ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ವಿಕ್ರಮ ಬೇತಾಳ 10: ಅತೀ ನಾಜೂಕಿನ ಮೂವರು ರಾಜಕನ್ಯೆಯರು

ಒಂದು ಹುಣ್ಣಿಮೆಯ ರಾತ್ರಿ, ಮೊದಲನೆಯ ಮಗಳು ತಾರಾವತಿ ಚಂದ್ರನ ಬೆಳಕಿನಲ್ಲಿ ಉದ್ಯಾ ನವನದಲ್ಲಿ ನಿಂತಿದ್ದಳು. ಶೀತಲವಾದ ಆ ಚಂದ್ರ ಕಿರಣಗಳು ಮೈಮೇಲೆ ಬಿದ್ದ ಕ್ಷಣವೇ ಆಕೆ ಅಯ್ಯೋ, ಸುಟ್ಟುಹೋಯಿತು! ಎಂದು ಚೀರಿ ಮೂರ್ಛೆ ಹೋದಳು. ಆಕೆಯ ನವಿರಾದ ಚರ್ಮದ ಮೇಲೆ ಬಿಸಿಲಿಗೆ ಸುಟ್ಟಂತೆ ಬೊಕ್ಕೆಗಳು ಎದ್ದುಬಿಟ್ಟಿದ್ದವು!

ವಿಕ್ರಮ ಬೇತಾಳ 10: ಅತೀ ನಾಜೂಕಿನ ಮೂವರು ರಾಜಕನ್ಯೆಯರು

-

ಒಂದೊಳ್ಳೆ ಮಾತು‌

ಅಂಗದೇಶದ ಭೋಗವತಿ ನಗರದಲ್ಲಿ ಭೂರಿವಸು ಎಂಬ ಮಹಾ ಧನಿಕನೊಬ್ಬನಿದ್ದನು. ಅವನಿಗೆ ಮೂವರು ಮುದ್ದಿನ ಹೆಣ್ಣುಮಕ್ಕಳು. ಭಾರಿ ವೈಭೋಗ, ಮುದ್ದು ಮತ್ತು ಅತಿಯಾದ ರಕ್ಷಣೆಯಲ್ಲಿ ಬೆಳೆದ ಆ ಮೂವರೂ ಕನ್ಯೆಯರು ಲೋಕದ ಸಾಟಿಯಿಲ್ಲದ ನಾಜೂಕು ದೇಹದವರೆಂದು ಖ್ಯಾತ ರಾಗಿದ್ದರು. ಅವರ ವಿಚಿತ್ರ ಸೂಕ್ಷ್ಮತೆ ಎಷ್ಟು ವಿಪರೀತವಾಗಿತ್ತೆಂದರೆ, ಅದನ್ನೇ ದೊಡ್ಡ ಹೆಗ್ಗಳಿಕೆ ಯೆಂದು ಮನೆಮಂದಿ ನಂಬಿದ್ದರು.

ಒಂದು ಹುಣ್ಣಿಮೆಯ ರಾತ್ರಿ, ಮೊದಲನೆಯ ಮಗಳು ತಾರಾವತಿ ಚಂದ್ರನ ಬೆಳಕಿನಲ್ಲಿ ಉದ್ಯಾ ನವನದಲ್ಲಿ ನಿಂತಿದ್ದಳು. ಶೀತಲವಾದ ಆ ಚಂದ್ರ ಕಿರಣಗಳು ಮೈಮೇಲೆ ಬಿದ್ದ ಕ್ಷಣವೇ ಆಕೆ ಅಯ್ಯೋ, ಸುಟ್ಟುಹೋಯಿತು! ಎಂದು ಚೀರಿ ಮೂರ್ಛೆ ಹೋದಳು. ಆಕೆಯ ನವಿರಾದ ಚರ್ಮದ ಮೇಲೆ ಬಿಸಿಲಿಗೆ ಸುಟ್ಟಂತೆ ಬೊಕ್ಕೆಗಳು ಎದ್ದುಬಿಟ್ಟಿದ್ದವು!

ಎರಡನೆಯ ಮಗಳು ಚಂದ್ರಾವತಿ ಮತ್ತೊಮ್ಮೆ ಅಂತಃಪುರದಲ್ಲಿ ಕುಳಿತಿದ್ದಾಗ, ತಂಗಿ ತಮಾಷೆಗೆ ಎಸೆದ ಒಂದು ಪುಟ್ಟ ಕಮಲದ ಹೂವು ಆಕೆಯ ಕಾಲಿನ ಮೇಲೆ ಬಿದ್ದಿತು. ಗರಿಕೆಯಷ್ಟೇ ಮೃದು ವಾದ ಆ ಹೂವಿನ ಸ್ಪರ್ಶಕ್ಕೆ ಆಕೆಯ ಪಾದದ ಮೂಳೆ ಮುರಿದಂತಾಗಿ, ಗಾಯವಾಗಿ ಆಕೆ ತಿಂಗಳುಗಟ್ಟಲೆ ಹಾಸಿಗೆ ಹಿಡಿದಳು.

ಮೂರನೆಯ ಮಗಳು ಕನಕಾವತಿ ಅತ್ಯಂತ ಮೃದುವಾದ ಹಂಸತೂಲಿಕೆಯ ಹಾಸಿಗೆಯ ಮೇಲೆ ಮಲಗಿದ್ದಳು. ಆದರೆ ಬೆಳಿಗ್ಗೆ ಎದ್ದಾಗ ಆಕೆಯ ಇಡೀ ಮೈಮೇಲೆ ಕೆಂಪು ಕಲೆಗಳು ಮತ್ತು ಗಾಯದ ಗುರುತುಗಳು ಮೂಡಿದ್ದವು. ಪರಿಶೀಲಿಸಿದಾಗ, ನೂರಾರು ರೇಷ್ಮೆ ಹಾಸುಗಳ ಕೆಳಗೆ ಕೇವಲ ಒಂದು ಸಣ್ಣ ಸಾಸಿವೆ ಕಾಳು ಅಡಗಿತ್ತು! ಅದರ ಒತ್ತಡಕ್ಕೆ ಆಕೆಯ ದೇಹ ಗಾಯಗೊಂಡಿತ್ತು.

ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 9: ವೀರಬಾಹು ಮಹಾರಾಜನ ನ್ಯಾಯ ತೀರ್ಮಾನ

ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಚಂದ್ರನ ಬೆಳಕಿಗೆ ಸುಟ್ಟವಳು, ಕಮಲದ ಹೂವಿಗೆ ಗಾಯಗೊಂಡವಳು, ಹಾಸಿಗೆಯ ಕೆಳಗಿನ ಸಾಸಿವೆ ಕಾಳಿಗೆ ಮೈಮೇಲೆ ಗಾಯ ಮಾಡಿಕೊಂಡವಳು- ಈ ಮೂವರಲ್ಲಿ ಅತ್ಯಂತ ಸೂಕ್ಷ್ಮದೇಹಿ ಯಾರು? ವಿಕ್ರಮಾದಿತ್ಯನು ನಗುತ್ತಾ ಉತ್ತರಿಸುತ್ತಾನೆ: ಮೂರನೆಯವಳೇ ಎಲ್ಲಕ್ಕಿಂತ ಹೆಚ್ಚಿನ ಸೂಕ್ಷ್ಮದೇಹಿ! ಮೊದಲ ಇಬ್ಬರಿಗೆ ಚಂದ್ರನ ಕಿರಣ ಮತ್ತು ಕಮಲದ ಹೂವು ಕಣ್ಣೆದುರೇ ಬಿದ್ದಿದ್ದರಿಂದ, ‘ನಾನು ಬಹು ನಾಜೂಕು’ ಎಂಬ ಅವರ ಕಲ್ಪನೆ ಅಥವಾ ಮಾನಸಿಕ ಭ್ರಮೆಯೇ ಆ ಗಾಯಗಳಿಗೆ ಕಾರಣ ವಾಗಿರಬಹುದು. ಆದರೆ ಮೂರನೆಯವಳು ಗಾಢ ನಿದ್ರೆಯಲ್ಲಿದ್ದಾಗ, ಹಾಸಿಗೆಯ ಕೆಳಗಿರುವ ಸಾಸಿವೆ ಕಾಳು ಕಣ್ಣಿಗೂ ಕಾಣದೆ, ಪ್ರಜ್ಞೆಯೂ ಇಲ್ಲದಿದ್ದಾಗಲೂ ಆಕೆಯ ಮೈಮೇಲೆ ಗಾಯಗಳು ಮೂಡಿದವು. ಆದ್ದರಿಂದ ಆಕೆಯೇ ಅಪ್ಪಟ, ನೈಜ ಸೂಕ್ಷ್ಮದೇಹಿ.

ಬದುಕಿನಲ್ಲಿ ನಾವಾಗಿಯೇ ಬೆಳೆಸಿಕೊಳ್ಳುವ ಅತಿಯಾದ ನಾಜೂಕುತನ, ಮುದ್ದು ಮತ್ತು ಅತಿಯಾದ ಕಾಳಜಿ ನಮ್ಮನ್ನು ಆಂತರಿಕವಾಗಿ ದುರ್ಬಲರನ್ನಾಗಿಸುತ್ತದೆ. ಸಣ್ಣ ಕಷ್ಟ, ಒಂದು ಇಷ್ಟವಿಲ್ಲದ ಮಾತು ಅಥವಾ ಸಣ್ಣ ಏರುಪೇರನ್ನೂ ಸಹಿಸಿಕೊಳ್ಳಲಾಗದಷ್ಟು ಮನಸ್ಸನ್ನು ಸೂಕ್ಷ್ಮ ಮಾಡಿ ಕೊಂಡರೆ, ಜೀವನದ ನೈಜ ಸವಾಲುಗಳನ್ನು ಎದುರಿಸುವುದು ಅಸಾಧ್ಯವಾಗುತ್ತದೆ.

ತಾಳಿಕೊಳ್ಳುವ ಶಕ್ತಿ (ಸಹಿಷ್ಣುತೆ) ಇಲ್ಲದ ದೇಹ ಮತ್ತು ಮನಸ್ಸು ಎರಡೂ ನಿರಂತರವಾಗಿ ನೋವನ್ನೇ ಅನುಭವಿಸುತ್ತವೆ. ಕಮಲದ ಹೂವಿನಂತಹ ಸಣ್ಣ ಆಘಾತಗಳಿಗೂ ಕುಸಿದುಬೀಳುವ ಅತಿ ಸೂಕ್ಷ್ಮತೆ ದೌರ್ಬಲ್ಯವೇ ಹೊರತು ಹೆಮ್ಮೆಯಲ್ಲ. ಹೊರಗಿನ ಸೌಕರ್ಯಗಳು ಎಷ್ಟೇ ಇರಲಿ, ಬದುಕಿನ ಬಿಸಿಲು-ಮಳೆಗಳನ್ನು ತಡೆದುಕೊಳ್ಳುವ ಮಾನಸಿಕ ಗಟ್ಟಿತನವನ್ನು ಬೆಳೆಸಿಕೊಳ್ಳುವುದೇ ನಿಜವಾದ ಶಕ್ತಿ. ಕಷ್ಟಗಳನ್ನು ಎದುರಿಸುತ್ತಾ ನಾವು ಬದುಕನ್ನು ಎದುರಿಸಲು ಕಗಿ ನಿಲ್ಲುತ್ತೇವೆ. ಕಷ್ಟಗಳಿಗೆ ಹೆದರಬಾರದು, ಆದರೆ ಅದರಿಂದ ಕಲಿತ ಪಾಠವನ್ನು ಮರೆಯಬಾರದು.