ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ನಮ್ಮ ದೇಶ ಎಚ್ಚೆತ್ತುಕೊಳ್ಳೋದು ಯಾವಾಗ ?

ಆ ಕಾರ್ಯಕ್ರಮದಲ್ಲಿ ಕೆಲವು ಯೂಟ್ಯೂಬರ್‌ಗಳು ಆಡಿದ ಮಾತು, ಹೇಳಿದ ಜೋಕು(?), ಅದರ ಪುನರಾವರ್ತನೆ ಸಭ್ಯರ ವೇದಿಕೆಯಾದ ಇಲ್ಲಿ ಬೇಡ. ‘ಮಾಡಿದವರ ಪಾಪ ಆಡಿದವರ ಬಾಯಲ್ಲಿ’ ಅನ್ನುವಂತೆ ಅದು ನಮ್ಮ ಬಾಯಕೆ? ಅಷ್ಟೇ ಅಲ್ಲ, ಅಲ್ಲಿ ಉದುರಿದ ಮುತ್ತುಗಳು ಒಂದೇ ಎರಡೇ? ಅಬ್ಬಬ್ಬಾ... ಅವರ ಮಿದುಳನ್ನು ತೊಳೆದುಕೊಳ್ಳಲು ಬೇಕಾಗುವ ಸೋಪು, ಡೆಟಾಲ್ ಕೊಂಡು ಕೊಳ್ಳಲು ಅವರ ಬಳಿ ಇರುವ ಹಣ ಸಾಲಲಿಕ್ಕಿಲ್ಲ

Kiran Upadhyay Column: ನಮ್ಮ ದೇಶ ಎಚ್ಚೆತ್ತುಕೊಳ್ಳೋದು ಯಾವಾಗ ?

ವಿದೇಶವಾಸಿ

dhyapaa@gmail.com

ಕಾಕಃ ಕೃಷ್ಣಃ ಪಿಕಃ ಕೃಷ್ಣಃ, ಕೋ ಭೇದಃ ಪಿಕಕಾಕಯೊಃ|

ವಸಂತಸಮಯೇ ಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ||

ಇದು ನಾವು ಪ್ರಾಥಮಿಕ ಶಾಲೆಯಲ್ಲಿರುವಾಗ ಓದಿದ ಸಂಸ್ಕೃತ ಶುಭಾಷಿತ. “ಕಾಗೆಯೂ ಕಪ್ಪು, ಕೋಗಿಲೆಯೂ ಕಪ್ಪು, ದೂರದಿಂದ ನೋಡಿದಾಗ ಇವೆರಡರ ನಡುವೆ ಯಾವ ವ್ಯತ್ಯಾಸವೂ ಕಾಣು ವುದಿಲ್ಲ, ಆದರೆ ವಸಂತಕಾಲ ಬಂದಾಗ ಕಾಗೆ ಮತ್ತು ಕೋಗಿಲೆ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ, ಕಾಗೆ ತನ್ನ ಧ್ವನಿಯಲ್ಲಿ ಕೂಗಿದರೆ, ಕೋಗಿಲೆ ತನ್ನ ದನಿಯಲ್ಲಿ ಹಾಡುತ್ತದೆ" ಎನ್ನುವುದು ಇದರ ಅರ್ಥ. ಈ ಸುಭಾಷಿತ, ಕಾಗೆ ಮತ್ತು ಕೋಗಿಲೆ ಯಾಕೆ ನೆನಪಾದವು ಎಂದು ಹೇಳುವುದಕ್ಕೂ ಮೊದ ಲು, ಮೊನ್ನೆ ನಡೆದ ಒಂದು ಘಟನೆ ತಮಗೆಲ್ಲ ತಿಳಿದಿರಬಹುದು. ನಾನು ಹೇಳುತ್ತಿರುವುದು, ‘ಇಂಡಿ ಯಾ ಗಾಟ್ ಟ್ಯಾಲೆಂಟ್’ ಹೆಸರನ್ನು ಸ್ವಲ್ಪ ತಿರುಚಿ, ‘ಇಂಡಿಯಾ ಗಾಟ್ ಲೇಟೆಂಟ್’ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮದ ವಿಷಯ.

ಆ ಕಾರ್ಯಕ್ರಮದಲ್ಲಿ ಕೆಲವು ಯೂಟ್ಯೂಬರ್‌ಗಳು ಆಡಿದ ಮಾತು, ಹೇಳಿದ ಜೋಕು(?), ಅದರ ಪುನರಾವರ್ತನೆ ಸಭ್ಯರ ವೇದಿಕೆಯಾದ ಇಲ್ಲಿ ಬೇಡ. ‘ಮಾಡಿದವರ ಪಾಪ ಆಡಿದವರ ಬಾಯಲ್ಲಿ’ ಅನ್ನುವಂತೆ ಅದು ನಮ್ಮ ಬಾಯಕೆ? ಅಷ್ಟೇ ಅಲ್ಲ, ಅಲ್ಲಿ ಉದುರಿದ ಮುತ್ತುಗಳು ಒಂದೇ ಎರಡೇ? ಅಬ್ಬಬ್ಬಾ... ಅವರ ಮಿದುಳನ್ನು ತೊಳೆದುಕೊಳ್ಳಲು ಬೇಕಾಗುವ ಸೋಪು, ಡೆಟಾಲ್ ಕೊಂಡು ಕೊಳ್ಳಲು ಅವರ ಬಳಿ ಇರುವ ಹಣ ಸಾಲಲಿಕ್ಕಿಲ್ಲ.

ನಮ್ಮ-ನಿಮ್ಮಂಥವರಿಗೆ ನಾಲ್ಕು ಗೋಡೆಯ ನಡುವೆ, ಒಬ್ಬರೇ ಇರುವಾಗಲೂ ಇಂಥ ವಿಷಯ ಗಳನ್ನು ಯೋಚಿಸಲು ಸಾಧ್ಯವಿಲ್ಲ. ಅಂಥ ವಿಷಯವನ್ನು ಸಾಮೂಹಿಕವಾಗಿ, ಸಾರ್ವಜನಿಕವಾಗಿ, ಅಲ್ಲಿ ಸೇರಿದ್ದ ನೂರಾರು ಜನರ ಎದುರಿನಲ್ಲಿ ಹೇಳುವುದು, ಸಾಲದು ಎಂಬಂತೆ, ಯೂಟ್ಯೂಬ್‌ ನಂಥ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಳ್ಳುತ್ತಾರೆ (ಈಗ ಅದನ್ನು ತೆಗೆದಿದ್ದಾರಂತೆ!) ಎಂದರೆ ಏನು ಹೇಳೋಣ? ಪ್ರಮಾಣ ಮಾಡಿ ಹೇಳುತ್ತೇನೆ, ಮೊನ್ನೆ ಈ ಘಟನೆ ನಡೆಯುವವರೆಗೂ ಅಲ್ಲಿದ್ದ ಐವರಲ್ಲಿ ಒಬ್ಬರ ಹೆಸರೂ ನನಗೆ ಗೊತ್ತಿರಲಿಲ್ಲ.

ನಾನು ಯೂಟ್ಯೂಬ್ ಅಥವಾ ಪಾಡ್-ಕಾಸ್ಟ್‌ನ ಅಭಿಮಾನಿಯೂ ಅಲ್ಲ. ನಾನು ಯಾರನ್ನೂ ಹಿಂಬಾಲಿಸುವುದೂ ( follow) ಇಲ್ಲ. ಇನ್ನು ಸಬ್‌ಸ್ಕ್ರೈಬ್ ಮಾಡುವುದಾಗಲಿ, ಬೆಲ್ ಐಕಾನ್ ಒತ್ತು ವುದಾಗಲೀ ದೂರದ ಮಾತು. ಯಾಕೆಂದರೆ, ಅವರಲ್ಲಿ ಬಹುತೇಕ ಜನರು ಹಣಕ್ಕೋಸ್ಕರ ಮಾಡುವ ವರು. ಅದರ ಹಿಂದೆ ಓದಿಲ್ಲ-ಅರಿವಿಲ್ಲ, ಶ್ರಮವಿಲ್ಲ-ಕ್ರಮವಿಲ್ಲ. ಬಹುತೇಕರು ಸಸ್ತಾ ಪ್ರಚಾರಕ್ಕಾಗಿ ರಸ್ತೆಗೆ ಇಳಿಯುವ ಖಾಸಬದ್ರ ಜನ.

ಇದನ್ನೂ ಓದಿ: Kiran Upadhyay Column: ಪ್ರಶಸ್ತಿ, ಪ್ರಶಸ್ತಿ ! ಕೊಡುವುದು ಯಾವಾಗ ?

ಇವರಿಗೆ ಎಷ್ಟು ಜನ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ (ಫಾಲೋವರ್ಸ್), ಎಷ್ಟು ಜನ ಲೈಕ್ ಮಾಡಿzರೆ, ಎಷ್ಟು ಜನರನ್ನು ಇದು ತಲುಪಿದೆ ಎನ್ನುವುದರ ಜತೆಗೆ, ಅದರಿಂದ ನಮಗೆ ಎಷ್ಟು ಧನ ಸಂಪಾದನೆ ಆಗುತ್ತಿದೆ ಎನ್ನುವುದಷ್ಟೇ ಪ್ರಮುಖ ವಿಷಯವೇ ಹೊರತು ತಮ್ಮ ಚಾನಲ್‌ನಿಂದ, ತಮ್ಮ ಮಾತಿ ನಿಂದ, ತಾವು ನಡೆಸಿಕೊಡುವ ಕಾರ್ಯಕ್ರಮದಿಂದ ಸಮಾಜಕ್ಕೆ ಏನಾದರೂ ಪ್ರಯೋಜನವಿದೆಯೇ? ಊರು ಉದ್ಧಾರವಾಗುತ್ತಿದೆಯೇ? ಎಂಬ ಕಿಂಚಿತ್ ಕಾಳಜಿಯೂ ಇರುವು ದಿಲ್ಲ. ಈ ಸಂಭ್ರಮಕ್ಕೆ ಇವರಿಗೆ ‘ವಿಷಯ ಸೃಷ್ಟಿಕರ್ತ’ (ಕಂಟೆಂಟ್ ಕ್ರಿಯೇಟರ್), ‘ಸಾಮಾಜಿಕ ಮಾಧ್ಯಮ ಪ್ರಭಾವಿ (ಸೋಷಿಯಲ್ ಮೀಡಿಯಾ ಇನ್ಲುಯೆನ್ಸರ್) ಅಬ್ಬಬ್ಬಾ, ಈ ಪ್ರಪಂಚದಲ್ಲಿ ದೊಡ್ಡ ದೊಡ್ಡ ಬಿರುದಿಗೆ ಯಾವ ಕೊರತೆಯೂ ಇಲ್ಲ, ಅದನ್ನು ಹುಡುಕಿ ಹುಡುಕಿ ಹುಡುಕಿ ಇಟ್ಟುಕೊಳ್ಳುವವರ ಸಂಖ್ಯೆಯೂ ಕಮ್ಮಿಯಿಲ್ಲ!

ಮಾಡುವುದು ವೀಡಿಯೋ, ಆಡುವ ಮಾತು ಮಾತ್ರ ಚಿಲ್ಲರೆ. ಅಲ್ಲ, ಯಾರೋ ಮಾಡಿದ್ದನ್ನು ಇವರು ಅನುಸರಿಸಿದರೆ, ಯಾರೋ ಹಾಡಿದ್ದನ್ನು ಇವರು ಪುನಃ ಹಾಡಿದರೆ, ಯಾರೋ ಮಾಡಿದ ನೃತ್ಯ ಸಂಯೋಜನೆಯನ್ನು ಇವರು ಅನುಕರಣೆ ಮಾಡಿದರೆ, ಇವರು ಯಾವ ಸೀಮೆಯ ಪ್ರಭಾವಿಗಳು? ಇವರೆಲ್ಲರೂ ಪ್ರಭಾವಕ್ಕೆ ಒಳಗಾದವರೇ, ಒಳಗಾಗುವವರೇ ವಿನಾ, ಇವರು ಪ್ರಭಾವಿಗಳಾಗಲು ಹೇಗೆ ಸಾಧ್ಯ? ಪ್ರಭಾವಿಗಳಾಗಲು ಅವರ ವಿಚಾರ ಸ್ವಂತದ್ದಾಗಿರಬೇಕು, ಒಂದು ವಿಷಯದ ಮೇಲೆ ಹಿಡಿತ ಇರಬೇಕು ಅಥವಾ ವಿಷಯದ ವಿಶ್ಲೇಷಣೆಯನ್ನಾದರೂ ಮಾಡುವಂತಿರಬೇಕು.

ನಾನು ಈ ರೀತಿಯ ಯೂಟ್ಯೂಬರ್‌ಗಳನ್ನು ನೋಡದೆ ಇರುವುದಕ್ಕೆ ಕಾರಣವಿದೆ. ಕೆಲವು ವರ್ಷದ ಹಿಂದೆ ಡಿಂಚಿಕ್ ಪೂಜಾ ಹೆಸರಿನ ‘ಸೋ ಕಾಲ್ಡ್’ ಕಲಾವಿದೆ ಯೂಟ್ಯೂಬ್‌ನಲ್ಲಿ ಬಹಳ ಸದ್ದು ಮಾಡಿದ್ದಳು. ಅವಳೇ ಬರೆದುಕೊಂಡು, ಅವಳೇ ರಾಗ ಸಂಯೋಜಿಸಿ, ಅವಳೇ ಹಾಡುತ್ತಿದ್ದಳಾದ್ದ‌ ರಿಂದ ಒಂದು ಹಂತಕ್ಕೆ ಅವಳನ್ನು ಒಪ್ಪಬಹುದಾಗಿತ್ತು ಅನ್ನಿ. ಆದರೆ ತೀರಾ ಕೆಟ್ಟ ಸ್ವರದಲ್ಲಿ, ಶ್ರುತಿ ಬಿಟ್ಟು ಹಾಡುವ ಹಾಡುಗಾರ್ತಿ ಅವಳಾಗಿದ್ದಳು. ಅವಳನ್ನು ಸಲ್ಮಾನ್ ಖಾನ್‌ನಂಥವರು ತಮ್ಮ ಕಾರ್ಯಕ್ರಮದಲ್ಲಿ ಕರೆಸಿ ತಮಾಷೆ ಮಾಡುತ್ತಿದ್ದರು.

ಅದು ಅವಳಿಗೆ ಅರ್ಥವಾಗುತ್ತಿತ್ತೋ, ಇಲ್ಲವೋ, ನನಗಂತೂ ಯೂಟ್ಯೂಬರ್‌ಗಳನ್ನು ಹಿಂಬಾ ಲಿಸುವ ಹುಚ್ಚು ಬಿಟ್ಟುಹೋಗಿತ್ತು. ಆ ಕಾರಣಕ್ಕಾದರೂ ಅಂಥವರಿಗೆ ಧನ್ಯವಾದಗಳು. ಇಲ್ಲವಾದರೆ ನೀವು ಗಮನಿಸಿ, ಕ್ಯಾನ್ಸರ್‌ಗೆ ಮನೆಮದ್ದಿನಿಂದ ಹಿಡಿದು, ಶೌಚಾಲಯ ಬಳಸುವುದು ಹೇಗೆ ಎನ್ನುವು ದರವರೆಗೂ ಇಂದು ಯೂಟ್ಯೂಬ್‌ನಲ್ಲಿ ಮಾಹಿತಿಗಳು, ತಪ್ಪು ಮಾಹಿತಿಗಳು ಲಭ್ಯವಿವೆ.

ಅದೊಂದು ಜಗತ್ತಿನ ದೊಡ್ಡ ತೊಟ್ಟಿ, ಅಲ್ಲಿ ಬೇಕಾದದ್ದು-ಬೇಡವಾದದ್ದು ಎಲ್ಲವೂ ಇವೆ. ಮೊಬೈಲ್ ಬಳಸುವವರೆಲ್ಲ ಒಮ್ಮೆಯಾದರೂ ಆ ತೊಟ್ಟಿಯಲ್ಲಿ ಇಣುಕಿ ನೋಡುತ್ತಾರೆ. ಆ ತೊಟ್ಟಿಗೆ ಬಂದು ಬೀಳುವ ಸರಕನ್ನು ನಿಯಂತ್ರಿಸುವವರು ಯಾರು? ಮೊನ್ನೆ ನಡೆದ ಘಟನೆಯನ್ನೇ ತೆಗೆದುಕೊಳ್ಳಿ, ಆ ಯೂಟ್ಯೂಬರ್ ಹೇಳಿದ ಅಶ್ಲೀಲ ಜೋಕು, ಸ್ವತಃ ಅವನದ್ದಲ್ಲ, ಅದು ಕೂಡ ವಿದೇಶಿ ಯೂಟ್ಯೂಬರ್ ಗಳಿಂದ ಎರವಲು ಪಡೆದದ್ದು ಎಂದಾದರೆ, ಇವರೆಲ್ಲ ಯಾವ ಸೀಮೆಯ ಪ್ರಭಾವಿಗಳೋ ಆ ದೇವರೇ ಬಲ್ಲ.

ಇವರಿಗೆ ವಿದೇಶದಿಂದ ಎರವಲು ಪಡೆಯಬೇಕು ಎಂದಾದರೆ, ಅವರನ್ನು ಅನುಕರಿಸಬೇಕು ಎಂದಾದರೆ, ಸಾಕಷ್ಟು ಒಳ್ಳೆಯ ಸಂಗತಿಗಳಿವೆಯಲ್ಲ, ಅದನ್ನೇಕೆ ಪಡೆದುಕೊಳ್ಳುವುದಿಲ್ಲ? ಸ್ಟ್ಯಾಂಡ್- ಅಪ್ ಕಾಮೆಡಿ, ರೋ ಇತ್ಯಾದಿ ಹೆಸರಿನಲ್ಲಿ, ಅಸಹ್ಯ, ಅಸಭ್ಯ, ಅಶ್ಲೀಲ, ವ್ಯಕ್ತಿ ನಿಂದನೆ ಎಷ್ಟು ಸರಿ? ಪ್ರಶ್ನೆ ಮಾಡಿದರೆ, ಅದು ವಾಕ್ ಸ್ವಾತಂತ್ರ್ಯವಂತೆ!

ಅಸಭ್ಯ ಬಟ್ಟೆ ತೊಡುವುದು, ಅಸಹ್ಯಕರ ವಿಷಯಗಳನ್ನು ಹೊತ್ತು ತರುವುದು ಅಭಿವ್ಯಕ್ತಿ ಸ್ವಾತಂ ತ್ರ್ಯವಂತೆ. ಇಂದು ಭಾರತೀಯ ಆಯುರ್ವೇದ, ಯೋಗ ವಿದೇಶದಲ್ಲಿ ಜನಪ್ರಿಯವಾಗುತ್ತಿವೆ. ಅವರು ನಮ್ಮದ್ದನ್ನು ಒಪ್ಪಿಕೊಳ್ಳುತ್ತಿರುವಾಗ, ನಾವು ಮಾತ್ರ ಅಲ್ಲಿಯ ಕೊಳಕನ್ನು ಅಪ್ಪಿಕೊಳ್ಳುವ ಹುಚ್ಚು ಯಾಕೆ? ಇರಲಿ, ರಣವೀರ್ ಅಲ್ಲಹಾಬಾದಿಯ ಹೆಸರನ್ನು ನಾನು ಸರಿಯಾಗಿ ಗಮನಿಸಿದ್ದು ಮೊನ್ನೆಯ ಘಟನೆ ನಡೆದ ನಂತರವೇ.

ಅಲ್ಲಿಯವರೆಗೆ ಒಂದೆರಡು ಬಾರಿ ಅವನನ್ನು ಯೂಟ್ಯೂಬ್‌ನಲ್ಲಿ ನೋಡಿದ್ದೆನಾದರೂ, ನನಗೆ ಅಷ್ಟೊಂದು ಆಸಕ್ತಿದಾಯಕವಾಗಿ ಕಾಣಲಿಲ್ಲ. ಅದೊಂದು ಕೋಗಿಲೆಯ ರೂಪದಲ್ಲಿರುವ ಕಾಗೆ ಎಂದು ಎಷ್ಟು ಜನರಿಗೆ ಬಹಳ ತಿಳಿದದ್ದೂ ಮೊನ್ನೆಯೇ. ಹಾಗಂತ ಅವನು ಸಂದರ್ಶನಕ್ಕೆ ಕರೆ ತರುತ್ತಿದ್ದ ವ್ಯಕ್ತಿಗಳೇನೂ ಸಾಮಾನ್ಯರಾಗಿರಲಿಲ್ಲ. ಭಾರತದ ವಿದೇಶಾಂಗ ಸಚಿವ ಡಾ.ಜಯಶಂಕರ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆದಿಯಾಗಿ ಹೆಚ್ಚು ಕಮ್ಮಿ ಕೇಂದ್ರ ಸರಕಾರದ ಮಂತ್ರಿ ಮಂಡಲವೇ ಅವನ ‘ಬಿಯರ್ ಬೈಸೆ’ ಚಾನೆಲ್‌ನ ‘ದ ರಣವೀರ್ ಶೋ’ ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಬಂದಿದ್ದಾರೆ.

ಚಿತ್ರತಾರೆಯರಾದ ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್, ಅಕ್ಷಯ್ ಕುಮಾರ್, ಕ್ರೀಡಾಪಟು ಗಳಾದ ಕೆ.ಎಲ.ರಾಹುಲ, ಸೌರವ್ ಗಂಗೂಲಿ, ಪಿ.ವಿ.ಸಿಂಧು, ಇಸ್ರೋದ ಡಾ. ಸೋಮನಾಥ್ ಮೊದ ಲಾದವರು ಇವನೊಂದಿಗೆ ಸಂದರ್ಶನ ನಡೆಸಿzರೆ. ಅದರೊಂದಿಗೆ ಕೃಷ್ಣ, ರಾಮಾಯಣದಂಥ ವಿಷಯಗಳ ಕುರಿತಾಗಿಯೂ, ಅಧ್ಯಾತ್ಮ, ಆರೋಗ್ಯದ ಕುರಿತಾಗಿಯೂ, ಸ್ಟಾರ್ಟ್-ಅಪ್ ಕಂಪನಿ ಗಳನ್ನು ಆರಂಭಿಸುವುದು ಹೇಗೆ ಎನ್ನುವುದರಿಂದ ಹಿಡಿದು, ಜ್ಯೋತಿಷ್ಯದವರೆಗೆ, ಇಂಗ್ಲಿಷ್ ಮಾತ ನಾಡಲು ಸುಲಭವಾದ ವಿಧಾನ, ಉಡುಗೆ-ತೊಡುಗೆ ಧರಿಸುವುದು ಹೇಗೆ ಎನ್ನುವುದರವರೆಗೂ ಈತನ ಚಾನೆಲ್‌ನಲ್ಲಿ ಸಂದರ್ಶನ ನಡೆದಿದೆ ಎನ್ನುವುದು ನನಗೆ ತಿಳಿದದ್ದು ಈ ಘಟನೆ ನಡೆದ ನಂತರವೇ.

ಕಳೆದ ಒಂದು ದಶಕದಲ್ಲಿ ಆತ ತನ್ನ ಯೂಟ್ಯೂಬ್ ಮತ್ತು ಪಾಡ್‌ಕಾಸ್ಟ್‌ನಿಂದ ಗಳಿಸಿದ ಮೊತ್ತ ಬರೋಬ್ಬರಿ 60 ಕೋಟಿ ರೂಪಾಯಿ. ಪ್ರತಿ ತಿಂಗಳು 35 ಲಕ್ಷ ರುಪಾಯಿ ಅದರಲ್ಲೂ ಪ್ರತಿ ಕಂತಿನಲ್ಲಿ ಆತ ಐದರಿಂದ ಏಳು ಲಕ್ಷ ರುಪಾಯಿ ದುಡಿಯುತ್ತಿದ್ದ ಎಂದು ಟೈಮ್ಸ ವರದಿ ಹೇಳುತ್ತದೆ. ಇರಲೂ ಬಹುದು, ಏಕೆಂದರೆ ಝೊಮ್ಯಾಟೋದಂಥ ದೊಡ್ಡ ಕಂಪನಿಗಳು ಕೂಡ ಅವನಿಗೆ ಜಾಹೀರಾತು ನೀಡುತ್ತಿದ್ದವಂತೆ.

ಅದೇನೋ ಅವನ ದುಡಿಮೆ ಆಯಿತು. ಆದರೆ ಪ್ರಮುಖ ಅಥವಾ ಹೆಸರಾಂತ ವ್ಯಕ್ತಿಗಳೆಲ್ಲ ಅವ ನೊಂದಿಗೆ ಯಾಕೆ ಸಂದರ್ಶನಕ್ಕೆ ಬರಬೇಕು? ಅದಕ್ಕೆ ಕಾರಣ ಒಂದೇ, ಅವನಿಗಿರುವ ಫಾಲೋವರ್ಸ್ ಅಥವಾ ಹಿಂಬಾಲಕರು. ಇವನೊಂದಿಗೆ ಸಂದರ್ಶನ ನಡೆಸಿದರೆ, ಅಷ್ಟು ಜನರನ್ನು ತಾವು ತಲುಪಬಹುದು ಎಂಬ ಖಯಾಲಿಯಿಂದಾಗಿ ಇವರೆಲ್ಲ ಬಂದು ಸಂದರ್ಶನವನ್ನು ನೀಡಿ ದರು. ನಾವು ಹೆಚ್ಚು ಜನರನ್ನು ತಲುಪಬಹುದು ಎಂಬ ಕಾರಣಕ್ಕಾಗಿ ಮಂತ್ರಿಗಳು, ಕಲಾವಿದರು, ಕ್ರೀಡಾ ಪಟುಗಳು ಬಂದು ಸಂದರ್ಶನ ನೀಡಿದ್ದಾರೆ.

ಅವನಂತೆ ಇನ್ನೂ ಒಂದಷ್ಟು ಜನರಿಗೆ ಸಂದರ್ಶನ ನೀಡುತ್ತಾರೆ. ಅಂಥವರಿಗೆ ಪ್ರಶಸ್ತಿಯನ್ನೂ ನೀಡುತ್ತಾರೆ. ಹೆತ್ತವರ ಬಗ್ಗೆಯೇ ಕೀಳಾಗಿ ಜೋಕ್ ಮಾಡಿದ ನಂತರ ಆತ ಕ್ಷಮೆ ಯಾಚಿಸುವ ನಾಟಕ ಮಾಡಿದ್ದಾನೆ. ಅದಕ್ಕೆ ಕೆಲವರು ‘ಅದು ವಾಕ್ ಸ್ವಾತಂತ್ರ್ಯ, ಕ್ಷಮೆ ಯಾಚಿಸಿದ್ದಾಗಿದೆ, ಈ ವಿಷಯ ವನ್ನು ದೊಡ್ಡದಾಗಿಸಬಾರದು’ ಇತ್ಯಾದಿ ಸಲಹೆ ನೀಡುತ್ತಿದ್ದಾರೆ. ನನಗೆ ಅರ್ಥವಾಗದ ವಿಷಯ ವೆಂದರೆ, ಜೋಕ್ ಮಾಡುವಾಗ ಆತ ಯಾರದ್ದೇ ಒತ್ತಾಯಕ್ಕೆ ಮಾಡಿದ್ದು ಎಂದಾಗಲೀ, ಒಲ್ಲದ ಮನಸ್ಸಿನಿಂದ ಮಾಡಿದ್ದು ಎಂದಾಗಲೀ ಅನಿಸಲಿಲ್ಲ.

ಒಂದು ವೇಳೆ ನಿಜವಾಗಿಯೂ ಪಶ್ಚಾತ್ತಾಪ ಪಟ್ಟಿದ್ದೇ ಹೌದಾದರೆ, ಮನೆಗೆ ಬೀಗ ಹಾಕಿ ಪರಾರಿ ಯಾಗಿದ್ದೇಕೆ? ಪೊಲೀಸರು ಎರಡು ಬಾರಿ ಸಮ ನೀಡಿದರೂ ಠಾಣೆಗೆ ಬರದೇ ಇರಲು ಕಾರಣವೇನು? ಆ ಕಾರ್ಯಕ್ರಮದಲ್ಲಿ ಆಯೋಜಕರನ್ನೂ ಸೇರಿಸಿ, ಇನ್ನೂ ನಾಲ್ಕು ಜನರಿದ್ದರು. ಅವರ ಅಭಿಪ್ರಾ ಯವೇನು? ಅವರ ಮೇಲೆ ಯಾವ ಕ್ರಮ? ಅಷ್ಟಕ್ಕೂ ಅಂಥವರ ಮೇಲೆ ಯಾರು ಕ್ರಮ ಕೈಗೊಳ್ಳ ಬೇಕು?ಇತ್ತೀಚಿನ ದಿನಗಳಲ್ಲಿ ಒಟಿಟಿಯಲ್ಲಿ ಬರುವ ಸಿನಿಮಾ, ಧಾರಾವಾಹಿಗಳು, ತಕ್ಕ ಮಟ್ಟಿಗೆ ಬಿಗ್ ಬಾಸ್, ರೊಡೀಸ್, ಕೆಲವು ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮಗಳನ್ನು ನೋಡಿದರೆ, ತಾಯಿ, ಅಕ್ಕ-ತಂಗಿಯರ ಬೈಗುಳಗಳೆಲ್ಲ ‘ಬೈಗುಳ’ದ ಹಣೆಪಟ್ಟಿ ಕಳಚಿ, ಸಾಮಾನ್ಯ ಪದಗಳಾಗುತ್ತಿವೆ.

ವ್ಯಕ್ತಿ ನಿಂದನೆ ಸ್ವಾಭಾವಿಕವಾಗಿವೆ. ಜನ ಅದನ್ನು ದುಡ್ಡುಕೊಟ್ಟು ನೋಡಲು ಹೋಗುತ್ತಿದ್ದಾರೆ ಎಂದರೆ ಅದನ್ನು ಇಷ್ಟಪಡುತ್ತಿzರೆ ಎಂದು ವಾದಿಸುವವರೂ ಇದ್ದಾರೆ. ಇರಬಹುದು, ಗೊತ್ತಿದ್ದೂ ಗೊತ್ತಿದ್ದೂ ಹೋಗುವವರಿಗೆ ಯಾರೂ ಅಡ್ಡಿಪಡಿಸಲಾಗುವುದಿಲ್ಲ. ಅದು ಒಳ್ಳೆಯದೋ, ಕೆಟ್ಟದ್ದೇ, ಅವರವರ ವಿವೇಚನೆಗೆ ಬಿಟ್ಟದ್ದು. ಅವರು ಹೋಗುವಾಗ ತಮ್ಮ ಮನೆಯವರನ್ನೂ, ಮಕ್ಕಳನ್ನೂ ಕರೆದುಕೊಂಡು ಹೋಗುತ್ತಾರೆಯೇ ಎನ್ನುವುದಕ್ಕೆ ಅವರೇ ಉತ್ತರಿಸಬೇಕು.

ಒಳ್ಳೆಯ ಕಾರ್ಯಕ್ರಮವಾದರೆ ಅಪ್ಪ-ಅಮ್ಮ, ಮಡದಿ-ಮಕ್ಕಳ ಜತೆಗೂ ನೋಡಬಹುದಲ್ಲ! ಇನ್ನು ಕೆಲವರ ವಾದ ಏನೆಂದರೆ, ನಾವು ಜಗತ್ತಿನಲ್ಲಿ ನಡೆಯದೇ ಇರುವುದನ್ನು ತೋರಿಸುವುದಿಲ್ಲ, ಹೇಳು ವುದಿಲ್ಲ, ಇಂಥವೆಲ್ಲ ಜಗತ್ತಿನಲ್ಲಿ ನಡೆಯುತ್ತವೆ ಎಂದಾದರೆ ಯಾಕೆ ತೋರಿಸಬಾರದು? ಸರಿಯಾ ಗಿಯೇ ಇದೆ. ಆದರೆ ನೀವು ಯಾವ ರೀತಿಯಲ್ಲಿ ತೋರಿಸುತ್ತೀರಿ? ಯಾವ ಮಾತಿನಲ್ಲಿ ತೋರಿಸುತ್ತೀರಿ ಎನ್ನುವುದು ಪ್ರಮುಖವಾಗಿರುತ್ತದೆ.

ನಿಮ್ಮಲ್ಲಿ ಎಷ್ಟು ಜನ ‘ದೇವದಾಸಿ’ ನಾಟಕ ನೋಡಿದ್ದೀರೋ ಗೊತ್ತಿಲ್ಲ. ವೇಶ್ಯಾವಾಟಿಕೆಯ ಕರಾಳ ಮುಖವನ್ನು ತೋರಿಸುವ ನಾಟಕ ಅದು. ಅದರಲ್ಲಿ ಮಾಸ್ಟರ್ ಹಿರಣ್ಣಯ್ಯ ನಾಜೂಕಯ್ಯನ ಪಾತ್ರ ಮಾಡುತ್ತಿದ್ದರು. ತಮ್ಮ ಖಡಕ್ ಮಾತಿಗೆ ಹೆಸರಾದ ಹಿರಣ್ಣಯ್ಯ ಕೂಡ ಅಲ್ಲಿ ಅಳತೆ ತಪ್ಪಿ ಮಾತಾ ಡಲಿಲ್ಲ.

ಇಂದಿಗೂ ಯೂಟ್ಯೂಬ್‌ನಲ್ಲಿ ಆ ನಾಟಕ ಲಭ್ಯವಿದೆ. ಆ ಪಾತ್ರವನ್ನು ಇಂದಿನ ಒಟಿಟಿ, ಯೂಟ್ಯೂ ಬ್ ಪ್ರಭಾವಿಗಳಿಗೆ ಕೊಟ್ಟರೆ ಅದೆಷ್ಟು ಅಶ್ಲೀಲ ಮಾತಾಡುತ್ತಿದ್ದರೋ ದೇವರೇ ಬಲ್ಲ.ಕೊನೆಯದಾಗಿ, ಇದಕ್ಕೆ ಕಡಿವಾಣ ಬೇಡವೇ? ಇಂದು ಮಕ್ಕಳ ಕೈಯಲ್ಲೂ ಮೊಬೈಲ್ ಬಂದು ಕುಳಿತಿದೆ. ಅವರು ಇಂಥದ್ದನ್ನೆಲ್ಲ ನೋಡುವುದಿಲ್ಲವೇ ಎಂದರೆ, ಪಾಲಕರು ಕಾಳಜಿವಹಿಸಬೇಕು ಎನ್ನುತ್ತಾರೆ.

ಒಂದು ಹಂತದವರೆಗೆ ಪಾಲಕರು ನೋಡಬಹುದೇ ವಿನಾ ದಿನದ 24 ಗಂಟೆಯೂ ಪಾಲಕರು ಮಕ್ಕಳ ಹಿಂದೆ ಇರಲು ಸಾಧ್ಯವಿಲ್ಲ. ಇಂದಿನ ಮಕ್ಕಳು, ಅದರಲ್ಲೂ ಯುವಕರು ಅದನ್ನು ಇಷ್ಟಪಡುವುದೂ ಇಲ್ಲ. ಚಲನಚಿತ್ರಗಳಿಗೆ ಲಾಗೂ ಆಗುವ ಸೆನ್ಸಾರ್ ನಿಯಮ ಜಾರಿಗೊಳಿಸುವ ಸರಕಾರದ ಇಲಾಖೆ ಗಳು ಒಟಿಟಿಗಳಿಗೂ, ಯೂಟ್ಯೂಬ್‌ಗಳಿಗೂ ಈ ನಿಯಮವನ್ನು ಯಾಕೆ ಜಾರಿಗೊಳಿಸಬಾರದು? ಯಾಕೆ ಸ್ಥಳೀಯ ಆಡಳಿತ ಸಂಸ್ಥೆಗಳು, ಕಾರ್ಯಕ್ರಮದ ಆಯೋಜಕರಿಂದ ವಿಷಯ, ವಿವರಗಳನ್ನು ಪಡೆದು, ಒಪ್ಪಿತವಾದಲ್ಲಿ ಮಾತ್ರ ಪರವಾನಗಿಯನ್ನು ನೀಡಬಾರದು? ಅದೇನೂ ಕಷ್ಟದ ಕೆಲಸ ವಲ್ಲ.

ಬಹುತೇಕ ಕೊಲ್ಲಿ ರಾಷ್ಟ್ರಗಳಲ್ಲಿ ಈ ನಿಯಮ ಜಾರಿಯಲ್ಲಿದೆ. ಒಂದು ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕಾದರೆ, ಮೊದಲೇ ಆ ಕಾರ್ಯಕ್ರಮದ ಸಂಪೂರ್ಣ ವಿವರ ನೀಡಿ ಅನುಮತಿ ಪಡೆಯ ಬೇಕು. ಈ ಕಾನೂನು ಸೌದಿ ಅರೇಬಿಯಾದಲ್ಲೂ ಇದೆ, ದುಬೈನಲ್ಲೂ ಇದೆ. ಭಾರತದಲ್ಲಿ ಕಾನೂನು, ಸ್ವಾತಂತ್ರ್ಯ ಎಂದು ಕಿರುಚುವ, ದುಬೈ ನಗರಿಯನ್ನು ಸ್ವರ್ಗ ಎಂದು ಬಣ್ಣಿಸುವ ಇವರು ಅಲ್ಲಿ ಇಂಥ ಒಂದು ಕಾರ್ಯಕ್ರಮ ಮಾಡಲಿ ನೋಡೋಣ! ಅಂಥ ಸಂದರ್ಭದಲ್ಲಿ ಇವರಿಗೆ ಭಾರತವೇ ಸ್ವರ್ಗ! ನಮ್ಮ ದೇಶ ಯಾವಾಗ ಎಚ್ಚೆತ್ತುಕೊಳ್ಳುತ್ತದೆಯೋ!?