ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಯುದ್ದ ಭಾವನೆಗಳ ಮೇಲೆ ನಡೆಯಲ್ಲ

ಕಳೆದ ಮೂರು ವಾರಗಳಿಂದ ದೇಶದಲ್ಲಿ ‘ಯುದ್ಧ’ದ ಕಾರ್ಮೋಡ ಕವಿದಿದೆ. ಮೊದಲ 15 ದಿನ ಪ್ರತೀಕಾರದ ಒತ್ತಡಗಳಿದ್ದರೆ, ‘ಆಪರೇಷನ್ ಸಿಂದೂರ’ದ ಬಳಿಕ ಪಾಕಿಸ್ತಾನಕ್ಕೆ ಇನ್ನೆಂದೂ ಏಳದಂತೆ ಪೆಟ್ಟು ಕೊಡಬೇಕು ಎನ್ನುವ ‘ಆಸೆ’ ಭಾರತೀಯರಲ್ಲಿ ಶುರುವಾಗಿತ್ತು. ಈ ಆಸೆಗೆ ತಕ್ಕಂತೆ ಭಾರತದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗೆ ಪಾಕಿಸ್ತಾನ ಕುಸಿದು, ಅಮೆರಿಕದ ಮೂಲಕ ಕದನ ವಿರಾಮದ ಬೇಡಿಕೆಯಿಟ್ಟು, ಕದನವಿರಾಮ ಘೋಷಿಸಿ, ಮತ್ತೆ ಡ್ರೋನ್ ದಾಳಿ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

ಯುದ್ದ ಭಾವನೆಗಳ ಮೇಲೆ ನಡೆಯಲ್ಲ

ಅಶ್ವತ್ಥಕಟ್ಟೆ

ranjith.hoskere@gmail.com

ಕಳೆದ ಮೂರು ವಾರಗಳಿಂದ ದೇಶದಲ್ಲಿ ‘ಯುದ್ಧ’ದ ಕಾರ್ಮೋಡ ಕವಿದಿದೆ. ಮೊದಲ 15 ದಿನ ಪ್ರತೀಕಾರದ ಒತ್ತಡಗಳಿದ್ದರೆ, ‘ಆಪರೇಷನ್ ಸಿಂದೂರ’ದ ಬಳಿಕ ಪಾಕಿಸ್ತಾನಕ್ಕೆ ಇನ್ನೆಂದೂ ಏಳದಂತೆ ಪೆಟ್ಟು ಕೊಡಬೇಕು ಎನ್ನುವ ‘ಆಸೆ’ ಭಾರತೀಯರಲ್ಲಿ ಶುರುವಾಗಿತ್ತು. ಈ ಆಸೆಗೆ ತಕ್ಕಂತೆ ಭಾರತದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗೆ ಪಾಕಿಸ್ತಾನ ಕುಸಿದು, ಅಮೆರಿಕದ ಮೂಲಕ ಕದನ ವಿರಾಮದ ಬೇಡಿಕೆಯಿಟ್ಟು, ಕದನವಿರಾಮ ಘೋಷಿಸಿ, ಮತ್ತೆ ಡ್ರೋನ್ ದಾಳಿ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಕದನವಿರಾಮ ಘೋಷಿಸುವ ತನಕ ಒಂದಾಗಿದ್ದ ಭಾರತ, ವಿರಾಮ ಘೋಷಣೆ ಯಾಗುತ್ತಿದ್ದಂತೆ ಪ್ರಧಾನಿ ಮೋದಿ ವಿರುದ್ಧ ‘ಅಸಮಾಧಾನ’ ಹೊರಹಾಕಲು ಶುರು ಮಾಡಿದೆ. ಈ ಅಸಮಾಧಾನಕ್ಕೆ ಕಾರಣ, ಕದನವಿರಾಮಕ್ಕೆ ಒಪ್ಪುವ ಮೂಲಕ ಪಾಕಿಸ್ತಾನವನ್ನು ಮುಗಿಸುವ ಅವಕಾಶವನ್ನು ಬಿಟ್ಟಿದ್ದಾರೆ ಎಂಬುದು.

ಹೌದು, ಈ ಬಾರಿ ಯುದ್ಧ ಆರಂಭವಾಗುತ್ತಿದ್ದಂತೆ ಪಾಕಿಸ್ತಾನದ ಮತ್ತೊಂದು ಬದಿಯವರೆಗೆ ಕ್ಷಿಪಣಿ ದಾಳಿಗಳು ನಡೆದಿದ್ದವು. ಸೇನಾ ಮುಖ್ಯಸ್ಥ, ಪ್ರಧಾನಿ ಮನೆಯ ಅಕ್ಕಪಕ್ಕದಲ್ಲಿಯೇ ಭಾರತೀಯ ಸೇನೆ ದಾಳಿ ನಡೆಸಿತ್ತು. ಆದ್ದರಿಂದ ಈ ಬಾರಿ ‘ಪಿಒಕೆ’ಯನ್ನು ಭಾರತ ಸುಪರ್ದಿಗೆ ತೆಗೆದುಕೊಳ್ಳುತ್ತದೆ, ಬಲೂಚಿಗೆ ಸ್ವಾತಂತ್ರ್ಯ ಕೊಡಿಸುವ ಕೆಲಸವನ್ನು ಭಾರತ ಮಾಡುತ್ತದೆ ಎಂದೇ ಅನೇಕರು ಭಾವಿಸಿದ್ದರು.

ಬಿಜೆಪಿ ನಾಯಕರು ಮೊದಲಿನಿಂದಲೂ ಇದೇ ರೀತಿಯ ಮಾತುಗಳನ್ನು ಆಡುತ್ತಿದ್ದುದರಿಂದ ಈ ಬಾರಿ ಪಾಕಿಸ್ತಾನ ಧ್ವಂಸ ಪಕ್ಕಾ ಎಂದೇ ಅನೇಕರು ಭಾವಿಸಿದ್ದರು. ಆದರೆ ಕೊನೆಯಲ್ಲಿ ‘ಶಾಂತಿ ಮಂತ್ರ’ ಪಠಿಸಿದ್ದು ಅನೇಕರ ಅಸಮಾಧಾನ, ಟೀಕೆಗೆ ಕಾರಣವಾಯಿತು. ಆದರೆ ಭಾರತದ ಬಹುಪಾಲು ಮಂದಿ ಯೋಚಿಸಿದ್ದ ರೀತಿಯಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳು ನಡೆಯುವು ದಿಲ್ಲ.

ಇದನ್ನೂ ಓದಿ: Ranjith H Ashwath Column: ಮತಬ್ಯಾಂಕ್‌ʼನ ಮಾತಾಗದಿರಲಿ ದೇಶದ ಭದ್ರತೆ

ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿತೇ ಹೊರತು, ಪಾಕಿಸ್ತಾನದ ವಿರುದ್ಧವಲ್ಲ ಎನ್ನುವುದನ್ನು ಮೊದಲ ದಿನದಿಂದಲೂ ಭಾರತ ಹೇಳಿಕೊಂಡೇ ಬರುತ್ತಿತ್ತು. ಆದರೆ ಸೇನಾನೆಲೆ ಮೇಲೆ ಪಾಕಿಸ್ತಾನ ದಾಳಿ ಮಾಡಿದ್ದರಿಂದ ಭಾರತೀಯ ಸೇನೆ ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ಮಾಡಿದೆಯೇ ಹೊರತು, ಮೊದಲಿಗೆ ಭಾರತೀಯ ಸೇನೆ ಈ ರೀತಿಯ ದಾಳಿಯನ್ನು ಯೋಚಿಸಿರಲಿಲ್ಲ ಎನ್ನುವುದು ಸೇನೆಯ ಸ್ಪಷ್ಟ ಮಾತು.

ಬಹುತೇಕ ಭಾರತೀಯರ ಭಾವನೆ ಪಾಕಿಸ್ತಾನ ನಾಶವಾಗಬೇಕು ಎನ್ನುವುದು ಆಗಿರಬಹುದು. ಆದರೆ ಯುದ್ಧಗಳು ಈ ರೀತಿಯ ‘ಭಾವನೆ’ ಮೇಲೆ ನಡೆಯುವುದಕ್ಕಿಂತ ಹೆಚ್ಚಾಗಿ ಪಕ್ಕಾ ಲೆಕ್ಕಾಚಾರಗಳ ಮೇಲೆ ನಡೆಯುತ್ತವೆ ಎನ್ನುವುದು ವಾಸ್ತವ. ಹಾಗೆ ನೋಡಿದರೆ, ಭಾರತ-ಪಾಕಿಸ್ತಾನದ ನಡುವಿನ ಮೊದಲ ಮೂರು ದಿನದ ಹಣಾಹಣಿ, ಡ್ರೋನ್‌ಗಳ ಹಾಗೂ ಮಾನವರಹಿತ ಯಂತ್ರಗಳ ಮೂಲಕ ನಡೆದಿತ್ತು. ಆದರೆ ಈ ಯಂತ್ರದ ಯುದ್ಧದಲ್ಲಿ ಸೋಲುವುದು ಅರಿವಾಗುತ್ತಿದ್ದಂತೆ ಪಾಕಿಸ್ತಾನವು ಅಮೆರಿಕದ ಬೆನ್ನು ಬಿದ್ದು ಕದನವಿರಾಮಕ್ಕೆ ಪ್ರಕ್ರಿಯೆ ಆರಂಭಿಸಿತ್ತು.

ಜತೆಜತೆಗೆ ಭಾರತದ ಗಡಿಯಲ್ಲಿ ಸೇನಾ ನಿಯೋಜನೆಯನ್ನು ಆರಂಭಿಸಿತ್ತು. ಸೇನಾ ನಿಯೋಜನೆಯ ಕಾರ್ಯ ಆರಂಭವೆಂದರೆ, ಸೈನಿಕರು ನೇರ ಯುದ್ಧಕ್ಕೆ ಬರುತ್ತಾರೆ ಎನ್ನುವುದು. ನೇರ ಯುದ್ಧವನ್ನು ಆರಂಭಿಸಿದರೆ, ಪಾಕಿಸ್ತಾನದ ಐದು ಸಾವಿರ ಸೈನಿಕರು ಸತ್ತರೂ, ಭಾರತದ ಸೈನಿಕರೂ ಹುತಾತ್ಮ ರಾಗುತ್ತಾರೆ. ಇಷ್ಟೆಲ್ಲ ಆದ ಬಳಿಕವೂ, ಕೈಗೊಂಡ ಕಾರ್ಯ ಪೂರ್ಣಗೊಳ್ಳುವುದಕ್ಕೆ ವಿಶ್ವಸಂಸ್ಥೆ, ಅಮೆರಿಕ ಸೇರಿದಂತೆ ಸೋಕಾಲ್ಡ್ ಮುಂದುವರಿದ ರಾಷ್ಟ್ರಗಳು ಬಿಡುವುದಿಲ್ಲ.

ಆದ್ದರಿಂದ ಈ ರೀತಿಯ ಯುದ್ಧಕ್ಕೆ ನಾಂದಿ ಹಾಡುವ ಮೊದಲೇ, ಪಾಕಿಸ್ತಾನದ ನೆಲದಲ್ಲಿನ ಉಗ್ರರ ತಾಣಗಳ ನಾಶ, ಮತ್ತೊಮ್ಮೆ ಬಾಲಬಿಚ್ಚದ ರೀತಿಯಲ್ಲಿ ವಾಯುನೆಲೆ ಗಳ ಧ್ವಂಸ ಹಾಗೂ ಮೋಸ್ಟ್ ವಾಟೆಂಡ್ ಉಗ್ರರನ್ನು ಪಾಕಿ ನೆಲದಲ್ಲಿಯೇ ಕೊಲ್ಲುವ ಮೂಲಕ ‘ಉಚಿತ’ ಬಿರಿಯಾನಿ ಕೊಡಿಸುವು ದನ್ನು ಭಾರತ ತಪ್ಪಿಸಿಕೊಂಡಿದೆ.

ಪಹಲ್ಗಾಮ್ ದಾಳಿಯಲ್ಲಿದ್ದ ಉಗ್ರರು ಸಿಕ್ಕಿಲ್ಲ ಎನ್ನುವುದು ಬಿಟ್ಟರೆ, ಬೇರೆ ದಾಳಿಯ ಮಾಸ್ಟರ್‌ ಮೈಂಡ್‌ಗಳನ್ನು ಮುಗಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾಗಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಟ್ವೀಟ್ ಹಾಗೂ ಪಾಕಿಸ್ತಾನದ ಘೋಷಣೆಯ ಬೆನ್ನಲ್ಲೇ, ಭಾರತವೂ ಕದನ ವಿರಾಮವನ್ನು ಒಪ್ಪಿಕೊಂಡಿದ್ದು ಅನೇಕರ ಅಚ್ಚರಿಗೆ ಕಾರಣವಾಗಿ ಮೋದಿಯ ಭಕ್ತರೂ ಸೇರಿದಂತೆ ಬಹುತೇಕರು ಮೋದಿ ಹಾಗೂ ಕೇಂದ್ರ ಸರಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದರು.

ಟೀಕಿಸಿದ ಬಹುತೇಕರು ಈ ಹಿಂದೆ ಇಂದಿರಾ ಗಾಂಧಿ ಅವರು ಅಮೆರಿಕದ ‘ಬೆದರಿಕೆ’ಗೂ ಬಗ್ಗದೇ ಪಾಕಿಸ್ತಾನದ ವಿರುದ್ಧ ಹೋರಾಡಿದ ರೀತಿಯನ್ನು ಹಾಗೂ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್ ಸಮಯದಲ್ಲಿ ತೆಗೆದುಕೊಂಡಿದ್ದ ಕಠಿಣ ಕ್ರಮವನ್ನು ಎತ್ತಿ ಹಿಡಿಯುವ ಜತೆಜತೆಗೆ ಪ್ರಧಾನಿ ನರೇಂದ ಮೋದಿ ಅವರು, ಪಾಕಿಸ್ತಾನದ ‘ಶಾಂತಿ’ ಜಪವನ್ನು ನಂಬಿ ಅಮೆರಿಕದ ಒತ್ತಡಕ್ಕೆ ಕಟ್ಟುಬಿದ್ದು ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದನ್ನು ಟೀಕಿಸಿದ್ದಾರೆ.

1947ರಿಂದಲೂ ವಿವಾದಿತ ಭೂಮಿಯಾಗಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಭಾರತಕ್ಕೆ ಸೇರಿಸಿಕೊಳ್ಳಲು ಇದ್ಧ ಅದ್ಭುತ ಅವಕಾಶವನ್ನು ಮೋದಿ ಕೈಚೆಲ್ಲಿದ್ದಾರೆ ಎನ್ನುವ ಅಸಮಾಧಾನ ಸಾಮಾಜಿಕ ಜಾಲತಾಣವಷ್ಟೇ ಅಲ್ಲದೇ, ಹಲವು ನಾಯಕರ ಬಾಯಲ್ಲಿ ಬಂದಿದೆ. ರಕ್ಷಣೆಯ ದೃಷ್ಟಿಯಿಂದ ಪಿಒಕೆ ‘ಅತಿಸೂಕ್ಷ್ಮ’ ಪ್ರದೇಶ ಎನಿಸಿರುವುದರಿಂದ ಹಾಗೂ ಬಿಜೆಪಿ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಪಿಒಕೆ ಹಿಂಪಡೆಯಲಾಗುವುದು ಎನ್ನುವ ‘ಟ್ರಂಪ್
ಕಾರ್ಡ್’ ಅನ್ನು ಬಳಸಿದ್ದರಿಂದ ಸಹಜವಾಗಿಯೇ ಜನರಲ್ಲಿ ಈ ರೀತಿಯ ನಿರೀಕ್ಷೆ ಹಾಗೂ ಹತಾಶೆ ಕಾಣಿಸಿಕೊಳ್ಳುತ್ತಿದೆ.

ಆದರೆ ‘ಪಿಒಕೆ’ಯನ್ನು (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಹಿಂಪಡೆಯುವುದಷ್ಟೇ ಅಲ್ಲದೇ, ವಿದೇಶಾಂಗ ನೀತಿಯಲ್ಲಿ ಇದರಿಂದ ಆಗಬಹುದಾದ ಸಾಧಕ-ಬಾಧಕದ ಬಗ್ಗೆಯೂ ಕೇಂದ್ರ ಯೋಚಿಸಿದೆ ಎಂದರೆ ತಪ್ಪಾಗುವುದಿಲ್ಲ. ಹಾಗೆ ನೋಡಿದರೆ, ಇಡೀ ದೇಶ ಬಯಸುತ್ತಿರುವ
‘ಪಿಒಕೆ’ ಯನ್ನು ಭಾರತದ ಸುಪರ್ದಿಗೆ ತೆಗೆದುಕೊಳ್ಳುವುದು ಬಹು ಕೋಟಿ ಭಾರತೀಯರ ಕನಸಾಗಿರಬಹುದು.

ಬಿಜೆಪಿ ನಾಯಕರ ಚುನಾವಣಾ ಘೋಷಣೆಯೂ ಆಗಿರಬಹುದು. ಆದರೆ ನಿಜವಾಗಿಯೂ ಇಂದಿನ ಪರಿಸ್ಥಿತಿಯಲ್ಲಿ ‘ಪಿಒಕೆ’ಯನ್ನು ವಶಕ್ಕೆ ಪಡೆಯುವುದು ಅಗತ್ಯವೇ ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಗಡಿ ವಿಷಯವಾಗಿ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಇದೊಂದು ಆಯಕಟ್ಟಿನ ಪ್ರದೇಶ ವೆನಿಸಿದರೂ, ದಶಕದ ಕಾಲ ಪಾಕಿಸ್ತಾನದ ದುರಾಡಳಿತದಿಂದ ಈ ಪ್ರದೇಶ ವಾಸಕ್ಕೆ ‘ಅಯೋಗ್ಯ’ ಎನ್ನುವ ಸ್ಥಿತಿಯಲ್ಲಿದೆ.

ಸಾಲುಸಾಲು ಉಗ್ರರ ನೆಲೆ, ಜಿಹಾದಿ ಸಿದ್ಧಾಂತವನ್ನು ಒಪ್ಪಿರುವ ಲಕ್ಷಾಂತರ ಜನರು, ಈ ಎಲ್ಲದರ ಕಾರಣಕ್ಕೆ ಕಡುಬಡತನ ಅಲ್ಲಿನ ಸ್ಥಿತಿ. ಸುಮಾರು 72 ಸಾವಿರ ಚ.ಕಿ.ಮೀ. ವ್ಯಾಪ್ತಿಯಲ್ಲಿ ಹರಡಿ ಕೊಂಡಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನಸಂಖ್ಯೆ 46 ಲಕ್ಷ ಮೀರುತ್ತದೆ. ಕಡುಬಡತನ ದಲ್ಲಿಯೇ ಬೆಂದಿರುವ ಈ ಭಾಗದ ಜನರು ಭಾರತಕ್ಕೆ ಸೇರಲು ಉತ್ಸುಕರಾಗಿದ್ದರೂ, ಅವರನ್ನು ಕರೆ ತಂದು ಭಾರತಕ್ಕೆ ಒಗ್ಗಿಕೊಳ್ಳುವಂತೆ ಮಾಡುವುದು ‘ಹೇಳಿದಷ್ಟು’ ಸುಲಭವಲ್ಲ.

ಹಾಗೆಂದ ಮಾತ್ರಕ್ಕೆ, ‘ಪಿಒಕೆ’ಯನ್ನು ಅವರಿಗೆ ಬಿಟ್ಟುಕೊಡುವ ಮನಸ್ಥಿತಿಯೂ ಅನೇಕರಲಿಲ್ಲ. ಏಕೆಂದರೆ ಕೇವಲ ಭಾವನಾತ್ಮಕ ಮಾತ್ರವಲ್ಲವೇ ವ್ಯೂಹಾತ್ಮಕ ವಿಷಯದಲ್ಲಿ ಪಿಒಕೆ ‘ಆಯಕಟ್ಟಿನ’ ಸ್ಥಳವೆನಿಸಿದೆ. ಏಕೆಂದರೆ, ಪಿಒಕೆ ಕೇವಲ ಭಾರತ-ಪಾಕಿಸ್ತಾನಕ್ಕೆ ಹೊಂದಿಕೊಂಡಿರುವುದಷ್ಟೇ ಅಲ್ಲದೇ, ನೆರೆಯಲ್ಲಿರುವ ಮತ್ತೊಂದು ಶತ್ರುರಾಷ್ಟ್ರ ಚೀನಾಕ್ಕೂ ಹೊಂದಿಕೊಂಡಿದೆ.

ಇದಿಷ್ಟೇ ಅಲ್ಲದೇ, 1962ರ ಇಂಡೋ-ಚೀನಾ ಯುದ್ಧದಲ್ಲಿ ಚೀನಾ ಕೂಡ ಕೆಲ ಪ್ರಾಂತ್ಯವನ್ನು ಕಬಳಿಸಿದೆ. ಈ ಎಲ್ಲವನ್ನು ಮೀರಿ ಈ ಹಂತದಲ್ಲಿ ಪಿಒಕೆಯನ್ನು ವಶಪಡಿಸಿಕೊಳ್ಳಲು ರಾಜ ತಾಂತ್ರಿಕವಾಗಿ ಹತ್ತಾರು ಸವಾಲು ಎದುರಾಗುವುದು ಸತ್ಯ. ಪ್ರಧಾನಿ ಮೋದಿ ಅವರು, ‘ಪಿಒಕೆ ಪಡೆಯುವ ಬಗ್ಗೆ ಮಾತ್ರ ಪಾಕಿಸ್ತಾನದೊಂದಿಗೆ ಮಾತನಾಡುತ್ತೇವೆ’ ಎನ್ನುವ ಸಂದೇಶವನ್ನು ರವಾನಿಸಿದ್ದರೂ, ಅದು ‘ಪ್ರಾಕ್ಟಿಕಲಿ’ ಇಂದಿನ ಸ್ಥಿತಿಯಲ್ಲಿ ಕಷ್ಟ ಎನ್ನುವುದು ಗೊತ್ತಿರುವ ವಿಷಯ.

‘ಆಪರೇಷನ್ ಸಿಂದೂರ’ ಹೆಸರಲ್ಲಿ ಆರಂಭಿಸಿದ ಕಾರ್ಯಚರಣೆಯು, ಪಿಒಕೆಯನ್ನು ವಶಪಡಿಸಿ ಕೊಳ್ಳಬೇಕು ಎನ್ನುವ ಆಲೋಚನೆಯನ್ನೂ ಮೀರಿದ್ದಾಗಿತ್ತು. ಮೇಲ್ನೋಟಕ್ಕೆ ಇದರ ಉದ್ದೇಶವು, ಭಾರತೀಯ ಭಾವನೆಗಳಿಗೆ ತೀರಾ ಘಾಸಿಗೊಳಿಸಿದ್ದ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿ ಕೊಳ್ಳುವುದಾಗಿದ್ದರೂ, ಇದನ್ನು ಮೀರಿದ ‘ಅಜೆಂಡಾ’ ಇಟ್ಟುಕೊಂಡೇ ಇಡೀ ‘ಆಪರೇಷನ್ ಸಿಂದೂರ’ವನ್ನು ಯೋಜಿಸಲಾಗಿದೆ.

ಅದರಲ್ಲಿ ಪ್ರಮುಖವಾಗಿ ಭಾರತ ಸೇನಾಶಕ್ತಿಯನ್ನು ಪರೇಡ್ ಮೈದಾನದಲ್ಲಿ ಅಥವಾ ಏರೋ ಇಂಡಿಯಾ ಶೋನಲ್ಲಿ ತೋರಿಸುವುದಕ್ಕಿಂತ, ಯುದ್ಧಭೂಮಿಯಲ್ಲಿ ‘ಪ್ರಾಯೋಗಿಕ’ವಾಗಿ ತೋರಿಸು ವುದು, ಈ ಮೂಲಕ ಶತ್ರುರಾಷ್ಟ್ರಗಳಿಗೆ ಭಾರತ ಈ ಹಿಂದಿನ ಭಾರತವಲ್ಲ ಎನ್ನುವ ಸಂದೇಶವನ್ನು ರವಾನಿಸುವುದು ಉದ್ದೇಶವಾಗಿತ್ತು. ಈಗಾಗಲೇ ಭಿಕಾರಿ ರಾಷ್ಟ್ರವಾಗಿರುವ ಪಾಕಿಸ್ತಾನವನ್ನು ಅವನತಿಗೆ ನೂಕಲು ಭಾರತ ಸೇನೆಯಿಂದ ಯುದ್ಧ ನಡೆಯಬೇಕೆಂದಿಲ್ಲ. ಬದಲಿಗೆ ಪಾಕಿಸ್ತಾನ ದಲ್ಲಿರುವ ‘ಅಂತಃ ಕಲಹ’ಕ್ಕೆ ಕಿಡಿ ಹೊತ್ತಿಸಿದರಾಯಿತು. ‘ಆಪರೇಷನ್ ಸಿಂದೂರ’ವೂ ಪಾಕಿಸ್ತಾನದ ಆಂತರಿಕ ಕಲಹಕ್ಕೆ ಬೆಂಕಿ ಹಚ್ಚುವ ಕೆಲಸದ ಮುಂದುವರಿದ ಭಾಗವಾಗಿದೆ.

ಪಾಕಿಸ್ತಾನಕ್ಕೆ ಪ್ರತ್ಯೇಕ ರಾಷ್ಟ್ರ ಸ್ಥಾನಮಾನ ಸಿಕ್ಕ ಕ್ಷಣದಿಂದ, ಅಲ್ಲಿ ಬಲೂಚಿಸ್ತಾನೀಯರು ‘ಪ್ರತ್ಯೇಕ ವಾದ’ವನ್ನು ಪ್ರತಿಪಾದಿಸಿಕೊಂಡೇ ಬರುತ್ತಿದ್ದಾರೆ. ಇನ್ನೊಂದು ಕಡೆ ತಾಲಿಬಾನಿಗಳ ಬೆಂಬಲ ದೊಂದಿಗೆ ಖೈಬರ್ ಪಖ್ತುಂಖ್ವಾಕ್ಕೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಯುತ್ತಿದೆ. ಇನ್ನು ಪಾಕಿಸ್ತಾನದಲ್ಲಿ ಅತಿಹೆಚ್ಚು ಸಂಪದ್ಭರಿತ ಪ್ರಾಂತ್ಯ ಎನಿಸಿರುವ ಸಿಂಧ್ ಪ್ರಾಂತ್ಯದಲ್ಲಿಯೂ ಪ್ರತ್ಯೇಕತೆಯ ಕೂಗು ಆಗಾಗ ಕೇಳಿಬರುತ್ತಿದೆ. ಆದರೆ ಇತರೆ ಪ್ರತ್ಯೇಕತೆಯ ಕೂಗಿಗಿಂತ ಬಲೂಚಿ ಸ್ತಾನದ ಪ್ರತ್ಯೇಕತೆಯ ಕೂಗು ಬಹುದೊಡ್ಡ ಪ್ರಮಾಣದಲ್ಲಿದೆ. ಅಷ್ಟೇ ಅಲ್ಲದೇ, ಬಲೂಚಿಗಳ ಈ ಹೋರಾಟದ ಹಿಂದೆ ‘ಕಾಣದ ಕೈಗಳ’ ರೀತಿಯಲ್ಲಿ ಭಾರತ ದಶಕಗಳಿಂದ ನೆರವು ನೀಡಿಕೊಂಡೇ ಬಂದಿದೆ ಎನ್ನುವುದು ಓಪನ್ ಸೀಕ್ರೆಟ್.

ಈ ಎಲ್ಲವನ್ನು ಮೀರಿ ಭಾರತದಂಥ ರಾಷ್ಟ್ರಗಳು ಯಾವುದೇ ಅಂತಾರಾಷ್ಟ್ರೀಯ ತೀರ್ಮಾನ ಗಳನ್ನು ತೆಗೆದುಕೊಳ್ಳುವಿಕೆಯು, ಜನರ ಭಾವನೆಗಳ ಜತೆಜತೆಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯ ಬೀರಲಿರುವ ಪರಿಣಾಮ, ಪಾಕಿಸ್ತಾನಕ್ಕಿಂತ ಕದನವಿರಾಮಕ್ಕೆ ‘ಮಧ್ಯಪ್ರವೇಶಿಸಿರುವ’ ದೇಶಗಳೊಂದಿಗಿನ ಭವಿಷ್ಯದ ವ್ಯವಹಾರ, ಸ್ನೇಹ, ವಾಣಿಜ್ಯ ಒಪ್ಪಂದ ಸೇರಿದಂತೆ ಹಲವು ಆಯಾಮಗಳ ಮೇಲೆ ನಿಂತಿರುತ್ತದೆ.

‘ಆಪರೇಷನ್ ಸಿಂದೂರ’ವನ್ನು ಒಂದು ಹೆಜ್ಜೆ ಹಿಂದಿಡಿಸುವಲ್ಲಿ ಬಹಿರಂಗವಾಗಿ ಅಮೆರಿಕ ಪಾತ್ರ ದೊಡ್ಡದಾಗಿದ್ದರೆ, ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸೌದಿ ಅರೇಬಿಯಾವೂ ತನ್ನದೇ ಆದ ಪಾತ್ರವನ್ನು ನಿಭಾಯಿಸಿದೆ. ಆದ್ದರಿಂದ ಕದನವಿರಾಮಕ್ಕೆ ಒಪ್ಪದೇ, ಭಾರತಕ್ಕಾಗುವ ನಷ್ಟವನ್ನು ಎದುರಿಸುವುದಕ್ಕಿಂತ ಕದನವಿರಾಮಕ್ಕೆ ಒಪ್ಪಿ ಬಳಿಕ ಪಾಕಿಸ್ತಾನದ ನರಿಬುದ್ಧಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕ್ಷ್ಯ ಸಹಿತ ತೋರಿಸುವುದು ಮತ್ತೊಂದು ರೀತಿಯ ಪ್ರಬಲ ರಾಜತಾಂತ್ರಿಕ ಹೊಡೆತ. ಕದನವಿರಾಮವನ್ನು ಒಪ್ಪದೇ, ಮಿತ್ರರಾಷ್ಟ್ರಗಳಿಂದ ವಿರೋಧ ಕಟ್ಟಿ ಕೊಳ್ಳುವುದಕ್ಕಿಂತ ಸಾಕ್ಷ್ಯ ಸಮೇತ ವಿಶ್ವದ ಮುಂದೆ ಪಾಕಿಸ್ತಾನವನ್ನು ಬೆತ್ತಲೆ ಮಾಡುವುದು ‘ಸರಿ’ ದಾರಿಯೆಂದು ಅರಿತು ಈ ತೀರ್ಮಾನಕ್ಕೆ ಬಂದಿರಬಹುದು. ಏಕೆಂದರೆ ಪಾಪಿಯ ಸಂಹಾರಕ್ಕೆ, ಆತನ ಪಾಪದ ಕೊಡ ತುಂಬವ ತನಕ ಕಾಯಲೇಬೇಕು ಎನ್ನುವುದು ವಾಸ್ತವ!