ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ravi Hunj Column: ಹಳಕಟ್ಟಿಯವರ ವಚನ ತತ್ವಕ್ಕೆ ಅವಮಾನವಿದು !

ಶರಣರು ಈ ವಚನ ಸಾಹಿತ್ಯವನ್ನು ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದರು. ವಚನ ಸಾಹಿತ್ಯವನ್ನು ತೆಗೆದುಕೊಂಡು ಕಲ್ಯಾಣದಿಂದ ಹೊರ ಹೊರಟ ಶರಣರು ಅಲ್ಲಲ್ಲಿ ಸಾಹಿತ್ಯವನ್ನು ರಕ್ಷಿಸಿರೆಂದು ಕೊಟ್ಟು ಹೋದರು. ಈ ರೀತಿ ಶರಣರಿಂದ ಪಡೆದಿದ್ದ ತಾಡೋಲೆಗಳನ್ನು ಶತಮಾನ ಗಳಿಂದ ಹಲವು ತಲೆಮಾರಿನವರು ತಮ್ಮ ಮನೆ-ಮಠಗಳಲ್ಲಿ, ಗದ್ದುಗೆಗಳಲ್ಲಿ ಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ.

Ravi Hunj Column: ಹಳಕಟ್ಟಿಯವರ ವಚನ ತತ್ವಕ್ಕೆ ಅವಮಾನವಿದು !

-

Profile
Ashok Nayak Jun 6, 2026 4:58 PM

ವಚನಾಮೃತ (ಭಾಗ-೧)

ರವಿ ಹಂಜ್

ಫ.ಗು.ಹಳಕಟ್ಟಿಯವರು ತಮ್ಮ ಜೀವನವನ್ನೇ ವಚನ ಸಾಹಿತ್ಯದ ಪುನರುಜ್ಜೀವನಕ್ಕೆ ಸಮರ್ಪಿಸಿ ದರು. ಅವರಿಲ್ಲದಿದ್ದರೆ ವಚನ ಸಾಹಿತ್ಯ ಈಗಿನ ಸ್ವರೂಪದಲ್ಲಿ ನಮಗೆ ಸಿಗುತ್ತಿರ‌ ಲಿಲ್ಲ. ಹಳಕಟ್ಟಿ ಯವರ ಸಂಶೋಧನಾ ಬದ್ಧತೆಯನ್ನು, ವಚನಪ್ರಣೀತ ತತ್ವಗಳನ್ನು, ಶರಣರ ಸಿದ್ಧಾಂತಗಳನ್ನು ಉಳಿಸಿ ಬೆಳೆಸುವ ಪ್ರಮುಖ ಜವಾಬ್ದಾರಿ ವೀರಶೈವ ಲಿಂಗಾಯತ ಸ್ವಾಮಿಗಳದಾಗಿದೆ. ಆದರೆ ಅವರು ಅದನ್ನು ಪಾಲಿಸುತ್ತಿಲ್ಲ.

ಬಿಜಾಪುರದ ಧುರೀಣ ರಾಜಕಾರಣಿಗಳಾದ ಎಂ.ಬಿ.ಪಾಟೀಲರು ಪತ್ರಿಕೆಯೊಂದರಲ್ಲಿ, ವಿಶ್ವಗುರು ಬಸವಣ್ಣನವರ ತಾಡೋಲೆಯಲ್ಲಿದ್ದ ವಚನಗಳನ್ನು ಪ್ರಕಟಿಸಿ, ಪ್ರಚಾರ ಮಾಡಿದವರು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು. 12ನೇ ಶತಮಾನದಲ್ಲಿ ತಾಡೋಲೆಗಳಲ್ಲಿ ಬರೆಯಲ್ಪಟ್ಟಿದ್ದ ವಚನ ಸಾಹಿತ್ಯ, ಕಲ್ಯಾಣ ಕ್ರಾಂತಿಯ ನಂತರ ಚೆಪಿಲ್ಲಿಯಾಗಿತ್ತು.

ಶರಣರು ಈ ವಚನ ಸಾಹಿತ್ಯವನ್ನು ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದರು. ವಚನ ಸಾಹಿತ್ಯವನ್ನು ತೆಗೆದುಕೊಂಡು ಕಲ್ಯಾಣದಿಂದ ಹೊರ ಹೊರಟ ಶರಣರು ಅಲ್ಲಲ್ಲಿ ಸಾಹಿತ್ಯ ವನ್ನು ರಕ್ಷಿಸಿರೆಂದು ಕೊಟ್ಟು ಹೋದರು. ಈ ರೀತಿ ಶರಣರಿಂದ ಪಡೆದಿದ್ದ ತಾಡೋಲೆಗಳನ್ನು ಶತಮಾನಗಳಿಂದ ಹಲವು ತಲೆಮಾರಿನವರು ತಮ್ಮ ಮನೆ-ಮಠಗಳಲ್ಲಿ, ಗದ್ದುಗೆಗಳಲ್ಲಿ ಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ.

ಸ್ವಂತಕ್ಕೆ ಏನನ್ನು ಬಯಸದೆ ಸಮಾಜಕ್ಕೆ ಸರ್ವಸ್ವವನ್ನು ಧಾರೆ ಎರೆದ ಹಳಕಟ್ಟಿಯವರು, ಪತ್ರಿಕೋದ್ಯಮದ ದಿನಗಳಲ್ಲಿ ಬಡತನವನ್ನೇ ಮೈತುಂಬ ಹೊತ್ತುಕೊಂಡರು. ಮಗ ದೂರದ ದೆಹಲಿಯಲ್ಲಿ ಅಪಘಾತಕ್ಕೀಡಾಗಿ ಮರಣವಾದಾಗ, ‘ಶಿವನ ಸೊತ್ತು, ಶಿವನಿಗೆ ಸಲ್ಲಿದೆ, ಇರಲಿ, ಇದೀಗ ಅಪ್ರಕಟಿತ ವಚನಸಾಹಿತ್ಯದ ಕಾರ್ಯ ಬಹಳಷ್ಟಿದೆ. ಅದನ್ನು ಪ್ರಕಟಿಸಬೇಕಿದೆ’ ಎಂದ ಪುಣ್ಯಾತ್ಮ ರಿವರು. 1964ರ ಜೂನ್ 29ರಂದು ಅಗಲಿದ ಹಳಕಟ್ಟಿ ಅವರ ಹೆಸರನ್ನು ಶಾಶ್ವತವಾಗಿರಿಸಲು ಅವರ ಸಮಾಧಿ ಇರುವ ವಿಜಯಪುರದ ಬಿಎಲ್ʼಡಿಇ ಸಂಸ್ಥೆ ಆವರಣದಲ್ಲಿಯೇ ಭವ್ಯ ಸ್ಮಾರಕ ನಿರ್ಮಿಸ ಲಾಗಿದೆ ಮತ್ತು ಅವರ ಹೆಸರಿನ ಸಂಶೋಧನಾ ಕೇಂದ್ರ ಇಡೀ ರಾಜ್ಯದಲ್ಲಿ ಅತ್ಯುತ್ತಮ ಮಾದರಿ ಯಾಗಿದೆ.

ಅಲ್ಲದೆ, ಇತ್ತೀಚೆಗೆ ಬೆಂಗಳೂರಿನಲ್ಲಿಯೂ ಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿಯೂ ವಚನಸಾಹಿತ್ಯ ಸಂಶೋಧನ ಕಾರ್ಯ ನಡೆಯುತ್ತಿದೆ. ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು ಸ್ಥಾಪಿಸಿದ ಬಿಎಲಡಿಇ ಸಂಸ್ಥೆಯ ಅಧ್ಯಕ್ಷನಾಗಿರುವ ನನಗೆ ಅವರು ಸದಾ ಪ್ರೇರಣಾಶಕ್ತಿ ಮತ್ತು ಆತ್ಮಬಲ ವಾಗಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ: Ravi Hunj Column: ಇದು ಸಂಕ್ಷಿಪ್ತ ಹಾಲುಮತ ಪುರಾಣದ ಕತೆ !

ವಚನಗಳು ಸಿಗುವ ಮುನ್ನ ಗುರುವಿರಕ್ತ ಮಠಗಳೆಲ್ಲವೂ ಅಖಂಡ ವೀರಶೈವ ಲಿಂಗವಂತ ಧರ್ಮ ವನ್ನೇ ಪಾಲಿಸುತ್ತಿದ್ದವು. ಕೆಲವು ಮನೆಗಳಲ್ಲಿ ಮಠಗಳಲ್ಲಿ ಲಭ್ಯವಿದ್ದರೂ ಅವುಗಳನ್ನು ವೀರಶೈವದ ಭಾಗವಾಗಿ ಅನುಸರಿಸುತ್ತಿದ್ದರೆ ಹೊರತು ಅನ್ಯವಾಗಿಯಲ್ಲ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಚನಗಳು ಅಧ್ಯಯನದ ವಸ್ತುವಾಗಿ, ವಿವಿಧ ಸಂಕಥನಗಳು ಹುಟ್ಟಿ ಪ್ರಜಾಪ್ರಭುತ್ವದ ಊಳಿಗಮಾನ್ಯ ತತ್ವಕ್ಕೆ ಸಿಲುಕಿ ಮತಬ್ಯಾಂಕಿಗೆ ಮತ/ಠ ಎಂದಾಗಿ ಇಂದು ಏನೇನಾಗಿದೆ ಎಂದು ಜಗತ್ತೇ ಬಲ್ಲದು. ಇಂತಹ ಭಂಜಕ ಪೋಷಕ ರಾಜಕಾರಣಿ ಈಗ ಅಧಿಕಾರಹೀನ ರಾದರೂ ಅವರು ಬಿತ್ತಿದ ವಿಷಬೀಜ ಪ್ರಸರಿಸುತ್ತಲೇ ಇದೆ. ಆ ರಾಜಕೀಯ ವಿಷಬೀಜ ಬಿತ್ತಿದ್ದ ಗುಂಪಿನವರೇ ಎಂದು ಜನಸಾಮಾನ್ಯರು ಅನುಮಾನಿಸುವ ಎಂ.ಬಿ.ಪಾಟೀಲರು ಸಹ ಹಳಕಟ್ಟಿ ಯವರ ಮಹತ್ವವನ್ನು ಮೇಲಿನಂತೆ ವರ್ಣಿಸಿದ್ದಾರೆ.

ಇಂತಹ ವಚನ ಸಾಹಿತ್ಯದ ಪುನರುತ್ಥಾನದ ಪಿತಾಮಹರಾದ ಫ.ಗು.ಹಳಕಟ್ಟಿಯವರನ್ನು ವಚನತತ್ವವನ್ನೇ ಪ್ರತಿಪಾದಿಸುವ ಡಂಬಳ-ಗದಗ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನವು ಓರ್ವ ಮೌಢ್ಯದ ಪ್ರತಿರೂಪದ ವ್ಯಕ್ತಿಗೆ ಸಮಾನವಾಗಿ ಸಮೀಕರಿಸಿದೆ ಎಂದರೆ ಮತಬ್ಯಾಂಕಿಗೆ ಮತ/ಠ ಸಿದ್ಧಾಂತ ಎಂತಹ ನೈತಿಕ ಅಧಃಪತನಕ್ಕೆ ಕುಸಿದಿರಬಹುದು? ನನ್ನ ಹಿಂದಿನ ಲೇಖನದಲ್ಲಿ ಬಸವಣ್ಣನೇ ಇಷ್ಟಲಿಂಗ ಜನಕ ಎಂದು ಪ್ರತಿಪಾದಿಸುವ ತೋಂಟದ ಶ್ರೀಗಳು ಬಸವಣ್ಣನಿಗೂ ಮುಂಚೆ ಇಷ್ಟಲಿಂಗ ಧರಿಸಿದ್ದ ರೇವಣಸಿದ್ಧ ಎಂದು ಪುಸ್ತಕ ಬರೆದ ಚಂದ್ರಕಾಂತ ಬಿಜ್ಜರಗಿಯವರಿಗೆ, ‘... ಡಾ.ಫ.ಗು.ಹಳಕಟ್ಟಿಯವರ ನಂತರ ಸಂಶೋಧನೆಯಲ್ಲಿ ನಿಮ್ಮ ಹೆಸರು ಎದ್ದು ಕಾಣುವಂತ ಹುದು’ ಎಂದು ಪ್ರಶಂಸನಾ ಪತ್ರ ಕೊಟ್ಟಿರುವುದನ್ನು ಉಲ್ಲೇಖಿಸಲಾಗಿತ್ತು.

ತಮ್ಮ ಮಹಾ ಸಂಸ್ಥಾನದ ನೈತಿಕ ಅಧಃಪತನವನ್ನು ಶ್ರೀಗಳು ಕಂಡುಕೊಂಡು ವೀರಶೈವ ಶರಣ ತತ್ವಗಳನ್ನು ಪುನರುತ್ಥಾನಗೊಳಿಸಲಿ ಎಂಬ ಘನ ಉದ್ದೇಶದಿಂದ ಶ್ರೀಮಠದ ಪೊಳ್ಳು ಪ್ರಶಂಸನಾ ಪತ್ರದ ಕುರಿತು ಬರೆಯಲಾಗಿತ್ತು. ಏಕೆಂದರೆ ಇಂದು ಮತಬ್ಯಾಂಕಿಗೆ ಮತ/ಠ ಸಿದ್ಧಾಂತ ಎಲ್ಲೂ ವಿಜೃಂಭಿಸುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂಬ ಈ ಪ್ರಶಂಸನಾ ಪತ್ರ ಪ್ರಹಸನವನ್ನು ಡಂಬಳ-ಗದಗ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ]ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವೈಯಕ್ತಿಕ ಅವಹೇಳನ ಎಂದು ಪರಿಗಣಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ‘ವಿಶ್ವವಾಣಿ ದಿನಪತ್ರಿಕೆಯಲ್ಲಿ (233-05-2026) ರವಿ ಹಂಜ್ ಎನ್ನುವವರು ‘ಜಾತಿಗಳ ಅಸ್ಮಿತೆಗೆ ಐಕಾನುಗಳು ಅವಶ್ಯವೇ?’ ಎಂಬ ಲೇಖನ ಬರೆದು ನಮ್ಮನ್ನೂ ಒಳಗೊಂಡಂತೆ ಹಲವರ ಬಗ್ಗೆ ವೈಯಕ್ತಿಕ ನಿಂದನೆ ಮಾಡಿರುವುದು ದುರ್ದೈವದ ಸಂಗತಿ.

’ದಿನಪತ್ರಿಕೆಗಳು ಸಮಾಜದ ಕನ್ನಡಿ’ ಎಂದು ಹೇಳಲಾಗುತ್ತದೆ. ಧರ್ಮ ಮತ್ತು ಸಮಾಜವನ್ನು ಮುನ್ನಡೆಸುವ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಅವುಗಳನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸಬೇಕೇ ಹೊರತು ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಅವಕಾಶ ಕಲ್ಪಿಸಿ ಕೊಡಬಾರದು.

ನಮ್ಮ ಪ್ರಕಾಶನ ಸಂಸ್ಥೆಯ ಕಾರ್ಯದರ್ಶಿ ಶಿವನಗೌಡ ಎಂಬುವವರು ಬಿಜ್ಜರಗಿ ಎಂಬುವವರಿಗೆ ಬರೆದ ಪತ್ರ ಉಲ್ಲೇಖಿಸಿ ನಮ್ಮ ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಆಗ ನಾನಿನ್ನೂ ತೋಂಟ ದಾರ್ಯ ಮಠಕ್ಕೆ ಬಂದಿರಲಿಲ್ಲ. ವಾಸ್ತವಿಕತೆಯನ್ನು ಅರಿಯದೆ ತಮ್ಮ ಮನಸ್ಸಿಗೆ ತೋಚಿದಂತೆ ಏನೇನೋ ಬರೆದುಕೊಂಡಿದ್ದಾರೆ.

ನಾವು ಪಂಚಾಚಾರ್ಯರನ್ನಾಗಲಿ ಮತ್ತು ಇತರ ಯಾರನ್ನೇ ಆಗಲಿ ದ್ವೇಷಿಸಿಲ್ಲ. ಅವರ ಈ ಹೇಳಿಕೆ ವಾಸ್ತವಿಕತೆಗೆ ದೂರ. ಒಬ್ಬ ವ್ಯಕ್ತಿಯ ವಿಚಾರಗಳ ಬಗ್ಗೆ ಈ ರೀತಿ ಪ್ರತಿಕ್ರಿಯಿಸುವುದು ಸರಿಯಾದ ಕ್ರಮವಲ್ಲ. ತತ್ವ ಮತ್ತು ಸಿದ್ಧಾಂತಗಳನ್ನು ತಾರ್ಕಿಕ ನೆಲೆಯಲ್ಲಿ ಸಾಧಾರಪೂರ್ವಕ ಪ್ರಸ್ತುತ ಪಡಿಸಬೇಕೇ ಹೊರತು ಚಾರಿತ್ರ್ಯಹನನದ ಮೂಲಕ ಅಥವಾ ಅಸಹನೆಯಿಂದ ಅಲ್ಲ’ ಎಂದಿದ್ದಾರೆ.;

ವಿಪರ್ಯಾಸವೆಂದರೆ ಶ್ರೀಗಳು ಈ ಪತ್ರದ ಕುರಿತು ನನಗೆ, ಅದು ನಮ್ಮ ಶ್ರೀಮಠದ ಅಧಿಕೃತ ಪತ್ರ ಅಲ್ಲ. ಯಾವನೋ ಒಬ್ಬ ಅಧಿಕ ಪ್ರಸಂಗಿ ಮಠದ ಲೆಟರ್‌ಹೆಡ್ ದುರುಪಯೋಗ ಪಡಿಸಿಕೊಂಡು ಬರೆದ ಪತ್ರ ಅಷ್ಟೇ ಎಂದಿದ್ದರು. ಅದಕ್ಕೆ ನಾನು ಈ ಪ್ರಶಂಸನಾ ಪತ್ರವು ಖೊಟ್ಟಿ ಎಂದು ಒಂದು ಪತ್ರಿಕಾ ಹೇಳಿಕೆ ಕೊಟ್ಟುಬಿಡಿ ಎಂದಿದ್ದೆ. ಈಗ ಶ್ರೀಗಳು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಆದರೆ ಎಲ್ಲಿಯೂ, ಅದು ನಮ್ಮ ಶ್ರೀಮಠದ ಅಧಿಕೃತ ಪತ್ರ ಅಲ್ಲ. ಯಾವನೋ ಒಬ್ಬ ಅಧಿಕ ಪ್ರಸಂಗಿ ಮಠದ ಲೆಟರ್ ಹೆಡ್ ದುರುಪಯೋಗ ಪಡಿಸಿಕೊಂಡು ಬರೆದ ಪತ್ರ ಅಷ್ಟೇ ಎಂದು ಹೇಳಿಲ್ಲ, ಏಕೆ? ಒಂದು ಪರಂಪರಾನುಗತ ಮಠದ ಉತ್ತರಾಧಿಕಾರಿಗಳು ಅಧಿಕಾರವನ್ನು ಪಡೆದು ಕೊಂಡಾಗ ಅವರು ಕೇವಲ ಮುಂದಿನ ಆಗುಹೋಗುಗಳ ಅಧಿಕಾರವಲ್ಲದೆ ಮಠದ ಪರಂಪರೆಯ ವಾರಸುದಾರರೂ ಆಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ಆಗಿ ಹೋದ ಘಟನೆಗಳ ವಂಶೀಯ ಜವಾಬ್ದಾರಿ ಸಹ ಅವರದಾಗಿರುತ್ತದೆ.

ಅಲ್ಲದೆ ಯಾವುದೇ ಒಂದು ಸಂಸ್ಥೆ ಯಾ ಮಠದ ಅಧಿಕೃತ ಪತ್ರದಲ್ಲಿ ಕಾರ್ಯದರ್ಶಿಯೇ ಸಹಿ ಮಾಡಿದ್ದರೂ ಅದಕ್ಕೆ ಉತ್ತರದಾಯಿತ್ವ ಸಂಸ್ಥೆಯ ಮುಖಂಡರದ್ದೇ ಆಗಿರುತ್ತದೆ. ಓರ್ವ ಕಾರ್ಯ ದರ್ಶಿಯು ತನ್ನ ಮೇಲಧಿಕಾರಿ (ಇಲ್ಲಿ ಜಗದ್ಗುರುಗಳು) ಸೂಚನೆ ಮೇರೆಗೆ ಅಂತಹ ಪತ್ರವನ್ನ ಕೊಡುತ್ತಾರೆಯೇ ಹೊರತು ತನ್ನ ಸ್ವಂತ ಪದ ಸಂಪತ್ತನ್ನು ಬಳಸಿ ಕೊಡುವುದು ಸಲ್ಲ. ಹಾಗಾಗಿ ಶ್ರೀಗಳು ನನ್ನ ಸಹಿಯನ್ನು ಹೊಂದಿಲ್ಲ, ಇದು ಹಿಂದಿನ ಜಗದ್ಗುರುಗಳು ಕೊಟ್ಟಿದ್ದು, ನಾನಲ್ಲ, ನಮ್ಮ ಪ್ರಕಟಣಾ ಸಂಸ್ಥೆಯ ಶಿವನಗೌಡರು... ಇತ್ಯಾದಿಯಾಗಿ ಹೇಳುವದು ಉತ್ತರದಾಯಿತ್ವದಿಂದ ನುಣುಚಿಕೊಳ್ಳುವ ಪ್ರಯತ್ನವೆನಿಸುತ್ತದೆಯೇ ಹೊರತು ಓರ್ವ ಜಗದ್ಗುರುಗಳ ನೈತಿಕ ಜವಾಬ್ದಾರಿ ಯುತ ಹೇಳಿಕೆ ಎನಿಸದು.

ವೀರಶೈವ ಪುನರುತ್ಥಾನದ ಎಡೆಯೂರು ತೋಂಟದ ಸಿದ್ದಲಿಂಗೇಶ್ವರರ ಪರಂಪರೆಯ ಪಟ್ಟದಲ್ಲಿ ಕುಳಿತ ಪೂಜ್ಯರು ಅಖಂಡ ವೀರಶೈವದ ಧರ್ಮಜ್ಯೋತಿ ಎನಿಸದೆ ಗ್ರಾಂಥಿಕ ವೀರಶೈವ ಪದದ ಆಡುಮಾತಿನ ಪದವಾದ ಲಿಂಗಾಯತವನ್ನು ಬೇರೆ ಧರ್ಮ ಎನ್ನುವುದು ಯಾವ ನೈತಿಕತೆ ಎನಿಸುತ್ತದೆ? ಇದು ವೀರಶೈವ ಲಿಂಗಾಯತದ ತತ್ವಕ್ಕೆ ಹೊರಗು.

ಪೂಜ್ಯರು ತಮ್ಮ ಪರಂಪರಾನುಗತ ಜವಾಬ್ದಾರಿ ಯನ್ನುಮರೆತು ಧರ್ಮ ಭಂಜಕ ಸಂಘಟನೆ ಗಳೊಂದಿಗೆ ಗುರುತಿಸಿಕೊಂಡಿರುವುದನ್ನು ಜಗತ್ತು ಬಲ್ಲದು. ಪಂಚಾಚಾರ್ಯರ ರೇಣುಕಾಚಾರ್ಯ ಉರ್ಫ್ ರೇವಣಸಿದ್ಧರು ಕುರುಬರು ಎಂಬ ಅತಾರ್ಕಿಕ ಹಕ್ಕೊತ್ತಾಯ ಮಂಡಿಸಿದ್ದ ಮೌಢ್ಯದ ಪ್ರತಿರೂಪಕ್ಕೆ ಈ ಧರ್ಮ ಭಂಜಕರ ಒತ್ತಾಸೆಯಿಂದಲೇ ಉತ್ಪ್ರೇಕ್ಷೆಯ ಅಽಕ ಪ್ರಸಂಗದ ಪ್ರಶಂಸನಾ ಪತ್ರ ಕೊಟ್ಟಿರುವುದು ಎಂದು ಯಾರಾದರೂ ಊಹಿಸಬಲ್ಲರು.

ಹೀಗೆ ತಮ್ಮ ಮಠದಿಂದ ಹೋದ ಪತ್ರ ಸಣ್ಣ ಅಚಾತುರ್ಯವೇ ಆಗಿದ್ದರೂ ಪೂಜ್ಯರು ಅದರ ಜವಾಬ್ದಾರಿ ಹೊರುತ್ತಿಲ್ಲ ಎಂದರೆ ತೋಂಟದ ಸಿದ್ದಲಿಂಗೇಶ್ವರರ ಪರಂಪರೆಯನ್ನು, ಫ.ಗು. ಹಳಕಟ್ಟಿಯವರ ಸಂಶೋಧನಾ ಬದ್ಧತೆಯನ್ನು, ವಚನಪ್ರಣೀತ ತತ್ವಗಳನ್ನು, ಶರಣರ ಸಿದ್ಧಾಂತ ಗಳನ್ನುಉಳಿಸಿ ಬೆಳೆಸುವ ಪ್ರಮುಖ ಜವಾಬ್ದಾರಿಯನ್ನು ಹೇಗೆ ತಾನೇ ನಿಭಾಯಿಸಿಯಾರು? ನನ್ನ ಲೇಖನದ ಒಳತೋಟಿಯು ವಿಷಾದವೆನಿಸದೆ ನೈತಿಕ ಹೊಣೆಯನ್ನು ಎಚ್ಚರಿಸುತ್ತಿರುವ ಬಸವ ಗಂಟೆ ಎಂದು ಶ್ರೀಗಳು ಏಕೆ ಪರಿಭಾವಿಸಲಿಲ್ಲ? ಈಗಲೂ ಜಗದ್ಗುರುಗಳು ತಮ್ಮದೇ ಸ್ಪಷ್ಟನೆಯಂತೆ ಪ್ರಶಂಸನಾ ಪತ್ರವು ಕಿಡಿಗೇಡಿಯ ಕೈಚಳಕ ಎಂಬುದನ್ನಾಗಲಿ ಖೊಟ್ಟಿ ಎಂಬುದನ್ನಾಗಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿಲ್ಲವೇಕೆ? ಇದು ದ್ವಂದ್ವವಲ್ಲವೇ? ಇಲ್ಲಿ ಶ್ರೀಗಳಿಗಿರುವ ಸಂಕಟವಾದರೂ ಏನು?ಅದರಲ್ಲೂ 1999ರಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನವು ತನ್ನ ಪ್ರಕಾಶನಾ ಸಂಸ್ಥೆ ಯಾದ ವೀರಶೈವ ಅಧ್ಯಯನ ಸಂಸ್ಥೆ ಮೂಲಕ ‘ವಚನಶಾಸ ಸಾರ ಭಾಗ 1’ ಕೃತಿಯನ್ನು ಪ್ರಕಟಿಸಿ ಕೃತಿಯ ಪರಿಚಯದಲ್ಲಿ ತಾತ್ವಿಕ ಕ್ರಮದಲ್ಲಿ ಒಗ್ಗೂಡಿಸಿಕೊಂಡು ಓದಬೇಕಿದ್ದ ವಚನ ಗಳನ್ನು ಪಲ್ಲಟಿತ ಸ್ಥಿತಿಯ ಓದಿಕೊಂಡು ಅವುಗಳ ಸಮಗ್ರೀಕೃತ ಅರ್ಥಕ್ಕೆ ಭಂಗ ತರುತ್ತಿದ್ದುದನ್ನು ಗಮನಿಸಿದ ಫ.ಗು.ಹಳಕಟ್ಟಿಯವರು ಅವುಗಳನ್ನು ಷಟ್‌ಸ್ಥಲಗಳಿಗನುಸಾರವಾಗಿ ಹೊಂದಿಸಿ 1923ರಲ್ಲಿ ಮೊದಲ ಆವೃತ್ತಿ ಪ್ರಕಟಿಸಿದರು.

ಇದರ 2ನೇ ಆವೃತ್ತಿಯು (ಪೂರ್ವಾರ್ಧ 1931ರಲ್ಲಿ, ಉತ್ತರಾರ್ಧ 1933ರಲ್ಲಿ) ಪ್ರಕಟವಾಯಿತು ಎಂದಿದೆ. ಹೀಗೆ ಫ.ಗು.ಹಳಕಟ್ಟಿಯವರ ಶ್ರಮವನ್ನು ಅರಿತು ಸಹ ಫ.ಗು. ಹಳಕಟ್ಟಿಯವರನ್ನು ಓರ್ವ ದೆವ್ವ ಬಿಡಿಸುವ ವ್ಯಕ್ತಿಗೆ ಹೋಲಿಸಿದೆ.

‘ಉತ್ತರ ಭಾರತದಲ್ಲಿ ಕುರಿಯನ್ನು ಭೇಡ್ ಎನ್ನುತ್ತಾರೆ. ಹಾಗಾಗಿ ಕರ್ನಾಟಕದ ಬೇಡರು ಕುರುಬರು’ ಎನ್ನುವ ಪಾಮರರನ್ನು ವಚನಗಳನ್ನು ಷಟ್ ಸ್ಥಲಗಳಿಗನುಸಾರವಾಗಿ ಹೊಂದಿಸಿದ ಘನ ಪಂಡಿತ ರಿಗೆ ಹೋಲಿಸಿರುವುದು ಬಹುಶಃ ಸಮ ಸಮಾಜದ ನವ್ಯ ವ್ಯಾಖ್ಯಾನದ ಮುನ್ನುಡಿ ಈ ಪ್ರಶಂಸನಾ ಪತ್ರವಿರಬಹುದು!

ತಮ್ಮದೇ ಸ್ಥಾನಿಕ ಪ್ರಕಾಶನ ಸಂಸ್ಥೆಯ ಹೆಸರಲ್ಲಿ ವೀರಶೈವ ಎಂದಿರುವಾಗ ಶ್ರೀಗಳು ಈಗ ವೀರಶೈವ ಬೇರೆ ಎನ್ನುತ್ತಿರುವುದು ಶ್ರೀಮಠದ ಮತಬ್ಯಾಂಕಿಗೆ ಮತ/ಠ ಸಿದ್ಧಾಂತದ ಮತ್ತೊಂದು ಉದಾಹರಣೆ ಎನಿಸದೇ? ಈ ವಿಚಾರಕ್ಕೆ ಸಹ ಶ್ರೀಗಳು, ಇದು ನಾನು ಬರುವ ಮೊದಲೇ ಆದದ್ದು ಹಾಗಾಗಿ ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ತಮ್ಮ ಅಧ್ಯಯನಶೀಲತೆಯನ್ನೇ ನಿರಾಕರಿಸುವರೇ?