ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಹಾಗೇ ಸುಮ್ಮನೆ ಅಲ್ಲದ ʼಹಾಗೇ ಸುಮ್ಮನೆʼಗಳು...

ಮುಂಗಾರು ಮಳೆ ಹಾಡು ಯಶಸ್ವಿಯಾದದ್ದು ಹಾಗೇ ಸುಮ್ಮನೆ ಅಲ್ಲ, ‘ಹಾಗೇ ಸುಮ್ಮನೆ’ ಪದಪುಂಜ ದಿಂದಲೇ ಎಂದು ನನ್ನ ಅಭಿಪ್ರಾಯ. ಇದಕ್ಕೆ ಪುರಾವೆಗಳನ್ನೂ ಒದಗಿಸಬಲ್ಲೆ. ಪಲ್ಲವಿಯಲ್ಲಿ ಒಮ್ಮೆ ಮಾತ್ರ ಬಂದು ಹೋಗುವುದಲ್ಲ, ಜಯಂತ ಕಾಯ್ಕಿಣಿಯವರು ಹಾಡಿನ ಎರಡು ಚರಣಗಳನ್ನೂ ‘ಹಾಗೇ ಸುಮ್ಮನೆ’ಯಿಂದಲೇ ಕೊನೆಗೊಳಿಸಿದ್ದಾರೆ.

Srivathsa Joshi Column: ಹಾಗೇ ಸುಮ್ಮನೆ ಅಲ್ಲದ ʼಹಾಗೇ ಸುಮ್ಮನೆʼಗಳು...

-

ತಿಳಿರು ತೋರಣ

ಅನಿಸುತಿದೆ ಯಾಕೋ ಇಂದು’ ಹಾಡು ಯಶಸ್ವಿಯಾದದ್ದು ಹಾಗೇ ಸುಮ್ಮನೆ ಅಲ್ಲ, ‘ಹಾಗೇ ಸುಮ್ಮನೆ’ ಪದಪುಂಜದಿಂದಲೇ ಎಂದು ನನ್ನ ಅಭಿಪ್ರಾಯ. ಜಯಂತ ಕಾಯ್ಕಿಣಿಯವರು ಹಾಡಿನ ಎರಡು ಚರಣಗಳನ್ನೂ ‘ಹಾಗೇ ಸುಮ್ಮನೆ’ಯಿಂದಲೇ ಕೊನೆಗೊಳಿಸಿದ್ದಾರೆ. ಒಂದು ಚರಣದಲ್ಲಿ “ನಿನಗುಂಟೇ ಇದರ ಕಲ್ಪನೆ... ನನ್ನ ಹೆಸರ ಕೂಗೇ ಒಮ್ಮೆ ಹಾಗೇ ಸುಮ್ಮನೆ" ಎಂದು; ಇನ್ನೊಂದು ಚರಣದಲ್ಲಿ “ನಾ ಕೈದಿ ನೀನೇ ಸೆರೆಮನೆ, ತಪ್ಪಿ ನನ್ನ ಅಪ್ಪಿಕೋ ಒಮ್ಮೆ ಹಾಗೇ ಸುಮ್ಮನೆ" ಎಂದು!

ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು... ಮಾಯದ ಲೋಕದಿಂದ ನನಗಾಗಿ ಬಂದವಳೆಂದು... ಆಹಾ ಎಂಥ ಮಧುರ ಯಾತನೆ... ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೇ ಸುಮ್ಮನೆ!" ಮುಂಗಾರು ಮಳೆ ಚಿತ್ರದ ಈ ಹಾಡು ಆವತ್ತಿನ ದಿನಗಳಲ್ಲಿ ಮಾಡಿದ್ದ ಮೋಡಿ ಅಂಥಿಂಥದಲ್ಲ.

ಆವತ್ತಿನ ದಿನಗಳು ಅಂತೇನು, ಈಗ ಕೇಳಿದರೆ ಈಗಲೂ ಅದೇ ತಾಜಾತನ. ವಯಸ್ಸಿನ ಪರಿವೆಯಿಲ್ಲದೆ ಪ್ರೇಮಕಲ್ಪನೆಗಳು ಗರಿಗೆದರುವ ಕ್ಷಣ. ಬಹುಶಃ 21ನೆಯ ಶತಮಾನದಲ್ಲಿ ಬಂದ ಕನ್ನಡ ಚಿತ್ರಗೀತೆ ಗಳ ಪೈಕಿ ಗಾಢವಾಗಿ ಮತ್ತು ಚಿರಕಾಲ ಶ್ರೋತೃಗಳ ನಾಲಗೆ ಮೇಲೆ ನಲಿದಾಡಿದ, ಕರಣಗಣದಿ ರಿಂಗಣಿಸಿದ, ಮನತುಂಬ ಮೆಲುವಾಗಿ ಮಾರ್ದನಿಗೊಂಡ ಕೆಲವೇಕೆಲವು ಚಿತ್ರಗೀತೆಗಳಲ್ಲಿ ಇದೊಂದು. ಜಯಂತ ಕಾಯ್ಕಿಣಿ (ಸಾಹಿತ್ಯ), ಮನೋಮೂರ್ತಿ (ಸಂಗೀತ), ಸೋನು ನಿಗಮ್ (ಗಾಯನ), ಗಣೇಶ್ (ಅಭಿನಯ), ಯೋಗರಾಜ ಭಟ್ (ನಿರ್ದೇಶನ)- ಕೀರ್ತಿಯಶಸ್ಸುಗಳಲ್ಲಿ ಎಲ್ಲರ ಪಾಲೂ ಇದೆ. ಇರಲಿ, ನಾನೀಗ ವಿಶ್ಲೇಷಣೆಗೆ ಹೊರಟಿದ್ದು ಮುಂಗಾರು ಮಳೆ ಚಿತ್ರದ ಬಗೆಗಲ್ಲ; ಈ ಪಂಚಪ್ರತಿಭೆಗಳ ಬಗೆಗೂ ಅಲ್ಲ. ಈ ಹಾಡಿನಲ್ಲಿ ಬರುವ ‘ಹಾಗೇ ಸುಮ್ಮನೆ’ ಎಂಬ ಪದಪುಂಜದ ಬಗೆಗೆ ಮಾತ್ರ!

ಮುಂಗಾರು ಮಳೆ ಹಾಡು ಯಶಸ್ವಿಯಾದದ್ದು ಹಾಗೇ ಸುಮ್ಮನೆ ಅಲ್ಲ, ‘ಹಾಗೇ ಸುಮ್ಮನೆ’ ಪದಪುಂಜ ದಿಂದಲೇ ಎಂದು ನನ್ನ ಅಭಿಪ್ರಾಯ. ಇದಕ್ಕೆ ಪುರಾವೆಗಳನ್ನೂ ಒದಗಿಸಬಲ್ಲೆ. ಪಲ್ಲವಿಯಲ್ಲಿ ಒಮ್ಮೆ ಮಾತ್ರ ಬಂದು ಹೋಗುವುದಲ್ಲ, ಜಯಂತ ಕಾಯ್ಕಿಣಿಯವರು ಹಾಡಿನ ಎರಡು ಚರಣಗಳನ್ನೂ ‘ಹಾಗೇ ಸುಮ್ಮನೆ’ಯಿಂದಲೇ ಕೊನೆಗೊಳಿಸಿದ್ದಾರೆ.

ಅದೂ ಸುಂದರ ಪ್ರಾಸದೊಂದಿಗೆ. ಒಂದು ಚರಣದಲ್ಲಿ “ನಿನಗುಂಟೇ ಇದರ ಕಲ್ಪನೆ... ನನ್ನ ಹೆಸರ ಕೂಗೇ ಒಮ್ಮೆ ಹಾಗೇ ಸುಮ್ಮನೆ" ಎಂದು; ಇನ್ನೊಂದು ಚರಣದಲ್ಲಿ “ನಾ ಕೈದಿ ನೀನೇ ಸೆರೆಮನೆ, ತಪ್ಪಿ ನನ್ನ ಅಪ್ಪಿಕೋ ಒಮ್ಮೆ ಹಾಗೇ ಸುಮ್ಮನೆ" ಎಂದು. ಇದನ್ನು ತುಂಬ ಜನ “ತಬ್ಬಿ ನನ್ನ ಅಪ್ಪಿಕೋ ಒಮ್ಮೆ ಹಾಗೇ ಸುಮ್ಮನೆ" ಎಂದು ತಪ್ಪಾಗಿ ಗ್ರಹಿಸುತ್ತಾರೆ, ಬರೆಯುತ್ತಾರೆ, ಹಾಡುತ್ತಾರೆ.

ಇದನ್ನೂ ಓದಿ: Srivathsa Joshi Column: ದಂಡಕ್ರಮ ಪಾರಾಯಣದಲ್ಲಿ ಬಣ್ಣದ ತಗಡಿನ ತುತ್ತೂರಿ...

ಅದು ‘ತಬ್ಬಿ’ ಅಲ್ಲ ‘ತಪ್ಪಿ’ ಎಂದು ಇರುವುದು. ತಬ್ಬಿ ಅಪ್ಪಿಕೋ ಎಂದರೆ ದ್ವಿರುಕ್ತಿಯಾಗುತ್ತದೆ. ತಪ್ಪಿ ಅಪ್ಪಿಕೋ ಎಂದರೆ, ನೀನು ನನ್ನನ್ನು ಅಪ್ಪಿಕೊಳ್ಳಲಿಕ್ಕೆ ಬರುತ್ತೀಯೆಂಬ ಭರವಸೆಯಿಲ್ಲ, ಆದರೆ ಅಪ್ಪಿತಪ್ಪಿಯಾದರೂ, ಬೈ ಮಿಸ್ಟೇಕ್ ರೀತಿಯಲ್ಲಾದರೂ ಒಮ್ಮೆ ಬಂದು ಅಪ್ಪಿಕೋ ಎಂದು ಪ್ರಿಯ ಕರನ ಅಹವಾಲು, ಬಿನ್ನಹ, ಗೋಗರೆತ. ಜಯಂತ ಕಾಯ್ಕಿಣಿ ಮುಂಗಾರು ಮಳೆ ಸಿನಿಮಾ ತಂಡಕ್ಕೆ ಪದ್ಯವನ್ನು ಓದಿ ವಿವರಿಸುತ್ತಿರುವ ಒಂದು ವಿಡಿಯೊ ತುಣುಕನ್ನು ನಾನು ನೋಡಿದ್ದೇನೆ.

ಅದರಲ್ಲಿ ಅವರು ‘ತಪ್ಪಿ ಅಪ್ಪಿಕೋ’ವನ್ನು ಒಪ್ಪವಾಗಿ ವಿವರಿಸಿದ್ದಾರೆ. ಅಲ್ಲೇ ಪಕ್ಕ ಕೂತಿದ್ದ ಗಣೇಶ್ “ಆಹಾ ವ್ಹಾಟ್ ಬ್ಯೂಟಿಫುಲ್ ಲೈನ್! ಎಷ್ಟು ಚಂದದ ಸಾಲು!" ಎಂದು ಉದ್ಗಾರವೆತ್ತಿದ್ದಾರೆ.

ಮುಂಗಾರು ಮಳೆ ಮತ್ತು ‘ಹಾಗೇ ಸುಮ್ಮನೆ’ ಪದಪುಂಜದ ನಂಟು ಅಲ್ಲಿಗೇ ಮುಗಿಯುವುದಿಲ್ಲ. ಚಿತ್ರವು 25 ವಾರಗಳ ಯಶಸ್ವಿ ಪ್ರದರ್ಶನ ಮುಗಿಸಿದಾಗ ನಿರ್ದೇಶಕ ಯೋಗರಾಜ ಭಟ್ ಆ ಬೆಳ್ಳಿ ಹಬ್ಬ ಸಮಾರಂಭದಲ್ಲೇ ಒಂದು ಪುಸ್ತಕ ಬಿಡುಗಡೆ ಮಾಡಿದ್ದರು. ಮುಂಗಾರು ಮಳೆ ಚಿತ್ರ ನಿರ್ಮಾಣದ ಬಗ್ಗೆಯೇ (ಮೇಕಿಂಗ್ ಆಫ್ ಮುಂಗಾರು ಮಳೆ) ಇದ್ದ ಆ ಪುಸ್ತಕದ ಶೀರ್ಷಿಕೆಯೂ ‘ಹಾಗೇ ಸುಮ್ಮನೆ’ ಅಂತಲೇ ಇತ್ತು!

ಎರಡು ವರ್ಷಗಳ ಬಳಿಕ 2008ರಲ್ಲಿ ‘ಹಾಗೆ ಸುಮ್ಮನೆ’ ಎಂಬ ಹೆಸರಿನದೇ ಒಂದು ಚಿತ್ರವೂ ಬಿಡುಗಡೆಯಾಯ್ತು. ಮುಂಗಾರು ಮಳೆಯ ಚಿತ್ರಕಥೆ ಬರೆದಿದ್ದ ಪ್ರೀತಂ ಗುಬ್ಬಿಯವರದೇ ಚಿತ್ರಕಥೆ, ಮಾತ್ರವಲ್ಲ ಈ ಬಾರಿ ನಿರ್ದೇಶನ ಕೂಡ. ಅದರ ಶೀರ್ಷಿಕೆ ಗೀತೆ “ಮಾಯವಾಗಿದೆ ಮನಸು ಹಾಗೇ ಸುಮ್ಮನೆ... ಗಾಯವ ಮಾಡಿದೆ ಕನಸು ಹಾಗೇ ಸುಮ್ಮನೆ..." ಮತ್ತೊಮ್ಮೆ ಜಯಂತ ಕಾಯ್ಕಿಣಿ, ಮನೋಮೂರ್ತಿ, ಸೋನು ನಿಗಮ್ ತ್ರಿವೇಣಿ‌ ಸಂಗಮ.

Screenshot_11

ಆ ಹಾಡಾಗಲೀ ಚಿತ್ರವಾಗಲೀ ಮುಂಗಾರು ಮಳೆಯಷ್ಟು ಧೋ ಎನ್ನಲಿಲ್ಲವಾದರೂ ‘ಹಾಗೇ ಸುಮ್ಮನೆ’ ಪದಪುಂಜ ಅಲ್ಲೂ ರಾರಾಜಿಸಿ ಜಯಂತ ಕಾಯ್ಕಿಣಿ ಸ್ಟೀರಿಯೊಟೈಪಿನ ಛಾಪು ಮೂಡಿ ಸಿದ್ದಂತೂ ಹೌದು.

ಮುಂಗಾರು ಮಳೆಯಲ್ಲಿ ಒದ್ದೆಯಾಗಿರುವಾಗಲೇ ಇನ್ನೆರಡು ಹಸಿ-ಹಸಿರು ನೆನಪುಗಳನ್ನು ಉಲ್ಲೇಖಿಸಿ ಆಮೇಲೆ ಮೈ ಒರೆಸಿಕೊಳ್ಳುತ್ತೇನೆ. ಮೊದಲನೆಯದು, ಮುಂಗಾರು ಮಳೆ ಕ್ರೇಜ್ ಇನ್ನೂ ಉಚ್ಛ್ರಾಯ ದಲ್ಲಿದ್ದಾಗಲೇ ನನ್ನೊಬ್ಬ ಸ್ನೇಹಿತ, ಸುಳ್ಯ ಜಾಲ್ಸೂರಿನ ಸುಬ್ರಹ್ಮಣ್ಯ ಭಟ್ ‘ಅನಿಸುತಿದೆ ಯಾಕೋ ಇಂದು...’ ಹಾಡಿನ ಸಾರವನ್ನು ಒಂದು ಭೋಗ ಷಟ್ಟದಿಯಲ್ಲಿ ಹಿಡಿದಿಟ್ಟಿದ್ದರು.

ಜಯಂತ ಕಾಯ್ಕಿಣಿ ಒಂದುವೇಳೆ ಆ ಹಾಡನ್ನು ಭೋಗ ಷಟ್ಪದಿ ಸ್ಟೈಲ್‌ನಲ್ಲಿ ಬರೆದಿದ್ದರೆ, ಸೋನು ನಿಗಮ್ ಅದನ್ನು ‘ತಿರುಕನೋರ್ವನೂರಮುಂದೆ ಮುರುಕು ಧರ್ಮಶಾಲೆಯಲ್ಲಿ...’ ಧಾಟಿಯಲ್ಲಿ ಹಾಡಿದ್ದರೆ, ಹೇಗಿರುತ್ತಿತ್ತೆಂಬ ಭಲೇ ಕಲ್ಪನೆ: “ಅನಿಸುತಿರುವುದೇತಕಿಂದು| ಜನಿಸಿ ಬಂದೆ ನನಗೆ ಯೆಂದು| ಹನಿಸುತಿರುವ ಮಳೆಗು ನಿನ್ನ ಕಂಪು ಘಮ್ಮನೆ| ಎಣಿಸಲಾರೆ ನೀನು ಪರರ| ಕನಸಿನೊಳಗೆ ಸೇರುವುದನು| ಫಿನಿಷು ಮಾಡೆ ಹುಡುಗಿ ನನ್ನ ಹಾಗೆ ಸುಮ್ಮನೆ||" ಎರಡನೆಯದು, ನೀವು ಛೀ ಥೂ ಎಂದು ಮೂಗು ಮುರಿಯುವುದಿಲ್ಲವಾದರೆ, ಹೆಚ್ಚೆಂದರೆ ಮೂಗು ಮುಚ್ಚಿಕೊಳ್ಳುವಿರಾದರೆ, ಮಾತ್ರ ಓದಿ- ನನ್ನ ಇನ್ನೊಬ್ಬ ರಸಿಕಸ್ನೇಹಿತ ವಿನಾಯಕ ಕಾಮತ್ ರಚಿಸಿದ್ದೊಂದು ಅಣಕವಾಡು: “ಅನಿಸುತಿದೆ ಯಾಕೋ ಇಂದು ನೀನೇನೆ ಹೂಸಿದೆಯೆಂದು... ಶಬ್ದದ ಅಂಜಿಕೆಯಿಂದ ತಡೆತಡೆದು ಬೀಸಿದೆಯೆಂದು... ಆಹಾ ಎಂಥ ಮಧುರ ವಾಸನೆ... ಮುಚ್ಚಿಕೊಂಡೆ ಮೂಗನೊಮ್ಮೆ ಹಾಗೇ ಸುಮ್ಮನೆ!" ಹಾಗೇ ಸುಮ್ಮನೆ ಒಮ್ಮೆ ಯೋಚಿಸಿ.

ಸುಮ್ಮನೆ ಎಂಬ ಪದ ನಮ್ಮ ಮಾತಿನಲ್ಲಿ ಬರವಣಿಗೆಯಲ್ಲಿ ಹಾಸು ಹೊಕ್ಕಿರುವುದೇ ಆಗಿದೆ. “ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ" ಎಂದರು ಪುರಂದರದಾಸರು. ನಮ್ಮ ದೇಹ ಮತ್ತು ಈ ಲೋಕದ ಜೀವನ ತಾತ್ಕಾಲಿಕ, ಆದರೆ ನಮ್ಮ ನಿಜವಾದ ವಾಸಸ್ಥಾನ ಇರಬೇಕಾದ್ದು ವೈಕುಂಠದಲ್ಲಿ ಪರಮಾತ್ಮನ ಪದತಲದಲ್ಲಿ ಎಂಬ ಪಾರಮಾರ್ಥಿಕ ಚಿಂತನೆ ಅದು. “ಕದ ಬಾಗಿಲಿರಿಸಿಹ ಕಳ್ಳ ಮನೆ ಇದು| ಮುದದಿಂದ ಲೋಲ್ಯಾಡೋ ಸುಳ್ಳು ಮನೆ| ಇದಿರಾಗಿ ವೈಕುಂಠ ವಾಸ ಮಾಡುವಂತ| ಪದುಮನಾಭನ ದಿವ್ಯ ಬದುಕು ಮನೆ" ಎಂದು ಅದೇ ಕೀರ್ತನೆಯ ಚರಣದಲ್ಲಿ ವಿವರಣೆಯಿದೆ.

ಪರಮಾತ್ಮನ ಪದತಲ ನಮಗೆ ಸುಮ್ಮನೆ ಸಿಗುವುದಿಲ್ಲ. “ಸುಮ್ಮನೇ ಬ್ರಹ್ಮವಾಗುವನೇ ಮೂಲಾ ಹಮ್ಮೆಲ್ಲ ಲಯವಾಗಿ ಉಳಿಯದೆ ತಾನೆ ತಾನುಳಿಯದೆ ತಾನೆ..." ಎಂದು ಕೇಳಿಕೊಳ್ಳಬೇಕಾಗುತ್ತದೆ ಮೈಸೂರು ಶಿವರಾಮ ಶಾಸ್ತ್ರೀಯವರು ರಚಿಸಿದ ತತ್ತ್ವಪದದಲ್ಲಿದ್ದಂತೆ; ಸಾವೆಂಬ ಗುಮ್ಮನನ್ನು ಕರೆಯುತ್ತೇನೆ ಎಂದು ಯಾರಾದರೂ ಹೆದರಿಸಿದರೆ “ಗುಮ್ಮನ ಕರೆಯದಿರೆ ಅಮ್ಮ ನೀನು ಗುಮ್ಮನ ಕರೆಯದಿರೆ... ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ" ಎಂದು ಮಾತು ಕೊಡಬೇಕಾಗುತ್ತದೆ ಯಶೋದೆಗೆ ಬಾಲಕೃಷ್ಣ ಕೊಟ್ಟಂತೆ; “ಅಮ್ಮ ನೀನು ಸಾಯ ಲೇಕೆ ನಮ್ಮ ತಬ್ಬಲಿ ಮಾಡಲೇಕೆ ಸುಮ್ಮನಿಲ್ಲಿಯೇ ನಿಲ್ಲು" ಎಂದು ಬಿನ್ನವಿಸಿಕೊಳ್ಳ ಬೇಕಾಗುತ್ತದೆ ಪುಣ್ಯಕೋಟಿಯ ಕರುವಿನಂತೆ.

ಹುಟ್ಟು-ಸಾವಿನ ನೆಲೆಗಟ್ಟಿನ, ಉನ್ನತ ಆಧ್ಯಾತ್ಮಿಕ ಮಟ್ಟದ ‘ಸುಮ್ಮನೆ’ ಅದು. ಸುಮ್ಮನೆ ಒಮ್ಮೆ ನಿಘಂಟು ತೆರೆದು ನೋಡಿ. ಅರ್ಥಾತ್, ನಿಘಂಟುವಿನಲ್ಲಿ ಸುಮ್ಮನೆ ಪದದ ಅರ್ಥ ಉದಾಹರಣೆ ಗಳನ್ನು ಗಮನಿಸಿ. ಸುಮ್ಮನೆ ಅಥವಾ ಅದರ ಇನ್ನೊಂದು ರೂಪ ಸುಮ್ಮಗೆ ಇವೆರಡೂ ಅವ್ಯಯ ಗಳು. ಲಿಂಗ ವಚನ ಕಾಲ ವಿಭಕ್ತಿಗಳಿಂದ ಬದಲಾಗದವು.

ಸುಮ್ಮಗೆಯ ಮೊದಲ ಅರ್ಥ ಮಾತಿಲ್ಲದೆ, ಮೌನವಾಗಿ ಎಂದು. “ಲೋಕಕ್ಕೆ ಧರ್ಮಾಧರ್ಮ ತೋರಿಸಲಿಕ್ಕೆಂದು ಸುಮ್ಮಗೆ ಇದ್ದನು", “ಕೆಲಕೆಲವು ಪ್ರಸಂಗಗಳಲ್ಲಿ ಮಾತನಾಡುವುದನ್ನು ಬಿಟ್ಟು ಸುಮ್ಮಗೆ ಕೂಡ್ರಬೇಕು". ಇನ್ನೊಂದು ಅರ್ಥ- ಪ್ರತಿಫಲವಿಲ್ಲದೆ, ಉಚಿತವಾಗಿ ಎಂದು.

“ಮರಿಮಗನಾದರೆ ಹರಿಗೋಲು ಸುಮ್ಮಗೆ ದಾಟಿಸ್ಯಾನೇ?" ಅಂತ ಗಾದೆಮಾತು. ಸುಮ್ಮನೆ ಪದಕ್ಕೆ ಮೊದಲ ಅರ್ಥ ಸುಮ್ಮಗೆಯದೇ. “ನಿಮ್ಮೊಡತಿಯ ಮನೆ ಯಾವುದು ಘಮ್ಮನೆ ಪೇಳೆಂದು ನೃಪತಿ ಬೆಸಗೊಳಲವಳತ್ಯುಮ್ಮಹದಿಂ ಕಿವಿಯೆಡೆಯಂ ಸುಮ್ಮನೆ ತೋರುತ್ತ ಪೋದಳತಿಮುದದಿಂದ...", “ನಾವೀ ಮುನಿಗೆ ಸುಮ್ಮನೆ ಪೋಪೆವೆನೆ ಶಾಪವೀವನು..." ಎರಡನೆಯ ಅರ್ಥ ಉಚಿತವಾಗಿ, ಬಿಟ್ಟಿ ಯಾಗಿ ಎಂದು.

“ಸುಮ್ಮನೀ ಸುಕ್ಷೇತ್ರವಾಸಿ ವಿಹರಿಸಿದುವೇ ಅಮ್ಮಮ್ಮ...", “ತನುವ ದಂಡಿಸುತುಗ್ರ ತಪದೊಳಾಚರಿಸಿ ಸುಮ್ಮನೆ ಸರ್ವಶಾಸಗಳ ಪಠಿಸುವರು..." ಮೂರನೆಯ ಅರ್ಥ ಅಕಾರಣವಾಗಿ ಎಂದು. “ಸುಮ್ಮನದು ತಾ ಬಂದು ಮಾಡುವ ಕರ್ಮವಾವುದು?", “ಸುಮ್ಮನಪಕೀರ್ತಿಗೊಳಗಾಗಲೇಕೆ?". ನಾಲ್ಕನೆಯ ಅರ್ಥ ತೆಪ್ಪಗೆ, ನಿಷ್ಕ್ರಿಯವಾಗಿ ಎಂದು. “ಬ್ರಾಹ್ಮಣನು ಗಂಡನ್ನು ಹುಡುಕಿಹುಡುಕಿ ಸಾಕಾಗಿ ಸುಮ್ಮನೆ ಮನೆಯಲ್ಲಿ ಕೂತುಬಿಟ್ಟನು" ಸುಮ್ಮಸುಮ್ಮನೆ ಎಂದು ದ್ವಿರುಕ್ತಿಯಾಗಿಯೂ ಬಳಕೆಯಿದೆ.

“ಹೊಟ್ಟೆ ತುಂಬಿದಾಗ್ಯೂ ಸುಮ್ಮಸುಮ್ಮನೆ ಮೃಗಗಳನ್ನು ಕೊಲ್ಲುತ್ತದೆ". ಸುಖಾಸುಮ್ಮನೆ ಎಂಬ ಬಳಕೆಯೂ ಇದೆ. “ಸುಖಾಸುಮ್ಮನೆ ಅಕ್ಕಯ್ಯನಿಗೆ ಬೇಸರವಾಗುವುದು ಬೇಡವಷ್ಟೆ?"ಸುಖಾ ಸುಮ್ಮನೆ ಇಷ್ಟುಹೊತ್ತು ಏನೇನೋ ಉಪಕಥೆಗಳಿಂದ ನಿಮ್ಮ ತಲೆ ತಿಂದಿದ್ದಕ್ಕೆ ಕ್ಷಮೆಯಿರಲಿ. ತಲೆಯ ಸ್ವಲ್ಪ ಭಾಗ ತಿನ್ನದೇ ಉಳಿದಿದೆಯಾದರೆ ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ.

ಅದೇನೆಂದರೆ ‘ಹಾಗೇ ಸುಮ್ಮನೆ’ ಎಂಬ ತಲೆಬರಹಗಳು. ನೀವೂ ಗಮನಿಸಿರಬಹುದು, ಅಥವಾ ನೀವೂ ಅಂಥವರೇ ಇರಬಹುದು- ಸಾಮಾಜಿಕ ಮಾಧ್ಯಮಗಳಿಂದಾಗಿ ಹೆಚ್ಚುಹೆಚ್ಚು ಜನರು ಬರೆಯುವ ಹವ್ಯಾಸ ಬೆಳೆಸಿಕೊಳ್ಳುತ್ತಿರುವ, ತಮಗನಿಸಿದ್ದೇನನ್ನೋ ಅಥವಾ ತಮ್ಮಿಷ್ಟದ್ದೇನನ್ನೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ, ಸೂಕ್ತವಾದ ಶೀರ್ಷಿಕೆ ಇಲ್ಲದೆ ‘ಹಾಗೇ ಸುಮ್ಮನೆ’ ಎಂಬ ಶೀರ್ಷಿಕೆ ಕೊಡುವುದು.

ಹಾಗೆ ಮಾಡುವುದಕ್ಕೆ ಬೇರೆಬೇರೆ ಕಾರಣಗಳಿರಬಹುದು. ಸೂಕ್ತವಾದ ಶೀರ್ಷಿಕೆ ತತ್‌ಕ್ಷಣಕ್ಕೆ ಹೊಳೆಯದಿರಬಹುದು; ಅಥವಾ, ಇಂಥ ಪುಟಗೋಸಿ ವಿಷಯಕ್ಕೆ ಮಣಭಾರದ ಶೀರ್ಷಿಕೆಯೇನೂ ಬೇಕಿಲ್ಲ ಎಂಬ ಲಘುವಾದ ತಾತ್ಸಾರಭಾವವಿರಬಹುದು; ಆಕರ್ಷಕ ಶೀರ್ಷಿಕೆಯಿಂದ ಹೆಚ್ಚು ನಿರೀಕ್ಷೆ ಹುಟ್ಟಿಸಿ ಆಮೆಲೆ ಅಸಲಿ ವಿಷಯವು ಸಪ್ಪೆಯೆನಿಸಿದರೆ ಮೂಗಿಗಿಂತ ಮೂಗುತಿ ಭಾರವಾದೀ ತೆಂಬ ಹಿಂಜರಿಕೆ ಇರಬಹುದು; ಬೇರೆಯವರು ‘ಹಾಗೇ ಸುಮ್ಮನೆ’ ಎಂಬ ತಲೆಬರಹ ಕೊಟ್ಟಿದ್ದಾರೆ ಬಹುಶಃ ಅದೇ ಸರಿಯಾದ ಕ್ರಮ ಎಂದು ಅಂಧಾನುಕರಣೆ ಇರಬಹುದು.

ಒಟ್ಟಿನಲ್ಲಿ ‘ಹಾಗೇ ಸುಮ್ಮನೆ’ ಎಂಬ ಶೀರ್ಷಿಕೆಯಿರುವ ಒಂದಾದರೂ ಪುಟ್ಟ ಬರಹವೋ ಒಂದು ಕವಿತೆಯೋ ಒಂದು ಚಿತ್ರವೋ ಒಂದು ಧ್ವನಿಮುದ್ರಣವೋ ಒಂದು ದೃಶ್ಯಮುದ್ರಣವೋ ಪ್ರತಿದಿನ ವೂ ಹೊಸದಾಗಿ ನೋಡಲಿಕ್ಕೆ ಸಿಗುತ್ತದೆ. ಸ್ವಾರಸ್ಯವೆಂದರೆ ಹೊಸಬರಂತಷ್ಟೇ ಅಲ್ಲ, ಆಯಾ ಕ್ಷೇತ್ರಗಳಲ್ಲಿ ಸಾಕಷ್ಟು ಪಳಗಿದವರೂ, ಅನುಭವಿಗಳೂ, ಹೆಸರು ಮಾಡಿದವರೂ ಕೆಲವೊಮ್ಮೆ ‘ಹಾಗೇ ಸುಮ್ಮನೆ’ ತಲೆಬರಹದ ಮೊರೆ ಹೊಗುವ ಉದಾಹರಣೆಗಳು ಫೇಸ್‌ಬುಕ್‌ನಲ್ಲಿ ಬೇಕಾದಷ್ಟು ಸಿಗುತ್ತವೆ.

ಕೆರೆಮನೆ ಶಿವಾನಂದ ಹೆಗಡೆಯವರು ಯಕ್ಷಗಾನ ವೇಷಭೂಷಣದಲ್ಲಿ ತನ್ನದೊಂದು ಫೋಟೊ ಏರಿಸಿ ‘ಹಾಗೆ ಸುಮ್ಮನೆ’ ಎಂದು ತಲೆಬರಹ ಕೊಟ್ಟಿದ್ದಾರೆ. ಪುಸ್ತಕ ಪ್ರಕಾಶಕ ಜಮೀಲ್ ಸಾವಣ್ಣ ಒಂದೇ ಫ್ರೇಮ್‌ನಲ್ಲಿ ದ್ವಿಪಾತ್ರವೆಂಬಂತೆ ತನ್ನೆರಡು ಭಾವಚಿತ್ರಗಳನ್ನು ಪೋಸ್ಟ್ ಮಾಡಿ ‘ಹಾಗೆ ಸುಮ್ಮನೆ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಕಾಮಿಡಿ ರೀಲ್‌ಗಳಿಂದ ಪ್ರಸಿದ್ಧರಾದ ಗಣೇಶ ಕಾಮತ್ ಒಂದು ಹಾಡು ಹಾಡಿದ್ದನ್ನು ಪೋಸ್ಟ್ ಮಾಡಿ ‘ಹಾಗೆ ಸುಮ್ಮನೆ ಹಾಡಿದಾಗ’ ಎಂದು ಬರೆದಿದ್ದಾರೆ.

ವಾಗ್ಮಿ ಲೇಖಕ ಸದ್ಯೋಜಾತ ಭಟ್ಟರು ‘ಹಾಗೇ ಸುಮ್ಮನೆ, ನಿನ್ನೆ ಮಾಡಿದ ಉಪನ್ಯಾಸದ ಚಿಕ್ಕ ತುಣುಕು...’ ಎಂದೊಂದು ತುಣುಕು ಏರಿಸಿದ್ದಾರೆ. ಗಾಯಕಿ ಮಂಗಳಾ ರವಿ ‘ಹಾಗೇ ಸುಮ್ಮನೆ... ಎಂ.ಎನ್. ವ್ಯಾಸರಾವ್ ರಚನೆ, ಮೂಲದಲ್ಲಿ ಸಿ.ಅಶ್ವತ್ಥ್ ಸಂಗೀತ ನಿರ್ದೇಶನದಲ್ಲಿ ರತ್ನಮಾಲಾ ಪ್ರಕಾಶ್ ಹಾಡಿದ್ದು, ಇಲ್ಲಿ ಕೀಬೋರ್ಡ್ ಕಲಾವಿದ ಅಶ್ವಿನ್‌ಕುಮಾರ್ ಸಾಥ್‌ನಲ್ಲಿ’ ಎಂದು ತನ್ನದೊಂದು ಗಾಯನದ ತುಣುಕು ಹಂಚಿಕೊಂಡಿದ್ದಾರೆ.

ತರಂಗ ವಾರಪತ್ರಿಕೆಯ ಚಿತ್ರಕಲಾವಿದ ಜೇಮ್ಸ್ ವಾಝ್ ಫೇಸ್‌ಬುಕ್ ಗೋಡೆಮೇಲೆ ‘ಹಾಗೇ ಸುಮ್ಮನೆ’ ಶೀರ್ಷಿಕೆಯ ಚಿತ್ರಗಳು ಹತ್ತಾರು ಸಿಗುತ್ತವೆ. ಪತ್ರಿಕೆಗಳಲ್ಲಿ ಓದುಗರ ಓಲೆಗಳಿಂದ ಖ್ಯಾತ ರಾಗಿರುವ ಮೈಸೂರು ನಿವಾಸಿ ವಕೀಲ ಪಿ.ಜೆ.ರಾಘವೇಂದ್ರ, ರಾಯಲ್ ಎನ್‌ಫೀಲ್ಡ್ ಬೈಕ್ ಸವಾರಿ ಫೋಟೊಗೆ ‘ಯುಗಾದಿಯ ಪ್ರಯುಕ್ತ’ ಎನ್ನುತ್ತಲೇ ‘ಹಾಗೇ ಸುಮ್ಮನೆ’ ಸೇರಿಸಿದ್ದಾರೆ!

ಹಾಗೆ ಇನ್ನೊಬ್ಬ ಖ್ಯಾತ(?) ವಕೀಲ ನಾಗರಾಜ ಕುಡ್ಪಲಿ ಮಹಾಶಯರದೊಂದು ಲಿಪ್ ಸಿಂಕಿಂಗ್ ಗಾಯನದ ವಿಡಿಯೊ ‘ಹಾಗೇ ಸುಮ್ಮನೆ’ ತಲೆಬರಹದ್ದನ್ನು ನಾನು ಗಮನಿಸಿದ್ದಿದೆ. ಇವೆಲ್ಲದಕ್ಕೂ ಕಳಶಪ್ರಾಯವೆಂದರೆ, ಸುಮಾರು 18000 ಫಾಲೊವರ್ಸ್ ಇರುವ ‘ಹಾಗೆ ಸುಮ್ಮನೆ’ ಹೆಸರಿನದೇ ಒಂದು ಫೇಸ್‌ಬುಕ್ ಪ್ರೊಫೈಲ್!

ನಾನಿದನ್ನು ತಪ್ಪೆನ್ನುತ್ತಿಲ್ಲ, ತುಚ್ಛೀಕರಿಸುತ್ತಿಲ್ಲ. ‘ಹಾಗೆ ಸುಮ್ಮನೆ’ ಎಂದು ಕ್ಯಾಪ್ಷನ್ ಕೊಡುವುದಕ್ಕೆ ಕಾರಣ ಏನಿರಬಹುದೆಂದಷ್ಟೇ ನನ್ನ ಕುತೂಹಲ. ಏಕೆಂದರೆ ‘ಹಾಗೇ ಸುಮ್ಮನೆ’ ಎಂದು ಬರೆದು ಕೊಂಡರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ನಾಲ್ಕಾರು ಜನ ನೋಡಿ ಮೆಚ್ಚಲಿ, ಪ್ರತಿಕ್ರಿಯಿಸಲಿ ಎಂದೇ ತಾನೆ? ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ...’ ರೀತಿಯ ವೈರಾಗ್ಯವೇನೂ ಅವರಲ್ಲಿರುವುದಿಲ್ಲ.

ಅಲ್ಲದೇ ಬಹುತೇಕ ಸಂದರ್ಭಗಳಲ್ಲಿ ಅವರ ಸರಕು (ಅದು ಲೇಖನವಿರಲಿ ಕವನವಿರಲಿ ಗಾಯನ ವಿರಲಿ ಚಿತ್ರಕಲೆಯಿರಲಿ...) ಮೆಚ್ಚುವಂತೆ ಇರುವುದೂ ಹೌದು. ನನ್ನೊಬ್ಬ ಅಮೆರಿಕನ್ನಡಿಗ ಸ್ನೇಹಿತ ಅಲೆಕ್ಸಾಂಡರ್ ಮೈಕೇಲ್, ಗಿಟಾರ್ ಜತೆಗೆ ಚೆನ್ನಾಗಿ ಹಾಡುತ್ತಾರೆ; ಅಣ್ಣಾವ್ರು ಹಾಡಿದ ರಾಘವೇಂದ್ರ ಸ್ವಾಮಿಗಳ ಭಕ್ತಿಗೀತೆಗಳನ್ನೂ ಅಲೆಕ್ಸ್ ತಮ್ಮ ಸುಶ್ರಾವ್ಯ ಕಂಠದಲ್ಲಿ ಮಧುರವಾಗಿ ಪ್ರಸ್ತುತಪಡಿಸು ತ್ತಾರೆ. ಫೇಸ್ಬುಕ್‌ಗೇರಿಸುವಾಗ ಮಾತ್ರ ‘ಹಾಗೇ ಸುಮ್ಮನೆ’ ಎಂಬ ಶೀರ್ಷಿಕೆ.

ಸ್ವಾನುಭವಗಳ ಪರಿಪಕ್ವ ಟಿಪ್ಪಣಿಗಳನ್ನು ಬರೆಯುವ, ಇದುವರೆಗೆ ಐದಾರು ಪುಸ್ತಕಗಳನ್ನೂ ಪ್ರಕಟಿಸಿರುವ, ಕೃಷ್ಣಾ ಕೌಲಗಿ ಟೀಚರ್ ಈಗಲೂ ತಮ್ಮ ಫೇಸ್‌ಬುಕ್ ಪೋಸ್ಟ್‌ಗಳಿಗೆಲ್ಲ ‘ಹಾಗೇ ಸುಮ್ಮನೆ’ ಎಂದೇ ತಲೆಬರಹ ಕೊಡುತ್ತಾರೆ! ಇನ್ನೊಬ್ಬರು ಜ್ಯೋತಿ ರಾಜೇಶ್, ಕುದುರೆಮುಖ ದಲ್ಲಿದ್ದವರು ಗಣಿಉದ್ಯಮ ನಿಂತ ಮೇಲೆ ಮಂಗಳೂರಿಗೆ ವರ್ಗವಾಗಿರುವ ಪ್ರತಿಭಾನ್ವಿತ ಬರಹಗಾರ್ತಿ.

ನನಗೆ ಭಗವದ್ಗೀತೆ ತರಗತಿಗಳ ಮೂಲಕ ಪರಿಚಯವಾದವರು. ಹಾಸ್ಯರಸ ಬೆರೆಸಿ ಒಳ್ಳೊಳ್ಳೆಯ ವಿಚಾರಪ್ರಚೋದಕ ಕಿರುಬರಹಗಳನ್ನೂ ಕವಿತೆಗಳನ್ನೂ ಹೊಸೆಯುತ್ತಾರೆ. ಶೀರ್ಷಿಕೆ ಮಾತ್ರ ಪ್ರತಿ ಯೊಂದಕ್ಕೂ ‘ಹಾಗೇ ಸುಮ್ಮನೆ’. ಜ್ಯೋತಿಯವರ ಇತ್ತೀಚಿನದೊಂದು ‘ಹಾಗೆ ಸುಮ್ಮನೆ’ ಹೀಗಿತ್ತು (ಇದನ್ನು ಇಬ್ಬರ ಸಂಭಾಷಣೆ ಎಂಬಂತೆ ಓದಿ. ಇಲ್ಲಿ ಸ್ಥಳಮಿತಿಯಿಂದಾಗಿ ಹೀಗೆ ಬರೆದಿದ್ದೇನೆ): “ಹಲೋ...", “ಹಲ್ಲೋ...", “ಹೇಗಿದ್ದೀರಿ?", “ಆರಾಮ್... ಚೆನ್ನಾಗಿದ್ದೀನಿ. ನೀವು ಹೇಗಿದ್ದೀರ?", “ನಾನೂ ಚೆನ್ನಾಗಿದೀನಿ...", “ಮೊನ್ನೆ ಯಾರೋ ನಿಮಗೆ ತುಂಬ ಜ್ವರ ಅಂತ ಹೇಳಿದ್ರು... ಈಗ ಹೇಗಿದೆ ಜ್ವರ?", “ಹೂಂ ಇತ್ತು ಕಣ್ರೀ. ಆದ್ರೆ ಆ ಜ್ವರ ಈಗ ಹೇಗಿದೆ ಅಂತ ಗೊತ್ತಿಲ್ಲಪ್ಪ.

ಯಾಕಂದ್ರೆ ಅದು ನನ್ನ ಬಿಟ್ಹೋಗಿ ಎರಡ್ ದಿನ ಆಯ್ತು. ಹೇಗಿದ್ದೀಂತ ಅದ್ನ ವಿಚಾರಿಸೋಣ ಅಂದ್ರೆ ಅದು ಎಲ್ಲಿ ಹೋಯ್ತೂಂತ್ಲೂ ಗೊತ್ತಾಗ್ಲಿಲ್ಲ ನೋಡಿ. ನಾನಂತೂ ಅರಾಮ್!" ನಿಮ್ಮೆಲ್ಲರ ಜತೆಗೂ ಒಮ್ಮೆಯಾದರೂ ಇದ್ದಿರಬಹುದಾದ ಶೀತ/ತಲೆನೋವು/ಜ್ವರ/ಹಲ್ಲುನೋವು ಮುಂತಾದವು ಈಗ ಹೇಗಿವೆ ಅಂತೇನಾದ್ರೂ ಗೊತ್ತಾ? ಜ್ಯೋತಿ ಇದನ್ನು ‘ಹಾಗೇ ಸುಮ್ಮನೆ’ ಎಂಬ ಧಾಟಿಯಲ್ಲಷ್ಟೇ ಬರೆದಿದ್ದಿರಬಹುದು.

ಸೂಕ್ಷ್ಮವಾಗಿ ಓದಿಕೊಂಡರೆ ಇದರಲ್ಲೊಂದು ಜೀವನಪಾಠವೇ ಇದೆ! ಜ್ವರದ ಉದಾಹರಣೆಯ ಮೂಲಕ ಸುವಿಚಾರವೊಂದನ್ನು ಬಿತ್ತಿದ್ದಿದೆ. ಅದೇನೆಂದರೆ- ಜ್ವರ ಅಥವಾ ಅಂಥ ಕಾಯಿಲೆಗಳ ನ್ನಷ್ಟೇ ಅಲ್ಲ. ಬದುಕಿನಲ್ಲಾದ ಕೆಟ್ಟ ಅನುಭವಗಳನ್ನೂ ನಾವು ಸಾಧ್ಯವಾದಷ್ಟೂ ಮಟ್ಟಿಗೆ ಅವುಗಳ ಪಾಡಿಗೆ ಬಿಟ್ಟುಬಿಡಬೇಕು.

ಮತ್ತೆಮತ್ತೆ ಅವುಗಳನ್ನೇ ಕೆದಕಿ ನಮ್ಮ ಮನಸ್ಸೆಂಬ ಮೊಗಸಾಲೆಯಲ್ಲಿ ಅವುಗಳಿಗೆ ಮಣೆ ಹಾಕಿ ಸತ್ಕರಿಸಬಾರದು. ಇದು ಬರೆದಷ್ಟು/ಹೇಳಿದಷ್ಟು ಸುಲಭ ಅಲ್ಲವಾದರೂ ಪಾಲಿಸಿದರೆ ಫಲಿತಾಂಶ ಒಳ್ಳೆಯದಿರುತ್ತದೆ. ಕನಿಷ್ಠ ಪ್ರಯತ್ನವಾದರೂ ಆ ದಿಸೆಯತ್ತ ಇರಬೇಕು.

ಆದ್ದರಿಂದ ಇನ್ನುಮುಂದೆ ‘ಹಾಗೇ ಸುಮ್ಮನೆ’ ಶೀರ್ಷಿಕೆಯ ಪೋಸ್ಟುಗಳನ್ನು ಲಘುವಾಗಿ ಪರಿಗಣಿಸ ಬೇಡಿ. ಅವುಗಳಲ್ಲೂ ಹಿತಕರ ಹೂರಣವಿರುತ್ತದೆಂದು ಗೊತ್ತಿರಲಿ. ಕೊನೆಯಲ್ಲೊಂದು ಸ್ವಾರಸ್ಯಕರ ವಿಪರ್ಯಾಸ. ನಾನು ಬರವಣಿಗೆಯ ಇಷ್ಟು ವರ್ಷಗಳಲ್ಲಿ ಇದುವರೆಗೂ ‘ಹಾಗೇ ಸುಮ್ಮನೆ’ ಎಂಬ ತಲೆಬರಹ ಕೊಟ್ಟು ಪೋಸ್ಟ್ ಮಾಡಿದ್ದಿಲ್ಲ. ಆದರೆ ಇಂದಿನ ಈ ಅಂಕಣಬರಹದ ಶೀರ್ಷಿಕೆಯಲ್ಲಿ ಒಂದಲ್ಲ ಎರಡು ಸರ್ತಿ ‘ಹಾಗೇ ಸುಮ್ಮನೆ’!