2012ರ ಪುಣೆ ಸ್ಫೋಟ ಪ್ರಕರಣದ ಆರೋಪಿ ಮೇಲೆ ಗುಂಡಿನ ದಾಳಿ
2012ರಲ್ಲಿ ನಡೆದ ಪುಣೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಬಂಟಿ ಜಹಗೀರ್ದಾರ್ ಎಂದೇ ಕರೆಯಲ್ಪಡುವ ಅಸ್ಲಾಂ ಶಬ್ಬೀರ್ ಶೇಖ್ ಎಂಬಾತನನ್ನು ಬುಧವಾರ ಮಹಾರಾಷ್ಟ್ರದ ಶ್ರೀರಾಂಪುರದಲ್ಲಿ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಶ್ರೀರಾಂಪುರದಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ ಆತನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
-
ಮಹಾರಾಷ್ಟ್ರ: ಪುಣೆಯಲ್ಲಿ 2012ರಲ್ಲಿ (Pune blast case) ನಡೆದಿದ್ದ ಜಂಗ್ಲಿ ಮಹಾರಾಜ್ (ಜೆಎಂ) ರಸ್ತೆ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಬಂಟಿ ಜಹಗೀರ್ದಾರ್ (Bunti Jahagirdar) ಎಂದೇ ಕರೆಯಲ್ಪಡುವ ಅಸ್ಲಾಂ ಶಬ್ಬೀರ್ ಶೇಖ್ (52) ಎಂಬಾತನನ್ನು ಬುಧವಾರ ಮಧ್ಯಾಹ್ನ ಮಹಾರಾಷ್ಟ್ರದ (Maharastra) ಶ್ರೀರಾಮಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ಸಂಬಂಧಿಕರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀರಾಮಪುರದ ನಿವಾಸಿಯಾಗಿದ್ದ ಅಸ್ಲಾಂ ಶಬ್ಬೀರ್ ಶೇಖ್ ಮೇಲೆ ಜರ್ಮನ್ ಆಸ್ಪತ್ರೆಯ ಸಮೀಪವಿರುವ ಸ್ಮಶಾನದ ಬಳಿಯೇ ಗುಂಡಿನ ದಾಳಿ ನಡೆಸಲಾಗಿದೆ. ದಾಳಿಕೋರರು ಬೈಕ್ ನಲ್ಲಿ ಬಂದಿದ್ದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವು ಅಸ್ಲಾಂ ಶಬ್ಬೀರ್ ಶೇಖ್ ನನ್ನು ಮೊದಲು ಶ್ರೀರಾಮಪುರದ ಸಖರ್ ಕಾಮ್ಗರ್ ಆಸ್ಪತ್ರೆಗೆ ದಾಖಲಿಸಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
Murder Case: ಇನ್‌ಸ್ಟಗ್ರಾಮ್‌ನಲ್ಲಿ ಯುವತಿಗೆ ಮೆಸೇಜ್ ಮಾಡಿ ಕಿರುಕುಳ, ಯುವಕನ ಹತ್ಯೆ
ಈ ಕುರಿತು ಮಾಹಿತಿ ನೀಡಿದ ಅಹಲ್ಯಾನಗರದ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ, ದಾಳಿಕೋರರ ಗುರುತು ಪತ್ತೆಯಾಗಿಲ್ಲ. ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಶಂಕಿಸಲಾಗಿದೆ. ಪ್ರಕರಣದ ತನಿಖೆಗಾಗಿ ಬಹು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದಾಳಿಕೋರರ ಬಗ್ಗೆ ಪತ್ತೆ ಹಚ್ಚಲು ಪೊಲೀಸರು ಕೆಲವು ಸ್ಥಳಗಳ ಸಿಸಿಟಿವಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಅವರ ಮೋಟಾರ್‌ಸೈಕಲ್‌ನ ನಂಬರ್ ಪ್ಲೇಟ್ ಕೂಡ ಪೊಲೀಸರ ಕೈಸೇರಿದೆ ಎನ್ನಲಾಗಿದೆ.
ಅಸ್ಲಾಂ ಶಬ್ಬೀರ್ ಶೇಖ್ ಒಬ್ಬ ಕುಖ್ಯಾತ ಅಪರಾಧಿಯಾಗಿದ್ದು ಅಕ್ರಮ ಮರಳು ವ್ಯವಹಾರ, ಸುಲಿಗೆ, ಕೊಲೆ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯಗಳಲ್ಲಿ ತೊಡಗಿಕೊಂಡಿದ್ದನು. ಪುಣೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಹೊರತಾಗಿ ಸೇನಾ ಮಾಹಿತಿ ಸೋರಿಕೆಗಾಗಿ ಕೂಡ ಈ ಹಿಂದೆ ಆತನನ್ನು ಬಂಧಿಸಲಾಗಿತ್ತು.
ಅಪ್ರಾಪ್ತೆಯನ್ನು ಜನರ ಮುಂದೆಯೇ ಒತ್ತೆಯಾಳಾಗಿರಿಸಿಕೊಂಡ ಯುವಕ; ಆಮೇಲೆನಾಯ್ತು?
ರಾಜಕೀಯದಲ್ಲಿಯೂ ಸಕ್ರಿಯನಾಗಿದ್ದ ಅಸ್ಲಾಂ ಶಬ್ಬೀರ್ ಶೇಖ್ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ದೊಂದಿಗೆ ಸಂಬಂಧ ಹೊಂದಿದ್ದನು. ಆತನ ತಾಯಿ ಶ್ರೀರಾಮಪುರ ಮುನ್ಸಿಪಲ್ ಕೌನ್ಸಿಲ್‌ನ ಮಾಜಿ ಸದಸ್ಯೆಯಾಗಿದ್ದರು. ಆತನ ಸೋದರಸಂಬಂಧಿ ರಯೀಸ್ ಜಹಗೀರ್ದಾರ್ ಇತ್ತೀಚೆಗೆ ಶ್ರೀರಾಮಪುರ ಮುನ್ಸಿಪಲ್ ಕೌನ್ಸಿಲ್‌ನ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದನು.
2012ರ ಆಗಸ್ಟ್ 1ರಂದು ಪುಣೆಯ ಜೆ.ಎಂ ರಸ್ತೆಯಲ್ಲಿ ನಡೆದ ನಾಲ್ಕು ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಗಳಲ್ಲಿ ಅಸ್ಲಾಂ ಶಬ್ಬೀರ್ ಶೇಖ್ ನನ್ನು 2013ರ ಜನವರಿಯಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿತ್ತು. ಈ ಘಟನೆಯಲ್ಲಿ ಓರ್ವ ಗಾಯಗೊಂಡಿದ್ದನು. 2023 ರಿಂದ ಆತ ಜಾಮೀನಿನ ಮೇಲೆ ಹೊರಗೆ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.