Rangaswamy Mookanahalli Column: ಈಜಿಪ್ಟಿನ ಕೋಶಾರಿಗೂ ಭಾರತದ ಕಿಚಡಿಗೂ ನಂಟಿಲ್ಲ !
“ಇವರು ನನಗೆ ಪರಿಚಯ, ನಿನಗೆ ಬೇಕಾದ ಹಾಗೆ ಮಾಡಿಕೊಡುತ್ತಾರೆ" ಎನ್ನುವ ಅಭಯ ಬೇರೆ ಇತ್ತ. “ಹೆಚ್ಚೇನೂ ಬೇಡ. ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮೆಟೋವನ್ನ ಎಣ್ಣೆಯಲ್ಲಿ ಹುರಿದು ಅದಕ್ಕೆ ಒಂದಷ್ಟು ಉಪ್ಪು, ಮೆಣಸಿನಕಾಯಿ ಸೇರಿಸಿ ಅದರಲ್ಲಿ ಅನ್ನ ಬೆರೆಸಿ ಕೊಡಿ ಸಾಕು" ಎಂದೆ. ಸರಿ ಎಂದವರು ಹತ್ತು ನಿಮಿಷದಲ್ಲಿ ನನ್ನ ಮುಂದೆ ಬಿಸಿಬಿಸಿ ಹೊಗೆಯಾಡುವ ಅಂಟು ಅನ್ನವನ್ನ ತಂದಿಟ್ಟರು!
-
ವಿಶ್ವರಂಗ
ಚೀನಾದಲ್ಲಿ ಜಿರಳೆಯನ್ನ ಬೆಳೆಸುವುದು ಕೂಡ ಒಂದು ದೊಡ್ಡ ಉದ್ಯಮ. ವರ್ಷದಲ್ಲಿ 600 ಕೋಟಿಗೂ ಹೆಚ್ಚಿನ ಜಿರಳೆಗಳನ್ನ ಇಲ್ಲಿ ಸಾಕಲಾಗುತ್ತದೆ. ಚೀನಿಯರು ಜಗತ್ತಿನಲ್ಲಿ ಆಹಾರ ವನ್ನ ಬಿಸಾಡುವುದರಲ್ಲಿ ಕೂಡ ಎತ್ತಿದ ಕೈ. ಇಂಥ ಆಹಾರವನ್ನ ಬಿಸಾಡುವುದು ದೊಡ್ಡ ಸಮಸ್ಯೆ. ಇದಕ್ಕಾಗಿ ಈ ಜಿರಲೆಗಳನ್ನ ಸಾಕುತ್ತಾರೆ. ಅವು ಇಂಥ ವೇ ಆಹಾರ ತಿಂದು ಬೆಳೆದ ಮೇಲೆ ಅವನ್ನ ಇವರು ಹಲವಾರು ಬಳಕೆಗೆ ಬಳಸುತ್ತಾರೆ.
ನಾವು ಮಾಡುವ ಊಟವನ್ನು ನಮ್ಮಿಚ್ಛೆಗೆ ಅಂದರೆ ನಮ್ಮ ಇಷ್ಟದಂತೆ ಮಾಡಬೇಕು, ಆದರೆ ನಾವು ತೊಡುವ ಬಟ್ಟೆಯನ್ನು ನಾಲ್ಕು ಜನರ ಇಚ್ಛೆಗೆ ಅಂದರೆ ನಾಲ್ಕು ಜನರಿಗೆ ಇಷ್ಟವಾಗುವಂತೆ ತೊಡ ಬೇಕು ಎನ್ನುವುದು ಆಡುಮಾತು. ಈ ಮಾತನ್ನ ನನ್ನಜ್ಜಿ ಬಹಳ ಬಾರಿ ಹೇಳಿದ್ದರು. ಆದರೆ ಇದರ ನಿಜವಾದ ಅರ್ಥವೇನು? ಎನ್ನುವುದನ್ನು ತಿಳಿಯಲು ನನಗೆ ಬಹಳ ವರ್ಷಗಳು ಬೇಕಾದವು.
ಭಾರತದಲ್ಲಿ ಇರುವವರೆಗೆ ಇದರ ಅರ್ಥ ತಿಳಿಯಲೇ ಇಲ್ಲ ಎನ್ನುವುದು ಉತ್ಪ್ರೇಕ್ಷೆ ಮಾತಲ್ಲ. ಇಲ್ಲಿರುವವರೆಗೆ ಈ ಮಾತಿನ ಅರ್ಥ ತಿಳಿಯುವ ಸಂದರ್ಭ ಬರಲಿಲ್ಲ ಎನ್ನುವುದು ಮಾತ್ರ ಸತ್ಯ. ಹೊಟ್ಟೆ ಬಹಳವೇ ಹಸಿದಿತ್ತು. ತುತ್ತು ಅನ್ನ, ಒಂದಷ್ಟು ಮೊಸರು ಮತ್ತು ಉಪ್ಪು ಸಿಕ್ಕರೆ ಸಾಕು ಎಂದುಕೊಂಡು ಹತ್ತಾರು ಹೋಟೆಲ್ ಅಲೆದಾಡಿದ್ದೆ. ನನ್ನ ಜತೆಗಿದ್ದ ಜಾನ್ (ಚೀನಿಯರು ತಮ್ಮ ಹೆಸರನ್ನ ಬೇರೆಯವರು ಉಚ್ಚಾರಣೆ ಮಾಡಲು ಆಗದು ಎಂದು ತಿಳಿದಿದ್ದಾರೆ. ಹೀಗಾಗಿ ಪ್ರತಿಯೊಬ್ಬ ರೂ ಒಂದು ವೆಸ್ಟ್ರನ್ ಹೆಸರನ್ನ ಇಟ್ಟುಕೊಂಡಿರುತ್ತಾರೆ) ಕಡೆಯದಾಗಿ ಒಂದು ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋದ.
“ಇವರು ನನಗೆ ಪರಿಚಯ, ನಿನಗೆ ಬೇಕಾದ ಹಾಗೆ ಮಾಡಿಕೊಡುತ್ತಾರೆ" ಎನ್ನುವ ಅಭಯ ಬೇರೆ ಇತ್ತ. “ಹೆಚ್ಚೇನೂ ಬೇಡ. ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮೆಟೋವನ್ನ ಎಣ್ಣೆಯಲ್ಲಿ ಹುರಿದು ಅದಕ್ಕೆ ಒಂದಷ್ಟು ಉಪ್ಪು, ಮೆಣಸಿನಕಾಯಿ ಸೇರಿಸಿ ಅದರಲ್ಲಿ ಅನ್ನ ಬೆರೆಸಿ ಕೊಡಿ ಸಾಕು" ಎಂದೆ. ಸರಿ ಎಂದವರು ಹತ್ತು ನಿಮಿಷದಲ್ಲಿ ನನ್ನ ಮುಂದೆ ಬಿಸಿಬಿಸಿ ಹೊಗೆಯಾಡುವ ಅಂಟು ಅನ್ನವನ್ನ ತಂದಿಟ್ಟರು!
ಇದನ್ನೂ ಓದಿ: Rangaswamy Mookanahalli Column: ಈಜಿಪ್ಟನ್ನೂ ಕಾಡುತ್ತಿರುವ ಉಗ್ರವಾದದ ಧರ್ಮ ಯಾವುದು ?
ಆಸೆಯಿಂದ ತಿನ್ನಲು ಹೋದರೆ ಅದರಲ್ಲಿ ಮೊಟ್ಟೆ ಜತೆಗೆ ಒಂದಷ್ಟು ಸೀಫುಡ್ ಕಂಡವು. “ಇವೆಲ್ಲ ಬೇಡ" ಎಂದರೆ, “ಸರಿ ತೆಗೆದುಹಾಕಿ ತಿನ್ನು" ಎಂದರು. “ಸ್ವಾಮಿ ಇದು ಮಾತ್ರ ನನ್ನಿಂದ ಸಾಧ್ಯವಿಲ್ಲ ವೆಂದೆ". ಮತ್ತೆ ಬಂದರು. ಈ ಬಾರಿ ಸೀಫುಡ್ ಇರಲಿಲ್ಲ, ಮೊಟ್ಟೆ ಮಾತ್ರ ಇತ್ತು. “ಕ್ಷಮಿಸಿ ಬೇರೇನೂ ಬೇಡ. ಟೊಮೆಟೋ, ಈರುಳ್ಳಿ ಮತ್ತು ಆಲೂಗೆಡ್ಡೆ’ ಎಂದು ಒತ್ತಿ ಹೇಳಿದ ಮೇಲೆ ಸರಿಯೆಂದು ತಲೆಯಾಡಿಸಿ ಹೋದವರು, ನನ್ನ ಮುಂದೆ ತಂದಿಟ್ಟ ಬೌಲ್‌ನಲ್ಲಿ ನಾನು ಕೇಳಿದ್ದೇ ಇತ್ತು.
ಸಕತ್ ಖುಷಿಯಿಂದ ತಿನ್ನುವಷ್ಟರಲ್ಲಿ ಒಬ್ಬಾಕೆ ಬಂದು “ಒಂದು ನಿಮಿಷ" ಎಂದು ಹೇಳಿ ಬೌಲ್ ಮೇಲೆ ಏನನ್ನೋ ಉದುರಿಸಿದಳು. ಮರೆತುಹೋಗಿದ್ದೆ ಎನ್ನುವಂತೆ ಎರಡೆರಡು ಬಾರಿ “ಸಾರಿ" ಅಂದು ಬೇರೆ ಹೋದಳು. ನಾವು ಚಿತ್ರಾನ್ನದ ಮೇಲೆ ಒಂದಷ್ಟು ಕೊತ್ತಂಬರಿ ಹಾಕುವುದಿಲ್ಲವೇ? ಹಾಗೆ ಇದೇನೋ ಇರಬೇಕು ಅಂತ ನೋಡಿದರೆ ಹತ್ತದಿನೈದು ಸಣ್ಣ ಜಿರಳೆಗಳನ್ನ ಕರಿದು ಅದನ್ನ ನನ್ನ ಬೌಲ್‌ಗೆ ಹಾಕಿ ಹೋಗಿದ್ದಳು ಮಹಾಮಾತೆ!
ಇನ್ನು ಅವರ ಬಳಿ ಹೊಡೆದಾಡುವ ಶಕ್ತಿ ಇರಲಿಲ್ಲ, ಜತೆಗೆ ಹಸಿವು ಕೂಡ ‘ಬೇಡಪ್ಪ ನಿನ್ನ ಸಹವಾಸ’ ಅಂತ ಓಡಿಹೋಗಿತ್ತು. ಇದು ನನ್ನ ಚೀನಾದ ಪ್ರಥಮ ದಿನದ ಅನುಭವವಾಗಿತ್ತು. ಈ ಸ್ವಾನುಭವ ಹೇಳಲು ಕಾರಣ ಜಿರಳೆ. ನಿಮಗೆ ಗೊತ್ತೇ? ಚೀನಾದಲ್ಲಿ ಜಿರಳೆಯನ್ನ ಬೆಳೆಸುವುದು ಕೂಡ ಒಂದು ದೊಡ್ಡ ಉದ್ಯಮ.
ಇಲ್ಲಿ ಹೂಡಿಕೆ ಮಾಡಿದವರು ಕೋಟ್ಯಂತರ ಹಣ ಮಾಡಿಕೊಳ್ಳುತ್ತಿದ್ದಾರೆ. ವರ್ಷದಲ್ಲಿ 600 ಕೋಟಿಗೂ ಹೆಚ್ಚಿನ ಜಿರಳೆಗಳನ್ನ ಇಲ್ಲಿ ಸಾಕಲಾಗುತ್ತದೆ. ಚೀನಿಯರು ಜಗತ್ತಿನಲ್ಲಿ ಆಹಾರವನ್ನ ಬಿಸಾಡುವುದರಲ್ಲಿ ಕೂಡ ಎತ್ತಿದ ಕೈ. ಇಂಥ ಆಹಾರವನ್ನ ಬಿಸಾಡುವುದು ದೊಡ್ಡ ಸಮಸ್ಯೆ. ಇದಕ್ಕಾಗಿ ಈ ಜಿರಲೆಗಳನ್ನ ಸಾಕುತ್ತಾರೆ. ಅವು ಇಂಥ ವೇ ಆಹಾರ ತಿಂದು ಬೆಳೆದ ಮೇಲೆ ಅವನ್ನ ಇವರು ಹಲವಾರು ಬಳಕೆಗೆ ಬಳಸುತ್ತಾರೆ.
ಇದನ್ನ ಔಷಧ ತಯಾರಿಕೆಯಲ್ಲಿ, ರೆಸ್ಟೋರೆಂಟ್‌ಗಳಲ್ಲಿ ತಿನ್ನುವುದಕ್ಕೆ ಉಪಯೋಗಿಸುತ್ತಾರೆ. ಟೂತ್ ಪೇಸ್ಟ್ ನಲ್ಲಿ ಕೂಡ ಜಿರಳೆಯನ್ನ ಬಳಸುತ್ತಾರೆ. ಹೀಗೆ ಇದೊಂದು ದೊಡ್ಡ ಉದ್ಯಮ. ಜಗತ್ತಿನ ಬಹುತೇಕ ದೇಶದ ಜನರು ಅಸಹ್ಯಪಟ್ಟುಕೊಳ್ಳುವ ಜಿರಳೆಯನ್ನ ಕೂಡ ಆಸ್ವಾದಿಸಿ ತಿನ್ನುವ ಜನರಿವರು.
ಸ್ಪೇನ್‌ನಲ್ಲಿ ಕಪ್ಪೆ, ಹಾವು, ಶಂಖದ ಹುಳ ತಿನ್ನುವುದು ಕಾಮನ್. ಇದರ ಜತೆಗೆ ಹಂದಿ, ಕುರಿ, ಹಸು ಕೂಡ ತೀರಾ ಸಾಮಾನ್ಯ. ಕುದುರೆ ಮಾಂಸ, ಮೊಲದ ಮಾಂಸ ಕೂಡ ತಿನ್ನುತ್ತಾರೆ. ಕುದುರೆ ಮಾಂಸ ಎಡೆ ಸಿಗುವುದಿಲ್ಲ, ಅದನ್ನ ಮಾಡುವ ವಿಶೇಷ ರೆಸ್ಟೋರೆಂಟ್‌ಗಳಿವೆ. ಜನರು ಇಂಥ ರೆಸ್ಟೋರೆಂಟ್ ಗಳಿಗೆ ಬಯಸಿ ಹೋಗಿ ತಿನ್ನುತ್ತಾರೆ.
ಹೀಗೆ ತರಹೇವರಿ ಪ್ರಾಣಿಗಳನ್ನ ತಿನ್ನುವುದು ಇಲ್ಲಿ ಮಾಮೂಲು. ಆದರೆ ಇಲ್ಲಿನ ಜನ ನಾಯಿ ಮತ್ತು ಬೆಕ್ಕನ್ನ ತಿನ್ನುವುದಿಲ್ಲ. ಅವರೆಡೂ ಪ್ರಾಣಿಗಳನ್ನ ‘ಡೊಮೆಸ್ಟಿಕ್ ಪೆಟ್’ ಅಥವಾ ಸಾಕುಪ್ರಾಣಿಯ ನ್ನಾಗಿ ಸಾಕುತ್ತಿರುವುದರ ಫಲಿತಾಂಶವಿರಬಹುದು. ನನಗೆ ತೀರಾ ಅಚ್ಚರಿ ಅನ್ನಿಸಿದ್ದು ಮಾತ್ರ ನಾವು ಬಸವನ ಹುಳು ಅಥವಾ ಶಂಖದ ಹುಳು ಎನ್ನುವ, ನೆಲದಲ್ಲಿ ತೆವಳುವ ಈ ಪುಟಾಣಿ ಜೀವಿಯನ್ನ, ನಾವು ಹಸಿ ಕಡಲೆಕಾಯಿಯನ್ನ ಉಪ್ಪಿನಲ್ಲಿ ಹಾಕಿ ಬೇಯಿಸಿ ಚಪ್ಪರಿಸಿ ತಿನ್ನುವುದಿಲ್ಲವೇ, ಥೇಟ್ ಅದೇ ರೀತಿ ತಿನ್ನುತ್ತಾರೆ.
ಕೆಲವರು ಬಾಯಿ ಹಾಕಿ ಶಂಖದ ಒಳಗಿರುವ ಜೀವಿಯನ್ನ ಹೀರಿ ಚಪ್ಪರಿಸಿದರೆ ಕೆಲವರು ಅದಕ್ಕೆಂದೇ ಇಟ್ಟಿರುವ ಸಣ್ಣ ಕಡ್ಡಿಯನ್ನ ಶಂಖದಲ್ಲಿ ತೂರಿಸಿ, ಬೆಂದ ಆ ಜೀವವನ್ನೆ ಹೆಕ್ಕಿ ತಿನ್ನುತ್ತಾ ಜತೆಗೆ ತಮ್ಮಿಷ್ಟದ ಬಿಯರ್ ಕುಡಿಯುತ್ತಾರೆ. ಸಾಮಾನ್ಯವಾಗಿ ಈ ರೀತಿ ಬೇಯಿಸಿದ ಶಂಖದ ಹುಳುಗಳು ಸಾಯಂಕಾಲದ ಸ್ನ್ಯಾಕ್ಸ್!
ಬಹಳಷ್ಟು ದೇಶಗಳನ್ನು ಸುತ್ತಿದ ನನಗೆ ಅತ್ಯಂತ ಆಶ್ಚರ್ಯವಾಗುವುದು, ನಾವು ಯಾವುದನ್ನ ‘ಥು’ ಎಂದು ಅಸಹ್ಯಪಡುತ್ತೇವೋ, ಅಂಥವುಗಳನ್ನ ಕೂಡ ಜಗತ್ತಿನ ಯಾವುದೋ ಮೂಲೆಯಲ್ಲಿ ಜನ ಚಪ್ಪರಿಸಿ ತಿನ್ನುತ್ತಿರುತ್ತಾರೆ ಎನ್ನುವುದು. ಹುಡುಗನಾಗಿದ್ದಾಗ ನಮ್ಮ ಊರಿಗೆ ಬರುತಿದ್ದ ಶಿಳ್ಳೆಕ್ಯಾತರು ಎನ್ನುವವರು ಬೆಕ್ಕನ್ನ ಹಿಡಿದು ಬಡಿದು ತಿನ್ನುತ್ತಿದ್ದರು.
ಇದೆ ಶಿಳ್ಳೆಕ್ಯಾತರು ಇಲಿಯನ್ನು ಕೂಡ ತಿನ್ನುವುದನ್ನು ಕಂಡಿದ್ದೇನೆ. ಇವರು ಊರಿಗೆ ಬಂದರು ಎನ್ನುವುದು ಆ ಬೆಕ್ಕುಗಳಿಗೆ ಹೇಗೆ ತಿಳಿಯುತ್ತಿತ್ತು? ಎನ್ನುವುದು ಇಂದಿಗೂ ಯಕ್ಷಪ್ರಶ್ನೆ. ಬೀಡಾಡಿ ಬೆಕ್ಕುಗಳು ಇವರ ಮೊದಲ ಟಾರ್ಗೆಟ್.
ಒಟ್ಟಿನಲ್ಲಿ ಒಮ್ಮೆ ಊರಿಗೆ ಬಂದರು ಎಂದರೆ ಸಾಕು ಕನಿಷ್ಠ ಡಜನ್ ಬೆಕ್ಕುಗಳನ್ನ ಹಿಡಿದು ಮೂಟೆ ಯಲ್ಲಿ ಕಟ್ಟಿಕೊಳ್ಳದೆ ಹೋಗುತ್ತಿರಲಿಲ್ಲ. ನೆಲದಲ್ಲಿ ಯಾವುದಾದರೊಂದು ಬಿಲವನ್ನ ನೋಡಿ ಅದಕ್ಕೆ ಸಾಕಷ್ಟು ಒಣ ಹುಲ್ಲನ್ನ ತುಂಬಿ ಅದಕ್ಕೆ ಬೆಂಕಿ ಹಚ್ಚುತ್ತಿದ್ದರು.
ಸ್ವಲ್ಪ ದೂರದಲ್ಲಿ ಇರುತ್ತಿದ್ದ ಇನ್ನೊಂದು ಬಿಲವನ್ನ ಕೂಡ ಹೀಗೆ ಮಾಡಿ ಮುಚ್ಚುತ್ತಿದ್ದರು. ಹದಿನೈದು ನಿಮಿಷದಲ್ಲಿ ನೆಲವನ್ನ ಅಗೆದು ಹತ್ತಾರು ಇಲಿಗಳನ್ನ ಕೂಡ ತೆಗೆಯುತ್ತಿದ್ದರು. ಎಲ್ಲವು ಗಳ ಬಾಲವನ್ನ ಕಟ್ಟಿ ಒಂದು ಚೀಲಕ್ಕೆ ಹಾಕಿಕೊಂಡು ಏನೂ ಆಗಿಲ್ಲವೇನೂ ಎನ್ನುವಂತೆ ಹೋಗುತ್ತಿದ್ದರು.
ಇನ್ನು ಚೀನಿಯರು, ಕೊರಿಯನ್ನರು, ನಾವು ಹನುಮಾನ್ ಎಂದು ಪೂಜಿಸುವ ಕೋತಿಯನ್ನ ಕೂಡ ಬಿಡುವುದಿಲ್ಲ. ಹಸಿರಕ್ತ ಕುಡಿಯುವ ಜನರನ್ನ ನಾನು ಬಹಳಷ್ಟು ನೋಡಿದ್ದೇನೆ. ಪ್ರಾಣಿವಧೆಯ ಸಮಯದಲ್ಲಿ ಸೋರುವ ರಕ್ತವನ್ನ ಹಿಡಿದು ನಂತರ ಅದನ್ನ ಪ್ರತ್ಯೇಕವಾಗಿ ಮಾರುತ್ತಾರೆ. ಜತೆಗೆ ಹಲವರು ಈ ರಕ್ತವನ್ನ ಎಣ್ಣೆಯಲ್ಲಿ ಕರಿದು ಕೂಡ ಸೇವಿಸುತ್ತಾರೆ.
ಜಪಾನಿನಲ್ಲಿ ಸಸ್ಯಾಹಾರಿಗಳಿಗೆ ಬಹಳ ಕಷ್ಟ. ಎಡೆ ಮಾಂಸಾಹಾರದ್ದೇ ಸಾಮ್ರಾಜ್ಯ. ‘ವೆಜ್ ರಾಮೆನ್’ಗೆ ಅಲೆದಾಡಿದ್ದು ಇನ್ನೂ ನೆನಪಲ್ಲಿ ಅಚ್ಚಳಿಯದೆ ಉಳಿದಿದೆ. ಇತ್ತೀಚಿನ ಈಜಿಪ್ಟ್ ಪ್ರವಾಸ ದಲ್ಲಿ ಹೇಳಿಕೊಳ್ಳುವಂಥ ಸಮಸ್ಯೆಯಾಗಲಿಲ್ಲ. ಇಲ್ಲಿನ ರಾಷ್ಟೀಯ ಖಾದ್ಯ ಕೋಶಾರಿ. ಇದರಲ್ಲಿ ಒಂದಷ್ಟು ಶಾವಿಗೆ, ಅನ್ನ, ಕಾಬೂಲ್ ಕಡಲೆ, ಬೇಳೆ ಜತೆಗೆ ಹುರಿದ ಈರುಳ್ಳಿ, ಟೊಮೇಟೊ ಸಾಸ್ ಕೊಡುತ್ತಾರೆ.
ಖಾರಕ್ಕೆ ಬೆಳ್ಳುಳ್ಳಿ, ನಿಂಬೆ ಮತ್ತು ಮೆಣಸಿನಕಾಯಿ ಹಾಕಿ ರುಬ್ಬಿ ದ್ರವ ರೂಪದಲ್ಲಿ ನೀಡುತ್ತಾರೆ. ಇದರ ಬೆಲೆ ಬಹಳ ಕಡಿಮೆ. ನಮ್ಮ ದರ್ಶಿನಿಯಂಥ ಹೋಟೆಲುಗಳಲ್ಲಿ ತಿಂದರೆ ಭಾರತೀಯ 70 ಅಥವಾ 100 ರುಪಾಯಿಗೆ ಒಂದು ಪ್ಲೇಟು ಸಿಗುತ್ತದೆ. ಇದನ್ನು ಪೂರ್ಣ ಈಜಿಪ್ಟ್ ದೇಶ ಬೆಳಗಿನ ಉಪಾಹಾರಕ್ಕೆ ತಿನ್ನುತ್ತದೆ.
ಹೀಗಾಗಿ ಬೆಲೆ ಬಹಳ ಕಡಿಮೆ. ಜತೆಗೆ ಇದು ಸ್ಟ್ರೀಟ್ ಫುಡ್ ಆಗಿ ಕೂಡ ಪ್ರಸಿದ್ಧಿ ಹೊಂದಿದೆ. ಕೋಶಾರಿ ಎನ್ನುವುದು ಭಾರತೀಯರ ಕಿಚಡಿ ಆಹಾರದ ಇನ್ನೊಂದು ರೂಪ. ಬ್ರಿಟಿಷ್ ಕಾಲದಲ್ಲಿ ಇದು ಭಾರತದಿಂದ ಹೋದ ಸೈನಿಕರು ಈಜಿಪ್ಟಿನವರಿಗೆ ಕಲಿಸಿದರು ಎನ್ನುವ ಮಾತು ಶುದ್ಧ ಸುಳ್ಳು. ಬ್ರಿಟಿಷರು ಭಾರತಕ್ಕೂ, ಈಜಿಪ್ಟಿಗೂ ಕಾಲಿಡುವ ಮುಂಚೆಯಿಂದ ಈ ಆಹಾರ ಇದ್ದದ್ದಕ್ಕೆ ಪಕ್ಕಾ ಪುರಾವೆಗಳಿವೆ. ಹೀಗಾಗಿ ಕೋಶಾರಿ ಎನ್ನುವುದು ಈಜಿಪ್ಷಿಯನ್ನರ ಆಹಾರ. ಅದು ಭಾರತೀಯ ಕಿಚಡಿಯಿಂದ ಉದ್ಭವವಾದದ್ದಲ್ಲ. ಇನ್ನೊಂದು ಖಾದ್ಯ ಎಲ್ಲಾ ಅರೇಬಿಕ್ ದೇಶಗಳಲ್ಲೂ ಸಿಗುವುದು ಮತ್ತು ಸಸ್ಯಾಹಾರಿಗಳಿಗೆ ವರದಾನವಾಗಿರುವುದು ಫಾಲಫಲ್!
ಅರೇಬಿಕ್ ಬ್ರೆಡ್ ಮಧ್ಯದಲ್ಲಿ ಸಲಾಡ್ ಜತೆಗೆ ನಮ್ಮ ಆಂಬೊಡೆಯನ್ನು ಇಟ್ಟುಕೊಡುತ್ತಾರೆ. ನೆಮ್ಮದಿಯಾಗಿ ತಿನ್ನಬಹುದು. ಅದನ್ನು ಯಾವ ಎಣ್ಣೆಯಲ್ಲಿ ಕರಿದಿದ್ದರು? ಮಾಂಸವನ್ನು ಕರಿದ ಎಣ್ಣೆಯಲ್ಲಿ ಅದನ್ನೂ ಕರಿದಿರುತ್ತಾರೆ ಅಲ್ಲವೇ? ಇಂಥ ಪ್ರಶ್ನೆಗಳನ್ನು ಹಾಕಿಕೊಂಡವರಿಗೆ ಹಣ್ಣು ಮತ್ತು ಮೊಸರು ಮಾತ್ರ ಕಾಯಂ ಆಹಾರವಾಗುತ್ತೆ ಅಷ್ಟೇ!
ದಕ್ಷಿಣ ಅಮೆರಿಕ ದೇಶಗಳಲ್ಲಿ ಸಸ್ಯಾಹಾರಿ ಎಂದರೆ ವಿಚಿತ್ರವಾಗಿ ನೋಡುತ್ತಾರೆ. ‘ಹಸುಗಳು ಮಾತ್ರ ತಿನ್ನುವುದು ಅದನ್ನು’ ಎಂದು ಕಿಚಾಯಿಸುತ್ತಾರೆ. ಮಾಂಸದ ಖಾದ್ಯಗಳ ನಡುವೆ ಅಂದು ಇಂದು ಆಲೂಗೆಡ್ಡೆ, ಕ್ಯಾರೆಟ್ ಇತ್ಯಾದಿ ಕಾಣಬಹುದು. ಉಳಿದಂತೆ ಕೇವಲ ತರಕಾರಿಯನ್ನು ಬಳಸಿ ಮಾಡುವ ಖಾದ್ಯಗಳು ಪ್ರವಾಸಿಗರಿಗೆ ಸಿಕ್ಕುವುದು ಬಹಳ ಕಡಿಮೆ.
ಎಂಪಾನದ ಎನ್ನುವ ಖಾದ್ಯ ಥೇಟ್ ನಮ್ಮ ಸಮೋಸವನ್ನು ಹೋಲುತ್ತದೆ. ಕೆಲವು ಬಾರಿ ಅದನ್ನು ಆಲೂಗೆಡ್ಡೆ, ಈರುಳ್ಳಿ ಬಳಸಿ ಮಾಡಿರುತ್ತಾರೆ. ಆದರೆ ಬಹುತೇಕ ಇದು ಕೂಡ ಮಾಂಸಾಹಾರವೇ ಆಗಿರುತ್ತದೆ. ಹೀಗಾಗಿ ಪ್ರವಾಸಿಗರಿಗೆ ಇಲ್ಲಿ ಸಿಗುವುದು ಅನ್ನ ಮತ್ತು ಬೇಯಿಸಿದ ಬೇಳೆ ಮಾತ್ರ. ಸಾಮಾನ್ಯವಾಗಿ ಈ ಬೇಳೆ-ಕಾಳುಗಳನ್ನು ಕೂಡ ಮಾಂಸದ ಜತೆ ಬೆರೆಸುತ್ತಾರೆ.
ಹೀಗಾಗಿ ‘ನೋ ಕಾರ್ನೆ ಪರ್ ಫಾರ್ವೊ’ ಅಂದರೆ ಮಾಂಸ ಬೇಡ ಎನ್ನುವುದು ಹೇಳಲೇಬೇಕಿರುವ ಪದ. ಅಂದಹಾಗೆ ಈಜಿಪ್ಟಿನಲ್ಲಿ ಕೋಶಾರಿ ಇದ್ದ ಹಾಗೆ ಬೊಲಿವಿಯಾದಲ್ಲಿ ‘ರಂಗ’ ಎನ್ನುವ ಖಾದ್ಯ ಪ್ರಸಿದ್ಧ. ಹಸುವಿನ ಹೊಟ್ಟೆಯ ಭಾಗದ ಮಾಂಸ, ಆಲೂಗೆಡ್ಡೆ, ಈರುಳ್ಳಿ ಮತ್ತು ಮೆಣಸಿನಕಾಯಿ, ಉಪ್ಪು ಸೇರಿಸಿ ಮಾಡುವ ಖಾದ್ಯವಿದು. ಇದರ ಜತೆಗೆ ಟೊಮೆಟೊ ಮತ್ತು ಈರುಳ್ಳಿ ಸಲಾಡ್ ಕೂಡ ಕೊಡುತ್ತಾರೆ! ‘ರಂಗ’ ತಿನ್ನಲಾಗದ ನನಗೆ ಈರುಳ್ಳಿ ಮತ್ತು ಟೊಮೊಟೊ ಸಲಾಡ್ ಗತಿಯಾಗಿತ್ತು.
ಒಂದೇ ಭೂಮಿ, ಒಂದೇ ಭೂಮಿ, ನಮ್ಮಲ್ಲಿ ಅದೆಷ್ಟು ಸಾಮ್ಯತೆಗಳಿವೆ ಎಂದು ಅಚ್ಚರಿ ಪಡುವ ನನಗೆ, ಆಹಾರದಲ್ಲಿ, ಬದುಕುವ ರೀತಿಯಲ್ಲಿ ಅಷ್ಟೇ ವ್ಯತ್ಯಾಸಗಳೂ, ಅಂತರವೂ ಇದೆ ಎನ್ನುವುದು ಕೂಡ ಸದಾ ಅಚ್ಚರಿಯ ಅಂಶಗಳಂದು!