ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಮಹಾಮನೆ, ಅನುಭವ ಮಂಟಪಗಳ ಯಾವುದೇ ಕುರುಹು ಈವರೆಗೆ ಸಿಕ್ಕಿಲ್ಲವೇಕೆ ?

ಎಲ್ಲಿಯೂ ಸಾಧ್ಯವಾಗದ್ದು, ಮುಂದೆಯೂ ಸಾಧ್ಯವಾಗದ್ದು ಹನ್ನೆರಡನೇ ಶತಮಾನದಲ್ಲಿ ಹೇಗೆ ಏಕೆ ಸಾಧ್ಯವಾಯಿತು? ಅಂಥ ಮಹಾನ್ ಬದಲಾವಣೆಗೆ ಪ್ರಚೋದಿಸುವಂಥ ಬಲವಾದ ಸಾಮಾಜಿಕ ಪಲ್ಲಟ ಏನಾಗಿತ್ತು? ಎಂಬ ಪ್ರಶ್ನೆಗಳನ್ನು ಕೇಳಿಕೊಂಡಂಥ ಯಾವುದೇ ಸಂಶೋಧನೆಗಳನ್ನು ನಮ್ಮ ವಿಶ್ವವಿದ್ಯಾ ಲಯಗಳು ಮಾಡಿರುವುದನ್ನು ನಾನು ಕಂಡಿಲ್ಲ.

ಮಹಾಮನೆ, ಅನುಭವ ಮಂಟಪಗಳ ಯಾವುದೇ ಕುರುಹು ಈವರೆಗೆ ಸಿಕ್ಕಿಲ್ಲವೇಕೆ ?

ಅಂಕಣಕಾರ ರವಿ ಹಂಜ್

Profile Ashok Nayak Apr 15, 2025 7:46 AM

ಬಸವ ಮಂಟಪ (ಭಾಗ-೧)

ರವಿ ಹಂಜ್‌

ಹನ್ನೆರಡನೇ ಶತಮಾನದಲ್ಲಿ ಬಸವಣ್ಣ, ಶರಣರ ಚಳವಳಿ, ವಚನ ಸಾಹಿತ್ಯವು ಉಲ್ಕೆಯಂತೆ ಬೆಳಗಿ ನಂತರದ ಮುನ್ನೂರು ವರ್ಷದ ಅeತವಾಸ ಇದೆಲ್ಲವೂ ಸತ್ಯವೇ? ಶರಣರು ಇದ್ದರೆ? ಎಂಬೆಲ್ಲ ತಾರ್ಕಿಕ ಜಿಜ್ಞಾಸೆ ಮೂಡುತ್ತದೆ. ಏಕೆಂದರೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಮತ್ತು ಯಾವುದೇ ಕಾಲಘಟ್ಟದಲ್ಲಿ ಏಕಕಾಲಕ್ಕೆ ವಚನಕಾರರು ಉದ್ಭವಿಸಿದಂತೆ ಇಷ್ಟೊಂದು ಸಂಖ್ಯೆಯ ಕವಿಗಳಾಗಲಿ, ಸಾಹಿತಿಗಳಾಗಲಿ, ಧಾರ್ಮಿಕ ಚಿಂತಕರಾಗಲಿ ಉದಯಿಸಿದ ಪುರಾವೆಯಿಲ್ಲ. ಇದು ವಾಸ್ತವಿಕವಾಗಿ ಸಾಧ್ಯವೇ? ಜಗತ್ತಿನ ಯಾವುದೇ ಚಳವಳಿ, ಕ್ರಾಂತಿಗಳ ಇತಿಹಾಸವನ್ನು ಗಮನಿಸಿ ದಾಗ ಪ್ರವಾಹದೋಪಾದಿಯಲ್ಲಿ ಜನರು ಸಂಘಟನೆಯಾಗಿದ್ದಾರೆಯೇ ಹೊರತು ಸಾಹಿತ್ಯಿಕವಾಗಿ ಶರಣರ ವಚನದೋಪಾದಿಯ ರೀತಿ ಎಲ್ಲಿಯೂ ಸ್ಪಂದಿಸಿಲ್ಲ.

ಎಲ್ಲಿಯೂ ಸಾಧ್ಯವಾಗದ್ದು, ಮುಂದೆಯೂ ಸಾಧ್ಯವಾಗದ್ದು ಹನ್ನೆರಡನೇ ಶತಮಾನದಲ್ಲಿ ಹೇಗೆ ಏಕೆ ಸಾಧ್ಯವಾಯಿತು? ಅಂಥ ಮಹಾನ್ ಬದಲಾವಣೆಗೆ ಪ್ರಚೋದಿಸುವಂಥ ಬಲವಾದ ಸಾಮಾಜಿಕ ಪಲ್ಲಟ ಏನಾಗಿತ್ತು? ಎಂಬ ಪ್ರಶ್ನೆಗಳನ್ನು ಕೇಳಿಕೊಂಡಂಥ ಯಾವುದೇ ಸಂಶೋಧನೆಗಳನ್ನು ನಮ್ಮ ವಿಶ್ವವಿದ್ಯಾಲಯಗಳು ಮಾಡಿರುವುದನ್ನು ನಾನು ಕಂಡಿಲ್ಲ.

ಬಹುಪಾಲು ಸಂಶೋಧನೆಗಳು ಅನಾದಿ ಕಾಲದಿಂದ ಇದ್ದ ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಬಸವಣ್ಣನು ಮಾಡಿದ ಕ್ರಾಂತಿ ಎಂಬ ಪೂರ್ವಗ್ರಹದಿಂದಲೇ ಆರಂಭವಾಗುತ್ತವೆ. ಆದರೆ ಜಗತ್ತಿನ ಎಲ್ಲಾ ಕ್ರಾಂತಿಗಳಿಗೆ ಪ್ರಮುಖ ಕಾರಣ ಆಯಾಯ ಕಾಲಘಟ್ಟದಲ್ಲಿ ಉಂಟಾದ ರಾಜಕೀಯ, ಧಾರ್ಮಿಕ, ಅಥವಾ ಸಾಮಾಜಿಕ ಪಲ್ಲಟಗಳ ಸನ್ನಿವೇಶಗಳೇ. ಹಾಗಾಗಿ ಹುಟ್ಟಿನಿಂದ ಜಾತಿ ಎಂಬ ನೀತಿಯ ಸಮಾಜೋಧಾರ್ಮಿಕ ಪಲ್ಲಟವೇ ಈ ಚಳವಳಿಗೆ ಕಾರಣ.

ಇದನ್ನೂ ಓದಿ: Ravi Hunj Column: ಜನಕನ ಆಸ್ಥಾನವೂ, ಅನುಭವ ಮಂಟಪವೂ

ಆದರೆ ಇಷ್ಟೊಂದು ಸಂಖ್ಯೆಯ ವ್ಯಕ್ತಿಗಳು ಏಕಕಾಲಕ್ಕೆ ಏಕರೂಪದ ಸಾಹಿತ್ಯದಲ್ಲಿ ತೊಡಗಿಸಿ ಕೊಳ್ಳುವುದು ವಾಸ್ತವಿಕವಾಗಿ ಸಾಧ್ಯವೇ? ಎಂಬ ಪ್ರಶ್ನೆಯ ಹಿಂದೆ ವಚನಕಾರರು ಅಸ್ತಿತ್ವದಲ್ಲಿರದೆ ಇವರ ಹೆಸರುಗಳಲ್ಲಿ ಯಾರೋ ವಚನಗಳನ್ನು ರಚಿಸಿದರೆ ಎಂಬ ಹಿಂಜರಿಕೆಯ ಪ್ರಶ್ನೆಯಿದೆ.

ಇದು ತಾರ್ಕಿಕ ಪ್ರಶ್ನೆ ಸಹ. ಪ್ರೊ. ಕಲ್ಬುರ್ಗಿ ಮತ್ತವರ ಶಿಷ್ಯಂದಿರೇ ‘ಅಸಮಾನತೆಯ, ತುಳಿತ ಕ್ಕೊಳಗಾದ ಸಮುದಾಯದ ವಚನಕಾರರು ಅನಕ್ಷರಸ್ಥರಾಗಿದ್ದರು’ ಎನ್ನುತ್ತಾರೆ. ಹಾಗಿದ್ದಾಗ ವಚನಗಳನ್ನು ರಚಿಸುವಷ್ಟು ವಿದ್ಯೆಯನ್ನು ಈ ದಮನಿತರು ಎಲ್ಲಿಂದ ಗಳಿಸಿದರು? ಬಸವಣ್ಣನು ಯಾವುದೇ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿದ ಉದಾಹರಣೆಗಳೂ ಇಲ್ಲದಿದ್ದಾಗ ಇವರೆ ಹೇಗೆ ಸಾಕ್ಷರ ರಾದರು? ದಮನಿತ, ಶೋಷಿತ, ತುಳಿತ ಎನ್ನುವ ಎಲ್ಲಾ ತಕಧಿಮಿ ಭಾವುಕ ಪದಗಳೂ ನಮ್ಮ ಇತಿಹಾಸದ ವಾಸ್ತವವನ್ನು ಕೊಚ್ಚಿಹಾಕಿವೆ.

ಇದಕ್ಕೆ ವ್ಯಾಸ, ವಾಲ್ಮೀಕಿ, ಕಾಳಿದಾಸ ಮುಂತಾದ ಅನೇಕ ‘ದಮನಿತ, ಶೋಷಿತ, ತುಳಿತ’ ಪದ ಸೂಚಕ ವ್ಯಕ್ತಿಗಳೇ ಸಾಕ್ಷಿ! ಬೆಸ್ತ, ಬೇಡ, ಕುರಿಗಾಹಿಯಾಗಿದ್ದ ವ್ಯಕ್ತಿಗಳು ಹೇಗೆ ವಿದ್ಯೆಯನ್ನು ಕಲಿತರು ಎಂಬ ಪ್ರಶ್ನೆ ಈ ಭಾವುಕ ಪದಸಂಕಥನಗಳನ್ನು ಕೊಚ್ಚಿಹಾಕುತ್ತದೆ. ವೀರಶೈವ ಮಠಗಳು ವಿದ್ಯಾ ಕೇಂದ್ರಗಳಾಗಿರುವುದು ಇಪ್ಪತ್ತನೇ ಶತಮಾನದಲ್ಲಷ್ಟೇ ಅಲ್ಲ, ಅವು ಹನ್ನೆರಡನೇ ಶತಮಾನಕ್ಕೂ ಹಲವು ಶತಮಾನಗಳ ಮುಂಚಿನಿಂದಲೂ ವಿದ್ಯಾಕೇಂದ್ರಗಳೇ ಆಗಿದ್ದವು.

ಅವುಗಳನ್ನು ಸಂಶೋಧನ ಪರಿಭಾಷೆಯಲ್ಲಿ ‘ತತ್ವಜ್ಞಾನದ ಶಾಲೆಗಳು’ ಎಂದೇ ಗುರುತಿಸುತ್ತಾರೆ. ಅಲ್ಲಮ ಪ್ರಭು ಸಹ ಬಳ್ಳಿಗಾವಿಯ ಇಂಥ ಕಾಳಾಮುಖ ವೀರಶೈವ ಮಠದಲ್ಲಿಯೇ ವಿದ್ಯಾರ್ಜನೆ ಮಾಡಿದ್ದುದು ಎಂದು ಪುರಾಣಗಳು ತಿಳಿಸುತ್ತವೆ. ಹಾಗಾಗಿ ಎಲ್ಲಾ ವಚನಕಾರರೂ ಸ್ಥಳೀಯ ಮಠಗಳ ಮೂಲಕವೇ ಸಾಕ್ಷರರಾಗಿದ್ದರು ಎನ್ನಬಹುದು. ಮೇಲಾಗಿ ಬಸವಣ್ಣ ಈ ‘ದಮನಿತ, ಶೋಷಿತ, ತುಳಿತ’ ವರ್ಗದ ಜನರಿಗೆ ಅಕ್ಷರ ಕಲಿಸಿದ ಯಾವುದೇ ಉದಾಹರಣೆಯಿಲ್ಲ.

ಹಾಗಾಗಿ ವೀರಶೈವ ಮಠಗಳಿಂದ ಕೇವಲ ವಿದ್ಯೆಯಲ್ಲದೆ ವೀರಶೈವ ತತ್ವದ ಕುರಿತು ಸಹ eನವನ್ನು ಪಡೆದುಕೊಂಡಿದ್ದರು. ಇಲ್ಲದಿದ್ದರೆ ಇಂಥ ಪ್ರೌಢಿಮೆಯ ವಚನಗಳ ರಚನೆ ಸಾಧ್ಯವಿರುತ್ತಿರಲಿಲ್ಲ. ಒಂದು ವೇಳೆ ವಚನಗಳನ್ನು ಯಾರೋ ಬೇರೆಯವರು ರಚಿಸಿದ್ದರೆ ಅವುಗಳನ್ನು ಅeತವಾಗಿದ್ದವರ ಹೆಸರುಗಳಲ್ಲಿ ರಚಿಸುವ ಅನಿವಾರ್ಯತೆ ಇರಲಿಲ್ಲ. ತಮ್ಮ ಪೂರ್ವಜ ವಚನಕಾರರ ಇತಿಹಾಸವನ್ನು ಮತ್ತು ವಚನಗಳನ್ನು ವೀರಶೈವ ಮಠಗಳಲ್ಲಿ ಮೌಖಿಕವಾಗಿ ಬೋಧಿಸುತ್ತ ಕಾಪಾಡಿಕೊಂಡು ಬಂದ ಕಾರಣವೇ ಅವುಗಳನ್ನು ಹದಿನೈದನೇ ಶತಮಾನದ ಕೊನೆಯಲ್ಲಿ ನೂರೊಂದು ವಿರಕ್ತರೂ ಸೇರಿ ವೀರಶೈವ ಜಂಗಮರು, ಲಿಂಗಿ ಬ್ರಾಹ್ಮಣರು ಕ್ಷಿಪ್ರವಾಗಿ ಲಿಖಿತ ರೂಪಕ್ಕೆ ಇಳಿಸಿದರು.

ವೀರಶೈವ ಗುರುವಿರಕ್ತ ಮಠಗಳಲ್ಲಿ ಇವುಗಳನ್ನು ಮೌಖಿಕವಾಗಿ ಉಳಿಸದಿದ್ದರೆ ವಚನಗಳು ಎಂದೋ ನಿರ್ನಾಮವಾಗುತ್ತಿದ್ದವು. ಇಂದಿನ ಸಂಶೋಧಕರು ಮುನ್ನೂರು ವರ್ಷಗಳ ಕಾಲ ಶರಣರು, ವಚನಗಳು ಅಜ್ಞಾತದಲ್ಲಿದ್ದವು ಎಂದು ಪ್ರತಿಪಾದಿಸುವುದೇ ಸುಳ್ಳು!

ಅಲ್ಲಮ, ಚೆನ್ನಬಸವೇಶ್ವರ, ಸಿದ್ಧರಾಮರ ನಂತರದಿಂದ ಎಡೆಯೂರು ಸಿದ್ದಲಿಂಗೇಶ್ವರರ ನಡುವೆ ಆಗಿಹೋದ ಶೂನ್ಯ ಪೀಠಾಧ್ಯಕ್ಷರು ಅನಾದಿ ಗಣನಾಥ, ಆದಿ ಗಣೇಶ್ವರ, ನಿರ್ಮಾಯ ಗಣೇಶ್ವರ, ನಿರಂಜನ ಸ್ವಾಮಿ, ಜ್ಞಾನಾನಂದ, ಆತ್ಮ ಗಣವರ, ಅಧ್ಯಾತ್ಮ ಗಣನಾಥ, ರುದ್ರಮುನಿ, ಬಸವ ಪ್ರಭು, ಆದಿಲಿಂಗ, ಚನ್ನವೀರ, ಗೋಸಲ ಸಿದ್ದೇಶ್ವರ, ಶಂಕರಾಚಾರ್ಯ, ದಿವ್ಯಲಿಂಗೇಶ್ವರ ಮತ್ತು ಚೆನ್ನಬಸವ ರಾಜೇಂದ್ರರು.

ಈ ಎಲ್ಲಾ ಪೀಠಾಧ್ಯಕ್ಷರೂ ವಚನಗಳ ಮೌಖಿಕ ಬೋಧನೆಯನ್ನು ನಿರಂತರವಾಗಿ ವೀರಶೈವ ಮಠಗಳಲ್ಲಿ ಜೀವಂತವಿರಿಸಿದ್ದರು. ವಚನ ಎನ್ನುವ ಪದದ ಅರ್ಥವೇ ವಾಚನ ಎಂಬ ಹಿನ್ನೆಲೆಯಲ್ಲಿ ಇವುಗಳನ್ನು ಬರಹಕ್ಕಿಳಿಸದೆ ಮೌಖಿಕವಾಗಿಯೇ ಇರಿಸಿರಬಹುದು. ಆದರೆ ಯಾವಾಗ ಕಾಳಾಮುಖ ವೀರಶೈವ ಕ್ರಿಯಾಶಕ್ತಿ ಮುನಿಯ ಮಾರ್ಗದರ್ಶನದಲ್ಲಿ ಸ್ಥಾಪಿತಗೊಂಡ ಕರ್ನಾಟಕ ಸಾಮ್ರಾಜ್ಯ (ವಿಜಯ ನಗರ)ದ ಶೈವ ರಾಜರು ಅನ್ಯಪಂಥವನ್ನು ಅಪ್ಪಿಕೊಂಡರೋ ಆಗ ಅವರನ್ನು ಮತ್ತೆ ವೀರಶೈವಕ್ಕೆ ತರುವ ಉದ್ದೇಶದಿಂದಲೋ ಅಥವಾ ಇನ್ಯಾವುದೋ ಬಲವಾದ ಪ್ರೇರಣೆಯಿಂದಲೋ ಮೌಖಿಕ ವಚನಗಳು ಸಮರೋಪಾದಿಯಾಗಿ ಲಿಖಿತ ರೂಪ ಪಡೆದವು.

ತಮ್ಮ ಪೂರ್ವಜ ವಚನಕಾರರ ಮೇಲಿನ ನಿಷ್ಠೆಯ ಕಾರಣವೇ ಇವೆಲ್ಲವೂ ಯಥಾವತ್ತಾಗಿ ದಾಖಲಾಗಿವೆ ಎನ್ನಬಹುದು. ಬಹುಪಾಲು ಶರಣರ ಕುರಿತು ಯಾವುದೇ ಐತಿಹಾಸಿಕ ಪುರಾವೆಗಳು ಇರದಿದ್ದರೂ ಬಸವಣ್ಣನ ಕುರಿತಿರುವ ಶಿಲಾಶಾಸನಗಳು ಮತ್ತು ವಚನಗಳ ದಾಖಲೆಯೇ ಸದ್ಯಕ್ಕೆ ಇವರಿದ್ದರು ಎನ್ನಲು ಆಧಾರವಾಗಿದೆ. ಉಳಿದಂತೆ ಶೂನ್ಯ ಸಂಪಾದನೆ ಕೇವಲ ಸೃಜನಶೀಲ ಸಂಕಥನ ಮಾತ್ರ. ಇಂಥ ವಾಸ್ತವಿಕ ತರ್ಕವನ್ನು ಬಿಟ್ಟು ವಚನ ಚಳವಳಿ ಅಜ್ಞಾತದಲ್ಲಿತ್ತು, ಸಿದ್ಧಲಿಂಗೇಶ್ವರ ಮತ್ತು ನೂರೊಂದು ವಿರಕ್ತರು, ಲಿಂಗಿ ಬ್ರಾಹ್ಮಣರು ಸೇರಿಕೊಂಡು ವೀರಶೈವ ಪದ, ಸಂಸ್ಕೃತ ಶ್ಲೋಕ, ವೇದಾಗಮಗಳ ಉದ್ಘೋಷಗಳನ್ನು ವಚನಗಳಲ್ಲಿ ತುರುಕಿದರು ಎಂಬ ಸಂಕಥನದ ಸಂಶೋಧನೆಗಳನ್ನು ಯಾರು ಏಕೆ ತುರುಕಿದರು ಎಂಬುದು ಇಂದಿನ ಸಂಶೋಧನಾ ರ್ಹ ತುರ್ತು.

ಹಾಗಾಗಿಯೇ ತರ್ಕದಿಂದ ಈ ಸಂಕಥನಗಳನ್ನು ಪ್ರಶ್ನಿಸಿದವರ ಮೇಲೆ ಎಲ್ಲಾ ರೀತಿಯ ತಾಲಿ ಬಾನಿತನವನ್ನು ಬಸವಭಂಜಕ ಲಿಂಗಾಹತಿಗಳು ತೋರುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಇವರ ಈ ನಡೆಯೇ ಅವರ ಸಂಕಥನಗಳು ಪೊಳ್ಳು ಎನ್ನುತ್ತವೆ. ಇನ್ನು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೇ ರಾಷ್ಟ್ರವಿರೋಧಿ ಚಟುವಟಿಕೆಗಳ ಸೂಕ್ಷ್ಮ ಸಿಕ್ಕರೂ ಬಂಧಿಸುವ ಕಾನೂನುಗಳಿರುವಾಗ ರಾಜಪ್ರಭುತ್ವದ ಕಲ್ಯಾಣದಲ್ಲಿ ಬಸವಣ್ಣನು ಇಷ್ಟೆ ಜನರನ್ನು ಕ್ರೋಡೀಕರಿಸಿ ಕ್ರಾಂತಿಗೆ ಅನುವಾದದ್ದು ನಿಜವೇ? ನಿಜವಾದರೆ ಅವನ ಉದ್ದೇಶ ಏನಾಗಿತ್ತು? ಖುದ್ದು ಅಧಿಕಾರಕ್ಕೇರುವ ಮಹತ್ವಾಕಾಂಕ್ಷೆ ಇದ್ದೀತೆ? ಬಸವಣ್ಣನು ಜನರನ್ನು ಕ್ರೋಡೀಕರಿಸುತ್ತಿದ್ದುದರ ಪರಿಣಾಮವಾಗಿಯೇ ಬಿಜ್ಜಳ-ಬಸವ ಸಂಘರ್ಷ ಏರ್ಪಟ್ಟು, ಬಿಜ್ಜಳನು ಕೊಲೆಯಾಗಿ ಬಸವಣ್ಣ ಆತ್ಮಹತ್ಯೆ ಮಾಡಿಕೊಂಡದ್ದು ಎನ್ನಬಹುದು.

ಮೇಲ್ನೋಟಕ್ಕೆ ಧಾರ್ಮಿಕ ಸಂಘರ್ಷ ಬಿಟ್ಟರೆ ಇನ್ಯಾವ ರಾಜಕೀಯ ಸಂಘರ್ಷವೂ ಕಲ್ಯಾಣ ಕ್ರಾಂತಿಯಲ್ಲಿ ಕಾಣಬರುವುದಿಲ್ಲ. ಆದರೆ ಕೇವಲ ಪಂಥೀಯ ಧಾರ್ಮಿಕ ಸಂಘರ್ಷವು ಓರ್ವ ರಾಜನನ್ನು ಕೊಲ್ಲುವ ಅಥವಾ ಶರಣರನ್ನು ನಿರ್ನಾಮ ಮಾಡುವ ಹಂತಕ್ಕೆ ಹೋಗುತ್ತದೆ ಎನ್ನುವುದು ಚಿಂತನಾರ್ಹ. ಸಾಮಾನ್ಯವಾಗಿ ಈ ಧರ್ಮ ಸಂಘರ್ಷಗಳು ಪರಸ್ಪರ ಅನ್ಯಪಂಥೀಯರ ನಡುವೆ ನಡೆದಿವೆಯೇ ಹೊರತು ಪ್ರಭುತ್ವದ ನಡುವೆ ಇಲ್ಲ.

ಹಾಗಾಗಿ ’ What if ಹೀಗಿದ್ದರೆ ಹೇಗೆ’ ಎಂಬ ಸಂಶೋಧನಾ ನೆಲೆಯಲ್ಲಿ ತರ್ಕಕ್ಕೊಡ್ಡಿದಾಗ- ಬಸವಣ್ಣ ಒಬ್ಬ ಮಹತ್ವಾಕಾಂಕ್ಷಿ. ಬಿಜ್ಜಳನನ್ನು ಮಂತ್ರಪರವಶನನ್ನಾಗಿಸಿ ಆಯಕಟ್ಟಿನ ಜಾಗಗಳಲ್ಲಿ ತನ್ನವರನ್ನು ಕೂರಿಸಿದ್ದ ಬಸವಣ್ಣನು ಬಿಜ್ಜಳನು ಯಾವಾಗ ವಾಸ್ತವವನ್ನು ಗ್ರಹಿಸಲಾರಂಭಿಸಿ ದನೋ ಅಥವಾ ಬಸವಣ್ಣನನ್ನು ವಿರೋಧಿಸಿದನೋ ಆಗ ಬಿಜ್ಜಳನನ್ನು ಕೊಂದು ಖುದ್ದು ಅಧಿಕಾರ ಹಿಡಿಯುವ ರಾಜಕೀಯ ಧ್ರುವೀಕರಣದ ಸೆಜ್ಜೆ ಸಿದ್ಧವಾಗಿತ್ತು.

ಅದಕ್ಕೆ ಪೂರಕವಾಗಿ ಭಕ್ತಿಪಂಥದ ಸಿದ್ಧ ಮಾದರಿಯ ಸೂತ್ರ, ಅಸಮಾನತೆಯ ಸಾಮಾಜಿಕ ಪರಿಸ್ಥಿತಿಗಳ ವಾತಾವರಣವಿದ್ದಿತು. ಈ ಎ ಸನ್ನಿವೇಶಗಳು ಬಸವಣ್ಣನ ಮಹತ್ವಾಕಾಂಕ್ಷೆಗೆ ಆಸರೆಯೂ ಆಗಿದ್ದವು. ಹಾಗಾಗಿಯೇ ಖುದ್ದು ವೀರಮಾಹೇಶ್ವರನಾಗಿದ್ದ ಅವನು ಶೈವವನ್ನು ಸದೃಢಗೊಳಿಸಿ ವಿಸ್ತರಿಸಲು ಸದಾ ಸಿದ್ಧರಿದ್ದ ಕಾಳಾಮುಖಿ ವೀರಶೈವ ವೀರಮಾಹೇಶ್ವರರನ್ನು ಜಂಗಮ-ದಾಸೋಹಗಳ ಕಾರಣವೊಡ್ಡಿ ಎಡೆಯಿಂದ ಕಲ್ಯಾಣಕ್ಕೆ ಬರಮಾಡಿಕೊಂಡು ಶಕ್ತಿಯನ್ನು ಕ್ರೋಡೀಕರಿಸುತ್ತಿದ್ದನು.

ಬಸವಣ್ಣನ ಮಹತ್ವಾಕಾಂಕ್ಷೆಯ ಉದ್ದೇಶ ಇತರೆ ಭಕ್ತಿಪಂಥಗಳಂತೆ ಕೇವಲ ಅಸಮಾನತೆಯನ್ನು ತೊಡೆದು ಅಧ್ಯಾತ್ಮವನ್ನು ಪಸರಿಸುವ ಭಕ್ತಿ ಚಿಂತನೆಯಿಂದಲ್ಲ ಎಂಬುದು ಬಸವರಾಜ ರಗಳೆ, ಬಸವ ಪುರಾಣ, ಮೌಖಿಕ ಇತಿಹಾಸ, ಬಿಜ್ಜಳನ ಕೊಲೆಯಲ್ಲದೆ ವಚನಗಳಿಂದಲೂ ಸ್ಪಷ್ಟವಾಗುತ್ತದೆ. ಅಲ್ಲದೆ, ಇಂಥ ಕ್ರಾಂತಿ ಮತ್ತಿನ್ಯಾವ ಭಕ್ತಿಪಂಥದ ಚಳವಳಿಯಲ್ಲಿಯೂ ನಡೆದಿಲ್ಲ. ಆದರೆ ಈ ಮಹತ್ವಾಕಾಂಕ್ಷೆಗೆ ‘ಹುಟ್ಟಿನಿಂದ ಜಾತಿ’ ಮತ್ತದರ ಚಿಗುರು ಕವಲು ನಿಯಮಗಳು ಬರಸಿಡಿಲಿನಂತೆ ಅಪ್ಪಳಿಸಿಬಿಟ್ಟವು.

ಉತ್ತರದಿಂದ ಸಾಮಾಜಿಕವಾಗಿ ಜಾರಿಗೊಳ್ಳುತ್ತ ಬಂದ ಈ ನಿಯಮಗಳನ್ನು ವೀರಶೈವ ಮತ್ತದರ ಆದ್ಯರು ಗಟ್ಟಿಯಾಗಿ ಅಪ್ಪಿಕೊಂಡುಬಿಟ್ಟರು. ಅಲ್ಲಿಯವರೆಗೆ ಒಗ್ಗಟ್ಟಾಗಿ ಜತೆಗೂಡಿ ಹೊರಗಿನ ವಿರೋಧವನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದ ಬಸವಣ್ಣ ಮತ್ತವನ ಶರಣ ಸಂಘವನ್ನು ಒಳಗಿನ ಈ ಹೊಡೆತ ಕಂಗೆಡಿಸಿಬಿಟ್ಟಿತು.

ಆದ್ಯರ ವಿರುದ್ಧ ಬಂಡೆದ್ದು ಈ ನವನಿಯಮಗಳ ವಿರುದ್ಧ ಹೋರಾಡಿದರೂ ಹಿನ್ನೆಡೆಯನ್ನನು ಭವಿಸುತ್ತಿದ್ದ ಬಸವಣ್ಣನನ್ನು ಹತ್ತಿಕ್ಕಲು ಇದೇ ಸಮಯವೆಂದು ಬಿಜ್ಜಳನ ಮಗ ಸೋವೇಶನೂ ಮುಂದಾದನು. ಒಟ್ಟಿನಲ್ಲಿ ಹರಳಯ್ಯ-ಮಧುವಯ್ಯನ ಮಕ್ಕಳ ಜಾತಕಗಳು ಹೊಂದಿದ್ದವೋ ಇಲ್ಲವೋ ರಾಜ-ರಾಜಗುರು-ಧರ್ಮಕಾರಣ ಶಕ್ತಿಗಳ ನಕ್ಷತ್ರಗಳು ಧ್ರುವೀಕರಣಗೊಂಡು ಹರಳಯ್ಯ-ಮಧುವಯ್ಯನ ಮಕ್ಕಳ ಕಲ್ಯಾಣವು ಕಲ್ಯಾಣದ ಕ್ರಾಂತಿಯನ್ನು ಪರಿಸಮಾಪ್ತಿಗೊಳಿಸಿತು.

ಜಗತ್ತಿನ ಬಹುಪಾಲು ಮಹತ್ವಾಕಾಂಕ್ಷಿಗಳು ಮತ್ತು ಕ್ರಾಂತಿಕಾರಿಗಳು ತಮ್ಮ ಆಕಾಂಕ್ಷೆಗಳು ಈಡೇರ ದಿದ್ದಾಗ, ಕ್ರಾಂತಿಗಳಲ್ಲಿ ಸೋತಾಗ ಕಡೆಗೆ ಶರಣಾದದ್ದು ಆತ್ಮಹತ್ಯೆಗೇನೆ! ಬಸವಣ್ಣನೂ ಅದಕ್ಕೆ ಹೊರತಾಗಿರಲಿಲ್ಲ. ಜೈನರ ಬಿಜ್ಜಳರಾಯ ಚರಿತದಲ್ಲಿ ನೇರವಾಗಿ ಹೇಳಿದ್ದುದನ್ನು ಬಸವಪುರಾಣವು ಸಂಗಮನಲ್ಲಿ ಐಕ್ಯನಾದನು ಎಂದು ಸೂಚ್ಯವಾಗಿ ಹೇಳಿದೆಯಷ್ಟೆ. ಚೈನಾದ ಮಿಂಗ್ ವಂಶದ ಶಾಂಗ್ಝೆನ್ ಚಕ್ರವರ್ತಿ, ಜರ್ಮನಿಯ ಹಿಟ್ಲರ್, ಚಿಲಿಯ ಹೋಸೆ ಮ್ಯಾನುಯಲ್ ಬಲ್ಮಸೀಡ ಮತ್ತು ಸಾಲ್ವಡೋರ್ ಅಲ್ಲಂಡೆ, ಬ್ರೆಜಿಲ್ಲಿನ ಗೆಟ್ಯೂಲಿಯೋ ವರ್ಗಾಸ್, ಜಾರ್ಜಿಯಾದ ಜ್ವಿಯಾದ್ ಗಾಮಸ್ವಕೂರ್ದಿಯ ಹೀಗೆ ಆತ್ಮಹತ್ಯೆ ಮಾಡಿಕೊಂಡ ಮಹತ್ವಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತದೆ.

ಅಷ್ಟೇ ಅಲ್ಲದೆ ಈ ಪಟ್ಟಿಯು ಕ್ರಿಸ್ತಪೂರ್ವ ಹನ್ನೊಂದನೇ ಶತಮಾನದ ಚೀನಿ ಶಾಂಗ್ ವಂಶದ ಚಕ್ರವರ್ತಿ ಶೂ, ಒಂಬತ್ತನೇ ಶತಮಾನದ ಇಸ್ರೇಲಿನ ದೊರೆಯಾದ ಜಿಮ್ರಿಯಿಂದ ಕ್ರಿಸ್ತಶಕ 2019ರ ಇಸ್ಲಾಮಿಕ್ ಸ್ಟೇಟಿನ ಮುಖ್ಯಸ್ಥನಾದ ಅಬು ಬಕ್ರ್ ಅಲ-ಬಗ್ದಾದಿ ಮತ್ತು ಪೆರು ದೇಶದ ಮುಖ್ಯಸ್ಥ ನಾಗಿದ್ದ ಅಲನ್ ಗಾರ್ಸಿಯಾ ಪೆರೇಜ್‌ವರೆಗೆ ವಿಶ್ವವ್ಯಾಪಿಯಾಗಿ ಕಾಲಾತೀತವಾಗಿ ಮಹತ್ವಾಕಾಂಕ್ಷಿ ಗಳ ಮತ್ತು ಕ್ರಾಂತಿಕಾರಿಗಳ ‘ಮರಣವೇ ಮಹಾನವಮಿ’ ಎಂಬ ಏಕಮುಖಿ ಮನಸ್ಥಿತಿಯ ಜಾಗತಿಕ ಚಿತ್ರಣವನ್ನು ‘ಶರಣರ ಸಾವನ್ನು ಮರಣದಲ್ಲಿ ಕಾಣು’ ಎಂಬಂತೆ ತೆರೆದಿಡುತ್ತದೆ.

ಈ ತಾರ್ಕಿಕ ಆಯಾಮದಲ್ಲಿ ಬಸವಣ್ಣನ ಚರಿತ್ರೆಯನ್ನು ಏಕೆ ಯಾವ ಸಂಶೋಧನೆಗಳೂ ನೋಡಿಲ್ಲ ಎಂಬುದು ನಮ್ಮ ಸಾಮಾಜಿಕ ಸಾಂಸ್ಕೃತಿಕ ಸಂಶೋಧನೆಗಳು ಎಷ್ಟೊಂದು ಪೂರ್ವಗ್ರಹಗಳಿಂದ ಕೂಡಿವೆ ಎಂಬ ಒಂದು ಹೊಳಹನ್ನು ನೀಡುತ್ತದೆ. ಇನ್ನು ಅನುಭವ ಮಂಟಪ, ಬಸವ ಮಹಾ ಮನೆಗಳು ಬಸವ ಭಕ್ತರು ಹೇಳುವಷ್ಟು ವಿಶಾಲವಾಗಿ ವೈಭವೋಪೇತವಾಗಿ ಇದ್ದವೇ? ಮಹಾಮನೆ ಎನ್ನುವ ಪದವೇ ಅಲೌಕಿಕ ಸ್ವರೂಪ.

ಇದನ್ನು ಲೌಕಿಕವಾಗಿ ಇದ್ದಿತು ಎನ್ನುವುದು ತಪ್ಪು. ನಿತ್ಯವೂ ಒಂದಿಂದು ಕಡೆ ಮನೆ ಪಾಯ ಹಾಕಲು ಅಗೆಯುವಾಗ ಪುರಾತನ ಕಟ್ಟಡಗಳ ಪಳೆಯುಳಿಕೆ ಬಿಡಿ, ರಾಖಿಗಡಿಯಂಥ ಕ್ರಿಸ್ತಪೂರ್ವ ಶತಮಾನಗಳ ಮಡಕೆ ಚೂರಿನಿಂದ ಹಿಡಿದು ಮೂಳೆಚೂರುಗಳು ಸಿಕ್ಕದ್ದೂ ಸುದ್ದಿಯಾಗುತ್ತಿರುವಾಗ ಇಷ್ಟೊಂದು ಮಹತ್ವದ ಕಲ್ಯಾಣದ ಬಸವಣ್ಣ, ಶರಣ, ಮಹಾಮನೆ, ಅನುಭವ ಮಂಟಪ ಇತ್ಯಾದಿ ಯಾವುದೇ ಕುರುಹು ಏಕೆ ಈವರೆಗೆ ಸಿಕ್ಕಿಲ್ಲ? ಎಂಬ ಪ್ರಶ್ನೆಯೇ ಇದಕ್ಕೆ ಉತ್ತರ.

ಅಲ್ಲದೆ ದರ್ಗಾ ಆಗಿರುವ ಕಟ್ಟಡವೇ ಅನುಭವ ಮಂಟಪ ಎನ್ನುವುದೂ ಆಧಾರ ರಹಿತ. ಹಾಗಾಗಿಯೇ ಬಸವ ಭಂಜಕರು ಯಾವ ಸಾಕ್ಷಿ, ಪುರಾವೆ ಹುಡುಕದೆ ಒಂಬೈನೂರು ಕೋಟಿ ರು. ವೆಚ್ಚದಲ್ಲಿ ಜಂಗಮವನ್ನು ನಿಶ್ಶೂನ್ಯಗೊಳಿಸಿ ಅನುಭವ ಮಂಟಪ ಸಹಿತದ ಮಹಾಮನೆ ಎಂಬ ಸ್ಥಾವರವನ್ನು ಕಟ್ಟಲು ಹೊರಟಿರುವುದು. ಈಗ ಜ್ವಲಂತವಾಗಿರುವ ವೀರಶೈವ ಲಿಂಗಾಯತ ನಿಜಕ್ಕೂ ಬೇರೆಯೇ?

ಬೇರೆ ಎನ್ನುವುದು ಒಂದು ಭಂಜಕ ಹುನ್ನಾರ. ಶಿಕ್ಷಣ ಕ್ಷೇತ್ರದ ಮೇಲೆ ಮಾರ್ಕ್ಸ್‌ವಾದದ ಹಿಡಿತ ದಿಂದಾಗಿ ಧಾರ್ಮಿಕ ವಿಚಾರಧಾರೆ, ಧಾರ್ಮಿಕ ಸಂಘಟನೆಗಳು, ಅಧ್ಯಾತ್ಮದ ವಿಷಯಗಳ ಗಂಭೀರ ವಾದ ಅಧ್ಯಯನ ಹಾಗೂ ಸಂಶೋಧನಾ ಕಾರ್ಯಗಳು ಭಾರತ ಸ್ವಾತಂತ್ರ್ಯದೊಂದಿಗೆ ನಿಂತು ಹೋದವು. ಹಿಂದೆ ಪರಂಪರಾಗತವಾಗಿ ಭಾರತೀಯ ಬೇರು, ಸಂಸ್ಕೃತಿ, ಸಂಪ್ರದಾಯ ಮತ-ಧರ್ಮಗಳ ಬೋಧೆ ಮತ್ತು ಸಂಸ್ಕಾರ ಸಮಾಜದ ಹಿರಿಯರಿಂದ ಸಿಗುತ್ತಿತ್ತು.

ಶತಮಾನಗಳ ವಸಾಹತುಶಾಹಿ ಆಡಳಿತ ಮತ್ತು ಆಧುನಿಕ ಜೀವನಶೈಲಿಯ ಮಾರ್ಪಿನಿಂದ ಈ ಜ್ಞಾನಪ್ರಸಾರದಲ್ಲಿ ತಡೆಯುಂಟಾಯಿತು. ವಸಾಹತುಶಾಹಿ ಬ್ರಿಟಿಷರು ಅಧ್ಯಯನ ಮತ್ತು ಸಂಶೋಧನೆಯ ಶಿಸ್ತನ್ನು ಕಲಿಸಿ ಒಂದು ಭದ್ರ ಬುನಾದಿ ಹಾಕಿಕೊಟ್ಟಿದ್ದರೂ ಸ್ವಾತಂತ್ರ್ಯಾನಂತರ ನಮ್ಮ ಶೈಕ್ಷಣಿಕ ಕ್ಷೇತ್ರ ಅತಂತ್ರವಾಯಿತು. ವೀರಶೈವ-ಲಿಂಗಾಯತ ಸಂಪ್ರದಾಯದಲ್ಲೂ ಮಾರ್ಕ್ಸ್‌ ವಾದದ ಹಿಡಿತದ ಧಾರ್ಮಿಕ ವಿಚಾರಧಾರೆ ಆವರಿಸಿ ಸತ್ಯವನ್ನು ಮಂಕಾಗಿಸಿತು. ಕೆಲವೇ ಕೆಲವು ಜನಪ್ರಿಯ ವಚನಗಳನ್ನು ಕಮ್ಯುನಿ ಸಿದ್ಧಾಂತದ ಸಂದೇಶಗಳಂತೆ ಈಗಿನ ಸಂಶೋಧಕರು ಅರ್ಥೈಸಿಬಿಟ್ಟಿದ್ದಾರೆ!

ಇದರ ಪರಿಣಾಮವಾಗಿ ವೀರಶೈವ ಲಿಂಗಾಯತ ಸಿದ್ಧಾಂತವನ್ನು ಕೇವಲ ಸಮಾಜವಾದವನ್ನು ಪ್ರತಿಪಾದಿಸುವ ಕಮ್ಯುನಿ ತತ್ವಕ್ಕೆ ತಳುಕು ಹಾಕಿ ಬೇರೆಯದೇ ವ್ಯಾಖ್ಯಾನವನ್ನು ಕೊಡಲಾಗುತ್ತಿದೆ.

ತತ್ಫಲವಾಗಿ ಅದರಲ್ಲಿರುವ ಜಿಜ್ಞಾಸೆ, ಧಾರ್ಮಿಕ, ತಾತ್ವಿಕ ಹಾಗೂ ಆಧ್ಯಾತ್ಮಿಕ ಅಂಶಗಳಿಂದ ಸಮಾಜವನ್ನು ದೂರಿಡಲಾಗುತ್ತಿದೆ. ವಿಪರ್ಯಾಸವೆಂದರೆ ಇದಕ್ಕೆ ಕೆಲವು ಅಧ್ಯಯನವಿಲ್ಲದ ತಳುಕಿನ ವಿರಕ್ತರೂ ಬಲಿಯಾಗಿರುವರು. ವಿರಕ್ತ ಪೀಠದ ಚನ್ನಸವಣ್ಣನವರ ಕರಣಹಸುಗೆ, ಧರ್ಮಶಾಸ್ತ್ರ ಹಾಗೂ ಅಧ್ಯಾತ್ಮಶಾಸ್ತ್ರವಲ್ಲದೆ ಬಸವಪೂರ್ವ ಕಾಲದ ಶಿಲಾಶಾಸನಗಳು, ವತುಲ ಸಿದ್ಧಾಖ್ಯ, ಲಕುಲಾಗಮ, ಲಕುಲಸಿದ್ಧಾಂತ ಮುಂತಾದ ಶೈವಾಗಮಗಳು, ಮಹಾನಿರ್ವಾಣತಂತ್ರ ಹಾಗೂ ಮಾಲಿನಿ ವಿಜಯತಂತ್ರ ಮುಂತಾದ ತಂತ್ರಶಾಸ್ತ್ರಗಳ ವಿಶ್ಲೇಷಣೆಯ ಆಧಾರದ ಮೇಲೆ ವೀರಶೈವತ್ವ ಅಥವಾ ಲಿಂಗಾಯತ ಸಿದ್ಧಾಂತದ ಹುಟ್ಟು, ಸೈದ್ಧಾಂತಿಕ ಬುನಾದಿ, ತತ್ವಜ್ಞಾನ, ಪರಂಪರೆ, ಧಾರ್ಮಿಕ ವಿಽಗಳು ಹಾಗೂ ಸಾಮಾಜಿಕ-ಸಾಂಸ್ಕೃತಿಕ-ಆಧ್ಯಾತ್ಮಿಕ ಆಯಾಮಗಳ ಹಿನ್ನೆಲೆಯನ್ನು ಕಂಡುಕೊಳ್ಳಬೇಕು.

ಅನಾದಿಕಾಲದಿಂದಲೂ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿರುವ ಶೈವಸಿದ್ಧಾಂತಗಳಲ್ಲಿ ಕರ್ನಾಟಕ ದಲ್ಲಿಯೂ ಅಸ್ತಿತ್ವದಲ್ಲಿತ್ತೆನ್ನುವ, ಲಕುಲೀಶ-ಪಾಶುಪತ ಶೈವಮತ ಅಥವಾ ಕಾಳಾಮುಖ ಶೈವಮತ ವೆಂದು ಪಾಶ್ಚಿಮಾತ್ಯ ಸಂಶೋಧಕರು ಸಾಬೀತು ಮಾಡಿದ್ದಾರೆ. ಈ ಶೈವರ ಮೇಲೆ ಅಂದಿನ ಪ್ರಬಲ ಜೈನಮತಸ್ಥರಿಂದ ಆಗುತ್ತಿರುವ ಅನ್ಯಾಯದಿಂದಾಗಿ ಅವಸಾನದ ಅಂಚಿನಲ್ಲಿದ್ದುದನ್ನು ರೇಣುಕಾದಿ ಆದ್ಯರಲ್ಲದೇ ಬಸವಣ್ಣನ ನೇತೃತ್ವದಲ್ಲಿ ಶರಣರೆಲ್ಲರೂ ಸೇರಿ ಶತಮಾನಗಳ ಕಾಲಾಂತರದಲ್ಲಿ ಪುನರುಜ್ಜೀವನಗೊಳಿಸಿದರು.

ಹೀಗೆ ಪುನರುಜ್ಜೀವನಗೊಂಡ ಸಂಪ್ರದಾಯವೇ ವೀರಶೈವತ್ವ ಅಥವಾ ಲಿಂಗವಂತ ಸಂಪ್ರದಾಯ! ಈ ವೀರಶೈವತ್ವದ ಪ್ರಮುಖ ಲಕ್ಷಣವೇ ಸಾಮಾಜಿಕ ಸುಧಾರಣೆಯ ಕಳಕಳಿ! ಇದನ್ನು ಎಲ್ಲಾ ಪ್ರಮುಖ ಗುರುಪೀಠಗಳು ಮತ್ತು ವಿರಕ್ತಪೀಠಗಳು ಹಿರಿಯರು ಬಲ್ಲರು.

(ಮುಂದುವರಿಯುವುದು)

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)