Vishweshwar Bhat Column: ಅದ್ಯಾವ ಗುಣ, ಮೌಲ್ಯಗಳು ಅವರನ್ನು ಆಳುತ್ತಿರಬಹುದು ?
ಒಂದು ದೇಶ ಜಗತ್ತಿನೆದುರು ಅವಮಾನದಿಂದ ವಿಷಣ್ಣವಾಗಿ, ಸೋತು ಸೊರಗಿ ಹೋದರೂ, ನಿಸರ್ಗದ ಹೊಡೆತಗಳಿಗೆ ಸತತ ನಲುಗಿ ಹೋದರೂ, ಭೂಕಂಪದ ಅನಿಶ್ಚಿತತೆಗೆ ಅನುಗಾಲವೂ ತುತ್ತಾಗು ತ್ತಿದ್ದರೂ, ಜಗತ್ತಿನ ಪ್ರಬಲ ಶಕ್ತಿಯಾಗಿ ತಲೆಯೆತ್ತಿ ನಿಂತಿರುವುದು ಸಣ್ಣ ಮಾತಲ್ಲ. ಇದೊಂದೇ ವಿಷಯವನ್ನು ತೆಗೆದುಕೊಳ್ಳೋಣ

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಂಕಣ

ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
vbhat@me.com
ಜಪಾನಿನ ಬಗ್ಗೆ ಮೊಗೆದಷ್ಟೂ ವಿಷಯಗಳು ತುಂಬಿಕೊಳ್ಳುತ್ತಿವೆ. ನಾನು ಯಾವ ದೇಶದ ಬಗ್ಗೆಯೂ ಈ ಪರಿ ನಿರಂತರವಾಗಿ ಬರೆದಿದ್ದಿಲ್ಲ. ಆದರೆ ಜಪಾನ್ ಕಾಡಿದ ಹಾಗೆ ನನ್ನನ್ನು ಬೇರೆ ಯಾವ ದೇಶವೂ ಕಾಡಿಲ್ಲ.
ಮಳೆ ನಿಂತರೂ ಮಳೆ ಹನಿ ತೊಟ್ಟಿಕ್ಕುವುದು ನಿಂತಿಲ್ಲ ಎಂಬ ಹಾಗೆ, ಅಲ್ಲಿಂದ ಮರಳಿ ಎರಡು ತಿಂಗಳುಗಳಿಗಿಂತ ಹೆಚ್ಚಾದರೂ, ಜಪಾನ್ ಬಗೆಗಿನ ಕತೆಗಳು ನನ್ನ ಮನಸ್ಸಿನಲ್ಲಿ ಇನ್ನೂ ಹನಿಗೂಡು ತ್ತಲೇ ಇವೆ. ನಾನು ಆ ದೇಶದ ಬಗ್ಗೆ ಯೋಚಿಸಿದಷ್ಟೂ ಅಲ್ಲಿನ ವಿಸ್ಮಯಗಳ ಪದರಗಳು ಈರುಳ್ಳಿ ಸಿಪ್ಪೆಯಂತೆ ಕಳಚಿಕೊಳ್ಳುತ್ತಲೇ ಹೋಗುತ್ತಿವೆ.
ಒಂದು ದೇಶ ಜಗತ್ತಿನೆದುರು ಅವಮಾನದಿಂದ ವಿಷಣ್ಣವಾಗಿ, ಸೋತು ಸೊರಗಿ ಹೋದರೂ, ನಿಸರ್ಗ ದ ಹೊಡೆತಗಳಿಗೆ ಸತತ ನಲುಗಿ ಹೋದರೂ, ಭೂಕಂಪದ ಅನಿಶ್ಚಿತತೆಗೆ ಅನುಗಾಲವೂ ತುತ್ತಾಗು ತ್ತಿದ್ದರೂ, ಜಗತ್ತಿನ ಪ್ರಬಲ ಶಕ್ತಿಯಾಗಿ ತಲೆಯೆತ್ತಿ ನಿಂತಿರುವುದು ಸಣ್ಣ ಮಾತಲ್ಲ. ಇದೊಂದೇ ವಿಷಯವನ್ನು ತೆಗೆದುಕೊಳ್ಳೋಣ.
ಇದನ್ನೂ ಓದಿ: Vishweshwar Bhat Column: ಅಮೆರಿಕ ಅಧ್ಯಕ್ಷರ ಹಾಸ್ಯ ದಿನದ ಬಗ್ಗೆ ನಿಮಗೆ ಗೊತ್ತಿದೆಯೇ ?
ಯಾವುದೇ ದೇಶಕ್ಕೆ ಒಲಿಂಪಿಕ್ ಕ್ರೀಡಾಕೂಟವನ್ನು ಸಂಘಟಿಸುವುದು ಅತ್ಯಂತ ಹೆಮ್ಮೆಯ ಮತ್ತು ಪ್ರತಿಷ್ಠೆಯ ವಿಷಯ. ಒಂದು ದೇಶ ಅಂಥ ಕ್ರೀಡಾಕೂಟವನ್ನು ಸಂಘಟಿಸಲು ಸಮರ್ಥವಾದರೆ, ಅದು ವಿಶ್ವದ ಪ್ರಮುಖ ದೇಶಗಳಲ್ಲಿ ಒಂದು ಎಂದು ಪರಿಗಣಿತವಾಗುತ್ತದೆ. ಎರಡನೇ ಮಹಾಯುದ್ಧ ದಲ್ಲಿ ಅಣುಬಾಂಬ್ ದಾಳಿಗೆ ತುತ್ತಾಗಿ ಕೇವಲ ಇಪ್ಪತ್ತು ವರ್ಷಗಳಲ್ಲಿ, ಒಲಿಂಪಿಕ್ ಕ್ರೀಡಾಕೂಟ ವನ್ನು ಸಂಘಟಿಸುವ ಮಟ್ಟಕ್ಕೆ ಜಪಾನ್ ಬೆಳೆದು ನಿಂತಿತು.
ಸ್ವತಂತ್ರ ರಾಷ್ಟ್ರವಾಗಿ ತಲೆಯೆತ್ತಿ ಎಪ್ಪತ್ತೆಂಟು ವರ್ಷಗಳಾದರೂ, ಭಾರತಕ್ಕೆ ಇಲ್ಲಿ ತನಕ ಒಂದು ಸಲವೂ ಅಂಥ ಕ್ರೀಡಾಕೂಟವನ್ನು ಸಂಘಟಿಸಲು ಸಾಧ್ಯವಾಗಿಲ್ಲ. ಮುಂದಿನ ಹತ್ತು ವರ್ಷಗಳಲ್ಲಿ ಭಾರತಕ್ಕೆ ಅಂಥ ಅವಕಾಶವೂ ಸಿಗಲಿಕ್ಕಿಲ್ಲ. ಹಾಗೆ ನೋಡಿದರೆ, ಎರಡನೇ ಮಹಾಯುದ್ಧದ ನಂತರ, ಜಪಾನ್ ಇಲ್ಲಿ ತನಕ ನಾಲ್ಕು ಸಲ (1964, 1972, 1998 ಮತ್ತು 2020) ಒಲಿಂಪಿಕ್ ಕ್ರೀಡಾಕೂಟ ವನ್ನು ಸಂಘಟಿಸಿದೆಯೆಂದರೆ ಆ ದೇಶ ಏರಿದ ಎತ್ತರ ಎಂಥದ್ದು ಎಂಬುದನ್ನು ಅರಿಯಬಹುದು.
ಇಂದು ಜಪಾನ್ ಪ್ರತಿ ರಂಗದಲ್ಲೂ ಅಸಾಧಾರಣ ಪ್ರಗತಿ ಸಾಧಿಸಿದೆ. ಆ ಎಲ್ಲ ರಂಗಗಳಲ್ಲಿ ಶ್ರೇಷ್ಠತೆ ಯನ್ನು ಮೆರೆಯುತ್ತಿದೆ. ಹಿಡಿದ ಎಲ್ಲ ಕೆಲಸಗಳಲ್ಲೂ ಪರಿಪೂರ್ಣತೆ ಸಾಧಿಸುವುದು ಜಪಾನಿಯರ ಹುಟ್ಟುಗುಣ. ನಮಗಿನ್ನೂ ನಮ್ಮ ಬೀದಿಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಯಾವು ದೇ ಒಂದು ಕ್ಷೇತ್ರದಲ್ಲಿ ಸಂಪೂರ್ಣ ಸಮಾಧಾನವಾಗುವ ಪ್ರಗತಿ ಸಾಧಿಸಲು ನಮಗೆ ಸಾಧ್ಯವಾಗಿಲ್ಲ. ಅವರು ಕೈಯಿಟ್ಟಲ್ಲ ಶ್ರೇಷ್ಠತೆಯನ್ನು ಒಂದು ಕಲೆ, ವಿಜ್ಞಾನ, ಸಂಸ್ಕೃತಿ, ಸಂಸ್ಕಾರ, ವ್ಯಸನ, ಚಟದಂತೆ ಅಂಟಿಸಿಕೊಂಡಿದ್ದಾರೆ.
ಇಡೀ ನಗರದಲ್ಲಿ ಒಂದೇ ಒಂದು ಕಸದಬುಟ್ಟಿ ಅಥವಾ ತೊಟ್ಟಿಗಳನ್ನು ಇಡದೇ, ನಗರವನ್ನು ಸುಂದರವಾಗಿ ಇಟ್ಟುಕೊಳ್ಳಲು ಸಾಧ್ಯ ಎಂಬುದನ್ನು ಜಪಾನಿಯರು ತೋರಿಸಿಕೊಟ್ಟಿದ್ದಾರೆ. ಒಂದೆಡೆ ತಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಆರಾಧಿಸುವ ಜಪಾನಿಯರು, ಆಧುನಿಕವಾಗಿಯೂ ಅಭಿವೃದ್ಧಿ ಸಾಧಿಸಿರುವುದು ಅವರ ಸೂಕ್ಷ್ಮ ಮನಸ್ಸಿನ ಅಂತರಂಗದ ಅನಾವರಣ ಮಾಡಿಸುತ್ತದೆ. ಜಾಗತೀಕರಣದ ಯಾವ ಹೊಡೆತಗಳೂ ಅವರನ್ನು ಬಾಧಿಸಿಲ್ಲ.
ಕರ್ನಾಟಕವೂ ಸೇರಿದಂತೆ, ಇಡೀ ಜಗತ್ತಿಗೇ ಇಂಗ್ಲಿಷ್ ಭೂತ ಕಾಡುತ್ತಿದ್ದರೂ, ಜಪಾನಿನಲ್ಲಿ ಮಾತ್ರ ಅದನ್ನು ಕಾಣಲು ಸಾಧ್ಯವಿಲ್ಲ. ಇಂದಿಗೂ ಅವರು ಮಾತೃಭಾಷಾ ಪ್ರೇಮಿಗಳು. ಇಂದಿಗೂ ಟೋಕಿಯೋ ನಗರದಲ್ಲಿರುವ ದೇವಸ್ಥಾನದಲ್ಲಿ ದಿನದ ಯಾವ ಹೊತ್ತಿಗೆ ಹೋದರೂ ಸಾವಿರಾರು ಜನ ದೇವಸ್ಥಾನದ ಮುಂದೆ ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಜಪಾನಿನಲ್ಲಿ ಹುಟ್ಟಿದವರು ಶತಕ ಬಾರಿಸುವುದು ಸಾಮಾನ್ಯ. ತಮಾಷೆಯೆಂದರೆ, ಜಪಾನಿನಲ್ಲಿ ಮಕ್ಕಳಿಗಿಂತ ಹೆಚ್ಚು ಮುದುಕರಿದ್ದಾರೆ. ಮಕ್ಕಳ ಡಯಪರಿಗಿಂತ ( Daiper ) ಮುದುಕರ ಡಯಪರ್ ಹೆಚ್ಚು ಮಾರಾಟವಾಗುತ್ತವೆ.
ಅಂದರೆ ಹುಟ್ಟಿದವರು ಶತಾಯುಷಿಗಳಾಗಿ ನೆಮ್ಮದಿಯಿಂದ ಬಾಳುತ್ತಾರೆ. ಜಪಾನಿಯರು ಎದುರಿಸುವ ಯಾವ ತೊಂದರೆ-ತಾಪತ್ರಯಗಳೂ ನಮಗಿಲ್ಲ. ಆದರೂ ಅವರ ಸಾಧನೆಯ ಹತ್ತರಲ್ಲಿ ಒಂದನ್ನೂ ಸಾಧಿಸಲು ನಮಗೆ ಸಾಧ್ಯವಾಗಿಲ್ಲ. ಅಷ್ಟು ಪುಟ್ಟ ದೇಶ ಇಂದು ಅಸಾಧಾರಣ ಪ್ರಗತಿ ಸಾಧಿಸಿದ್ದರೆ, ಅಲ್ಲಿನ ಜನರನ್ನು ಯಾವುದೋ ಒಂದು ಅದ್ಭುತ ಶಕ್ತಿ ಮುನ್ನಡೆಸುತ್ತಿರುವುದು ದಿಟ.
ಜಪಾನಿನ ಮಣ್ಣಿನಲ್ಲಿ ಗಟ್ಟಿಗೊಂಡಿರುವ ಅಲ್ಲಿನ ಜೀವನಮೌಲ್ಯ, ಸಿದ್ಧಾಂತ, ಸಂಸ್ಕಾರ, ಶ್ರೇಷ್ಠ ಸಂಪ್ರದಾಯ, ತತ್ವಗಳು ನಿಸ್ಸಂದೇಹವಾಗಿ ಅಲ್ಲಿನ ಜನರ ಮಾನಸಿಕತೆಯನ್ನು ಪಕ್ವಗೊಳಿಸಿದೆ. ವಿಶ್ವದ ಉಳಿದೆಲ್ಲ ರಾಷ್ಟ್ರಗಳ ಪ್ರಜೆಗಳಿಗಿಂತ ಯಾವುದೋ ಉನ್ನತ ಗುಣಗಳು ಅವರನ್ನು ಆಳುತ್ತಿರು ವುದು, ಆವರಿಸಿರುವುದು ನಿಜ.
ಜಪಾನಿನಲ್ಲಿ ಇಂದಿಗೂ ಅಂಥ ಜೀವನ ಸಿದ್ಧಾಂತಗಳನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ಪೊರೆಯ ಲಾಗುತ್ತಿದೆ. ವ್ಯಕ್ತಿಯಾಗಿ, ಪ್ರಜೆಯಾಗಿ ಯಾವ ರೀತಿ ಬೆಳೆಯಬೇಕು ಎಂಬುದನ್ನು ಅಲ್ಲಿನ ಸಮಾಜ ನಿರ್ಧರಿಸಿ, ನಿರ್ದೇಶಿಸುತ್ತದೆ. ಅಲ್ಲಿನ ಸಮಾಜ ಮತ್ತು ಜನಜೀವನದಲ್ಲಿ ಬಲವಾಗಿ ಹಾಸು ಹೊಕ್ಕಾ ಗಿರುವ ಸರ್ವಶ್ರೇಷ್ಠ ಮೌಲ್ಯಗಳು ಮತ್ತು ಸೂಕ್ಷ್ಮ ಸಂಗತಿಗಳು ಅಲ್ಲಿನ ಜನರ ಸಾಮೂಹಿಕ ಪ್ರಜ್ಞೆ ಯನ್ನು ರೂಪಿಸಿರುವುದು ಸತ್ಯ.
ಜಪಾನಿಯರಲ್ಲಿ ಒಂದು ಅಪರೂಪದ ಗುಣವಿದೆ. ಏನೇ ಮಾಡಿದರೂ ಅದರಲ್ಲಿ ನೂರಕ್ಕೆ ನೂರ ರಷ್ಟು ತೊಡಗಿಸಿಕೊಳ್ಳಬೇಕು, ಮಾಡಿದ ಕೆಲಸದಲ್ಲಿ ಯಾವ ನ್ಯೂನ, ದೋಷ, ಸಣ್ಣ ಲೋಪವೂ ಇರಕೂಡದು, ಪರಿಪೂರ್ಣತೆಯನ್ನು ಸಾಧಿಸುವ ತನಕ ಹಿಡಿದ ಕೆಲಸವನ್ನು ಬಿಡಬಾರದು. ಇದೊಂದು ಗುಣವೇ ಸಾಕು, ಆ ದೇಶದ ಆದರ್ಶಗಳಿಗೆ ಕನ್ನಡಿ ಹಿಡಿಯಲು. ಜಪಾನಿಯರ ಸಾಧನೆ ಮತ್ತು ಯಶಸ್ಸಿನ ಹಿಂದೆ ಈ ಆದರ್ಶ ಗುಣವೇ ವೈಭವದಿಂದ ಆಳುತ್ತಿರುವುದು!
ಜಪಾನ್ ಎಂದಾಕ್ಷಣ, ಶಿಸ್ತು, ಶ್ರಮ, ಸರಳತೆ ಮತ್ತು ವಿನಯಶೀಲತೆ ತಕ್ಷಣ ನೆನಪಿಗೆ ಬರುತ್ತವೆ. ಜಪಾನಿಯರು ತಮ್ಮ ಪರಂಪರೆ, ಸಂಸ್ಕೃತಿ ಮತ್ತು ಜೀವನ ಶೈಲಿಯಲ್ಲಿ ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರ ನೈತಿಕತೆ ಮತ್ತು ಜೀವನ ತತ್ವಗಳು ಅವರನ್ನು ಯಶಸ್ವಿ ಮತ್ತು ಅನು ಕರಣೀಯ ಸಮಾಜವಾಗಿ ರೂಪಿಸಿವೆ. ಈ ತತ್ವಗಳು ಕೇವಲ ವೈಯಕ್ತಿಕ ಜೀವನಕ್ಕೆ ಸೀಮಿತ ವಾಗಿರದೇ, ಅವರ ಉದ್ಯೋಗ, ಶಿಕ್ಷಣ, ಸಮಾಜ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿಯೂ ದರ್ಶನ ಮಾಡಿಸುತ್ತವೆ.
ಜಪಾನಿಯರು ಅತ್ಯಂತ ಶ್ರಮಶೀಲರು. ‘ಕೈಜೆನ್’ ( Kaize) ಎಂಬ ನಿರಂತರ ಸುಧಾರಣೆ ತತ್ವ ಅವರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಉದ್ಯೋಗದಲ್ಲಿ ಮಾತ್ರವಲ್ಲ, ವೈಯಕ್ತಿಕ ಜೀವನ ದಲ್ಲಿಯೂ ಅವರು ನಿರಂತರ ಸುಧಾರಣೆಯನ್ನು ಕಾಣಲು ಸತತ ಶ್ರಮಿಸುತ್ತಾರೆ. ಜಪಾನಿಯರು ಹದಿನೆಂಟು-ಇಪ್ಪತ್ತು ತಾಸು ದುಡಿಯುವ ಪ್ರಸಂಗ ಬಂದರೂ ಬೇಸರಿಸಿಕೊಳ್ಳುವುದಿಲ್ಲ.
ಮನೆಗೆ ಹೋಗದೇ ವಾರಗಟ್ಟಲೆ ಆಫೀಸಿನಲ್ಲಿಯೇ ಇರುವುದನ್ನು ಅವರು ರೂಢಿಸಿಕೊಳ್ಳುತ್ತಾರೆ. ಶ್ರಮವೇ ಯಶಸ್ಸಿಗೆ ದಾರಿ ಮತ್ತು ನಿರಂತರ ಕಲಿಕೆ ಹಾಗೂ ಸುಧಾರಣೆ ಜೀವನದ ಮಹೋನ್ನತಿಗೆ ಮಾರ್ಗ ಎಂಬುದು ಅವರ ಸರಳ ಜೀವನ ಸಿದ್ಧಾಂತ. ಜಪಾನಿಯರ ಜೀವನದ ತತ್ವಗಳು ಅವರನ್ನು ಕೇವಲ ಅತಿ ಶಕ್ತಿಶಾಲಿ ಆರ್ಥಿಕತೆ ಹೊಂದಿರುವ ರಾಷ್ಟ್ರವನ್ನಾಗಿ ಮಾತ್ರವಲ್ಲ, ಶ್ರದ್ಧೆಯುಳ್ಳ, ನೈತಿಕತೆ ಯುಳ್ಳ ಮತ್ತು ಪರಿಸರ ಸ್ನೇಹಿ ಸಮಾಜವನ್ನಾಗಿ ಮಾಡುವಲ್ಲಿಯೂ ಯಶಸ್ವಿಯಾಗಿದೆ.
ಜಪಾನಿಯರು ವೈಯಕ್ತಿಕ ಪ್ರಗತಿಗಿಂತಲೂ ಸಮುದಾಯದ ಪ್ರಗತಿಗೆ ಹೆಚ್ಚಿನ ಪ್ರಾಮುಖ್ಯ ನೀಡುವು ದನ್ನು ಹೆಜ್ಜೆ ಹೆಜ್ಜೆಗೆ ಕಾಣಬಹುದು. ಯಾರ ಮನೆ ಸ್ವಚ್ಛವಾಗಿದೆಯೋ, ಅವರಿರುವ ಬೀದಿ ಸ್ವಚ್ಛವಾಗಿರುತ್ತದೆ ಎಂಬುದು ಅವರ ನಂಬಿಕೆ. (ನಮ್ಮ ದೇಶದಲ್ಲಿ ಇದು ಉಲ್ಟಾ. ನಮ್ಮಲ್ಲಿ ಎಲ್ಲರ
ಮನೆಯೂ ಸ್ವಚ್ಛ. ಆದರೆ ಬೀದಿ ಮಾತ್ರ ಗಲೀಜು.) ಗುಂಪು ಚಟುವಟಿಕೆಗಳನ್ನು ಒತ್ತಿ ಹೇಳುವ ತತ್ವವಾದ ’ಶೂಡಾನ್ ಕೋಡೋ’ ( (Shuudan Koudou ) ವನ್ನು ಅಲ್ಲಿ ಬಾಲ್ಯದಲ್ಲಿಯೇ ಹೇಳಿಕೊಡ ಲಾಗುತ್ತದೆ. ಜಪಾನಿಯರು ಅತಿಯಾದ ಶಿಷ್ಟಾಚಾರ ಮತ್ತು ವಿನಯಶೀಲತೆಗೆ ಪ್ರಸಿದ್ಧರು. ಅವರು ಬಗ್ಗಿ ನಮಸ್ಕಾರ ಮಾಡಿ ಗೌರವ ಸೂಚಿಸುವುದನ್ನು ಎಡೆ ಕಾಣಬಹುದು.
ಹಾಗೆ ತಮ್ಮ ತಪ್ಪಿಗಾಗಿ ಕ್ಷಮೆ ಕೇಳುವ ಸಂಸ್ಕೃತಿಯನ್ನು ಸಹ ಸರ್ವತ್ರ ನೋಡಬಹುದು. ಜಪಾನಿ ಯರು ಯಾವುದೇ ಪರಿಸ್ಥಿತಿಯದರೂ ತಾಳ್ಮೆ ಮತ್ತು ಸಹನೆ ( Resilience ) ಯನ್ನು ಕಳೆದು ಕೊಳ್ಳುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ವೈಯಕ್ತಿಕ ಸಮಸ್ಯೆಗಳಿಗಿಂತಲೂ ಸಮೂಹದ ಹಿತಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತಾರೆ. 2011ರ ಸುನಾಮಿ ಮತ್ತು ಭೂಕಂಪದಲ್ಲಿ ಲಕ್ಷಾಂತರ ಜನರು ಹಾನಿಗೊಳಗಾದರು. ಆದರೂ ಸಹ, ಜಪಾನಿಯರು ಗೊಂದಲವಿಲ್ಲದೇ ಸರಕಾರದ ನಿರ್ದೇಶನಗಳನ್ನು ಅನುಸರಿಸಿದರು.
ಸರಕಾರವನ್ನು ದೂರುವ ಗೋಜಿಗೆ ಹೋಗಲಿಲ್ಲ. ಸಾರ್ವಜನಿಕವಾಗಿ ಒಂದು ಸಮಾಜ ಹೇಗೆ ಜವಾ ಬ್ದಾರಿಯಿಂದ ನಡೆದುಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟರು. ಸುನಾಮಿ ಮತ್ತು ಭೂಕಂಪ ದಲ್ಲಿ ಅಸಂಖ್ಯ ಜನ ಸಂತ್ರಸ್ತರಾದರೂ, ಬೇರೆಯವರ ಮುಂದೆ ಕೈ ಚಾಚಲಿಲ್ಲ. ಸಾಧನೆಗೆ ಸಹನೆ ಅಗತ್ಯ ಎಂಬುದು ಅವರು ಕಂಡುಕೊಂಡ ಜೀವನ ಧರ್ಮ. ಜಪಾನಿಯರು ಯಾವುದೇ ಕೆಲಸವನ್ನು ತಕ್ಷಣದ ಫಲಕ್ಕಾಗಿ ಮಾಡುವುದಿಲ್ಲ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ತಾಳ್ಮೆಯಿಂದ ಮುನ್ನಡೆಯುತ್ತಾರೆ. ತಾಳ್ಮೆ ಮತ್ತು ಶಾಂತ ಮನೋಭಾವದಿಂದ ಯಾವುದೇ ಸಂಕಷ್ಟವನ್ನು ಎದುರಿಸಬಹುದು ಎಂಬುದು ಅವರಲ್ಲಿ ಅಂತರ್ಗತವಾದ ಗುಣ.
ಜಪಾನಿಯರಲ್ಲಿ ಗೊಂಬಾರೆ ( Ganbare ) ಎಂಬ ಒಂದು ಅಪರೂಪದ ತತ್ವವಿದೆ. ಹಾಗಂದರೆ ಶ್ರಮಿಸಿ, ಕೊನೆಯವರೆಗೆ ಪ್ರಯತ್ನಿಸಿ, ಸಮಾಧಾನವಾಗುವವರೆಗೂ ನಿಲ್ಲಬೇಡಿ ಎಂದರ್ಥ. ಅವರು ಯಾವುದೇ ಕೆಲಸವನ್ನು ಪೂರ್ಣವಾಗುವವರೆಗೂ ಬಿಡುವುದಿಲ್ಲ. ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಜಪಾನಿ ಕ್ರೀಡಾಪಟುಗಳು ಕೊನೆಯ ಕ್ಷಣದವರೆಗೂ ಶ್ರಮಿಸುವುದು ಇದಕ್ಕೆ ಉತ್ತಮ ನಿದರ್ಶನ.
ಕಳೆದ ಹತ್ತು ಒಲಿಂಪಿಕ್ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಜಪಾನಿಯರ ಸಾಧನೆ ನೋಡಿದರೆ ಈ ತತ್ವ ಅವರ ರಕ್ತದಲ್ಲಿ ಮೈಗೂಡಿದೆ ಎಂಬುದು ಗೊತ್ತಾಗುತ್ತದೆ. ಜಪಾನಿಯರಲ್ಲಿ ಇನ್ನೊಂದು ತತ್ವ ವಿದೆ. ಅದನ್ನು ಅವರು ಓಮೊತೆನಾಶಿ ( Omotenashi ) ಅಂತ ಕರೆಯುತ್ತಾರೆ. ಅಂದರೆ ಯಾವುದೇ ಸಾಧನೆಗೆ ಆತಿಥ್ಯ ಮತ್ತು ಮಾನವೀಯ ಗುಣವೂ ಅತ್ಯಂತ ಮುಖ್ಯ ಎಂಬುದು. ಅವರು ಆತಿಥ್ಯದಲ್ಲಿ ಎತ್ತಿದ ಕೈ. ಕೇವಲ ಮನೆಗೆ ಬಂದ ಅತಿಥಿಗಳಿಗಷ್ಟೇ ಅಲ್ಲ, ಇಡೀ ಸಮಾಜ ಎಲ್ಲರ ಮೇಲೂ ಸಹಾನುಭೂತಿಯ ದೃಷ್ಟಿಕೋನವನ್ನು ಹೊಂದಿರುತ್ತದೆ.
ಜಪಾನಿನ ಹೋಟೆಲ್ ಮತ್ತು ರೈಲು ವ್ಯವಸ್ಥೆಯಲ್ಲಿ ಗ್ರಾಹಕರನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುವುದು ಇದಕ್ಕೆ ಉತ್ತಮ ಉದಾಹರಣೆ. ಸಾರ್ವಜನಿಕ ಸ್ಥಳಗಳಲ್ಲಿ ಸಹಾಯ ಕೇಳಿದರೆ, ಅವರು ಪೂರ್ಣ ಮನಸ್ಸಿನಿಂದ ನೆರವಾಗುತ್ತಾರೆ.
ಜಪಾನಿಯರ ಒಟ್ಟೂ ಜೀವನದರ್ಶನ ’ವಾಬಿ ಸಬಿ’ ( Wabi & Sabi ) ಎಂಬ ಅರ್ಥ ಮತ್ತು ತತ್ವ ಗಳನ್ನು ಆಧರಿಸಿದೆ. ಇದು ಅವರ ಪ್ರಾಚೀನ ತತ್ವ ಶಾಸದಲ್ಲಿ ಪ್ರಮುಖ ಅಂಶವಾಗಿದೆ. ಇದು ಪ್ರಕೃತಿ ಯ ಅಸ್ಥಿರತೆ, ಅಸ್ಪಷ್ಟತೆ ಮತ್ತು ಅಪೂರ್ಣತೆಯಲ್ಲಿರುವ ಸೌಂದರ್ಯದ ಕಲ್ಪನೆಯನ್ನು ವ್ಯಕ್ತ ಪಡಿಸುತ್ತದೆ. ಈ ತತ್ವವು ಜಪಾನಿ ಸಂಸ್ಕೃತಿಯ ಹಲವಾರು ಕ್ಷೇತ್ರಗಳಲ್ಲಿ, ವಿಶೇಷವಾಗಿ ಕಲೆ, ವಾಸ್ತು, ಜೀವನಶೈಲಿ ಮತ್ತು ತತ್ವಶಾಸದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ.
ವಾಬಿ ಅಂದರೆ ಸರಳತೆ ಮತ್ತು ವಿನಯಶೀಲತೆ. ಇದು ಭೌತಿಕ ಸಂಪತ್ತಿನ ಬದಲು ಆಂತರಿಕ ಶಾಂತಿ ಮತ್ತು ನಿಸರ್ಗದೊಂದಿಗಿನ ಹೊಂದಾಣಿಕೆಯನ್ನು ಒತ್ತಿ ಹೇಳುತ್ತದೆ. ಸಬಿ ಅಂದರೆ ವೃದ್ಧಿ, ಹಳೆಯ ತನ ಮತ್ತು ಕಾಲಪರಿಣಾಮದ ಮೂಲಕ ಆಗುವ ಬದಲಾವಣೆಯಲ್ಲಿರುವ ಸೌಂದರ್ಯ. ಇವೆರಡ ನ್ನೂ ಒಟ್ಟುಗೂಡಿಸಿದಾಗ, ’ವಾಬಿ ಸಬಿ’ ಎಂದರೆ ಜೀವನದ ಅಪೂರ್ಣತೆ, ಅನಿಶ್ಚಿತತೆ ಮತ್ತು ಸಾಮಾನ್ಯ ತೊಂದರೆಗಳನ್ನು ಒಪ್ಪಿಕೊಳ್ಳುವುದು ಮತ್ತು ಅವುಗಳಲ್ಲಿಯೇ ಸೌಂದರ್ಯವನ್ನು ಕಾಣುವುದು. ಈ ಜೀವನ ಪರಿಪೂರ್ಣವಾಗಿರಲು ( Perfection ) ಸಾಧ್ಯವಿಲ್ಲ.
ಪ್ರತಿಯೊಂದು ವಸ್ತುವೂ, ವ್ಯಕ್ತಿಯೂ ಮತ್ತು ಅನುಭವವೂ ಅಪೂರ್ಣವೇ. ಉದಾಹರಣೆಗೆ, ಜಪಾನಿ ಯರು ಮುರಿದ, ಒಡೆದ ಮಡಿಕೆಯನ್ನು ( Pottery ) ಕಿಂಟ್ಸುಗಿ ( Kintsug ) ಎಂಬ ಶಿಲ್ಪ ಕಲೆಯ ಮೂಲಕ ಬಂಗಾರದ ತಂತಿಯೊಂದಿಗೆ ಜೋಡಿಸುತ್ತಾರೆ. ಇದು ಮುರಿದು ಹೋದ ಮಡಿಕೆಯನ್ನು ಒಂದು ಕಲೆಯಾಗಿ ಪರಿವರ್ತಿಸುತ್ತದೆ.
ಜಪಾನಿಯರಲ್ಲಿ ಎದ್ದು ಕಾಣುವ ಇನ್ನೊಂದು ಜೀವನ ದರ್ಶನವೆಂದರೆ, ಎಲ್ಲ ಏಳು-ಬೀಳುಗಳನ್ನು ಸ್ವೀಕರಿಸುವ ಮನೋಭಾವ. ನಾವು ನಮ್ಮ ಜೀವನದಲ್ಲಿ ನಡೆಯುವ ತಪ್ಪುಗಳನ್ನು ಸಹ ಸಹಜ ವಾಗಿ ಒಪ್ಪಿಕೊಳ್ಳಬೇಕು. ಹಳೆಯ ವಸ್ತುಗಳನ್ನು ಎಸೆಯುವುದಕ್ಕೆ ಬದಲು, ಅವನ್ನು ಮರು ಬಳಕೆ ಮಾಡುವ ತತ್ವ ವಾಬಿ ಸಬಿಗೆ ಉದಾಹರಣೆ. ಆಧುನಿಕ ವಿನ್ಯಾಸಗಳ ಬದಲು ನೈಸರ್ಗಿಕ ವಸ್ತುಗಳು (ಕಟ್ಟಿಗೆ, ಮಣ್ಣಿನ ಪಾತ್ರೆಗಳು, ಹಳೆಯ ಕಾಗದ) ಬಳಕೆ ಮತ್ತು ಹಳೆಯ ವಸ್ತುಗಳ ಪುನರುಪಯೋಗ ಸಹ ಅವರ ಜೀವನ ಕಾಣ್ಕೆಗಳು.
ಹಾಗೆಯೇ ಪರಸ್ಪರದ ದೋಷಗಳನ್ನು ಒಪ್ಪಿಕೊಳ್ಳುವುದು ಮತ್ತು ಅಪೂರ್ಣತೆಯಲ್ಲಿ ಅರ್ಥ ಪೂರ್ಣತೆಯನ್ನು ಕಂಡುಕೊಳ್ಳುವುದು ವಾಬಿ ಸಬಿಯ ಗುಣವೈಶಿಷ್ಟ್ಯ. ವಾಬಿ ಸಬಿ ತತ್ವವು ಅತಿ ಕಡಿಮೆ ವಸ್ತುಗಳ ಜೀವನ ಶೈಲಿ ( Minimalist Lifestyle ), ಒತ್ತಡವಿಲ್ಲದ ನಿಧಾನ ಜೀವನ ಸಾಗಿಸುವ ಅಭ್ಯಾಸ ( Slow Living ), ಪರಿಸರ ಸ್ನೇಹಿ ( Eco&Friendly Design ) ಜೀವನ ವಿಧಾನವನ್ನು ಒಳ ಗೊಂಡಿದೆ. ನಾವು ಪರಿಪೂರ್ಣತೆಯ ಹಂಬಲವನ್ನು ಬಿಟ್ಟು, ಜೀವನದ ಅಪೂರ್ಣತೆಯನ್ನು ಆಚರಿಸಿದಾಗಲೇ ನಾವು ನಿಜವಾದ ಸಂತೋಷವನ್ನು ಅನುಭವಿಸಬಹುದು ಎಂಬುದನ್ನು ಅದು ಪರಿಣಾಮಕಾರಿಯಾಗಿ ಹೇಳಿದೆ.
ವಾಬಿ ಸಬಿ ತತ್ವ ಜಪಾನಿಯರ ಜೀವನಮಂತ್ರವಾಗಿದೆ. ಯಾವ ದೇಶವೂ ತನ್ನಷ್ಟಕ್ಕೆ ಸುಮ್ಮ ಸುಮ್ಮನೆ ಮಹಾನ್ ಎಂದು ಕರೆಯಿಸಿಕೊಳ್ಳುವುದಿಲ್ಲ. ಯಾವುದೇ ದೇಶದ ಯಶಸ್ಸಿನ ಹಿಂದೆ ಅಲ್ಲಿನ ಸಮಾಜದಲ್ಲಿ ನೆಲೆಸಿರುವ ಜೀವನ ಆದರ್ಶಗಳು ಪವಾಡ ಸದೃಶ ರೀತಿಯಲ್ಲಿ ಕೆಲಸ ಮಾಡಿರುತ್ತವೆ. ಒಂದು ದೇಶ ವಿಶ್ವದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಈ ಎಲ್ಲ ಗುಣಗಳು ಏಕಕಾಲದಲ್ಲಿ ಕೆಲಸ ಮಾಡುತ್ತಿರಬೇಕಾಗುತ್ತದೆ. ಜಪಾನ್ ಎಂಬ ಮಹಾವೃಕ್ಷದಲ್ಲಿ ಈ ಎಲ್ಲ ಗುಣಗಳ ಲತೆಗಳು ಹಬ್ಬಿ ಕೊಂಡಿರುವುದನ್ನು ಪ್ರತ್ಯಕ್ಷ ಕಾಣಬಹುದು, ಅದರ ಒಟ್ಟಂದವನ್ನು ಅನುಭವಿಸಬಹುದು.