ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Srivathsa Joshi Column: ಟ್ರಾಜಿಡಿ ಅಂದ್ರೆ ಅಜಗೀತೆ, ಲಾಸ್ಟ್‌ ಮೆಲೊಡಿ ಹಂಸಗೀತೆ

ಒಟ್ಟಾರೆಯಾಗಿ ದುರಂತಗಳಿಗೆ ನಾವು ಒಗ್ಗಿ ಹೋಗಿದ್ದೇವೆ. ದಶಕಗಳ ಹಿಂದಿನ ಭೋಪಾಲ್ ವಿಷಾನಿಲ ದುರಂತ, ಚೆರ್ನೊಬಿಲ್ ಅಣುಸ್ಥಾವರ ದುರಂತ, ಬೆಂಗಳೂರಿನಲ್ಲಿ ವೀನಸ್ ಸರ್ಕಸ್ ದುರಂತ, ಗಂಗಾರಾಮ್ ಕಟ್ಟಡ ಕುಸಿತದ ದುರಂತ, ಅಮೆರಿಕದಲ್ಲಿ ವಿಶ್ವ ವಾಣಿಜ್ಯ ಕೇಂದ್ರ ಅವಳಿಗೋಪುರ ದುರಂತ, ಜಪಾನ್‌ನಲ್ಲಿ ಭೂಕಂಪ, ಇಂಡೊನೇಷ್ಯಾದಲ್ಲಿ ತ್ಸುನಾಮಿ ಹೀಗೆ ಭಾರಿ ದುರಂತಗಳಿಂದ ಹಿಡಿದು ‘ಮ್ಯಾನ್‌ಹೋಲ್ ದುರಂತ, ಮೂವರ ಸಾವು’, ‘ಗರ್ಭಿಣಿ ಫೋಟೊಶೂಟ್ ವೇಳೆ ದುರಂತ, ಮೊದಲ ಮಗು ಸಾವು’ ಎಂದು ಮುಂತಾಗಿ ದುರಂತಗಳ ಸುದ್ದಿಗಳು ಅಂತ್ಯವಿಲ್ಲದವಾಗುತ್ತವೆ.

ತಿಳಿರು ತೋರಣ

ನಿತ್ಯಜೀವನದ ಘಟನೆಗಳನ್ನು ಟ್ರಾಜಿಡಿ ಅಥವಾ ದುರಂತ ಎಂದು ಬಣ್ಣಿಸುವುದೇಕೆ? ಸಾವುನೋವು ಸಂಭವಿಸಬೇಕೆಂದಿಲ್ಲ, ಅಹಿತಕರ ಘಟನೆ ಏನೇ ನಡೆದರೂ ಅದು ದುರಂತ. ಕೆಲವರಿಗಂತೂ ಸಣ್ಣಪುಟ್ಟ ಸಂಗತಿಗಳೂ ದುರಂತವೆಂದೇ ದಾಖಲಾಗು‌ ತ್ತವೆ. ಒಂದು ಲೆಕ್ಕದಲ್ಲಿ ಅವರೆಲ್ಲ ನರ‍್ಮಲ್ ಲೈಫ್ ಲೀಡ್ ಮಾಡುವವರು. ಮಾರಣಾಂತಿಕ ಪಾಯಗಳೇನೂ ಅವರ ಚಿಂತೆ-ಚಿಂತನೆಯ ರಾಡಾರ್‌ನಲ್ಲಿ ಇರುವು ದಿಲ್ಲ.

ಅಜ ಅಂದರೆ ಆಡು. ಆಡಿಗೂ ಟ್ರಾಜಿಡಿಗೂ ಏನು ಸಂಬಂಧ? ಅದೊಂದು ಕುತೂಹಲದ ಸಂಗತಿ. ಭಾಷೆಯಲ್ಲಿ ಪದಗಳ ಹುಟ್ಟು ಮತ್ತು ಬೆಳವಣಿಗೆ ಹೇಗಿರುತ್ತದೆ, ಹೇಗೆ ಸಾಗುತ್ತದೆ ಎನ್ನುವುದಕ್ಕೆ ಒಂದು ಸ್ವಾರಸ್ಯಕರ ನಿದರ್ಶನ.

ನೀವೂ ಗಮನಿಸಿರಬಹುದು, ಇತ್ತೀಚಿನ ದಿನಗಳಲ್ಲಿ ‘ದುರಂತ’ ಎಂಬ ಪದಬಳಕೆ ಒಂದು ಕ್ಲೀಷೆಯೇ ಆಗಿಹೋಗಿದೆ. ಬ್ರೇಕಿಂಗ್ ನ್ಯೂಸ್‌ನ ಅವಸ್ಥೆಯೇ ಇದಕ್ಕೂ ಬಂದಿದೆ. ತೀವ್ರತೆ, ಪ್ರಸ್ತುತತೆ ಮತ್ತು ಆವಶ್ಯಕತೆಗಳ ಯಾವ ಮಾಪನಕ್ಕೂ ಹೋಗದೆ ವರದಿಯಾಗುವ ಎಲ್ಲ ಅವಘಡಗಳೂ ಈಗ ದುರಂತಗಳೇ.

ರಂಜಾನ್ ಮೊದಲ ದಿನವೇ ಕರಾಚಿಯಲ್ಲಿ ಭೀಕರ ದುರಂತ: ಅಪರ‍್ಟ್‌ಮೆಂಟ್‌ನಲ್ಲಿ ಗ್ಯಾಸ್ ಸ್ಫೋಟಗೊಂಡು 16 ಜನರ ದುರ್ಮರಣ", “ಕ್ಯಾಲಿಫೋರ್ನಿಯಾದಲ್ಲಿ ಭಾರಿ ಹಿಮ ದುರಂತ: ಹಿಮಪಾತಕ್ಕೆ 8 ಮಂದಿ ಸ್ಕೀಯರ‍್ಸ್ ಬಲಿ", “ಬೆಂಗಳೂರಲ್ಲಿ ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್‌ಲೆಸ್ ರೈಲು.

ತಪ್ಪಿದ ಭಾರಿ ದುರಂತ", “ಬೆಂಕಿ ದುರಂತ: ಹಗಲಲ್ಲೇ ಹೊತ್ತಿ ಉರಿದ ಖಾಸಗಿ ಬಸ್", “ಅಜಿತ್ ಪವಾರ್ ವಿಮಾನ ದುರಂತ, ಮುಂದುವರಿದ ತನಿಖೆ" ರೀತಿಯ ತಲೆಬರಹಗಳು ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಬಂದು ಬಡಿಯುತ್ತಲೇ ಇರುತ್ತವೆ. ದುರಂತದಲ್ಲಿ ಒಂದು ‘ಅಂತ’ ಇದ್ದದ್ದು ಸಾಲದೆಂದು ಮತ್ತೊಂದು ಅಂತ್ಯ ಸೇರಿಸಿ “ಹುಟ್ಟುಹಬ್ಬದಂದೇ ವಿಧಿಯ ಅಟ್ಟಹಾಸ. ಬರ‍್ತ್‌ಡೇ ಪಾರ್ಟಿ ಮುಗಿಸಿ ಬರುವಾಗ ದುರಂತ ಅಂತ್ಯ" ರೀತಿಯ ಹೆಡ್‌ಲೈನು ಗಳೂ ಆಗಾಗ ಅಪ್ಪಳಿಸುತ್ತವೆ.

ಒಟ್ಟಾರೆಯಾಗಿ ದುರಂತಗಳಿಗೆ ನಾವು ಒಗ್ಗಿ ಹೋಗಿದ್ದೇವೆ. ದಶಕಗಳ ಹಿಂದಿನ ಭೋಪಾಲ್ ವಿಷಾನಿಲ ದುರಂತ, ಚೆರ್ನೊಬಿಲ್ ಅಣುಸ್ಥಾವರ ದುರಂತ, ಬೆಂಗಳೂರಿನಲ್ಲಿ ವೀನಸ್ ಸರ್ಕಸ್ ದುರಂತ, ಗಂಗಾರಾಮ್ ಕಟ್ಟಡ ಕುಸಿತದ ದುರಂತ, ಅಮೆರಿಕದಲ್ಲಿ ವಿಶ್ವ ವಾಣಿಜ್ಯ ಕೇಂದ್ರ ಅವಳಿಗೋಪುರ ದುರಂತ, ಜಪಾನ್‌ನಲ್ಲಿ ಭೂಕಂಪ, ಇಂಡೊನೇಷ್ಯಾದಲ್ಲಿ ತ್ಸುನಾಮಿ ಹೀಗೆ ಭಾರಿ ದುರಂತಗಳಿಂದ ಹಿಡಿದು ‘ಮ್ಯಾನ್‌ಹೋಲ್ ದುರಂತ, ಮೂವರ ಸಾವು’, ‘ಗರ್ಭಿಣಿ ಫೋಟೊಶೂಟ್ ವೇಳೆ ದುರಂತ, ಮೊದಲ ಮಗು ಸಾವು’ ಎಂದು ಮುಂತಾಗಿ ದುರಂತಗಳ ಸುದ್ದಿಗಳು ಅಂತ್ಯವಿಲ್ಲದವಾಗುತ್ತವೆ. ಆರ್ಶರ್ಯವೆಂದರೆ ಜೀವ ಹಾನಿ ಸಂಭವಿಸದಿರುವ ಅಪಘಾತವನ್ನೂ ದುರಂತವೆಂದೇ ಬಣ್ಣಿಸಲಾಗುತ್ತದೆ!

ಇದನ್ನೂ ಓದಿ: Srivathsa Joshi Column: ಶಿವ ಮಾನಸಪೂಜೆಯ ಮೆರುಗು, ಭಕ್ತಿಯ ಒಳ-ಹೊರಗು

‘ದೋಣಿ ದುರಂತ, ನಾಲ್ವರು ಪಾರು’ ಎಂಬಂಥ ಸುದ್ದಿ ಶೀರ್ಷಿಕೆೆಗಳು ಅಪರೂಪವೇನಲ್ಲ. ಹಿಂದೊಮ್ಮೆ ನ್ಯೂಯಾರ್ಕ್ ಸಮೀಪ ಪ್ರಯಾಣಿಕರ ವಿಮಾನವೊಂದು ಪೈಲಟ್ ನ ಚಾಣಾ ಕ್ಷತೆಯಿಂದ ಹಡ್ಸನ್ ನದಿಯಲ್ಲಿ ಅತ್ಯಾರ್ಶರ್ಯಕರ ರೀತಿಯಲ್ಲಿ ಎಮರ‍್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದನ್ನೂ ‘ನದಿಗಿಳಿದ ವಿಮಾನ ದುರಂತ: ಪ್ರಯಾಣಿಕರೆಲ್ಲರೂ ಪವಾಡ ಸದೃಶ ಪಾರು’ ಎಂದೇ ಬಿತ್ತರಿಸಲಾಗಿತ್ತು.

ಸುದ್ದಿಸಂಸ್ಥೆಗಳ ಸುದ್ದಿ ಬಿಡಿ, ಜನಸಾಮಾನ್ಯರ ಮಾತಿನಲ್ಲಿ ಸಮಾಚಾರಗಳು, ವ್ಯಾವಹಾ ರಿಕ ವಿಚಾರ ವಿನಿಮಯಗಳೂ ದುರಂತಮಯವೇ. ಹಿಂದೆ ಎಲ್ಲೋ ಅಪರೂಪಕ್ಕೆ ಕೇಳಿ ಬರುತ್ತಿದ್ದ ಡೈವರ‍್ಸ್ ಎನ್ನುವುದು ಈಗ ದೈನಂದಿನ ದುರಂತಗಳ ಸಾಲಿಗೆ ಸೇರಿದೆ.

ಮೊಬೈಲ್ ಬಳಕೆಯ ಅತಿರೇಕದಿಂದ ಇಂದಿನ ಯುವಪೀಳಿಗೆಯ ಸಂವಹನ-ಸಂಪರ್ಕ ಭಾಷೆ ಅಷ್ಟೇ ಅಲ್ಲ ಜೀವನಶೈಲಿ ಕೂಡ ರಿಪೇರಿಯಾಗದಷ್ಟು ಖರಾಬಾಗಿದೆಯಲ್ಲ? ಅದೂ ದಿನನಿತ್ಯದ ದುರಂತ. ಜಾಗತೀಕರಣದ ಭೂತವು ಎಳನೀರು, ಮಜ್ಜಿಗೆ, ರಾಗಿಮಾಲ್ಟ್‌ಗಳ ಜಾಗದಲ್ಲಿ ಕೋಕ್, ಪೆಪ್ಸಿ, ಬಿಸ್ಲೇರಿಗಳನ್ನು ತಂದಿಟ್ಟಿರುವುದು ಒಂದು ದುರಂತವಾದರೆ, ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡ ಖದೀಮರು, ಮೈಗಳ್ಳರು ಉನ್ನತ ಸ್ಥಾನಗಳಿಗೇರಿ ಸಮಾಜದ ಸ್ವಾಸ್ಥ್ಯವನ್ನು ಅಧೋಗತಿಗಿಳಿಸಿರುವುದು ಮತ್ತೊಂದು ದುರಂತ.

ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಪಾಸಾಗುವುದೂ ದುರಂತ, ಪ್ರೀತಿಸಿದವಳು ಕೈಕೊಟ್ಟು ಬೇರೆ ಯವನೊಡನೆ ಓಡಿಹೋಗುವುದೂ ದುರಂತ. ಅದಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯವಿಲ್ಲವಾದರೂ ಮಾಡಿಕೊಂಡರೆ ಅದೂ ದುರಂತ. ಸಚ್ಚಾರಿತ್ರ‍್ಯವುಳ್ಳ ಜನನಾಯಕ ನೊಬ್ಬ ಚುನಾವಣೆಯಲ್ಲಿ ಸೋಲುವುದೂ ದುರಂತ, ಕೆಟ್ಟವನೊಬ್ಬ ಗೆದ್ದು ಬಂದು ಅಟ್ಟಹಾಸಗೈಯುವುದು ಅದಕ್ಕಿಂತ ದೊಡ್ಡ ದುರಂತ.

Screenshot_10 ಒಕ

ಕನ್ನಡನಾಡಿನ ರಾಜಧಾನಿಯಲ್ಲೇ ಕನ್ನಡ ಭಾಷೆ ಮತ್ತು ಕನ್ನಡಿಗ ಕೀಳಾಗಿ ಕಾಣಲ್ಪಡು ವುದು ಕರುಳು ಕಿತ್ತು ಬರುವಂಥ ದುರಂತ. ರೆಸ್ಟೊರೆಂಟ್ʼಗಳ ವಿಶ್ವರಾಜಧಾನಿ ಎಂಬ ಹೆಮ್ಮೆಯ ಬೆಂಗಳೂರಿನಲ್ಲಿ ಮನೆಗಳಲ್ಲಿ ಅಡುಗೆ ಆತಿಥ್ಯಗಳೆಲ್ಲ ಈಗ ಇಲ್ಲವಾಗುತ್ತಿರುವುದು ಅಷ್ಟೇ ಕಳವಳಕಾರಿ ದುರಂತ.

ಗಮನಿಸಬೇಕಾದ್ದೇನೆಂದರೆ ಈ ಎಲ್ಲ ಉದಾಹರಣೆಗಳಲ್ಲೂ ದುರಂತ ಎಂಬ ಪದ ಬಳಕೆ ಯಾಗಿರುವುದು ಇಂಗ್ಲಿಷ್‌ನ ‘ಟ್ರಾಜಿಡಿ’ ಎಂಬ ಅರ್ಥದಲ್ಲಿ. ಟ್ರಾಜಿಡಿ ಎಂಬ ಶಬ್ದವನ್ನು ನಾವು ಸಾಮಾನ್ಯವಾಗಿ ರಿಲೇಟ್ ಮಾಡುವುದು ಸಿನಿಮಾ, ನಾಟಕ, ಕಥೆ-ಕಾದಂಬರಿಗಳ ಸ್ವರೂಪಕ್ಕೆ, ಅವುಗಳ ಕಥಾಹಂದರಕ್ಕೆ ಮತ್ತು ಅವು ಮುಕ್ತಾಯಗೊಳ್ಳುವ ರೀತಿಗೆ. ದುಃಖದ ಸನ್ನಿವೇಶಗಳನ್ನೊಳಗೊಂಡವು, ವಿಶೇಷವಾಗಿ ದುಃಖದಲ್ಲೇ ಅಂತ್ಯಗೊಳ್ಳುವವು ಟ್ರಾಜಿಡಿ ಎನಿಸುತ್ತವೆ.

ಅಂಥ ಸಿನಿಮಾಗಳಲ್ಲಿ ಕೊನೆಗೆ ತೆರೆಯ ಮೇಲೆ ‘ಶುಭಂ’ ಎಂದು ಮೂಡಿಬರುವುದಿಲ್ಲ, ಬದಲಿಗೆ ನಾಯಕ-ನಾಯಕಿ ಹೆಣವಾಗಿ ಬಿದ್ದಿರುವ ಹೃದಯವಿದ್ರಾವಕ ದೃಶ್ಯ, ಜತೆಗೆ ‘ಪ್ರೀತಿ ಯೊಂದೇ ಶಾಶ್ವತ...’ ಅಂತಲೋ ‘ಪ್ರೇಮವೊಂದೇ ಅಮರ...’ ಅಂತಲೋ ಏನಾದರೂ ಸಂದೇಶ. ಮಂಜಾದ ಕಣ್ಣುಗಳೊಂದಿಗೆ ಪ್ರೇಕ್ಷಕರು ಚಿತ್ರಮಂದಿರದಿಂದ ಹೊರ ಬರುತ್ತಾರೆ.

ಟ್ರಾಜಿಡಿಯ ಟಿಪಿಕಲ್ ಡೆಫಿನಿಷನ್ ಅದು. ನಿಘಂಟುಗಳಲ್ಲೂ ಟ್ರಾಜಿಡಿಯ ಅರ್ಥವನ್ನು ಹಾಗೆಯೇ ವಿವರಿಸಿರುತ್ತಾರೆ- any play or narrative that seriously treats of calamitous events and has an unhappy but meaningful ending. ಆದರೆ ಟ್ರಾಜಿಡಿ ಪದದ ಗ್ರೀಕ್ ಮೂಲ tragoidia ಎಂದು. ಅದರರ್ಥ goat song ಅಥವಾ ಹೋತದ ಹಾಡು ಎಂದು!

ಮೂಲಧಾತು tragos ಅಂದರೆ ಹೋತ, ಗಂಡು ಆಡು. ‘ಆಡಿನ ಹಾಡು’ (ಅಕಾರ ಹಕಾರ ಗಳನ್ನು ಅದಲುಬದಲು ಮಾಡುವವರು ‘ಹಾಡಿನ ಆಡು’ ಎನ್ನಬಹುದು, ಅರ್ಥ ವ್ಯತ್ಯಾಸ ವೇನಿಲ್ಲ) ಮತ್ತು ದುಃಖಾಂತ್ಯಕ್ಕೆ ಏನು ಸಂಬಂಧ? ಪುರಾತನ ಗ್ರೀಕ್ ಕಲೆ, ಸಂಸ್ಕೃತಿ ಮತ್ತು ಜನಜೀವನಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಜರ್ಮನ್ ವಿದ್ವಾಂಸ ವಾಲ್ಟರ್ ಬರ್ಕರ್ಟ್‌ ಇದನ್ನು ವಿವರಿಸಲಿಕ್ಕೆ ಕನ್ವಿನ್ಸಿಂಗ್ ಥಿಯರಿಯೊಂದನ್ನು ಮಂಡಿಸಿದ್ದಾರೆ:

ಕ್ರಿಸ್ತ ಪೂರ್ವ ಐದು ಅಥವಾ ಆರನೆಯ ಶತಮಾನದ ಗ್ರೀಸ್ ದೇಶದಲ್ಲಿ ಡಯೊನಿಸಿಸ್ ದೇವತೆಯ ಉತ್ಸವ ನಡೆಯುವಾಗ ಹಾಡುಗಾರಿಕೆ ಸ್ಫರ್ಧೆ ಇರುತ್ತಿತ್ತಂತೆ. ಸ್ಫರ್ಧಾತ್ಮಕತೆ ಬಹುಶಃ ಗ್ರೀಕರ ನರನಾಡಿಗಳಲ್ಲಿ ಯಾವಾಗಲೂ ಹರಿಯುತ್ತಿರುತ್ತದೆ, ಅವರೇ ತಾನೆ ಒಲಿಂ ಪಿಕ್ಸ್ ಪಂದ್ಯಗಳನ್ನು ಆರಂಭಿಸಿದವರು? ಹಾಡಿನ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ಒಂದು ಆಡು! ಆ ಆಡನ್ನು ಅಲ್ಲೇ ಕೊಂದು ಹಸಿಹಸಿ ತಿನ್ನುವಷ್ಟು ಉನ್ಮಾದದ ವಾತಾ ವರಣ. ಗ್ರೀಕ್ ಪುರಾಣಗಳ ಪ್ರಕಾರ ಡಯೊನಿಸಿಸ್ ಉನ್ಮಾದದ ದೇವತೆಯೆಂದೇ ಪ್ರಸಿದ್ಧಿ.

ಡಯೊನಿಸಿಸ್ ಉತ್ಸವಗಳಲ್ಲಿ ಆಡಿನ ಬಲಿ ಕೊಡುವುದು ಮನುಷ್ಯ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ದೇವರಿಗೆ ಅರ್ಪಣೆ ಎಂಬ ಭಾವವೂ ಇತ್ತು. ಆಡನ್ನು ಕೊಲ್ಲುವಾಗ ಡಿತಿರಾಂಬ್ ಎಂಬ ಹಾಡನ್ನು ಎಲ್ಲರೂ ಸೇರಿ ಹಾಡುವ ಪದ್ಧತಿ. ಕೊಲ್ಲುವವನು ಮುಸುಕು ಧಾರಿ. ಅದೊಂದು ಭಯಾನಕ, ದುಃಖಕರ ಸನ್ನಿವೇಶ. ಕಟುಕ, ಕೊಲೆ, ರಕ್ತಪಾತ, ತಪ್ಪಿತಸ್ಥ ಭಾವ, ದುಃಖದ ಹಾಡು. ಟ್ರಾಜಿಡಿ ಎನಿಸಿಕೊಳ್ಳಲಿಕ್ಕೆ ಇನ್ನೇನು ಬೇಕು? ಕೊಲ್ಲಲ್ಪಟ್ಟ ಆಡನ್ನು ಕುರಿತ ಚರಮಗೀತೆಯನ್ನೇ ಕಾಲ ಕ್ರಮೇಣ ಮನುಷ್ಯರ ನಿಧನಾನಂತರ ಹಾಡುವ ಸಂಪ್ರದಾಯ ಹುಟ್ಟಿಕೊಂಡಿತು.

ಅರಿಸ್ಟಾಟಲ್ ತನ್ನ ಕೃತಿ ‘ಪೊಯೆಟಿಕ್ಸ್’ನಲ್ಲಿ ಟ್ರಾಜಿಡಿಯನ್ನು ಮತ್ತಷ್ಟು ವಿವರಿಸುತ್ತಾನೆ. ಡಯೊನಿಸಿಸ್ ಉತ್ಸವಗಳಲ್ಲಿ ಡಿತಿರಾಂಬ್ ಹಾಡನ್ನು ಹಾಡುವಾಗ ಮುಖ್ಯ ಗಾಯಕ ಮತ್ತು ಸಂಗಡಿಗರ ನಡುವೆ ನಡೆಯುವ ಸಂಭಾಷಣೆ ನಾಟಕೀಯವಾಗುವುದನ್ನು ಬಣ್ಣಿಸುತ್ತಾನೆ.

ಅದು ಬಹುಶಃ ನಮ್ಮಲ್ಲಿನ ಗೀಗೀ ಪದಗಳಲ್ಲಿ ‘ಹೂಂ ಹೇಳಪ್ಪಾ...’ ಅಂತಿರುತ್ತದಲ್ಲ ಹಾಗಿರು ತ್ತಿತ್ತೋ ಏನೋ. ಸಮೂಹಗಾನದಲ್ಲಿ ಸಂಭಾಷಣೆಯನ್ನು ಆರಂಭಿಸಿದ ಕೀರ್ತಿ ಆ ಕಾಲ ದಲ್ಲಿ ಗ್ರೀಸ್‌ನಲ್ಲಿ ಪ್ರಸಿದ್ಧ ಹಾಡುಗಾರ/ನಟ ಆಗಿದ್ದ ಥೆಸ್ಪಿಸ್‌ಗೆ ಸಲ್ಲುತ್ತದೆ.

ಈಗಲೂ ಪ್ರಬುದ್ಧ ನಟರನ್ನು ‘ಥೆಸ್ಪಿಯನ್’ ಎನ್ನುವುದು ಈತನ ಹೆಸರಿನಿಂದಾಗಿಯೇ. ಇನ್ನೊಬ್ಬ ಗ್ರೀಕ್ ಹಾಡುಗಾರ ಅದಕ್ಕೆ ಮತ್ತಷ್ಟು ನಟರನ್ನು ಸೇರಿಸಿದನು. ಹಾಡಿಗಿಂತ ಸಂಭಾಷಣೆಯ ಭಾಗವೇ ಹೆಚ್ಚಿತು. ಟ್ರಾಜಿಡಿ ನಾಟಕ ಹುಟ್ಟಿಕೊಂಡದ್ದು ಹೀಗೆ.

ಅರಿಸ್ಟಾಟಲ್‌ನ ವಿವರಣೆಯ ಪ್ರಕಾರ ಟ್ರಾಜಿಡಿಯಲ್ಲಿ ಸಾವುನೋವುಗಳೇ ಇರಬೇಕಂತೇ ನಿಲ್ಲ. ಮುಖ್ಯ ಪಾತ್ರವು ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ಅನುಭವಿಸಬೇಕು. ಅದು ಸುಭಿಕ್ಷದಿಂದ ದುರ್ಗತಿಯತ್ತವೂ ಆಗಿರಬಹುದು, ಕೆಟ್ಟ ಪರಿಸ್ಥಿತಿಯಿಂದ ಒಳ್ಳೆಯದಕ್ಕೆ ಪರಿವರ್ತನೆಯೂ ಆಗಬಹುದು.

ಟ್ರಾಜಿಡಿಯ ಮುಖ್ಯ ಉದ್ದೇಶವೆಂದರೆ ಪ್ರೇಕ್ಷಕರನ್ನು ಚಕಿತಗೊಳಿಸುವುದು. ಅಲ್ಲಿ ಕರುಣಾ ರಸ, ಬೀಭತ್ಸರಸಗಳೇ ಹರಿಯಬೇಕೆಂದಿಲ್ಲ; ಬೆಚ್ಚಿ ಬೀಳಿಸುವ, ಅಚ್ಚರಿಗೊಳಿಸುವ ಪ್ರಕ್ರಿಯೆ ಬೇಕು ಅಷ್ಟೇ. ಮುಂದೆ ಕ್ರಿಸ್ತಶಕ 15-16ನೆಯ ಶತಮಾನಗಳಲ್ಲಿ, ಎಲಿಜಬೆತ್ ಯುಗದಲ್ಲಿ, ಏಕಮೇವಾದ್ವಿತೀಯ ವಿಲಿಯಂ ಷೇಕ್ಸ್‌ಪಿಯರ್ ಲೇಖನಿಯನ್ನೆತ್ತಿಕೊಂಡ ಸಮಯದಲ್ಲಿ ಟ್ರಾಜಿಡಿ ವಿವಿಧ ಆಯಾಮಗಳನ್ನು ಪಡೆದುಕೊಂಡಿತು.

ಪ್ರತೀಕಾರದ ಟ್ರಾಜಿಡಿ (ಉದಾಹರಣೆಗೆ ಷೇಕ್ಸ್‌ಪಿಯರನ ‘ಹ್ಯಾಮ್ಲೆಟ್’) ಜನಪ್ರಿಯವಾಯಿತು. ಸತ್ತ ಪ್ರಿಯಕರ/ಪ್ರಿಯತಮೆ ದೆವ್ವವಾಗಿ ಕಾಡುವುದು, ಮತಿಭ್ರಮಣೆಗೊಂಡ ಪಾತ್ರಗಳು, ಶ್ಮಶಾನದ ದೃಶ್ಯಗಳು ಟ್ರಾಜಿಡಿಯ ಸಾಮಾನ್ಯ ಅಂಶಗಳಾದವು. ಖಳಪಾತ್ರವು ರಕ್ತ ಹೀರಿದ ರೇನೇ ಟ್ರಾಜಿಡಿ ವೆರಿಗುಡ್ ಎಂಬ ಮಾನದಂಡ ಹುಟ್ಟಿಕೊಂಡಿತು.

ಸಾಹಿತಿಗಳು, ನಾಟಕಕಾರರು, ಚಲನಚಿತ್ರ ನಿರ್ಮಾಪಕರು ಟ್ರಾಜಿಡಿಯ ಹೊಸಹೊಸ ನಮೂನೆಗಳನ್ನು ತಂದರು. ದುರಂತ ನಾಯಕ (ಗುರುದತ್, ದಿಲೀಪ್‌ಕುಮಾರ್‌ರನ್ನು ನೆನಪಿಸಿಕೊಳ್ಳಿ), ದುರಂತ ನಾಯಕಿ (ಮೀನಾಕುಮಾರಿ, ಕನ್ನಡದಲ್ಲಿ ಕಲ್ಪನಾ) ಎಂದೇ ಗುರುತಿಸುವುದು ಶುರುವಾಯಿತು.

ಮತ್ತೆ ನಿತ್ಯಜೀವನದ ಘಟನೆಗಳನ್ನು ಟ್ರಾಜಿಡಿ ಅಥವಾ ದುರಂತ ಎಂದು ಬಣ್ಣಿಸುವುದೇಕೆ? ಅದು ಬಹುಶಃ ಅರಿಸ್ಟಾಟಲ್‌ನ ವ್ಯಾಖ್ಯೆಗೆ ಸರಿ ಹೋಗುವಂಥ ವಿಚಾರ. ಸಾವುನೋವು ಸಂಭವಿಸಬೇಕೆಂದಿಲ್ಲ, ಅಹಿತಕರ ಘಟನೆ ಏನೇ ನಡೆದರೂ ಅದು ದುರಂತ. ಕೆಲವರಿ ಗಂತೂ ಸಣ್ಣಪುಟ್ಟ ಸಂಗತಿಗಳೂ ದುರಂತವೆಂದೇ ದಾಖಲಾಗುತ್ತವೆ.

ಒಂದು ಲೆಕ್ಕದಲ್ಲಿ ಅವರೆಲ್ಲ ನಾರ್ಮಲ್ ಲೈಫ್ ಲೀಡ್ ಮಾಡುವವರು. ಮಾರಣಾಂತಿಕ ಅಪಾಯಗಳೇನೂ ಅವರ ಚಿಂತೆ-ಚಿಂತನೆಯ‌ ರಾಡಾರ್‌ನಲ್ಲಿ ಇರುವುದಿಲ್ಲ. ನನ್ನೊಬ್ಬ ಸ್ನೇಹಿತ ಭಾರತದಿಂದ ಹೊಸದಾಗಿ ಅಮೆರಿಕೆಗೆ ಬಂದವನು ಇಲ್ಲಿ ಡ್ರೈವಿಂಗ್ ಲೈಸನ್ಸ್ ಟೆಸ್ ನಲ್ಲಿ ಎರಡು ಸಲ ಫೇಲ್ ಆಗಿದ್ದನ್ನೇ ತನ್ನ ಜೀವನದ ಬಹುದೊಡ್ಡ ಟ್ರಾಜಿಡಿ ಎಂದು ಜೋಕ್ ಮಾಡುತ್ತಿದ್ದ; ಟೆಸ್ಟ್ ಮಾಡದೆಯೇ ಲೈಸೆನ್ಸ್ ಕೊಡುತ್ತಿದ್ದರೆ ಅವನಿಗೂ ಇತರರಿಗೂ ಎಂಥ ಘೋರ ಟ್ರಾಜಿಡಿ ಆಗುವ ಸಾಧ್ಯತೆಗಳಿದ್ದವೆನ್ನುವ ಪರಿವೆ ಅವನಿಗಿಲ್ಲ.

ಒಟ್ಟಿನಲ್ಲಿ ಈಗ ಪರಿಸ್ಥಿತಿ ಹೇಗಿದೆಯೆಂದರೆ ಪಿಂಕ್‌ಸ್ಲಿಪ್ ಪಡೆದು ಕೆಲಸ ಕಳಕೊಂಡರೆ ಅದೊಂದು ದುರಂತ. ಷೇರು ಮಾರುಕಟ್ಟೆಯಲ್ಲಿ ಸರ್ವಸ್ವ ಕೊಚ್ಚಿ ಹೋದರೆ ಅದೊಂದು ದುರಂತ. ನ್ಯಾಯಾಧೀಶರ ಮೇಲೆ ಮೇಲೆ ಬೂಟು ಎಸೆದದ್ದು ದುರಂತ. ಅದೆಲ್ಲ ಬಿಡಿ, ನರೇಂದ್ರ ಮೋದಿ ಪ್ರಧಾನಿಯಾದದ್ದೇ ಭಾರತ ದೇಶದ ಅತಿದೊಡ್ಡ ದುರಂತ ಎಂದು ಹಲುಬುವ ಕ್ಷುದ್ರಜೀವಿಗಳು ಭಾರತದಲ್ಲೇ ಅದೆಷ್ಟಿಲ್ಲ!

ವಿಪರ್ಯಾಸವೆಂದರೆ ಈ ಯಾವುದೇ ದುರಂತಗಳಿಗೂ ಆಡಿಗೂ ಏನೇನೂ ಸಂಬಂಧ ಇಲ್ಲ. ಹಾಗಾಗಿ, ಪ್ರಾಚೀನ ಗ್ರೀಸ್‌ನಲ್ಲಿ ಅಜಗೀತೆ (ಆಡಿನ ಹಾಡು) ಆಗಿದ್ದ ಟ್ರಾಜಿಡಿ ಇಂದು ತನ್ನ ನಿಜಾರ್ಥ ಕಳಕೊಂಡಿರುವುದೂ ಒಂದು ದುರಂತವೇ!

ಅಜಗೀತೆಯ ಕಥೆ ಅದಾದರೆ ಹಂಸಗೀತೆಯ ಕಥೆಯೂ ರೋಚಕವೇ. ಹಂಸಗೀತೆಯೆಂದರೆ ತರಾಸು ಬರೆದ ಕಾದಂಬರಿಯ, ಅದನ್ನಾಧರಿಸಿ ಜಿ.ವಿ. ಅಯ್ಯರ್ ನಿರ್ದೇಶಿಸಿದ ಚಲನಚಿತ್ರದ ಬಗ್ಗೆಯಲ್ಲ ಹೇಳ್ತಿರೋದು. ‘ಹಂಸಗೀತೆ’ ಎಂಬ ನುಡಿಗಟ್ಟು ಇಂಗ್ಲಿಷ್ ನ Swan Song ಎಂಬುದರ ಸುಸಂಸ್ಕೃತ ಅನುವಾದ ಅಷ್ಟೇ.

ಯಾರೇ ಒಬ್ಬ ಸಂಗೀತಗಾರನ ಜೀವನದಲ್ಲಿ ಕಟ್ಟಕಡೆಯ ಪ್ರಸ್ತುತಿಯನ್ನು Swan Song ಎನ್ನಲಾಗುತ್ತದೆ. ಉದಾಹರಣೆಗೆ ‘ಶಂಕರಾಭರಣಂ’ ಚಿತ್ರದಲ್ಲಿ ‘ದೊರಕುನಾ ಇಟುವಂಟಿ ಸೇವಾ...’ ಹಾಡು. ಆ ಚಿತ್ರದ ಕಥಾನಾಯಕ ಸಂಗೀತಗಾರ ಶಂಕರಶಾಸ್ತ್ರಿಗಳು ಅದನ್ನು ಹಾಡುತ್ತಿರುವಾಗಲೇ ಕೆಮ್ಮು ಬಂದು ಹಾಡಲಿಕ್ಕಾಗದೆ ಅರ್ಧದಲ್ಲಿ ನಿಲ್ಲಿಸಿ ಕೊನೆಗೆ ಅಸುನೀಗುತ್ತಾರೆ. ಆದ್ದರಿಂದ ಅದು Swan Song. ಅಷ್ಟಾಗಿ Swan (ಹಂಸ)ಗಳು ಹಾಡುವು ದಕ್ಕೆ ಪ್ರಖ್ಯಾತವೇ? ಪ್ರಖ್ಯಾತಿ ಬಿಡಿ, ಹಂಸಗಳು ಹಾಡುತ್ತವೆಯೆ? ಕೋಗಿಲೆ, ಮೈನಾ, ಗಿಳಿ ಮುಂತಾದವೆಲ್ಲ ಹಾಡುತ್ತವೆಂದು ಗೊತ್ತು; ನರಿಯಿಂದ ಪ್ರಲೋಭನೆಗೊಳಗಾದ ಕಾಗೆಯೂ ಹಾಡುತ್ತದೆಂದು ಬೇಕಿದ್ದರೆ ಒಪ್ಪಿಕೊಳ್ಳೋಣ; ಆದರೆ ಹಂಸ? ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಇದ್ದ ಒಂದು ನಂಬಿಕೆಯ ಪ್ರಕಾರ, ಹಂಸವು ಸಾಯುವ ಮೊದಲು ಒಂದು ಸುಂದರ ಗೀತೆಯನ್ನು ಹಾಡುತ್ತದಂತೆ.

ಇದು ಬಹುಮಟ್ಟಿಗೆ ಒಂದು ಕವಿಸಮಯವೇ ಹೊರತು ವೈಜ್ಞಾನಿಕವಾಗಿ ಸಂಪೂರ್ಣ ಸತ್ಯವಲ್ಲ. ಆದರೂ ‘ಹೂಪರ್ ಸ್ವಾನ್’ ಎಂಬ ಪ್ರಭೇದದ ಹಂಸಗಳು ತಮ್ಮ ಹೆಸರಿಗೆ ತಕ್ಕಂತೆ ವಿಚಿತ್ರವಾದ ಹಾರ್ನ್ ಶಬ್ದವನ್ನು ಮಾಡುವುದು ಹೌದು. ಅದರಲ್ಲೂ ಸಾಯುವ ಸಮಯದಲ್ಲಿ ಆ ವಿಶೇಷ ಶಬ್ದವನ್ನು ಮಾಡುತ್ತವೆಂದು ಗಮನಿಸಲಾಗಿದೆ.

ಇದಕ್ಕೆ ಕಾರಣ, ಆ ಹಂಸದ ಉಸಿರಿನ ಕೊಳವೆ ಬಹಳ ಉದ್ದವಾಗಿರುವುದು ಮತ್ತು ಸಾಯು ವಾಗ ಅದರ ಶ್ವಾಸಕೋಶದಿಂದ ಗಾಳಿ ಹೊರ ಬರುವ ವಿಧಾನವೆಂದು ಜೀವ ವಿಜ್ಞಾನಿಗಳ ಅಭಿಮತ. ಹಂಸವು ಮರಣಕಾಲದಲ್ಲಿ ಹೊರಡಿಸುವ ಶಬ್ದವನ್ನು ಕೆಲವರು ‘ಸಂಗೀತದಲ್ಲಿ ಹೊಸಬನು ಕ್ಲಾರಿನೆಟ್ ಊದಿದಂತೆ’ ಎಂದು ವರ್ಣಿಸಿದ್ದಿದೆ.

ಅದು ನಿಜವಾಗಿಯೂ ಸುಂದರ ಗೀತೆ ಅಲ್ಲ. ಸಾಯುವ ಸಮಯದಲ್ಲಿ ಹಂಸವು ಒಂದು ವಿಚಿತ್ರ ಶಬ್ದ ಮಾಡುತ್ತದೆನ್ನುವ ಸತ್ಯ ಅಷ್ಟೇ. ಹೂಪರ್ ಸ್ವಾನ್ ಸಾಮಾನ್ಯವಾಗಿ ಗ್ರೀಸ್ ದೇಶದಲ್ಲಿ ಕಂಡುಬರುವ ಹಂಸ. ಪ್ರಾಚೀನ ಗ್ರೀಸ್‌ನಲ್ಲಿ ಯಾರೋ ಈ ಹಂಸ ಸಾಯು ವಾಗಿನ ಶಬ್ದ ಕೇಳಿ, ಅದನ್ನು ಅತಿಶಯೋಕ್ತಿಯಾಗಿಸಿ, ಎಲ್ಲ ಹಂಸಗಳಿಗೂ ಅದೇ ಗುಣವಿದೆ ಎಂದು ಕಥೆ ಕಟ್ಟಿರಬಹುದು. ಅದೇ ‘ಹಂಸದ ಅಂತಿಮ ಗೀತೆ’ ಅಥವಾ ಹಂಸ ಗೀತೆ ಎಂದು ಜನಜನಿತವಾಯಿತು. ಹಂಸಗೀತೆ ಬಗ್ಗೆ ಒಂದು ಈಸೋಪನ ಕಥೆಯೂ ಇದೆ. ಇದರಲ್ಲಿ ಹಂಸ ಸಾಯುವುದಿಲ್ಲ, ಹಾಡಿನಿಂದಾಗಿಯೇ ಬದುಕುಳಿಯುತ್ತದೆ! ಕಥೆ ಹೀಗಿದೆ: “ಒಂದಾ ನೊಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದನು. ಅವನು ಮಾರುಕಟ್ಟೆಯಿಂದ ಒಂದು ಬಾತುಕೋಳಿ ಮತ್ತು ಒಂದು ಹಂಸವನ್ನು ಕೊಂಡು ತಂದನು.

ಬಾತುಕೋಳಿಯನ್ನು ತನ್ನ ಊಟಕ್ಕಾಗಿ ಸಾಕಿದನು; ಹಂಸವನ್ನು ಅದರ ಸುಂದರ ಗಾನ ಕ್ಕಾಗಿ ಉಳಿಸಿಕೊಂಡನು. ಒಂದು ದಿನ ಬಾತುಕೋಳಿಯನ್ನು ಕೊಲ್ಲುವ ಸಮಯ ಬಂತು. ಅಡುಗೆಯವನು ರಾತ್ರಿ ಕತ್ತಲಿನಲ್ಲಿ ಅದನ್ನು ಹಿಡಿಯಲು ಹೋದನು. ಕತ್ತಲೆ ಇದ್ದುದರಿಂದ ಯಾವುದು ಬಾತುಕೋಳಿ, ಯಾವುದು ಹಂಸ ಎಂದು ಗುರುತಿಸಲಾಗಲಿಲ್ಲ.

ತಪ್ಪಾಗಿ ಅವನು ಬಾತುಕೋಳಿಯ ಬದಲು ಹಂಸವನ್ನೇ ಹಿಡಿದನು. ಸಾವು ಸಮೀಪಿಸಿದೆ ಎಂದು ಭಾವಿಸಿದ ಹಂಸ, ಒಡನೆಯೇ ಹಾಡಲು ಆರಂಭಿಸಿತು. ಅದರ ಶಬ್ದದಿಂದ ಅದು ಹಂಸ ಎಂದು ತಿಳಿಯಿತು. ಹೀಗೆ ತನ್ನ ಮಧುರ ಗಾನದ ಮೂಲಕ ಹಂಸ ತನ್ನ ಜೀವವನ್ನು ಉಳಿಸಿಕೊಂಡಿತು". ಈಸೋಪನ ಈ ಕಥೆಯಂತೆಯೇ ಬೇರೆ ಪಾಶ್ಚಾತ್ಯ ತತ್ತ್ವಜ್ಞಾನಿ, ಸಾಹಿತಿ, ಕಲಾವಿದ ಘಟಾನುಘಟಿಗಳೂ Swan song ವಿಷಯವನ್ನು ಪ್ರಸ್ತಾವಿಸಿದ್ದಿದೆ.

ಪ್ಲೇಟೋ, ಚೌಸರ್, ಲಿಯೊನಾರ್ಡೊ ಡ ವಿನ್ಸಿ ಮಾತ್ರವಲ್ಲದೆ ಷೇಕ್ಸ್‌ಪಿಯರ್‌ನ ‘ದ ಮರ್ಚಂಟ್ ಆಫ್ ವೆನಿಸ್’ ನಾಟಕದಲ್ಲಿಯೂ Let music sound while he doth make his choice; then, if he lose, he makes a swan-like end, fading in music... ಎಂಬ ಸಂಭಾಷಣೆಯನ್ನು ಭಾಷಾತಜ್ಞರು ವಿಶೇಷವಾಗಿ ಗುರುತಿಸುತ್ತಾರೆ.

ಇವೆಲ್ಲದಕ್ಕೂ ಕಳಸಪ್ರಾಯವಾದ ಸಂಗತಿಯೊಂದಿದೆ. ಅದೇನೆಂದರೆ ಇಂಗ್ಲಿಷ್‌ನ Swan ಪದಮೂಲ ಮತ್ತು ಸಂಸ್ಕೃತದ ‘ಸ್ವನ’ (ಧ್ವನಿ ಅಥವಾ ಶಬ್ದ ಎಂಬ ಅರ್ಥ) ಪದಮೂಲ ಒಂದೇ ಆಗಿರುವುದು! ಅಂದರೆ ದುಃಖಾಂತ್ಯವಿರಲಿ, ಸುಖಾಂತ್ಯವಿರಲಿ, ಅಂತ್ಯದ ಆರಂಭ ವಾಗುವುದು Swan ಅಥವಾ ಸ್ವನದಿಂದಲೇ. ಅಷ್ಟೇಕೆ, ಈ ಜಗತ್ತೇ ಆರಂಭವಾದದ್ದು Big bang ಶಬ್ದದಿಂದ ಅಥವಾ ಪ್ರಣವನಾದದಿಂದ ತಾನೆ?

ಶ್ರೀವತ್ಸ ಜೋಶಿ

View all posts by this author