Thimmanna Bhagwat Column: ಏಕರೂಪದ ನಾಗರಿಕ ಸಂಹಿತೆ: ಹಿಂದೂಗಳಿಗೇನು ಪರಿಣಾಮ ?
ಸಂವಿಧಾನ ರಚನಾ ಸಮಿತಿಯ ಆರಂಭಿಕ ಸಭೆಗಳಿಂದಲೇ ಹಿಂದೂ ಮತ್ತು ಮುಸ್ಲಿಮರ ವೈಯ ಕ್ತಿಕ ಕಾನೂನುಗಳ ತಿದ್ದುಪಡಿ, ಮುಸ್ಲಿಮರ ವೈಯಕ್ತಿಕ ಕಾನೂನುಗಳ ತಿದ್ದುಪಡಿ ಹಾಗೂ ಏಕರೂಪದ ಕಾನೂನು ಜಾರಿಯ ಕುರಿತಾಗಿ ಸುದೀರ್ಘ ಚರ್ಚೆ ಗಳು ನಡೆಯುತ್ತಿದ್ದವು. ಅಂತಿಮ ವಾಗಿ, ‘ನಾಗರಿಕರೆಲ್ಲರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರಕಾರ ಪ್ರಯ ತ್ನಿಸಬೇಕು’ ಎಂದು ಸಂವಿಧಾನದ 44ನೇ ವಿಧಿಯನ್ನು ನಿರ್ದೇಶಕ ತತ್ವಗಳಡಿಯಲ್ಲಿ ಅಳವಡಿಸಿ ಏಕರೂಪದ ಕಾನೂ ನು ಜಾರಿಯನ್ನು ಮುಂದೂಡಲಾಯಿತು.

ಅಂಕಣಕಾರ ತಿಮ್ಮಣ್ಣ ಭಾಗ್ವತ್

ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
ವೇದೋಖಿಲೋ ಧರ್ಮಮೂಲಂ ಸ್ಮೃತಿಶೀಲೇಚ ತದ್ವಿದಾಂ| ಆಚಾರಶ್ಬೈವ ಸಾಧೂನಾಂ ಆತ್ಮನಸ್ತುಷ್ಟಿರೇವಚ ||’ (ಮನುಸ್ಮೃತಿ 2.6). ಅಂದರೆ- ಸನಾತನವೂ ಅಪೌರುಷೇಯವೂ ಆದ ವೇದವಲ್ಲದೆ ಸ್ಮೃತಿ, ಸತ್ಪುರುಷರ ಆಚಾರ ಮತ್ತು ಆತ್ಮಸಂತುಷ್ಟಿ ಅಥವಾ ಆತ್ಮಸಾಕ್ಷಿ ಗಳೂ ಧರ್ಮಕ್ಕೆ ಮೂಲ ಆಧಾರಗಳಾಗಿವೆ ಎಂದರ್ಥ. ಹಿಂದೂ ಶಾಸ್ತ್ರದಲ್ಲಿ ಕಾನೂನು ಎಂದರೆ ಧರ್ಮ. ಧರ್ಮದ ವಿಸ್ತೃತ ಅರ್ಥವ್ಯಾಪ್ತಿಯಲ್ಲಿ ಶಾಸ್ತ್ರ, ನ್ಯಾಯ, ನೀತಿ ಮುಂತಾ ದವು ಬರುತ್ತವೆ ಮತ್ತು ಅವುಗಳ ಅನುಷ್ಠಾನದಲ್ಲಿ ದಂಡ ಅಥವಾ ಶಿಕ್ಷೆ ಸೇರಿಕೊಳ್ಳುತ್ತವೆ. ಹಾಗಾಗಿ ಹಿಂದೂಗಳಿಗೆ ಅನ್ವಯಿಸಬೇಕಾದ ಕಾನೂನುಗಳು ಶ್ರುತಿ, ಸ್ಮೃತಿ ಮುಂತಾದವುಗಳ ಆಧಾರದಲ್ಲಿಯೇ ರಚಿತವಾಗಬೇಕು ಎಂಬುದು ಸಹಜವಾದ ವಾದ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹಿಂದೂ ಕಾನೂನುಗಳಲ್ಲಿ ಸ್ವಾತಂತ್ರ್ಯಪೂರ್ವದಲ್ಲಿಯೇ ಸಾಕಷ್ಟು ಬದಲಾವಣೆಗಳಾಗಿವೆ. ಅವು ಕ್ರೋಡೀಕರಣವಾಗುವ ಮೊದಲು ವಿವಾಹ, ಉತ್ತರಾ ಧಿಕಾರ ಮುಂತಾದ ವಿಷಯಗಳ ವ್ಯಾಜ್ಯಗಳು ಆಯಾ ಪ್ರದೇಶಗಳ ಸಂಪ್ರದಾಯ ಮತ್ತು ಧಾರ್ಮಿಕ ಮುಖಂಡರ ಸಲಹೆಯ ಮೇರೆಗೆ ಇತ್ಯರ್ಥವಾಗುತ್ತಿದ್ದವು.
ಇದನ್ನೂ ಓದಿ: Thimmanna Bhagwath Column: ಮಗಳಿಗೆ ಆಸ್ತಿ ಹಕ್ಕು ಓಕೆ, ತಾಯಿ-ಹೆಂಡತಿಯರ ಹಕ್ಕು ಕಡಿಮೆಯೇಕೆ ?
ಆದರೆ ಅಂಥ ಸಂಪ್ರದಾಯಗಳಲ್ಲಿ ಸಮಾನತೆ ಇರಲಿಲ್ಲ. ಅಲ್ಲದೆ ಅನೇಕ ಅನಿಷ್ಟ ಪದ್ಧತಿ ಗಳು ಜಾರಿಯಲ್ಲಿದ್ದವು. ಅಂಥ ಅನಿಷ್ಟಗಳನ್ನು ಹೋಗಲಾಡಿಸುವ ಉದ್ದೇಶದಿಂದ ಬಂಗಾ ಳದ ಸತಿ ನಿರ್ಮೂಲನ ಕಾಯ್ದೆ 1829, ವಿಧವಾ ಪುನರ್ವಿವಾಹ ಕಾಯ್ದೆ 1856, ಹೆಣ್ಣು ಶಿಶು ಹತ್ಯಾ ನಿಷೇಧ ಕಾಯ್ದೆ 1870, ಲೈಂಗಿಕ ಕ್ರಿಯೆಗೆ ಸಮ್ಮತಿಯ ವಯಸ್ಸಿನ ಕಾಯ್ದೆ 1891, ಬಾಲ್ಯ ವಿವಾಹ ನಿಷೇಧ ಕಾಯ್ದೆ 1929, ಮಹಿಳಾ ಆಸ್ತಿ ಹಕ್ಕುಗಳ ಕಾಯ್ದೆ 1937, ವಿವಾಹಿತ ಹಿಂದೂ ಮಹಿಳೆಯರ ಪ್ರತ್ಯೇಕ ವಾಸ್ತವ್ಯ ಮತ್ತು ಜೀವನಾಂಶ ಕಾಯ್ದೆ 1944 ಮುಂತಾ ದವನ್ನು ಜಾರಿ ಮಾಡಲಾಯಿತು. ಈ ಎಲ್ಲ ಕಾಯ್ದೆಗಳು ಪ್ರಗತಿಪರವಾಗಿದ್ದು ಮಹಿಳೆಯರ, ಮಕ್ಕಳ ಹಕ್ಕು ರಕ್ಷಣೆ ಮತ್ತು ಸಮಾನತೆಯಂಥ ಉದ್ದೇಶಗಳನ್ನು ಹೊಂದಿದ್ದರಿಂದ, ಹಿಂದೂಗಳು ಅವನ್ನು ಒಪ್ಪಿ ಸ್ವಾಗತಿಸಿದರು.
ಸ್ವಾತಂತ್ರ್ಯಾನಂತರದ ಚಿತ್ರಣ
ಸಂವಿಧಾನ ರಚನಾ ಸಮಿತಿಯ ಆರಂಭಿಕ ಸಭೆಗಳಿಂದಲೇ ಹಿಂದೂ ಮತ್ತು ಮುಸಲ್ಮಾ ನರುಗಳ ವೈಯಕ್ತಿಕ ಕಾನೂನುಗಳ ತಿದ್ದುಪಡಿ ಮತ್ತು ಮುಸಲ್ಮಾನರ ವೈಯಕ್ತಿಕ ಕಾನೂನು ಗಳ ತಿದ್ದುಪಡಿ ಹಾಗೂ ಏಕರೂಪದ ಕಾನೂನು ಜಾರಿಮಾಡುವ ಕುರಿತಾಗಿ ಸುದೀರ್ಘ ಚರ್ಚೆಗಳು ನಡೆಯುತ್ತಿದ್ದವು.

ಅಂತಿಮವಾಗಿ, ‘ನಾಗರಿಕರೆಲ್ಲರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರಕಾರ ಪ್ರಯತ್ನಿಸಬೇಕು’ ಎಂದು ಸಂವಿಧಾನದ 44ನೇ ವಿಧಿಯನ್ನು ನಿರ್ದೇಶಕ ತತ್ವ ಗಳಡಿಯಲ್ಲಿ ಅಳವಡಿಸಿ ಏಕರೂಪದ ಕಾನೂನು ಜಾರಿಯನ್ನು ಮುಂದೂಡಲಾಯಿತು. ಆದರೆ ಹಿಂದೂಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳ ಕ್ರೋಢೀಕರಣ ಮಾಡಿ ‘ಹಿಂದೂ ಕೋಡ್’ ಅಡಿಯಲ್ಲಿ ವಿವಾಹ ಕಾಯ್ದೆ, ಉತ್ತರಾಧಿಕಾರ ಕಾಯ್ದೆ, ಅಪ್ರಾಪ್ತ ವಯ ಸ್ಕತೆ ಮತ್ತು ಸಂರಕ್ಷಣಾ ಕಾಯ್ದೆ ಹಾಗೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ ಎಂಬ ಪ್ರಮುಖ 4 ಕಾಯ್ದೆಗಳನ್ನು 1955-56ರಲ್ಲಿಯೇ ಸ್ವತಂತ್ರ ಭಾರತದ ಸಂಸತ್ತು ಅಂಗೀ ಕರಿಸಿತು.
ಪ್ರಗತಿಪರವೆನಿಸಬಹುದಾದ ಈ ಕಾನೂನುಗಳಲ್ಲಿ ಹಿಂದೂ ಸಂಪ್ರದಾಯ ಮತ್ತು ಶಾಸ್ತ್ರ ಗಳಲ್ಲಿ ಇರದೇ ಇದ್ದ ವಿಚ್ಛೇದನ, ಉಯಿಲಿನಂಥ ಅಂಶಗಳು ಇವೆ. ಬಾಲ್ಯವಿವಾಹ ಮತ್ತು ಬಹುಪತ್ನಿತ್ವಗಳನ್ನು ಹಿಂದೂಗಳಿಗೆ ನಿಷೇಧಿಸಲಾಯಿತು. ಹೆಣ್ಣು ಮಕ್ಕಳ ಆಸ್ತಿ ಹಕ್ಕಿನ ವಿಷಯದಲ್ಲೂ ಅನೇಕ ತಿದ್ದುಪಡಿಗಳಾದವು.
ಹೀಗೆ ಹಿಂದೂಗಳ ಕಾನೂನುಗಳನ್ನು ಬದಲಾಯಿಸುವಾಗ, ಹಿಂದೂ ಯತಿಗಳು ಅಥವಾ ಧಾರ್ಮಿಕ ತಜ್ಞರ ಅಭಿಪ್ರಾಯ ಕೇಳಬೇಕೆಂಬುದು ಕಾನೂನು ಮಾಡಿದವರಿಗೆ ಅನಿಸಲಿಲ್ಲ. ಈ ಎಲ್ಲ ಕಾಯ್ದೆಗಳ ವಿಷಯದಲ್ಲಿ, ಹಿಂದೂಗಳು ಎಂದರೆ ಸಿಖ್ಖರು, ಜೈನರು, ಬೌದ್ಧರು, ವೀರಶೈವರು ಮುಂತಾದವರು ಸೇರುತ್ತಾರೆ ಎಂಬುದನ್ನು ಗಮನಿಸಬೇಕು.
ಆಶ್ಚರ್ಯವೆಂದರೆ ತಮ್ಮ ಅಭಿಪ್ರಾಯ ಕೇಳದೇ ತಮ್ಮ ಮೇಲೆ ಹೇರಲಾದ ಈ ಕಾಯ್ದೆಗಳ ಕುರಿತಾಗಲೀ, ತಮ್ಮ ಹಿತಾಸಕ್ತಿಗೆ ಮಾರಕವಾಗಬಹುದಾದ ವಕ್ಫ್ ಕಾಯ್ದೆ ಹಾಗೂ ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆಯಂಥ ವಿಷಯದಲ್ಲಾಗಲೀ ಯಾವ ಪ್ರತಿರೋಧವೂ ವ್ಯಕ್ತ ವಾಗಲಿಲ್ಲ. ಆದರೆ ಏಕರೂಪದ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತಂದರೆ ಮುಸ ಲ್ಮಾನರಿಗೆ ಬೇಸರವಾಗಬಹುದು ಎಂಬುದು ಎಲ್ಲರನ್ನೂ ಕಾಡುವ ಚಿಂತೆ.
ಏನಿದು ಏಕರೂಪದ ನಾಗರಿಕ ಸಂಹಿತೆ? ಅಪರಾಧ, ಶಿಕ್ಷೆ, ವೈಯಕ್ತಿಕ ವ್ಯಾಜ್ಯಗಳು, ಸಾಕ್ಷಿ ಮತ್ತು ಪುರಾವೆ ಮುಂತಾದ ವಿಷಯಗಳಲ್ಲಿ ದೇಶದ ಎಲ್ಲ ನಾಗರಿಕರಿಗೂ ಸಮಾನವಾದ ಕಾಯ್ದೆಗಳು ಈ ಮೊದಲೇ ಜಾರಿಯಲ್ಲಿವೆ. ಆದರೆ ವೈಯಕ್ತಿಕ ವಿಷಯಗಳಾದ ವಿವಾಹ, ಆಸ್ತಿಹಕ್ಕು ಮತ್ತು ಉತ್ತರಾಧಿಕಾರ, ದತ್ತು ಸ್ವೀಕಾರ, ವಿಚ್ಛೇದನ, ಜೀವನಾಂಶ ಮುಂತಾ ದವುಗಳ ಕುರಿತು ಅವರವರ ವೈಯಕ್ತಿಕ ಕಾನೂನುಗಳು ಅನ್ವಯವಾಗುತ್ತವೆ.
ಏಕರೂಪದ ನಾಗರಿಕ ಸಂಹಿತೆಯೆಂದರೆ ಆ ವಿಷಯಗಳಲ್ಲಿ ಕೂಡಾ ದೇಶಾದ್ಯಂತ ಒಂದೇ ಕಾನೂನು ಜಾರಿ ಮಾಡುವುದು. ಇಂಥ ಕಾನೂನನ್ನು ಜಾರಿ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು 1973ರ ಕೇಶವಾನಂದ ಭಾರತಿ ಪ್ರಕರಣದಿಂದ ಮೊದಲ್ಗೊಂಡು, 1985ರ ಪ್ರಸಿದ್ಧ ಶಾಬಾನೋ ಪ್ರಕರಣ, 2017ರ ಶಾಯರಾ ಬಾನೋ ಪ್ರಕರಣದವರೆಗಿನ ಹಲವು ಪ್ರಕರಣಗಳಲ್ಲಿ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
21ನೇ ಕಾನೂನು ಆಯೋಗವು UCC ಜಾರಿ ಮಾಡುವುದು ಅಗತ್ಯವಿಲ್ಲ ಮತ್ತು ತರವಲ್ಲ ಎಂದರೂ, 22ನೇ ಆಯೋಗವು ಪುನಃ ಜನರ ಅಭಿಪ್ರಾಯಗಳನ್ನು ಕೇಳಿದೆ. ಭಾರತದ ಸಂಸ ತ್ತು 2019ರಲ್ಲಿ UCC ಕುರಿತಾಗಿ ಸಮಿತಿಯೊಂದನ್ನು ರಚಿಸುವ ವಿಧೇಯಕವನ್ನು ಅಂಗೀ ಕರಿಸಿತು. ಉತ್ತರಾಖಂಡದ ಬಿಜೆಪಿ ಸರಕಾರ ಇತ್ತೀಚೆಗೆ UCCಯನ್ನು ಜಾರಿ ಮಾಡಿದ್ದರೆ, ಗುಜರಾತ್ ಸರಕಾರ ಈ ಕುರಿತು ಸಮಿತಿಯೊಂದನ್ನು ರಚಿಸಿದೆ.
ಇಷ್ಟೆಲ್ಲ ಬೆಳವಣಿಗೆ ಮತ್ತು ವಿವಾದಗಳಿದ್ದರೂ ಕೇಂದ್ರ ಸರಕಾರ ತರಲು ಉದ್ದೇಶಿಸಿರುವ ಖಿಇಇಯ ಯಾವುದೇ ಕರಡುಪ್ರತಿ ಅಧಿಕೃತವಾಗಿ ಈವರೆಗೆ ಲಭ್ಯವಿಲ್ಲ. ಆದರೆ ಉತ್ತರಾ ಖಂಡದ ರೀತಿಯಲ್ಲಿ UCC ಜಾರಿಯಾದರೆ ಹಿಂದೂ ಕಾಯ್ದೆಗಳಲ್ಲಿ ಆಗಬಹುದಾದ ಕೆಲವು ಬದಲಾವಣೆಗಳ ಕುರಿತು ಚರ್ಚಿಸೋಣ:
- ಹಿಂದೂ-ಅವಿಭಕ್ತ ಕುಟುಂಬ ( HUF): ಭಾರತದ ಆಯಕರ ಕಾಯ್ದೆ, ಹಿಂದೂ ಉತ್ತರಾಧಿಕಾರ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆಗಳಡಿಯಲ್ಲಿ ಅವಿಭಕ್ತ-ಹಿಂದೂ ಕುಟುಂಬಗಳಿಗೆ ಸ್ವತಂತ್ರ ಅಸ್ತಿತ್ವವಿದೆ. HUF ಗಳಿಗೆ ಪ್ರತ್ಯೇಕ PAN CARD ಮತ್ತು ಆಯಕರ ಕಾಯ್ದೆಯಡಿ ಲಭ್ಯವಿರುವ ರಿಯಾಯತಿಗಳ ಸೌಲಭ್ಯವಿದೆ. ಉತ್ತರಾ ಖಂಡದ ರೀತಿಯಲ್ಲಿ ದೇಶಾದ್ಯಂತ UCC ಜಾರಿಯಾದರೆ ಹಿಂದೂಗಳ ವಿಶಿಷ್ಟ ಪರಂ ಪರೆಯಾದ ಅವಿಭಕ್ತ ಕುಟುಂಬದ ವ್ಯವಸ್ಥೆ ಇಲ್ಲವಾಗುತ್ತದೆ ಮತ್ತು ಆ ಮೂಲಕ ಲಭ್ಯವಿದ್ದ ಸವಲತ್ತು ಗಳಿಂದ ಹಿಂದೂಗಳು ವಂಚಿತರಾಗುತ್ತಾರೆ.
- ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿ: ಉತ್ತರಾಖಂಡದ ಕಾಯ್ದೆಯಲ್ಲಿ ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಗಳ ನಡುವೆ ವ್ಯತ್ಯಾಸವಿಲ್ಲ. ಆದ್ದರಿಂದ ವಾರಸುದಾರಿಗೆ ಎಲ್ಲಾ ಆಸ್ತಿಗಳ ವಿಷಯದಲ್ಲೂ ಸಮಾನ ಹಕ್ಕು ಬರುತ್ತದೆ. ಆದರೆ ಎಲ್ಲಾ ಆಸ್ತಿಗಳನ್ನೂ ಉಯಿಲು ಮೂಲಕ ವಿಲೇವಾರಿ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ಉತ್ತರಾಧಿ ಕಾರದ ವಿಷಯ ದಲ್ಲಿ ಕೆಲವು ಗೊಂದಲಗಳು ತಲೆದೋರಬಹುದು.
- ಹಿಸ್ಸೆದಾರ ಹಕ್ಕಿನ ರದ್ದತಿ: ಹಿಂದೂಗಳಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಹುಟ್ಟಿ ನಿಂದ ಬರುವ ಹಿಸ್ಸೆದಾರ ( coparcenary) ಹಕ್ಕು ಉತ್ತರಾಖಂಡದ ಕಾಯ್ದೆಯಲ್ಲಿ ಇಲ್ಲ. ಇದರಿಂದ ಕೆಲಮಟ್ಟಿಗೆ ತಾಯಿ ಮತ್ತು ಹೆಂಡತಿಯರ ಹಕ್ಕಿನ ಕುರಿತು ಇರುವ ಗೊಂದಲ ನಿವಾರಣೆಯಾಗುವುದಾದರೂ, ತಂದೆಯ ಜೀವಿತಾವಧಿಯಲ್ಲಿ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ಮಕ್ಕಳಿಗೆ ಇಲ್ಲವಾಗುತ್ತದೆ.
- ತಂದೆ ಕೂಡಾ ಪ್ರಥಮ ಶ್ರೇಣಿಯ ವಾರಸುದಾರ: UCC ಯಡಿಯಲ್ಲಿ ತಾಯಿಯ ಜತೆ ತಂದೆ ಕೂಡಾ ಮಗನ ಆಸ್ತಿಗೆ ಪ್ರಥಮ ಶ್ರೇಣಿಯ ವಾರಸುದಾರ ಆಗುತ್ತಾನೆ. ಅಲ್ಲದೆ ಮದುವೆ ಯಾದ ಮಗಳ ಆಸ್ತಿಗೆ ಗಂಡನ ಜತೆಗೆ ಅವಳ ತಂದೆ ತಾಯಿಯರು ಕೂಡಾ ಪ್ರಥಮ ಶ್ರೇಣಿ ಯ ವಾರಸುದಾರರಾ ಗುತ್ತಾರೆ. ಈ ಮೊದಲು, ಗಂಡನ ವಾರಸುದಾರರು ಅವಳ ಆಸ್ತಿಗೆ ಹಕ್ಕುದಾರರಾಗುತ್ತಿದ್ದರು.
- ವಿವಾಹ/ವಿಚ್ಛೇದನ: ಉತ್ತರಾಖಂಡ UCC ಪ್ರಕಾರ, ನಿರ್ಬಂಧಿತ ಸಂಬಂಧಗಳಲ್ಲಿ ನಡೆಯುವ ಎಲ್ಲಾ ವಿವಾಹಗಳು ಅಸಿಂಧುವಾಗುತ್ತವೆ. ಆಚರಣೆಗಳು ಮತ್ತು ಸಂಪ್ರ ದಾಯದ ಹೆಸರಿನಲ್ಲಿ ಹಿಂದೂ ವಿವಾಹ ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ನಡೆಯು ತ್ತಿದ್ದ ಸೋದರಿಕೆ ವಿವಾಹ UCC ಅಡಿಯಲ್ಲಿ ಸಾಧ್ಯವಿಲ್ಲ. ಹಿಂದೂ ವಿವಾಹ ಕಾಯ್ದೆ ಯಲ್ಲಿ ವಿವಾಹದ ಆಚರಣೆ ಕುರಿತಾಗಿ ಇದ್ದ ನಿಯಮಗಳು ಬದಲಾಗಲಿವೆ. ನೋಂದಣಿ ಯಾಗದಿದ್ದರೆ ವಿವಾಹ ಅಸಿಂಧುವಾಗುತ್ತದೆ. ವಿಚ್ಛೇದನದ ಡಿಕ್ರಿ ಕೂಡಾ ನೋಂದಣಿ ಯಾಗಬೇಕಾಗುತ್ತದೆ.
- ಲಿವ್-ಇನ್ ರಿಲೇಶನ್‌ಷಿಪ್: ಭಾರತೀಯ ಪರಂಪರೆಯಲ್ಲಿ ಕೇಳರಿಯದ ಪದ್ಧತಿ ಯಾದ, ಮದುವೆಯಾಗದೆ ಗಂಡು- ಹೆಣ್ಣು ಒಟ್ಟಿಗೆ ವಾಸಿಸುವ ವಿಷಯದಲ್ಲಿ ಕೆಲವು ನಿಯಮಗಳನ್ನು ಅಳವಡಿಸಲಾಗಿದೆ. ಅಂಥ ಸಂಬಂಧಗಳ ಆರಂಭ ಮತ್ತು ಅಂತ್ಯ ಗಳೆರಡರ ವಿವರಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಅದು ಶಿಕ್ಷಾರ್ಹ ಅಪರಾಧ ವಾಗು ತ್ತದೆ. ಅಂಥ ಸಂಬಂಧಗಳಿಂದ ಹುಟ್ಟಿದ ಮಕ್ಕಳಿಗೆ ಕೂಡಾ ವಾರಸುದಾರ ಹಕ್ಕು ಬರುತ್ತದೆ ಮತ್ತು ಮಹಿಳೆಯರಿಗೆ ಜೀವನಾಂಶದ ಅವಕಾಶ ಕೂಡಾ ಇರುತ್ತದೆ.
7. ಬಾಡಿಗೆ ತಾಯ್ತನ: ಐವಿಎ-ನಂಥ ಆಧುನಿಕ ತಂತ್ರಜ್ಞಾನದಿಂದ ಬಾಡಿಗೆ ತಾಯ್ತನದ ಮೂಲಕ ಪಡೆಯುವ ಮಕ್ಕಳಿಗೆ ಕೂಡಾ ಸಮಾನ ಹಕ್ಕನ್ನು ಒದಗಿಸುವ ಅವಕಾಶ ಕಲ್ಪಿಸ ಲಾಗಿದೆ. ಕೇವಲ ಕೆಲವು ರಾಜ್ಯಗಳು UCC ಜಾರಿ ಮಾಡಿದರೆ, ಅಂತಾರಾಜ್ಯ ವಿವಾಹ, ಆಸ್ತಿ-ಹಕ್ಕು ಮುಂತಾದ ವಿಷಯಗಳಲ್ಲಿ ಗೊಂದಲವಾಗಬಹುದು. ಒಂದು ದೇಶ, ಒಂದೇ ಕಾನೂನು ಎಂಬ ಘೋಷವಾಕ್ಯದೊಂದಿಗೆ UCC ಜಾರಿ ಮಾಡ ಹೊರಟಿರುವ ಕೇಂದ್ರ ಸರಕಾರದ ಪ್ರಯತ್ನಕ್ಕೆ ಈಗಾಗಲೇ ಮೂಲಭೂತವಾದಿ ಮುಸಲ್ಮಾನರಿಂದ ವ್ಯಾಪಕ ವಿರೋಧ ವ್ಯಕ್ತ ವಾಗಿದೆ.
ಸಂವಿಧಾನಕ್ಕಿಂತಲೂ ಷರಿಯತ್ ಹೆಚ್ಚಿನದು ಎಂದು ಅವರು ಪರಿಗಣಿಸುವುದು ಹೊಸತೇ ನಲ್ಲ. UCC ಯ ಅಂತಿಮ ಸ್ವರೂಪ ಹೇಗಿರುತ್ತದೆ ಎಂಬುದು ಸ್ಪಷ್ಟವಿಲ್ಲ. ಹಿಂದೂ ಕಾಯ್ದೆ ಗಳನ್ನು ಇತರರ ಮೇಲೆ ಹೇರುವುದಂತೂ ಅಸಾಧ್ಯದ ಮಾತು. ಹಿಂದೂ-ಮುಸ್ಲಿಮೇ ತರರಿಗೆ ಈಗ ಅನ್ವಯವಾಗುತ್ತಿರುವ ಭಾರತೀಯ ಉತ್ತರಾಧಿಕಾರ ಕಾಯ್ದೆ 1925 ಮತ್ತು ವಿಶೇಷ ವಿವಾಹ ಕಾಯ್ದೆ 1954ರ ಬಹುತೇಕ ಕಲಮುಗಳು UCC ಯಲ್ಲಿ ಇರಬಹು ದೆನಿಸುತ್ತದೆ. ಏನೇ ಅಡಚಣೆಗಳಿದ್ದರೂ ಸಾಮಾಜಿಕನ್ಯಾಯ, ಸಮಾನತೆ ಮತ್ತು ದೇಶದ ಐಕ್ಯತೆಯ ದೃಷ್ಟಿಯಿಂದ UCC ಜಾರಿ ಮಾಡುವುದು ಸಮರ್ಥನೀಯ.
ಇದು ಜಾತ್ಯತೀತತೆ ಮತ್ತು ಲಿಂಗ ಸಮಾನತೆಯನ್ನು ಸಾಧಿಸುವತ್ತ ದಿಟ್ಟ ಹೆಜ್ಜೆಯಾಗುತ್ತದೆ. ಈ ಕುರಿತು ಪ್ರಸಕ್ತ ಕೇಂದ್ರ ಸರಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇರುವಂತೆ ತೋರುತ್ತಿದೆ. ಆದರೆ ಸಂಸತ್ತಿನಲ್ಲಿ ಬಿಜೆಪಿಗೆ ಸ್ವತಂತ್ರ ಬಹುಮತ ಇಲ್ಲದಿರುವುದು ಈ ದಾರಿಯಲ್ಲಿರುವ ದೊಡ್ಡ ಕಲ್ಲುಬಂಡೆಯಾಗಬಹುದೇನೋ?
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ
ನಿವೃತ್ತ ಎಜಿಎಂ)