ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hari Paraak Column: ಟೈಟ್‌ ಫಿಟ್ಟಿಂಗ್‌ ಇರೋ ಬಟ್ಟೆ-ಹಾರ್ಡ್‌ ವೇರ್

ಕಳೆದ ವರ್ಷ ನಟ ಶರತ್ ಬಾಬು, ಜಿಂಬಾಬ್ವೆ ಕ್ರಿಕೆಟ್ ಆಟಗಾರ ಹೀತ್ ಸ್ಟ್ರೀಕ್ ಕೂಡಾ ಸಾಯುವ 2 ವಾರ ಮುಂಚೆಯೇ ಸತ್ತು ಹೋಗಿದ್ದರು. ನಮ್ಮ ಕನ್ನಡದ ನಟ ಅಂಬರೀಷ್, ದೊಡ್ಡಣ್ಣ ಅವರನ್ನು ಈ ಸುಡುಗಾಡು ಟ್ರೆಂಡ್ ಹಲವಾರು ಬಾರಿ ಕಾಡಿದ್ದಿದೆ. ಆದರೆ ಹಾಗಂತ ಇದನ್ನು ನ್ಯೂಸ್ ಚಾನೆಲ್‌ಗಳು ಮಾಡುತ್ತಿವೆ ಎಂದುಕೊಳ್ಳಬೇಡಿ. ಇದು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವವರು ಮಾಡುವ ಕೆಲಸ. ಮತ್ತು ಇದಕ್ಕೆ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಗಳೂ ಹೊರತಾಗಿಲ್ಲ ಅನ್ನೋದು ವಿಷಾದ

Hari Paraak Column: ಟೈಟ್‌ ಫಿಟ್ಟಿಂಗ್‌ ಇರೋ ಬಟ್ಟೆ-ಹಾರ್ಡ್‌ ವೇರ್

-

ಹರಿ ಪರಾಕ್‌
ಹರಿ ಪರಾಕ್‌ Jul 26, 2026 8:11 AM

ತುಂಟರಗಾಳಿ

ಸಿನಿಗನ್ನಡ

ಸಾವು ಅಂದ್ರೆ ಅದು ಜೀವನದ ಅಂತ್ಯ ಮತ್ತು ತುಂಬಾ ಗಂಭೀರವಾದ ವಿಷಯ. ಆದರೆ ಕೆಲವರಿಗೆ ಮಾತ್ರ ಅದು, ಇದು ನನಗೇ ಮೊದಲು ಗೊತ್ತಾಯಿತು ಅಂತ ಹೇಳಿಕೊಳ್ಳುವ ನ್ಯೂಸ್ ಐಟಂ. ಇದು ಸೆಲೆಬ್ರಿಟಿಗಳನ್ನಂತೂ ಇನ್ನಿಲ್ಲದಂತೆ ಕಾಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಹಲ ವಾರು ಸೆಲೆಬ್ರಿಟಿ ಗಳು ಅದರ ಲ್ಲೂ ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು ಸಾಯೋಕೆ ಮುಂಚೆಯೇ ಅದೆಷ್ಟು ಬಾರಿ ಸತ್ತಿರುತ್ತಾರೋ ಗೊತ್ತಿಲ್ಲ.

ಕಳೆದ ವರ್ಷ ನಟ ಶರತ್ ಬಾಬು, ಜಿಂಬಾಬ್ವೆ ಕ್ರಿಕೆಟ್ ಆಟಗಾರ ಹೀತ್ ಸ್ಟ್ರೀಕ್ ಕೂಡಾ ಸಾಯುವ 2 ವಾರ ಮುಂಚೆಯೇ ಸತ್ತು ಹೋಗಿದ್ದರು. ನಮ್ಮ ಕನ್ನಡದ ನಟ ಅಂಬರೀಷ್, ದೊಡ್ಡಣ್ಣ ಅವರನ್ನು ಈ ಸುಡುಗಾಡು ಟ್ರೆಂಡ್ ಹಲವಾರು ಬಾರಿ ಕಾಡಿದ್ದಿದೆ. ಆದರೆ ಹಾಗಂತ ಇದನ್ನು ನ್ಯೂಸ್ ಚಾನೆಲ್‌ ಗಳು ಮಾಡುತ್ತಿವೆ ಎಂದುಕೊಳ್ಳಬೇಡಿ.

ಇದು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವವರು ಮಾಡುವ ಕೆಲಸ. ಮತ್ತು ಇದಕ್ಕೆ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಗಳೂ ಹೊರತಾಗಿಲ್ಲ ಅನ್ನೋದು ವಿಷಾದ. ಎಲ್ಲರಿಗೂ ನಾವೇ ಮೊದಲು ಸಾವಿನ ಸುದ್ದಿಕೊಟ್ಟೆವು ಎನ್ನುವ ಸಂಭ್ರಮದಲ್ಲಿ ಆರ್‌ಐಪಿ ಅಂತ ಪೋಸ್ಟ್ ಹಾಕಿ ನಿಟ್ಟುಸಿರುಬಿಡುವ ಈ ಮಹಾನುಭಾವರು ಒಮ್ಮೆ ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ ಹೃದಯಾ ಘಾತದಿಂದ ನಿಧನ ಅಂತ ಪೋಸ್ಟ್‌ಗಳನ್ನು ಹಾಕಿಕೊಂಡಿದ್ದರು.

ಹೃದಯಾಘಾತ ಕಾಮನ್ ಆಗಿರುವ ಈ ಸಂದರ್ಭದಲ್ಲಿ ಎಷ್ಟೋ ಜನ ಅದನ್ನು ನಂಬಿಯೂ ಬಿಟ್ಟಿದ್ದರು. ಆದರೆ ಅಸಲಿಗೆ ಸತ್ತಿದ್ದು ಚಿಕ್ಕಪುಟ್ಟ ಪಾತ್ರ ಮಾಡುತ್ತಿದ್ದ ರಮ್ಯಾ ಎಂಬ ಇನ್ನೊಬ್ಬ ನಟಿ. ಇದು ಇನ್ನೊಂಥರ ಚೀಪ್ ಗಿಮಿಕ್. ಒಟ್ಟಿನಲ್ಲಿ ಇನ್ನೊಬ್ಬರ ಸಾವು ಕೂಡಾ ನಮ್ಮ ಸಾವಿನಷ್ಟೇ ಗಂಭೀರ ವಿಷಯ ಅನ್ನೋದು ಅರಿವಾಗುವರೆಗೂ ಇಂಥ ಅವಘಡಗಳು ನಡೆಯುತ್ತಲೇ ಇರುತ್ತವೆ ಅನ್ನೋದು ವಿಷಾದಕರ.

ಇದನ್ನೂ ಓದಿ: Hari Paraak Column: ʼನೀಟ್‌ʼ ದಿಸ್‌ ಪಾಯಿಂಟ್‌ ಯುವರ್‌ ಆನರ್‌

ಲೂಸ್‌ ಟಾಕ್-ನರೇಂದ್ರ ಮೋದಿ

ಏನ್ ಮೋದಿಜಿ, ಜಿರಳೆ ಪಾರ್ಟಿಗಳು ನಿಮ್ಮ ತಲೆ ಕೆಡಿಸ್ತಾ ಇವೆಯಲ್ಲ?

- ಅವು ಜಿರಳೆ ಪಾರ್ಟಿಗಳಲ್ಲ ಕಣ್ರೀ, ತರಲೆ ಪಾರ್ಟಿಗಳು

ಅಂತೂ ಅವರು ನಿಮ್ಮ ನಿದ್ದೆಗೆಡಿಸಿದ್ದಾರೆ ಅನ್ನಿ?

- ನಾನು ಮೊದಲೇ 18 ಗಂಟೆ ಕೆಲಸ ಮಾಡಿ ಬರೀ 6 ಗಂಟೆ ನಿದ್ದೆ ಮಾಡ್ತಾ ಇದ್ದೆ. ಈಗ ಇವರು ಅದಕ್ಕೂ ಕಲ್ಲು ಹಾಕಿದ್ರು.

ಹಂಗಾದ್ರೆ ಒಪ್ಕೊತೀರ ಅಲ್ವಾ ನೀವು ಹೆದರಿಕೊಂಡಿದ್ದೀರ ಅಂತ?

- ಅಯ್ಯೋ, ನಾನ್ ಹೇಳಿದ್ದು ಬೇರೆ ಥರ, ಕಲ್ಲು ಹಾಕೋದು ಅಂದ್ರೆ ನಾವು ಮಾಡೋ ಒಳ್ಳೆ ಕೆಲಸಕ್ಕೆ ಶಿಲಾನ್ಯಾಸ ಮಾಡೋದು ಅಂತ ಅರ್ಥ.

ಆದ್ರೂ ನೀವು ಪೊಲೀಸ್‌ನೋರ ಮೂಲಕ ದೌರ್ಜನ್ಯ ಮಾಡಿಸಿದ್ದು ಸರಿನಾ?

- ಆಗ್ಲೇ ಹೇಳಿದ್ನಲ್ಲ, ಅವರು ತರಲೆ ವಿದ್ಯಾರ್ಥಿಗಳು ಕಣ್ರೀ. ಕ್ಲಾಸಲ್ಲಿ ತರ್ಲೆ ಮಾಡಿದ್ರು ಅಂತ ಟೀಚರ್ಸ್ ಅವರನ್ನ ಒದ್ದು ಹೊರಗೆ ಹಾಕಿದ್ರು. ನಮ್ ಪೊಲೀಸ್‌ನೋರು ಅವರನ್ನ ಒದ್ದು ಒಳಗೆ ಹಾಕಿದ್ರು ಅಷ್ಟೇ.

ಹೋಗ್ಲಿ, ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಕೊಟ್ಟಿದ್ದಾರೆ.

ನೀವ್ ಯಾವಾಗ ಕೊಡೋದು?

- ಪ್ರಧಾನ್ ರಾಜೀನಾಮೆ ಕೊಟ್ಟಿರಬಹುದು. ಆದ್ರೆ ಪ್ರಧಾನಿ ಮಾತ್ರ ಕೊಡಲ್ಲ ಅಷ್ಟೇ.

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಬಲ್ವಿಂದರ್ ಸಿಂಗ್ ಖೇಮು ಯಾವತ್ತೂ ಫೈವ್ ಸ್ಟಾರ್ ಹೊಟೇಲ್‌ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಠಿತ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಬಲ್ವಿಂದರ್ ಸಿಂಗ್ ಖೇಮು, ತನ್ನ ಹೆಂಡತಿ ಊರಿಗೆ ಹೋದ ದಿನ ಆ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಉಳಿದುಕೊಳ್ಳೋದು ಅಂತ ತೀರ್ಮಾನ ಮಾಡಿದ. ಅವತ್ತು ಬಳಗ್ಗೆ ಹೋಟೆಲಿಗೆ ಹೋಗಿ ಚೆಕ್ ಇನ್ ಆಗಿ, ರೂಮ್‌ನಲ್ಲಿ ಸ್ನಾನ, ಊಟ ಮಾಡಿ ಕಿಟಕಿಯಿಂದ ಹೊರಗೆ ನೋಡಿದವನಿಗೆ ಸ್ವಿಮ್ಮಿಂಗ್ ಪೂಲ್ ಕಾಣಿಸಿತು.

ಸರಿ ಅಂತ ಅಲ್ಲಿಂದ ಸೀದಾ ಪೂಲ್ ಬಳಿಗೆ ಬಂದು ಅಲ್ಲಿ ಪೂಲ್ ಪಕ್ಕದಲ್ಲಿ ಹಾಕಿದ್ದ ಉದ್ದನೆಯ ಬೆಂಚ್ ಮೇಲೆ ಮೇಲೆ ಮಲಗಿಕೊಂಡ. ಆಗ ಅಲ್ಲಿಗೆ ಬಂದ ಒಬ್ಬ -ರಿನರ್ ಇವನನ್ನು ನೋಡಿ, ಹಾಯ, ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ. ಇಂಗ್ಲಿಷ್ ಸರಿಯಾಗಿ ಬರದ ಬಲ್ವಿಂದರ್ ಸಿಂಗ್ ಖೇಮು, ನೋ ಐ ಆಮ್ ಬಲ್ವಿಂದರ್ ಸಿಂಗ್’ ಅಂದ. ಅದಕ್ಕೆ ಆ ವಿದೇಶಿಗ ಫನ್ನಿ ಗೈ ಅಂತ ನಕ್ಕು ಹೊರಟ. ಆದ್ರೆ ಬಲ್ವಿಂದರ್ ಸಿಂಗ್ ಖೇಮುಗೆ ಅವನು ಯಾಕೆ ನಕ್ಕ ಅನ್ನೋದು ಅರ್ಥ ಆಗಲಿಲ್ಲ. ಅದೇ ಗೊಂದಲದಲ್ಲಿ ಅಲ್ಲಿಂದ ಎದ್ದು ಹೊರಟ, ಅಲ್ಲಿ ಸ್ವಲ್ಪ ಮುಂದೆ ಇನ್ನೊಬ್ಬ ಫಾರಿನರ್ ಅವನಂತೆಯೇ ಪೂಲ್ ಪಕ್ಕದ ಬೆಂಚ್‌ನಲ್ಲಿ ಮಲಗಿದ್ದ. ಅವನನ್ನು ನೋಡಿದ ಖೇಮು ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ. ಅದಕ್ಕೆ ಆತ ಎಸ್’ ಅಂದ. ಇದ್ದಕ್ಕಿದ್ದಂತೆ ರಾಂಗ್ ಆದ ಖೇಮು ಹೇಳಿದ ಅಯ್ಯೋ ಮಂಗ್ ನನ್ಮಗನೇ, ನೀನ್ ಇಲ್ ಮಲ್ಕೊಂಡಿದ್ದೀಯಾ, ಅಲ್ಲಿ ನಿನ್ ಹುಡುಕ್ಕೊಂಡ್ ಯಾರೋ ಬಂದಿದ್ರು’.

ಲೈನ್‌ ಮ್ಯಾನ್

‘ಸೋಡಾ ಕುಡಿಯೋಕೆ ಕಂಪನಿ ಕೊಡೋ ಗೆಳೆಯ’ ‌

- ‘ಸೋಡಾ ಬಡ್ಡಿ’

ಕೆಲವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ರಬ್ಬರ್ ಟ್ಯೂಬ್‌ನಲ್ಲಿ ಕುಳಿತು ಕುಡಿಯೋದು ಯಾಕೆ?

- ತೇಲುತ್ತಾ ತೇಲೋಕೆ

ಇಬ್ಬನಿ ಬಿದ್ದ ಕಾರಣಕ್ಕೆ ಕ್ರಿಕೆಟ್ ಮ್ಯಾಚ್ ಸೋತ ಕ್ಯಾಪ್ಟನ್ ಏನು ಹೇಳ್ತಾನೆ?

- We couldn't win due to dew

ಸಣ್ಣ ಮಕ್ಕಳೂ ಕೋಡಿಂಗ್ ಕಲಿಯುತ್ತಿರೋ ಈ ಸಮಯದಲ್ಲಿ ಅತಿಬುದ್ಧಿವಂತರಂತೆ ಮಾತಾಡೋರನ್ನ ಏನಂತ ಬಯ್ತಾರೆ ?

- ನಿಂಗೇನ್ ಎರಡ್ ಕೋಡಿದೆಯಾ?

ಭಾರತದಲ್ಲೇ ನಾವೇ ತಯಾರಿಸಿದ ಆಪ್‌ಗಳನ್ನು ಏನೆನ್ನಬಹುದು?

- ಅಪ್ ನೇ ಆಪ್

ಬಹಳ ವರ್ಷಗಳವರೆಗೆ ರಸ್ತೆಯಲ್ಲಿ ಓಡಾಡಿ ಸವೆದು ಹೋಗಿರುವ ಕಾರಿನ ಟೈರ್

- ಟೈರ್ಡ್

ಖಾರ ಸಂಸಾರ

‘ರೀ, ಸೊಳ್ಳೆ ಕಚ್ತಾ ಇದೆ, ಆವಾಗಿಂದ ಇಲ್ಲೇ ಹಾರಾಡ್ತಿದೆ, ಸ್ವಲ್ಪ ನೋಡ್ರಿ ಎದ್ದು’ ‘ಯಾಕೆ? ನಾನೇನ್ ಎಂದೂ ಸೊಳ್ಳೆ ನೋಡಿಲ್ವಾ?’ ಹೆಂಗಸರು ವಟ ವಟ ಅಂತ ಮಾತಾಡೋ ಜಾಗ

- ವಠಾರ

ಹಾಕಿಕೊಳ್ಳಲು ಕಷ್ಟ ಆಗುವ ಟೈಟ್ ಫಿಟ್ಟಿಂಗ್ ಇರೋ ಬಟ್ಟೆ

- ‘ಹಾರ್ಡ್‌ವೇರ್’

ಒಬ್ಬ ಶಿಲ್ಪಿಗೆ ಚಾಲೆಂಜ್ ಮಾಡೋದ್ ಹೆಂಗೆ?

- ನಿನ್ ಕೈಲಿ ಏನ್ ಕೆತ್ಕೊಳ್ಳೋಕಾಗುತ್ತೋ.. ಕೆತ್ಕೋ..!