ತುಮಕೂರು ವಿಭಾಗದಲ್ಲಿ 97 ಸಾವಿರ ಕಟ್ಟಡ ಕಾರ್ಮಿಕರು !
ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಇ-ಶ್ರಮ್ ಯೋಜನೆಯಡಿ 4,29,641 ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಯಡಿ 11,463, ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಯಡಿ 3311,
-
ರಂಗನಾಥ ಕೆ. ಹೊನ್ನಮರಡಿ
ತುಮಕೂರು ವಿಭಾಗದಲ್ಲಿ 97 ಸಾವಿರ ಕಟ್ಟಡ ಕಾರ್ಮಿಕರು
ಸರಕಾರದಿಂದ ಕಾರ್ಮಿಕರಿಗೆ 2.39 ಕೋಟಿ ರು. ನೆರವು
ಇ-ಶ್ರಮ್ ಯೋಜನೆಯಡಿ ದಾಖಲು
ತುಮಕೂರು: ಕಾರ್ಮಿಕ ಇಲಾಖೆಯ ಮಾರ್ಚ್-2026ರ ಅಂತ್ಯದ ಅಂಕಿ-ಅಂಶಗಳ ಪ್ರಕಾರ, ತುಮಕೂರು ವಿಭಾಗದಲ್ಲಿ 97,051 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಾಯಿಸಿ ಕೊಂಡಿದ್ದಾರೆ. 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ʼವರಿಗೆ 3887 ಹೊಸ ಕಾರ್ಮಿಕರು ನೋಂದಣಿಯಾಗಿದ್ದಾರೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಿವಿಧ ಯೋಜನೆಗಳಡಿ 440 ಕಾರ್ಮಿಕರಿಗೆ ಒಟ್ಟು 2,39,12,130 (2.39 ಕೋಟಿ ರು.) ಆರ್ಥಿಕ ನೆರವು ವಿತರಿಸಲಾಗಿದೆ.
ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಇ-ಶ್ರಮ್ ಯೋಜನೆಯಡಿ
4,29,641 ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 11,463, ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಯಡಿ 3311, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಯಡಿ 8952 ಹಾಗೂ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ 126 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: Tumkur News: ಪ್ರೇಯಸಿಯ ಜತೆ ಗಲಾಟೆ; ಕಾರಿನಲ್ಲೇ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ!
ಬಾಲ ಕಾರ್ಮಿಕರ ವಿರುದ್ಧ ಕ್ರಮ: ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ರಡಿ ಏಪ್ರಿಲ್-2023ರಿಂದ ಮಾರ್ಚ್-2026ರವರೆಗೆ ಜಿಲ್ಲೆಯಲ್ಲಿ 932 ಸ್ಥಳಗಳಲ್ಲಿ ತಪಾಸಣೆ ನಡೆಸ ಲಾಗಿದೆ. ಈ ವೇಳೆ 15 ಬಾಲ/ಕಿಶೋರ್ ಕಾರ್ಮಿಕರನ್ನು ಗುರುತಿಸಿದ್ದು, ಅವರಲ್ಲಿ 7 ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಲಾಗಿದೆ ಹಾಗೂ 13 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. ನಿಯಮ ಉಲ್ಲಂಘಿಸಿದ ಮಾಲೀಕರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ.
440 ಕಾರ್ಮಿಕರಿಗೆ 2.39 ಕೋಟಿ ರು. ಸೌಲಭ್ಯ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಒಟ್ಟು 440 ಕಾರ್ಮಿಕರಿಗೆ 2,39,12,130 ರು. ಮೌಲ್ಯದ ಸವಲತ್ತುಗಳನ್ನು ವಿತರಿಸಲಾಗಿದೆ. 353 ಕಾರ್ಮಿಕರಿಗೆ ಮದುವೆ ಧನಸಹಾಯ, 9 ಮಂದಿಗೆ ವೈದ್ಯಕೀಯ ವೆಚ್ಚ, 68 ಮಂದಿಗೆ ಪ್ರಮುಖ ವೈದ್ಯಕೀಯ ಚಿಕಿತ್ಸೆ ಹಾಗೂ 10 ಮಹಿಳೆಯರಿಗೆ ಹೆರಿಗೆ ಧನಸಹಾಯ ನೀಡಲಾಗಿದೆ.
ನಕಲಿ ಕಾರ್ಮಿಕರ ವಿರುದ್ಧ ಕ್ರಮಕ್ಕೆ ಒತ್ತಾಯ ಜಿಲ್ಲೆಯಲ್ಲಿ ನಕಲಿ ಕಾರ್ಮಿಕರ ಗುರುತಿನ ಚೀಟಿ ಪಡೆದು ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಅರ್ಹ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ನಕಲಿ ಕಾರ್ಮಿಕರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ಕಾರ್ಮಿಕ ಇಲಾಖೆ ವಿಫಲವಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿದ್ದು, ಸಮಗ್ರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದೆ.