ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಶ್ರೇಷ್ಠ ದಾನಿ ಕರ್ಣನ ಗುಣಗಾನ ಮಾಡಿದ ಶ್ರೀಕೃಷ್ಣ

“ಕರ್ಣನ ಗ್ರಹಿಕೆಯಲ್ಲಿ ಬಂಗಾರಕ್ಕೆ ಯಾವುದೇ ಮೌಲ್ಯವಿರಲಿಲ್ಲ; ಅವನಿಗೆ ನಿಜವಾದ ದಾನವೆಂದರೆ ಬಂಗಾರವಲ್ಲ, ದಾನ ಮಾಡುವ ಕ್ರಿಯೆಯೇ ಅವನ ಪಾಲಿಗೆ ಬಂಗಾರಸದೃಶ. ಅವನಿಗೆ ಯಾವುದೇ ಲೆಕ್ಕಾಚಾರ ಇರಲಿಲ್ಲ; ಪ್ರತಿಫಲದ ನಿರೀಕ್ಷೆಯೂ ಇರಲಿಲ್ಲ. ಪ್ರಶಂಸೆ, ಗುರುತಿಸುವಿಕೆಗಳೂ ಬೇಕಿರಲಿಲ್ಲ. ಶುದ್ಧ ಮನಸ್ಸಿನಿಂದ, ಸ್ಪಷ್ಟ ಹೃದಯದಿಂದ ಅವನು ಎಲ್ಲವನ್ನೂ ಅರ್ಪಿಸಿದನು. ದಾನ ಮಾಡಿದ ನಂತರ ಅವನು, ಅದರ ಪರಿವೆಯೇ ಇಲ್ಲದಂತೆ ಮುಂದೆ ನಡೆದು ಬಿಟ್ಟನು.

Roopa Gururaj Column: ಶ್ರೇಷ್ಠ ದಾನಿ ಕರ್ಣನ ಗುಣಗಾನ ಮಾಡಿದ ಶ್ರೀಕೃಷ್ಣ

-

ಒಂದೊಳ್ಳೆ ಮಾತು

ಒಮ್ಮೆ ಶ್ರೀಕೃಷ್ಣನೊಂದಿಗೆ ಸಂಚರಿಸುತ್ತಿದ್ದ ಅರ್ಜುನನು, “ರಾಜ್ಯದಲ್ಲಿನ ಅತ್ಯಂತ ಶ್ರೇಷ್ಠ ದಾನಿ ಯಾರು?" ಎಂದು ಪ್ರಶ್ನಿಸಿದನು. ಕ್ಷಣಮಾತ್ರವೂ ತಡಮಾಡದೆ ಕೃಷ್ಣನು, “ಕರ್ಣನೇ ಶ್ರೇಷ್ಠ ಉದಾರಿ" ಎಂದು ಉತ್ತರಿಸಿದನು.

ಈ ಉತ್ತರವು ಅರ್ಜುನನಿಗೆ ಅಸಹನೀಯವಾಯಿತು. ತನಗಿಂತ ತನ್ನ ಪ್ರತಿಸ್ಪರ್ಧಿಯೇ ಹೆಚ್ಚು ಉದಾರಿಯಾಗಿರಬಹುದು ಎಂಬ ಆಲೋಚನೆ ಅವನ ಮನಸ್ಸನ್ನು ಕಾಡಿತು. ಆದರೆ ಅವನು ಮೌನ ವಾಗಿದ್ದನು. ಆದರೂ ಅರ್ಜುನನ ಕಣ್ಣಲ್ಲಿ ಮಿಂಚುತ್ತಿದ್ದ ಅಸೂಯೆಯ ಭಾವವನ್ನು ಶ್ರೀಕೃಷ್ಣ ಗಮನಿಸಿದನು.

ಕೆಲವು ದಿನಗಳ ನಂತರ, ಒಂದು ಸಂಜೆ ಇಬ್ಬರೂ ರಥದಲ್ಲಿ ಸಾಗುತ್ತಿದ್ದಾಗ, ಕೃಷ್ಣನು ದೂರ ದಲ್ಲಿದ್ದ ಎರಡು ಪರ್ವತಗಳನ್ನು ತೋರಿಸಿದನು. ಅರ್ಜುನನು ಅವುಗಳತ್ತ ನೋಡುವಷ್ಟರಲ್ಲಿ, ಅವುಗಳ ಶಿಖರಗಳು ಮಿನುಗಿ ಬೆಳಕನ್ನು ಪ್ರತಿಬಿಂಬಿಸಿ ಶುದ್ಧ ಬಂಗಾರವಾಗಿ ಪರಿವರ್ತಿತವಾದವು.

“ಅರ್ಜುನ, ಈ ಎರಡು ಬಂಗಾರದ ಪರ್ವತಗಳನ್ನು ಕೆಳಭಾಗದಲ್ಲಿರುವ ಬಡ ಗ್ರಾಮಸ್ಥರಿಗೆ ಹಂಚಿ ಕೊಡು. ಅದರ ಒಂದು ಕಲ್ಲು ಕೂಡ ಉಳಿಯದಂತೆ ದಾನ ಮಾಡಿದಾಗ ನನಗೆ ತಿಳಿಸು" ಎಂದ ಕೃಷ್ಣ. ಅರ್ಜುನ ತನ್ನ ಉದಾರತೆಯನ್ನು ಸಾಬೀತುಪಡಿಸಲು ಉತ್ಸುಕನಾದ.

ಎಲ್ಲಾ ಗ್ರಾಮಸ್ಥರನ್ನು ಸೇರಿಸಿ, ಆ ಎರಡು ಬಂಗಾರದ ಪರ್ವತಗಳನ್ನು ಅವರಿಗೆ ಹಂಚುವುದಾಗಿ ಘೋಷಿಸಿದನು. ಗ್ರಾಮಸ್ಥರು ಅಚ್ಚರಿಗೊಂಡರು. ಅರ್ಜುನನ ಹೃದಯವೈಶಾಲ್ಯವನ್ನು ಕೊಂಡಾ ಡುವ ಹಾಡುಗಳು ಎಡೆ ಮೊಳಗಿದವು. ಜನರ ಪ್ರಶಂಸೆಯಿಂದ ಉತ್ತೇಜಿತನಾದ ಅರ್ಜುನನು, ಸಂಪೂರ್ಣ ಬಂಗಾರವನ್ನು ದಾನ ಮಾಡುವ ಸಂಕಲ್ಪದೊಂದಿಗೆ ಪರ್ವತದಿಂದ ಬಂಗಾರವನ್ನು ತೆಗೆಯಲು ಆರಂಭಿಸಿದನು.

ಇದನ್ನೂ ಓದಿ: Roopa Gururaj Column: ನಿಜವಾದ ಭಕ್ತನ ಗುಣಗಳು

ಅನೇಕ ದಿನಗಳ ಕಾಲ ಆಹಾರ, ನೀರು, ವಿಶ್ರಾಂತಿ, ನಿದ್ರೆ ಯಾವುದನ್ನೂ ಲೆಕ್ಕಿಸದೆ ಅರ್ಜುನ ಪರ್ವತ ಗಳನ್ನು ಕಡಿದು ದಾನ ಮಾಡಿದನು. ಆದರೆ ಅವನಿಗೆ ಭಾರಿ ನಿರಾಶೆಯಾಯಿತು. ಪರ್ವತಗಳು ಹಾಗೆಯೇ ಅಪಾರವಾಗಿಯೇ ಉಳಿದಿದ್ದವು. ಎಷ್ಟು ಬಂಗಾರ ತೆಗೆದರೂ, ಇನ್ನಷ್ಟು ಬಂಗಾರ ಕಾಣಿಸು ತ್ತಲೇ ಇತ್ತು. ದಣಿದು, ಗೊಂದಲಕ್ಕೀಡಾದ ಅರ್ಜುನನು ಕೃಷ್ಣನ ಬಳಿಗೆ ಹೋಗಿ, ಇದು ತನ್ನೊಬ್ಬ ನಿಂದ ಆಗುವ ಕೆಲಸವಲ್ಲ ಎಂದನು.

ಕೃಷ್ಣನು ಕರ್ಣನನ್ನು ಕರೆಯಿಸಿ ಅದೇ ಕಾರ್ಯವನ್ನು ನೀಡಿದನು. ಕರ್ಣ ಕ್ಷಣಮಾತ್ರವೂ ತಡ ಮಾಡದೆ, ಅಲ್ಲಿ ಹಾದುಹೋಗುತ್ತಿದ್ದ ಇಬ್ಬರು ಗ್ರಾಮಸ್ಥರನ್ನು ಕರೆಯಿಸಿದನು. “ಆ ಎರಡು ಪರ್ವತ ಗಳನ್ನು ನೋಡುತ್ತಿದ್ದೀರಾ?" ಎಂದು ಅವನು ಕೇಳಿದನು.

“ಹೌದು" ಎಂದು ಅವರು ಹೇಳಿದಾಗ, “ಆ ಎರಡು ಬಂಗಾರದ ಪರ್ವತಗಳು ಈಗ ನಿಮ್ಮವು. ನಿಮಗೆ ಇಷ್ಟವಾದಂತೆ ಬಳಸಿಕೊಳ್ಳಿ" ಎಂದು ಕರ್ಣನು ಸೂರ್ಯೋದಯದಂತೆ ಪ್ರಕಾಶಿಸುವ ನಗೆ ಯೊಂದಿಗೆ ಹೇಳಿದನು, ಅಷ್ಟೇ. ಕೃಷ್ಣನಿಗೆ ವಂದಿಸಿ, ಹಿಂದಿರುಗಿ ನೋಡದೆ ಕರ್ಣನು ಅಲ್ಲಿಂದ ಹೊರಟುಹೋದನು. ಅರ್ಜುನನು ಅಚ್ಚರಿಯಿಂದ ಮೂಕನಾಗಿ ನಿಂತನು.

ಅರ್ಜುನನ ಆಶ್ಚರ್ಯವನ್ನು ಕಂಡ ಕೃಷ್ಣನು, “ಅರ್ಜುನ, ನಿನ್ನ ಮನಸ್ಸಿನಲ್ಲಿ ಬಂಗಾರಕ್ಕೆ ಅತ್ಯಧಿಕ ಮೌಲ್ಯ ಇತ್ತು. ನೀನು ಅದಕ್ಕೆ ಆಕರ್ಷಿತನಾಗಿದ್ದೆ. ನಿನ್ನ ದಾನವು ಲೆಕ್ಕಾಚಾರಗಳಿಂದ ತುಂಬಿತ್ತು ಯಾರಿಗೆ ಕೊಡಬೇಕು, ಯಾರು ಹೆಚ್ಚು ಅರ್ಹರು ಎಂಬ ಚಿಂತನೆಗಳು ಅಲ್ಲಿ ಹರವಿಕೊಂಡಿದ್ದವು. ಈ ಸಣ್ಣ ಲೆಕ್ಕಾಚಾರಗಳೇ ನಿನ್ನ ಆತ್ಮವನ್ನು ದಣಿಸಿದವು. ಕಾಲಕ್ರಮೇಣ, ಈ ಪರ್ವತಗಳ ಅಪಾರತೆ ನಿನ್ನೊಬ್ಬನ ತಲೆ, ಹೃದಯ ಮತ್ತು ಕೈಗಳ ಸಾಮರ್ಥ್ಯಕ್ಕೆ ಮೀರಿದ್ದು ಎಂಬುದು ನಿನಗೆ ಅರಿವಾ ಯಿತು" ಎಂದನು.

ಕೃಷ್ಣನ ಮಾತಿನ ಸತ್ಯವನ್ನು ಸೂಕ್ಷ್ಮವಾಗಿ ಗ್ರಹಿಸಿದ ಅರ್ಜುನನು, “ಹಾಗಾದರೆ ಕರ್ಣ ಹೇಗೆ ಭಿನ್ನ?" ಎಂದು ಕೊನೆಗೆ ಕೇಳಿದನು. ಅದಕ್ಕೆ ಕೃಷ್ಣ, “ಕರ್ಣನ ಗ್ರಹಿಕೆಯಲ್ಲಿ ಬಂಗಾರಕ್ಕೆ ಯಾವುದೇ ಮೌಲ್ಯ ವಿರಲಿಲ್ಲ; ಅವನಿಗೆ ನಿಜವಾದ ದಾನವೆಂದರೆ ಬಂಗಾರವಲ್ಲ, ದಾನ ಮಾಡುವ ಕ್ರಿಯೆಯೇ ಅವನ ಪಾಲಿಗೆ ಬಂಗಾರಸದೃಶ. ಅವನಿಗೆ ಯಾವುದೇ ಲೆಕ್ಕಾಚಾರ ಇರಲಿಲ್ಲ; ಪ್ರತಿಫಲದ ನಿರೀಕ್ಷೆಯೂ ಇರಲಿಲ್ಲ. ಪ್ರಶಂಸೆ, ಗುರುತಿಸುವಿಕೆಗಳೂ ಬೇಕಿರಲಿಲ್ಲ.

ಶುದ್ಧ ಮನಸ್ಸಿನಿಂದ, ಸ್ಪಷ್ಟ ಹೃದಯದಿಂದ ಅವನು ಎಲ್ಲವನ್ನೂ ಅರ್ಪಿಸಿದನು. ದಾನ ಮಾಡಿದ ನಂತರ ಅವನು, ಅದರ ಪರಿವೆಯೇ ಇಲ್ಲದಂತೆ ಮುಂದೆ ನಡೆದು ಬಿಟ್ಟನು. ಅದುವೇ ಶ್ರೇಷ್ಠ ದಾನಿ ಯ ನಿಜವಾದ ಲಕ್ಷಣ" ಎಂದ ನಗುತ್ತಾ... ನಾವು ಕೂಡ ಸಹಾಯ ಮಾಡುವಾಗ ಎಷ್ಟು ಸಹಾಯ ಮಾಡಬೇಕು, ಅವರು ಅದಕ್ಕೆ ಎಷ್ಟರ ಮಟ್ಟಿಗೆ ಅರ್ಹರು ಎಂದು ಲೆಕ್ಕಾಚಾರ ಹಾಕಿದರೆ ಅರ್ಜುನ ನಂತಾಗುತ್ತೇವೆ.

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರಶಂಸೆಯ ಲೆಕ್ಕಾಚಾರಗಳಿಲ್ಲದೆ ಕೇವಲ ಆತ್ಮ ಸಂತೋಷ ಕ್ಕಾಗಿ ಸಹಾಯ ಮಾಡಿದಾಗ ಕರ್ಣನಂತಾಗುತ್ತೇವೆ. ಪ್ರತಿಫಲಾಪೇಕ್ಷೆ ಇಲ್ಲದ ಸಹಾಯ ಭಗವಂತ ನನ್ನೂ ಮೆಚ್ಚಿಸುವಂಥದ್ದು. ಆಯ್ಕೆ ನಮ್ಮದು...