಅಂಥ ನಿಮಗೆ ಗೊತ್ತಾ!.

ಇದನ್ನೂ ಓದಿ: Surendra Pai Column: ವೃತ್ತಿಪರ ಕೋರ್ಸ್‌ ತನ್ನ ಉದ್ದೇಶ ಮರೆತರೆ ಹೇಗೆ ?

ಏರುತ್ತಿರುವ ಬಂಗಾರದ ದರ ನೋಡಿಯೇ ‘ಮಾತು ಬೆಳ್ಳಿ, ಮೌನ ಬಂಗಾರ’ ಎಂದಿರಬೇಕು ಅನಿಸ್ತಿದೆ. ಈಗ ಎಡೆ ಬಂಗಾರ ಎಂದಾಕ್ಷಣ ಕಾಣುವುದು ಬರೀ ಮೌನ ಮಾತ್ರ. ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮದುವೆಯ ಮುನ್ನ ‘ದೇವ್ರೇ ನನಗೆ ಚಿನ್ನದಂತಹ ಗಂಡ, ಹೆಂಡತಿ, ಅಳಿಯ, ಸೊಸೆ, ಮಕ್ಕಳು, ಮೊಮ್ಮಕ್ಕಳು ಕರುಣಿಸಪ್ಪಾ’ ಎಂಬ ಬೇಡಿಕೆ, ಬಾಲ್ಯದಲ್ಲಿ ತಾಯಿ ಪ್ರೀತಿ ಯಿಂದ ತನ್ನ ಮಗುವನ್ನು ‘ಬಂಗಾರಾ, ಚಿನ್ನಾ’ ಎಂದು ಕರೆಯುವುದು, ಪ್ರೀತಿಪಾತ್ರರನ್ನು ಹರಸುವಾಗ ನಿಮ್ಮ ಬಾಳು ಬಂಗಾರವಾಗಲಿ, ಬಂಗಾರದಂತೆ ನೂರ್ಕಾಲ ಬಳಿ, ದಸರಾ ಹಬ್ಬದಲ್ಲೂ ಬನ್ನಿ ಬಂಗಾರವಾಗಲಿ, ಒಳ್ಳೆಯ ಮಾತನಾಡಿದ್ರೆ ‘ಬಂಗಾರದಂತಾ ಮಾತನಾಡಿದ್ರಿ ಸ್ವಾಮಿ’, ಒಳ್ಳೆಯ ಸ್ವಭಾವ ಇದ್ದವರನ್ನು ಕಂಡಾಗ ಅವರದು ‘ಬಂಗಾರದಂತಹ ಮನಸ್ಸು ’ ಹೀಗೆ ಜೀವನದ ಬಹುತೇಕ ಸನ್ನಿವೇಶಗಳನ್ನು ಬಂಗಾರದೊಂದಿಗೆ ತಳುಕು ಹಾಕುತ್ತೇವೆ.

ಬಂಗಾರದ ಗುಣವೇ ಹಾಗೇ ಅದು ನೋಡಲು ಹಳದಿ ಬಣ್ಣ ಹೊಂದಿದ್ದರು ಸಹ ಭೂಗ್ರಹದಲ್ಲಿರುವ ಇತರ ಧಾತುಗಳಿಗಿಂತ ಆಕರ್ಷಕ ಗುಣವನ್ನು ಹೊಂದಿದ್ದು ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

ಚಿನ್ನವು ಅತ್ಯಂತ ಮೃದುವಾದ ಲೋಹವಾಗಿದ್ದು ಇದನ್ನು ಮಣ್ಣಿನಲ್ಲಿ, ಸಮುದ್ರದ ತಳದಲ್ಲಿ ನೂರಾರು ವರ್ಷ ಹೂತಿಟ್ಟರೂ ಅದು ತನ್ನ ಬಣ್ಣ ಕಳೆದುಕೊಳ್ಳುವುದಿಲ್ಲ. ಒಂದು ಗ್ರಾಂ ಚಿನ್ನ ವನ್ನು ಸುಮಾರು ಒಂದು ಚದರ ಮೀಟರ್ ಪ್ರದೇಶದಷ್ಟು ತೆಳುವಾದ ಹಾಳೆಯಾಗಿ ಹರಡಬಹುದು. ಗಾಳಿ, ತೇವಾಂಶ ಮತ್ತು ಹೆಚ್ಚಿನ ಆಮ್ಲಜನಕ ಹಾಗೂ ರಾಸಾಯನಿಕ ವಸ್ತುಗಳಿಂದ ಯಾವುದೇ ಪರಿಣಾಮಕ್ಕೆ ಒಳಗಾಗುವುದಿಲ್ಲ.

Digital Gold Investment

ತುಕ್ಕು ಹಿಡಿಯುವುದಿಲ್ಲ ಹಾಗೂ ಹೊಳಪನ್ನು ಕಳೆದುಕೊಳ್ಳುವುದಿಲ್ಲ. ಇದು ಶಾಖ ಮತ್ತು ವಿದ್ಯುತ್ ಎರಡರ ಉತ್ತಮ ವಾಹಕವಾಗಿದೆ. 23.8 ಗ್ರಾಂ ಚಿನ್ನದಿಂದ ೮ ಕಿ ಮೀ ಉದ್ದದ ದಾರ ವನ್ನಾಗಿ ಅಥವಾ 100 ಚದರ ಅಡಿ ಹಾಳೆಯನ್ನಾಗಿ ಹರಡಬಹುದು. ಸಾಗರದ ನೀರಲ್ಲೂ 771 ಲಕ್ಷಕೋಟಿ ಡಾಲರ್ ಅಂದರೆ ಸುಮಾರು ೨೦ ಮಿಲಿಯನ್ ಚಿನ್ನವಿದೆ ಎಂದು ವಿಜ್ಞಾನಗಳು ಹೇಳುತ್ತಾರೆ.

ಒಂದು ಸಮೀಕ್ಷೆ ಪ್ರಕಾರ 2023ರಲ್ಲಿ ಜಗತ್ತಿನಾದ್ಯಂತ ಸುಮಾರು ಮೂರು ಸಾವಿರ ಟನ್ ಬಂಗಾರ ವನ್ನು ಗಣಿಗಳಿಂದ ಉತ್ಪಾದನೆ ಮಾಡಲಾಗಿದೆ. ಪ್ರಸ್ತುತ ಹೆಚ್ಚು ಚಿನ್ನ ಉತ್ಪಾದನೆ ಮಾಡುತ್ತಿರುವ ಮೊದಲ ಹತ್ತು ದೇಶಗಳೆಂದರೆ ಚೀನಾ(380.2 ಟನ್), ರಷ್ಯಾ(330.0 ಟನ್ ),ಆಸ್ಟ್ರೇಲಿಯಾ (284.೦ ಟನ್), ಕೆನಡಾ (202.1 ಟನ್), ಬ್ರಿಟನ್ (158.0 ಟನ್), ಘಾನಾ (140.6 ಟನ್), ಮೆಕ್ಸಿಕೋ (140.3 ಟನ್), ಇಂಡೋನೇಷ್ಯಾ (140.1 ಟನ್), ಪೆರು (136.9 ಟನ್), ಉಜ್ಬೇಕಿಸ್ತಾನ್ (132.0 ಟನ್).

ಭಾರತ ವರ್ಷಕ್ಕೆ ಕೇವಲ ಎರಡು ಟನ್ ಚಿನ್ನವನ್ನು ರಾಯಚೂರಿನ ಹಟ್ಟಿ ಚಿನ್ನದ ಗಣಿಗಳಿಂದ ಉತ್ಪಾದನೆ ಮಾಡುತ್ತಿದೆ. ನಮ್ಮ ಕೋಲಾರ ಚಿನ್ನದ ಗಣಿಗಳ ಗತವೈಭವವನ್ನು ನೆನೆಸಿಕೊಂಡರೆ ಕೋಲಾರ ಚಿನ್ನದ ಗಣಿಗಳು 1880-2001ರ (121 ವರ್ಷಗಳು) ಮಧ್ಯೆ ಹೆಚ್ಚು ಕಡಿಮೆ ಒಂದು ಸಾವಿರ ಟನ್‌ಗಳಿಗಿಂತ ಹೆಚ್ಚು ಚಿನ್ನವನ್ನು ಭೂ ನೆಲದ 3.30 ಕಿಲೋಮೀಟರ್ ಆಳದಿಂದ ಉತ್ಪಾದನೆ ಮಾಡಿದ್ದವು.

ಚಿನ್ನಕ್ಕಾಗಿ ಯುಗ ಯುಗಾಂತರದಿಂದಲೂ ನಿರಂತರವಾಗಿ ಅದೆಷ್ಟೋ ಯುದ್ಧಗಳೇ ನಡೆದು ಹೋಗಿವೆ. ಬಂಗಾರದ ಹಿಂದೆ ಬಿದ್ದು ಲೆಕ್ಕವಿಲ್ಲದಷ್ಟು ಜನರು ಸತ್ತಿದ್ದಾರೆ. ರಾಜ ಮಹಾರಾಜರ ಅರಮನೆಗಳು, ಗುಡಿ, ಚರ್ಚು, ಮಸೀದಿಗಳು ಬಂಗಾರದಿಂದಲೇ ತುಂಬಿಕೊಂಡಿದ್ದರೆ, ಅಭಿವೃದ್ಧಿ ಹೊಂದಿದ ದೇಶಗಳ ಖಜಾನೆಗಳು, ಬ್ಯಾಂಕುಗಳಲ್ಲಿ ಚಿನ್ನದ ಇಟ್ಟಿಗೆಗಳನ್ನು ಪೇರಿಸಿಡಲಾಗಿದೆ.

ಭಾರತದ ದೇವಸ್ಥಾನಗಳಲ್ಲಿ ಮೂರು ಸಾವಿರದಿಂದ ನಾಲ್ಕು ಸಾವಿರ ಟನ್ ಚಿನ್ನ ಇದೆ ಎನ್ನಲಾಗಿದೆ. ಇನ್ನು ಭಾರತೀಯರ ಮನೆಗಳಲ್ಲಿ ಆಭರಣ ರೂಪದಲ್ಲಿರುವ ಬಂಗಾರ ಸುಮಾರು ಇಪ್ಪತ್ತೇಳು ಸಾವಿರ ಟನ್‌ಗಳಂತೆ! ಇದು ಬಹುಶಃ ತಪ್ಪು ಲೆಕ್ಕವಿರಬೇಕು. ಅದಕ್ಕಿಂತ ಹೆಚ್ಚು ಚಿನ್ನ ಇರಬಹುದು.

ಒಂದು ದೇಶದ ಸಂಪನ್ಮೂಲ ಸಂಪತ್ತು ಮತ್ತು ಆರ್ಥಿಕ ಸ್ಥಿರತೆಯ ಪ್ರಬಲ ಸೂಚಕವಾಗಿ ಚಿನ್ನ ಉಳಿದಿದೆ. ಭೂಮಿಯಲ್ಲಿ ಇದುವರೆಗೂ ಸಂಗ್ರಹವಾಗಿರುವ ಚಿನ್ನ ಸುಮಾರು 244000 ಮೆಟ್ರಿಕ್ ಟನ್‌ಗಳು ಎನ್ನಲಾಗಿದೆ. ಅಧಿಕೃತವಾಗಿ ಹೆಚ್ಚು ಚಿನ್ನ ಹೊಂದಿರುವ ೫ ಅಗ್ರ ದೇಶಗಳಲ್ಲಿ ಅಮೆರಿಕ (8133 ಟನ್), ಜರ್ಮನಿ (3352 ಟನ್) ,ಇಟಲಿ (2451 ಟನ್), ಫ್ರಾನ್ಸ್ (2436 ಟನ್), ರಷ್ಯಾ( 2332) ಸ್ಥಾನದಲ್ಲಿದೆ.

ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆ ಹಣಕಾಸು ವರ್ಷ 2025ರಲ್ಲಿ ಭಾರತದ ಚಿನ್ನದ ಸಂಗ್ರಹವು ದಾಖಲೆಯ 880 ಟನ್‌ಗಳೊಂದಿಗೆ ಜಾಗತಿಕವಾಗಿ ಒಂಭತ್ತನೇ ಸ್ಥಾನದಲ್ಲಿದೆ. ಇದು ಕಳೆದ ವರ್ಷಕ್ಕಿಂತ ೭% ಹೆಚ್ಚಳ ಕಂಡಿದೆ. ಭಾರತದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯ ಏರಿಕೆಯ ಹಾದಿ ಬಲು ರೋಚಕ ಕಥೆಯಿಂದ ಕೂಡಿದ್ದು 1964ರಲ್ಲಿ ಕೇವಲ ಋೂ.64 ಇತ್ತು. ಅಲ್ಲಿಂದ 2014 ಕ್ಕೆ ಬಂದರೆ ರೂ.28006 ಇದ್ದಿದ್ದು 2024 ರಲ್ಲಿ ರೂ.777560 ಪ್ರಸ್ತುತ ೧೦ ಗ್ರಾಂಗೆ ರೂ.೧.೩೩ ಲಕ್ಷದ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಅಷ್ಟಾದರೂ ಸಹ ಬಂಗಾರದ ಮೇಲಿನ ವ್ಯಾಮೋಹ , ಪ್ರೀತಿಯಲ್ಲಿ ಕೊರತೆ ಕಂಡುಬಂದಿಲ್ಲ, ಬರುವುದು ಇಲ್ಲ.

ಭೂಮಿಯ ಹೊರಚಿಪ್ಪು ಅಥವಾ ಭೂಪದರಗಳಿಗಿಂತ ಭೂಗರ್ಭದಲ್ಲಿ ಹೆಚ್ಚು ಚಿನ್ನದ ಖಜಾನೆ ಇರುವುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಬಂಗಾರದ ಜಾಡನ್ನು ಹುಡುಕುತ್ತಾ ಹೋದರೆ ವಿಜ್ಞಾನಿಗಳು ಭೂಮಿಯಲ್ಲಿ ಇದುವರೆಗೂ 118 ಧಾತುಗಳನ್ನು ಕಂಡುಹಿಡಿದಿದ್ದಾರೆ. ಅವುಗಳಲ್ಲಿ ಮೊದಲ ೯೪ ಧಾತುಗಳು ನೈಸರ್ಗಿಕವಾಗಿ ದೊರಕಿದರೆ, ೨೪ ಧಾತುಗಳು ರಾಸಾಯನಿಕ ಅಂಶಗಳ ಪರಮಾಣು ಪ್ರತಿಕ್ರಿಯಾತ್ಮಕತೆಯಿಂದ ಕೃತಕವಾಗಿ ಸಂಶ್ಲೇಷಿಸಲ್ಪಟ್ಟಿರುವುದಾಗಿ ತಿಳಿಯುತ್ತದೆ.

ವಿಜ್ಷಾನಿಗಳು ಭೂಗರ್ಭದಲ್ಲಿ ಸುಮಾರು 1.6 ಕ್ವಾಡ್ರಿಲಿಯನ್ ಟನ್‌ಗಳ ಚಿನ್ನ ಇದೆ ಎನ್ನುತ್ತಾರೆ. ಒಂದು ಕ್ವಾಡ್ರಿಲಿಯನ್ ಎಂದರೆ ಒಂದು ಅಂಕೆಯ ಮುಂದೆ ೧೫ ಸೊನ್ನೆಗಳನ್ನು ಹಾಕಬೇಕು. ಈ ಎಲ್ಲಾ ಚಿನ್ನವನ್ನು ಹೊರಕ್ಕೆ ತೆಗೆದುಕೊಂಡುಬಂದರೆ ಇಡೀ ಭೂಮೈಯನ್ನು ಒಂದೂವರೆ ಅಡಿ ಹಾಸಬಹುದಂತೆ!

ಒಂದು ಸ್ವಾರಸ್ಯಕರ ಕಥೆಯ ಪ್ರಕಾರ ಸುಮಾರು 1400 ಕೋಟಿ ವರ್ಷಗಳ ಹಿಂದೆ ಘಟಿಸಿದ ಬಿಗ್‌ ಬ್ಯಾಂಗ್ ಮಹಾ ಸ್ಫೋಟದಿಂದ ಬ್ರಹ್ಮಾಂಡದಲ್ಲಿ ಚಿನ್ನ ಹೇಗೆ ಸೃಷ್ಟಿಯಾಯಿತು ಎನ್ನುವ ವಾದ ವಿಜ್ಞಾನಗಳದ್ದು. ಚಿನ್ನ ಸೂಪರ್ನೋವಾ ನ್ಯೂಕ್ಲಿಯೊ ಸಿಂಥೆಸಿಸ್‌ನಲ್ಲಿ ಮತ್ತು ನ್ಯೂಟ್ರಾನ್ ನಕ್ಷತ್ರಗಳ ಘರ್ಷಣೆಯಿಂದ ಉತ್ಪತ್ತಿಯಾಯಿತು. ಅದು ಕೋಟ್ಯಂತರ ಸೌರವ್ಯೂಹಗಳು/ಸೂರ್ಯ ಮಂಡಲಗಳು ರೂಪುಗೊಂಡಾಗಿನ ಧೂಳಿನಲ್ಲಿದೆ ಎಂಬುದಾಗಿ ವಿಜ್ಞಾನಿಗಳು ಭಾವಿಸಿದ್ದಾರೆ.

ವಿಜ್ಞಾನಿಗಳ ಪರಿಕಲ್ಪನೆಯಲ್ಲಿ ಎರಡು ನ್ಯೂಟ್ರಾನ್ ನಕ್ಷತ್ರಗಳು ಬಾಹ್ಯಾಕಾಶದ ಮಧ್ಯದಲ್ಲಿ ಎಲ್ಲಾ ಕೋಟಿ ಕೋಟಿ ಮೈಲಿಗಳ ದೂರದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದು ಸ್ಫೋಟಗೊಳ್ಳುತ್ತವೆ. ನ್ಯೂಟ್ರಾನ್ ನಕ್ಷತ್ರಗಳು ಹೆಚ್ಚಾಗಿ ನ್ಯೂಟ್ರಾನ್‌ಗಳಿಂದ ಸಂಯೋಜಿಸಲ್ಪಟ್ಟಿರುತ್ತವೆ ಮತ್ತು ಪ್ರೋಟಾನ್‌ಗಳ ಸಣ್ಣ ಭಾಗವನ್ನು ಮತ್ತು ಎಲೆಕ್ಟ್ರಾನ್‌ಗಳು, ಹಾಗೆಯೇ ನ್ಯೂಕ್ಲಿಯಸ್‌ಗಳನ್ನು ಹೊಂದಿರುತ್ತವೆ.

ಎರಡು ನಕ್ಷತ್ರಗಳು ಗುರುತ್ವಾಕರ್ಷಣೆಯ ಅಲೆಗಳನ್ನು ಉತ್ಪಾದಿಸುವುದರ ಜೊತೆಗೆ ಚಿನ್ನವನ್ನು ಒಳಗೊಂಡಂತೆ ಅನೇಕ ಭಾರವಾದ ಧಾತುಗಳನ್ನು ಉತ್ಪಾದಿಸುತ್ತವೆ. ಗ್ಯಾಲಕ್ಸಿಯಲ್ಲಿ ಎರಡು ನ್ಯೂಟ್ರಾನ್ ನಕ್ಷತ್ರಗಳು ಅಂತಿಮ ವಿನಾಶ ಮತ್ತು ಅನಿವಾರ್ಯ ಸೃಷ್ಟಿಯ ಬಲೆಯಲ್ಲಿ ಪರಸ್ಪರ ಘರ್ಷಣೆಗೊಳ್ಳುತ್ತಾ ಸುತ್ತುತ್ತಿರುತ್ತವೆ.

ಚಿನ್ನವನ್ನು ಪಡೆಯುವುದರ ಹಿಂದೆ ಒಬ್ಬೊಬ್ಬರ ಜೀವನದಲ್ಲೂ ಒಂದೊಂದು ಚಿನ್ನದಂತಹ ಕಥೆ ಅಡಗಿರುತ್ತದೆ. ಆ ಕಥೆಯನ್ನು ಅಗೆದು ತೆಗೆದಾಗ ‘ಕೆಲವರಿಗೆ ಘನತೆಯ ಪ್ರತೀಕವಾದರೆ, ಕೆಲವರಿಗೆ ಆಪತ್ಕಾಲದ ಸಂಗಾತಿ. ಗಂಡನಿಂದ, ಅಪ್ಪನಿಂದ ಕುಟುಂಬದವರಿಂದ ಕೊಡುಗೆಯಾಗಿ ಸಿಕ್ಕ ಬಂಗಾರ, ನಮ್ಮ ದುಡಿಮೆಯ ಇಷ್ಟಿಷ್ಟೇ ಕೂಡಿಟ್ಟು ಕೊಂಡ ಚಿನ್ನ, ವಿದ್ಯೆಗೆ ಅಥವಾ ಕಲೆಗೆ ಪುರಸ್ಕಾರವಾಗಿ ಮುಡಿಗೇರಿದ ಸ್ವರ್ಣ, ಆಕಸ್ಮಿಕವಾಗಿ ಸಿಕ್ಕ ಕನಕ ಹೀಗೇ ಎಲ್ಲವನ್ನು ನೆನೆದಾಗೊಮ್ಮೆ ಕಣ್ಣನ್ನು ತೇವಗೊಳಿಸುವ ನೆನಪಿನ ಹೊನ್ನದು.

ಹಾಗಾಗಿ ಇಲ್ಲಿ ಚಿನ್ನದ ಬೆಲೆಗಿಂತ ಅದರ ಹಿಂದಿರುವ ಭಾವ ಅಮೂಲ್ಯವಾದುದು. ಬದುಕಿಡೀ ಬಂಗಾರಕ್ಕಾಗಿ ಹಪಹಪಿಸಿದವರು, ಬಂಗಾರ ಪಡೆದಾಗಿನ ಸಂತಸ, ಕಳೆದಾಗ ಆದ ತಳಮಳವೂ ನಮ್ಮೊಳಗಿದ್ದೇ ಇರುತ್ತದೆ. ಸದ್ಯಕ್ಕೆ ಅಣ್ಣಾವ್ರ ಪ್ರೇಮದ ಕಾಣಿಕೆಯಲ್ಲಿನ ‘ಚಿನ್ನಾ ನೀನು ನಗುತಿರು. ನನ್ನಾ ಸಂಗಾ ಬಿಡದಿರು’ ಎನ್ನುತ್ತಾ ಸುಮ್ಮನಾಗೋಣವೇ....?

( ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)