ವಿಶ್ವರಂಗ
ಚಲನಚಿತ್ರದ ಸಹಪಾತ್ರಧಾರಿಯು ಹೀರೋವನ್ನು ಉದ್ದೇಶಿಸಿ “ಅಣ್ಣ, ಲಂಡನ್‌ನಲ್ಲಿ ಒಂದು ತಿಂಗಳು ಕನ್ಸಲ್ಟಿಂಗ್ ವರ್ಕ್ ಇದೆ. ಹೀಗೆ ಬಂದು ಹಾಗೆ ಹೋಗಬಹುದು. ಕೈತುಂಬಾ ಹಣ ಕೊಡುತ್ತಾರೆ. ಅದೂ ಪೌಂಡ್‌ನಲ್ಲಿ!" ಎನ್ನುತ್ತಾನೆ. ಆಗ ಹೀರೋ, “ನೀನೆಷ್ಟು ದುಡಿಯುತ್ತೀಯ?" ಎಂದು ಕೇಳುತ್ತಾನೆ. ಅದಕ್ಕೆ ಆತ, “2 ಲಕ್ಷ ಪೌಂಡ್" ಎನ್ನುತ್ತಾನೆ. ಇದನ್ನು ಕೇಳಿ ಹೀರೋ, “ತಿಂಗಳಿಗಾ?" ಎಂದು ಕೇಳುತ್ತಾನೆ. ಆಗ ಸಹಪಾತ್ರಧಾರಿ, “ವರ್ಷಕ್ಕೆ, ನಾನು ಸಾಫ್ಟ್ ವೇರ್, ಅದಕ್ಕೆ ಇಷ್ಟೊಂದು ದುಡ್ಡು ಸಿಗುತ್ತೆ" ಎನ್ನುತ್ತಾನೆ.
ಆಗ ಹೀರೋ, “ಹೌದಾ, ಹಾಗಾದರೆ ವಾರಕ್ಕೆ 2 ಲಕ್ಷ ಪೌಂಡ್ ಕೊಟ್ಟರೆ ನಾನು ಬರುತ್ತೇನೆ ಅಂತ ನಿನ್ನ ಬಾಸ್‌ಗೆ ಹೇಳು" ಎನ್ನುತ್ತಾನೆ. ಪಕ್ಕದಲ್ಲಿ ಕುಳಿತಿದ್ದ ಅವನ ಬ್ರಿಟಿಷ್ ಬಾಸ್ ಕೇಳಿಸಿಕೊಂಡು “ಓಕೆ" ಎನ್ನುತ್ತಾನೆ! ಹೀರೋ, ತಮಿಳುನಾಡಿನ ಊರೊಂದರಲ್ಲಿ ರೌಡಿ. ಕಿಡಿಗೇಡಿತನ, ಕುಡಿತ, ಸಿಗರೇಟು ಬಿಟ್ಟಿರಲಾರದ ವ್ಯಕ್ತಿ. ಆದರೆ ಅದನ್ನು ಸಹಜ, ಹೀಗೇ ಇರಬೇಕು ಎನ್ನುವಂತೆ ತೋರಿಸಲಾಗುತ್ತದೆ.
ವಾರ್ಷಿಕ 2 ಲಕ್ಷ ಪೌಂಡ್ ಆದಾಯವಿರುವ ಟೆಕ್ಕಿಯನ್ನು ಕೇವಲ ಎನ್ನುವಂತೆಯೂ, ರೌಡಿಯನ್ನು ‘ಬದುಕಿದರೆ ಹೀಗೆ ಬದುಕಬೇಕು’ ಎನ್ನುವಂತೆಯೂ ತೋರಿಸಲಾಗುತ್ತದೆ. ಲಂಡನ್ನಿನಲ್ಲಿರುವ ರೌಡಿ ಯೊಬ್ಬನನ್ನು ಮಟ್ಟಹಾಕಲು ಇವನನ್ನು ಕರೆಯಲೆಂದು ಚೆನ್ನೈಗೆ ಬಂದಿರುತ್ತಾರೆ!
ಇದೊಂದು ಘಟನೆ ಅಷ್ಟೇ. ಗಮನಿಸುತ್ತಾ ಹೋಗಿ, ಓದಿದವರೆಂದರೆ ಯಾವ ಪ್ರಯೋಜನಕ್ಕೂ ಬಾರದ ಪುಕ್ಕಲರು ಎಂಬಂತೆ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಅವರು ಇಲ್ಲದ್ದನ್ನು ತೋರಿಸಲು ಹೇಗೆ ಸಾಧ್ಯ? ಒಂದಷ್ಟು ಉತ್ಪ್ರೇಕ್ಷೆ ಮಾಡಬಹುದು, ಆದರೆ ಅದು ಪೂರ್ಣ ಸುಳ್ಳಂತೂ ಅಲ್ಲ. ಇವತ್ತಿನ ಚಿತ್ರಗಳಲ್ಲಿ ಖಳನಾಯಕನೇ ನಾಯಕ.
ಇದನ್ನೂ ಓದಿ: Rangaswamy Mookanahalli Column: ಇದು ಜಾಗತಿಕ ಯಜಮಾನಿಕೆ ಬದಲಾಗುವ ಸಮಯ !
ಆತನ ಕ್ಯಾರೆಕ್ಟರ್ ಅನ್ನು ಹೇಗೆ ಬಿಲ್ಡ್ ಮಾಡಿರುತ್ತಾರೆ ನೋಡಿ. ಅವನು ಒರಟ, ತಿಕ್ಕಲು ತಲೆಯವ, ಒಮ್ಮೆ ಡಿಸೈಡ್ ಮಾಡಿದರೆ ಯಾರೇ ಹೇಳಿದರೂ ನಿರ್ಧಾರ ಬದಲಿಸದವ ಇತ್ಯಾದಿ. ಅವನ ಈ ಕ್ಯಾರೆಕ್ಟರ್‌ಗಳು ಅವನನ್ನು ಆ ಮಟ್ಟದ ಪ್ರಸಿದ್ಧಿಗೆ ತರುತ್ತವೆ.
ಇದೆಲ್ಲವೂ ಸಿನಿಮಾ ಕಥೆಯಾಯಿತು. ಈಗ ನಿಜಜೀವನಕ್ಕೆ ಬರೋಣ. ನೀವು ಡಾಕ್ಟರ್, ಎಂಜಿನಿ ಯರ್, ಲಾಯರ್, ಆರ್ಕಿಟೆಕ್ಟ್, ಅಕೌಂಟೆಂಟ್, ಟೀಚರ್ ಯಾರೇ ಆಗಿರಿ, ನಿಮ್ಮಲ್ಲಿ ಆ ಛಾತಿ ಇದೆಯಾ? ಅಸಾಧ್ಯವಾದುದನ್ನು ಸಾಧಿಸಲು ಅಸಾಮಾನ್ಯ ದಾರಿಯನ್ನು ತುಳಿದಿದ್ದೀರಾ? ಅಸಾಮಾನ್ಯ ನಿರ್ಧಾರ ಕೈಗೊಂಡಿದ್ದೀರಾ? ನೀವೇ ಉತ್ತರ ಕೊಟ್ಟುಕೊಂಡು ನೋಡಿ.
ಕೆಲಸಕ್ಕೆ ಸೇರಿದ ಆರಂಭದಲ್ಲಿ ಇದ್ದ ಜೋಶ್ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ಮದುವೆ-ಮಕ್ಕಳು ಎಂಬ ಸಂಸಾರದಲ್ಲಿ ಮುಳುಗಿದ ಮೇಲಂತೂ ‘ದಿ ಎಂಡ್’. ಕನ್ನಡಕದ ಮೇಲಿನ ಕಸವನ್ನು ಕ್ಲೀನ್ ಮಾಡಲು ವಾರಗಟ್ಟಲೆ ಮುಂದೂಡುವ ಜನರನ್ನು ನಾನು ಕಂಡಿದ್ದೇನೆ. ಅವರಿಗೆ ಆಸಕ್ತಿಯೇ ಇರುವುದಿಲ್ಲ. ತಿಂಗಳು ಪೂರ್ತಿ ದುಡಿದು ಗಳಿಸಿದ ಹಣವು ತಮ್ಮ ಅಕೌಂಟ್‌ನಲ್ಲಿ ಕೆಲವೊಂದಿಷ್ಟು ಗಂಟೆಯೂ ನಿಲ್ಲದ ಮೇಲೆ ಆಸಕ್ತಿ ಹೇಗೆ ಬಂದೀತು? ‘ಪೇ ಚೆಕ್ -ಇಎಂಐ-ಮನೆಖರ್ಚು-ವಿದ್ಯಾಭ್ಯಾಸ- ಮೆಡಿಕಲ್ ಎಮರ್ಜೆನ್ಸಿ-ಪೇ ಚೆಕ್-ಇಎಂಐ’ ಸೈಕಲ್ ಮುಗಿಯುವುದೇ ಇಲ್ಲ.
ಈ ವರ್ತುಲದಿಂದ ಹೊರಬರಲಾಗದೆ ಸುಮ್ಮನೆ ದಿನದೂಡಲು ಮನುಷ್ಯ ಶುರುಮಾಡುತ್ತಾನೆ. ಅವನನ್ನು ಸಿಂಬಲೈಸ್ ಮಾಡಿ ಸಿನಿಮಾದಲ್ಲಿ ಹೀಯಾಳಿಸಿ ತೋರಿಸಲಾಗುತ್ತದೆ. ಹೆಚ್ಚು ಕಲಿಯದ ಪುಂಡರು, ಕಲಿತವರಿಗಿಂತ ಹೆಚ್ಚು ಗಳಿಸುವುದು ಸಮಾಜದ ಅವನತಿ ಮಾತ್ರವಲ್ಲ, ಕಲಿತವರು ಅಂದಮಾತ್ರಕ್ಕೆ ಅವರೆಲ್ಲರೂ ಬುದ್ಧಿವಂತರು ಎಂದೇನಲ್ಲ ಎಂಬುದು ಕೂಡ ಸಾಬೀತಾಗುತ್ತದೆ.
ಈ ಜಗತ್ತಿನಲ್ಲಿ ಜನರು ಪೂಜಿಸುವುದು ಶಕ್ತಿಶಾಲಿಯನ್ನು ಮಾತ್ರ. ಇದರರ್ಥ, ಇಲ್ಲಿ ಮುಖ್ಯ ವಾಗುವುದು ವ್ಯಕ್ತಿಯಲ್ಲ, ಶಕ್ತಿ. ಸೈಕಲ್ ಸ್ಟ್ಯಾಂಡ್ ಹಾಕಿ ತುಳಿದು, ಗಂಟೆಯ ನಂತರ, ‘ಅಯ್ಯೋ, ಎಲ್ಲಿಗೂ ತಲುಪಿಲ್ಲ’ ಎಂದು ಅತ್ತರೆ ಅದು ಯಾರ ತಪ್ಪು? ಬಾಲಿವುಡ್ ಹಾಡುಗಳ ಅಭಿಮಾನಿ ಥಾಮಸ್.
ಬಾರ್ಸಿಲೋನಾದಲ್ಲಿರುವ ‘ರಾಜ’ ಎಂಬ ಇಂಡಿಯನ್ ರೆಸ್ಟೋರೆಂಟ್‌ನಲ್ಲಿ ಒಬ್ಬನೇ ಆಹಾರ ಸೇವಿಸುತ್ತಾ, ಅಲ್ಲಿನ ಟಿವಿ ಪರದೆಯ ಮೇಲೆ ಬರುತ್ತಿದ್ದ ಬಾಲಿವುಡ್ ಹಾಡುಗಳನ್ನು ತದೇಕಚಿತ್ತ ದಿಂದ ನೋಡುತ್ತಿದ್ದವನು. ಅತಿ ಸಾಮಾನ್ಯ ಓಲಾ ಹೇಳುವುದರೊಂದಿಗೆ ಪರಿಚಿತನಾಗಿದ್ದ. ಮಜಾ ಎಂದರೆ, ಥಾಮಸ್‌ಗೆ ಚಲನಚಿತ್ರವನ್ನು ಪೂರ್ತಿ ನೋಡುವ ಆಸೆ-ಆಸಕ್ತಿ ಇರಲಿಲ್ಲ. ಅವನಿಗೆ ‘ರಿದಮಿಕ್ ಬೀಟ್’ಗಳಿಗೆ ಹೆಜ್ಜೆಹಾಕುವ ದೇಹಗಳನ್ನು ನೋಡುತ್ತಾ, ಮೈ ಕೈ ಕುಣಿಸುವುದರಲ್ಲಷ್ಟೇ ಖುಷಿ. ಹೀಗೆ ಕೇವಲ ಬಾಲಿವುಡ್ ಹಾಡುಗಳನ್ನು ನೋಡಲೆಂದು ಆತ ರೆಸ್ಟೋರೆಂಟ್‌ಗೆ ಬರುತ್ತಿದ್ದ.
ಅವನ ಪ್ರಕಾರ ಆ ರೆಸ್ಟೋರೆಂಟ್‌ನ ಊಟವು ಊಟವಲ್ಲ, ಅದೊಂದು ಬಾಂಬ್! ಖಾರವನ್ನೇ ತಿನ್ನದ ಅವನ ನಾಲಗೆಗೆ ರೆಸ್ಟೋರೆಂಟ್‌ನವರು ಎಷ್ಟೇ ಕಡಿಮೆ ಖಾರ ಹಾಕಿಕೊಟ್ಟರೂ ಅದು ಹೆಚ್ಚೆನಿಸುತ್ತಿತ್ತು. ಆದರೂ ಹಾಡುಗಳನ್ನು ನೋಡುತ್ತ ತನ್ನಿಚ್ಛೆಯಂತೆ ಒಂದು ಗಂಟೆಯನ್ನು ಕಳೆಯಲೆಂದೇ ಅಲ್ಲಿಗೆ ಬರುತ್ತಿದ್ದ.
ಹೀಗೆ ಮಾತಿಗೆ ಮಾತು ಹೆಚ್ಚಾಗಿ, ಗೆಳೆತನವೂ ಒಂದು ಹಂತಕ್ಕೆ ಬಂತು. ನಾನೊಮ್ಮೆ, “ಅಲ್ಲಾ ತೊಮಿ, ನಿನಗೆ ಹಾಡುಗಳನ್ನಷ್ಟೇ ನೋಡಲು ಇಚ್ಛೆಯಿದ್ದರೆ ನಾನು ಹಾಡುಗಳ ಡಿವಿಡಿ ಕೊಡಿಸ ಬಲ್ಲೆ. ಮನೆಯಲ್ಲಿ, ನಿನ್ನಿಷ್ಟದ ಸಮಯದಲ್ಲಿ ನೋಡಬಹುದಲ್ಲಾ?" ಎಂದಿದ್ದೆ. ಅವನಿಗೆ ನನ್ನ ಮಾತನ್ನು ನಂಬಲಾಗಲಿಲ್ಲ. ‘ಹೌದಾ? ಗ್ಯಾರಂಟಿನಾ?’ ಎನ್ನುವ ಮುಖಭಾವ ಮಾಡಿದ್ದ. ಅವನಿಗೆ ಲಾಸ್ ರಾಂಬ್ಲಾದಲ್ಲಿನ ಗಲ್ಲಿಗಳಲ್ಲಿ, ಚಿತ್ರದ ಬಿಡುಗಡೆಗೆ ಮುನ್ನವೇ ಡಿವಿಡಿ ತಯಾರಿಸಿ ಮಾರುವ ಪುಟ್ಟ ಪಾಕಿಸ್ತಾನಿ ಅಂಗಡಿಗಳನ್ನು ತೋರಿಸಿಕೊಟ್ಟಿದ್ದೆ.
ಪೈರಸಿ ಇಲ್ಲದ ಒರಿಜಿನಲ್ ಡಿವಿಡಿಗಳಲ್ಲಿ ಸ್ಪ್ಯಾನಿಷ್ ಹೆಡಿಂಗ್ ಕೂಡ ಇರುತ್ತಿತ್ತು. ಹೀಗಾಗಿ ಅವನು ವರ್ಷದಲ್ಲಿ ಭಾರತೀಯ ಚಿತ್ರಗಳ ಫ್ಯಾನ್ ಆಗಿಬಿಟ್ಟಿದ್ದ. ಕೆಲವು ಚಿತ್ರಗಳನ್ನು ನೋಡಿದ ನಂತರ “ಭಾರತವೆಂದರೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಡಕಲು ಮಕ್ಕಳು ಮತ್ತು ಬಡತನ ಅಂದುಕೊಂಡಿದ್ದೆ, ಆದರೆ ಭಾರತ ಬಹಳ ಮುಂದುವರಿದಿದೆ" ಎನ್ನುತ್ತಿದ್ದ. ಮಜಾ ಇರುವುದು ಇಲ್ಲೇ, ನೋಡಿ ದೃಶ್ಯಮಾಧ್ಯಮಕ್ಕಿರುವ ತಾಕತ್ತು ಅದು.
ಒಂದು ದೇಶ, ಭಾಷೆಯ ಬಗ್ಗೆ ಇರುವ ಭಾವನೆಯನ್ನು ಬದಲಾಯಿಸುವ ತಾಕತ್ತು ಅದಕ್ಕಿದೆ. ಇದನ್ನ ಸರಿದಾರಿಯಲ್ಲಿ ಬಳಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗೆ ಭಾರತೀಯ ಚಿತ್ರಗಳನ್ನ ಸ್ಪ್ಯಾನಿಷ್ ಸಬ್‌ಟೈಟ್ಲ್‌ಗಳಲ್ಲಿ ನೋಡಿದ ತೊಮಿ, ಒಂದಲ್ಲ ಎರಡು ಬಾರಿ ಭಾರತಕ್ಕೆ ಭೇಟಿ ಕೊಟ್ಟ. ನಾವೆಲ್ಲಾ ಇಲ್ಲಿನ ವ್ಯವಸ್ಥೆಯನ್ನು ಹಳಿದುಕೊಂಡು ತಿರುಗಾಡುತ್ತಿದ್ದರೆ, ಅವನ ಕಣ್ಣಿಗೆ ಇದು ಸ್ವರ್ಗವಾಗಿ ಕಂಡಿತ್ತು.
ನಮ್ಮ ಚಿತ್ರಗಳನ್ನ ಜಗತ್ತಿನ ಬಹಳ ದೇಶಗಳಲ್ಲಿ ಆಸಕ್ತಿಯಿಂದ ನೋಡುತ್ತಾರೆ. ಪೂರ್ಣ ಅರಬ್ ದೇಶಗಳವರು ನಮ್ಮ ಸಿನಿಮಾವನ್ನ ಇನ್ನಿಲ್ಲದೆ ಪ್ರೀತಿಸುತ್ತಾರೆ. ರುಮೇನಿಯಾ, ಟರ್ಕಿ, ರಷ್ಯಾ, ಇಂಗ್ಲೆಂಡ್, ಸ್ಕಾಟ್ಲೆಂಡ್, ಮಲೇಷ್ಯಾ, ಸಿಂಗಾಪುರ ಹೀಗೆ ದೇಶಗಳ ಪಟ್ಟಿ ದೊಡ್ಡದು. ಇಲ್ಲಿ ಗಮನಿಸ ಬೇಕಾದದ್ದೆಂದರೆ, ಈ ಎಲ್ಲಾ ದೇಶಗಳಲ್ಲಿರುವ ಭಾರತೀಯರಷ್ಟೇ ಈ ಚಿತ್ರಗಳನ್ನ ನೋಡುತ್ತಾರೆ ಎಂದಲ್ಲ, ಅದು ಜಗತ್ತಿನ ಯಾವ ದೇಶದಲ್ಲಿದ್ದರೂ ಮಾಡುವ ಸಾಮಾನ್ಯ ಕೆಲಸ.
ಈ ದೇಶಗಳ ಶ್ರೀಸಾಮಾನ್ಯರೂ ನಮ್ಮ ಚಿತ್ರವನ್ನ ಇಷ್ಟಪಟ್ಟು ನೋಡುತ್ತಾರೆ. ಜಪಾನ್‌ನಲ್ಲಿ ರಜನಿ ಕಾಂತ್ ಬಹಳ ಪ್ರಸಿದ್ಧರು. ‘ಇದೇಕೆ?’ ಅಂತ ಹುಡುಕಿದಾಗ ತಿಳಿದದ್ದು, ಜಪಾನಿಯರ ಸಂಸ್ಕಾರದಲ್ಲಿ ತ್ಯಾಗಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ರಜನಿಕಾಂತ್‌ರ ಚಿತ್ರಗಳಲ್ಲಿ ಕಾಣಬರುವ ‘ತ್ಯಾಗ ಮಾಡುವ ಗುಣ’ ಜಪಾನಿಯರ ಮನ ಗೆದ್ದಿದೆ.
ಒಟ್ಟಿನಲ್ಲಿ, ಒಂದೊಂದು ದೇಶದಲ್ಲಿ ಒಂದೊಂದು ಕಾರಣಕ್ಕೆ ಭಾರತೀಯ ಚಿತ್ರಗಳು ಸದ್ದು ಮಾಡುತ್ತಿವೆ. ದಶಕಗಳಿಂದ ಭಾರತೀಯ ಸಿನಿಮಾ ಮತ್ತು ಆಹಾರ ಎರಡೂ, ಜಗತ್ತಿನ ಬಹುತೇಕ ದೇಶಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿವೆ. ಎಷ್ಟೋ ಜನರಿಗೆ ಭಾರತೀಯ ಸಂಸ್ಕೃತಿಯ ಪರಿಚಯವಾಗುವುದೇ ಈ ಎರಡು ಕಾರಣಗಳಿಂದ. ಹೀಗಾಗಿ, ಈ ಎರಡೂ ಕ್ಷೇತ್ರದಲ್ಲಿ ನಿಜವಾದ ಭಾರತೀಯತೆಯನ್ನು ತೋರಿಸುವ ಕೆಲಸವಾಗಬೇಕಿದೆ.
ಕೇವಲ ಪಂಜಾಬಿ ತಿನಿಸುಗಳನ್ನು ಉಣಬಡಿಸಿ ‘ಇದು ಭಾರತೀಯ ಆಹಾರ’ ಎಂದರೆ, ಕೇವಲ ಉತ್ತರ ಭಾರತೀಯ ಸಿನಿಮಾ ತೋರಿಸಿ ‘ಇದನ್ನು ಭಾರತೀಯ ಸಿನಿಮಾ’ ಎಂದರೆ ಒಪ್ಪಿಕೊಳ್ಳಲಾದೀತೇ ಇಲ್ಲಿಯವರೆಗೆ ಸದಾ ಬಹುದೊಡ್ಡ ತಪ್ಪನ್ನು ಮಾಡಿಕೊಂಡು, ಅದನ್ನು ಗಣನೆಗೂ ತೆಗೆದುಕೊಳ್ಳದೆ ನಡೆದು ಬಂದುಬಿಟ್ಟಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳುವ ಸೂಕ್ಷ್ಮಮನಸ್ಸು ನಮ್ಮದಾಗಬೇಕಿದೆ.
7 ಕೋಟಿ ಜನರಾಡುವ ಭಾಷೆಯ ಬಗ್ಗೆ ಕೇವಲವಾಗಿ ಮಾತನಾಡುವ ಮುನ್ನ, ಹಿಂದಿಯನ್ನು ‘ರಾಷ್ಟ್ರಭಾಷೆ’ ಎನ್ನುವ ಮುನ್ನ ಯೋಚಿಸುವಂತಾಗಲಿ. ‘ನಾವೆಲ್ಲರೂ ಭಾರತೀಯರು, ನಾವೆಲ್ಲಾ ಒಂದೇ’ ಎನ್ನುವ ಭಾವನೆ ಎಲ್ಲರಲ್ಲೂ ಬರಬೇಕು. ಅದು ಒಮ್ಮುಖವಾದಾಗ ಮಾತ್ರ ಘರ್ಷಣೆಗಳಿಗೆ ಕಾರಣವಾಗುತ್ತದೆ.
ಸುಖವೇ ಇರಲಿ, ದುಃಖವೇ ಇರಲಿ ಈ ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ. ಹೀಗಾಗಿ ದಕ್ಷಿಣ-ಉತ್ತರ ಎನ್ನುವ ಜಟಾಪಟಿಗೆ ಬೀಳದೆ ‘ನಾವು ಒಂದು’ ಎಂದು ಹೊರಟರೆ, ಜಾಗತಿಕವಾಗಿ ನಮ್ಮ ಆಹಾರ-ಸಿನಿಮಾ ಎರಡೂ ರೂಲ್ ಮಾಡಬಹುದು. ಜಗತ್ತಿನ ಯಾವುದೇ ದೇಶವಿರಲಿ, ಯಾವ ಭಾಷೆಯೇ ಇರಲಿ, ಅಲ್ಲಿನ ಮೂಲಭೂತ ಮನುಷ್ಯಗುಣಗಳು ಒಂದೇ!
ಮೇಲ್ನೋಟಕ್ಕೆ ನಾವೆಲ್ಲಾ ಬಹಳಷ್ಟು ಭಿನ್ನರೆನಿಸಿದರೂ, ಮೂಲದಲ್ಲಿ ಒಂದೇ! ಇನ್ನಷ್ಟು ಸರಳ ವಾಗಿ ಹೇಳಬೇಕೆಂದರೆ, ಇಂದು ಜಗತ್ತು ಪೂರ್ತಿ ಆಶಾಭಾವದೆಡೆಗೆ ಕಣ್ಣುಬಿಟ್ಟು ನೋಡುತ್ತಿದೆ. ಬದುಕಿನ ಎಲ್ಲಾ ಮಜಲುಗಳಲ್ಲಿ ಒಬ್ಬ ನಾಯಕನ ಬರುವಿಕೆಯನ್ನು ಕಾಯುತ್ತಿದೆ. ಮುಕ್ಕಾಲು ಪಾಲು ದೇಶಗಳ ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ಸಣ್ಣ ಹುಲ್ಲುಕಡ್ಡಿ ಕೂಡ ಅವರ ಪಾಲಿಗೆ ಆಶಾದೀಪದಂತೆ ಕಾಣುತ್ತದೆ.
ಜಗತ್ತು ಇಂಥ ವಿಷಮ ಪರಿಸ್ಥಿತಿಯಲ್ಲಿರುವಾಗ ನಮ್ಮಲ್ಲಿ ಕಚ್ಚಾಡಿಕೊಂಡು ಇಬ್ಭಾಗ ವಾಗುವು ದಕ್ಕಿಂತ, ಜಗತ್ತು ನೀಡುತ್ತಿರುವ ಹೊಸ ಅವಕಾಶಗಳ ಕಡೆಗೆ ಮುಖಮಾಡಿ ನಿಲ್ಲಬೇಕಾಗಿದೆ. ವತ್ತಿಗೆ ಭಾರತದಲ್ಲಿ ಸಮಸ್ಯೆಗಳಿಗೆ ಕೊರತೆಯೇನಿಲ್ಲ, ಹೊಸದಾಗಿ ಉತ್ತರ-ದಕ್ಷಿಣ ಎನ್ನುವ ಸಮಸ್ಯೆ ಖಂಡಿತ ನಮಗೆ ಬೇಕಿಲ್ಲ. ನಾವು ಒಂದು ಭಾರತವಾಗಿ ಮಾತ್ರ ಜಗತ್ತನ್ನು ಗೆಲ್ಲಬಲ್ಲೆವು.