ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Yaji Column: ರಾಮಾಯಣದಲ್ಲಿನ ವಿಲಕ್ಷಣ ಪ್ರಸಂಗ- ಅಂಗದ ಬಂಡಾಯ; ಹನುಮನ ಶಮನ

ನಾರಾಯಣ ಯಾಜಿ ಅಂಕಣ: ವ್ಯವಸ್ಥೆ ಸುಗ್ರೀವನ ಪರವಾಗಿ ಇದ್ದುದರಿಂದ ಅಂಗದ ಸುಮ್ಮನಿದ್ದ. ಇಂತಹ ಅಂಗದನೂ ಸುಗ್ರೀವನ ವಿರುದ್ಧ ಬಂಡಾಯ ಏಳುವ ಸಂಗತಿ ರಾಮಾಯಣದಲ್ಲಿ ಬರುತ್ತದೆ. ಅದನ್ನು ಅಷ್ಟೇ ಚಾಕಚಕ್ಯತೆಯಿಂದ ಹನುಮಂತ ನಿವಾರಿಸುತ್ತಾನೆ. ಅದರ ವಿವರವನ್ನು ಗಮನಿಸೋಣ.

ರಾಮಾಯಣದಲ್ಲಿನ ವಿಲಕ್ಷಣ ಪ್ರಸಂಗ- ಅಂಗದ ಬಂಡಾಯ; ಹನುಮನ ಶಮನ

ಹರೀಶ್‌ ಕೇರ ಹರೀಶ್‌ ಕೇರ Aug 17, 2025 7:00 AM

- ನಾರಾಯಣ ಯಾಜಿ

narayana yaji

ತ್ವಾಂ ನೈತೇಹ್ಯನುಯುಞ್ಜೇಯು: ಪ್ರತ್ಯಕ್ಷಂ ಪ್ರವದಾಮಿ ತೇ.

ಯಥಾಯಂ ಜಾಮ್ಬವಾನ್ನೀಲಸ್ಸುಹೋತ್ರಶ್ಚ ಮಹಾಕಪಿಃ ৷৷ಕಿ.54.10৷৷

ನ ಹ್ಯಹಂ ತೇ ಇಮೇ ಸರ್ವೇ ಸಾಮದಾನಾದಿಭಿರ್ಗುಣೈಃ.

ದಣ್ಡೇನ ವಾ ತ್ವಯಾ ಶಕ್ಯಾಸ್ಸುಗ್ರೀವಾದಪಕರ್ಷಿತಮ್ ৷৷ಕಿ.54.11৷৷

ನಾನು ಇದ್ದ ವಿಷಯವನ್ನು ನಿನ್ನಿದಿರಿನಲ್ಲಿಯೇ ಸ್ಪಷ್ಟವಾಗಿ ತಿಳಿಸುವೆನು ಕೇಳು. ಜಾಂಬವಂತನಾಗಲೀ, ನೀಲ, ಮಹಾಕಪಿಯಾದ ಸುಹೋತ್ರ ಇವರೆಲ್ಲ ಹೇಗೆ ನಿನ್ನನ್ನು ಅನುವರ್ತಿಸುವುದಿಲ್ಲವೋ ಹಾಗೇ ನಾನೂ ಸಹ. ಸಾಮದಾನಬೇಧಗಳಿಂದಾಗಲೀ, ದಂಡೋಪಾಯಗಳಿಂದಾಗಲೀ ನಮ್ಮನ್ನು ಸುಗ್ರೀವನಿಂದ ಬೇರ್ಪಡಿಸಿ ನಿನ್ನ ಅಧೀನರನ್ನಾಗಿ ಮಾಡಿಕೊಳ್ಳಲಾರೆ. ಇದು ನಿಶ್ಚಯ.

ವಾಲಿಯ ರಾಜ್ಯ ಸುಗ್ರೀವನ ವಶವಾಗಿರುವುದು, ತಾರೆ ಆತನ ಅಂತಃಪುರವನ್ನು ಸೇರಿರುವುದು ಅಂಗದನಿಗೆ ಸಹ್ಯವಾಗಿರಲಿಲ್ಲ. ಮಗನಾದ ತನ್ನ ಜೀವದ ರಕ್ಷಣೆಗಾಗಿ ತಾರೆ ಸುಗ್ರೀವನ ಸಂಗಡ ಇದ್ದಾಳೆ ಎನ್ನುವುದು ಆತನಿಗೆ ತಿಳಿದಿದೆ. ಕಿಷ್ಕಿಂಧೆಯಲ್ಲಿ ಈಗ ಎಲ್ಲರೂ ಸುಗ್ರೀವನ ಪರವಾಗಿ ಇದ್ದಾರೆ. ಒಳಗೊಳಗೇ ಆತ ಅಸಹನೆಯಿಂದ ಕುದಿದು ಹೋಗಿದ್ದಾನೆ. ತನ್ನಿಂದೇನೂ ಮಾಡಲಾಗುತ್ತಿಲ್ಲವಲ್ಲ ಎನ್ನುವ ಕೀಳರಿಮೆಯೂ ಅಂಗದನನ್ನು ಕಾಡುತ್ತಿದೆ. “ಸಂಶಯಾತ್ಮಾ ವಿನಶ್ಯತಿ”, ಸಂಶಯವೆನ್ನುವ ಹುಳ ತಲೆಯೊಳಗೆ ಹೊಕ್ಕರೆ ಆದು ನಿರಂತರವಾಗಿ ತಲೆತಿನ್ನುತ್ತಲೇ ಇರುತ್ತದೆ. ಅಂತಹ ಸಂದರ್ಭದಲ್ಲಿ ವ್ಯಕ್ತಿ ಇದರ ವಿರುದ್ಧ ಸಿಡಿದೇಳಲು ಸಮಯವನ್ನು ಕಾಯುತ್ತಿರುತ್ತಾನೆ. ಇದನ್ನು “Betrayal-Induced Adjustment Disorder” (a state where sudden political and emotional losses lead to difficulty adapting, resentment toward the new authority, and indirect opposition). ಎನ್ನುತ್ತಾರೆ. ಅಂಗದನೊಳಗೆ ಇದು ಸುಪ್ತವಾಗಿತ್ತು. ರಾಮನ ಕುರಿತು ಅಂಗದನಿಗೆ ಒಂದು ರೀತಿಯ ಭಕ್ತಿ ಮತ್ತು ಸ್ವಲ್ಪ ಅಸಹನೆ ಎರಡೂ ಇತ್ತು. ರಾಮನ ಪರಾಕ್ರಮವನ್ನು ನೋಡಿದ ವಾನರರೆಲ್ಲರೂ ಭೀತರಾಗಿದ್ದರು. ಅದೂ ಅಲ್ಲದೇ ರಾಮನೇ ಹನುಮಂತನ ಹತ್ತಿರ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡುವಕಾಲಕ್ಕೆ ಅಂಗದನಿಗೂ ಯೌವರಾಜಾಭಿಷೇಕವನ್ನು ಮಾಡಿಸಲು ಹೇಳಿದ್ದನು. ಈ ಕಾರಣಕ್ಕಾಗಿ ಗೌರವವೂ ಇತ್ತು.

ಆದರೆ ವ್ಯವಸ್ಥೆ ಸುಗ್ರೀವನ ಪರವಾಗಿ ಇದ್ದುದರಿಂದ ಅಂಗದ ಸುಮ್ಮನಿದ್ದ. ಇಂತಹ ಅಂಗದನೂ ಸುಗ್ರೀವನ ವಿರುದ್ಧ ಬಂಡಾಯ ಏಳುವ ಸಂಗತಿ ರಾಮಾಯಣದಲ್ಲಿ ಬರುತ್ತದೆ. ಅದನ್ನು ಅಷ್ಟೇ ಚಾಕಚಕ್ಯತೆಯಿಂದ ಹನುಮಂತ ನಿವಾರಿಸುತ್ತಾನೆ. ಅದರ ವಿವರವನ್ನು ಗಮನಿಸೋಣ. ಸುಗ್ರೀವನಿಗೆ ಲಂಕೆ ಎಲ್ಲಿದೆ ಎನ್ನುವ ಸಂಗತಿ ತಿಳಿದಿರುವಕಾರಣ ದಕ್ಷಿಣ ದಿಕ್ಕಿಗೆ ಸೀತೆಯನ್ನು ಹುಡುಕಲು ಬಲಿಷ್ಠರಾದ ವಾನರ ಪ್ರಮುಖರನು ಅಂಗದನ ನೇತ್ರತ್ವದಲ್ಲಿ ಕಳುಹಿಸಿದ್ದಾನೆ. ಅಗ್ನಿಯ ಮಗನಾದ ನೀಲ, ಜಾಂಬವಂತ, ಸುಹೋತ್ರ, ಶರಾರಿ, ಶರಗುಲ್ಮ, ಗಜ, ಗವಾಯ, ಗವಾಕ್ಷ, ಸುಷೇಣ, ವೃಷಭ, ಮೈಂದ, ದ್ವಿವಿದ, ವಿಜಯ ಗಂದಮಾದನ, ಉಲ್ಕಾಮುಖ ಮತ್ತು ಅನಂಗ ಇವರ ಜೊತೆ ಹನುಮಂತ ಇದ್ದಾನೆ. ಈ ನಡುವೆ ಹನುಮಂತನನ್ನು ಸುಗ್ರೀವ ಪ್ರತ್ಯೇಕವಾಗಿ ಕರೆದು ವಿಶೇಷಾರ್ಥವುಳ್ಳ ಅನೇಕ ಮಾತುಗಳನ್ನು ಹೇಳಿದ್ದಾನೆ. ಸೂಕ್ಷ್ಮಗ್ರಾಹಿಯಾದ ರಾಮ “ಭರ್ತ್ರಾ ಪರಿಗೃಹೀತಸ್ಯ ಧ್ರುವಃ ಕಾರ್ಯಫಲೋದಯಃ” ಈತನಿಂದಲೇ ಖಂಡಿತವಾಗಿ ಸೀತಾನ್ವೇಷಣೆ ಆಗುತ್ತದೆ ಎಂದು ತಿಳಿದ. ಹನುಮಂತನನ್ನು ಕರೆದು ತನ್ನ ಹೆಸರು ಕೆತ್ತಿರುವ ಮುದ್ರೆಯುಂಗುರವನ್ನು ತೆಗೆದು “ಸೀತೆಯನ್ನು ನೋಡಿದಕೂಡಲೇ ಆಕೆಗೆ ಈ ಮುದ್ರೆಯುಂಗುರ ಕೊಟ್ಟರೆ ಖಂಡಿತವಾಗಿಯೂ ಈತ ರಾಮನ ಕಡೆಯವ ಎನ್ನುವ ನಂಬಿಕೆ ಬರುತ್ತದೆ” ಎಂದು ತಿಳಿಸಿ ಬೀಳ್ಕೊಟ್ಟ.

ವಾಲ್ಮೀಕಿ ಪಾತ್ರಗಳ ಸ್ವಭಾವವನ್ನು ತಿಳಿಸುವ ರೀತಿ ವಿಶಿಷ್ಟ ಬಗೆಯದು. ಕೈಕೆಯಿಯನ್ನು ಪರಿಚಯಿಸಬೇಕಾದರೆ ಭರತನ ಬಾಯಿಯಿಂದಲೇ “ಆತ್ಮಕಾಮಾ ಸದಾ ಚಂಡಿ” ಎಂದೂ, ಸುಮಿತ್ರೆಯನ್ನು “ಕಚ್ಚಿತ್ಸುಮಿತ್ರಾ ಧರ್ಮಜ್ಞಾ” ಕೌಸಲ್ಯೆಯನ್ನು “ಆರ್ಯಾ ಚ ಧರ್ಮನಿರತಾ ಧರ್ಮಜ್ಞಾ ಧರ್ಮದರ್ಶಿನೀ” ಎಂದು ವರ್ಣಿಸುವ ಮೂಲಕ ಆಯಾಪಾತಗಳ ನಿರ್ವಚನವನ್ನು, ಗುಣನಡತೆಯನ್ನು ತಿಳಿಸುತ್ತಾನೆ. ಅಕಂಪನ ಮೂಲಕ ರಾವಣನನ್ನು “ಭಾರ್ಯಾ ತಸ್ಯೋತ್ತಮಾ ಲೋಕೇ ಸೀತಾ ನಾಮ ಸುಮಧ್ಯಮಾ” ಎನ್ನುವ ಮೂಲಕ ಆತನಿಗಿರುವ ಹೆಣ್ಣಿನ ದೌರ್ಬಲ್ಯವನ್ನು ತಿಳಿಸಿದ್ದ. ಹನುಮಂತನ ಹೇಗಿದ್ದಾನೆ ಎನ್ನುವ ವಿಷಯವನ್ನುರಾಮ ಹಾಗೂ ಹನುಮಂತರನಡುವಿನ ಮೊದಲ ಭೇಟಿಯ ಸಂಭಾಷಣೆಗಳೇ ತಿಳಿಸುತ್ತವೆ. ಆತನ ಮಾತಿನಲ್ಲಿ ಋಗ್ವೇದದ ವಿನೀತಭಾವ, ಯಜುರ್ವೇದವನ್ನು ಬಲ್ಲವನ ಮೇಧಾಶಕ್ತಿಯಂತೆ, ಸಾಮವೇದ ರೀತಿಯಲ್ಲಿ ಸುಮಧುರವಾಗಿದೆ ಎನ್ನುತ್ತಾನೆ. ಅಪೌರುಷೇಯವಾದ ವೇದಗಳಂತೆ ಹನುಮಂತನೂ ದೇವಮೂಲದಿಂದ ಬಂದವ ಎನ್ನುವ ವಿಷಯವೂ ಇಲ್ಲಿದೆ. ಹನುಮಂತ ನಡೆದುಕೊಳ್ಳುವ ರೀತಿಯೂ ಸಹ ವಿನೀತಭಾವದಲ್ಲಿಯೇ. ಆತ ಯಾವತ್ತಿಗೂ ಸುಗ್ರೀವನನ್ನು ಅತಿಕ್ರಮಿಸುವುದಿಲ್ಲ. ಸುಗ್ರೀವ ರಾಮನಿಗೆ ಆಸನ ಕೊಡುವ ಭರದಲ್ಲಿ ಲಕ್ಷ್ಮಣನನ್ನು ಅಲಕ್ಷಿಸಿದಾಗ ಆತನೇ ರೆಂಬೆಯೊಂದನ್ನು ಮುರಿದು ಲಕ್ಷ್ಮಣನಿಗೆ ಆಸನವನ್ನು ಒದಗಿಸಿ ಗೌರವಿಸಿದ್ದ. ವಾಲಿಯಿಂದ ಸುಗ್ರೀವ ದಮನಿಸಲ್ಪಟ್ಟಾಗ ಸುಗ್ರೀವನ ಸಂಗಡವೇ ಈತನೂ ಪ್ರಪಂಚವನ್ನು ಸುತ್ತುತ್ತಾನೆ.

ದುಂದುಭಿಯ ಶಾಪದ ಕಾರಣ ಋಷ್ಯಮೂಕ ಪರ್ವತಕ್ಕೆ ವಾಲಿ ಬರಲಿಕ್ಕಾಗದ ಸಂಗತಿ ತಿಳಿದು ಅಲ್ಲಿಗೆ ಸುಗ್ರೀವ ನೆಲೆನಿಲ್ಲುವಂತೆ ಮಾಡಿದವ ಹನುಮಂತ. ದೂತನಲ್ಲಿ ಇರಬೇಕಾದ ಮುಖ್ಯ ಲಕ್ಷಣಗಳಾದ ಸ್ವಮಿಭಕ್ತಿ, ಸಮಯೋಚಿತ ಪ್ರಜ್ಞೆ, ವಾಕ್ ಪಟುತ್ವ ಹನುಮಂತನಲ್ಲಿ ಇದೆಯೆನ್ನುವುದನ್ನು ರಾಮ ಗಮನಿಸಿದ್ದ. ಅಷ್ಟೇಅಲ್ಲ, ಆತುರಗೆಟ್ಟು ಕಾರ್ಯವನ್ನು ಹಾಳುಮಾಡುವವನಲ್ಲ; ಸಂದರ್ಭ ಬಂದಾಗ ತನ್ನದೇ ಆದ ವಿವೇಚನೆಯನ್ನು ತನ್ನ ಒಡೆಯನಿಗೋಸ್ಕರ ತೆಗೆದುಕೊಳ್ಳುವ ವ್ಯಕ್ತಿ ಎನ್ನುವ ಕಾರಣಾಕ್ಕಾಗಿಯೇ ರಾಮ ಹನುಮಂತನ ಹತ್ತಿರ ತನ್ನ ಮುದ್ರೆಯುಂಗರವನ್ನು ಕೊಟ್ಟುಕಳುಹಿಸಿದ್ದು. ಅಲ್ಲದೇ ಸೀತೆ ಬದುಕಿದ್ದಾಳೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳುವುದೂ ಸಹ ಮುಖ್ಯವಿಷಯವಾಗಿತ್ತು.

ಸೀತಾನ್ವೇಷಣೆಗೆ ಸುಗ್ರೀವ ಒಂದುತಿಂಗಳ ಗಡುವನ್ನು ಹಾಕಿದ್ದ. ಯಶಸ್ವಿಯಾದವರಿಗೆ ತಾನು ಅನುಭವಿಸುವ ಭೋಗವನ್ನು ಕೊಡುವ, ವಿಫಲವಾದರೆ ಘೋರ ಶಿಕ್ಷೆಯನ್ನು ಸಹ ವಿಧಿಸುವ ಸುಗ್ರೀವಾಜ್ಞೆ ಅದಾಗಿತ್ತು. ದಕ್ಷಿಣ ದಿಕ್ಕುಗಳನ್ನು ಉಳಿದು ಉಳಿದ ದಿಕ್ಕುಗಳಿಗೆ ಕಳುಹಿಸಲ್ಪಟ್ಟವರು ತಿಂಗಳೊಳಗೆ ಬರಿಗೈಯಿಂದಲೇ ವಾಪಾಸು ಕಿಷ್ಕಿಂಧೆಗೆ ಬಂದರು. ಹಾಗಿ ಬಂದವರಿಗೆ ಸುಗ್ರೀವ ಯಾವ ಶಿಕ್ಷೆಯನ್ನೂ ಸಹ ವಿಧಿಸಲಿಲ್ಲ. ಏಕೆಂದರೆ ಆತನಿಗೆ ಸೀತೆ ಇರುವುದು ದಕ್ಷಿಣ ದಿಕ್ಕಿನಲ್ಲಿ ಎನ್ನುವುದು ಖಚಿತವಾಗಿ ತಿಳಿದಿತ್ತು. ಸೀತಾನ್ವೇಷಣೇಯಲ್ಲಿ ವಿಫಲರಾಗಿ ಬಂದ ವಾನರರು ದಕ್ಷಿಣದಿಕ್ಕಿಗೆ ಹೋದ ಹನುಮಂತ ಖಂಡಿತವಾಗಿ ಸೀತೆಯನ್ನು ಹುಡುಕಿ ಬರುತ್ತಾನೆ ಎಂದು ಹೇಳಿದಾಗ ಸುಗ್ರೀವ ಸುಮ್ಮನೇ ಇದ್ದನೆನ್ನುವುದೂ ಸಹ ಇದನ್ನು ಪುಷ್ಟಿಗೊಳಿಸುತ್ತದೆ.

ಸುಗ್ರೀವ ದಕ್ಷಿಣ ದಿಕ್ಕಿಗೆ ಬಲಿಷ್ಠ ತಂಡವನ್ನೇ ಕಟ್ಟಿ ಕಳುಹಿಸಿದ್ದನೆನ್ನುವುದನ್ನುಮೇಲೆ ನೋಡಿದ್ದೇವೆ. ಹಾಗೇ ಕಳುಹಿಸಿದ ವಾನರರು ಎಷ್ಟು ಕಡೆ ತಿರುಗಾಡಿದರೂ ಸೀತೆ ಎಲ್ಲಿರುವಳೆನ್ನುವ ಸುಳಿವು ಸಿಗಲಿಲ್ಲ. ಹಾಗೇ ಅಲೆದಡುವಾಗ ಅವರಿಗೆ ಅಡವಿಯಲ್ಲಿ ಘೋರ ರೂಪಿಯಾದ ರಾಕ್ಷಸನೋರ್ವ ಕಂಡ. ಆತನನ್ನು ಅಂಗದ ಒಂದೇ ಏಟಿಗೆ ಸಂಹರಿಸಿದ. ಆದರೆ ಸೀತೆ ಮಾತ್ರ ಸಿಗಲಿಲ್ಲ. ಹೀಗೆ ಹುಡುಕುವಾಗ ಅವರಿಗೆ ಋಕ್ಷಬಿಲವೆನ್ನುವ ಹೆಸರಿನ ಮಹಾಬಿಲವೊಂದು ಕಂಡಿತು. ಅದರಲ್ಲಿರಬಹುದೇ ಎಂದು ಒಳಹೊಕ್ಕಿ ನೋಡಿದಾಗ ಅಲ್ಲಿ ಓರ್ವ ತಾಪಸಿಯೋರ್ವಳು ಕಣ್ಣಿಗೆ ಬಿದ್ದಳು. ಸ್ವಯಂ ಪ್ರಕಾಶದಿಂದ ಕೂಡಿದ ಗುಹೆ, ಅಲ್ಲಿರುವ ಮನೋಹರವಾದ ದೃಶ್ಯಗಳನ್ನು ನೋಡಿದ ಆಂಜನೇಯನೇ ಆಕೆಯನ್ನು ವಿನಯದಿಂದ ಮಾತಾಡಿ ಆಕೆಯ ಮನಸ್ಸನ್ನು ಗೆಲ್ಲುತ್ತಾನೆ. ಅಕೆಯ ಮೂಲಕ ಅದು ಮಯನ ಮಗಳಲಾದ ಹೇಮೆಯೆನ್ನುವ ಅಪ್ಸರೆಯ ಸೌಧವೆಂದೂ, ಸ್ವಯಂಪ್ರಭೆಯೆನ್ನುವ ಈ ವೃದ್ಧ ತಾಪಸಿ ಅದನ್ನು ರಕ್ಷಿಸುವ ಹೊಣೆ ಹೊತ್ತವಳೆಂದೂ ತಿಳಿಯಿತು. ಹನುಮಂತನ ಮಧುರವಾದ ಮಾತಿನ ಮೂಲಕವೇ ಸ್ವಯಂಪ್ರಭೆಯ ಮೆಚ್ಚುಗೆಯನ್ನು ಗಳಿಸಿದನು. ವಿನಯ, ವಿವೇಕ, ಸಮಯ ಪ್ರಜ್ಞೆ ಮತ್ತು ಸ್ವಾಮಿಕಾರ್ಯನಿಷ್ಠೆ ಇವುಗಳನ್ನು ಗಮನಿಸಿದ ಸ್ವಯಂಪ್ರಭೆ ವಾನರರಿಗೆ ತಿಂಗಳಪರ್ಯಂತ ದಣಿವು ನೀರಡಿಕೆಯಗದಂತಹ ಹಣ್ಣುಹಂಪಲವನ್ನು ಕೊಟ್ಟು ಉಪಚರಿಸಿದಳು. ಹಾಗೇ ಅವರನ್ನು ಸುರಕ್ಷಿತವಾಗಿ ಗುಹೆಯಿಂದ ಹೊರಗೆ ತಂದು ಬಿಟ್ಟಳು. ದೇವತೆಗಳು ವೇದದಿಂದ ಪ್ರಸನ್ನರಾಗುತ್ತಾರೆ, ಹನುಮಂತನೂ ಆ ಅಪ್ಸರಸ್ತ್ರೀಯನ್ನು ವೇದದಂತಹ ನುಡಿಗಳ ಮೂಲಕವೇ ಗೆದ್ದನೆನ್ನುವುದನ್ನು ಮನಗಾಣಬಹುದು.

ಸ್ವಯಂಪ್ರಭೆಯ ಗುಹೆಯಿಂದ ಹೊರಗೆ ಬಂದು ನೋಡಿದರೆ ಅವರಿಗೆ ಕೊಟ್ಟ ಒಂದು ತಿಂಗಳ ಅವಧಿ ಮುಗಿದು ಹೋಗಿದೆ. ಸುಗ್ರೀವ ಪುಷ್ಯಮಾಸದಲ್ಲಿ ಅವರನ್ನು ಸೀತಾನ್ವೇಷಣೆಗೆ ಕಳುಹಿಸಿದ್ದ, ಈಗ ಪಾಲ್ಗುಣ ಮಾಸದ ಕೊನೆಯಲ್ಲಿ ವಸಂತನ ಆಗಮಕ್ಕಾಗಿ ಪುಷ್ಪಗಳೆಲ್ಲವೂ ಅರಳಿದ್ದವು. ಅದನ್ನು ಗಮನಿಸಿಯೇ ವಾನರರು ಸುಗ್ರೀವ ತಮಗೆ ವಿಧಿಸಿದ ಗಡುವು ಮುಗಿಯಿತು, ವಸಂತ ಋತುವಿನ ಆಗಮವಾಯಿತು ಎಂದುಕೊಂಡರು. ಸುಗ್ರೀವನ ಕಠೋರ ಆಜ್ಞೆಯನ್ನು ನೆನೆದ ಅಂಗದನಿಗೆ ಸಂಶಯ ಪ್ರಾರಂಭವಾಯಿತು. ವಾಲಿಯ ಮಗನೆನ್ನುವ ಕಾರಣಕ್ಕೆ ತನ್ನನ್ನು ನಿವಾರಣೆ ಮಾಡಲು ಸುಗ್ರೀವನಿಗೆ ಈಗ ನೆಪವೊಂದು ಸಿಕ್ಕಂತಾಯಿತು ಎಂದು ಆಲೋಚಿಸಿದ. ಎಲ್ಲಕ್ಕಿಂತ ದೊಡ್ಡ ಭಯವೇ ಜೀವಭಯ. ವಾನರರೆಲ್ಲರೂ ಅಂಗದ ಸುಗ್ರೀವನ ಎಚ್ಚರಿಕೆಯ ಆಜ್ಞೆಯನ್ನು ಕೇಳಿದವರೇ ಪ್ರಜ್ಞೆತಪ್ಪಿ ಬಿದ್ದರು. ಅಂಗದ ಈ ಸಂದರ್ಭವನ್ನು ಉಪಯೋಗಿಸಿ ತನ್ನ ಮನಸ್ಸಿನಲ್ಲಿರುವುದನ್ನು ಹೇಳುತ್ತಾನೆ.

“ಸುಗ್ರೀವ ಸ್ವಭಾವತಃ ಕ್ರೂರಿ, ಶ್ರೀರಾಮನೋ ಪ್ರೇಯಸಿಯಾದ ಸೀತೆಯಲ್ಲಿಯೇ ಆಸಕ್ತನಾಗಿರತಕ್ಕವ. ಹಾಗಾಗಿ ನಾವೇನಾದರೂ ಸೀತೆಯನ್ನು ಹುಡುಕದೇ ಬರಿಗೈಯಿಂದ ಹೋದರೆ ರಾಮನಿಗೆ ಪ್ರೀತಿಯುಂಟಾಗಲೆಂದು ಸುಗ್ರೀವ ನಮ್ಮನ್ನು ತೀಕ್ಷ್ಣವಾಗಿ ಶಿಕ್ಷಿಸದೇ ಬಿಡುವವನಲ್ಲ. ಅಲ್ಲಿ ಸಾಯುವುದಕ್ಕಿಂತ ಇಲ್ಲಿ ಸಮುದ್ರತೀರದಲ್ಲಿಯೇ ಪ್ರಾಯೋಪವೇಶ ಮಾಡುವೆ” ಎಂದುಬಿಡುತ್ತಾನೆ. ಅಂಗದನೇನೂ ಅಂಜುಕುಳಿಯಲ್ಲ. “ಆಪೂರ್ಯಮಾಣಂ ಶಶ್ವಚ್ಚ ತೇಜೋಬಲಪರಾಕ್ರಮೈಃ – ಆತ ಅಷ್ಟಾಂಗಯುಕ್ತ ಬುದ್ಧಿಯಿಂದಲೂ , ಬಾಹುಬಲ, ಮನೋಬಲ, ಉಪಾಯಬಲ ಮತ್ತು ಬಂಧುಬಲಗಳೆನ್ನುವ ನಾಲ್ಕುವಿಧವಾದ ಬಲಗಳಿಂದಲೂ, ದೇಶಕಾಲಗಳನ್ನು ತಿಳಿದು ಕೆಲಸಮಾಡುವವ, ದೃಢತೆ, ದಕ್ಷತೆಯೇ ಮೊದಲಾದ ಹದಿನಾಲ್ಕುವಿಧವಾದ ರಾಜಗುಣಗಳಿಂದ ಕೂಡಿದವನಾಗಿದ್ದ”. ಮುಂದೆ ರಾಮ ರಾವಣನಲ್ಲಿಗೆ ಸಂಧಾನಕ್ಕಾಗಿ ಅಂಗದನನ್ನೇ ಕಳುಹಿಸುವುದು ಆತನಲ್ಲಿರುವ ಈ ಮೇಲಿನ ಗುಣಗಳ ಕಾರಣದಿಂದಲೇ ಆಗಿದೆ. ಆತನ ಮಾತಿನ ಮೋಡಿಗೆ ವಾನರರೆಲ್ಲರೂ ಸಿಲುಕಿದರು. ಸುಗ್ರೀವನ ಪತ್ನಿ ರುಮೆಯ ತಂದೆಯಾದ ತಾರನೇ ಅಂಗದ ಮಾತಿಗೆ ಮರುಳಾಗಿ ಸೀತಾನ್ವೇಷಣೆಯಿಂದ ಹಿಂದೆಸರಿದು ಸ್ವಯಂಪಭೆಯ ಗುಹೆಯಲ್ಲಿಯೇ ಇದ್ದುಬಿಡೋಣ ಎಂದು ಬಿಡುತ್ತಾನೆ. ಹೆಚ್ಚಿನ ವಾನರರು ಈ ಸಲಹೆಗೆ ತಲೆಯಾಡಿಸುತ್ತಾರೆ.

ಅಂಗದ ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ಸುಗ್ರೀವನನ್ನು ಒಂದೇ ಸಮನೆ ದೂಷಿಸಲು ಪ್ರಾರಂಭಿಸುತ್ತಾನೆ. ರಾಜ್ಯ ಸಿಕ್ಕಮೇಲೆ ರಾಮನನ್ನು ಮರೆತ ಸುಗ್ರೀವ ಮಿತ್ರದ್ರೋಹಿ ಎನ್ನುತ್ತಾನೆ.

ಭ್ರಾತುರ್ಜ್ಯೇಷ್ಠಸ್ಯ ಯೋ ಭಾರ್ಯಾಂ ಜೀವತೋ ಮಹಿಷೀಂ ಪ್ರಿಯಾಮ್৷

ಧರ್ಮೇಣ ಮಾತರಂ ಯಸ್ತು ಸ್ವೀಕರೋತಿ ಜುಗುಪ್ಸಿತಃ৷৷4.55.3৷৷

“ಬದುಕಿರುವ (ಮಾಯಾವಿಯೊಡನೆ ನಡೆದ ಮೊದಲನೆಯ ಸಲದ ಯುದ್ಧದಲ್ಲಿ ವಾಲಿ ಸತ್ತ ಎಂದು ಬಂದು ಕಿಷ್ಕಿಂಧೆಯಲ್ಲಿ ಸುಳ್ಳು ಹೇಳಿದವ) ಅಣ್ಣನ ಪಟ್ಟಮಹಿಷಿಯನ್ನು, ಪತಿಪ್ರಿಯಳನ್ನು ಧರ್ಮದಲ್ಲಿ ತಾಯಿಗೆ ಸಮಾನಾದವಳನ್ನು ಅತ್ಯಂತ ನೀಚಪುರುಷನಾದ ಸುಗ್ರೀವ ಪರಿಗ್ರಹಿಸಿರುವನು. ಮಾಯಾವಿಯೊಡನೆ ವಾಲಿ ಯುದ್ಧ ಮಾಡುತ್ತಿರುವಾಗ ಬಿಲದ ಬಾಗಿಲನ್ನು ಮುಚ್ಚಿಬಂದವ ಸುಗ್ರೀವ. ಉಪಕಾರ ಮಾಡಿದ ರಾಮನನ್ನೂ ಮರೆತವ ಸುಗ್ರೀವ. ಆತನಿಗೆ ಅಧರ್ಮ ಪ್ರಾಪ್ತವಾಗುವುದೆನ್ನುವ ಭಯವಿಲ್ಲ. ಪಾಪಿಷ್ಠ, ಕೃತಘ್ನ, ಚಂಚಲಮನಸ್ಕನಾದವನಲ್ಲಿ ಸತ್ಕುಲಪ್ರಸೂತನಾದ ನಾನು ಹೇಗೆ ವಿಶ್ವಾಸವಿಡಲಿ” ಎನ್ನುತ್ತಾನೆ. ತಾನು ಪ್ರಾಯೋಪವೇಶವನ್ನೇ ಮಾಡುತ್ತೇನೆ ಎಂದು ಕುಳಿತು ಬಿಡುತ್ತಾನೆ.

ಇದನ್ನು ಗಮನಿಸಿದ ಹನುಮಂತ ಅಯ್ಯೋ, ಕಾರ್ಯ ಕೆಟ್ಟಿತು ಎಂದುಕೊಂಡ. ಅಂಗದನನ್ನು ಸುಮ್ಮನೇ ಮಾತಾಡಲು ಬಿಟ್ಟರೆ ಆತ ಜಾಂಬವನನ್ನೂ ಸಹ ಸೆಳೆದುಕೊಳ್ಳುತ್ತಾನೆ ಎನಿಸಿತು. ಸಾಮ-ದಾನ-ಬೇಧ-ದಂಡಳಲ್ಲಿ ಬೇಧೋಪಾಯದಿಂದ ವಾನರರನ್ನು ಅಂಗದನಿಂದ ತಪ್ಪಿಸಲು ಪ್ರಯೋಗಿಸುವುದೇ ಈ ಲೇಖನದ ಮೊದಲಿನ ಶ್ಲೋಕ. ಮೊದಲು ಆತ ಉಲ್ಲೇಖಿಸುವುದು ಗೌರವಾನ್ವಿತನಾದ ಜಾಂಬವನನ್ನು, ನಂತರ ಮಹಾಕಪಿಯಾದ ಸುಹೋತ್ರ, ಅಗ್ನಿಯ ಮಗನಾದನೀಲ ಹಾಗೂ ತಾನು ಈ ನಾಲ್ವರೂ ಯಾವಕಾರಣಕ್ಕೂ ರಾಮನನ್ನು ಬಿಡುವವರಲ್ಲ ಎನ್ನುವ ಮೂಲಕ ವಾನರರ ಸುಗ್ರೀವಭೀತಿಗೆ ಹದವಾದ ಧೈರ್ಯವನ್ನ್ ತುಂಬುತ್ತಾನೆ. ಅಂಗದನ ಪರಾಕ್ರಮವನ್ನು ಹೊಗಳಿ ಮಕ್ಕಳಿಲ್ಲದ ಸುಗ್ರೀವನಿಗೆ ನೀನೇ ಯುವರಾಜ, ಮುಂದೆ ಕಿಷ್ಕಿಂಧೆಯ ಅರಸನಾಗುವವ ಎನ್ನುತ್ತಾನೆ. ಈ ಕಪಿಗಳೂ ತಮ್ಮ ಹೆಂಡತಿ, ಮಕ್ಕಳನ್ನು ನಿನಗಿಂತಲೂ ಹೆಚ್ಚಿನದಾಗಿ ಪ್ರೀತಿಸುವ ಕಾರಣ, ಅವರನ್ನು ಬಿಟ್ಟು ಯುವರಾಜನಾದ ನಿನ್ನೊಡನೆ ಬರಲು ಇಚ್ಚಿಸಲಾರರು ಎನ್ನುವ ಮೂಲಕ ಕಪಿಗಳಿಗೆ ತಮ್ಮ ಬಂಧುಗಳು, ಪ್ರೀತಿಪಾತ್ರರನ್ನು ನೆನಪಿಸಿ ಅವರೆಲ್ಲರೂ ಅಂಗದನ ಜೊತೆ ಹೋಗದಂತೆ ತಡೆಯುವ ಬೇಧೋಪಾಯವನ್ನು ಹೂಡುತ್ತಾನೆ. ತಾರೆಗೆ ಅಪಾಪ್ಯವಾದವಾದ ಕಾರ್ಯವನ್ನು ಸುಗ್ರೀವ ಮಾಡಲಾರನೆನ್ನುವ ಮೂಲಕ ಭಾವನಾತ್ಮಕ ನೆಲೆಯಲ್ಲಿ ಅಂಗದನ ಮನಸ್ಸನ್ನೂ ವಿಚಲಿತಗೊಳಿಸುತ್ತಾನೆ. ಆದರೂ ಆತ ಪ್ರಾಯೋಪವೇಶವನ್ನು ಕೈಗೊಳ್ಳುವುದನ್ನು ನಿಲ್ಲಿಸುವುದಿಲ್ಲ.

ಹನುಮಂತ ಅಂಗದನ ಎಲ್ಲ ಆಕ್ಷೇಪಗಳಿಗೂ ಉತ್ತರ ಕೊಡುವುದಿಲ್ಲ. ಅದು ರಾಜದೂತನ ಕೆಲಸವೂ ಅಲ್ಲ; ಆತನಿಗೆ ಕಾರ್ಯಸಾಧನೆ ಮುಖ್ಯ. ಹಾಗಾಗಿ ಆತ ಲಕ್ಷ್ಮಣನ ಬಾಣಕ್ಕೆ ಯಾವ ಬಿಲದಲ್ಲಿ ಇದ್ದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾ ವಾನರರನ್ನು ಹಿಡಿದಿಟ್ಟುಕೊಳ್ಳುವ ಚಾಕಚಕ್ಯತೆಯನ್ನು ಪ್ರದರ್ಶಿಸುತ್ತಾನೆ. ಅಂಗದನೂ ಭಾವಾವೇಶವನ್ನು ತೊರೆದು ಸ್ವಲ್ಪ ಮೃದುವಾಗುತ್ತಾನೆ.

ಅಷ್ಟರಲ್ಲಿ ಅವರ ಭಾಗ್ಯವೋ ಎನ್ನುವಂತೆ ಜಟಾಯುವಿನ ಅಣ್ಣನಾದ ಸಂಪಾತಿ ಎನ್ನುವ ಪಕ್ಷಿಯ ದರ್ಶನವಾಗುತ್ತದೆ. ಸೂರ್ಯನನ್ನು ಹಿಡಿಯಲು ಜಟಾಯುವಿನೊಡನೆ ಸ್ಪರ್ಧಿಸಲು ಹೋದ ಸಂದರ್ಭದಲ್ಲಿ ಜಟಾಯುವನ್ನು ಸೂರ್ಯನ ಉಷ್ಣತೆಯಿಂದ ಕಾಪಾಡಲು ಹೋಗಿ ಸಂಪಾತಿಯ ರೆಕ್ಕೆಗಳೇ ಸುಟ್ಟುಹೋಗಿತ್ತು. ಆತ ಬಂದು ಇವಾನ್ನು ತಿನ್ನುತ್ತೇವೆ ಎಂದು ಹೆದರಿಸಿದಾಗ ಅಂಗದನೇ ಸೀತಾಪಹರಣ, ಜಟಾಯುವಧೆ ಎಲ್ಲವನ್ನೂ ತಿಳಿಸುತ್ತಾನೆ. ಸಂಪಾತಿಗೆ ಜಟಾಯು ರಾಮಕಾರ್ಯದಲ್ಲ್ ಮರಣಹೊಂದಿದ ಎನ್ನುವುದನ್ನು ತಿಳಿದು ದುಃಖವಾಗುತ್ತದೆ. ರಾಮನಿಗೆ ಸಹಾಯಮಾಡುವ ಉದ್ಧೇಶದಿಂದ ಸೀತೆಯನ್ನು ರಾವಣ ಲಂಕೆಗೆ ಕರೆಉಕೊಂಡ ಹೋದ ವಿಷಯವನ್ನು ಹೇಳಿ ತನ್ನನ್ನು ಅಲ್ಲೇ ಇರುವ ಮಹೇಂದ್ರ ಪರ್ವತದ ತುದಿಗೆ ಎತ್ತಿ ಕುಳ್ಳಿರಿಸಲು ಹೇಳುತ್ತದೆ. ಗೃಧ್ರಪಕ್ಷಿಗೆ ದೂರದಲ್ಲಿರುವ ವಸ್ತುಗಳನ್ನು ನೋಡುವ ಸಾಮರ್ಥ್ಯವಿರುತ್ತದೆ. ಅಲ್ಲಿಂದಲೇ ಆ ಪಕ್ಷಿ ಸೀತೆ ಇರುವ ಲಂಕೆಯ ಕುರಿತು ಹೇಳುತ್ತದೆ. ಸಮುದ್ರೋಲ್ಲಂಘನೆ ಮಾಡಿದರೆ ಸೀತೆಯನ್ನು ನೋಡಿಬರಬಹುದು ಎನ್ನುವಾಗಲೇ ಅದಕ್ಕೆ ರಾಮಕಾರ್ಯದ ಕಾರಣದಿಂದ ಸುಟ್ಟುಹೋದ ರೆಕ್ಕೆಗಳು ಚಿಗುರುತ್ತವೆ. ಹಿಮಾಲಯದತ್ತ ಹಾರಿ ಹೋಗುತ್ತದೆ.

ಬಹುಶಃ ಆಂಜನೇಯನ ಸಮಯವರಿತ ನಡೆಯೊಂದಿಲ್ಲದಿದ್ದರೆ ಅಂಗದನ ಬಂಡಾಯ ಗಂಭೀರಸ್ವರೂಪ ಪಡೆಯುತ್ತಿತ್ತು. ರಾಮಾಯಣದಲ್ಲಿ ಮೊದಲ ಬಾರಿಗೆ ಹನುಮಂತನ ವ್ಯಕ್ತಿ ಪರಿಚಯ ಪೂರ್ಣ ಪ್ರಮಾಣದಲ್ಲಿ ಪರಿಚಯವಾಗುವುದು ಈ ಭಾಗದಲ್ಲಿ. ಸಮರ್ಥವಾಗಿ ಆತ ಅದನ್ನು ನಿವಾರಿಸಿದ. ಸೀತಾನ್ವೇಷಣೆಗೆ ಕಾರಣನಾದ.

ಈಗ ವಾನರರಿಗೆ ಎದುರಾದ ಸಮಸ್ಯೆ ಎದುರಿನಲ್ಲಿ ಕಾಣುವ ಮಹಾ ಸಾಗರವನ್ನು ದಾಟಿ ಲಂಕೆಗೆ ತಲುಪುವುದು ಹೇಗೆನ್ನುವುದು. ನೋಡೋಣ ಮುಂದಿನ ಸಂಚಿಕೆಯಲ್ಲಿ.

ಇದನ್ನೂ ಓದಿ: Narayana Yaji Column: ಸೀತಾನ್ವೇಷಣೆಗೆ ಹೊರಟಿತು ವಾನರರ ದಂಡು