Vishweshwar Bhat Column: ಕೇವಲ ಒಬ್ಬ ಶಾಲಾ ಬಾಲಕಿಗಾಗಿ ಮೂರು ವರ್ಷ ಓಡಿದ ರೈಲು !
ಕೆಲವು ವರ್ಷಗಳ ಹಿಂದೆ, ಪತ್ರಿಕೆಗಳಲ್ಲಿ ಒಂದು ವರದಿ ಪ್ರಕಟವಾಗಿತ್ತು. ‘ಒಬ್ಬಳೇ ಶಾಲಾ ಬಾಲಕಿಗಾಗಿ ಓಡುವ ರೈಲು’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ವರದಿಯದು. ಈ ಸುದ್ದಿ ನನ್ನಲ್ಲಿ ಆ ದೇಶದ ಬಗ್ಗೆ ವಿಶೇಷ ಅಭಿಮಾನವನ್ನು ಉಂಟು ಮಾಡಿತ್ತು
Source : Vishwavani Daily News Paper
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ನಾನು ಹತ್ತಿರ ಹತ್ತಿರ ನೂರು ದೇಶಗಳಿಗೆ ಹೋಗಿದ್ದರೂ, ಅಲ್ಲಿಂದ ಬರುತ್ತಿದ್ದಂತೆ ಯಾವ ದೇಶದ ಬಗ್ಗೆಯೂ ಉಸಿರು ಬಿಗಿ ಹಿಡಿದುಕೊಂಡು ಬರೆದಿಲ್ಲ. ಆದರೆ ಜಪಾನಿನಿಂದ ಬರುತ್ತಿದ್ದಂತೆ, ಯಾಕೋ ಬರೆಯಲೇಬೇಕು ಎಂದೆನಿಸಿತು. ಕಳೆದ ಒಂದೂವರೆ ತಿಂಗಳು ಗಳಿಂದ ಬರೆಯುತ್ತಿದ್ದರೂ ಅಲ್ಲಿ ನೋಡಿದ್ದು, ಕೇಳಿದ್ದು, ಓದಿದ್ದು ನನ್ನ ಮನಸ್ಸಿನಲ್ಲಿ ಇನ್ನೂ ತೊಟ್ಟಿಕ್ಕುತ್ತಲೇ ಇದೆ.
ಇನ್ನು ಸಾಕು ಮಾಡೋಣ ಅಂತ ಅಂದುಕೊಳ್ಳುತ್ತಿರುವಾಗಲೇ ಇನ್ಯಾವುದೋ ಅಂಶಗಳು ನೆನಪಾಗುತ್ತವೆ. ಹತ್ತಾರು ವಿಷಯಗಳ ಕುರಿತಂತೆ ನನ್ನ ಸಂದೇಹಗಳನ್ನು ನಿವಾರಿಸಿ ಕೊಳ್ಳಲು ಜಪಾನಿನಲ್ಲಿ ಸಿಕ್ಕಿದ ಕೆಲವು ಸ್ನೇಹಿತರಿಗೆ ಫೋನ್ ಮಾಡಿದರೆ ಅವರು ಮತ್ತಷ್ಟು ಕತೆಗಳನ್ನು ಹೇಳಿ, ನನ್ನ ಆಸಕ್ತಿಯ ಪರಿಽಯನ್ನು ಮತ್ತಷ್ಟು ವಿಸ್ತರಿಸುತ್ತಲೇ ಹೋಗು ತ್ತಿದ್ದಾರೆ.
ಹೀಗಾಗಿ ಜಪಾನ್ ನನ್ನಲ್ಲಿ ಜಮೆಯಾಗುತ್ತಲೇ ಹೋಗುತ್ತಿದೆ. ಸಾಮಾನ್ಯವಾಗಿ ನಾವು ಯಾವ ದೇಶಕ್ಕೆ ಹೋದರೂ ಅಲ್ಲಿಂದ ಕಲಿಯುವಂಥದ್ದು, ತಿಳಿಯುವಂಥದ್ದು, ಪ್ರೇರಣೆ ಗೊಳಗಾಗುವಂಥದ್ದು ಇದ್ದೇ ಇರುತ್ತದೆ. ಆದರೆ ಜಪಾನ್ ಮಾತ್ರ ನನ್ನ ಮುಂದೆ ಅಗಾಧ ಅಚ್ಚರಿಯ ಹೆಬ್ಬಾಗಿಲನ್ನು ತೆರೆದಿಟ್ಟಿದ್ದು ಸುಳ್ಳಲ್ಲ.
ಕೆಲವು ವರ್ಷಗಳ ಹಿಂದೆ, ಪತ್ರಿಕೆಗಳಲ್ಲಿ ಒಂದು ವರದಿ ಪ್ರಕಟವಾಗಿತ್ತು. ‘ಒಬ್ಬಳೇ ಶಾಲಾ ಬಾಲಕಿಗಾಗಿ ಓಡುವ ರೈಲು’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ವರದಿಯದು. ಈ ಸುದ್ದಿ ನನ್ನಲ್ಲಿ ಆ ದೇಶದ ಬಗ್ಗೆ ವಿಶೇಷ ಅಭಿಮಾನವನ್ನು ಉಂಟು ಮಾಡಿತ್ತು. ನಮ್ಮ ರಾಜ್ಯದಲ್ಲಿ ವಿದ್ಯಾರ್ಥಿಗಳು ಕಮ್ಮಿಯಾಗುತ್ತಿದ್ದಾರೆ ಎಂಬ ಕಾರಣ ನೀಡಿ ಸರಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ. ಶಿಕ್ಷಕರನ್ನು ಬೇರೆಡೆ ವರ್ಗ ಮಾಡುತ್ತಿದೆ.
ಆದರೆ ಜಪಾನಿನಲ್ಲಿ ಒಬ್ಬ ಶಾಲಾ ಬಾಲಕಿಗಾಗಿ ಒಂದು ರೈಲನ್ನು ಓಡಿಸುತ್ತಿದ್ದಾರೆ. ಅದರಿಂದ ರೈಲು ಸಂಸ್ಥೆಗೆ ನಷ್ಟವಾದರೂ, ಆ ಬಾಲಕಿಯ ವಿದ್ಯಾಭ್ಯಾಸಕ್ಕೆ ಮಾರಕವಾಗ ಬಾರದು ಎಂಬ ಸೂಕ್ಷ್ಮ ಅಂಶವನ್ನು ಗಮನಿಸಿ, ಆ ನಿರ್ಧಾರ ತೆಗೆದುಕೊಂಡಿದ್ದು ನನ್ನಲ್ಲಿ ಆ ದೇಶದ ಬಗ್ಗೆ ವಿಶೇಷ ಅಭಿಮಾನವನ್ನು ಹುಟ್ಟಿಸಿತ್ತು.
ಜಪಾನ್ ದೇಶವು ತನ್ನ ಸುಧಾರಿತ ತಂತ್ರeನ, ವಿಶಿಷ್ಟ ಸಂಸ್ಕೃತಿ ಮತ್ತು ವ್ಯಾಪಕ ವಿಶ್ವಾ ಸಾರ್ಹತೆ ಇರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪ್ರಸಿದ್ಧ. ಆದರೆ ಆ ದೇಶವು ಕೇವಲ ತಂತ್ರಜ್ಞಾನದ ಪ್ರಗತಿಗೆ ಮಾತ್ರ ಸೀಮಿತವಾಗಿಲ್ಲ. ಇದು ಮಾನವೀಯ ಮೌಲ್ಯಗಳನ್ನು, ಸಮುದಾಯದ ಸಂವೇದನೆಗಳನ್ನು ಮತ್ತು ಪ್ರತಿಯೊಬ್ಬ ವ್ಯಕ್ತಿಯ ಮಹತ್ವವನ್ನು ಅರಿತು ಕೊಂಡ ಸಂವೇದನಾಶೀಲ ರಾಷ್ಟ್ರವಾಗಿ ತನ್ನನ್ನು ಗುರುತಿಕೊಂಡಿರುವುದು ಗಮನಾರ್ಹ.
ಪ್ರಾಯಶಃ ಯಾವುದೇ ದೇಶದದರೂ ಅಲ್ಲಿನ ರೈಲ್ವೆ ಇಲಾಖೆ ಒಬ್ಬರಿಗಾಗಿ ರೈಲನ್ನು ಓಡಿಸಿದ ನಿದರ್ಶನಗಳಿಲ್ಲ. ಅದರಿಂದ ರೈಲು ಸಂಸ್ಥೆಗೆ ವರ್ಷಕ್ಕೆ ಕೋಟ್ಯಂತರ ರುಪಾಯಿ ನಷ್ಟ ವಾಗುವುದು ಸರ್ವವಿದಿತ. ಆದರೆ ಒಬ್ಬ ಬಾಲಕಿ ಕೂಡ ಶಿಕ್ಷಣದಿಂದ ವಂಚಿತಳಾಗಬಾರದು ಎಂದು ಯೋಚಿಸುವುದು ಆ ದೇಶದ ಪ್ರಖರ ಸಾಕ್ಷಿಪ್ರಜ್ಞೆ ಮತ್ತು ಅಂತಃಶಕ್ತಿ ಯನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ಸಾಕ್ಷಿಯಾಗಿ ಜಪಾನಿನ ರೈಲು ಸೇವೆ ಒಬ್ಬ ವಿದ್ಯಾರ್ಥಿ ಗಾಗಿ ರೈಲು ಓಡಿಸಿದ ಕಥೆ ರೋಮಾಂಚನಕಾರಿ.
ಸುಮಾರು ಎರಡೂವರೆ ದಶಕಗಳ ಹಿಂದೆ, ಜಪಾನಿನ ಹೋಕೈಡೋ ಪ್ರಾಂತ್ಯದಲ್ಲಿ, ಕಮಿ-ಶಿರಾಟಾಕಿ ಎಂಬ ರೈಲು ನಿಲ್ದಾಣವನ್ನು ನಿರ್ಮಿಸಲಾಯಿತು. ಇದರ ಸುತ್ತಮುತ್ತ ಸಾಕಷ್ಟು ವಸತಿ ಬಡಾವಣೆಗಳಿದ್ದವು. ಆದರೆ ಕಾಲಕ್ರಮೇಣ ಆ ಪ್ರದೇಶವು ನಿರ್ವಸತಿ ಪ್ರದೇಶ ವಾಗುತ್ತಾ ಹೋಯಿತು. ಅದರಲ್ಲೂ ವಿಶೇಷವಾಗಿ ಶಿರಾಟಾಕಿ ರೈಲು ನಿಲ್ದಾಣದ ಬಳಿ ಜನಸಂಖ್ಯೆ ವ್ಯಾಪಕವಾಗಿ ಕುಸಿಯಲಾರಂಭಿಸಿತು. ಆ ಪ್ರದೇಶ ಆಗಾಗ ಭಾರಿ ಭೂಕಂಪ ಗಳಿಗೆ ತುತ್ತಾಗುತ್ತಿದ್ದುದೂ ಇದಕ್ಕೆ ಕಾರಣವಾಗಿತ್ತು. ಅಲ್ಲಿ ಕೆಲವೇ ಕೆಲವು ಮನೆಗಳು ಮಾತ್ರ ಉಳಿದಿದ್ದವು. ಅಲ್ಲಿನ ಜನ ಬೇರೆ ಊರುಗಳಿಗೆ ಗುಳೆ ಹೋಗಿದ್ದರ ಪರಿಣಾಮ ಇಡೀ ಊರು ಹೆಚ್ಚು-ಕಮ್ಮಿ ಖಾಲಿಯಾಯಿತು.
ಆಗ ಅನಿವಾರ್ಯವಾಗಿ ರೈಲು ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಯಿತು. ಕಾರಣ ದಿನದ ಕೆಲವು ಟ್ರಿಪ್‌ಗಳಲ್ಲಿ ಇಡೀ ಬೋಗಿಯಲ್ಲಿ ಜನರೇ ಇರುತ್ತಿರಲಿಲ್ಲ. ಹೀಗಾಗಿ ದಿನದಲ್ಲಿ ಎಂಟು ಸಲ ಓಡುತ್ತಿದ್ದ ರೈಲು ಸಂಚಾರವನ್ನು ಎರಡಕ್ಕೆ ಇಳಿಸಲಾಯಿತು. ಆಗಲೂ ಟ್ರೇನಿನಲ್ಲಿ ಏಳೆಂಟು ಜನ ಮಾತ್ರ ಪ್ರಯಾಣಿಸುತ್ತಿದ್ದರು. ಪರಿಣಾಮ, ರೈಲು ಸಂಸ್ಥೆಯು ನಷ್ಟ ಅನುಭವಿಸಲಾರಂಭಿಸಿತು.
ಎರಡು ಸಲ ಸಂಚರಿಸುತ್ತಿದ್ದ ಟ್ರೇನನ್ನು ಒಂದಕ್ಕೆ ಇಳಿಸಲಾಯಿತು. ಆಗಲೂ ಟ್ರೇನು ಭರ್ತಿಯಾಗುವುದಿರಲಿ, ಕೇವಲ ಮೂರ್ನಾಲ್ಕು ಪ್ರಯಾಣಿಕರು ಮಾತ್ರ ಸಂಚರಿಸುತ್ತಿದ್ದರು. ಕೊನೆಗೆ ಅವರೂ ಬೇರೆ ಊರಿಗೆ ಹೋಗಿ ನೆಲೆಸಿದ್ದರಿಂದ ಅವರೂ ರೈಲು ಪ್ರಯಾಣವನ್ನು ನಿಲ್ಲಿಸಿದರು.
ಆದರೆ ಇಡೀ ರೈಲಿನಲ್ಲಿ ಒಬ್ಬಳೇ ಒಬ್ಬಳು ಬಾಲಕಿ ಶಾಲೆಗೆ ಹೋಗುತ್ತಿದ್ದಳು. ಆಗ ಬಾಲಕಿ ಸೇರಿದಂತೆ ಕೆಲವು ಸ್ಥಳೀಯರು ಒಂದು ವಿಚಿತ್ರ ಮನವಿಯನ್ನು ರೈಲ್ವೆ ಇಲಾಖೆಗೆ ಮಾಡಿ ಕೊಂಡರು- ‘ಕಮಿ-ಶಿರಾಟಾಕಿ ನಿಲ್ದಾಣದಿಂದ ಪ್ರತಿದಿನ ಬಾಲಕಿಯೊಬ್ಬಳು ಪ್ರಯಾಣಿಸು ತ್ತಿದ್ದಾಳೆ. ಒಂದು ವೇಳೆ ರೈಲು ಸಂಚಾರವನ್ನು ನಿಲ್ಲಿಸಿದರೆ, ಆಕೆಗೆ ಶಾಲೆಗೆ ಹೋಗಲು ಆಗುವುದಿಲ್ಲ. ಅಲ್ಲಿಗೆ ಆಕೆಯ ವಿದ್ಯಾಭ್ಯಾಸ ನಿಂತು ಹೋಗುತ್ತದೆ. ಆಕೆಯ ಭವಿಷ್ಯ ಡೋಲಾಯಮಾನವಾಗುತ್ತದೆ. ಹೀಗಾಗಿ ಅವಳ ಶಾಲೆಯ ಸಮಯಕ್ಕೆ ಅನುಕೂಲವಾಗು ವಂತೆ ಒಂದು ಬೋಗಿಯನ್ನಾದರೂ ಓಡಿಸಿ. ಇದರಿಂದ ನಿಮ್ಮ ಇಲಾಖೆಗೆ ನಷ್ಟವಾಗುತ್ತದೆ ಎಂಬುದು ಗೊತ್ತಿದ್ದರೂ ಈ ಮನವಿ ಮಾಡಿಕೊಳ್ಳುತ್ತಿದ್ದೇವೆ’.
ಪ್ರಾಯಶಃ ಜಗತ್ತಿನ ಯಾವ ದೇಶದ ಆಗಲಿ, ಇಂಥ ಮನವಿಯನ್ನು ಯಾವ ಸಂಸ್ಥೆಯಾಗಲಿ, ಸರಕಾರವಾಗಲಿ ಪುರಸ್ಕರಿಸುವುದಿಲ್ಲ. ಅದು ವ್ಯಾವಹಾರಿಕವಾಗಿ ಸಾಧುವೂ ಅಲ್ಲ. ಆದರೆ ಜಪಾನ್ ರೈಲ್ವೆ ಸಂಸ್ಥೆಯು ( Japan Railways-JR) ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಅಡ್ಡಿಯಾಗ ಬಾರದು ಎಂಬ ಉದ್ದೇಶದಿಂದ, ಕೇವಲ ಆಕೆಯ ಸಮಯಕ್ಕೆ ಹೊಂದಿಸಿಕೊಂಡು ರೈಲು ಸೇವೆಯನ್ನು ಮುಂದುವರಿಸಲು ನಿರ್ಧರಿಸಿತು.
ಅಷ್ಟೇ ಅಲ್ಲ, ಇಡೀ ರೈಲು ಸೇವೆಯನ್ನು ಸಂಪೂರ್ಣವಾಗಿ ಆ ವಿದ್ಯಾರ್ಥಿನಿ ಶಾಲೆಗೆ ಹೋಗುವ ಮತ್ತು ಹಿಂದಿರುಗುವ ಸಮಯಕ್ಕೆ ಪೂರಕವಾಗಿ ಹೊಂದಿಸಲಾಯಿತು. ರೈಲು ಬರುವುದಕ್ಕಿಂತ ಮುನ್ನವೇ ಆಕೆ ನಿಲ್ದಾಣದಲ್ಲಿ ನಿಂತಿರುತ್ತಿದ್ದಳು. ಅದು ಬರುತ್ತಿದ್ದಂತೆ, ಆಕೆ ಬೋಗಿಯನ್ನೇರುತ್ತಿದ್ದಂತೆ ರೈಲು ಹೊರಡುತ್ತಿತ್ತು. ಆ ಬಾಲಕಿ ಬೆಳಗ್ಗೆ 7.04ಕ್ಕೆ ಟ್ರೇನನ್ನು ಹತ್ತುತ್ತಿದ್ದಳು ಮತ್ತು ಸಾಯಂಕಾಲ 5.08ಕ್ಕೆ ತಿರುಗಿ ಕಮಿ-ಶಿರಾಟಾಕಿ ರೈಲು ನಿಲ್ದಾಣಕ್ಕೆ
ಮರಳುತ್ತಿದ್ದಳು.
ಆ ಬಾಲಕಿಯ ಟೈಮ್ ಟೇಬಲ್‌ಗೆ ಅನುಗುಣವಾಗಿ ಟ್ರೇನು ತನ್ನ ಸಮಯವನ್ನು ಹೊಂದಿಸಿ ಕೊಳ್ಳುತ್ತಿತ್ತು. ಆ ಬಾಲಕಿ ಅನಾರೋಗ್ಯಕ್ಕೆ ತುತ್ತಾದಾಗ ರೈಲು ಓಡುತ್ತಿರಲಿಲ್ಲ. ಶಾಲೆಗೆ ರಜಾ
ಇದ್ದ ದಿನಗಳಲ್ಲಿ ಟ್ರೇನು ಆಗಮಿಸುತ್ತಿರಲಿಲ್ಲ. ಆಕೆಗಾಗಿ ರೈಲು ನಿಲ್ದಾಣದಲ್ಲಿ ಮೂವರು ಸಿಬ್ಬಂದಿ ಇರುವಂತಾಯಿತು. ಚಳಿಗಾಲದಲ್ಲಿ ರೈಲು ನಿಲ್ದಾಣ ಹಿಮದಿಂದ ಆವೃತ ವಾಗಿರುತ್ತಿತ್ತು. ಆ ಬಾಲಕಿಗಾಗಿ ನಿಲ್ದಾಣವನ್ನು ಸ್ವಚ್ಛಗೊಳಿಸಲಾಗುತ್ತಿತ್ತು. 2013ರಿಂದ
2016ರ ತನಕ ಸತತ ಮೂರು ವರ್ಷಗಳ ಕಾಲ, ಜಪಾನ್ ರೈಲ್ವೆ ಇಲಾಖೆಯು ಒಬ್ಬ ವಿದ್ಯಾರ್ಥಿನಿಗಾಗಿ ಒಂದು ಬೋಗಿಯನ್ನು, ಒಂದು ಮಾರ್ಗವನ್ನು ಮೀಸಲಾಗಿಟ್ಟಿತ್ತು.
2013ರಲ್ಲಿ ಈ ಅನನ್ಯ ಮತ್ತು ವಿಶೇಷ ಘಟನೆಯು ಜಗತ್ತಿನ ಎಲ್ಲ ಪತ್ರಿಕೆಗಳಲ್ಲಿ ಮುಖಪುಟ ಸುದ್ದಿಯಾಗಿ ಪ್ರಕಟವಾಗಿತ್ತು.
ಇಡೀ ಜಗತ್ತು ಈ ಸುದ್ದಿಗೆ ಸಖೇದಾಶ್ಚರ್ಯ ವ್ಯಕ್ತಪಡಿಸಿತ್ತು. ಈ ಘಟನೆಯು ಜಪಾನಿನ ಮಾನವೀಯತೆ, ಸಮುದಾಯದ ಮೌಲ್ಯ ಮತ್ತು ಶಿಕ್ಷಣಕ್ಕೆ ನೀಡುವ ಮಹತ್ವವನ್ನು ಜಗತ್ತಿಗೆ ತೋರಿಸಿ ಕೊಟ್ಟಿತ್ತು. ಕೇವಲ ಒಬ್ಬ ವಿದ್ಯಾರ್ಥಿನಿಗಾಗಿ ಸಂಪೂರ್ಣ ರೈಲು ಸೌಲಭ್ಯ ವನ್ನು ನಿರ್ವಹಿಸುವುದು ಆರ್ಥಿಕವಾಗಿ ಹಾನಿಯಾದರೂ, ಆಕೆಯ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಆ ನಿರ್ಧಾರ ಕೈಗೊಂಡಿದ್ದು ಸರ್ವತ್ರ ಪ್ರಶಂಸೆಗೆ ಪಾತ್ರವಾಗಿತ್ತು.
ಇದರಿಂದ ಪ್ರಭಾವಿತರಾಗಿ ಭಾರತದಲ್ಲಿನ ಕೆಲವು ಸರಕಾರಗಳು ವಿದ್ಯಾರ್ಥಿಗಳ ಕೊರತೆ ಕಾರಣಕ್ಕಾಗಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಹಿಂಪಡೆದಿದ್ದವು. ಭಾರತದ ಸಂಸತ್ತಿ ನಲ್ಲೂ ಈ ವಿಷಯ ಪ್ರಸ್ತಾಪವಾಗಿತ್ತು.
ಪ್ರತಿಯೊಬ್ಬ ಪ್ರಜೆಯ ಯೋಗಕ್ಷೇಮ, ಶಿಕ್ಷಣ ಮುಖ್ಯ. ಒಬ್ಬ ಪ್ರಜೆಗಾದರೂ ಸರಕಾರ ಸ್ಪಂದಿಸಬೇಕು ಎಂಬುದನ್ನು ಜಪಾನ್ ಈ ಘಟನೆಯಿಂದ ಜಗತ್ತಿಗೆ ತೋರಿಸಿಕೊಟ್ಟಿತು. ಈ ಘಟನೆ ಜಗತ್ತಿನ ಕಣ್ಣು ತೆರೆಯಿಸಿತು. ಜನಸಂಖ್ಯೆ ಕುಸಿತದಿಂದ ಹೋಕೈಡೋ ನಗರವಾಸಿ ಗಳು ಅನುಭವಿಸಿದ ತೊಂದರೆಗಳು ಜಗತ್ತಿನ ಇತರ ದೇಶಗಳಲ್ಲೂ ಚರ್ಚೆಯನ್ನು ಹುಟ್ಟು ಹಾಕಿದವು.
ಒಂದು ಹಳ್ಳಿ, ಒಬ್ಬ ವ್ಯಕ್ತಿ ಕೂಡ ಸಮುದಾಯದ ಭಾಗವೇ ಆಗಿದ್ದರಿಂದ, ಸರಕಾರ ವ್ಯಾವ ಹಾರಿಕವಾಗಿ ಲಾಭ-ನಷ್ಟ ಲೆಕ್ಕ ಹಾಕಬಾರದು ಎಂಬ ಜಾಗೃತಿ ಮೂಡಲು ಈ ಘಟನೆ ಇಂಬು ನೀಡಿತು. ಒಬ್ಬ ವ್ಯಕ್ತಿಯ ಶಿಕ್ಷಣಕ್ಕಾಗಿ ಸರಕಾರ ಲಾಭ-ನಷ್ಟದ ಬಾಬಿನ ಬಗ್ಗೆ ಯೋಚಿಸಬಾರದು ಎಂಬ ಹೊಸ ಚಿಂತನೆಯನ್ನೇ ಈ ಪ್ರಕರಣ ಹುಟ್ಟು ಹಾಕಿತು.
ಮಾರ್ಚ್ ೨೬, ೨೦೧೬. ಆ ದಿನ ಆ ಬಾಲಕಿ ಹೈಸ್ಕೂಲು ಪರೀಕ್ಷೆ ಬರೆದಳು. ಮರುದಿನದಿಂದ ರೈಲು ಸಂಚಾರ ಸ್ಥಗಿತಗೊಂಡಿತು! ಈ ಘಟನೆ ಜಪಾನಿನ ಸಾಮಾಜಿಕ ಸಂವೇದನೆ ಮತ್ತು
ಮಾನವೀಯತೆಯ ಪರಮಪಾಠವಾಗಿ ಚಿರಸ್ಥಾಯಿಯಾಗಿ ನೆನಪಿನಲ್ಲಿ ಉಳಿಯಲಿದೆ. ಇದು ಕಟ್ಟಕಡೆಯ ಸಾಮಾನ್ಯ ವ್ಯಕ್ತಿಗೂ ಪ್ರಾಮುಖ್ಯ ನೀಡಲೇಬೇಕು ಎಂಬ ದಿವ್ಯ ಸಂದೇಶ ಸಾರುವ ದೀಪಸ್ತಂಭವಾಗಿದೆ.
ಆ ಬಾಲಕಿ ಯಾರು?
ಕನಾ ಹರಡಾ!
ಒಬ್ಬ ಶಾಲಾ ಬಾಲಕಿಗಾಗಿ ಮೂರು ವರ್ಷ ಜಪಾನಿನಲ್ಲಿ ರೈಲೊಂದು ಓಡಿತಲ್ಲ, ಆ ಬಾಲಕಿಯ ಹೆಸರು ಕನಾ ಹರಡಾ. ಇಂದಿಗೂ ಆಕೆ ಶಿಕ್ಷಣ, ಪ್ರe, ಸಮುದಾಯ ಪ್ರe ಮತ್ತು
ಸೀಶಕ್ತಿಯ ಸಂಕೇತವಾಗಿ ಗುರುತಿಸಿಕೊಂಡಿದ್ದಾಳೆ. ಈಗ ಆಕೆ ಎಲ್ಲಿಗೇ ಹೋದರೂ, ಏಕಾಂಗಿ ಯಾಗಿ ರೈಲಿನಲ್ಲಿ ಪ್ರಯಾಣಿಸಿದ ವಳು ಎಂದು ಗುರುತಿಸಿಕೊಳ್ಳುತ್ತಾಳೆ. ಜಗತ್ತಿನಲ್ಲಿ ಪ್ರತಿದಿನ ನೂರಾರು ಕೋಟಿ ಜನ ರೈಲಿನಲ್ಲಿ ಸಂಚರಿಸುತ್ತಾರೆ. ಜೀವನವಿಡೀ ರೈಲಿನಲ್ಲಿ ಸಂಚರಿಸಿದ ವರಿದ್ದಾರೆ. ಆದರೆ ಅವರಾರೂ ಬೇರೆಯವರಿಗೆ ಗೊತ್ತಿಲ್ಲ. ಅವರು ಅನಾಮಧೇಯರಾಗಿಯೇ ಇದ್ದಾರೆ. ಆದರೆ ಕನಾ ಹರಡಾ ಮಾತ್ರ ಎಲ್ಲಿಗೇ ಹೋಗಲಿ, ಬರಲಿ, ಇಂದಿಗೂ ಎಲ್ಲರ ಗಮನ ಸೆಳೆಯುತ್ತಾಳೆ.
ಜಾಗತಿಕ ಮಾಧ್ಯಮಗಳಲ್ಲಿ ವರದಿಯಾದಾಗ ಕನಾ ಹರಡಾ ಹಠಾತ್ತನೆ ಎಲ್ಲರ ಗಮನ ಸೆಳೆದಳು. ಅವಳನ್ನು ಏನಿಲ್ಲ ವೆಂದರೂ ನೂರಕ್ಕೂ ಹೆಚ್ಚು ಟಿವಿ ಚಾನೆಲುಗಳು ಸಂದರ್ಶಿಸಿರಬಹುದು. ಕೆಲ ಕಾಲ ಅವಳು ಸುರಕ್ಷತೆ ದೃಷ್ಟಿಯಿಂದ ಮಾಧ್ಯಮಗಳಿಂದ ದೂರವೇ ಇದ್ದಳು. ವಿದ್ಯಾಭ್ಯಾಸ ಮುಗಿಸಿದ ಮರುದಿನವೇ ಟ್ರೇನ್ ಸಂಚಾರ ಸ್ಥಗಿತ ಗೊಂಡಾಗಲೂ ಅವಳು ಮತ್ತೊಮ್ಮೆ ಮಾಧ್ಯಮಗಳ ಕಣ್ಣಿಗೆ ಬಿದ್ದು ಮತ್ತಷ್ಟು ಸುದ್ದಿಗೆ ಗ್ರಾಸವಾಗಿದ್ದಳು.
ಭಾಷಾ ಪ್ರೇಮ
ಜಪಾನಿಯರ ಭಾಷಾ ಪ್ರೇಮದ ಬಗ್ಗೆ ಬರೆದಿz. ಜಪಾನಿಯರು ದೇಶ ಮತ್ತು ತಾಯಿಯಷ್ಟೇ ಮಹತ್ವ ನೀಡುವುದು ತಮ್ಮ ಭಾಷೆಗೆ. ಈ ವಿಷಯದಲ್ಲಿ ಅವರು ರಾಜಿಯಾಗುವುದಿಲ್ಲ. ಕೆಲ ಕನ್ನಡಿಗರು ಹೇಳುವಂತೆ, ‘ನನ್ನ ಕನ್ನಡ ಅಷ್ಟು ಚೆನ್ನಾಗಿಲ್ಲ, ಹೀಗಾಗಿ ಇಂಗ್ಲಿಷಿನಲ್ಲಿ ಮಾತಾಡುತ್ತೇನೆ’ ಎಂದು ನಾಲಗೆ ಕುಯ್ದರೂ ಹೇಳಲಿಕ್ಕಿಲ್ಲ. ‘ನನಗೆ ಇಂಗ್ಲಿಷ್ ಬರುವುದಿಲ್ಲ, ಹೀಗಾಗಿ ನಾನು ಜಪಾನೀಸ್ ಭಾಷೆಯ ಮಾತಾಡುತ್ತೇನೆ’ ಎಂದು ಎದೆ ತಟ್ಟಿಕೊಂಡು, ಅಭಿಮಾನದಿಂದ ಹೇಳುತ್ತಾರೆ.
ಜಪಾನ್ ಜಗತ್ತಿನಲ್ಲಿ ತಂತ್ರಜ್ಞಾನದಲ್ಲಿ ಮುಂದುವರಿದಿರುವ ದೇಶ ಎಂಬುದು ಎಲ್ಲರಿಗೂ ಗೊತ್ತು. ಈ ತಂತ್ರಜ್ಞಾನದಲ್ಲೂ ಜಪಾನಿಯರು ಅತ್ಯಂತ ಸಮರ್ಥವಾಗಿ ತಮ್ಮ ಭಾಷೆ ಯನ್ನು ಅಳವಡಿಸಿಕೊಂಡಿದ್ದಾರೆ. ಜಪಾನೀಸ್ ಭಾಷೆಗೆ ಬೆಂಬಲ ನೀಡಲು ವಿಶೇಷ ತಂತ್ರ ಜ್ಞಾನವನ್ನು ಅವರು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಉದಾಹರಣೆಗೆ, ಕೀಬೋರ್ಡ್ ಇನ್ಪುಟ್ ವಿಧಾನಗಳು (ರೋಮಾಜಿ). ಭಾಷಾ ಸಂರಕ್ಷಣೆಗಾಗಿ ಅಪ್ಲಿಕೇಷನ್‌ಗಳನ್ನು
ಅವರು ಅಭಿವೃದ್ಧಿಪಡಿಸಿzರೆ. ಜಪಾನೀಸ್ ಭಾಷಾ ಗ್ರಂಥಾಲಯ ಮತ್ತು ಶಬ್ದಕೋಶಗಳನ್ನು ಡಿಜಿಟಲ್‌ಗೆ ರೂಪಾಂತರಿಸುವ ಮೂಲಕ ಯುವಜನತೆಯ ಮೊಬೈಲ್ ಸಾಧನಗಳಲ್ಲಿ ಭಾಷೆಯ ಪ್ರೀತಿಯನ್ನು ಬೆಳೆಸಲಾಗಿದೆ.
ಜಪಾನಿನಲ್ಲಿ ವಿದೇಶಿ ಭಾಷೆಗಳ ಪ್ರಭಾವ ಹೆಚ್ಚಾದರೂ, ಸ್ಥಳೀಯ ಭಾಷೆಯ ಪ್ರಾಮುಖ್ಯ ಎಂದಿಗೂ ಕಡಿಮೆಯಾಗಿಲ್ಲ. ಮೊದಲು ಹೆಚ್ಚಾಗಿ ಜಪಾನಿ ಭಾಷೆಯಲ್ಲಿಯೇ ಬೋರ್ಡು ಗಳು ಕಾಣಿಸಿಕೊಳ್ಳುತ್ತಿದ್ದವು. ಈಗ ಜಪಾನ್ ಜಾಗತೀಕರಣಕ್ಕೆ ತೆರೆದುಕೊಂಡಿರುವುದರಿಂದ ಇಂಗ್ಲಿಷ್ ಪ್ರಭಾವವನ್ನು ಕಾಣಬಹುದು.
ಹಾಗೆಂದು ಅವು ಜಪಾನಿ ಬೋರ್ಡುಗಳ ಸಮಾಧಿ ಮೇಲೆ ರಾರಾಜಿಸುತ್ತಿಲ್ಲ. ಕಟಕಾನಾ ಲಿಪಿ ಬಳಸಿ ವಿದೇಶಿ ಪದಗಳನ್ನು ಅಳವಡಿಸುವ ಮೂಲಕ, ಜಪಾನೀಸ್ ಭಾಷೆಯೆಡೆಗಿನ ಪ್ರೀತಿ ನಾಶವಾಗದಂತೆ ನೋಡಿಕೊಳ್ಳಲಾಗಿದೆ. ಕನ್ಸಾಯ ಬೆನ್, ಹಾಕಾಟಾ ಬೆನ್, ಸಾಪೊರೊ ಭಾಷೆ ಮುಂತಾದ ಪ್ರಾದೇಶಿಕ ಭಾಷೆಗಳನ್ನೂ ಹಾಗೇ ಉಳಿಸಿಕೊಂಡಿದ್ದಾರೆ.
ಜಪಾನಿಯರಿಗೆ ತಮ್ಮ ಭಾಷೆ ಕೇವಲ ಸಂವಹನದ ಸಾಧನವಲ್ಲ, ಅದು ಅವರ ಸಾಂಸ್ಕೃ ತಿಕ ವ್ಯಕ್ತಿತ್ವದ ಪ್ರತಿರೂಪ. ಅದು ಅವರ ಹೃದಯ ಮತ್ತು ಕೊರಳಿನ ಭಾಷೆ. ಜಪಾನಿಯರು ತಮ್ಮ ಭಾಷೆಯಲ್ಲಿ ನಿರಂತರ ಅಧ್ಯಯನಶೀಲರು. ಹಿರಿಯರು ಸಹ ತಮ್ಮ ಶಬ್ದಕೋಶ ವನ್ನು ಸಮೃದ್ಧಗೊಳಿಸಲು ಓದುತ್ತಾರೆ ಮತ್ತು ಕಲಿಯುತ್ತಾರೆ. ಜಪಾನ್ ಜಾಗತಿಕ ಸಂಸ್ಕೃತಿ ಮತ್ತು ಆರ್ಥಿಕತೆಯ ಪ್ರಮುಖ ಭಾಗವಾಗಿದ್ದರೂ, ಜಾಗತೀಕರಣವು ಜಪಾನಿಯರ ಭಾಷೆಯ ಪ್ರೀತಿಯ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.
ಆಂಗ್ಲಭಾಷೆಯ ಪ್ರಭಾವ ಹೆಚ್ಚಾದರೂ, ಪ್ರತಿ ಜಪಾನಿ ಪ್ರಜೆಯ ಮನದಾಳದಲ್ಲಿ ತನ್ನ ಭಾಷೆಯ ಪ್ರೀತಿ ಅಚ್ಚುಕಟ್ಟಾಗಿ ಉಳಿದಿದೆ. ಹಾರುಕಿ ಮುರಕಾಮಿ ಸೇರಿದಂತೆ ನೂರಾರು ಲೇಖಕರು ಜಪಾನಿ ಭಾಷೆಯ ವೈಶಿಷ್ಟ್ಯವನ್ನು ಜಾಗತಿಕ ಸಾಹಿತ್ಯದಲ್ಲಿ ಪರಿಚಯಿಸು ತ್ತಿದ್ದಾರೆ. ಜಪಾನಿ ಭಾಷೆಯೆಡೆಗಿನ ಪ್ರೀತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಜಪಾನಿನ ಜನರು ತಾವು ತಮ್ಮ ಭಾಷೆಯನ್ನು ಹೇಗೆ ಜೀವಂತವಾಗಿಟ್ಟುಕೊಂಡಿದ್ದಾರೆ ಎಂಬುದರಿಂದ ಪ್ರಪಂಚದ ಅನೇಕ ಭಾಷಾ ಸಮುದಾಯಗಳು ಪ್ರೇರಿತವಾಗುತ್ತಿವೆ.
ಜಪಾನಿಯರಿಗೆ ತಮ್ಮ ಭಾಷೆ ಸಂವಹನ ಸಾಧನವಷ್ಟೇ ಅಲ್ಲ, ಅದು ಅವರ ಜೀವನದ ಪ್ರತಿ ಕ್ಷಣದ ಅಮೂಲ್ಯ ಭಾಗ. ಇದರ ಮೂಲಕ ಅವರು ತಮ್ಮ ಸಂಸ್ಕೃತಿಯ ಮೂಲಾಧಾರ ವನ್ನು ರಕ್ಷಿಸುತ್ತಿದ್ದಾರೆ. ಜಪಾನಿ ಭಾಷೆಯು ನಾವೀನ್ಯ ಮತ್ತು ಸಂಪ್ರದಾಯಗಳ ನಡುವೆ ಸಮತೋಲನವನ್ನು ಸಾಽಸಿದಂತೆ, ಜಪಾನಿಯರ ಭಾಷಾ ಪ್ರೀತಿ ಅದನ್ನು ಇನ್ನಷ್ಟು ಶ್ರೇಷ್ಠವಾಗಿಸಿದೆ.
ಭಾಷೆಯನ್ನು ಉಳಿಸಬೇಕೆಂದರೆ ಅದು ಕಂಪ್ಯೂಟರ್ ಮತ್ತು ಮೊಬೈಲುಗಳಲ್ಲಿ ಉಳಿಯ ಬೇಕು ಹಾಗೂ ಸಾಮಾಜಿಕ ಜಾಲತಾಣ-ಸ್ನೇಹಿ ಆಗಿರಬೇಕು ಎಂಬುದನ್ನು ಅರಿತುಕೊಂಡ ಜಪಾನಿಯರು, ಆ ನಿಟ್ಟಿನಲ್ಲಿ ತಮ್ಮ ಭಾಷೆಯನ್ನೂ ಪರಿಣಾಮಕಾರಿಯಾಗಿ ಅಳವಡಿಸು ತ್ತಿದ್ದಾರೆ. ಸ್ಮಾರ್ಟ್ ಫೋನ್‌ಗಳಲ್ಲಿ ಮತ್ತು ಕಂಪ್ಯೂಟರ್‌ಗಳಲ್ಲಿ ಜಪಾನಿ ಭಾಷೆಯ ಕೀಬೋ ರ್ಡ್ ಮತ್ತು ನಿರ್ದಿಷ್ಟ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಜಪಾನಿಯರು ತಮ್ಮ ಭಾಷೆಗೆ ತೊಡಕಾಗದಂತೆ ನೋಡಿಕೊಳ್ಳುತ್ತಿರುವ ಶ್ರದ್ಧಾವಂತರು. ಚಲನಚಿತ್ರಗಳು, ಟಿವಿ ಶೋಗಳು, ನಾಟಕಗಳು ಮತ್ತು ಹೊಸ ಕಥೆಗಳನ್ನು ಜಪಾನಿ ಭಾಷೆಯಲ್ಲಿಯೇ ನಿರ್ಮಿಸುತ್ತಾರೆ, ಇದು ಯುವ ಪೀಳಿಗೆಗೆ ತಾಯ್ನುಡಿಯಲ್ಲಿನ ಆಸಕ್ತಿ ಯನ್ನು ಹೆಚ್ಚಿಸುತ್ತಿದೆ. ಇದಕ್ಕೆ ಕಾರಣ ಜಪಾನಿನಲ್ಲಿ ಶಾಲಾ ಪಠ್ಯಕ್ರಮ ಜಪಾನಿ ಭಾಷೆ
ಯಲ್ಲಿಯೇ ಇರುವುದು. ಪ್ರಾರಂಭದಿಂದಲೇ ಮಕ್ಕಳಿಗೆ ತಮ್ಮ ಭಾಷೆಯನ್ನು ತಿಳಿಯಲು ಪ್ರೋತ್ಸಾಹ ನೀಡಲಾಗುತ್ತದೆ. ಇದರಿಂದ ಅವರು ತಮ್ಮ ಸಂಸ್ಕೃತಿಯ ಮೂಲವನ್ನು ಆರಂಭದಿಂದಲೇ ಅರ್ಥ ಮಾಡಿಕೊಳ್ಳುವಂತಾಗಿದೆ. ಉದಾಹರಣೆಗೆ, ಶಿಕ್ಷಣದಲ್ಲಿ ಕಂಜಿ, ಹಿರಾಗನಾ, ಕಟಕಾನಾ ಎಂಬ ಮೂರು ಲಿಪಿಗಳ ಪ್ರಾಮುಖ್ಯವನ್ನುಒಟ್ಟಿಗೇ ನೀಡಲಾಗು ತ್ತಿದೆ, ಇದು ಮಕ್ಕಳಲ್ಲಿ ಭಾಷೆಯ ಪ್ರೀತಿಯನ್ನು ಸಹಜವಾಗಿ ಬೆಳಸುತ್ತಿದೆ.
ಇದನ್ನೂ ಓದಿ:Vishweshwar Bhat Column: ಗಂಡನನ್ನು ಹೇಗೆ ಕರೆಯುವುದು ?