Vishweshwar Bhat Column: ಅಂದು ಅಲ್ಲಿಗೆ ಹೋಗಿರದಿದ್ದರೆ, ಅದೆಂಥ ಅನುಭವದಿಂದ ವಂಚಿತನಾಗುತ್ತಿದ್ದೆ?

ನಮಗೆ ಹೋಗಬೇಕು ಅಂತಿದ್ದರೂ, ನಮ್ಮ ಜತೆಯಿದ್ದವರಿಗೆ ಹೋಗಲು ಮನಸ್ಸಿರುವುದಿಲ್ಲ. ಹವಾಮಾನ ವ್ಯತ್ಯಯವಾಗಬಹುದು. ನಮ್ಮ ಜತೆಗಿದ್ದವರು ತಮ್ಮ ಬೇಡಿಕೆಯನ್ನೇ ಹೇರಬಹು ದು, ಸಮಯದ ಅಭಾವದಿಂದ ಅಥವಾ ದೂರ ಎಂಬ ಕಾರಣಕ್ಕೆ ಹೋಗಲು ಸಾಧ್ಯವಾಗದೇ ಹೋಗಬಹುದು. ಹೀಗಾಗಿ ನಾನು ನೋಡಲೇಬೇಕು ಎಂದು ನಿರ್ಧರಿಸಿದ ಸ್ಥಳಗಳನ್ನು ನೋಡ ಲಾಗದೇ ಬಂದಿದ್ದುಂಟು

Vishweshwat Bhat with Huchiko statue ok
Profile Ashok Nayak January 16, 2025

Source : Vishwavani Daily News Paper

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ನಾನು ಜಪಾನಿಗೆ ಹೋಗುವುದೆಂದು ನಿರ್ಧರಿಸಿದಾಗ, ನೋಡಲೇಬೇಕಾದ ಕೆಲವು ಸ್ಥಳ ಗಳನ್ನು ಪಟ್ಟಿ ಮಾಡಿಕೊಳ್ಳುತ್ತಿದ್ದೆ. ಏನೇ ಆದರೂ, ಆ ಸ್ಥಳಗಳಿಗೆ ಹೋಗಲೇಬೇಕು ಎಂಬುದು ನನ್ನ ಆಸೆಯಾಗಿತ್ತು. ಕೆಲವು ಸಲ ವಿದೇಶಗಳಿಗೆ ಹೋದಾಗ ನಾವು ನೋಡಲೇ ಬೇಕು ಎಂದು ನಿರ್ಧರಿಸಿದ ಸ್ಥಳಗಳನ್ನು ಬೇರೆ ಬೇರೆ ಕಾರಣಗಳಿಂದ ನೋಡಲು ಆಗದೇ ಹೋಗಬಹುದು.

ನಮಗೆ ಹೋಗಬೇಕು ಅಂತಿದ್ದರೂ, ನಮ್ಮ ಜತೆಯಿದ್ದವರಿಗೆ ಹೋಗಲು ಮನಸ್ಸಿರುವುದಿಲ್ಲ. ಹವಾಮಾನ ವ್ಯತ್ಯಯವಾಗಬಹುದು. ನಮ್ಮ ಜತೆಗಿದ್ದವರು ತಮ್ಮ ಬೇಡಿಕೆಯನ್ನೇ ಹೇರಬಹುದು, ಸಮಯದ ಅಭಾವದಿಂದ ಅಥವಾ ದೂರ ಎಂಬ ಕಾರಣಕ್ಕೆ ಹೋಗಲು ಸಾಧ್ಯವಾಗದೇ ಹೋಗಬಹುದು. ಹೀಗಾಗಿ ನಾನು ನೋಡಲೇಬೇಕು ಎಂದು ನಿರ್ಧರಿಸಿದ ಸ್ಥಳಗಳನ್ನು ನೋಡಲಾಗದೇ ಬಂದಿದ್ದುಂಟು.

ಆದರೆ ತೀರಾ ಯಾರೂ ಆಗ್ರಾಕ್ಕೆ ಹೋಗಿ ತಾಜ್‌ಮಹಲ್ ಅನ್ನು ನೋಡದೇ ಬರುವುದಿಲ್ಲ, ಬಿಡಿ. ಆದರೆ ಜಪಾನಿಗೆ ಹೋದಾಗ, ಯಾವ ಕಾರಣಕ್ಕೂ ಈ ಜಾಗವನ್ನು ಮಿಸ್ ಮಾಡು ವಂತಿಲ್ಲ ಎಂದು ನಮ್ಮ ಟೂರ್ ಸಂಘಟಕ ನಿತಿನ್‌ಗೆ ನಾಲ್ಕೈದು ಬಾರಿ ಹೇಳಿದ್ದೆ.

ಪ್ರತಿ ಸಲ ಹೇಳಿದಾಗಲೂ ಆತ ಆಯಿತು ಅಂತ ಹೇಳುತ್ತಿದ್ದ. ಆ ಪ್ರಕಾರ, ಆ ಜಾಗಕ್ಕೆ ಭೇಟಿ ಕೊಡುವುದನ್ನು ನಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸಿದ. ಆದರೆ ಅಂದು ನಮ್ಮ ಕಾರ್ಯ ಕ್ರಮ ಮುಗಿಯಲು ವಿಳಂಬವಾಯಿತು. ರಾತ್ರಿ ಒಂಬತ್ತು ಗಂಟೆಯಾಗಿತ್ತು. ನಾವು ಅಲ್ಲಿಂದ ಹೋಟೆಲಿಗೆ ಮರಳಬೇಕಾಗಿತ್ತು. ನಿತಿನ್ ನನ್ನ ಸನಿಹ ಮೆಲ್ಲಗೆ ಬಂದು, “ಸರ್, ನೀವು ಹೇಳಿದ ಸ್ಥಳಕ್ಕೆ ಹೋದರೆ ರಾತ್ರಿ ಹತ್ತು ಗಂಟೆ ಮೀರಬಹುದು.

ಅಲ್ಲಿಂದ ಹೋಟೆಲಿಗೆ ಮರಳಲು ಮತ್ತೆ ಒಂದು ಗಂಟೆ ಹಿಡಿಯುತ್ತದೆ. ನಾಳೆ ಬೆಳಗ್ಗೆ ಒಂಬತ್ತು ಗಂಟೆಗೆ ಹೋಟೆಲಿನಿಂದ ವಿಮಾನ ನಿಲ್ದಾಣಕ್ಕೆ ಹೊರಡಬೇಕು. ಹೀಗಾಗಿ ಈ ಸಲದ ಪ್ರವಾಸದಲ್ಲಿ ನೀವು ತಿಳಿಸಿದ ತಾಣಕ್ಕೆ ಹೋಗಲು ಆಗುತ್ತಿಲ್ಲ, ಕ್ಷಮೆ ಇರಲಿ" ಎಂದು ಹೇಳಿದ.

ಆತ ಹೇಳಿದ್ದರಲ್ಲಿ ತಪ್ಪಿರಲಿಲ್ಲ. ಆದರೆ ನನಗೆ ಅತೀವ ನಿರಾಸೆಯಾಯಿತು. ಒಂದು ಕ್ಷಣ ಸಾವರಿಸಿಕೊಂಡು, “ನಾನು ಅಲ್ಲಿಗೆ ಹೋಗಬೇಕೆಂದು ನಾಲ್ಕು ವರ್ಷಗಳಿಂದ ಆಸೆಪಟ್ಟಿದ್ದೆ. ಈಗ ಟೋಕಿಯೋ ನಗರದ ಇದ್ದೇನೆ. ಪ್ರಾಯಶಃ ನಾನು ಆ ತಾಣದಿಂದ ಅರ್ಧ ಗಂಟೆ ದೂರ ದಲ್ಲಿರಬಹುದು. ಇಷ್ಟು ಹತ್ತಿರವಿದ್ದೂ ಅಲ್ಲಿಗೆ ಹೋಗಲು ಸಾಧ್ಯವಾಗದಿದ್ದರೆ ನನಗೆ ಅದೆಷ್ಟು ನಿರಾಸೆಯಾಗಬಹುದು, ಯೋಚಿಸು" ಎಂದು ಹೇಳಿದೆ.

ನನ್ನ ಮಾತು ನಿತಿನ್‌ಗೆ ನಾಟಿರಬೇಕು. “ಆಯಿತು, ಸರ್. ಅಲ್ಲಿಗೆ ಹೋಗೋಣ, ಬಿಡಿ" ಎಂದ. “ನಿತಿನ್, ಆದರೆ ನಮ್ಮ ಪ್ರೋಗ್ರಾಮ್ ಬದಲಾಗಬಾರದು ಮತ್ತು ಅದರಿಂದ ಇತರರಿಗೆ ತೊಂದರೆಯಾಗಬಾರದು" ಎಂದು ಹೇಳಿದೆ. ಅದಕ್ಕೆ ನಿತಿನ್ ಸಮ್ಮತಿಸಿದ.

ಅಷ್ಟಕ್ಕೂ ನಾನು, ಜಪಾನಿಗೆ ಹೋದಾಗ ರಾಜಧಾನಿ ಟೋಕಿಯೋ ನಗರದಲ್ಲಿರುವ ‘ಹಚಿಕೋ’ ಎಂಬ ನಾಯಿಯ ಕಂಚಿನ ಪುತ್ಥಳಿಯನ್ನು ನೋಡಲೇಬೇಕು ಎಂದು ನಿರ್ಧ ರಿಸಿದ್ದೆ, ಅಷ್ಟೇ. ಕೋವಿಡ್ ಸಂಕಷ್ಟದ ಸಮಯದಲ್ಲಿ ಬೆಹರೈನ್‌ನಲ್ಲಿರುವ ಸ್ನೇಹಿತ ರಾದ ಕಿರಣ್ ಉಪಾಧ್ಯಾಯ ಅವರು ‘ಹಚಿಕೋ’ ಎಂಬ ಸಿನಿಮಾ ನೋಡಿ, “ನೀವು ಈ ಸಿನಿಮಾ ವನ್ನು ನೋಡಲೇಬೇಕು" ಎಂದು ಹೇಳಿದ್ದರು.

ಆ ದಿನಗಳಲ್ಲಿ ಸಿನಿಮಾ ನೋಡುವುದೇ ಮುಖ್ಯ ಕಸುಬಾಗಿತ್ತು. ಕಿರಣ್ ಆ ಸಿನಿಮಾದ ಬಗ್ಗೆ ತಮ್ಮ ಅಂಕಣದಲ್ಲೂ ಬರೆದಿದ್ದರು. ನಂತರ ನಾನು ‘ಹಚಿಕೋ’ ಸಿನಿಮಾವನ್ನು ನೋಡಿದೆ. ಆ ಸಿನಿಮಾ ನನ್ನ ಮೇಲೆ ಅದೆಂಥ ಗಾಢ ಪ್ರಭಾವ ಬೀರಿತ್ತೆಂದರೆ, ಟೋಕಿಯೋಕ್ಕೆ ಹೋದಾಗ ತಪ್ಪದೇ ಆ ನಾಯಿಯ ಪುತ್ಥಳಿಗೆ ಭೇಟಿ ನೀಡಿ, ಆ ನಾಯಿಯ ತಲೆ ನೇವರಿಸಿ ಬರಬೇಕು, ಕಣ್ತುಂಬಾ ಆ ನಾಯಿಯನ್ನು ತುಂಬಿಕೊಳ್ಳಬೇಕು ಎಂದು ಕನವರಿಸುತ್ತಿದ್ದೆ.

ಅದಾದ ಬಳಿಕ ನಾನು, ಪತ್ನಿ ಮತ್ತು ಮಗನ ಜತೆಗೆ ಮತ್ತೊಮ್ಮೆ ಆ ಸಿನಿಮಾವನ್ನು ವೀಕ್ಷಿಸಿದೆ. ಅಷ್ಟರಮಟ್ಟಿಗೆ ಆ ಸಿನಿಮಾ ನನ್ನನ್ನು ಬಲವಾಗಿ ತಟ್ಟಿತ್ತು. ಹೀಗಿರುವಾಗ ಅದೇ ಊರಿಗೆ ಹೋಗಿ ‘ಹಚಿಕೋ’ ನಾಯಿಯ ಪುತ್ಥಳಿಯನ್ನು ನೋಡದೇ ಬರುವುದುಂಟಾ? ನನ್ನ ಜತೆಯಲ್ಲಿದ್ದವರಿಗೆ ನಿತಿನ್, ಬದಲಾದ ನಮ್ಮ ಕಾರ್ಯಕ್ರಮದ ಬಗ್ಗೆ ತಿಳಿಸಿದಾಗ, ಅವರ ಪೈಕಿ ಒಬ್ಬರು, “ಒಂದು ನಾಯಿಯ ಪುತ್ಥಳಿ ನೋಡಲು ಕಾರ್ಯಕ್ರಮ ಬದಲಾಯಿ ಸುವುದಾ?" ಎಂದು ರಾಗ ಎಳೆದರಂತೆ.

ಆ ಸಿನಿಮಾವನ್ನು ನಾನು ನೋಡಿರದಿದ್ದರೆ ಪ್ರಾಯಶಃ ನಾನೂ ಅದೇ ರೀತಿ ಪ್ರತಿಕ್ರಿಯಿಸು ತ್ತಿದ್ದೆ. ಹೀಗಾಗಿ ನನಗೆ ಆ ತಣ್ಣನೆಯ ಪ್ರತಿಕ್ರಿಯೆ ಅಚ್ಚರಿ ಮೂಡಿಸಲಿಲ್ಲ. ‘ಹಚಿಕೋ’ ಕತೆ ಹೇಳಿದರೆ ಅವರು ತಮ್ಮ ಅಭಿಪ್ರಾಯ ಬದಲಿಸಿಕೊಳ್ಳಬಹುದು ಮತ್ತು ನಾವು ನೋಡಲು

ಹೋಗುವ ತಾಣದ ಮಹಿಮೆ ಅರ್ಥವಾಗಬಹುದು ಎಂದು ಸುಮ್ಮನಾದೆ. ಹೇಳಿ ಕೇಳಿ, ‘ಹಚಿಕೋ’ ಅಕಿಟಾ ಎಂದು ಕರೆಯುವ ಒಂದು ತಳಿಯ ನಾಯಿ. ಟೋಕಿಯೋ ನಗರದ ಅತ್ಯಂತ ಜನನಿಬಿಡ ಶಿಬುಯಾ ಕ್ರಾಸಿಂಗ್ ಪ್ರದೇಶದಲ್ಲಿ ಮತ್ತು ಶಿಬುಯಾ ರೈಲು ನಿಲ್ದಾಣದ ಪಕ್ಕದಲ್ಲಿ ಅದರ ಪುತ್ಥಳಿಯಿದೆ.

ಶಿಬುಯಾ ಕ್ರಾಸಿಂಗ್‌ನಲ್ಲಿ ಪ್ರತಿದಿನ ಸುಮಾರು ಎರಡೂವರೆ ಲಕ್ಷ ಜನ ರಸ್ತೆ ದಾಟುತ್ತಾರೆ. ರಸ್ತೆ ದಾಟುವುದನ್ನು ನೋಡಲು ಮತ್ತು ಖುದ್ದಾಗಿ ರಸ್ತೆ ದಾಟುವ ಅನುಭವವನ್ನು ಪಡೆಯಲು ಪ್ರವಾಸಿಗರು ಅಲ್ಲಿಗೆ ಹೋಗುತ್ತಾರೆ. ಹಾಗೆ ಹೋದವರು ಅಲ್ಲಿನ ಒಂದು ಪಾರ್ಶ್ವದಲ್ಲಿ ನಾಲ್ಕು ಅಡಿ ಕಟ್ಟೆಯ ಮೇಲೆ ನಿಲ್ಲಿಸಲಾದ ‘ಹಚಿಕೋ’ ನಾಯಿಯ ಪುತ್ಥಳಿ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳದೇ ಬರುವುದಿಲ್ಲ.

ಜಪಾನಿನ ಮಹಾನ್ ನಾಯಕರ ಸಮಾಧಿಗೆ ಎಷ್ಟು ಮಂದಿ ಹೋಗುತ್ತಾರೋ ಗೊತ್ತಿಲ್ಲ, ಆದರೆ ‘ಹಚಿಕೋ’ ಪುತ್ಥಳಿಯನ್ನು ವೀಕ್ಷಿಸದೇ ಬರುವವರು ವಿರಳ. ಅಷ್ಟರಮಟ್ಟಿಗೆ ಆ ಪ್ರದೇಶ ಪ್ರಸಿದ್ಧ. ಈ ವಿಷಯವನ್ನು ನಮ್ಮ ಜತೆಯಲ್ಲಿದ್ದವರಿಗೆ ಹೇಳಿದಾಗ, “ಹಾಗಾದರೆ ಹೋಗೋಣ ಬಿಡಿ" ಎಂಬ ಉದ್ಗಾರ ಬಂತು. ಅಷ್ಟೇ ಆಗಿದ್ದರೆ ನಾನು ನನ್ನ ಜತೆಯಲ್ಲಿದ್ದ ವರನ್ನೆಲ್ಲ ಅಷ್ಟು ದೂರ ಸುತ್ತಿಸುತ್ತಿರಲಿಲ್ಲ.

ನನ್ನ ಬೇಡಿಕೆಯನ್ನು ಅವರ ಮೇಲೆ ಹೇರುತ್ತಲೂ ಇರಲಿಲ್ಲ. ಸುಮಾರು ತೊಂಬತ್ತು ವರ್ಷಗಳ (1935) ಹಿಂದೆ ತೀರಿಹೋದ ಒಂದು ನಾಯಿಯ ಪುತ್ಥಳಿಯನ್ನು ನೋಡಲು ನನ್ನ ಜತೆಗಿದ್ದ ನಲವತ್ತು ಸ್ನೇಹಿತರನ್ನು ಕರೆದುಕೊಂಡು ಹೋಗಬೇಕೆಂದರೆ, ನನಗೆ ಬುದ್ಧಿ ಕೆಟ್ಟಿರಲಿಕ್ಕಿಲ್ಲ ಎಂದು ಕೆಲವರು ಮಾತಾಡಿಕೊಂಡರು.

ಹೀಗಾಗಿ ಅವರೆಲ್ಲ ಸುಮ್ಮನೆ ಹಿಂಬಾಲಿಸಿದರು. ಈಗ ನಿಮಗೆ ‘ಹಚಿಕೋ’ ನಾಯಿಯ ಬಗ್ಗೆ ಹೇಳುತ್ತೇನೆ. ೧೯೨೩ರಂದು ಆ ನಾಯಿ ಜಪಾನಿನ ಓಡೇಟ್ ನಗರದ ಬಳಿಯ ಒಂದು ಜಮೀನಿನಲ್ಲಿ ಹುಟ್ಟಿತು. ಅದರ ಮುಂದಿನ ವರ್ಷ ಅಂದರೆ ೧೯೨೪ರಲ್ಲಿ, ಟೋಕಿಯೋ ಇಂಪೀರಿಯಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಹಿಡೆಸಬುರೊ ಉಯೆನೊ ಎಂಬುವವರು ಆ ನಾಯಿಯನ್ನು ತಮ್ಮ ಸಾಕುಪ್ರಾಣಿಯಾಗಿ, ಶಿಬುಯಾ ಪ್ರದೇಶದಲ್ಲಿ ವಾಸಿಸಲು ಕರೆತಂದ. ಆತ ಮನೆಯಿಂದ ಹೊರಬಿದ್ದರೆ ಸಾಕು, ‘ಹಚಿಕೋ’ ತನ್ನ ಯಜಮಾನನನ್ನು ಹಿಂಬಾಲಿಸುತ್ತಿತ್ತು.

ಮನೆಯಲ್ಲೂ ಆತನನ್ನು ಬಿಟ್ಟು ಇರುತ್ತಿರಲಿಲ್ಲ. ಪ್ರತಿದಿನ ಆಫೀಸಿನಿಂದ ಮನೆಗೆ ಹಿಡೆಸಬು ರೊ ಉಯೆನೊ ಮರಳುತ್ತಿದ್ದಂತೆ, ಶಿಬುಯಾ ರೈಲು ನಿಲ್ದಾಣಕ್ಕೆ ಓಡೋಡಿ ಹೋಗುತ್ತಿದ್ದ ಹಚಿಕೋ ತನ್ನ ಯಜಮಾನನ್ನು ಬರಮಾಡಿಕೊಂಡು ಮನೆಗೆ ಕರೆದುಕೊಂಡು ಬರುತ್ತಿತ್ತು. ಹಚಿಕೋ ಡಾ.ಉಯೆನೊ ಅವರ ಕುಟುಂಬದ ಸಂಗಾತಿಯಂತೆ, ನಿತ್ಯ ಜೀವನದ ಭಾಗವಾಗಿ ಬೆಳೆಯಿತು.

ಪ್ರತಿ ಬೆಳಗ್ಗೆ ಆ ನಾಯಿ ಯಜಮಾನನೊಂದಿಗೆ ಟೋಕಿಯೋ ನಗರದಲ್ಲಿರುವ ಶಿಬುಯಾ ರೈಲು ನಿಲ್ದಾಣಕ್ಕೆ ಹೋಗಿ ಬೀಳ್ಕೊಡುತ್ತಿತ್ತು. ಸಂಜೆ ಆಗುತ್ತಿದ್ದಂತೆ, ನಿಲ್ದಾಣದ ಬಾಗಿಲಲ್ಲಿ ನಿಂತು ಬರಮಾಡಿಕೊಂಡು ಮನೆಗೆ ಕರೆದುಕೊಂಡು ಬರುತ್ತಿತ್ತು. ಇದೇ ಅದರ ದಿನಚರಿ ಯಾಗಿತ್ತು.

ಕಾಯಿಲೆ ಬಿದ್ದಾಗಲೂ ಅದು ರೈಲು ನಿಲ್ದಾಣಕ್ಕೆ ಹೋಗದ ದಿನಗಳಿರಲಿಲ್ಲ. ಒಮ್ಮೆ ಹಚಿಕೋ ಜ್ವರದಿಂದ ನರಳುತ್ತಿದ್ದರೂ, ಯಜಮಾನನ್ನು ಸ್ವಾಗತಿಸಲು ರೈಲು ನಿಲ್ದಾಣಕ್ಕೆ ಹೋಗಿತ್ತು. ಈ ಕಾರಣಕ್ಕಾಗಿ ಹಚಿಕೋ ಗುಣಮುಖನಾಗುವ ತನಕ ಉಯೆನೊ ಆಫೀಸಿಗೆ ಹೋಗಿರಲಿಲ್ಲ. ಯಜಮಾನನ ಮೇಲೆ ಅಂಥ ಪ್ರೀತಿ, ಕಾಳಜಿ, ನಿಷ್ಠೆ!

ಮಳೆಯಿರಲಿ, ಚಳಿಯಿರಲಿ, ಭೂಕಂಪ ಸಂಭವಿಸಲಿ, ಚಂಡಮಾರುತ ಬೀಸಲಿ, ಸಾಯಂ ಕಾಲ ಆರು ಗಂಟೆಯಾಗುತ್ತಿದ್ದಂತೆ, ‘ಹಚಿಕೋ’ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಮೇಲೆ ತನ್ನ ಯಜಮಾನನ ದಾರಿ ಕಾಯುತ್ತಾ ನಿಂತಿರುತ್ತಿತ್ತು. ಯಜಮಾನ ಆಫೀಸಿಗೆ ಹೋದ ಬಳಿಕ ದಿನವಿಡೀ ಅದು ಮನೆಯಲ್ಲಿ ತನ್ನ ಕಾರ್ಯದಲ್ಲಿ ತೊಡಗಿದ್ದರೂ ರೈಲು ಆಗಮಿ ಸುವ ಸಮಯ ಸಮೀಪಿಸುತ್ತಿದ್ದಂತೆ, ರೈಲು ನಿಲ್ದಾಣಕ್ಕೆ ಧಾವಿಸಿ ಬರುತ್ತಿತ್ತು.

ರೈಲಿನಿಂದ ಉಯೆನೊ ಇಳಿಯುತ್ತಿದ್ದಂತೆ ಆತನನ್ನು ಮುದ್ದಾಡಿ, ಮನೆ ತನಕ ಅವನನ್ನು ಹಿಂಬಾಲಿಸಿ ಕರೆದುಕೊಂಡು ಬರುತ್ತಿತ್ತು. ತಾನು ರೈಲು ನಿಲ್ದಾಣಕ್ಕೆ ಹೋಗದಿದ್ದರೆ ತನ್ನ ಯಜಮಾನನಿಗೆ ಮನೆಗೆ ಮರಳುವುದು ಗೊತ್ತಾಗಲಿಕ್ಕಿಲ್ಲ ಎಂದು ಅದು ತಿಳಿದಿತ್ತಾ ಎಂದು

ಯೋಚಿಸುವಷ್ಟರ ಮಟ್ಟಿಗೆ ಅದು ಆತನ ಸ್ವಾಗತಕ್ಕೆ ಧಾವಿಸುತ್ತಿತ್ತು. ರೈಲು ನಿಲ್ದಾಣದಲ್ಲಿ ರುವವರಿಗೆ, ಸುತ್ತಮುತ್ತಲ ಪ್ರದೇಶದಲ್ಲಿರುವ ಅಂಗಡಿಕಾರರಿಗೆ ‘ಹಚಿಕೋ’ ಸಾಕಷ್ಟು ಪರಿಚಿತವಾಗಿತ್ತು. ಆರು ಗಂಟೆಯಾಗುತ್ತಿದಂತೆ ಇನ್ನೇನು ‘ಹಚಿಕೋ’ ಬರಲಿದೆ ಎಂದು ಅವರೆಲ್ಲ ಮಾತಾಡಿಕೊಳ್ಳುತ್ತಿದ್ದರು ಮತ್ತು ಅವರ ನಿರೀಕ್ಷೆ ಎಂದೂ ಹುಸಿಯಾಗುತ್ತಿರ ಲಿಲ್ಲ. ಅದೇ ಸಮಯಕ್ಕೆ ‘ಹಚಿಕೋ’ ಬಾಲ ಅಡಿಸುತ್ತಾ ಆಗಮಿಸುತ್ತಿತ್ತು.

ಇದು ಸುಮಾರು ಒಂದು ವರ್ಷದವರೆಗೆ ಮುಂದುವರಿಯಿತು. ಕೆಲವು ಸಲ ಉಯೆನೊ ಆಫೀಸಿಗೆ ಹೋಗದಿದ್ದರೆ ಇಡೀ ದಿನ ಆತನ ಕಾಲ ಬುಡದಲ್ಲಿಯೇ ಸುಳಿದಾಡುತ್ತಾ ಇದ್ದು ಬಿಡುತ್ತಿತ್ತು. ‘ಹಚಿಕೋ’ ನಿಮ್ಮ ಪತ್ನಿಯಾಗಿದ್ದರೇ ಒಳ್ಳೆಯದಿತ್ತು ಎಂದು ಉಯೆನೊ ಪತ್ನಿ ಗಂಡನನ್ನು ಛೇಡಿಸಿದ್ದಳು. ಅಷ್ಟರಮಟ್ಟಿಗೆ ಅದು ತನ್ನ ಯಜಮಾನನ್ನು ಬಿಟ್ಟಿರುತ್ತಿರ ಲಿಲ್ಲ. ಇದು ಸುಮಾರು ಒಂದು ವರ್ಷದವರೆಗೆ (1925ರವರೆಗೆ) ಮುಂದುವರಿಯಿತು. ಈ ಮಧ್ಯೆ, ಉಯೆನೊ ಕರ್ತವ್ಯನಿರತನಾಗಿದ್ದಾಗ ಹಠಾತ್ತನೆ ಮಿದುಳು ರಕ್ತಸ್ರಾವದಿಂದ ನಿಧನ ನಾಗಿಬಿಟ್ಟ!

ಆ ದಿನ ಸಾಯಂಕಾಲ ‘ಹಚಿಕೋ’, ರೈಲು ನಿಲ್ದಾಣಕ್ಕೆ ಹೋದಾಗ ಯಜಮಾನ ಬರಲೇ ಇಲ್ಲ. ಈಗ ಬರಬಹುದು, ಆಗ ಬರಬಹುದು ಎಂದು ‘ಹಚಿಕೋ’ ಸುಮಾರು ನಾಲ್ಕು ಗಂಟೆ ಪ್ಲಾಟ್-ರ್ಮ್ ಮೇಲೆ ನಿಂತೇ ಕಾಯುತ್ತಿತ್ತು. ಆದರೆ ಯಜಮಾನ ಬರಲಿಲ್ಲ. ಆ ಇಡೀ ರಾತ್ರಿ

‘ಹಚಿಕೋ’ ಮನೆಗೆ ಹೋಗದೇ ರೈಲು ನಿಲ್ದಾಣದಲ್ಲಿ ಕಾಯುತ್ತಲೇ ಇತ್ತು. ಮರುದಿನ ಬೆಳಗ್ಗೆ ಉಯೆನೊ ಪತ್ನಿ ರೈಲು ನಿಲ್ದಾಣಕ್ಕೆ ಬಂದು ನಾಯಿಯನ್ನು ಕರೆದುಕೊಂಡು ಹೋದಳು. ಆದರೆ ಹಚಿಕೋ ಒಂಥರಾ ಮಂಕಾಗಿತ್ತು. ತನ್ನ ಯಜಮಾನ ಎಲ್ಲಿಗೆ ಹೋಗಿರಬಹುದು ಎಂಬ ಪ್ರಶ್ನೆಗೆ ಅದಕ್ಕೆ ಉತ್ತರ ಸಿಕ್ಕಿರಲಿಲ್ಲ. ಮರುದಿನ ಸಾಯಂಕಾಲ ಆರು ಗಂಟೆಯಾಗು ತ್ತಿದ್ದಂತೆ, ರೈಲು ನಿಲ್ದಾಣದತ್ತ ಧಾವಿಸಿತು.

ಯಜಮಾನನ ಆಗಮನಕ್ಕೆ ಕಾದು ಕಾದು ಸುಸ್ತಾಗಿ ನಂತರ ಮನೆಗೆ ಮರಳಿತು. ಇದು ಮುಂದಿನ ಹತ್ತು ವರ್ಷಗಳವರೆಗೆ ಮುಂದುವರಿಯಿತು! 1935ರಲ್ಲಿ ಹಚಿಕೋ ತೀರಿ ಹೋಗುವ ತನಕ, ಒಂದು ದಿನ ಸಹ ತಪ್ಪಿಸದೇ ತನ್ನ ಯಜಮಾನನ ಆಗಮನವನ್ನು ನಿರೀಕ್ಷಿಸುತ್ತಾ ರೈಲು ನಿಲ್ದಾಣಕ್ಕೆ ಹೋಗಿ ಕಾದು ಕಾದು ಸುಸ್ತಾಗಿ ನಂತರ ಮನೆಗೆ ಮರಳುತ್ತಿತ್ತು!

ಹಚಿಕೋ ಸಾಯುವುದಕ್ಕಿಂತ ಮೂರು ವರ್ಷಗಳ ಮುನ್ನ (1932ರಲ್ಲಿ) ಜಪಾನಿನ ಪತ್ರಿಕೆಯೊಂದು ಅದರ ಸ್ವಾಮಿನಿಷ್ಠೆ ಬಗ್ಗೆ ಮೊದಲ ಬಾರಿಗೆ ಬರೆಯಿತು. ಆಗ ಹಚಿಕೋ ಜಪಾನಿನ ಆಚೆ, ಜಗತ್ತಿನ ಗಮನವನ್ನು ಸೆಳೆಯಿತು. ಆ ನಾಯಿಯ ಅಮಿತ ನಿಷ್ಠೆ ಮತ್ತು ಅಪಾರ ಪ್ರೀತಿಯ ಈ ಅಪರೂಪದ ಕತೆ ಎಲ್ಲರನ್ನೂ ಸ್ಪರ್ಶಿಸಿತು. ಅದಾಗಿ ಎರಡು ವರ್ಷ ಗಳ ಬಳಿಕ (1934ರಲ್ಲಿ), ಶಿಬುಯಾ ರೈಲು ನಿಲ್ದಾಣದ ಹೊರಗೆ ಹಚಿಕೋ ಬದುಕಿರು ವಾಗಲೇ, ಅದು ಯಾವ ಸ್ಥಳದಲ್ಲಿ ತನ್ನ ಯಜಮಾನನಿಗೆ ಕಾಯುತ್ತಾ ನಿಂತಿರುತ್ತಿತ್ತೋ ಅದೇ ಜಾಗದಲ್ಲಿ ಪುತ್ಥಳಿಯನ್ನು ಸ್ಥಾಪಿಸಲಾಯಿತು.

ಈ ಸಮಾರಂಭದಲ್ಲಿ ಹಚಿಕೋ ಮುಖ್ಯ ಅತಿಥಿ ಮತ್ತು ಕೇಂದ್ರ ಆಕರ್ಷಣೆ! ಈ ದೃಶ್ಯ ಕಂಡು ಇಡೀ ವಿಶ್ವವೇ ಆನಂದಬಾಷ್ಪ ಸುರಿಸಿತು. ಹಚಿಕೋನ ಜೀವನ ನಮಗೆ ನಂಬಿಕೆ ಮತ್ತು ಪ್ರೀತಿಯ ಮಹತ್ವವನ್ನು ಮನಗಾಣಿಸುತ್ತದೆ. ಹಚಿಕೋ ಸತ್ತು ತೊಂಬತ್ತು ವರ್ಷಗಳಾದರೂ ಅದು ಇಂದಿಗೂ ನಮಗೆ ನಂಬಿಕೆ, ನಿಷ್ಠೆ, ಪ್ರೀತಿಯ ಅಮರ ಸಂದೇಶ ವನ್ನು ಸಾರುತ್ತದೆ. ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಸೌಂದರ್ಯವನ್ನು ಪ್ರತಿಬಿಂಬಿಸುವ ಈ ಕಥೆ ಜಗತ್ತಿನ ಎಡೆ ಜನರ ಹೃದಯಗಳನ್ನು ಗೆದ್ದಿದೆ. ಈ ನಾಯಿಯ ಬಗ್ಗೆ ಹತ್ತಾರು ಸಿನಿಮಾಗಳು ತೆರೆ ಕಂಡಿವೆ.

ಜಪಾನಿನ ಬೇರೆ ನಗರಗಳಲ್ಲೂ ಹಚಿಕೋ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಹಚಿಕೋ ಬದುಕಿದ್ದಿದ್ದರೆ, ಸಾಯಂಕಾಲ ವಾಗುತ್ತಿದ್ದಂತೆ ಆ ರೈಲು ನಿಲ್ದಾಣಕ್ಕೆ ಹೋಗುತ್ತಿತ್ತು ಎಂದು ಜನ ಈಗಲೂ ಡಿಕೊಳ್ಳುತ್ತಾರೆ. ಅಂದು ನಾನೇನಾದರೂ ಅಲ್ಲಿಗೆ ಹೋಗದಿದ್ದರೆ, ಅದೆಂಥ

ಅನುಭವದಿಂದ ವಂಚಿತನಾಗುತ್ತಿದ್ದೆ?

ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಅತ್ಯಗತ್ಯ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ