ವಿಶ್ವರಂಗ
ಸಿಕ್ಕ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವುದರ ಆಧಾರದ ಮೇಲೆ ನಾವ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಅಡಗಿದೆ. ಬದುಕಿನಲ್ಲಿ ಮುಖ್ಯವಾಗಿ ಬೇಕಾಗಿರುವುದು ಫೋಕಸ್. ಅಂದರೆ, ಒಂದು ವಿಷಯದ ಮೇಲೆ ಗಮನ ನೀಡುವುದು, ಅದರ ಆಳಕ್ಕೆ ಇಳಿಯು ವುದು ಮತ್ತು ನಿರಂತರತೆ ಕಾಪಾಡಿಕೊಳ್ಳುವುದು. ಇದನ್ನು ಸರಿಯಾಗಿ ಮಾಡಿಬಿಟ್ಟರೆ ಸಾಕು, ನಾವು ಬದುಕಿನಲ್ಲಿ ಸದಾ ಬಯಸುವ ಹಣ ಮತ್ತು ಪ್ರಸಿದ್ಧಿ ತಾವಾಗೇ ನಮ್ಮ ಬಳಿ ಬರುತ್ತವೆ.
ನೀವು ಮಕ್ಕಳನ್ನು ಗಮನಿಸಿ ನೋಡಿ. ಯಾವುದನ್ನು ಮಾಡಬೇಡ ಎಂದು ಹೇಳುತ್ತೀರಿ ಅವರು ಅದನ್ನು ಖಂಡಿತ ಮಾಡುತ್ತಾರೆ. ದೊಡ್ಡವರ ಕಥೆ ಕೂಡ ಸೇಮ್ ಕಣ್ರೀ. ಏಕೆಂದರೆ ಅವರು ದೈಹಿಕ ವಾಗಿ ಬೆಳೆದು ದೊಡ್ಡವರು ಎನ್ನಿಸಿಕೊಂಡಿರುತ್ತಾರೆ ಅಷ್ಟೆ. ನೀವು ಯಾವುದನ್ನು ಅತ್ಯಂತ ಸ್ಪಷ್ಟ ಧ್ವನಿಯಲ್ಲಿ ‘ಇದು ಸರಿ,
ಹೀಗಾಗಿ ಇದನ್ನು ಮಾಡಿ’ ಅಥವಾ ‘ಇದು ತಪ್ಪು, ಹೀಗಾಗಿ ಇದನ್ನು ಮಾಡಬೇಡಿ’ ಎಂದು ಹೇಳಿ ನೋಡಿ. ಅದ್ಯಾರೇ ಇರಲಿ, ಅವರು ನೀವು ಹೇಳಿದ್ದಕ್ಕೆ ತದ್ವಿರುದ್ಧ ಮಾಡುತ್ತಾರೆ. ಹೀಗೇಕೆ? ಮನುಷ್ಯ ನ ಮಿದುಳು ವರ್ಕ್ ಆಗುವುದು ಹೀಗೆ. ಇದಕ್ಕೆ ದೊಡ್ಡ ಬುದ್ಧಿವಂತರು ಎನ್ನಿಸಿಕೊಂಡವರು ಕೂಡ ಹೊರತಲ್ಲ. ಹೀಗಾಗಿ ನಿಮಗೇನು ಬೇಕು ಅಥವಾ ನೀವು ಬೇರೆಯವರು ಏನು ಮಾಡಲಿ ಎಂದು ಬಯಸುತ್ತೀರಿ ಅದಕ್ಕೆ ವಿರುದ್ಧವಾದ ವಾದವನ್ನು ತೇಲಿಬಿಡಿ ಸಾಕು!
ನಿಮಗೆ ಬೇಕಾದ ಫಲಿತಾಂಶ ಸಿಗುತ್ತದೆ. ಇದಕ್ಕೆ ರಿವರ್ಸ್ ಸೈಕಾಲಜಿ ಎನ್ನಲಾಗುತ್ತದೆ. ‘ಬುದ್ಧಿವಂತ ರಿಗೆ ಮಾತ್ರ’ ಎಂದು ಹಾಕಿದಾಗ ಫಿಲಂ ಹಿಟ್ ಆಗುತ್ತದೆ. ಅದೇ ರೀತಿ ‘ನೀವು ಬುದ್ಧಿವಂತರಾಗಿದ್ದರೆ ಈ ಫಿಲಂ ನೋಡಬೇಡಿ ಎದ್ದು ಹೋಗಿ’ ಎನ್ನುವ ದಾಷ್ಟಿಕತೆ ಕೂಡ ಕೆಲಸ ಮಾಡುತ್ತದೆ. ಈ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಗಳನ್ನು ನೋಡಿ, ಅವರು ಮಹತ್ತರವಾದ ಬದಲಾವಣೆಯೇನೂ ಮಾಡುವು ದಿಲ್ಲ.
ಇದನ್ನೂ ಓದಿ: Rangaswamy Mookanahalli Column: ಈಜಿಪ್ಟಿನ ಕೋಶಾರಿಗೂ ಭಾರತದ ಕಿಚಡಿಗೂ ನಂಟಿಲ್ಲ !
‘ಒನ್ ಪರ್ಸೆಂಟ್ ಚೇಂಜ್’ ಎನ್ನುವ ಸ್ಟ್ರಾಟಜಿ ಉಪಯೋಗಿಸುತ್ತಾರೆ. ಸಮಾಜದಲ್ಲಿ ಸದಾ ಚಾಲನೆ ಯಲ್ಲಿರುವ ಟ್ರೆಂಡ್ ಉಪಯೋಗಿಸಿಕೊಂಡು ಪ್ಯಾಟ್ರನ್ ಬದಲಿಸುತ್ತಾರೆ. ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಿದರೆ ಜನ ಒಪ್ಪುವುದಿಲ್ಲ. ತಿರುಗಿ ಬೀಳುವ ಚಾ ಜಾಸ್ತಿಯಿರುತ್ತದೆ. ಹೀಗಾಗಿ ಅವರು ಒಪ್ಪದಿರುವಷ್ಟು ಬದಲಾವಣೆ ಮಾಡಲು ಎಂದಿಗೂ ಹೋಗಬಾರದು.
ಸರಳವಾಗಿ ಹೇಳಬೇಕೆಂದರೆ, ಮಾಸ್ ಕನೆಕ್ಟ್ ಆಗುವಂತೆ ಇದ್ದರೆ ಅಲ್ಲಿಗೆ ಜಯ. ಜಗತ್ತಿನ ಯಾವ ದೇಶವೇ ಇರಲಿ 10 ರಿಂದ 15 ಪ್ರತಿಶತ ಜನ ಮಾತ್ರ ಯೋಚಿಸುವ, ಮುಂದಿನದನ್ನು ಮನಗಾಣುವ ಶಕ್ತಿ ಹೊಂದಿರುತ್ತಾರೆ. ಉಳಿದ 85 ಪ್ರತಿಶತ ಜನ ಡಮ್ಮಿ. ಈ ಮಾತನ್ನು ನೀವು ಉದ್ಧಟತನ ಎಂದು ಕೊಂಡರೂ ಪರವಾಗಿಲ್ಲ.
ಸತ್ಯ ಹೇಳದೆ ಬೇರೆ ದಾರಿಯಿಲ್ಲ. ಉದಾಹರಣೆಗೆ, ‘ಇವತ್ತು ಮೊಬೈಲ್ ಬಂದಿದೆ, ಹೀಗಾಗಿ ಯುವ ಜನರು ಫೋಕಸ್ ಕಳೆದುಕೊಂಡಿದ್ದಾರೆ’ ಎನ್ನುವುದು ಶುದ್ಧ ಸುಳ್ಳು. ಮೊಬೈಲ್ ಇಲ್ಲದ ಕಾಲದಲ್ಲಿ ಅದೇಕೆ ಎಲ್ಲರೂ ಐನ್‌ಸ್ಟೀನ್ ಆಗಲಿಲ್ಲ? ಅದೇಕೆ ಎಲ್ಲರೂ ರಿಚ್ ಆಂಡ್ ಫೇಮಸ್ ಆಗಲಿಲ್ಲ? ಅದೆ ಬಿಟ್ಟಾಕಿ, ಅದೇಕೆ ಅವರು ಒಂದು ಸುಂದರ ಬದುಕನ್ನು ಬಾಳಲು ಸಾಧ್ಯ ವಾಗಲಿಲ್ಲ? ಅದೇಕೆ ಸದಾ ವ್ಯವಸ್ಥೆಯನ್ನು ದೂಷಿಸುತ್ತಾ, ತಮ್ಮ ಹಣೆಬರಹವನ್ನು ಹಳಿಯುತ್ತ ಜೀವನ ಸವೆಸಿದರು? ನೀವು ಶತಮಾನಗಳ ಚರಿತ್ರೆ ತೆಗೆದು ನೋಡಿ, ಇಂದು ಅಂತಲ್ಲ ಎಂದಿನಿಂದಲೂ ಜಗತ್ತಿನ 85/90 ಪ್ರತಿಶತ ಜನರಲ್ಲಿ ಫೋಕಸ್ ಇರುವುದಿಲ್ಲ.
ಮೊಬೈಲ್ ಬೇಡ ಕಣ್ರೀ, ಒಂದು ಕಾಲದಲ್ಲಿ ಜನರು ಪುಸ್ತಕ ಓದುವ ಹುಚ್ಚಿಗೆ ಬಿದ್ದಿದ್ದರು! ಏನೂ ಇಲ್ಲದಿದ್ದರೆ ತಮ್ಮ ಕೈ ಬೆರಳ ಉಗುರು ನೋಡುತ್ತಾ ಜನ ಟೈಮ್‌ಪಾಸ್ ಮಾಡುತ್ತಾರೆ. ನಾನು ಚಿಕ್ಕವ ನಿದ್ದಾಗ ನನ್ನ ಹೆತ್ತವರಿಗೆ ಬೊಂಬೆ ತಂದುಕೊಡುವ ಆರ್ಥಿಕ ಶಕ್ತಿಯಿರಲಿಲ್ಲ. ನನಗೆ ಅದರ ಬಗ್ಗೆ ಬೇಸರವಿಲ್ಲ. ನನ್ನ ಎಡಗೈ ಮತ್ತು ಬಲಗೈಗಳನ್ನು ಹೊಡೆದಾಟಕ್ಕೆ ಬಳಸುತ್ತಿದ್ದೆ.
ಒಂದನ್ನು ಹೀರೋ ಎಂದೂ, ಇನ್ನೊಂದು ಕೈಯನ್ನು ವಿಲನ್ ಎಂದೂ ಊಹಿಸಿಕೊಂಡು ನನ್ನದೇ ಎರಡು ಕೈಗಳ ನಡುವೆ ಹೊಡೆದಾಟ ಏರ್ಪಡಿಸಿ ಮಜಾ ತೆಗೆದುಕೊಂಡು ಟೈಮ್‌ಪಾಸ್ ಮಾಡು ತ್ತಿದ್ದೆ! ಟೈಮ್ ಪಾಸ್ ಮಾಡೋಕೆ ಮೊಬೈಲ್ ಬೇಕಿಲ್ಲ. ಫೋಕಸ್ ಮಾಡೋಕೆ ಮೊಬೈಲ್ ಅಡ್ಡಿ ಯಲ್ಲ. ಈ ಎರಡರ ನಡುವೆ ಸಮಾಜದ ಸ್ವಾಸ್ಥ್ಯ ಅಡಗಿದೆ.
ಮೀನಿಗೆ ಇದು ಗಾಳ ಎನ್ನುವುದು ಅರಿವಾಗುವುದಿಲ್ಲ. ಆಹಾರ ಎನ್ನುವ ಭ್ರಮೆಯಲ್ಲಿರುತ್ತದೆ! ಥೇಟ್ ಹಾಗೆ ನಮ್ಮ ಜನ ಮತ್ತು ಸಮಾಜ ಕಣ್ರೀ. ಜಗತ್ತಿನಲ್ಲಿ ಅತಿ ಹೆಚ್ಚು ಬೆಲೆಬಾಳುವುದು ಸಮಯ! ತಮ್ಮ ಸಮಯವನ್ನು ನಯಾಪೈಸೆ ಬದಲಾವಣೆ ತರಲಾಗದ ಚಿತ್ರದ ಸೀನ್ ಡಿಕೋಡ್ ಮಾಡುವು ದರಲ್ಲಿ ಕಳೆಯುತ್ತಾರೆ.
ಸಿನಿಮಾ ಇಲ್ಲದಿದ್ದರೆ ಕ್ರಿಕೆಟ್ ಇದ್ದೇ ಇದೆಯಲ್ಲ. ನಿನ್ನೆ ‘ಕೋಲಾರ’ ಪತ್ರಿಕೆಯ ಐವತ್ತನೇ ವರ್ಷದ ಸುವರ್ಣ ಸಂಭ್ರಮದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಹೋಗುವ ಅವಕಾಶ ಸಿಕ್ಕಿತ್ತು. ತುಮಕೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಶ್ರೀ ವೀರೇಶಾನಂದರು ಮಾತಿಗೆ ಸಿಕ್ಕಿದ್ದರು. ತಮ್ಮ ಮಾತುಗಳಿಂದ ಕೋಲಾರ ಜನತೆಯನ್ನು ಮಂತ್ರಮುಗ್ಧರನ್ನಾಗಿಸಿದ್ದರು.
ಅವರೊಬ್ಬ ಅತ್ಯುತ್ತಮ ವಾಗ್ಮಿ. ಹತ್ತಾರು ದೇಶಗಳನ್ನು ಕೂಡ ಸ್ವಾಮೀಜಿ ಸುತ್ತಿ ಬಂದಿದ್ದಾರೆ. ಹೀಗಾಗಿ ಜಗತ್ತಿನ ಅಗಾಧತೆಯ ಅರಿವಿದೆ. ಬೇರೆ ಬೇರೆ ರೀತಿ-ರಿವಾಜುಗಳನ್ನು ಪ್ರತ್ಯಕ್ಷ ಕಂಡಿದ್ದಾರೆ. ಹೀಗಾಗಿ ಅವರು ನಮ್ಮ ಸಮಾಜದಲ್ಲಿನ ಹುಳುಕುಗಳನ್ನು ಸ್ಪಷ್ಟವಾಗಿ ಗುರುತಿಸಬಲ್ಲರು. ಆದರೆ ಅವರು ಎತ್ತಿ ಆಡುವುದಿಲ್ಲ, ಬದಲಿಗೆ ಅವುಗಳಲ್ಲಿ ಬದಲಾವಣೆ ತರಲು ಏನು ಮಾಡಬಹುದು ಎನ್ನುವುದರ ಬಗ್ಗೆ ಆಲೋಚಿಸುತ್ತಾರೆ.
ಹೀಗಾಗಿ ಅವರು ಖಾಸಗಿಯಾಗಿ ಹೇಳಿದ ಮಾತುಗಳನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ನಮ್ಮೆಲರಿ ಗೂ ಗೊತ್ತಿರುವ ವಿಷಯ. ಆದರೆ ನಾವು ಬದಲಾವಣೆಗೆ ಆಲೋಚಿಸುವುದರ ಬದಲು ಅವುಗಳಲ್ಲಿ ವ್ಯಸ್ತರಾಗಿ ಬಿಟ್ಟಿದ್ದೇವೆ.
ಮೂರು ’P’ ಗಳು ನಮ್ಮ ದೇಶದಲ್ಲಿ ಬಹಳಷ್ಟು ಜನರ ಮೇಲೆ ಪ್ರಭಾವ ಬೀರುತ್ತವೆ. ಇವುಗಳು ಬದಲಾದರೆ ಜನ ಬದಲಾಗುತ್ತಾರೆ ಎಂದರು ಸ್ವಾಮೀಜಿ. ಒಂದು ಪಿಕ್ಚರ್, ಎರಡು ಪ್ರೆಸ್ (ಕೇವಲ ಮುದ್ರಣ ಮಾಧ್ಯಮ ಮಾತ್ರವಲ್ಲ, ಇದರ ಜತೆಗೆ ಡಿಜಿಟಲ್ ಮತ್ತು ದೃಶ್ಯ ಮಾಧ್ಯಮಗಳನ್ನು ಕೂಡ ಸೇರಿಸಿಕೊಳ್ಳಬಹುದು), ಮತ್ತೊಂದು ಪಾಲಿಟಿಕ್ಸ್. ಸ್ವಾಮೀಜಿ ಹೇಳಿದ ಈ ಮೂರು P ಗಳ ಮಧ್ಯ ದಲ್ಲಿ ನಮ್ಮ ಸಮಯವನ್ನು ನಾವು ವ್ಯಯಿಸುತ್ತಿದ್ದೇವೆ ಎನ್ನುವುದು ಮಾತ್ರ ಕಹಿಸತ್ಯ.
ನೇರವಾಗಿ ಇದರಲ್ಲಿ ಭಾಗೀದಾರರಾದವರಿಗೆ ಹಣ, ಹೆಸರು ಸಿಗುತ್ತದೆ. ಅವುಗಳನ್ನು ನೋಡುತ್ತಾ, ಅವುಗಳ ಬಗ್ಗೆ ಮಾತಾಡುತ್ತ ಕುಳಿತವರಿಗೆ ಸಿಕ್ಕಿದ್ದೇನು? ಚೀಪ್ ಡೋಪಮೈನ್. ಆ ಕ್ಷಣದ ಖುಷಿ ಬಿಟ್ಟು ಬೇರೇನೂ ಇಲ್ಲ. ಜಗತ್ತು ಇದರಿಂದ ಎಂದಿಗೂ ಬದಲಾಗುವುದಿಲ್ಲ.
ಮನುಷ್ಯ ಎನ್ನುವ ಪ್ರಾಣಿ ಇಷ್ಟು ದೊಡ್ಡ ವಿಶ್ವದಲ್ಲಿ ಸೂಜಿಯ ಮೊನೆ ಕೂಡ ಅಲ್ಲ ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಅಭಿಪ್ರಾಯಗಳನ್ನು ರೂಪಿಸುವುದು ನಮ್ಮ ಕಲಿಕೆ. ‘ನಾನು’ ಎನ್ನುವ ಅಹಂ ನೆತ್ತಿಗೇರದೆ ಇರಲು ವಿಶ್ವದ ಪರಿಕಲ್ಪನೆ ಮತ್ತು ಅಲ್ಲಿ ನಮ್ಮ ಸ್ಥಾನವನ್ನು ನೆನೆಪಿಸಿಕೊಂಡರೆ ಅಷ್ಟು ಸಾಕು, ನಾವು ಸಾಸಿವೆಯೂ ಅಲ್ಲ, ಸೂಜಿಮೊನೆಯೂ ಅಲ್ಲ ಎನ್ನುವುದು ಅರಿವಿಗೆ ಬರುತ್ತದೆ.
ಹೀಗಾಗಿ ಈ ನನ್ನ ನಂಬಿಕೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದೇನೆ. ನಿನ್ನೆ ಸ್ವಾಮೀಜಿ ಅದಕ್ಕೆ ಇನ್ನೊಂದು ಹೊಸ ಆಯಾಮವನ್ನು ಕೂಡ ನೀಡಿದರು- “ಮನುಷ್ಯ ಅತಿ ಚಿಕ್ಕ ಪ್ರಾಣಿ, ಸೂಜಿ ಮೊನೆಯೂ ಅಲ್ಲ ಎನ್ನುವ ಮಾತುಗಳು ಸರಿ. ಆದರೆ ಇಷ್ಟೊಂದು ದೊಡ್ಡ ವಿಶ್ವದ ಪರಿಕಲ್ಪನೆ, ಗ್ರಹಿಕೆ ಮಾಡಿಕೊಂಡದ್ದು ಕೂಡ ಅವನೇ ಅಲ್ಲವೇ? ಹೀಗಾಗಿ ಅವನು ದೊಡ್ಡವನು ಕೂಡ ಹೌದು" ಎಂದರು.
ಮೇಲಿನ ಎಲ್ಲಾ ಮಾತುಗಳ ಸಾರಾಂಶ- ನಾವು ನಮಗೆ ಸಿಕ್ಕ ಸಮಯವನ್ನು ಹೇಗೆ ಉಪಯೋಗಿಸಿ ಕೊಳ್ಳುತ್ತೇವೆ ಎನ್ನುವುದರ ಆಧಾರದ ಮೇಲೆ ನಾವ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಅಡಗಿದೆ ಎನ್ನು ವುದೇ ಆಗಿದೆ. ಬದುಕಿನಲ್ಲಿ ಎಲ್ಲದಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಫೋಕಸ್. ಒಂದು ವಿಷಯದ ಮೇಲೆ ಗಮನ ನೀಡುವುದು, ಅದರ ಆಳಕ್ಕೆ ಇಳಿಯುವುದು ಮತ್ತು ನಿರಂತರತೆ ಕಾಪಾಡಿ ಕೊಳ್ಳುವುದು ಪ್ರಮುಖ ಅಂಶ.
ಇದನ್ನು ಸರಿಯಾಗಿ ಮಾಡಿ ಬಿಟ್ಟರೆ ಸಾಕು, ನಾವು ಬದುಕಿನಲ್ಲಿ ಸದಾ ಬಯಸುವ ಮತ್ತು ಅದಕ್ಕಾಗಿ ಹಪಹಪಿಸುವ ಇನ್ನೆರಡು ಅಂಶಗಳು ತಾವಾಗೇ ನಮ್ಮ ಬಳಿ ಬರುತ್ತವೆ. ಹಣ ಮತ್ತು ಪ್ರಸಿದ್ಧಿ ಆ ಎರಡು ಅಂಶಗಳು. ನೀವೇ ಗಮನಿಸಿ ನೋಡಿ, ಜಗತ್ತಿನ 90 ಪ್ರತಿಶತ ಜನರು ಹಣದ ಹಿಂದೆ ಮತ್ತು ಹೆಸರಿನ ಹಿಂದೆ ಸದಾ ಓಡುತ್ತಾರೆ. ಹೀಗಾಗಿ ಅವು ಅವರ ಪಾಲಿಗೆ ಮರೀಚಿಕೆಯಾಗಿ ಉಳಿದುಕೊಳ್ಳು ತ್ತವೆ.
ಉಳಿದ ಹತ್ತು ಪ್ರತಿಶತ ಜನ ಹಿಡಿದ ಕೆಲಸದ ಮೇಲೆ ಫೋಕಸ್ ಮಾಡುತ್ತಾರೆ. ಈ ಗಮನಹರಿಸುವಿಕೆ, ವಿಷಯeನ ಅವರನ್ನು ಕೋಟಿ ಜನರಿಂದ ಬೇರ್ಪಡಿಸಿಬಿಡುತ್ತದೆ. ಅದು ಅವರಿಗೊಂದು ಹೊಸ ಐಡೆಂಟಿಟಿ ತಂದು ಕೊಡುತ್ತದೆ. ಉಳಿದದ್ದು ನಿರಂತರತೆ ಕಾಯ್ದುಕೊಳ್ಳುವುದು. ಹೀಗಾದಾಗ ಜಗತ್ತು ಪರಿತಪಿಸುವ, ಬಯಸುವ ಹಣ-ಹೆಸರು ಅನ್ಯ ಮಾರ್ಗವಿಲ್ಲದೆ ಇಂಥವರ ದಾರಿಗೆ ಬರುತ್ತವೆ.
ನಾವು ಯಾವ ಊರಿನಲ್ಲಿ ಇದ್ದೇವೆ ಎನ್ನುವುದು ಪ್ರಾಮುಖ್ಯವನ್ನು ಪಡೆದುಕೊಳ್ಳುವುದಿಲ್ಲ. ಅಂದರೆ ಭೌಗೋಳಿಕವಾಗಿ ನಾವು ಎಲ್ಲಿದ್ದರೂ ಅದು ನಮ್ಮ ಸಾಧನೆಗೆ ಅಡ್ಡಿಯಾಗುವುದಿಲ್ಲ. ಹಾಗೆ ನಮ್ಮ ಇಂದಿನ ಹಣಕಾಸು ಪರಿಸ್ಥಿತಿ ಕೂಡ ನಮ್ಮ ಸಾಧನೆಗೆ ಅಡ್ಡಿಯಾಗುವುದಿಲ್ಲ. ಹೀಗೆ ನಾವು ‘ಅದಿಲ್ಲ-ಇದಿಲ್ಲ’ ಎನ್ನುವುದು ಕೇವಲ ಗೊಣಗಾಟ ಮತ್ತು ಕಾರಣಗಳು ಅಷ್ಟೇ.
ಉಳಿದಂತೆ ನಮ್ಮ ಮತ್ತು ನಮ್ಮ ನಡುವಿನ ಸಾಧನೆಗೆ ಅಡ್ಡಿಯಾಗಿ ನಿಲ್ಲುವುದು ನಮ್ಮ ಮನಸ್ಥಿತಿ, ಸೋಮಾರಿತನ ಮಾತ್ರ. ಕೋಲಾರದಲ್ಲಿ ನನ್ನ ಪಿಯುಸಿ ಸಹಪಾಠಿ ಡಾ.ನರೇಂದ್ರ ಅಲ್ಲಿನ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಮೃದುಭಾಷಿ, ಸಂಸ್ಕಾರವಂತರವರು. ಅವರ ಮಗ ಕುಶಾಲ್ ಐಐಟಿ ಗುವಾಹಟಿಯಲ್ಲಿ ಎಂಜಿನಿಯರಿಂಗ್ ಸೀಟು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.
ನಿಮಗೆ ಗೊತ್ತಿರಲಿ, ಪೂರ್ಣ ಭಾರತದಲ್ಲಿ ಐಐಟಿ ಸೀಟುಗಳ ಸಂಖ್ಯೆ 18 ಸಾವಿರ ಚಿಲ್ಲರೆ. ಆದರೆ ಈ ಪರೀಕ್ಷೆಗೆ ಸರಿಸುಮಾರು 15 ರಿಂದ 17 ಲಕ್ಷ ಮಕ್ಕಳು ನೋಂದಣಿ ಮಾಡಿಕೊಳ್ಳುತ್ತಾರೆ. ಇದರರ್ಥ ನೂರರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಸೀಟು ಗಳಿಸಿಕೊಳ್ಳಬಲ್ಲ. ಇದು ಭಾರತದಲ್ಲಿ ಅತಿ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದು ಹೆಸರುವಾಸಿಯಾಗಿದೆ.
“ಐಐಟಿಗೆ ಹೇಗೆ ಸಿದ್ಧತೆ ಮಾಡಿಕೊಂಡೆ? ಹೇಗೆ ಕ್ರ್ಯಾಕ್ ಮಾಡಿದೆ?" ಎನ್ನುವ ನನ್ನ ಪ್ರಶ್ನೆಗೆ ಆತನದು ಒಂದೇ ಉತ್ತರ- ಫೋಕಸ್ ಮತ್ತು ಪರಿಶ್ರಮ ಹಾಕಿ ಓದುವುದು ಅಷ್ಟೇ. ಯಾವ ಕಾಲೇಜು, ಕೋಚಿಂಗ್ ಸೆಂಟರ್ ಕೂಡ ಏನೂ ಮಾಡುವುದಿಲ್ಲ ಎನ್ನುವುದು! ನಾವಿರುವ ಜಾಗ, ನಮ್ಮ ಪರಿಸ್ಥಿತಿ ಲೆಕ್ಕಕ್ಕೆ ಬರುವುದಿಲ್ಲ.
ನಮ್ಮಲ್ಲಿನ ಆತ್ಮಬಲವಷ್ಟೆ ಮುಖ್ಯವಾಗುತ್ತದೆ ಎನ್ನುವ ನಂಬಿಕೆಗೆ ಮತ್ತಷ್ಟು ಬಲ ಬಂದಿತು. ಇದನ್ನೇ ನಾನು ಸದಾ ‘ಲುಕ್ ಇನ್‌ವರ್ಡ್’ ಎನ್ನುತ್ತೇನೆ. ಭಗವಂತ ನಮಗೇನು ಬೇಕು ಎಲ್ಲವನ್ನೂ ನಮ್ಮ ಇಟ್ಟಿzನೆ. ನಮಗೇನು ಬೇಕು ಎನ್ನುವ ನಿಖರತೆ ನಮಗಿರಬೇಕು ಅಷ್ಟೇ. ಆದರೆ ನಾವು? ನಮಗೇನು ಬೇಕು ಎನ್ನುವುದನ್ನು ಕುರಿತು ಕೂಡ ಯೋಚಿಸಲಾಗದ ಮಟ್ಟಕ್ಕೆ ಇಳಿದಿದ್ದೀವೆ.
ಡಿವಿಜಿ ಅವರು ತಮ್ಮ ಕಗ್ಗವೊಂದರಲ್ಲಿ ‘ಭಗವಂತ ನಾವು ಕೇಳಿದ್ದೇ ಕೊಡುತ್ತಾನೆ ಎನ್ನುವ ಗ್ಯಾರಂಟಿ ಇಲ್ಲ. ಆದರೆ ನಮಗೂ ಏನು ಕೇಳಬೇಕು ಎನ್ನುವ ನಿಖರತೆ ಮತ್ತು ಅರಿವಿಲ್ಲ’ ಎನ್ನುತ್ತಾರೆ. ಈ ಮಾತುಗಳು ಮೊಬೈಲ್ ಬರುವುದಕ್ಕೆ ಮುಂಚೆ ಹೇಳಿದ್ದು!
ಸಮಾಜದಲ್ಲಿನ 85/90 ಪ್ರತಿಶತ ಜನ ಬದುಕು ಸವೆಸುವುದು ಹೀಗೇ ಅಲ್ಲವೇ? ಕೊನೆಗೂ ನಮಗೇನು ಬೇಕು, ನಮ್ಮ ಸಮಯವನ್ನು ಹೇಗೆ ಸ್ವಕಲ್ಯಾಣ ಮತ್ತು ಲೋಕಕಲ್ಯಾಣಕ್ಕೆ ಬಳಸಿಕೊಳ್ಳಬೇಕು ಎನ್ನುವ ನಿಖರತೆ ನಮ್ಮ ಹುಟ್ಟಬೇಕು. ಹೊರಗಿನ ಅಂಶಗಳು ಪ್ರೇರಣೆಯನ್ನು ಮಾತ್ರ ನೀಡಬಲ್ಲವು.