ಅಶ್ವತ್ಥಕಟ್ಟೆ
ಕೆಲ ದಶಕದ ಹಿಂದೆ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡರೆ ಚುನಾವಣೆಯಲ್ಲಿ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಅನೇಕ ಪ್ರಾದೇಶಿಕ ಹಾಗೂ ಸಣ್ಣ ಪಕ್ಷ ಗಳಿದ್ದವು. ಆದರೆ ಕಾಂಗ್ರೆಸ್‌ನ ಇತ್ತೀಚಿನ ಪ್ರದರ್ಶನವನ್ನು ನೋಡಿದರೆ, ಯಾವುದೇ ಮೈತ್ರಿಪಕ್ಷಕ್ಕೆ ಕಾಂಗ್ರೆಸ್ ‘ಸಹಕಾರಿ’ಯಾಗುವುದಕ್ಕಿಂತ ಹೆಚ್ಚಾಗಿ ‘ಹೊರೆ’ಯಾಗು ತ್ತದೆ ಎನ್ನುವುದು ಸ್ಪಷ್ಟ.
ದೇಶದ ರಾಜಕೀಯ ಚಿತ್ರಣದಲ್ಲಿ ಅತ್ಯಂತ ಪ್ರಮುಖ ಎನಿಸಿದ್ದ ಬಿಹಾರ ವಿಧಾನಸಭಾ ಚುನಾವಣೆ ಕಳೆದ ವಾರ ಮುಗಿದಿದೆ. ಲೋಕಸಭಾ ಚುನಾವಣೆಯ ಬಳಿಕ ‘ರಾಜಕೀಯ’ವಾಗಿ ತೀವ್ರ ಆಯಕಟ್ಟಿನ ರಾಜ್ಯ ಎನಿಸಿದ್ದ ಬಿಹಾರ ಚುನಾವಣೆಯ ಮೂಲಕ ಎನ್‌ಡಿಎ ಮತ್ತೊಮ್ಮೆ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಒಂದೊಮ್ಮೆ ತಾನು ಸೋತರೂ ಅದು ‘ಗೌರವ’ಯುತ ಸೋಲು ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನ ಮೈತ್ರಿಗೆ ಬಿಹಾರಿ ಮತದಾರರು ನೀಡಿರುವ ಮತಗಳು ಮರ್ಮಾಘಾತ ವನ್ನು ಉಂಟು ಮಾಡಿದೆ ಎಂದರೆ ತಪ್ಪಾಗುವುದಿಲ್ಲ.
2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟ್ಟಿ ಹಾಕಲು ಒಂದಾದ ‘ಇಂಡಿಯಾ’ ಮೈತ್ರಿಕೂಟವು ತಕ್ಕಮಟ್ಟಿಗೆ ಯಶಸ್ಸು ಕಂಡಿತ್ತು. ಈ ಹಿಂದಿನ ಎರಡು ಲೋಕಸಭಾ ಚುನಾವಣೆಗೆ ಹೋಲಿಸಿದಾಗ, 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಮ್ಯಾಜಿಕ್ ನಂಬರ್ ದಾಟಲಿಲ್ಲ.
ಆದರೆ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸಲೀಸಾಗಿ ಅಧಿಕಾರದ ಗದ್ದುಗೆಗೆ ಮೋದಿ ಏರಿದ್ದು ಸುಳ್ಳಲ್ಲ. ಆದರೆ 2019ರ ಚುನಾವಣೆಗೆ ಹೋಲಿಸಿದರೆ 2024ರ ಚುನಾವಣೆಯು ಬಿಜೆಪಿ ಪಾಲಿಗೆ ‘ಲ್ಯಾಂಡ್‌ಸ್ಲೈಡ್ ವಿಕ್ಟರಿ’ ಆಗಿರಲಿಲ್ಲ.
ಮತ್ತೊಂದೆಡೆ, ಈ ಹಿಂದಿನ ಎರಡು ಅವಧಿಯಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನ ಪಡೆಯಲು ವಿಫಲವಾಗಿದ್ದ ಕಾಂಗ್ರೆಸ್ 2019ರ ಚುನಾವಣೆಗೆ ಹೋಲಿಸಿದರೆ ಹೆಚ್ಚುವರಿ ೪೭ ಸೀಟು ಗಳನ್ನು ಗೆಲ್ಲುವ ಮೂಲಕ ೯೯ ಸ್ಥಾನಕ್ಕೆ ಏರಿತ್ತು. ಅದೇ ಬಿಜೆಪಿ ೧೯ರಲ್ಲಿ 303 ಸ್ಥಾನ ದೊಂದಿಗೆ ಮುನ್ನೂರರ ಗಡಿ ದಾಟಿತ್ತು. ಆದರೆ 2024ರ ಚುನಾವಣೆಯಲ್ಲಿ ೬೩ ಸ್ಥಾನ ಗಳನ್ನು ಕಳೆದುಕೊಂಡು 240 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಇದನ್ನೂ ಓದಿ: Ranjith H Ashwath Column: ಆರಂಭ-ಅಂತ್ಯವಿಲ್ಲದ ಜೈಲಿನ ರಾಜಾತಿಥ್ಯ
ಶೇಕಡಾವಾರು ಮತಗಳಿಕೆ ವಿಷಯದಲ್ಲಿ ಬಹುದೊಡ್ಡ ವ್ಯತ್ಯಾಸವಿರದಿದ್ದರೂ, ಸೀಟು ಗಳಿಕೆಯಲ್ಲಿ ಕಾಂಗ್ರೆಸ್‌ನ ಸಾಧನೆಯು ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಪಾಳಯ ದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಪಕ್ಷಗಳಿಗೆ ಭರವಸೆಯನ್ನು ಹುಟ್ಟಿಸಿತ್ತು, 2029ರ ಲೋಕಸಭಾ ಚುನಾವಣೆಯು ‘ಆಶಾದಾಯಕ’ವಾಗಿ ಕಾಣಿಸಲು ಶುರುವಾಗಿತ್ತು.
ಆದರೆ ಲೋಕಸಭಾ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್, ಅದೇ ಸಮಯ ದಲ್ಲಿ ನಡೆದ ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ, ಸಿಕ್ಕಿಂ ವಿಧಾನಸಭಾ ಚುನಾವಣೆಗಳಲ್ಲಿನ ಹಿನ್ನಡೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ; ಈ ನಾಲ್ಕು ರಾಜ್ಯಗಳ ಪೈಕಿ ಆಂಧ್ರಪ್ರದೇಶದಲ್ಲಿ ಎನ್‌ಡಿಎ ಮೈತ್ರಿಪಕ್ಷವು ಅಧಿಕಾರದ ಗದ್ದುಗೆ ಹಿಡಿದರೆ, ಒಡಿಶಾ ಹಾಗೂ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು.
ಅದಾದ ಬಳಿಕ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೪೮ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆಯನ್ನು ಏರಿತ್ತು. ಜಾರ್ಖಂಡ್‌ನಲ್ಲಿ ಜೆಎಂಎಂ ಪಕ್ಷವು ಕಾಂಗ್ರೆಸ್ ಸೇರಿದಂತೆ ಮಿತ್ರಪಕ್ಷಗಳ ಸಹಾಯದೊಂದಿಗೆ ಅಧಿಕಾರದ ಗದ್ದುಗೆಯನ್ನು ಹಿಡಿದಿದೆ.
ಈ ರಾಜ್ಯಗಳನ್ನು ಹೊರತುಪಡಿಸಿದರೆ ರಾಷ್ಟ್ರ ರಾಜಧಾನಿ, ಕೇಂದ್ರಾಡಳಿತ ಪ್ರದೇಶ ವಾಗಿರುವ ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಒಂದು ದಶಕಗಳ ಕಾಲ ಭಾರಿ ಬಹುಮತದೊಂದಿಗೆ ಅಧಿಕಾರ ನಡೆಸಿದ್ದ ‘ಆಮ್ ಆದ್ಮಿ ಪಾರ್ಟಿ’ಗೆ (ಆಪ್) ಪರ್ಯಾಯ ವಾಗಿ ಬಿಜೆಪಿ ಕಾಣಿಸಿದೆ. 2024ರ ಚುನಾವಣೆಯಲ್ಲಿ ೭೦ ಕ್ಷೇತ್ರಗಳಲ್ಲಿ ೪೮ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ೨೨ ಕ್ಷೇತ್ರಕ್ಕೆ ‘ಆಪ್’ ಕುಸಿದಿತ್ತು. ಈ ಮೂಲಕ ಕಾಂಗ್ರೆಸ್ ದೆಹಲಿಯಲ್ಲಿ ಶೂನ್ಯ ಸಾಧನೆಯನ್ನು ಮಾಡಿದೆ. ಹಾಗೆ ನೋಡಿದರೆ, ದೆಹಲಿ ಮಾತ್ರವಲ್ಲದೇ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ, ನಾಗಾಲ್ಯಾಂಡ್ ಗಳಲ್ಲಿ ಕಾಂಗ್ರೆಸ್ ಶಾಸಕರ ಪ್ರಾತಿ ನಿಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮುಂದುವರಿದ ಭಾಗವಾಗಿ ಕಳೆದ ವಾರ ಪ್ರಕಟವಾದ ಬಿಹಾರ ಚುನಾವಣಾ ಫಲಿತಾಂಶದಲ್ಲಿ ಒಂದಂಕಿಗೆ ಸೀಮಿತ ವಾಗುವ ಮೂಲಕ ಕಾಂಗ್ರೆಸ್ ಮತ್ತಷ್ಟು ಕುಸಿದಿದೆ ಎಂದರೆ ತಪ್ಪಾಗುವು ದಿಲ್ಲ. ಈ ಮೂಲಕ ದೇಶಾದ್ಯಂತ 4092 ಶಾಸಕರ ಪೈಕಿ ಕಾಂಗ್ರೆಸ್ 646 ಶಾಸಕರ ಬಲವನ್ನು ಹೊಂದಿದೆ. ಅದರಲ್ಲಿ ಕರ್ನಾಟಕದಲ್ಲಿಯೇ 136ರಷ್ಟು ಸಂಖ್ಯಾಬಲ ವಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಹಾಗೆ ನೋಡಿದರೆ, ಮೊದಲೇ ಹೇಳಿದಂತೆ ಲೋಕಸಭಾ ಚುನಾವಣೆಯಲ್ಲಿ ಸಂಸದರ ಸಂಖ್ಯೆಯನ್ನು ಏರಿಸಿಕೊಂಡ ಬಳಿಕ ಹಲವು ನಾಯಕರಿಗೆ ಮುಂದಿನ ದಿನದಲ್ಲಿ ಬಿಜೆಪಿ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಅದಾದ ಬಳಿಕ ನಡೆದ ಬಹುತೇಕ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ತಾನು ಮೆರೆದ ನೀರಸ ಸಾಧನೆ ಕಾಂಗ್ರೆಸ್‌ನ ಆತಂಕಕ್ಕೆ ಕಾರಣವಾಗಿದೆ.
ಸ್ವಾತಂತ್ರ್ಯಪೂರ್ವ ಪಕ್ಷವಾಗಿರುವ ಕಾಂಗ್ರೆಸ್‌ಗೆ ಈಗಲೂ ಕಾರ್ಯಕರ್ತರ ಕೊರತೆಯಿಲ್ಲ. ರಾಹುಲ್ ಗಾಂಧಿ ಎಲ್ಲಿಯೇ ಹೋದರೂ ಸೇರುವ ಜನರ ಸಂಖ್ಯೆಗೇನು ಕಡಿಮೆಯಿಲ್ಲ. ಕೇಂದ್ರ ಬಿಜೆಪಿ ವಿರುದ್ಧ ದಿನಕ್ಕೊಂದು ಆರೋಪವನ್ನು ಸುದ್ದಿಗೋಷ್ಠಿಯಲ್ಲಿ ಮಾಡಿ ಕೊಂಡೇ ಬರಲಾಗುತ್ತಿದೆ. ಇಷ್ಟೆಲ್ಲ ಆದರೂ ಮತಗಳಿಕೆ ವಿಷಯದಲ್ಲಿ ಮಾತ್ರ ಪಕ್ಷವು ಸುಧಾರಣೆ ಕಾಣದಿರುವುದು ಕಾಂಗ್ರೆಸ್‌ನ ಥಿಂಕ್ ಟ್ಯಾಂಕ್‌ಗೆ ಬಹುದೊಡ್ಡ ಸಮಸ್ಯೆ ಯಾಗಿದೆ. ಬಿಹಾರ ಚುನಾವಣೆ ಬಳಿಕ ಬಿಜೆಪಿಯೊಂದು ವಿಭಿನ್ನ ಅಂಕಿ-ಅಂಶವನ್ನು ಬಿಡುಗಡೆ ಮಾಡಿತ್ತು.
ರಾಹುಲ್ ಗಾಂಧಿ ಕಾಂಗ್ರೆಸ್ ನೇತೃತ್ವ ವಹಿಸಿದ ಬಳಿಕ ಸುಮಾರು ಚುನಾವಣೆಗಳನ್ನು ಎದುರಿಸಲಾಗಿದೆ. ಇದರಲ್ಲಿ 95 ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆಯಂತೆ. ಪ್ರಮುಖವಾಗಿ ಹಿಮಾಚಲ ಪ್ರದೇಶ (2007, 2017), ಪಂಜಾಬ್ (2007, 2012, 2022), ಗುಜರಾತ್ (2007, 2012, 2017, 2022), ಮಧ್ಯಪ್ರದೇಶ (2008, 2013, 2018, 2023), ಮಹಾ ರಾಷ್ಟ್ರ (2014, 2019, 2024) ಮತ್ತು ದೆಹಲಿ, ಹರಿಯಾಣ, ಉತ್ತರಪ್ರದೇಶ, ಬಿಹಾರದಲ್ಲಿ ಸರಣಿ ಸೋಲುಗಳನ್ನು ಕಾಂಗ್ರೆಸ್ ಕಂಡಿದೆ.
ಬಿಹಾರದಲ್ಲಿ ರಾಹುಲ್ ರ‍್ಯಾಲಿ ನಡೆಸಿದ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪರಾಭವ ಅನುಭವಿಸಿರುವುದು ಅಂಕಿ-ಅಂಶದಲ್ಲಿ ಸ್ಪಷ್ಟವಾಗಿದೆ. ಲೋಕಸಭೆಯಲ್ಲಿ ಗೆಲುವಿನ ಟ್ರ್ಯಾಕ್ ಕಂಡುಕೊಂಡಿದ್ದ ಕಾಂಗ್ರೆಸ್ ಮತ್ತೆ ಸೋಲಿನ ಸುಳಿಗೆ ಸಿಲುಕಲು ಹತ್ತಾರು ಕಾರಣಗಳಿವೆ.
ಪ್ರಮುಖವಾಗಿ ‘ಇಂಡಿಯಾ’ ಮೈತ್ರಿಕೂಟದಲ್ಲಿರುವ ಬಹುತೇಕ ಪಕ್ಷಗಳಿಗೆ ಕಾಂಗ್ರೆಸ್ ನಾಯಕತ್ವವನ್ನು ಪೂರ್ಣಪ್ರಮಾಣದಲ್ಲಿ ಒಪ್ಪಿಕೊಳ್ಳಲು ಆಗಿಲ್ಲ, ಆ ನಾಯಕತ್ವದಲ್ಲಿ ಅವಕ್ಕೆ ವಿಶ್ವಾಸವಿಲ್ಲ. ಹಾಗೆಂದು, ಕಾಂಗ್ರೆಸ್ ಹೊರತಾಗಿ ಬೇರೆ ಪಕ್ಷಕ್ಕೆ ನಾಯಕತ್ವ ನೀಡಲು ಕಾಂಗ್ರೆಸ್ಸಿಗರು ಸಿದ್ಧರಿಲ್ಲ.
ಇದರೊಂದಿಗೆ ಎಲ್ಲ ಚುನಾವಣೆಗಳಲ್ಲಿಯೂ ಮೈತ್ರಿಪಕ್ಷದೊಂದಿಗೆ ಸೀಟು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಎಡವುತ್ತಿರುವುದು ಸ್ಪಷ್ಟ. ಬಿಹಾರ ಚುನಾವಣೆಯಲ್ಲಿಯಂತೂ ಹಲವು ಕ್ಷೇತ್ರದಲ್ಲಿ ಮಹಾಘಟಬಂಧನದ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು.
ಇದರೊಂದಿಗೆ ಕರ್ನಾಟಕದಲ್ಲಿ ಯಶಸ್ವಿಯಾದ ‘ಗ್ಯಾರಂಟಿ ಘೋಷಣೆ’ಯನ್ನು ಎಲ್ಲ ಚುನಾವಣೆಯ ಪ್ರಣಾಳಿಕೆಯಲ್ಲಿಯೂ ಕಾಪಿ-ಪೇಸ್ಟ್ ಮಾಡಲು ಶುರು ಮಾಡಿದ್ದಾರೆ. ಆದರೆ ಪ್ರತಿ ಬಾರಿಯೂ ಇದು ವರ್ಕ್ ಔಟ್ ಆಗುವುದಿಲ್ಲ ಎನ್ನುವುದನ್ನು ಕಾಂಗ್ರೆಸ್‌ನ ದೆಹಲಿ ನಾಯಕರು ಅರಿಯಬೇಕಿದೆ. ಹಾಗೆ ನೋಡಿದರೆ, ಮುಳುತ್ತಿರುವ ಕಾಂಗ್ರೆಸ್‌ಗೆ ಹೊಸ ಚೈತನ್ಯ ನೀಡಿದ ರಾಜ್ಯವೆಂದರೆ ಕರ್ನಾಟಕ.
2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿ ಕಾರಕ್ಕೆ ಬಂದಿದ್ದರಿಂದ, ಮುಂದಿನ ಲೋಕಸಭಾ ಚುನಾವಣೆ ಸೇರಿ ಇನ್ನುಳಿದ ಚುನಾವಣೆ ಯಲ್ಲಿ ಪಕ್ಷಕ್ಕೆ ಅವಕಾಶವಿದೆ ಎನ್ನುವ ಆತ್ಮವಿಶ್ವಾಸವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಾಗೂ ನಾಯಕರುಗಳಲ್ಲಿ ಮೂಡಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕೆ ಇಲ್ಲಿನ ಸ್ಥಳೀಯ ನಾಯಕತ್ವ ಹಾಗೂ ಇಡೀ ದೇಶದಲ್ಲಿ ಮೊದಲು ಎನ್ನುವ ರೀತಿಯಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಯ ಭರವಸೆಗಳು ವರ್ಕ್ ಔಟ್ ಆಗಿದ್ದವು. ಆದರೆ ಗೆಲುವಿಗೆ ಕಾರಣವಾಗಿದ್ದ ಈ ಅಂಶಗಳನ್ನು ಮುನ್ನೆಲೆಗೆ ತರುವ ಬದಲು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ರಾಹುಲ್ ಗಾಂಧಿ ನಡೆಸಿದ ‘ಭಾರತ್ ಜೋಡೋ’ ಪಾದಯಾತ್ರೆ ಕಾರಣವೆಂದು ಬಿಂಬಿಸಲು ಶುರುಮಾಡಿದರು.
ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ‘ನೈಜ’ ಕಾರಣ ಗೊತ್ತಿದ್ದರೂ ಗಾಂಧಿ ಕುಟುಂಬವನ್ನು ಓಲೈಸಿಕೊಳ್ಳುವ ಭರದಲ್ಲಿ ಕರ್ನಾಟಕದ ಚುನಾವಣೆ ಮುಖ್ಯ ಕಾರಣವಾಗಿದ್ದ ರಾಜ್ಯ ನಾಯಕತ್ವವನ್ನು ತೋರಿಸುವ ಪ್ರಯತ್ನವನ್ನು ಮಾಡಲಿಲ್ಲ. ಇನ್ನು ತೆಲಂಗಾಣದಲ್ಲಿನ ಗೆಲುವಿನಲ್ಲಿಯೂ ಕರ್ನಾಟಕದ ಬಹುದೊಡ್ಡ ಪಾತ್ರವಿತ್ತು.
ಇದರೊಂದಿಗೆ, ತೆಲಂಗಾಣ, ಜಾರ್ಖಾಂಡ್‌ನಲ್ಲಿದ್ದ ಆಡಳಿತ ವಿರೋಧಿ ಅಲೆ ವರ್ಕ್ ಔಟ್ ಆಗಿತ್ತು. ಆದರೆ ಈ ಎರಡೂ ರಾಜ್ಯದಲ್ಲಿ ‘ರಾಗಾ’ ಕಮಾಲ್ ಆಗಿದೆ ಎನ್ನುವ ನರೇಟಿವ್ ಅನ್ನು ಫಿಕ್ಸ್ ಮಾಡುವ ಪ್ರಯತ್ನವನ್ನು ಗಾಂಧಿ ಕುಟುಂಬದ ಹಿಂದೆ-ಮುಂದೆ ಓಡಾಡಿ ಕೊಂಡಿದ್ದ ನಾಯಕರು ನಿರಂತರವಾಗಿ ಮಾಡಿದರು.
ಈ ನರೇಟಿವ್ ಸುಳ್ಳೆಂದು ಹೇಳಿ ಗಾಂಧಿ ಕುಟುಂಬವನ್ನು ಎದುರು ಹಾಕಿಕೊಳ್ಳಲು ಕಾಂಗ್ರೆಸ್ ನ ಯಾವ ನಾಯಕರೂ ಸಿದ್ಧವಿಲ್ಲದ ಕಾರಣ ಸತ್ಯದ ಬಗ್ಗೆ ಚರ್ಚೆಯಾಗಲೇ ಇಲ್ಲ. ಕರ್ನಾ ಟಕ, ತೆಲಂಗಾಣ, ಜಾರ್ಖಂಡ್ ಹೊರತುಪಡಿಸಿದರೆ ಇನ್ನುಳಿದ ರಾಜ್ಯಗಳಲ್ಲಿ ಸ್ಥಳೀಯ ನಾಯಕತ್ವದಲ್ಲಿದ್ದ ಹಲವಾರು ಗೊಂದಲ, ಮೈತ್ರಿಪಕ್ಷಗಳೊಂದಿಗಿನ ಭಿನ್ನಾಭಿಪ್ರಾ ಯದಿಂದ ಬಿಜೆಪಿ ಹಾಗೂ ಮೈತ್ರಿಪಕ್ಷಗಳಿಗೆ ‘ರೆಡ್ ಕಾರ್ಪೆಟ್’ ಅನ್ನು ಕಾಂಗ್ರೆಸ್ ಪಕ್ಷವೇ ಹಾಕಿಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ.
ತೀರಾ ಇತ್ತೀಚಿನ ಉದಾಹರಣೆ ನೀಡುವುದಾದರೆ, ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ೬೧ ಕ್ಷೇತ್ರವನ್ನು ಬಿಟ್ಟುಕೊಡಲು ಮಹಾಘಟಬಂಧನದ ಮೈತ್ರಿಪಕ್ಷ ಆರ್‌ಜೆಡಿಗೆ ಸುತರಾಂ ಇಷ್ಟವಿರಲಿಲ್ಲ. ಆದರೆ ರಾಹುಲ್ ಗಾಂಧಿ ಅವರ ಒತ್ತಡಕ್ಕೆ ಮಣಿದು ೬೧ ಸೀಟನ್ನು ಬಿಟ್ಟುಕೊಟ್ಟಿತ್ತು. ಆದರೆ ಬಂದಿದ್ದು ಮಾತ್ರ ಆರು ಸೀಟು. ಬಿಹಾರ ಮಾತ್ರವಲ್ಲ, ಮಹಾಘಟಬಂಧನ ರಚನೆಯಾದ ಬಳಿಕ ನಡೆದಿರುವ ಬಹುತೇಕ ಚುನಾವಣೆ ಗಳಲ್ಲಿ ಸೋಲುವುದಕ್ಕೆ ಸೀಟು ಹಂಚಿಕೆಯೂ ಬಹುದೊಡ್ಡ ಸಮಸ್ಯೆಯಾಗಿದೆ.
ಕೆಲ ದಶಕದ ಹಿಂದೆ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡರೆ ಚುನಾವಣೆಯಲ್ಲಿ ಲಾಭ ವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಅನೇಕ ಪ್ರಾದೇಶಿಕ ಹಾಗೂ ಸಣ್ಣ ಪಕ್ಷಗಳಿದ್ದವು. ಆದರೆ ಕಾಂಗ್ರೆಸ್‌ನ ಇತ್ತೀಚಿನ ಪ್ರದರ್ಶನವನ್ನು ನೋಡಿದರೆ, ಯಾವುದೇ ಮೈತ್ರಿಪಕ್ಷಕ್ಕೆ ಕಾಂಗ್ರೆಸ್ ‘ಸಹಕಾರಿ’ಯಾಗುವುದಕ್ಕಿಂತ ಹೆಚ್ಚಾಗಿ ‘ಹೊರೆ’ಯಾಗುತ್ತದೆ ಎನ್ನುವುದು ಸ್ಪಷ್ಟ.
ಸೋನಿಯಾ ಗಾಂಧಿ ಅವರು ಸಕ್ರಿಯ ರಾಜಕಾರಣದ ಹೊಣೆಯನ್ನು ರಾಹುಲ್ ಗಾಂಧ ಅವರಿಗೆ ವಹಿಸಿದ ಬಳಿಕ ‘ರಾಗಾ’ ಹತ್ತು ಹಲವು ರೀತಿಯ ತಂತ್ರಗಾರಿಕೆ ಮಾಡುತ್ತಿದ್ದಾರೆ. ಅವರು ಇಡೀ ದೇಶವನ್ನು ಪಾದಯಾತ್ರೆಯ ಮೂಲಕ ಸುತ್ತಿ ಪಕ್ಷದ ಕಾರ್ಯಕರ್ತರಿಗೆ ಮತ್ತು ವಿವಿಧ ಸ್ತರದ ನಾಯಕರಿಗೆ ಹೊಸ ಹುರುಪನ್ನು ನೀಡಿದ್ದು ನಿಜ.
ಆದರೆ ರಾಹುಲ್ ಗಾಂಧಿ ಕೈಗೆತ್ತಿಕೊಳ್ಳುವ ಬಹುತೇಕ ಚರ್ಚಾವಿಷಯಗಳು ‘ಹಿಟ್ ಆಂಡ್ ರನ್’ ರೀತಿಯಲ್ಲಿರುತ್ತವೆ. 2013-14ರ ಸಮಯದಲ್ಲಿ ತಮ್ಮ ಹುಡುಗಾಟಿಕೆಯ ಮಾತು ಗಳಿಂದ ಜನರನ್ನು ತಲುಪುವಲ್ಲಿ ವಿಫಲರಾಗಿದ್ದ ರಾಹುಲ್ ಗಾಂಧಿಯವರು, ಕಳೆದೊಂದು ದಶಕದಲ್ಲಿ ಮಾಗಿದ್ದಾರೆ ನಿಜ.
ಆದರೆ ಮಾತಿನಲ್ಲಿ ಮಾಗಿರುವ ರಾಹುಲ್ ಗಾಂಧಿ ತಮ್ಮ ಆಲೋಚನೆಗಳಲ್ಲಿ ಇನ್ನೂ ಮಾಗುವುದು ಬಾಕಿಯಿದೆ. ಯಾವುದೇ ಚರ್ಚಾ ವಿಷಯವನ್ನು ಕೈಗೆತ್ತಿಕೊಂಡರೂ ಅದಕ್ಕೆ ‘ತಾರ್ಕಿಕ’ ಅಂತ್ಯ ಕಾಣಿಸುವ ರೀತಿಯಲ್ಲಿ ಯೋಚಿಸದೇ, ಸುದ್ದಿಗೋಷ್ಠಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಹಾಕಿ ಕೈತೊಳೆದುಕೊಂಡರೆ ಜನ ನಂಬುವ ಪರಿಸ್ಥಿತಿ ಯಲ್ಲಿಲ್ಲ ಎನ್ನುವುದನ್ನು ಕಾಂಗ್ರೆಸ್ ಪಕ್ಷವು ಇನ್ನಾದರೂ ಅರ್ಥೈಸಿಕೊಳ್ಳಬೇಕಿದೆ.
ಹವಾನಿಯಂತ್ರಿತ ಕೋಣೆಯಲ್ಲಿ ಕೂತು ಅಂಕಿ-ಅಂಶಗಳನ್ನು ಹೇಳುವುದನ್ನು ಬಿಟ್ಟು, ಜನರ ಬಳಿಗೆ ಹೋಗಬೇಕಿದೆ. ಇಲ್ಲವಾದರೆ ಉಳಿದಿರುವ ಕೆಲ ರಾಜ್ಯಗಳು ಕೈಬಿಟ್ಟು ಹೋದರೂ ಅಚ್ಚರಿಪಡಬೇಕಿಲ್ಲ.