Surendra Pai Column: ವೃತ್ತಿಪರ ಕೋರ್ಸ್ ತನ್ನ ಉದ್ದೇಶ ಮರೆತರೆ ಹೇಗೆ ?
ಇಷ್ಟೆಲ್ಲಾ ಅವ್ಯವಸ್ಥೆಗಳ ಮಧ್ಯೆ ಬಿ.ಇಡಿ ಕೋರ್ಸ್ ಕೌಶಲಪೂರ್ಣ, ಗುಣಮಟ್ಟದ ಶಿಕ್ಷಕರನ್ನು ರೂಪಿಸಲು ಹೇಗೆ ಸಾಧ್ಯವಾದಿತು? ಶಿಕ್ಷಕರನ್ನು ನಿರ್ಮಿಸುವ ತರಬೇತಿ ಸಂಸ್ಥೆಗಳ ಮೇಲೆ ಸೂಕ್ತ ಮೇಲ್ವಿಚಾರಣೆ ಮಾಡಲು ತೋರುವ ಪ್ರಜ್ಞಾಪೂರ್ವಕವಾದ ನಿರ್ಲಕ್ಷ್ಯದಿಂದಾಗಿ ಇಂದು ಲಕ್ಷಾಂತರ ನಕಲಿ ಶಿಕ್ಷಕರು ಕೇವಲ ಪ್ರಮಾಣಪತ್ರದ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಳ್ಳು ವಂತಾಗಿದೆ.
-
ಯಕ್ಷ ಪ್ರಶ್ನೆ
ಸುರೇಂದ್ರ ಪೈ ಭಟ್ಕಳ
ಒಂದು ದೇಶದ ಭವಿಷ್ಯವು ಶಾಲೆಯ ನಾಲ್ಕು ಗೋಡೆಯ ನಡುವೆ ನಿರ್ಮಾಣವಾಗುತ್ತದೆ ಎಂಬ ಮಾತಿದೆ. ಆ ನಾಲ್ಕು ಗೋಡೆಯ ಒಳಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಗುರುತರವಾದ ಹೊಣೆಗಾರಿಕೆ ಶಿಕ್ಷಕನ ಮೇಲಿರುತ್ತದೆ. ಇಂದು ಔಪಚಾರಿಕ ಶಿಕ್ಷಣವೇ ಚಾಲ್ತಿ ಯಲ್ಲಿರುವುದರಿಂದ ಶಿಕ್ಷಕರ ಪಾತ್ರವು ಮಹತ್ವದ್ದು. ಹಾಗಾಗಿಯೇ ವಿದ್ಯಾರ್ಥಿ ಜೀವನ ದಲ್ಲಿ ‘ಮುಂದೆ ಗುರಿ, ಹಿಂದೆ ಗುರು’ ಇರಬೇಕು ಎಂದು ಹೇಳುವುದು.
ಅಜ್ಞಾನವೆಂಬ ಕತ್ತಲೆಯನ್ನು ಸರಿಸಿ, ಸುಜ್ಞಾನದ ಬೆಳಕನ್ನು ನೀಡುವಾತನೇ ಗುರು. ಈ ಗುರು ಸ್ಥಾನದಲ್ಲಿರುವ ಶಿಕ್ಷಕರಿಗೆ ಅಂಥದೊಂದು ಗೌರವ, ಬೆಲೆ ಇರಲು ಕಾರಣ ಅವರಲ್ಲಿ ರುವ ‘ಜ್ಞಾನ’. ಶಿಕ್ಷಕನಾದವನಲ್ಲಿ ಸದಾ ಸಂಯಮ, ಕುತೂಹಲ, ಅಧ್ಯಯನ ಶೀಲತೆ ಇದ್ದರೆ ಮಾತ್ರವೇ ಆತ ಸುeನವನ್ನು ಪಡೆಯಲು ಸಾಧ್ಯ.
ಅದೊಂದು ಕಾಲವಿತ್ತು, ಕೇವಲ ಹತ್ತನೇ ತರಗತಿ ಪಾಸಾದರೆ ಸಾಕಿತ್ತು, ಮನೆ ಬಾಗಿಲಿಗೆ ಶಿಕ್ಷಕ ಹುದ್ದೆಯ ನೇಮಕಾತಿ ಪತ್ರ ಅರಸಿ ಬರುತ್ತಿತ್ತು. ತದನಂತರ ಪಿಯುಸಿ ಮುಗಿದು ಟಿಸಿಎಚ್ ಕೋರ್ಸ್ ಮಾಡಿದರೂ ಸಾಕಾಗಿತ್ತು, ಯಾವುದೇ ಪ್ರವೇಶ ಪರೀಕ್ಷೆಯಿಲ್ಲದೇ ನೇರವಾಗಿ ಶಿಕ್ಷಕರಾಗುವ ಭಾಗ್ಯ ಹುಡುಕಿಕೊಂಡು ಬರುತ್ತಿತ್ತು. ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ.
ಇಂದು ಶಿಕ್ಷಕರಾಗಬೇಕಾದರೆ ಮೊದಲಿದ್ದ ಟಿಸಿಎಚ್ ಬದಲಾಗಿ ಪಿಯುಸಿ ನಂತರದ ಡಿ.ಇಡಿ ಅಥವಾ ಪದವಿ ನಂತರದ ಬಿ.ಇಡಿ ತರಬೇತಿ ಪಡೆಯಬೇಕು. ಕಳೆದ ಹಲವು ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಕೇವಲ ಶಿಕ್ಷಕರ ತರಬೇತಿ ಕೋರ್ಸ್ ಮಾಡಿದರೆ ಸಾಲದು, ಟಿಇಟಿ ಎಂಬ ಅರ್ಹತಾ ಪರೀಕ್ಷೆಯನ್ನು ತೇರ್ಗಡೆಯಾಗಿ, ಬಳಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ಕರೆದಾಗ ಮತ್ತೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಮೆರಿಟ್ ಲಿಸ್ಟ್‌ನಲ್ಲಿ ಸ್ಥಾನ ಪಡೆಯಬೇಕು.
ಇದನ್ನೂ ಓದಿ: Surendra Pai Column: ಕೃತಕ ಬುದ್ಧಿಮತ್ತೆಯ ಕಲಿಕೆ ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಬಲ್ಲದೇ ?
ಆಗ ಸರಕಾರಿ ಶಾಲೆಯ ಶಿಕ್ಷಕರಾಗಲು ಸಾಧ್ಯ. ಹಾಗಂತ ಸರಕಾರಿ ಹುದ್ದೆ ಸಿಗಲಿಲ್ಲವೆಂದರೂ ಬಿ.ಇಡಿ ತರಬೇತಿ ಪಡೆದವರು ಟಿಇಟಿ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿಯೂ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಬಹುದು. ಇದು ಶಿಕ್ಷಣ ಇಲಾಖೆ ಹೊರಡಿಸಿರುವ ಫರ್ಮಾನು. ಆದರೆ ಸರಕಾರ ಹೊರಡಿಸಿರುವ ಆದೇಶಗಳು ಯಥಾಪ್ರಕಾರ ಅನುಷ್ಠಾನಕ್ಕೆ ಬಂದು ಯೋಜನೆ ಕಾರ್ಯರೂಪಕ್ಕೆ ಬರುವಂತೆ ಮಾಡುವುದೇ ಪ್ರಸ್ತುತ ನಮ್ಮ ವ್ಯವಸ್ಥೆಗಿರುವ ಬಹುದೊಡ್ಡ ಸವಾಲು.
ಇಂದು ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಆದೇಶವನ್ನು ಶೇ.70ರಷ್ಟು ಖಾಸಗಿ ಶಾಲೆಗಳು ಪಾಲಿಸದಿರುವುದು ಕಂಡುಬರುತ್ತದೆ. ಇತ್ತೀಚೆಗೆ ಬಿಡುಗಡೆಯಾದ 2025-26ನೇ ಸಾಲಿನ ‘ಯುಡೈಸ್ ಪ್ಲಸ್’ ವರದಿ ಹೇಳುವಂತೆ, ಶೈಕ್ಷಣಿಕ ಹಾಗೂ ವೃತ್ತಿಪರ ಅರ್ಹತೆ ಇಲ್ಲದ ಶೇ. 35ರಷ್ಟು ಮಂದಿ ದೇಶದ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಶಿಕ್ಷಕರು ಹಲವಾರು ಕಾರಣಗಳಿಂದಾಗಿ ಶಿಕ್ಷಕ ವೃತ್ತಿಯನ್ನು ತೊರೆಯುತ್ತಿದ್ದಾರೆ ಎಂಬ ಕಳವಳವು ವಿವಿಧ ಖಾಸಗಿ ಸಮೀಕ್ಷಾ ವರದಿ ಗಳಿಂದ ಕೇಳಿ ಬರುತ್ತಿದೆ. ಇದೀಗ ರಾಜ್ಯದಲ್ಲಿ ಬಿ.ಇಡಿ ವೃತ್ತಿಪರ ಕೋರ್ಸ್ ಗಳಿಗೆ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿಕ್ಷಕರಾಗಬೇಕೆಂಬ ಕನಸು ಕಟ್ಟಿಕೊಂಡವರು ಬಿ.ಇಡಿ, ಡಿ.ಇಡಿ ಎಂಬ ವೃತ್ತಿಪರ ಕೋರ್ಸ್ ಪೂರ್ಣಗೊಳಿಸಬೇಕು. ಅದುವೇ ಶಿಕ್ಷಕರಾಗಲು ಇರುವ ಮೊದಲ ಅರ್ಹತೆ. ಆದರೆ ಇತ್ತೀಚಿನ ದಶಕಗಳಲ್ಲಿ ವೃತ್ತಿಪರ ಕೌಶಲ ತರಬೇತಿ ಕೋರ್ಸ್‌ಗಳು ಅಕ್ರಮಗಳ ಕಾರಣದಿಂದಾಗಿ ತಮ್ಮ ಗುಣಮಟ್ಟವನ್ನು ಕಾಪಾಡಿಕೊಂಡು ಬರುತ್ತಿಲ್ಲ.
ಹಾಗಾಗಿ ಬಿ.ಇಡಿ ಕೋರ್ಸ್ ಎಂಬುದು ಚೈತನ್ಯವಿಲ್ಲದ ಬುಗ್ಗೆಯಾಗುತ್ತಿದೆ. ಇದರ ಪರಿಣಾಮ ಸಂಪನ್ಮೂಲ ವ್ಯಕ್ತಿಗಳು ಅಗತ್ಯಕ್ಕೆ ತಕ್ಕಂತೆ ಕೌಶಲಗಳನ್ನು ಗಳಿಸುವುದರಲ್ಲಿ ವಿಫಲ ರಾಗು ತ್ತಿದ್ದಾರೆ. ಇಂದು ರಾಜ್ಯದಲ್ಲಿ 225ಕ್ಕೂ ಹೆಚ್ಚು ಬಿ.ಇಡಿ ಕಾಲೇಜುಗಳು ವಿವಿಧ ವಿಶ್ವವಿದ್ಯಾ ಲಯಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಆದರೂ ಕೋರ್ಸ್ ವೈಫಲ್ಯ ಹೊಂದಲು ಹಲವು ಕಾರಣಗಳಿವೆ. ಈ ಪೈಕಿ ಕೆಲವನ್ನು ಗಮನಿಸುವುದಾದರೆ, ಪ್ರತಿ ಒಂದು ಬ್ಯಾಚ್‌ನಲ್ಲಿ ನೂರು ಜನ ವಿದ್ಯಾರ್ಥಿಗಳಲ್ಲಿ 50ರಷ್ಟು ಸರಕಾರಿ ಕೋಟಾಗೆ ಸೇರಿದರೆ, ಇನ್ನುಳಿದವರು ಆಡಳಿತ ಮಂಡಳಿ ಕೋಟಾಗೆ ಸೇರಿದವರು. ಇವರಲ್ಲಿ ಶೇ.25ರಷ್ಟು ಪ್ರಶಿಕ್ಷಣಾರ್ಥಿಗಳು ನಿಯತವಾಗಿ ಕಾಲೇಜಿಗೆ ಹಾಜರಾಗದೆ ಕೇವಲ ವರ್ಷಕ್ಕೊಮ್ಮೆ ಸಮನ್ವಯ ಸಮಿತಿಯ ಸದಸ್ಯರು ಕಾಲೇಜಿಗೆ ಭೇಟಿ ನೀಡುವ ಸಮಯ ದಲ್ಲಿ, ಇನ್ನುಳಿದಂತೆ ನೇರವಾಗಿ ಪರೀಕ್ಷೆಗೆ ಹಾಜರಾಗುತ್ತಾರೆ.
ಇಂಥ ಅಕ್ರಮ ದಾಖಲಾತಿ ತಪ್ಪಿಸಲು ಬಯೋಮೆಟ್ರಿಕ್ ಹಾಜರಾತಿ ಜಾರಿಯಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಲಾಗುತ್ತಿದೆ. ಅವರೆಲ್ಲಾ ದೂರ ಶಿಕ್ಷಣ ವ್ಯವಸ್ಥೆಯಂತೆ ಒಂದೆಡೆ ಕೆಲಸ ಮಾಡುತ್ತಲೇ ಇತ್ತ ಬಿ.ಇಡಿ ಕೋರ್ಸ್ ಮುಗಿಸುತ್ತಾರೆ. ಇನ್ನು ಬಿ.ಇಡಿಯಲ್ಲಿ ಕಲಿ ಯುವ ವಿಷಯ ಹಾಗೂ ಬೋಧನಾ ಪದ್ಧತಿಗಳು ಪುರಾತನವಾಗಿವೆ.
ಇಂದಿನ ಆಧುನಿಕ ಶಾಲಾ ಶಿಕ್ಷಣಕ್ಕೆ ತಕ್ಕುದಾದ ಕೌಶಲಾಧಾರಿತ ಬೋಧನೆ ನಡೆಯುತ್ತಿಲ್ಲ. ನಿತ್ಯದ ಶಾಲಾ ತರಗತಿಯಲ್ಲಿ ಶಿಕ್ಷಕರು ಎದುರಿಸುವ ವಿವಿಧ ಸವಾಲುಗಳಿಗೂ ಕೋರ್ಸ್ ನಲ್ಲಿ ಕಲಿಸಲಾಗುವ ಶೇ.70ರಷ್ಟು ಅಂಶಕ್ಕೂ ಸಂಬಂಧವೇ ಇಲ್ಲ.
ಉದಾಹರಣೆಗೆ, ಶೈಕ್ಷಣಿಕ ಮನೋವಿಜ್ಞಾನ ಪಠ್ಯಕ್ರಮವನ್ನು ಒಬ್ಬ ಸಾಮಾನ್ಯ ಅಧ್ಯಾಪಕ ಪಾಠ ಮಾಡುವುದರ ಜತೆಯ ಒಬ್ಬ ಮಕ್ಕಳ ಮನಶ್ಶಾಸ್ತ್ರಜ್ಞನಿಂದ (ವೈದ್ಯರಿಂದ) ಕನಿಷ್ಠ ಒಂದು ವಾರದ ಕಾರ್ಯಾಗಾರವನ್ನು ಹಮ್ಮಿಕೊಂಡರೆ ಎಷ್ಟು ಅರ್ಥಪೂರ್ಣವಾಗಿರುತ್ತದೆ, ಯೋಚಿಸಿ.
ಬಹು ಮುಖ್ಯವಾಗಿ ಎರಡು ವರ್ಷದ ಅವಧಿಯಲ್ಲಿ ಪ್ರಶಿಕ್ಷಣಾರ್ಥಿಗಳು ಬರೋಬ್ಬರಿ ನಾಲ್ಕು ತಿಂಗಳು ಶಾಲೆಗಳಿಗೆ ತೆರಳಿ ಪಾಠ ಬೋಧನೆ ಮಾಡುತ್ತಾರೆ. ಆದರೆ ಸರಕಾರಿ ಶಾಲೆ ಯಲ್ಲಿ ಬೆರಳೆಣಿಕೆಯಷ್ಟು ಮಕ್ಕಳಿರುವುದರಿಂದ ಅಲ್ಲೂ ಸೂಕ್ತ ತರಬೇತಿ ದೊರಕುತ್ತಿಲ್ಲ. ತರಗತಿಯ ಸವಾಲುಗಳನ್ನು, ವಿದ್ಯಾರ್ಥಿಗಳ ಮನೋ ವೈಜ್ಞಾನಿಕ ಮಟ್ಟವನ್ನು ಅರಿಯಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಇನ್ನೂ ಅದೆಷ್ಟೋ ಪ್ರಶಿಕ್ಷಣಾರ್ಥಿಗಳು ಯಾವ ಪಾಠಬೋಧನೆ ಮಾಡದೇ, ಸುಳ್ಳು ದಾಖಲೆ ಸೃಷ್ಟಿಸಿ ಒಪ್ಪಿಸುತ್ತಿದ್ದಾರೆ. ಇವೆಲ್ಲವೂ ಕೇವಲ ಆಂತರಿಕ ಅಂಕಗಳನ್ನು ಪಡೆಯುವ ಸಲು ವಾಗಿ ನಡೆಯುವ ಒಂದು ಪ್ರಕ್ರಿಯೆ ಅಷ್ಟೇ.
ಅಣುಬೋಧನೆಯಿಂದ ಹಿಡಿದು ಪಾಠ ಬೋಧನೆಯ ತನಕವೂ ಪಾಠಕ್ಕೆ ಬೇಕಾದ ಎಲ್ಲಾ ಬೋಧನೋಪಕರಣಗಳನ್ನು ಬೇರೆಯವರಿಂದಲೇ ಸಿದ್ಧಪಡಿಸಿ ಬಳಸುತ್ತಾರೆಯೇ ವಿನಾ ಅವುಗಳನ್ನು ಹೇಗೆ ಶಿಕ್ಷಕರೇ ಸಿದ್ಧಪಡಿಸಬೇಕೆಂಬ ತರಬೇತಿ ನೀಡುವುದಿಲ್ಲ.
ಇಷ್ಟೆಲ್ಲಾ ಅವ್ಯವಸ್ಥೆಗಳ ಮಧ್ಯೆ ಬಿ.ಇಡಿ ಕೋರ್ಸ್ ಕೌಶಲಪೂರ್ಣ, ಗುಣಮಟ್ಟದ ಶಿಕ್ಷಕ ರನ್ನು ರೂಪಿಸಲು ಹೇಗೆ ಸಾಧ್ಯವಾದಿತು? ಶಿಕ್ಷಕರನ್ನು ನಿರ್ಮಿಸುವ ತರಬೇತಿ ಸಂಸ್ಥೆಗಳ ಮೇಲೆ ಸೂಕ್ತ ಮೇಲ್ವಿಚಾರಣೆ ಮಾಡಲು ತೋರುವ ಪ್ರಜ್ಞಾಪೂರ್ವಕವಾದ ನಿರ್ಲಕ್ಷ್ಯ ದಿಂದಾಗಿ ಇಂದು ಲಕ್ಷಾಂತರ ನಕಲಿ ಶಿಕ್ಷಕರು ಕೇವಲ ಪ್ರಮಾಣಪತ್ರದ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಳ್ಳುವಂತಾಗಿದೆ.
ಇಂದು ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಕರ ಕೊರತೆ ಬಹಳ ಕಾಡುತ್ತಿದೆ. ಅದಕ್ಕಾಗಿ ಶೇ. 40 ರಷ್ಟು ಖಾಸಗಿ ಶಾಲೆಯಲ್ಲಿ ಬಿ.ಇಡಿ ತರಬೇತಿ ಹೊಂದಿರದಿದ್ದರೂ, ಶೇ. 85ರಷ್ಟು ಶಾಲೆ ಗಳಲ್ಲಿ ಟಿಇಟಿ, ಸಿಟಿಇಟಿ ಅರ್ಹತಾ ಪರೀಕ್ಷೆ ತೇರ್ಗಡೆಯಾಗದಿದ್ದರೂ ಅಭ್ಯರ್ಥಿಗಳಲ್ಲಿ ಕೌಶಲ, ಜ್ಞಾನ ಎರಡಿದ್ದರೆ ಅವರು ಯಾವುದೇ ಪದವಿ ಪಡೆದಿದ್ದರೂ ಅವರನ್ನು ನೇಮ ಕಾತಿ ಮಾಡಿಕೊಳ್ಳಲಾಗುತ್ತಿದೆ. ಹೀಗೆ ವೃತ್ತಿಪರ ಕೌಶಲಗಳ ಅರಿವಿಲ್ಲದ ಶಿಕ್ಷಕರಿಂದ ಶಿಕ್ಷಣ ಕ್ಷೇತ್ರ ಹೇಗೆ ತಾನೇ ಅಪೇಕ್ಷಿತ ಗುರಿ ಮುಟ್ಟಲು ಸಾಧ್ಯ? ಇನ್ನು ಟಿಇಟಿ ಅರ್ಹತಾ ಪರೀಕ್ಷೆ ಎಂಬುದು ಸರಕಾರಕ್ಕೆ ಆದಾಯ ತಂದುಕೊಡುವ ಒಂದು ಯಂತ್ರವಷ್ಟೇ.
ಕೆಂದರೆ ರಾಜ್ಯದಲ್ಲಿ 2014ರಲ್ಲಿ ಪ್ರಾರಂಭವಾದ ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರತಿ ವರ್ಷವೂ ನಡೆಯುತ್ತಲೇ ಇದೆ. ಆದರೆ ೧-೫ (ಪೇಪರ್ -೧) ತರಗತಿಯವರೆಗಿನ ಟಿಇಟಿ ಅರ್ಹತೆ ಪಡೆದವರಿಗೆ 2014ರಲ್ಲಿ ಒಮ್ಮೆ ಮಾತ್ರ ನೇಮಕಾತಿ ಮಾಡಿಕೊಳ್ಳಲಾಗಿದೆ. ತದನಂತರ ಇಲ್ಲಿಯ ತನಕ ಅವರ ನೇಮಕಾತಿ ನಡೆದಿಲ್ಲ. ಕಾರಣ ೧-೫ ತರಗತಿಯವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯೇ ಖಾಲಿ ಇಲ್ಲ.
ಹುದ್ದೆ ಖಾಲಿ ಇಲ್ಲದಿದ್ದರೂ ಶಿಕ್ಷಣ ಇಲಾಖೆ ಟಿಇಟಿ ಕರೆಯುತ್ತಿದೆ. ಪ್ರತಿ ವರ್ಷವೂ ಕನಿಷ್ಠ ೩೦-೪೦ ಸಾವಿರ ಅಭ್ಯರ್ಥಿಗಳು ಈ ಅರ್ಹತಾ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಇಂಥ ಅರ್ಹತಾ ಪರೀಕ್ಷೆಯಿಂದ ಏನು ಪ್ರಯೋಜನ? ಕೇವಲ ಬಿ.ಇಡಿ ತರಬೇತಿ ಪಡೆದು ಐದಾರು ವರ್ಷ ಕೆಲಸವಿಲ್ಲದೇ ಸುಮ್ಮನೆ ಕುಳಿತಿದ್ದರೆ ಅಥವಾ ಬಿ.ಇಡಿ ಎಂಬ ಶಿಕ್ಷಕರ ವೃತ್ತಿಪರ ತರಬೇತಿ ಪಡೆದು ಬೇರಾವುದೋ ಕೆಲಸಕ್ಕೆ ತೊಡಗಿಕೊಂಡರೆ ಕಲಿತ ವಿದ್ಯೆಗೇನು ಫಲ? ಹೀಗೆ ವೃತ್ತಿಪರ ಶಿಕ್ಷಣವು ನಿತ್ಯಜೀವನಕ್ಕೆ ಸಂಬಂಧವನ್ನೇ ಹೊಂದಿಲ್ಲದಿರುವಾಗ ಅದು ಶಿಕ್ಷಕರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಹೇಗೆ ಸಾಧ್ಯ? ಇನ್ನಾದರೂ ಸರಕಾರವು ಹೊಸ ಶಿಕ್ಷಣ ನೀತಿ ಹಾಗೂ ಆಧುನಿಕ ಅಗತ್ಯತೆಗೆ ತಕ್ಕಂತೆ ಬಿ.ಇಡಿ ಕೋರ್ಸ್‌ನಲ್ಲಿ ಸೂಕ್ತ ಬದಲಾವಣೆ ಮಾಡುವ ಮೂಲಕ ಅದನ್ನು ಮರುಸಂಯೋಜಿಸಿದರೆ ಬಹುತೇಕ ಶಿಕ್ಷಕರು ತಮ್ಮ ತಾಲೂಕು, ಜಿಲ್ಲೆಯಲ್ಲಿನ ಖಾಸಗಿ ಶಾಲೆಗಳ ಉದ್ಯೋಗವನ್ನು ಪಡೆಯುವ ಹಲವು ಅವಕಾಶ ತೆರೆದುಕೊಳ್ಳುತ್ತವೆ. ಮೂರುಪಟ್ಟು ವೇತನ ನೀಡಿ ನಮ್ಮ ನೆಲ-ಜಲ-ಭಾಷೆ-ಸಂಸ್ಕೃತಿಯ ಅರಿವಿಲ್ಲದ ಅನ್ಯರಾಜ್ಯದ ಶಿಕ್ಷಕರನ್ನು ಅವಲಂಬಿಸುವ ಬದಲು ನಮ್ಮವರೇ ಅದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕಲ್ಲವೇ?
(ಲೇಖಕರು ಶಿಕ್ಷಕರು)