Vishweshwar Bhat Column: ಕನ್ಸಾಯಿ ಮತ್ತು ಲಗೇಜ್ ನಿರ್ವಹಣೆ
ಮೊದಲು ಕ್ಯೋಟೋ ನಗರಕ್ಕೆ ಹೋಗುವುದೆಂದು ತೀರ್ಮಾನಿಸಿದ್ದರಿಂದ, ಅಲ್ಲಿಗೆ ಸಮೀಪದ ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವುದು ಅನುಕೂಲವೆಂದು ಹಾಗೆ ನಿರ್ಧರಿಸಿದ್ದೆವು. ಜಪಾನಿನಲ್ಲಿ ಸುಮಾರು 6 ವರ್ಷವಿದ್ದು ಈಗ ಬೆಂಗಳೂರು ನಿವಾಸಿಯಾಗಿರುವ ಸ್ನೇಹಿತರಾದ ವಿ.ಕೃಷ್ಣ ಪ್ರಸಾದ ಅವರು, “ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವೈಶಿಷ್ಟ್ಯವೊಂದಿದೆ ಗೊತ್ತಾ?" ಎಂದು ಕೇಳಿದರು
Source : Vishwavani Daily News Paper
ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಸಾಮಾನ್ಯವಾಗಿ ಜಪಾನಿಗೆ ಹೋಗುವವರು ಟೋಕಿಯೋ ನಗರದಲ್ಲಿರುವ ನರಿತಾ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಾರೆ. ಆದರೆ ನಾವು ಜಪಾನಿನ ಓಸಾಕಾ ನಗರದ ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ( KIX)ದಲ್ಲಿ ಇಳಿಯಲು (ಲ್ಯಾಂಡ್) ನಿರ್ಧರಿಸಿ ದ್ದೆವು. ಇದಕ್ಕೆ ಕಾರಣವೂ ಇತ್ತು.
ಮೊದಲು ಕ್ಯೋಟೋ ನಗರಕ್ಕೆ ಹೋಗುವುದೆಂದು ತೀರ್ಮಾನಿಸಿದ್ದರಿಂದ, ಅಲ್ಲಿಗೆ ಸಮೀಪದ ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವುದು ಅನುಕೂಲವೆಂದು ಹಾಗೆ ನಿರ್ಧರಿಸಿದ್ದೆವು. ಜಪಾನಿನಲ್ಲಿ ಸುಮಾರು 6 ವರ್ಷವಿದ್ದು ಈಗ ಬೆಂಗಳೂರು ನಿವಾಸಿಯಾಗಿರುವ ಸ್ನೇಹಿತರಾದ ವಿ.ಕೃಷ್ಣಪ್ರಸಾದ ಅವರು, “ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವೈಶಿಷ್ಟ್ಯವೊಂದಿದೆ ಗೊತ್ತಾ?" ಎಂದು ಕೇಳಿದರು.
“ನನಗೆ ಗೊತ್ತಿಲ್ಲ, ಅದೇನು ವೈಶಿಷ್ಟ್ಯ?" ಎಂದೆ. “ವಿಶ್ವದಲ್ಲಿಯೇ ಅತ್ಯುತ್ತಮ ಲಗೇಜ್ ಹ್ಯಾಂಡ್ಲಿಂಗ್‌ಗೆ ಹೆಸರುವಾಸಿ ಮತ್ತು ಅದರಲ್ಲಿ ನಂಬರ್ ಒನ್ ಅಂದ್ರೆ ಅದು ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ" ಅಂದರು. ಬಹಳ ಜನರಿಗೆ ಗೊತ್ತಿಲ್ಲ, ವಿಮಾನ ಪ್ರಯಾಣದ ಪ್ರಮುಖ ಅಂಶಗಳಲ್ಲಿ ಲಗೇಜ್ (ಸಾಮಾನು) ನಿರ್ವಹಣೆಯೂ ಒಂದು. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಕ್ಷಣ ದಿಂದ ಅವರ ಲಗೇಜ್ ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪುವವರೆಗೆ ಲಗೇಜ್ ನಿರ್ವಹಣೆ ಅತ್ಯಂತ ಮುಖ್ಯ.
ಜಗತ್ತಿನ ಹಲವಾರು ಉತ್ತಮ ವಿಮಾನ ನಿಲ್ದಾಣಗಳು ಸಹ ತಮ್ಮ ಲಗೇಜ್ ನಿರ್ವಹಣಾ ವ್ಯವಸ್ಥೆ ಯಲ್ಲಿ ಎಡವಿ ತಮ್ಮ ಅಗ್ರ ಶ್ರೇಯಾಂಕವನ್ನು ಬೇರೆ ನಿಲ್ದಾಣಗಳಿಗೆ ಬಿಟ್ಟುಕೊಟ್ಟಿದ್ದುಂಟು. 2024 ರಲ್ಲಿ ಸ್ಕೈ ಟ್ರಾಕ್ಸ್ ವರ್ಲ್ಡ್, ಕನ್ಸಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶ್ವದ ಅತ್ಯುತ್ತಮ ಲಗೇಜ್ ಹ್ಯಾಂಡ್ಲಿಂಗ್ ವಿಮಾನ ನಿಲ್ದಾಣ ಎಂಬ ಮಾನ್ಯತೆ ನೀಡಿದೆ.
1994ರಲ್ಲಿ ಆರಂಭವಾದ ಈ ವಿಮಾನ ನಿಲ್ದಾಣವನ್ನು ಬಳಸಿ, ಪ್ರತಿ ವರ್ಷ ಸುಮಾರು 3 ಕೋಟಿ ಜನ ಪ್ರಯಾಣಿಸುತ್ತಾರೆ. ತನ್ನ ಯಾಂತ್ರಿಕ ದಕ್ಷತೆ, ಆಧುನಿಕ ತಂತ್ರeನ ಬಳಕೆ ಮತ್ತು ಸಿಬ್ಬಂದಿ ಕಾರ್ಯಕ್ಷಮತೆಯಿಂದ ಪ್ರತಿ ವರ್ಷ ಈ ನಿಲ್ದಾಣ ಲಗೇಜ್ ಹ್ಯಾಂಡ್ಲಿಂಗ್ ವಿಭಾಗದಲ್ಲಿ ಅಸಾಧಾರಣ ಸಾಧನೆಯನ್ನು ಮೆರೆಯುತ್ತಾ ಬಂದಿದೆ. ಅಚ್ಚರಿಯ ಸಂಗತಿ ಅಂದ್ರೆ, 1994ರಿಂದ ಈವರೆಗೆ, ಕನ್ಸಾಯಿ ವಿಮಾನ ನಿಲ್ದಾಣದಲ್ಲಿ ಒಬ್ಬೇ ಒಬ್ಬ ಪ್ರಯಾಣಿಕನ ಲಗೇಜ್ ಕಳೆದುಹೋಗಿಲ್ಲ. ಇದು ಇಂದಿಗೂ ದಾಖಲೆಯಲ್ಲಿ ಶೂನ್ಯ ಲಗೇಜ್ ನಷ್ಟ ( Zero Lost Baggage Record ) ಎಂದು ನಮೂದಾಗಿದೆ. ಇದು ಲಗೇಜ್ ನಿರ್ವಹಣೆಯಲ್ಲಿ ಇರುವ ಗುಣಮಟ್ಟವನ್ನು ತೋರಿಸುತ್ತದೆ. ಇನ್ನೊಂದು ವೈಶಿಷ್ಟ್ಯ ವೆಂದರೆ, ಕನ್ಸಾಯಿಯ ಲಗೇಜ್ ಹ್ಯಾಂಡ್ಲಿಂಗ್ ವ್ಯವಸ್ಥೆಯು ಅತ್ಯಂತ ವೇಗವಾಗಿ ಕಾರ್ಯ ನಿರ್ವ ಹಿಸುತ್ತದೆ. ಪ್ರಯಾಣಿಕರು ತಮ್ಮ ಲಗೇಜನ್ನು ಕೇವಲ 10-15 ನಿಮಿಷಗಳ ಒಳಗಾಗಿ ಪಡೆಯ ಬಹುದು.
ಅಲ್ಲಿ ಪ್ರಯಾಣಿಕರ ಲಗೇಜು ಸಮರ್ಪಕವಾಗಿ ಪತ್ತೆಯಾಗುವ ಮತ್ತು ಸರಿಯಾಗಿ ಹಂಚಿಕೆಯಾಗುವ ವ್ಯವಸ್ಥೆಯಿದೆ. ಇದು ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸಾಧ್ಯವಾಗಿದೆ. RFID (Radio Freq uency Identification ) ಟ್ಯಾಗ್ ತಂತ್ರಜ್ಞಾನವನ್ನು ಬಳಸಿ ಲಗೇಜ್ ಹಾದಿಯನ್ನು ತ್ವರಿತವಾಗಿ ಪತ್ತೆ ಹಚ್ಚಬಹುದು. ವಿಮಾನ ಹ್ಯಾಂಗರ್‌ನಿಂದ ಪ್ರಯಾಣಿಕರ ಟರ್ಮಿನಲ್‌ನಿಂದ ಸ್ವಯಂಚಾಲಿತ ಲಗೇಜ್ ವಿಂಗಡಿಸುವ ಅಥವಾ ಬೇರ್ಪಡಿಸುವ ಪ್ರಕ್ರಿಯೆ ( Automated Sorting System) ಇಡೀ ಕಾರ್ಯವನ್ನು ದಕ್ಷತೆಯಿಂದ ಸುಗಮಗೊಳಿಸುತ್ತದೆ. ಇದಕ್ಕೆ ಸಿಬ್ಬಂದಿಯ ದಕ್ಷತೆ, ಶ್ರದ್ಧೆ, ಶಿಸ್ತು, ಪಾಲ್ಗೊಳ್ಳುವಿಕೆ ಮತ್ತು ಕೌಶಲವೂ ಅಷ್ಟೇ ಮುಖ್ಯ. ವಿಮಾನ ಹಾರಾಟದ ಸಮಯದಲ್ಲಿ ಲಗೇಜ್ ಹ್ಯಾಂಡ್ಲಿಂಗ್‌ಗೆ ಸಂಬಂಧಿಸಿದಂತೆ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ವಿಶೇಷ ತರಬೇತಿ ನೀಡಲಾಗುತ್ತದೆ.
ಸುರಕ್ಷಿತ ಲಗೇಜ್ ಹ್ಯಾಂಡ್ಲಿಂಗ್ ಮತ್ತು ಮಾನಿಟರಿಂಗ್‌ಗಾಗಿ ವಿಶೇಷ ಕೆಮೆರಾ ಅಳವಡಿಸಲಾಗಿದೆ. AI ಮತ್ತು Big Data ತಂತ್ರಜ್ಞಾನದ ಮೂಲಕ ಲಗೇಜಿನ ನಿಜವಾದ ಸ್ಥಳವನ್ನು ತಿಳಿದುಕೊಳ್ಳಬ ಹುದು. ಕನ್ಸಾಯಿ ವಿಮಾನ ನಿಲ್ದಾಣದ ಲಗೇಜ್ ನಿರ್ವಹಣಾ ವ್ಯವಸ್ಥೆಯನ್ನು ಸಿಂಗಾಪುರದ ಚಾಂಗೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೊಹಾದ ಹಮದ್ ಅಂತಾರಾ ಷ್ಟ್ರೀಯ ವಿಮಾನ ನಿಲ್ದಾಣ, ಅಮ್ಸ್ಟರ್ಡ್ಯಾಮ್ ಸ್ಕಿಫೋಲ್ ವಿಮಾನ ನಿಲ್ದಾಣ ಮತ್ತು ಬಹ್ರೈನ್ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಗಳು ಅನುಸರಿಸುತ್ತಿವೆ.
ಇದನ್ನೂ ಓದಿ: Vishweshwar Bhat Column: ಅಂದು ಅಲ್ಲಿಗೆ ಹೋಗಿರದಿದ್ದರೆ, ಅದೆಂಥ ಅನುಭವದಿಂದ ವಂಚಿತನಾಗುತ್ತಿದ್ದೆ?