T N Vasudevamurthy Column: ಕುಂಭಮೇಳ ಸಮೂಹಸನ್ನಿ ಆಗದಿರಲಿ
ಪ್ರಗತಿಪರರ ಪ್ರಶ್ನೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರಿಯಿರಬಹುದು. ಆದರೆ ಯಾವುದೇ ಕ್ರಾಂತಿ ಯು ರಾತ್ರಿ ಕಳೆದು ಬೆಳಗಾಗುವುದರೊಳಗೆ ಸಂಭವಿಸುವುದಿಲ್ಲ. ಆದರಲ್ಲೂ ಸಾವಿರಾರು ವರ್ಷ ಗಳಿಂದಲೂ ಬೇರೂರಿಕೊಂಡಿರುವ ಪಿಡುಗು ಗಳನ್ನು ಒಂದೇ ಏಟಿಗೆ ಬುಡಮೇಲು ಮಾಡುವೆ ವೆಂದರೆ ಅದು ಹುಂಬತನವಾಗುತ್ತದೆ. ಒಂದು ನಾಗರಿಕ ಸಮಾಜದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳ ದಿದ್ದರೆ ಅರ್ಥಪೂರ್ಣವಾದ ಯಾವ ಸುಧಾರಣೆಯನ್ನೂ ತರಲು ಸಾಧ್ಯವಿಲ್ಲ

ಅಂಕಣಕಾರ ಟಿ.ಎನ್.ವಾಸುದೇವಮೂರ್ತಿ

ಧರ್ಮಸೂಕ್ಷ್ಮ
ಟಿ.ಎನ್.ವಾಸುದೇವಮೂರ್ತಿ
ಹಿಂದೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ದಲಿತರ ಕೇರಿಗೆ ಭೇಟಿ ನೀಡಿ ಅವರಿಂದ ಪಾದಪೂಜೆಯನ್ನು ಸ್ವೀಕರಿಸಿದಾಗ ಸಾಕಷ್ಟು ವಿವಾದಗಳಾಗಿದ್ದವು. ನಮ್ಮ ಪ್ರಗತಿಪರರು ಶ್ರೀಗಳ ಇಂಥ ಸಾಮಾಜಿಕ ಉಪಕ್ರಮವನ್ನು ಖಂಡಿಸಿ “ದಲಿತರಿಂದ ಪಾದಪೂಜೆ ಮಾಡಿಸಿಕೊಂಡರೆ ಸಾಲದು, ಒಬ್ಬ ದಲಿತ ವ್ಯಕ್ತಿಯನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಿಸಬೇಕು" ಎಂದು ಆಗ್ರಹಿಸಿದ್ದರು.
ಆಗ ಯು.ಆರ್.ಅನಂತಮೂರ್ತಿಯವರು ನುಡಿದಿದ್ದ ಮಾತುಗಳು ಇಂದಿಗೂ ಮನನೀಯವಾಗಿದೆ. “ಪೇಜಾವರ ಶ್ರೀ ಗಳು ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಒಂದು ಹೆಜ್ಜೆ ಇರಿಸಿದರೂ ಸಾಕು, ಅದು ನಮ್ಮಂಥ ಪ್ರಗತಿಪರರು ನೂರು ಹೆಜ್ಜೆಗಳನ್ನು ಮುಂದಿರಿಸಿದುದಕ್ಕೆ ಸಮನಾಗುತ್ತದೆ" ಎಂದಿದ್ದರು ಅನಂತಮೂರ್ತಿಯವರು.
ಇದನ್ನೂ ಓದಿ: M J Akbar Column: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರ ದಿನಗಳು
ಪ್ರಗತಿಪರರ ಪ್ರಶ್ನೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರಿಯಿರಬಹುದು. ಆದರೆ ಯಾವುದೇ ಕ್ರಾಂತಿಯು ರಾತ್ರಿ ಕಳೆದು ಬೆಳಗಾಗುವುದರೊಳಗೆ ಸಂಭವಿಸುವುದಿಲ್ಲ. ಆದರಲ್ಲೂ ಸಾವಿರಾರು ವರ್ಷಗಳಿಂದಲೂ ಬೇರೂರಿಕೊಂಡಿರುವ ಪಿಡುಗು ಗಳನ್ನು ಒಂದೇ ಏಟಿಗೆ ಬುಡಮೇಲು ಮಾಡುವೆ ವೆಂದರೆ ಅದು ಹುಂಬತನವಾಗುತ್ತದೆ. ಒಂದು ನಾಗರಿಕ ಸಮಾಜದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಅರ್ಥಪೂರ್ಣವಾದ ಯಾವ ಸುಧಾರಣೆಯನ್ನೂ ತರಲು ಸಾಧ್ಯವಿಲ್ಲ.
ಇಷ್ಟು ಸಾಮಾನ್ಯವಾದ ತಿಳಿವಳಿಕೆಯನ್ನು ನಿರ್ಲಕ್ಷಿಸಿ ಕೆಲವು ಹಿಂದೂ ಮಠಾಧ್ಯಕ್ಷರು ಶಾಂಭವೀ ಪೀಠಾಧ್ಯಕ್ಷ ಸ್ವಾಮಿ ಆನಂದ ಸ್ವರೂಪ್ ನೇತೃತ್ವದಲ್ಲಿ ಮಹಾ ಕುಂಭಮೇಳದಲ್ಲಿ ವಸಂತ ಪಂಚಮಿ ಯಂದು (ಫೆ.3) ‘ಅಖಂಡ ಹಿಂದೂ ರಾಷ್ಟ್ರ’ದ ಸಂವಿಧಾನವನ್ನು ಬಿಡುಗಡೆ ಮಾಡುವುದಾಗಿ ಘೋಷಿ ಸಿದ್ದಾರೆ.
ಒಂದು ಸಮುದಾಯ ಸಂವಿಧಾನವನ್ನು ರಚಿಸಿಕೊಳ್ಳಬೇಕೆಂದರೆ ಅದು ಕೆಲವು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಮೊದಲಿಗೆ ಹಾಲಿ ಇರುವ ಪ್ರಭುತ್ವವು ಸಂವಿಧಾನ ಕರಡು ಸಮಿತಿಯನ್ನು ಸ್ಥಾಪಿಸಬೇಕಾಗುತ್ತದೆ. ಆ ಪ್ರಭುತ್ವ ಅಥವಾ ಪ್ರಜೆಗಳು ಮತದಾನದ ಮೂಲಕ ಸಮಿತಿಯ ಸದಸ್ಯ ರನ್ನು ಅವರ ಪರಿಣತಿ, ಪ್ರಾತಿನಿಧ್ಯ ಮತ್ತು ಸಮ್ಮತಿಯ ಮೇರೆಗೆ ನೇಮಕ ಮಾಡುತ್ತಾರೆ.
ಅಂಥ ಸಮಿತಿಯು ಮತದಾನದ ಮೂಲಕ ಆಯ್ಕೆಯಾದ ಸದಸ್ಯರನ್ನಲ್ಲದೇ ಕಾನೂನು ತಜ್ಞರನ್ನು, ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು, ಕೆಲವು ಸಂದರ್ಭಗಳಲ್ಲಿ ಒಬ್ಬಿಬ್ಬರು ವಿದೇಶಿ ಪ್ರತಿನಿಧಿ ಗಳನ್ನು ಸಹ ಒಳಗೊಂಡಿರುತ್ತದೆ. ಅಂತಿಮ ಕರಡು ಸಿದ್ಧವಾದ ಮೇಲೆ ಸಾರ್ವಜನಿಕ ಚರ್ಚೆಗೆ ಒಂದಷ್ಟು ಕಾಲಾವಕಾಶ ಮಾಡಿಕೊಡಬೇಕಾಗುತ್ತದೆ.
ಇವರ ಹಿಂದೂ ಸಂವಿಧಾನ ರಚನೆಗೆ ಯಾರು ಯಾರನ್ನು ನಿಯೋಜಿಸಿದ್ದಾರೆ, ಯಾರೆಲ್ಲ ಈ ಸಂವಿ ಧಾನ ರಚನಾ ಸಮಿತಿಯನ್ನು ಪ್ರತಿನಿಧಿಸುತ್ತಿದ್ದಾರೆ, ಯಾವೆಲ್ಲ ಕಾನೂನು ಪಂಡಿತರೊಂದಿಗೆ, ಅಂತಾರಾಷ್ಟ್ರೀಯ ರಾಜತಾಂತ್ರಿಕರುಗಳೊಂದಿಗೆ ಇವರು ಸಮಾಲೋಚನೆ ನಡೆಸಿದ್ದಾರೆ? ಸದರಿ ಹಿಂದೂ ಸಂವಿಧಾನದ ಕರಡು ಸಾರ್ವಜನಿಕ ಚರ್ಚೆಗೆ ಮುಕ್ತವಾಗಿದೆಯೇ ಎಂಬ ಪ್ರಶ್ನೆಗೂ ಈ ಪೀಠಾಧ್ಯಕ್ಷರುಗಳ ಬಳಿ ಸ್ಪಷ್ಟ ಉತ್ತರವಿಲ್ಲ.
ರಾಮರಾಜ್ಯ, ಮನುಸ್ಮೃತಿ, ಚಾಣಕ್ಯನ ಅರ್ಥಶಾಸ್ತ್ರಗಳನ್ನು ಉಲ್ಲೇಖಿಸುತ್ತಾರೆ; ಶೃಂಗೇರಿ ಶ್ರೀಗಳ ಅನುಮೋದನೆಯ ಮೇರೆಗೆ ಇವರು ಹಿಂದೂ ಸಂವಿಧಾನವನ್ನು ಅನುಷ್ಠಾನಗೊಳಿಸುವರಂತೆ. ಜನಪ್ರತಿನಿಧಿಗಳ ಅನುಮೋದನೆಯ ಬಳಿಕ ರಾಷ್ಟ್ರಪತಿಗಳ ಅಧಿಕೃತ ಸಹಿಯೊಂದಿಗೆ ಸಂವಿಧಾನ ವು ಜಾರಿಗೊಳ್ಳುತ್ತದೆ. ಆದರೆ ಓರ್ವ ಮಠಾಧ್ಯಕ್ಷರ ಅನುಮೋದನೆಯ ಮೇರೆಗೆ ಜಾರಿಗೆ ತರಲು ಹೊರಟಿರುವರೆಂದರೆ ಇವರ ಸಂವಿಧಾನವು ಭಾರತೀಯ ಸಂವಿಧಾನಕ್ಕೆ ಪರ್ಯಾಯವಾದ, ಭಾರ ತೀಯ ಸಂವಿಧಾನದೊಂದಿಗೆ ಪೈಪೋಟಿಗೆ ನಿಂತ ಸಂವಿಧಾನವೆಂದೇ ತೀರ್ಮಾನಿಸ ಬೇಕಾಗುತ್ತದೆ.
ಒಂದು ಉದಾತ್ತ ಉದ್ದೇಶಕ್ಕಾಗಿ ರಚನೆಗೊಂಡ ಸಂವಿಧಾನವಷ್ಟೇ ಸಮಸ್ತ ಸಮುದಾಯವನ್ನೂ ಸಲಹಬಲ್ಲದು. ಬ್ರಿಟಿಷರ ಶತಶತಮಾನಗಳ ಶೋಷಣೆ, ದಬ್ಬಾಳಿಕೆಗೆ ನಲುಗಿದ್ದ ನಮ್ಮ ಪ್ರಜೆಗಳ ಹಿತರಕ್ಷಣೆಯ ಉದ್ದೇಶಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರರ ನೇತೃತ್ವದಲ್ಲಿ ಸಂವಿಧಾನ ಸ್ಥಾಪನೆ ಯಾಯಿತು.
ಆದರೆ ಇವರ ಹಿಂದೂ ಸಂವಿಧಾನದ ಹಿಂದಿರುವ ಉದ್ದೇಶವೇನು? ಭಾರತೀಯ ಮೂಲದ ಧರ್ಮ ಗಳಿಗೆ ಮಾತ್ರ ಮತದಾನದ ಹಕ್ಕು ಇರಬೇಕಂತೆ. ಅಂದರೆ ಅನ್ಯಧರ್ಮೀಯ ಪ್ರಜೆಗಳನ್ನು ಎರಡನೆ ಯ ದರ್ಜೆಯ ಪ್ರಜೆಗಳನ್ನಾಗಿಸುವ ಉದ್ದೇಶ ಈ ಹೊಸ ಸಂವಿಧಾನದ ಹಿಂದಿರುವ ಪ್ರೇರಣೆ ಯಾಗಿದೆ.
ದ್ವೇಷಪೂರಿತವಾದ ಒಂದು ಹೀನ ಉದ್ದೇಶವು ಉದಾತ್ತವಾದ ಫಲವನ್ನು ಎಂದಿಗೂ ನೀಡಲಾರದು. “ಸ್ವಾತಂತ್ರ ಹೋರಾಟದ ನಂತರ ಪಾಕಿಸ್ತಾನವನ್ನು ಮುಸಲ್ಮಾನರಿಗಾಗಿ ಸ್ಥಾಪಿಸಲಾಯಿತು. ಇದೀಗ ನಮ್ಮ ದೇಶವನ್ನೂ ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವ ಸಮಯ ಬಂದಿದೆ" ಎಂದು ಆನಂದ್ ಸ್ವರೂಪ್ ಹೇಳಿದ್ದಾರೆ. ದೇಶ ವಿಭಜನೆಯಿಂದ ಹಿಂದೂಗಳಿಗಾಗಲಿ, ಮುಸಲ್ಮಾನರಿಗಾಗಲಿ ಯಾವ ದೃಷ್ಟಿಯಿಂದಲೂ ಒಳ್ಳೆಯದಾಗಲಿಲ್ಲ.
ಇದನ್ನು ಡಾ. ರಾಮಮನೋಹರ ಲೋಹಿಯಾ ಅವರು ಬಹಳ ಸ್ಪಷ್ಟವಾಗಿ ವಿಚಾರಪೂರ್ಣವಾಗಿ ವಿವರಿಸಿದ್ದಾರೆ. ಹಾಗೆ ನೋಡಿದರೆ ಹಿಂದೂರಾಷ್ಟ್ರದ ಘೋಷಣೆ ಹೊಸ ಆಗ್ರಹವೇನಲ್ಲ. ದೇಶ ವಿಭಜನೆಯಾದಾಗಲೂ ಕೆಲವು ಉಗ್ರ ಹಿಂದೂಗಳು ‘ಹಿಂದೂರಾಷ್ಟ್ರ’ಕ್ಕಾಗಿ ಆಗ್ರಹಿಸಿದ್ದರು.
ಆಗ ಲೋಹಿಯಾ ನುಡಿದಿದ್ದ ಈ ಮಾತುಗಳು ಇಂದಿನ ಹಿಂದೂ ಸಂಘಟನೆಗಳಿಗೂ ಅನ್ವಯವಾಗು ತ್ತವೆ: “ನಮ್ಮ ಜನಗಳ ಮನಸ್ಸಿನಲ್ಲಿ ಮನೆಮಾಡಿರುವ ಪಾಕಿಸ್ತಾನ-ವಿರೋಧಿ ಧೋರಣೆಯು ಮುಸ್ಲಿಂ- ವಿರೋಧಿ ಧೋರಣೆಯಾಗಿ ಪರಿವರ್ತಿತವಾಗಿದೆ. ಪಾಕಿಸ್ತಾನದ ಮೇಲೆ ಹಲ್ಲೆ ಮಾಡಲು ಸಾಧ್ಯವಿಲ್ಲದ ಕಾರಣ ಈ ಹುಚ್ಚರು ಮತ್ತು ಖದೀಮರು ಅವಕಾಶ ಸಿಕ್ಕಾಗಲೆಲ್ಲ ಮುಸ್ಲಿಮರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ.
ಅಂಥ ದುಷ್ಕೃತ್ಯಗಳಿಂದ ದೇಶ ಇನ್ನಷ್ಟು ವಿಭಜನೆಯಾಗುತ್ತದೆ. ಹಿಂದೂ ಮುಸ್ಲಿಂ ಸಂಬಂಧದಲ್ಲಿ ಉಂಟಾದ ವಿಘಟನೆಯೇ ದೇಶ ವಿಭಜನೆಯ ಪ್ರಮುಖ ಕಾರಣವಾಗಿದೆ. ಹಿಂದೂ ಮುಸ್ಲಿಮರು ಪರಸ್ಪರ ಒಂದಾಗಿ ಗುರುತಿಸಿಕೊಂಡಾಗಲಷ್ಟೇ ವಿಭಜಿತ ದೇಶವನ್ನು ಒಗ್ಗೂಡಿಸಬಹುದು. ಯ್ಚಾರ ಪಾಲಿಗೆ ದೇಶ ವಿಭಜನೆ ಶತ್ರುವೋ ಅವರ ಪಾಲಿಗೆ ಮುಸ್ಲಿಮರು ಅನಿವಾರ್ಯವಾಗಿ ಮತ್ತು ಅಗತ್ಯ ವಾಗಿ ಮಿತ್ರರಾಗಲೇಬೇಕು" ( Guilty men of India's partition, 5).
ಒಂದು ವೇಳೆ ಇವರ ಹಿಂದೂ ಸಂವಿಧಾನದ ಬೇಡಿಕೆ ನ್ಯಾಯಸಮ್ಮತವಾದುದೆಂದು ಸಾಬೀತಾ ದರೂ ಅಂಥ ಸಂವಿಧಾನ ರಚಿಸುವ ಮಠಾಧಿಪತಿಗಳಿಗೆ ಒಂದು ಕನಿಷ್ಠ ಅರ್ಹತೆ ಬೇಡವೇ? ಮತ್ತು ಆ ಸಂವಿಧಾನಕ್ಕೆ ಒಳಪಡುವ ಹಿಂದೂ ಸಮುದಾಯಕ್ಕೆ ಒಂದು ಕನಿಷ್ಠ ನೈತಿಕ ಮಾನದಂಡ ಇರಬೇಡವೇ? ನಮ್ಮಲ್ಲಿ ಜಾತಿಗಳಿವೆ ಮತ್ತು ಜಾತಿಯನ್ನು ಪ್ರತಿನಿಧಿಸುವ ಮಠಗಳಿವೆ.
ಈ ಮಠಾಧಿಪತಿಗಳ ನಡುವೆಯೇ ಆಹಾರ ಪದ್ಧತಿ, ಪೂಜಾ ಪದ್ಧತಿ, ಸಾಧನಾನುಷ್ಠಾನ ಪದ್ಧತಿ ಮುಂತಾದ ವಿಷಯಗಳಲ್ಲಿ ಒಮ್ಮತವಿಲ್ಲ. ಒಂದೊಂದು ಸಂಪ್ರದಾಯವೂ ಒಂದೊಂದು ಗ್ರಂಥ ವನ್ನು ಪ್ರಮಾಣ ಗ್ರಂಥವೆಂದು ನಂಬುತ್ತವೆ. ಕೆಲವರಿಗೆ ವೇದ ಪ್ರಮಾಣವಾದರೆ, ಕೆಲವರಿಗೆ ವಚನ ಗಳು ಪ್ರಮಾಣವಾಗಿವೆ. ಕೆಲವರು ರೇವಣಸಿದ್ಧರನ್ನು, ಕೆಲವರು ಗೋರಕ್ಷನಾಥರನ್ನು, ಕೆಲವರು ಹಿಮಾಲಯದ ಅಜ್ಞಾತ ಸಾಧು ಸಂತರನ್ನು ತಮ್ಮ ಮೂಲಪುರುಷರೆಂದು ಘೋಷಿಸುತ್ತಾರೆ.
ಸಮಾನ ಸಂವಿಧಾನವನ್ನು ತರುವ ಉಸ್ತುವಾರಿ ಹೊತ್ತವರು ಮೊದಲು ತಮ್ಮತಮ್ಮೊಳಗೆ ಸಮಾನತೆ ಯನ್ನು ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಕೆಲವು ಮಠಾಧೀಶರು ಜನಸಾಮಾನ್ಯರೊಂದಿಗೆ ಸಮಾನ ವಾಗಿ ವೇದಿಕೆ ಹಂಚಿಕೊಂಡರೆ ಮತ್ತೆ ಕೆಲವು ಮಠಾಧೀಶರು ಅಂತರ ಕಾಯ್ದುಕೊಳ್ಳುವರು. ಜನ ಸಾಮಾನ್ಯರು ಹಾಗಿರಲಿ ತಮ್ಮದೇ ಹಿಂದೂಧರ್ಮದ ಮತ್ತೊಂದು ಸಂಪ್ರದಾಯದ ಮಠಾಧೀ ಶರೊಂದಿಗೂ ಸಮಾನವಾಗಿ ಆಸೀನರಾಗುವುದಿಲ್ಲ.
ಹಾಗೆ ನೋಡಿದರೆ ಇವರೆಲ್ಲರಿಗೂ ಪ್ರಮಾಣ ಗ್ರಂಥವೆನಿಸಿದ ಶ್ರುತಿ-ಸ್ಮೃತಿ-ಪುರಾಣಗಳಲ್ಲಿ ಎಲ್ಲಿಯೂ ಮಠಾಧೀಪತ್ಯದ ಪ್ರಸ್ತಾಪವಿಲ್ಲ. ಜಾತಿಗೊಂದು ಪೀಠ, ಆ ಪೀಠಕ್ಕೆ ನಿರ್ದಿಷ್ಟ ಜಾತಿಯವರೇ ಅಧಿಪತಿ ಯಾಗಬೇಕೆಂಬ ನಿಯಮವನ್ನು ಇವರ ಯಾವ ಶಾಸ್ತ್ರವೂ ಹೇಳಿಲ್ಲ.
ಬದಲಾಗಿ “ನಿಜವಾದ ಸನ್ಯಾಸಿಯು ಬ್ರಾಹ್ಮಣ, ಹಸು, ಆನೆ, ನಾಯಿ, ಪಂಚಮ ಮುಂತಾದ ಎಲ್ಲರ ಲ್ಲೂ ಏಕತ್ವವನ್ನೇ ಕಾಣುವನು" ಎಂದಿದೆ (ಗೀತೆ 5.18). ಶಾಸಪ್ರಮಾಣದ ತಳಹದಿಯನ್ನೇ ಲೆಕ್ಕಿಸದ, ಗೀತಾವಾಕ್ಯಕ್ಕೇ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಈ ಪೀಠಾಧ್ಯಕ್ಷರು ತಾವು ರಚಿಸುವ ಸಂವಿಧಾನಕ್ಕೆ ಬದ್ಧರಾಗಿರಬಲ್ಲರೇ? ಆದ್ದರಿಂದ ಇಡೀ ದೇಶಕ್ಕೆ ಸಮಾನವಾದ ಒಂದು ಸಂವಿಧಾನ ವನ್ನು ಹೇರಲು ಹಾತೊರೆಯುತ್ತಿರುವ ಇವರು ಮೊದಲು ತಮ್ಮತಮ್ಮ ಸಮಾನತೆಯನ್ನು ತಂದು ಕೊಳ್ಳಲು ಅನು ಕೂಲವಾಗುವಂಥ ಒಂದು ಧಾರ್ಮಿಕ ಸಂವಿಧಾನವನ್ನು ರಚಿಸಿಕೊಳ್ಳಲಿ.
ಇವರು ಅಂಥದೊಂದು ತಾಲೀಮನ್ನು ನಡೆಸಬೇಕಾದ ಅಗತ್ಯವಿದೆ. ಇಲ್ಲಿ ಸಂದ ಮೇಲೆ ಅಲ್ಲಿಯೂ ನಿಸ್ಸಂಶಯವಾಗಿ ಸಲ್ಲುವರು. ಹಿಂದೂ ಜಾತಿಗಳ ನಡುವೆ ಮತ್ತು ಹಿಂದೂ ಮಠಗಳ ನಡುವೆ ಇರುವ ತಾರತಮ್ಯ, ಅಸಮಾನತೆಯನ್ನು ತೊಲಗಿಸದೇ ಸಮಾನ ಹಿಂದೂ ಕಾನೂನಿನ ಕನಸು ಕಂಡರೆ ಅದು ಗಗನಕುಸುಮವಾಗುತ್ತದೆ.
(ಲೇಖಕರು ಸಹ ಪ್ರಾಧ್ಯಾಪಕರು, ಆದಿಚುಂಚನಗಿರಿ ವಿಶ್ವವಿದ್ಯಾಲಯ)