Srivathsa Joshi Column: ಲೋಕವೇ ಹೇಳಿದ ಮಾತಿದು...ಆದರೆ ಮೂಲತಃ ಏನದು ?
ಋಷಿಮೂಲ, ನದಿಮೂಲಗಳನ್ನೆಲ್ಲ ಹುಡುಕಬಾರದು ಎನ್ನುತ್ತಾರೆ, ಆದರೆ ಲೋಕೋಕ್ತಿಗಳ ಮೂಲವನ್ನು ಹುಡುಕುತ್ತ ಹೊರಟರೆ ತಪ್ಪಿಲ್ಲ. ಮಾತ್ರವಲ್ಲ ಇನ್ನೂ ಹೊಸಹೊಸ ವಿಚಾರಗಳು, ವಿಷಯಗಳು ಇದರಿಂದ ನಮ್ಮೆದುರು ತೆರೆದುಕೊಳ್ಳುತ್ತವೆ ಮತ್ತು ಜ್ಞಾನವರ್ಧನೆಗೆ ಸಹಾಯ ವಾಗುತ್ತವೆ. ಅಂಥ ಕೆಲವು ಪ್ರಸಿದ್ಧ ಲೋಕೋಕ್ತಿ/ನುಡಿಗಟ್ಟುಗಳ ಬಗ್ಗೆ ವ್ಯಾಖ್ಯಾನ-ವಿಶ್ಲೇಷಣೆಗಳನ್ನು ಇಲ್ಲಿ ಒಟ್ಟುಹಾಕಿದ್ದೇನೆ.
-
ತಿಳಿರು ತೋರಣ
“ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಂತೆ..." ಅಂತೊಂದು ನುಡಿಗಟ್ಟು. ಒಂದು ಕೆಲಸಕ್ಕೆ ಬೇಕಾಗುವ ಮುಖ್ಯ ಪರಿಕರವನ್ನೇ ಮರೆತು ಹೋದ ಸಂದರ್ಭದಲ್ಲಿ ಈ ಬಳಕೆ. ಪ್ರಕೃತಿಯ ಸುಂದರ ದೃಶ್ಯ ಗಳನ್ನು ಸೆರೆ ಹಿಡಿಯಲು ಹೊರಟ ಫೋಟೋಗ್ರಾಫರ್ ಒಂದು ವೇಳೆ ಕ್ಯಾಮರಾ ಮರೆತು ಹೋದರೆ ಹೇಗೋ ಹಾಗೆ. ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿ ಹಾಲ್‌ಟಿಕೆಟ್ ಮರೆತು ಹೋದರೆ ಹೇಗೋ ಹಾಗೆ.
ಅರ್ಥ ಸರಿಯಾಗಿ ಗೊತ್ತಿಲ್ಲದೆ, ಗೊತ್ತು ಮಾಡಿಕೊಳ್ಳುವ ಗೋಜಿಗೂ ಹೋಗದೆ, ಹೇಗ್ಹೇಗೋ ಉಚ್ಚರಿಸುವ/ಬರೆಯುವ ನಮ್ಮ ಅಜ್ಞಾನಕ್ಕೆ ಲೋಕೋಕ್ತಿಗಳೂ ಬಲಿಯಾಗುವುದಿದೆ. ವಿಪರ್ಯಾಸ ವೆಂದರೆ ನಾನು-ನೀವು ಅಂತಲ್ಲ ಲೋಕದಲ್ಲಿ ಎಲ್ಲರೂ ಆ ತಪ್ಪು ರೂಪವನ್ನೇ ಬಳಸುತ್ತಾರೆ, ಹಾಗಾಗಿ ಅದೇ ಸರಿ ಎಂದು ಮಾನ್ಯವೂ ಆಗಿರುತ್ತದೆ! ಮಾತಿನ ಮಂಟಪ ಸಿಂಗರಿಸಲಿಕ್ಕೆ, ಬರವಣಿಗೆ ಯ ತೂಕ ಹೆಚ್ಚಿಸಲಿಕ್ಕೆ ಈ ಲೋಕೋಕ್ತಿಗಳು, ನಾಣ್ಣುಡಿಗಳು, ಗಾದೆಮಾತುಗಳು, ಪದಪುಂಜಗಳು ನಮಗೆ ಬೇಕಾಗುವುದೇನೋ ಹೌದು; ಆದರೆ ಬಹುತೇಕ ಸಂದರ್ಭಗಳಲ್ಲಿ ಅವುಗಳ ಮೂಲ ನಮಗೆ ಗೊತ್ತೇ ಇರುವುದಿಲ್ಲ.
ಋಷಿಮೂಲ, ನದಿಮೂಲಗಳನ್ನೆಲ್ಲ ಹುಡುಕಬಾರದು ಎನ್ನುತ್ತಾರೆ, ಆದರೆ ಲೋಕೋಕ್ತಿಗಳ ಮೂಲವನ್ನು ಹುಡುಕುತ್ತ ಹೊರಟರೆ ತಪ್ಪಿಲ್ಲ. ಮಾತ್ರವಲ್ಲ ಇನ್ನೂ ಹೊಸಹೊಸ ವಿಚಾರಗಳು, ವಿಷಯಗಳು ಇದರಿಂದ ನಮ್ಮೆದುರು ತೆರೆದುಕೊಳ್ಳುತ್ತವೆ ಮತ್ತು ಜ್ಞಾನವರ್ಧನೆಗೆ ಸಹಾಯ ವಾಗುತ್ತವೆ. ಅಂಥ ಕೆಲವು ಪ್ರಸಿದ್ಧ ಲೋಕೋಕ್ತಿ/ನುಡಿಗಟ್ಟುಗಳ ಬಗ್ಗೆ ವ್ಯಾಖ್ಯಾನ-ವಿಶ್ಲೇಷಣೆ ಗಳನ್ನು ಇಲ್ಲಿ ಒಟ್ಟುಹಾಕಿದ್ದೇನೆ.
ಇದು ಆಕರಗ್ರಂಥಗಳಿಂದ, ಅಂತರ್ಜಾಲ ಮಂಥನದಿಂದ ಸಂಗ್ರಹಿಸಿ ಸಂಕಲಿಸಿದ ಒಂದಿಷ್ಟು ಮಾಹಿತಿ. ಇದನ್ನೋದಿದಾಗ ನಿಮಗೆ ಪಾ.ವೆಂ. ಅವರ ‘ಪದಾರ್ಥ ಚಿಂತಾಮಣಿ’ ಅಥವಾ ಜಿ.ವೆಂಕಟ ಸುಬ್ಬಯ್ಯನವರ ‘ಇಗೋ ಕನ್ನಡ’ ನೆನಪಾದರೆ ಬಹಳ ಒಳ್ಳೆಯದೇ. ಏಕೆಂದರೆ ಅಂಥದೇ ಮಹಾ ಸಾಗರದಿಂದ ಹೆಕ್ಕಿರುವ ನಾಲ್ಕಾರು ಹನಿಗಳಿವು ಅಷ್ಟೇ.
ಇದನ್ನೂ ಓದಿ: Srivathsa Joshi Column: ಪರೋಪಕಾರಿ ಪುಣ್ಯವಂತೆಗೆ ಪಿಎಚ್ʼಡಿ ಪದವಿ ಪುರಸ್ಕಾರ
“ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಂತೆ..." ಅಂತೊಂದು ನುಡಿಗಟ್ಟು. ಒಂದು ಕೆಲಸಕ್ಕೆ ಬೇಕಾಗುವ ಮುಖ್ಯ ಪರಿಕರವನ್ನೇ ಮರೆತು ಹೋದ ಸಂದರ್ಭದಲ್ಲಿ ಈ ಬಳಕೆ. ಪ್ರಕೃತಿಯ ಸುಂದರ ದೃಶ್ಯ ಗಳನ್ನು ಸೆರೆ ಹಿಡಿಯಲು ಹೊರಟ ಫೋಟೋಗ್ರಾಫರ್ ಒಂದುವೇಳೆ ಕ್ಯಾಮರಾ ಮರೆತು ಹೋದರೆ ಹೇಗೋ ಹಾಗೆ.
ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿ ಹಾಲ್‌ಟಿಕೆಟ್ ಮರೆತು ಹೋದರೆ ಹೇಗೋ ಹಾಗೆ. ಈ ನುಡಿಗಟ್ಟಿನಲ್ಲಿರುವ ‘ಕರಡಿಗೆ’ ಪದವನ್ನು ಗಮನಿಸಬೇಕು. ಇದು ಕರಂಡಕ, ಕರಂಡ, ಕರಡಿ ಮುಂತಾದ ರೂಪಗಳಿರುವ ಪದ, ಇಂಗ್ಲಿಷ್‌ನಲ್ಲಾದರೆ ಕಂಟೇನರ್ ಎಂಬ ಅರ್ಥ. ಶಿವಭಕ್ತರು ಪುಟ್ಟ ಕರಂಡಕದಲ್ಲಿ ಶಿವಲಿಂಗ ಇಟ್ಟುಕೊಳ್ಳುತ್ತಾರೆ.
ಎಲ್ಲಿ ಬೇಕಾದರೂ ಯಾವ ವೇಳೆಯಲ್ಲಿ ಬೇಕಾದರೂ ಶಿವಪೂಜೆ ಮಾಡಲು ಅನುಕೂಲವಾಗುವಂತೆ. ಶಿವಪೂಜೆ ಮಾಡಬೇಕಾಗಿದೆ, ಆದರೆ ಶಿವಲಿಂಗವಿರುವ ಕರಡಿಗೆಯನ್ನೇ ಮರೆತು ಬಂದಿದ್ದರೆ ಪೂಜೆ ಸಾಧ್ಯವಿಲ್ಲವಲ್ಲ? ಅಂಥ ಸನ್ನಿವೇಶವೇ ‘ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಂತೆ’. ಕಾಲಾನುಕ್ರಮದಲ್ಲಿ ಈ ನುಡಿಗಟ್ಟಿನ ‘ಕರಡಿಗೆ’ ಪದ ‘ಕರಡಿ’ ಎಂದು ಮಾರ್ಪಾಡಾಗಿದೆ.
ಶಿವಪೂಜೆಗೂ ಕರಡಿಗೂ ಏನು ಸಂಬಂಧವೆಂದು ಕೇಳಿದರೆ ಯಾರಿಗೂ ಗೊತ್ತಿಲ್ಲ! ಆದರೆ “ಶಿವಪೂಜೆ ಯಲ್ಲಿ ಕರಡಿ ಬಿಟ್ಟಂತೆ" ಎಂಬುದೇ ಸರಿಯಾದ ಮೂಲರೂಪವೆಂದು ವಾದಿಸುವವರೂ ಇರುತ್ತಾರೆ. ಶುಭಸಮಾರಂಭದಲ್ಲಿ ನಡುವೆ ಅನಪೇಕ್ಷಿತ ಸಂಗತಿ, ಮುಜುಗರ ತರುವಂಥದು ಏನಾದರೂ ನಡೆದರೆ ಅದು ‘ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ...’ ಅಂತೆ!
“ಹೊಳೆನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ?" ಎಂಬ ನುಡಿಗಟ್ಟನ್ನು ನೀವು ಕೇಳಿರಬಹುದು. ಇದು ಕೂಡ ತಪ್ಪು ರೂಪದಲ್ಲಿ ಜನಪ್ರಿಯವಾಗಿರುವುದು. ಅದು ದೊಣ್ಣೆ ಅಲ್ಲ ದೊಣೆ ಎಂದಾಗ ಬೇಕು. ದೊಣೆ ಎಂದರೆ ಬೆಟ್ಟದ ಮೇಲಿರುವ ಸ್ವಾಭಾವಿಕ ಹೊಂಡ, ಕೊಳ, ಹಳ್ಳ ಅಥವಾ ಕೆರೆ-ಕುಂಟೆ. ಕಿಟ್ಟೆಲ್ ಕೋಶದಲ್ಲಿ ಈ ಪದಕ್ಕೆ ಕೊಟ್ಟಿರುವ ಅರ್ಥ: Mountain pool or spring, tank, reservoir, pasture ground with shady trees.
ಒಟ್ಟಿನಲ್ಲಿ, ನೀರು ನಿಲ್ಲುವ ಜಾಗ. ತೆಲುಗಿನಲ್ಲಿ ದೊನ ಎನ್ನುತ್ತಾರೆ, ಕನ್ನಡದಲ್ಲಿ ದೊಣೆ. ತರಾಸು ಅವರ ದುರ್ಗಾಸ್ತಮಾನ ಕಾದಂಬರಿಯಲ್ಲಿ ಚಿತ್ರದುರ್ಗದ ಕೋಟೆಯೊಳಗಿದ್ದ ದೊಣೆಗಳ ಪ್ರಸ್ತಾಪ ಬರುತ್ತದೆ- “ಕೋಟೆಯೊಳಗೆ ನೀರಿಗೆ ಬರವಿಲ್ಲದಂತೆ ರಸಸಿದ್ಧರ ದೊಣೆ, ಕಂಚಿನ ದೊಣೆ, ಅಕ್ಕ ತಂಗೇರ ದೊಣೆಗಳು ಇದ್ದವು..." ಇತ್ಯಾದಿ.
ದೊಣೆನಾಯಕ ಎಂದರೆ ಕೆರೆಕುಂಟೆಯ ಕಾವಲುಗಾರ, ರಕ್ಷಕ. ದೊಣೆಯ ಉಸ್ತುವಾರಿ ಅವನದು ಎಂಬರ್ಥದಲ್ಲಿ ದೊಣೆನಾಯಕ ಎಂಬ ಪದ. ದೊಣೆಯಿಂದ ನೀರು ಉಪಯೋಗಿಸಲಿಕ್ಕೆ ಬಹುಶಃ ಅವನ ಅನುಮತಿ ಪಡೆಯಬೇಕಿತ್ತೋ ಏನೋ. ಆದರೆ ಬೇರೆಲ್ಲೋ ಸ್ವಚ್ಛಂದವಾಗಿ ಹರಿಯುವ ಹೊಳೆಗೆ ಅವನ ಅಪ್ಪಣೆ ಏಕೆ? ಎಂಬರ್ಥದಲ್ಲಿ ಈ ನುಡಿಗಟ್ಟು ಹುಟ್ಟಿದ್ದು.
ಈಗ, ದೊಣೆ ಎಂಬ ಪದದ ಅರ್ಥ/ಪರಿಚಯ ಇಲ್ಲದೆ ಈ ನುಡಿಗಟ್ಟು “ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೇ?" ಎಂದಾಗಿದೆ. ಕೋಲು ಹಿಡಿದುಕೊಂಡು ನಿಂತ ಕಾವಲುಗಾರನ ಚಿತ್ರಣವೇ ಕಣ್ಮುಂದೆ ಬರುತ್ತದೆ. ಬಹುಶಃ ದೊಣ್ಣೆ (ಕೋಲು, ದಂಡ) ಅಧಿಕಾರದ ಸಂಕೇತವಾಗಿ, ಅಥಾರಿಟಿಯ ಕುರುಹಾಗಿ ಇಲ್ಲಿ ಮೆರೆದಿದೆ.
ನುಡಿಗಟ್ಟಿನ ಮೂಲಸ್ವರೂಪ ಮತ್ತು ಅರ್ಥವನ್ನು ಬದಲಾಯಿಸಲಿಕ್ಕೆ ಯಾವ ದೊಣೆನಾಯಕನ ಅಪ್ಪಣೆ ಪಡೆದರೋ ಗೊತ್ತಿಲ್ಲ. “ಹಸಿದು ಹಲಸು, ಉಂಡು ಮಾವು" ಅಂತ ಇನ್ನೊಂದು. ಈ ರೂಪ ದಲ್ಲೇ ನಮಗೆಲ್ಲ ಈ ನುಡಿಗಟ್ಟು ಗೊತ್ತಿರೋದು. ಬಹುಶಃ ಇದರ ಲಾಜಿಕ್ ಹೀಗಿರಬಹುದು: ಹಲಸಿನ ಹಣ್ಣು ತಿಂದರೆ ಹೊಟ್ಟೆ ತುಂಬುತ್ತದೆ, ಹಸಿವು ನೀಗುತ್ತದೆ.
ಒಂದು ಇಡೀ ಹಣ್ಣನ್ನು ತಿಂದರೆ (ಸಾಧ್ಯವಿದ್ದರೆ) ಊಟದ ಚಿಂತೆಯೇ ಇಲ್ಲ. ಆದರೆ ಮಾವಿನಹಣ್ಣು ಹಾಗಲ್ಲ. ಅದನ್ನು ತಿಂದರೆ ಹಸಿವು ನೀಗದು. ಬದಲಿಗೆ, ಪೊಗದಸ್ತಾಗಿ ಮೃಷ್ಟಾನ್ನ ಉಂಡ ಬಳಿಕ ಒಂದು ಮಾವಿನಹಣ್ಣು ತಿಂದರೆ ಹೊಟ್ಟೆಗೆ ಒಳ್ಳೆಯದಾಗಬಹುದು. ಮಾವಿನಹಣ್ಣಿನಲ್ಲಿರುವ ಆಮ್ಲೀಯ ಅಂಶಗಳು ಜೀರ್ಣಕ್ರಿಯೆಗೆ ನೆರವಾಗಬಹುದು.
ಮಾವಿನಹಣ್ಣು ಎಂದಿಗೂ ಊಟಕ್ಕೆ ಬದಲಿಯಾಗದು. ಹಲಸಿನಷ್ಟು ಉಪಯುಕ್ತತೆ ಅದರದಲ್ಲ- ಎಂದು ಇಂಗಿತ. ಆದರೆ, ಸ್ವಾರಸ್ಯ ಗೊತ್ತೇ? ನುಡಿಗಟ್ಟಿನ ಮೂಲರೂಪ ಬೇರೆಯೇ ಇದೆ, “ಹಿಸಿದು ಹಲಸು; ಉಂಡೆ ಮಾವು" ಎಂದು!
ಹಾಗೆಂದರೇನು ಅರ್ಥ? ‘ಹಿಸಿ’ ಎನ್ನುವುದು ಕ್ರಿಯಾಪದ. ಅದರ ಅರ್ಥ- ಸಿಗಿ, ಕಿತ್ತುತೆಗೆ, ಎರಡಾಗಿ ಸೀಳು ಎಂದು. ಹಲಸಿನಹಣ್ಣು ತಿನ್ನಬೇಕಿದ್ದರೆ ಮೊದಲು ಅದನ್ನು ಹಿಸಿಯಬೇಕು. ಕೈಗಳಿಗೆ ಅಂಟು ತಾಗದಂತೆ ನೋಡಿಕೊಳ್ಳಬೇಕು. ಹಣ್ಣನ್ನು ಹಿಸಿದ ಮೇಲೆ ಒಳಗಿನ ತೊಳೆಗಳನ್ನು ಒಂದೊಂದಾಗಿ ಬಿಡಿಸಬೇಕು.
ಅದರೊಳಗಿನ ಬೀಜ ತೆಗೆದು ಬಿಸಾಡಬೇಕು. ಇಷ್ಟೆಲ್ಲ ಮಾಡಿದ ಮೇಲೆ ಸಿಹಿಯಾದ ತೊಳೆ ತಿನ್ನಲಿಕ್ಕೆ ಸಿಗುತ್ತದಾದರೂ, ಏನಿಲ್ಲವೆಂದರೂ ಅಲ್ಲಿ ರಂಪ ಗಲೀಜು ಆಗೇಆಗುತ್ತದೆ. ಆಮೇಲೆ ಅದನ್ನೆಲ್ಲ ಸ್ವಚ್ಛ ಗೊಳಿಸುವ ಕೆಲಸ ಬೇರೆ. ಆದರೆ ಮಾವಿನಹಣ್ಣು ತಿನ್ನಲಿಕ್ಕೆ ಅಷ್ಟೆಲ್ಲ ರಾಮಾಯಣ ಏನೂ ಬೇಡಾ. ಕೈಯಲ್ಲಿ ಉಂಡೆ ಹಿಡಿದುಕೊಂಡಂತೆ ಹಿಡಿದುಕೊಂಡು ಬೇಕಿದ್ದರೆ ಸಿಪ್ಪೆ ಸಮೇತ ಸವಿಯ ತೊಡಗಬಹುದು. ಕೊನೆಯಲ್ಲಿ ಉಳಿಯುವ ವಾಟೆ ಒಂದನ್ನು ಬಿಟ್ಟು ಇಡೀ ಹಣ್ಣನ್ನು ಚಪ್ಪರಿಸ ಬಹುದು. ವಾಟೆಯನ್ನು ದೂರದಲ್ಲೆಲ್ಲೋ ಬಿಸಾಡಿದರೆ ಹಣ್ಣು ತಿಂದ ಸುಳಿವು ಸಹ ಕಾಣಿಸದು! ಮೂಲ ನುಡಿಗಟ್ಟಿನ ಗೂಢಾರ್ಥವೂ ಅದೇ. ನಿಜವಾಗಿ ಈ ನುಡಿಗಟ್ಟು ಇರುವುದು ಹಲಸು ಮತ್ತು ಮಾವಿನಹಣ್ಣುಗಳ ಬಗ್ಗೆ ಅಲ್ಲವೇಅಲ್ಲ!
ನಮಗೆ ಬದುಕಿನಲ್ಲಿ ಸಿಗುವ ಕೆಲವು ‘ಫಲ’ಗಳು ಹಲಸಿನ ಹಣ್ಣಿನಂತೆ ಸಿಗುತ್ತವೆ. ಅವುಗಳನ್ನು ಕಷ್ಟಪಟ್ಟು ಹಿಸಿದು ತಿನ್ನಬೇಕಾಗುತ್ತದೆ, ಅಷ್ಟಿಷ್ಟು ತೊಳೆಗಳಿಗೋಸ್ಕರ ಅಂಟು ಮೆತ್ತಿಸಿಕೊಂಡು ಕಸ ತೆಗೆದು ಸ್ವಚ್ಛಮಾಡಿಕೊಳ್ಳಬೇಕಾಗುತ್ತದೆ. ಮತ್ತೆ ಕೆಲವು ‘ಫಲ’ಗಳು ಮಾವಿನ ಹಣ್ಣಿನಂತೆ ಸಿಕ್ಕಿ ಬಿಡುತ್ತವೆ.
ಅವುಗಳ ಸವಿಯುಣ್ಣುವುದು ಸರಳಾತಿಸರಳ. ಅನಾಯಾಸವಾಗಿ ಅದೃಷ್ಟ ಒಲಿದಂತೆ. ಲಾಟರಿ ಯಲ್ಲಿ ಬಹುಮಾನ ಗೆದ್ದಂತೆ. ಆದರೂ, ಕಷ್ಟಪಟ್ಟು ದೊರಕುವ ಫಲವೇ ಹೆಚ್ಚು ಸಿಹಿ. ಮತ್ತೆ ಕೆಲವು ನುಡಿಗಟ್ಟುಗಳು ಅಪಭ್ರಂಶಗೊಂಡಿಲ್ಲವಾದರೂ, ಅವುಗಳ ಅರ್ಥ ನಮಗೆ ಸರಿಯಾಗಿ ಗೊತ್ತಿರುವು ದಿಲ್ಲ. ಮೂಲ ಅರ್ಥ ತಿಳಿದುಕೊಂಡು ಬಳಸಿದರೆ ಅದರ ಗತ್ತೇ ಬೇರೆ.
“ಕುಂಭ ದ್ರೋಣ ಮಳೆ" ಅಂಥದೊಂದು ನುಡಿಗಟ್ಟು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ‘ಕುಂಭ’ ಮತ್ತು ‘ದ್ರೋಣ’ ಪದಗಳು ದ್ರವಪದಾರ್ಥಗಳ ಅಳತೆಯ ಮಾನಗಳಾಗಿ ಬಳಕೆಯಾಗುತ್ತಿದ್ದ ಉಲ್ಲೇಖವಿದೆ. ದ್ರೋಣ ಎಂಬುದು ಕನ್ನಡದಲ್ಲಿ ‘ದೊನ್ನೆ’ ಆಗಿದೆ. ಬಾಳೆಎಲೆಯ ತುಂಡನ್ನು ಕತ್ತರಿಸಿ ಮಡಚಿ ಅದರ ಕಿವಿಗಳೆರಡಕ್ಕೆ ಕಡ್ಡಿ ತೂರಿ ಒಂದು ಪಾತ್ರೆಯನ್ನಾಗಿ ಮಾಡಿದ್ದು ದೊನ್ನೆ. ಮುತ್ತುಗದ ಎಲೆಗಳಿಂದಲೂ ಮಾಡಬಹುದು.
ನವಗ್ರಹಪೂಜೆಯ ವೇಳೆ ಒಂಬತ್ತು ಗ್ರಹಗಳಿಗೆ ಸಂಬಂಧಿಸಿದಂತೆ ಅಕ್ಕಿ, ಗೋಧಿ, ಹುರುಳಿ, ಎಳ್ಳು, ಉದ್ದು, ಕಡಲೆ ಮುಂತಾದ ಧಾನ್ಯಗಳನ್ನು ತುಂಬಿಡಲಿಕ್ಕೆ ದೊನ್ನೆ (ದ್ರೋಣ) ಬಳಸುವುದಿದೆ. ಕುಂಭ ಎಂದರೆ ಗಡಿಗೆ. 20 ದ್ರೋಣಗಳ ಅಳತೆ ಒಂದು ಕುಂಭಕ್ಕೆ ಸಮ. ಈ ರೀತಿಯ ಕುಂಭ ಮತ್ತು ದ್ರೋಣ ಪಾತ್ರೆಗಳಿಂದ ಏಕಕಾಲಕ್ಕೆ ನೀರು ಸುರಿದರೆ ಅದು ಎಷ್ಟು ದಪ್ಪ ಜಲಧಾರೆಯಾಗಿ ಬೀಳಬಹುದೋ ಅಷ್ಟು ದಪ್ಪ ಧಾರೆಯ ಮಳೆ ಸುರಿಯುತ್ತಿದೆ ಎನ್ನುವುದೇ ಕುಂಭದ್ರೋಣ ಮಳೆ.
‘ಮುಸಲಧಾರೆ’ ಎಂದರೂ ಮಳೆಹನಿಗಳು ಎಷ್ಟು ದಪ್ಪವಿವೆ ಎಂಬ ಬಣ್ಣನೆ. ಸಂಸ್ಕೃತದಲ್ಲಿ ಮುಸಲ ಅಂದರೆ ಒನಕೆ. ಒನಕೆಯಷ್ಟು ದಪ್ಪದ ಮಳೆಹನಿ. ಅಷ್ಟು ಭರ್ಜರಿ ಮಳೆ! ಮಳೆಯನ್ನು ಬಣ್ಣಿಸುವಾಗ ಇಂಗ್ಲಿಷ್‌ನಲ್ಲಾದರೆ “ಬೆಕ್ಕು ನಾಯಿಗಳ ಸುರಿಮಳೆ" ಎನ್ನುವುದಿದೆ, ಅದೇ- It's raining cats and dogs ಎಂಬ ಉದ್ಗಾರ. ಈ ಲೋಕೋಕ್ತಿಗೆ ಬೇರೆ ಬೇರೆ ಎರಡು-ಮೂರು ಐತಿಹ್ಯ ಗಳಿವೆ.
ತುಂಬಾ ಹಿಂದೆ ಲಂಡನ್ನಲ್ಲೊಮ್ಮೆ ಬ್ಯುಬೋನಿಕ್ ಪ್ಲೇಗ್ ಬಂದಿದ್ದಾಗ ಸಾವಿರಾರು ಜನ ಸತ್ತಿದ್ದರು. ಮಾತ್ರವಲ್ಲ, ಆ ಪ್ಲೇಗ್ ಮಹಾಮಾರಿಯು ಅದೆಷ್ಟೋ ನಾಯಿ-ಬೆಕ್ಕುಗಳನ್ನೂ ಬಲಿ ತೆಗೆದುಕೊಂಡಿ ತ್ತು. ಮುಂದೊಂದು ದಿನ ‘ಧೋ’ ಎಂದು ಮಳೆ ಸುರಿದು ಚರಂಡಿಗಳಲ್ಲೆಲ್ಲ ಸತ್ತ ನಾಯಿ-ಬೆಕ್ಕುಗಳ ಹೆಣಗಳೇ ರಾಶಿರಾಶಿಯಾಗಿ ಹರಿದಿದ್ದವು- ಆಕಾಶದಿಂದಲೇ ಅವುಗಳ ಕರಾಳ ವೃಷ್ಟಿ ಆಯ್ತೇನೊ ಎನ್ನುವಷ್ಟು.
ಇನ್ನೊಂದು ನಂಬಿಕೆಯ ಪ್ರಕಾರ ಬಹಳ ಹಿಂದಿನ ಕಾಲದಲ್ಲಿ, ಅಂದರೆ ಕತ್ತಲಿನ ಯುಗದಲ್ಲಿ, ಬೆಕ್ಕು-ನಾಯಿಗಳನ್ನು ವರ್ಷಮಾರುತಗಳ ರೂಪಗಳೆಂದು ತಿಳಿಯಲಾಗಿತ್ತು. ಕರಿಬೆಕ್ಕುಗಳು ಅತಿವೃಷ್ಟಿಯ ಸಂಕೇತವಾದರೆ ನಾಯಿ-ತೋಳಗಳು ಆ ಮಳೆಯ ಜತೆಗಿನ ಬಿರುಗಾಳಿಯ ಸಂಕೇತ. ಅದಕ್ಕೇ ಈಗಲೂ ಅತಿಪ್ರಮಾಣದಲ್ಲಿ ಒಮ್ಮಿಂದೊಮ್ಮೆಗೇ ಗಾಳಿಸಮೇತ ಮಳೆ ಬಂದರೆ Raining cats and dogs ಎನ್ನುವುದು. ಹೇಳಲಿಕ್ಕೆ ಸುಲಭ, ಊಹಿಸಿದರೆ ಭಯಾನಕ ದೃಶ್ಯವೇ ಅದು!
ಬೆಕ್ಕು ನಾಯಿಗಳ ಸುರಿಮಳೆಯಂತೆ ಮೊಸಳೆಯ ಕಣ್ಣಿಂದ ಕಣ್ಣೀರ ಮಳೆ ಸುರಿದರೆ ಅದೇ ಮೊಸಳೆ ಕಣ್ಣೀರು. ಅದು ಮೊಸಳೆಯ ಕಣ್ಣುಗಳಿಂದ ಸುರಿಯುವ ನೀರು ಹೌದಾದರೂ ಅದರ ಉದ್ದೇಶ ಬೇರೆಯೇ ಇದೆ. ಮೊಸಳೆ ಉಭಯವಾಸಿ. ನೀರಿನಲ್ಲೂ ನೆಲದ ಮೇಲೂ ಇರಬಲ್ಲದು. ನೆಲದ ಮೇಲಿರುವಾಗಷ್ಟೇ ಅದರ ‘ಕಣ್ಣೀರು’ ನಮ್ಮ ಗಮನಕ್ಕೆ ಬರುವುದು.
ಅಲ್ಲದೇ ಮೊಸಳೆ ಆರೀತಿ ಕಣ್ಣೀರನ್ನು ಸುರಿಸುವುದು ನೆಲದ ಮೇಲಿರುವಾಗ ಮಾತ್ರ! ಆಹಾರ ತಿನ್ನುವಾಗ ಮೊಸಳೆ ತನ್ನ ಅಶ್ರುಗ್ರಂಥಿಗಳಿಂದ ಬೇಕಂತಲೇ ನೀರುಸುರಿಸಿ ಅದು ಬಾಯಿಯವರೆಗೂ ಇಳಿದು ಒಣ ತುತ್ತನ್ನು ತುಸು ನಯವಾಗಿಸುವುದಕ್ಕೆ ಅನುಕೂಲ ಮಾಡಿಕೊಳ್ಳುತ್ತದೆ.
ಜೀವವಿಜ್ಞಾನಿಗಳು ಕಂಡುಕೊಂಡಿರುವಂತೆ ಆ ‘ನೀರು’ ಬರೀ ನೀರಾಗಿರದೆ ಸಾಬೂನಿನ ನೊರೆ ಯಂತೆ ಇರುತ್ತದೆ. ಅಂದರೆ ಮನುಷ್ಯನೂ ಸೇರಿದಂತೆ ಬೇರೆ ಪ್ರಾಣಿಗಳಲ್ಲಿ ಆಹಾರಸೇವನೆಯ ವೇಳೆ ಜೊಲ್ಲು ವಹಿಸುವ ಪಾತ್ರವನ್ನೇ ಮೊಸಳೆಯಲ್ಲಿ ಕಣ್ಣೀರು ನಿಭಾಯಿಸುತ್ತದೆ.
ಬೇಟೆಯನ್ನು ಸುಲಭದಲ್ಲಿ ನುಂಗಲಿಕ್ಕಾಗುವಂತೆ ಮೊಸಳೆಗೆ ಇದೊಂದು ಪ್ರಕೃತಿದತ್ತ ಅನುಕೂಲ. ಊಟದ ವೇಳೆಯಲ್ಲಿ ಅಲ್ಲದೆ ಬೇರೆ ಸಮಯದಲ್ಲೂ (ಬಿಸಿಲಲ್ಲಿ ಮೈ ಕಾಯಿಸುತ್ತಿರುವಾಗ) ಮೊಸಳೆ ಗಳು ದವಡೆಯನ್ನು ಅಗಲಿಸಿಯೇ ಹೆಚ್ಚು ಹೊತ್ತು ಕಳೆಯುವುದರಿಂದ ಅವುಗಳ ಭಂಗಿಯು ಕಣ್ಣೀರ ಗ್ರಂಥಿಗಳ ಮೇಲೆ ಒಂದು ವಿಧದಲ್ಲಿ ಒತ್ತಡ ತರುತ್ತದೆ.
ತನ್ನಿಂತಾನೇ ಕಣ್ಣಿನಿಂದ ನೀರು ಹರಿಯಲಾರಂಭಿಸುತ್ತದೆ. ಭಾವೋದ್ವೇಗದಿಂದ ಕಣ್ಣೀರು ಸುರಿಸು ತ್ತಿದೆಯೋ ಏನೋ ಅಂತ ನಾವು ಅಂದ್ಕೋಳ್ತೇವೆ. ಅದು ಭಾವನಾತ್ಮಕ ಕಂಬನಿಯಲ್ಲ, ಭೌತಿಕ ಪ್ರಕ್ರಿಯೆ ಅಷ್ಟೆ. ಹೀಗೆ ಭಾವನೆಗಳಿಲ್ಲದೆ ಅಥವಾ ದುರುದ್ದೇಶ ಭಾವದಿಂದ ಢೋಂಗಿ ಕಣ್ಣೀರುಗರೆಯುವುದಕ್ಕೆ ಮೊಸಳೆಕಣ್ಣೀರು ಎಂಬ ಉಕ್ತಿ ರೂಢಿಯಾಗಿದೆ.
Crocodile tears ಎಂಬ ನುಡಿಗಟ್ಟು ಇಂಗ್ಲಿಷ್‌ನಲ್ಲಿಯೂ- ಶೇಕ್ಸ್‌ಪಿಯರ್ ಸಾಹಿತ್ಯದಲ್ಲೂ- ಬಳಕೆಯಾಗಿದೆ. ಕಾಗಕ್ಕ ಗುಬ್ಬಕ್ಕ ಕಥೆ ಎನ್ನುತ್ತೇವಲ್ವಾ, ಇಂಗ್ಲಿಷ್‌ನ Cock and bull story ತರ್ಜುಮೆ ಮಾಡಿದರೆ ಕೋಳಿ-ಗೂಳಿ ಕಥೆ. ತಲೆಬುಡವಿಲ್ಲದ ಕಟ್ಟುಕತೆಗಳಿಗೆ ಇಂಗ್ಲಿಷಲ್ಲಿ ಹಾಗೆನ್ನುತ್ತಾರೆ.
‘ಯಾಕೆ ತಡವಾಗಿ ಬಂದೆ?’ ಎಂಬ ಪ್ರಶ್ನೆ- ಹೆಂಡತಿ ಗಂಡನಿಗೆ ಕೇಳುವುದಿರಲಿ, ಅಧ್ಯಾಪಕರು ವಿದ್ಯಾರ್ಥಿಗೆ ಕೇಳುವುದಿರಲಿ, ಬಾಸ್ ಮಹಾಶಯ ತನ್ನ ಸಬಾರ್ಡಿನೇಟ್‌ಗೆ ಕೇಳುವುದಿರಲಿ, ಯಾರು ಯಾರಿಗೆ ಕೇಳುವುದೇ ಆಗಿರಲಿ- ಅದನ್ನು ಎದುರಿಸಿದವರು ಸಾಮಾನ್ಯವಾಗಿ ಕಟ್ಟಿಹೇಳುವ ‘ವರ್ಣ’ ರಂಜಿತ ‘ಬಿಳಿ’ಸುಳ್ಳುಗಳು ಹೆಚ್ಚಾಗಿ ಕೋಳಿ-ಗೂಳಿ ಕಥೆಗಳೇ ಆಗಿರುತ್ತವೆ.
ಅಷ್ಟಾಗಿ ಇಂಗ್ಲಿಷಲ್ಲಿ ಅದು Concocted and bully story ಎಂಬುದರ ಅಪಭ್ರಂಶ. ಡ್ಯಾನಿಷ್ ಭಾಷೆಯಲ್ಲಿ ಬುಲ್ಲಿ ಎಂದರೆ ಉತ್ಪ್ರೇಕ್ಷಿತ ಎಂದರ್ಥ. ಉತ್ಪ್ರೇಕ್ಷೆಗಳ ರುಚಿಕಟ್ಟಾದ ರಸಪಾಕವೇ ಕೋಳಿ-ಗೂಳಿ ಕಥೆ! ಅಂದಹಾಗೆ “ನನ್ನ ಹೋಮ್‌ವರ್ಕ್ ಅನ್ನು ನಾಯಿ ತಿಂದಿತು" ಎಂದು ವಿದ್ಯಾರ್ಥಿ ಹೇಳುವುದು ಅಮೆರಿಕದಲ್ಲಿ ಜನಜನಿತ.
ಅಮೆರಿಕದ್ದೇ ಇನ್ನೊಂದು ಕಥೆಯಿಂದ ಬಂದದ್ದು ‘ಬಿಳಿಯಾನೆ’ ಅಥವಾ White elephant ಎಂಬ ಪದಪುಂಜ. ಕೊಂಡು ಕೊಳ್ಳಲಿಕ್ಕೆ ತುಂಬ ದುಬಾರಿಯಾದ, ನಿರ್ವಹಣೆಗೆ ಬಲು ದುಸ್ತರವಾದ ಮತ್ತು ಪ್ರತಿಫಲವಾಗಿ ಏನೂ ದೊರಕದ ವಸ್ತುವಿಗೆ ಅಥವಾ ವಿಷಯಕ್ಕೆ ‘ಬಿಳಿಯಾನೆ’ ಎನ್ನುವುದು. ಕೇಂದ್ರ/ರಾಜ್ಯ ಸರಕಾರದ ಸ್ವಾಮ್ಯದಲ್ಲಿನ ಸಾರ್ವಜನಿಕ ಉದ್ಯಮಗಳು ಬಿಳಿಯಾನೆಗಳಿದ್ದಂತೆ ಎಂಬ ಟೀಕೆ ಸರ್ವಸಾಮಾನ್ಯವಾದುದು. ಅಷ್ಟಾಗಿ ಬಿಳಿಯ ಬಣ್ಣದ ಆನೆ ನಿಜವಾಗಿಯೂ ಇತ್ತೇ? ಈಗಲೂ ಇದೆಯೇ? ಹೌದು, ಬರ್ಮಾ ದೇಶದಲ್ಲಿ ‘ಅಲ್ಬಿನೊ’ ಎಂಬ ಪ್ರಭೇದದ ಬಿಳಿ ಆನೆಗಳು ಇದ್ದುವಂತೆ.
ಅವು ತುಂಬ ಪಾವಿತ್ರ್ಯವುಳ್ಳವು, ದೈವಾಂಶಸಂಭೂತವಾದವು ಎಂಬ ನಂಬಿಕೆ ಜನರಲ್ಲಿತ್ತು. ಸಾಮಾನ್ಯ ಕೆಲಸಗಳಿಗೆ ಅವುಗಳನ್ನು ಬಳಸಿಕೊಳ್ಳುವಂತಿಲ್ಲ, ಆದರೆ ಅತಿಯಾದ ಜಾಗರೂಕತೆ ವಹಿಸಿ ಹೂವಿನಂತೆ ನೋಡಿಕೊಂಡು ಅವುಗಳ ಪಾಲನೆ-ಪೋಷಣೆ ಮಾಡಬೇಕು.
ಶತ್ರುಗಳೆನಿಸಿದವರಿಗೆ ಬಿಳಿ ಆನೆಯನ್ನು ಉಡುಗೊರೆಯಾಗಿ ಕೊಡುವ ಕ್ರಮವೂ ಹಿಂದಿನ ಕಾಲದಲ್ಲಿ ತ್ತಂತೆ, ಅಂಥ ಆನೆಯನ್ನು ಸಾಕುವುದರಿಂದ ಅವರ ಸಂಪತ್ತೆಲ್ಲ ಕರಗಿಹೋಗಲಿ ಎಂಬ ದೂ(ದು) ರಾಲೋಚನೆಯಿಂದ.
ಸರಿ, ಬಿಳಿಯಾನೆಗೂ ಅಮೆರಿಕಕ್ಕೂ ಏನು ಸಂಬಂಧವೆಂದರೆ, ಕ್ರಿ.ಶ.19ನೆಯ ಶತಮಾನದಲ್ಲಿ ಅಮೆರಿಕದಲ್ಲಿ ಪಿ.ಟಿ. ಬರ್ನಮ್ ಎಂಬುವನೊಬ್ಬನಿದ್ದ, ಪ್ರಸಿದ್ಧವಾದೊಂದು ಸರ್ಕಸ್ ಕಂಪನಿಯ ಮಾಲೀಕ. ತನ್ನ ಸರ್ಕಸ್ ಕಂಪನಿಗೆ ಒಂದು ಬಿಳಿ ಆನೆಯನ್ನು ಸೇರಿಸಿಕೊಂಡರೆ ಸರ್ಕಸ್‌ನ ಆಕರ್ಷಣೆ ಹೆಚ್ಚಬಹುದೆಂಬ ಐಡಿಯಾ ಬರ್ನಮ್ ಸಾಹೇಬನಿಗೆ ಬಂತು. ಭಾರತಕ್ಕೆ ಏಜೆಂಟರನ್ನು ಕಳಿಸಿ ಒಂದು ಬಿಳಿಯಾನೆ ತರಿಸುವ ವ್ಯವಸ್ಥೆಯನ್ನೂ ಆತ ಮಾಡಿದನು.
ತಿಂಗಳುಗಟ್ಟಲೆ ಹಡಗುಪ್ರಯಾಣ ಮಾಡಿ ಕೊನೆಗೂ ಕನೆಕ್ಟಿಕಟ್‌ನ ಬ್ರಿಡ್ಜ್‌ಪೋರ್ಟ್‌ಗೆ ಆನೆ ತಲುಪಿತು. ಗೂಡಿನಿಂದ ಹೊರಬಂದ ಆನೆಯನ್ನು ಬರ್ನಮ್ ನೋಡುತ್ತಾನೆ- ಅಚ್ಚ ಬಿಳಿಯಾಗಿ ರದೇ ಅಲ್ಲಲ್ಲಿ ಕಂದುಬಣ್ಣದ ಮಚ್ಚೆಗಳುಳ್ಳ ಚರ್ಮದ್ದಾಗಿತ್ತದು. ಬಿಳಿಆನೆ ಬಗ್ಗೆ ಆತ ಅದಾಗಲೇ ಸಾಕಷ್ಟು ಪ್ರಚಾರ ಮಾಡಿದ್ದ, ಜಾಹೀರಾತು ಹೊರಡಿಸಿದ್ದ. ಆದರೆ ಸರ್ಕಸ್ ವೀಕ್ಷಕರು ಈ ಬಿಳಿಯಲ್ಲದ ಬಿಳಿಯಾನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು.
ಬರ್ನಮ್‌ಗೆ ಆನೆಯನ್ನು ಏನು ಮಾಡಬೇಕೆಂದೇ ತೋಚದಾಯಿತು, ಅದರ ಮೇಲೆ ಸಿಕ್ಕಾಪಟ್ಟೆ ದುಡ್ಡು ಬೇರೆ ಖರ್ಚುಮಾಡಿದ್ದ. ಜನರಿಗೆ ಕಾಣಿಸದಂತೆ ಆ ಆನೆಯನ್ನು ಒಂದು ಲಾಯದಲ್ಲಿ ಕಟ್ಟಿ ಮರೆಯಲ್ಲಿರಿಸಬೇಕಾಯಿತು. ಕೊನೆಗೊಂದು ದಿನ ಆ ಲಾಯವು ಅಕಸ್ಮಾತ್ ಬೆಂಕಿಗಾಹುತಿಯಾದಾಗ ತಥಾಕಥಿತ ಬಿಳಿಯಾನೆ ಸತ್ತೇ ಹೋಯಿತು. White elephant ಎಂಬ ಲೋಕೋಕ್ತಿ ಮಾತ್ರ ಇಂಗ್ಲಿಷಲ್ಲಿ (ಮತ್ತು ಅನುವಾದಗೊಂಡು ಇತರ ಭಾಷೆಗಳಲ್ಲೂ) ಉಳಿದುಕೊಂಡಿತು.
ಇನ್ನುಮುಂದೆ ನೀವು ಈ ಲೋಕೋಕ್ತಿ/ನುಡಿಗಟ್ಟುಗಳನ್ನು ಬಳಸುವಾಗ ಮೂಲ ಅರ್ಥ ಮತ್ತು ಅದರ ಹಿಂದಿನ ಸ್ವಾರಸ್ಯಕರ ಕಥೆಗಳು ನಿಮಗೆ ಗೊತ್ತಿರುವುದರಿಂದ ನಿಮ್ಮ ಮಾತು/ಬರಹ ಹೆಚ್ಚು ಅರ್ಥಪೂರ್ಣ ಎನಿಸುತ್ತದೆ! ಹೊಸವರ್ಷದಲ್ಲಿ ನಿಮ್ಮ ತೂಕವೇನೋ ಒಂದರ್ಧ ಕೆ.ಜಿ. ಕಮ್ಮಿಯಾದರೂ ಮಾತಿನ ತೂಕ ಹೆಚ್ಚಲಿ, ಏನಂತೀರಿ?