ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hari Paraak Column: ʼನೀಟ್‌ʼ ದಿಸ್‌ ಪಾಯಿಂಟ್‌ ಯುವರ್‌ ಆನರ್‌

ಯಾಕಂದ್ರೆ ಹಂಸಲೇಖ ಅನ್ನೋದು ಕನ್ನಡ ಚಿತ್ರರಂಗಕ್ಕೆ ದಶಕಗಳವರೆಗೆ ಬೆನ್ನೆಲುಬಾಗಿ ನಿಂತ ಶಕ್ತಿಯ ಹೆಸರು. ಅಲ್ಲದೆ ಸಾಹಿತ್ಯ, ಸಂಗೀತ ಎರಡನ್ನೂ ಅಷ್ಟೊಂದು ಚಿತ್ರಗಳಿಗೆ ಒದಗಿಸಿದ ವ್ಯಕ್ತಿ ಕನ್ನಡ ನಾಡಿನಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಬ್ಯಾಟರಿ ಹಾಕಿಕೊಂಡು ಹುಡುಕಿದರೂ ಸಿಕ್ಕೋದಿಲ್ಲ. ಹಾಗಾಗಿ ಈಗ ಸರ್ಕಾರಗಳು ಅವರ ಪ್ರತಿಭೆ ಮತ್ತು ಕೊಡುಗೆಯ ಮೇಲೆ ಬ್ಯಾಟರಿ ಬೆಳಕು ಚೆಲ್ಲಿ ಅವರಿಗೆ ಸೂಕ್ತ ಪ್ರಶಸ್ತಿ ನೀಡುವುದು ಅತಿ ಅವಶ್ಯಕ

ʼನೀಟ್‌ʼ ದಿಸ್‌ ಪಾಯಿಂಟ್‌ ಯುವರ್‌ ಆನರ್‌

-

ಹರಿ ಪರಾಕ್‌
ಹರಿ ಪರಾಕ್‌ Jul 19, 2026 10:43 AM

ತುಂಟರಗಾಳಿ

ಸಿನಿಗನ್ನಡ

ನಟ ನೆನಪಿರಲಿ ಪ್ರೇಮ್ ಎಲ್ಲರೂ ನೆನಪಿಡುವಂಥ ಕೆಲಸವನ್ನು ಮಾಡಲಿಕ್ಕೆ ಹೊರಟಿದ್ದಾರೆ. ಇನ್ ಫ್ಯಾಕ್ಟ್ ತಾವು ನಡೆದು ಬಂದ ಹಾದಿಯನ್ನು ಮರೆಯದೇ ನೆನಪಿಟ್ಟಿದ್ದಾರೆ ಅವರು ಅನ್ನೋದಕ್ಕೆ ಅವರ ಈ ಕೆಲಸವೇ ಸಾಕ್ಷಿ. ಹಂಸಲೇಖ ಅವರ ಸಂಗೀತದ ನೆನಪಿರಲಿ ಚಿತ್ರದ ಮೂಲಕವೇ ಹೆಚ್ಚು ಫೇಮಸ್ ಆದ ಪ್ರೇಮ್ ಈಗ ಹಂಸಲೇಖ ಅವರ ಬಗೆಗಿನ ತಮ್ಮ ಪ್ರೇಮಕ್ಕೆ ಹೊಸ ಆಯಾಮ ಕೊಡುತ್ತಿದ್ದಾರೆ. ಹಂಸಲೇಖ ಅವರಿಗೆ ಪದ್ಮಶ್ರೀ, ಜ್ಞಾನಪೀಠದಂತಹ ಅವಾರ್ಡ್ ಬರಬೇಕು ಅಂತ ಅಭಿಯಾನ ಶುರು ಮಾಡಿದ್ದಾರೆ ಪ್ರೇಮ.

ನಮ್ಮ ಚಿತ್ರರಂಗದ ನಾಯಕ ನಟರೆಲ್ಲ ಕೇವಲ ತಮ್ಮ ಪಾಡಿಗೆ ದುಡ್ಡು, ಹೆಸರು ಮಾಡುವಲ್ಲಿ ಬ್ಯುಸಿ ಆಗಿರುವಾಗ ಪ್ರೇಮ್ ಅವರು ಋಣ ಸಂದಾಯದ ಕೆಲಸ ಶುರು ಮಾಡಿ ಎಲ್ಲರಿಗೂ ಮಾದರಿ ಎನಿಸಿಕೊಂಡಿzರೆ. ಚಿತ್ರರಂಗದಲ್ಲಿ ತಾವೇ ಸ್ವತಃ ಹೀರೋ ಆಗಿದ್ದರೂ, ಹೀರೋಗಳಿಗೇನು ಸುಲಭವಾಗಿ ಹೆಸರು, ಲೈಮ್ ಲೈಟ್ ಸಿಕ್ಕಿಬಿಡುತ್ತದೆ, ಆದರೆ ಬರಹಗಾರರಿಗೆ ಇಲ್ಲಿ ಮರ್ಯಾದೆ ಸಿಗಬೇಕು ಅನ್ನುವ ಅವರು ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ ಹಂಸಲೇಖ ಅವರಿಗೆ ನ್ಯಾಯ ಸಲ್ಲಿಸುವ ಕೆಲಸ ಮಾಡಲು ಹೊರಟಿದ್ದಾರೆ. ಪ್ರೇಮ್ ಅವರು ಹೇಳುತ್ತಿರುವ ಯಾವ ಮಾತಿನಲ್ಲೂ ಅತಿಶಯೋಕ್ತಿ ಇಲ್ಲ ಬಿಡಿ.

ಯಾಕಂದ್ರೆ ಹಂಸಲೇಖ ಅನ್ನೋದು ಕನ್ನಡ ಚಿತ್ರರಂಗಕ್ಕೆ ದಶಕಗಳವರೆಗೆ ಬೆನ್ನೆಲುಬಾಗಿ ನಿಂತ ಶಕ್ತಿಯ ಹೆಸರು. ಅಲ್ಲದೆ ಸಾಹಿತ್ಯ, ಸಂಗೀತ ಎರಡನ್ನೂ ಅಷ್ಟೊಂದು ಚಿತ್ರಗಳಿಗೆ ಒದಗಿಸಿದ ವ್ಯಕ್ತಿ ಕನ್ನಡ ನಾಡಿನಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಬ್ಯಾಟರಿ ಹಾಕಿಕೊಂಡು ಹುಡುಕಿದರೂ ಸಿಕ್ಕೋದಿಲ್ಲ. ಹಾಗಾಗಿ ಈಗ ಸರ್ಕಾರಗಳು ಅವರ ಪ್ರತಿಭೆ ಮತ್ತು ಕೊಡುಗೆಯ ಮೇಲೆ ಬ್ಯಾಟರಿ ಬೆಳಕು ಚೆಲ್ಲಿ ಅವರಿಗೆ ಸೂಕ್ತ ಪ್ರಶಸ್ತಿ ನೀಡುವುದು ಅತಿ ಅವಶ್ಯಕ. ಈ ನಿಟ್ಟಿನಲ್ಲಿ ನೆನಪಿರಲಿ ಪ್ರೇಮ್ ಅವರ ಕೆಲಸ ನಿಜಕ್ಕೂ ಅಭಿನಂದನಾರ್ಹ. ಹ್ಯಾಟ್ಸ್ ಆಫ್ ಟು ಯೂ ಪ್ರೇಮ್.‌

ಇದನ್ನೂ ಓದಿ: Hari Paraak Column: ಮೂರ್‌ ಮದ್ವೆ ಆಗೋಕೆ ಅಮೀರ್‌ ಆಗಿರಬೇಕು

ಲೂಸ್‌ ಟಾಕ್-ನೀಟ್‌ ವಿದ್ಯಾರ್ಥಿ

ಏನಪ್ಪಾ, ರಿಪೀಟ್ ನೀಟ್ ಎಕ್ಸಾಮ್‌ನಲ್ಲಿ ಮಾರ್ಕ್ಸ್ ಕಡಿಮೆ ಬಂದಿದೆಯಂತಲ್ಲ?

- ಇನ್ನೇನಾಗುತ್ತೆ...

ಯೋಗರಾಜ್ ಭಟ್ರು ಹೇಳಿದ್ರಲ್ಲ ಆಗ್ಲೇ, ಒಂದ್ ಸರ್ತಿ ಹಲ್ಲುಜ್ಜೋದೇ ಕಷ್ಟ, ಎರಡೆರಡ್ ಸಲ ಸ್ನಾನ ಮಾಡಿಸಬಹುದೇನ್ರೀ ಇವ್ರು

ಸರಿ ಈಗ ಏನ್ ಮಾಡ್ಬೇಕು ಅಂತಿದ್ದೀರಾ?

- ಕೋರ್ಟಿಗೆ ಹೋಗ್ತೀನಿ, ‘ನೀಟ್ ದಿಸ್ ಪಾಯಿಂಟ್ ಯುವರ್ ಆನರ್’ ಅಂತ

ಸರಿ, ಮನೇಲಿ ಅಪ್ಪ ಅಮ್ಮ ಏನಂದ್ರು?

- ನೀಟ್ ಆಗಿ ಓದಿದ್ರೆ ಎರಡನೇ ಸಲನೂ ಒಳ್ಳೆ ಮಾರ್ಕ್ಸ್ ಬರಬೇಕಿತ್ತು ತಾನೇ ಅಂತ ಬಯ್ದ್ರು

ಅಯ್ಯೋ, ಹೋಗ್ಲಿ, ಮತ್ತೆ ಈಗ ಸೋನಮ್ ವಾಂಗ್ಚುಕ್ ಅವರ ಜೊತೆ ನೀವೂ ಉಪವಾಸ ಕೂತ್ಕೊ ಬಹುದಲ್ವಾ?

- ಅಯ್ಯೋ, ಬ್ಯಾಡ ಕಣ್ರೀ, ಉಪವಾಸ ದೋಷ ಅಂತಾರೆ ಬಿಜೆಪಿಯೋರು

ಹೋಗ್ಲಿ ಈ ಮಾರ್ಕ್ಸ್‌ಗೆ ನಿಮಗೆ ಸೀಟು ಸಿಗುತ್ತಾ?

- ಸಿಗದೇ ಇದ್ರೆ , ನೀಟ್‌ನಲ್ಲಿ ಸಿಗದ ಸೀಟನ್ನ ಕಟ್ಟು ಕಟ್ಟು ನೋಟ್ ಕೊಟ್ಟು ತಗೊಳ್ಳೋಕೆ ಟ್ರೈ ಮಾಡಬೇಕು ಅಷ್ಟೇ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್ ‌

ಊರಲ್ಲಿ ಎಲೆಕ್ಷನ್ ಭರಾಟೆ ಜೋರಾಗಿಯೇ ನಡೆಯುತ್ತಿತ್ತು. ಎಲ್ಲ ಕಡೆ ಪ್ರಚಾರದ ಹವಾ. ಖೇಮು ಕೂಡ ಎಲೆಕ್ಷನ್‌ನಲ್ಲಿ ಬ್ಯುಸಿಯಾಗಿದ್ದ. ಒಂದು ದಿನ ಬೆಳಗ್ಗೆ ಹೀಗೆ ತಮ್ಮ ಪಕ್ಷದ ಕಾರ್ಯಕರ್ತ ರೊಡನೆ ಊರಲ್ಲಿ ತಿರುಗಾಡುತ್ತಿದ್ದಾಗ ಅಲ್ಲಿಗೆ ಸೋಮು ಬಂದ. ಅದಾಗಲೇ ಪುಲ್ ಟೈಟಾಗಿದ್ದ ಪಾರ್ಟಿ, ಖೇಮು ಹತ್ರ ಬಂದು ‘ಸರ್, ನೀವು ನಮ್ ಪಾರ್ಟಿಗೇ ಓಟ್ ಹಾಕ್ಬೇಕು, ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’ ಅಂದ.

ಅದನ್ನು ಕೇಳಿದ ಖೇಮುಗೆ ಕೆಂಡಾಮಂಡಲ ಸಿಟ್ಟು ಬಂತು. ಒಂದೇ ಸಮನೆ ಸೋಮು ವನ್ನು ಹಿಡಿದು ಹಿಗ್ಗಾಮುಗ್ಗ ಬಾರಿಸತೊಡಗಿದ. ಸರಿ ಸೋಮು ಅಲ್ಲಿಂದ ಎಸ್ಕೇಪ್. ನಂತರ ಮಧ್ಯಾಹ್ನದ ಹೊತ್ತಿಗೆ ಸೋಮು ಮತ್ತೆ ಖೇಮು ಮುಂದೆ ಹಾಜರಾದ. ಈಗಲೂ ಪುಲ್ ಟೈಟು. ಈಗಲೂ ಅದೇ ಡೈಲಾಗು. ‘ಸರ್, ನೀವು ನಮ್ ಪಾರ್ಟಿಗೇ ಓಟ್ ಹಾಕ್ಟೇಕು, ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’. ಮತ್ತೆ ಖೇಮು ಕಡೆಯಿಂದ ಅವನಿಗೆ ಧರ್ಮದೇಟುಗಳು ಬಿದ್ದವು. ಮತ್ತೆ ಸೋಮು ಎಸ್ಕೇಪ್.

ಸಂಜೆ ಇನ್ನೇನು ಕತ್ತಲಾಗಿ ಸ್ವಲ್ಪ ಹೊತ್ತು ಕಳೆದು ಪ್ರಚಾರ ಮುಗಿಯುವ ಹಂತಕ್ಕೆ ಬಂದಿತ್ತು. ಖೇಮು ಬಳಿಗೆ ಮತ್ತೆ ಬಂದ ಸೋಮು ಅದಾಗಲೇ ಸಾಕಷ್ಟು ಬಾರಿ ‘ರಿಪೀಟ್’ ಆರ್ಡರ್ ಮಾಡಿ ಇನ್ನಷ್ಟು ಟೈಟ್ ಆಗಿ ಸೇಮ್ ಡೈಲಾಗ್ ‘ರಿಪೀಟ್’ ಮಾಡಿದ. ‘ಸರ್. ನೀವು ನಮ್ ಪಾರ್ಟಿಗೇ ಓಟ್ ಹಾಕ್ಬೇಕು. ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’.

ಖೇಮು ಗೆ ಮತ್ತೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಇನ್ನೇನು ಹೊಡೆಯಲು ಕೈ ಎತ್ತಬೇಕು ಅಷ್ಟರಲ್ಲಿ ಖೇಮು ಪಕ್ಕದವಲ್ಲಿದ್ದವರು ಕೇಳಿದರು, ‘ಅಲ್ರೀ ಖೇಮು, ಪಾಪ ಅವನಿಗೆ ಯಾಕ್ರೀ ಹೊಡೀತೀರ? ಏನೋ ಓಟ್ ಕೇಳ್ತಾವ್ನೆ. ಹಾಕಂಗಿದ್ರೆ ಹಾಕಿ, ಇಂದ್ರೆ ಬಿಟ್ಟಾಕಿ. ಪಾಪ ಅದಕ್ಕಾಕೆ ಅವನಿಗೆ ಧರ್ಮ‌ ದೇಟು ಹಾಕ್ತಿರಿ. ಪಾಪ ನಾನು ನಿಮ್ ತಮ್ಮ ಇದ್ದಂಗೆ ಅಂತ ತಿಳ್ಳಳಿ ಅಂತ ಬೇರೆ ಅಂತಿದಾನೆ. ಅದಕ್ಕಾದರೂ ಕರುಣೆ ಬೇಡ್ವಾ?’. ಅದಕ್ಕೆ ಖೇಮು ಹೇಳಿದ ‘ಹೊಡೀತಾ ಇರೋದೇ ಅದಕ್ಕೆ, ಓಟ್ ಕೇಳಿದ್ದಕ್ಕೆ ಬೇಜಾರಿಲ್ಲ, ಅದ್ ಬಿಟ್ಟು ತಮ್ಮ ಇದ್ದಂಗೆ ಅಂತಾನೇ. ತಮ್ಮ ಇದ್ದಂಗೆ ಏನ್ ಬಂತು ರೀ, ಈ ಬಡ್ಡಿಮಗ ನನ್ ಸ್ವಂತ ತಮ್ಮನೇ’

ಲೈನ್‌ ಮ್ಯಾನ್

ಜೇಮ್ಸ್ ಬಾಂಡ್ ಪತ್ರಕರ್ತ ಆಗಿದ್ದಿದ್ರೆ ಯಾವ ಪೇಪರ್‌ಗೆ ಕೆಲಸ ಮಾಡ್ತಿದ್ದ?

- ಬಾಂಡ್ ಪೇಪರ್

ಸಿನಿಮಾದವರು ಹವಾಮಾನ ಇಲಾಖೆಗೆ ಸೇರಿಕೊಂಡ್ರೆ ಎಚ್ಚರಿಕೆಗಳು ಹೆಂಗಿರುತ್ವೆ?

- ನಾಳೆಯ ಹವಾಮಾನ... ಇಂದೇ ನೋಡಿ! ಮಳೆ....ಬರುತ್ತದೆ! ಮಾನ್ಸೂನ್...ಕಮಿಂಗ್ ಸೂನ್! ಚಂಡಮಾರುತ ಬರುತ್ತೆ ಅಂದಾಗ

- ಅದು ಬರೋವರೆಗೂ ಮಾತ್ರ ಬೇರೆಯವರ ಹವಾ, ಅದ್ ಬಂದ ಮೇಲೆ ಅದರದ್ದೇ ಹವಾ

ಹೊಸ ಮಾತು

- ತೆಂಗಿನ ಮರದ ಕೆಳಗೆ ಕೂತು ಹೆಂಡ ಕುಡಿದ್ರೂ ಜನ ಎಳನೀರು ಅಂತಲೇ ಅಂದ್ಕೋತಾರೆ

ನೆಚ್ಚಿನ ನಾಯಕ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಅಭಿಮಾನಿಗಳು ಏನಾಗ್ತಾರೆ?

- ಫ್ಯಾನಿಕ್

ಕಾಬೂಲ್‌ನಿಂದ ಯಾರಾದ್ರೂ ಖರ್ಜೂರ ತಂದುಕೊಟ್ರೆ ಏನಂತ ಹೇಳಬೇಕು?

- ಕಬೂಲ್ ಹೈ

ಕಾಫಿ ಕುಡಿಯೋನು ಪರೀಕ್ಷೆಯಲ್ಲಿ ಕಾಪಿ ಹೊಡೀತಾನೆ ಅಂದ್ರೆ, ಟೀ ಕುಡಿಯೋನು?

- ಅವನೂ ಕಾಪಿ ಹೊಡಿತಾನೆ.

ಟೀ ಕುಡಿಯೋರು ಕಾಪಿ ಹೊಡೆಯಲ್ಲ ಅಂತ ಯಾರ್ ಹೇಳಿದ್ರು? ಅಶ್ಲೀಲ ವಿಷಯಗಳಿರೋ ಹಿಂದಿ ಭಾಷೆಯ ಮೇಲ್ ಅನ್ನ ಏನಂತಾರೆ?

- ಮೈಲೀ

ಪುಟಗಟ್ಟಲೇ ಉದ್ದ ಇರೋ ಮೇಲ್ ಅನ್ನ ಏನಂತಾರೆ?

- ಮೈಲು

ಸೈಡ್ ಬ್ಯುಸಿನೆಸ್‌ನಲ್ಲಿ ಲಾಸ್ ಆದ್ರೆ ಏನ್ ಆಗುತ್ತೆ?

- ಇನ್ನೊಂದು ಸೂಸೈಡ್ ಆಗುತ್ತೆ.