ರಜೆ ಕೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಹುಮಾಯೂನ್ ಕಬೀರ್ ಪುತ್ರ; ಬಾಬ್ರಿ ಮಸೀದಿ ವಿವಾದ ಬೆನ್ನಲ್ಲೇ ಮತ್ತೊಂದು ಕಿರಿಕ್
Gulam Nabi Azad: ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡುವುದಾಗಿ ಘೋಷಿಸಿ ವಿವಾದ ಹುಟ್ಟು ಹಾಕಿದ್ದ ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಂಡ ಶಾಸಕ ಹುಮಾಯೂನ್ ಕಬೀರ್‌ನ ಪುತ್ರ ಗುಲಾಮ್ ನಬಿ ಅಝಾದ್ ಇದೀಗ ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಗುಲಾಮ್ ನಬಿ ಅಝಾದ್‌ನನ್ನು ವಶಕ್ಕೆ ಪಡೆಯಲಾಗಿದೆ.
ಹುಮಾಯೂನ್ ಕಬೀರ್ ಮತ್ತು ಗುಲಾಮ್ ನಬಿ ಅಝಾದ್ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಡಿ. 28: ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡುವುದಾಗಿ ಘೋಷಿಸಿ ತೃಣಮೂಲ ಕಾಂಗ್ರೆಸ್ (TMC)ನಿಂದ ಅಮಾನತುಗೊಂಡ ಜನತಾ ಉನ್ನಾಯನ್ ಪಕ್ಷ (JUP)ದ ಮುಖ್ಯಸ್ಥ, ಶಾಸಕ ಹುಮಾಯೂನ್ ಕಬೀರ್ (Humayun Kabir)ನ ಪುತ್ರ ಗುಲಾಮ್ ನಬಿ ಅಝಾದ್ (Gulam Nabi Azad) ಇದೀಗ ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿ ವಿವಾದ ಹುಟ್ಟು ಹಾಕಿದ್ದಾರೆ. ಸದ್ಯ ಗುಲಾಮ್ ನಬಿ ಅಝಾದ್‌ನನ್ನು ವಶಕ್ಕೆ ಪಡೆಯಲಾಗಿದೆ. ಕಬೀರ್‌ನ ಭದ್ರತೆಗಾಗಿ ನಿಯೋಜಿತರಾಗಿದ್ದ ಕಾನ್ಸ್‌ಟೇಬಲ್ ಮೇಲೆ ಗುಲಾಮ್ ನಬಿ ಕೈ ಮಾಡಿದ್ದು ದೂರು ದಾಖಲಾಗಿದೆ.
ರಜೆ ಕೇಳಿದ್ದಕ್ಕೆ ಗುಲಾಮ್ ನಬಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಕಾನ್ಸ್‌ಟೇಬಲ್ ತಿಳಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಗುಲಾಮ್ ನಬಿಯನ್ನು ವಿಚಾರಣೆ ನಡೆಸಿ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದರು. ಸದ್ಯ ಅವರನ್ನು ಶಕ್ತಿಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಈ ವೇಳೆ ಶಾಸಕ ಕಬೀರ್ ಮನೆಯಲ್ಲಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಗುಲಾಮ್ ನಬಿ ಅಝಾದ್‌ನನ್ನು ವಶಕ್ಕೆ ಪಡೆದ ಪೊಲೀಸರು:
#WATCH | Murshidabad, WB: Today morning, one PSO of JUP party chairman Humayun Kabir's PSO Jumma Khan came to Saktipur PS and submitted a complaint that Golam Nabi Azad @ Robin, son of Jan Unnayan Party Chief Humayun Kabir, has allegedly beaten him when he asked for leave to go… pic.twitter.com/OsxsvkKOM8
— ANI (@ANI) December 28, 2025
ಕಬೀರ್ ಹೇಳಿದ್ದೇನು?
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕಬೀರ್ ಕಾನ್ಸ್‌ಟೇಬಲ್ ಮೇಲೆಯೇ ಆರೋಪ ಹೊರಿಸಿದ್ದಾರೆ. ʼʼಕಾನ್ಸ್‌ಟೇಬಲ್ ನನ್ನ ಮೇಲೆ ಹಲ್ಲೆಗೆ ಯತ್ನಿಸಿದಾಗ ಗುಲಾಮ್ ನಬಿ ನನ್ನ ನೆರವಿಗೆ ಧಾವಿಸಿದ್ದಾನೆ. ಅದು ಬಿಟ್ಟರೆ ಆತ ಹಲ್ಲೆ ನಡೆಸಿಲ್ಲ. ಸಿಸಿಟಿವಿ ದೃಶ್ಯ ನನ್ನ ಬಳಿ ಇದೆ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಘೇರಾವ್ ಹಾಕುತ್ತೇವೆʼʼ ಎಂದು ಹೇಳಿದ್ದಾರೆ.
ಬಾಬರಿ ಮಸೀದಿ ನಿರ್ಮಿಸುತ್ತೇವೆ ಎಂದ ಟಿಎಂಸಿ ಶಾಸಕ ಅಮಾನತು
ʼʼಭದ್ರತೆಗಾಗಿ ನಿಯೋಜಿತರಾಗಿದ್ದ ಕಾನ್ಸ್‌ಟೇಬಲ್ ನನ್ನ ರೂಮ್‌ಗೆ ಬಂದು ಹಲ್ಲೆಗೆ ಮುಂದಾದರು. ಆ ವೇಳೆ ಮಗ ಧಾವಿಸಿ ಕಾನ್ಸ್‌ಟೇಬಲ್‌ನನ್ನು ರೂಮ್‌ನಿಂದ ಹೊರ ತಳ್ಳಿದ್ದಾನೆ. ನಮ್ಮ ವಿರುದ್ಧ ಪೊಲೀಸರಿಗೆ ಸುಮ್ಮನೆ ಕ್ರಮ ಕೈಗೊಳ್ಳಬೇಕೆಂದಿದ್ದರೆ ಹಾಗೆ ಮಾಡಲಿ. ಅದಕ್ಕೆ ಯಾವುದೇ ಆಕ್ಷೇಪ ಇಲ್ಲ. ಆದರೆ ಜನವರಿ 1ರಂದು ಎಸ್‌ಪಿ ಕಚೇರಿಗೆ ಘೇರಾವ್ ಹಾಕುತ್ತೇವೆ. ನನ್ನ ರೂಮ್‌ಗೆ ಯಾವುದೇ ಕಾರಣವಿಲ್ಲದೆ ಅಕ್ರಮವಾಗಿ ಪ್ರವೇಶಿಸಿದ್ದೇಕೆ ಎನ್ನುವುದಕ್ಕೆ ಪೊಲೀಸರು ಉತ್ತರ ನೀಡಲಿ. ಆರಂಭದಲ್ಲೇ ಈ ಬಗ್ಗೆ ದೂರು ನೀಡಿದ್ದೆ. ಈ ಬಾರಿ ಕಾನ್ಸ್‌ಟೇಬಲ್ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಮಗ ನನ್ನ ರಕ್ಷಣೆಗೆ ಮುಂದಾಗಿದ್ದಷ್ಟೆʼʼ ಎಂದು ಗುಲಾಮ್ ನಬಿಯ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ನಿಜಕ್ಕೂ ಆಗಿದ್ದೇನು?
ಕಬೀರ್‌ನ ಸಮ್ಮುಖದಲ್ಲೇ ಗುಲಾಮ್ ನಬಿ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಕಬೀರ್ ಭಾನುವಾರ (ಡಿಸೆಂಬರ್ 28) ತಮ್ಮ ಕಚೇರಿಯಲ್ಲಿ ಪುತ್ರ ಮತ್ತು ಪಕ್ಷದ ಮುಖಂಡರ ಜತೆ ಸಭೆ ನಡೆಸಿದ್ದರು. ಈ ವೇಳೆ ಕಾನ್ಸ್‌ಟೇಬಲ್ ರಜೆ ಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಕಬೀರ್ ನಿರಾಕರಿಸಿದರು. ಇದರಿಂದ ಇಬ್ಬರ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಗುಲಾಂ ನಬಿ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ. ದೂರು ದಾಖಲಾದ ಬಳಿಕ ಪೊಲೀಸರು ಶಕ್ತಿಪುರದಲ್ಲಿರುವ ಗುಲಾಂ ನಬಿ ಅಝಾದ್ ನಿವಾಸಕ್ಕೆ ಭೇಟಿ ನೀಡಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಈ ಪ್ರಕರಣ ಭಾರಿ ಸಂಚಲನ ಮೂಡಿಸಿದೆ.