ವಿರಾಜಪೇಟೆಯಿಂದ ಜಗದಗಲ ಹಾರಿದ ದೇವನಕ್ಕಿ ವೈದ್ಯರ ಪರಿಸರ ಕಾಳಜಿಗೆ 41 ವರ್ಷ !
ವಿರಾಜಪೇಟೆಯಲ್ಲಿ 4 ದಶಕಗಳ ಹಿಂದೆ ತರಂಗ ಎಂಬ ಸಾಂಸ್ಕೃತಿಕ ಸಂಘ ಇತ್ತು. ಈ ಸಮಾನ ಮನಸ್ಕರ ಸಂಘದ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಗೆ ಜಿಂಕೆಯ ಚಿತ್ರ ಬಿಡಿಸಿದ್ದೆ. ಇದು ಸಂಘದ ಸದಸ್ಯ ರಿಂದ ಅಪಾರ ಮೆಚ್ಚುಗೆಗೆ ಕಾರಣವಾಗಿತ್ತು. ಇದೇ ಉಮೇದಿನಲ್ಲಿ ವನ್ಯಜೀವಿಗಳ ಚಿತ್ರ ರೂಪಿಸ ತೊಡಗಿದೆ. ಆರಂಭಿಕ ವರ್ಷ ಜಿಂಕೆ ಚಿತ್ರವಿರುವ 150 ಚಿತ್ರಗಳನ್ನು ರಚಿಸಿದ್ದೆ ಎಂದು ನರಸಿಂಹನ್ ಸ್ಮರಿಸಿಕೊಂಡರು.

-

ಅನಿಲ್ ಹೆಚ್.ಟಿ., ಮಡಿಕೇರಿ
ವನ್ಯಜೀವಿ ಸಪ್ತಾಹದ ಅಂಗವಾಗಿ ಪ್ರತಿವರ್ಷ ಪಕ್ಷಿ ಸಂದೇಶ ರವಾನಿಸುವ ಡಾ.ನರಸಿಂಹನ್ ನಾಲ್ಕು ದಶಕಗಳಿಂದ ಕಾರ್ಯ
ಪ್ರತೀ ವರ್ಷದಂತೆ ಈ ಬಾರಿಯೂ ವಿರಾಜಪೇಟೆಯಿಂದ ಪಕ್ಷಿಯೊಂದು ಹಾರಿ ಪರಿಸರ ಪ್ರೇಮಿಗಳ ಮನೆ ತಲುಪಿದೆ. ಪರಿಸರ, ವನ್ಯ ಜೀವನದ ಮಹತ್ವದ ಸಂದೇಶವನ್ನು ಸಾರುವ ಈ ಪಕ್ಷಿ ಜೀವಂತ ವಿರದೇ ಕಲೆಯಾಗಿದ್ದರೂ ಆ ಚಿತ್ರ ಸಾರುವ ಸಂದೇಶ ಮಾತ್ರ ಸದಾ ಜೀವಂತವಾಗಿದೆ.
ವಿರಾಜಪೇಟೆಯ ಹೆಸರಾಂತ ಪಕ್ಷಿ ತಜ್ಞ, ಡಾ.ಎಸ್. ವಿ.ನರಸಿಂಹನ್ ಕಳೆದ 41 ವರ್ಷಗಳಿಂದ ಪಕ್ಷಿಗಳ ಚಿತ್ರಗಳನ್ನು ತಾವೇ ಕೈಯಾರೆ ಚಿತ್ರಿಸಿ ಅದನ್ನು ದೇಶ ಮಾತ್ರವಲ್ಲ, ವಿದೇಶದಲ್ಲಿಯೂ ಇರುವ ನೂರಾರು ವನ್ಯ ಪ್ರೇಮಿಗಳಿಗೆ ಅಂಚೆ ಮೂಲಕ ಕಳುಹಿಸುತ್ತಾ ಬಂದಿದ್ದಾರೆ. ಈ ರೀತಿ ನರಸಿಂಹನ್ ರವಾನಿಸಿರುವ ಪಕ್ಷಿಗಳ ವೈವಿಧ್ಯಮಯ ಚಿತ್ರಗಳ ಸಂಖ್ಯೆ 41 ವರ್ಷಗಳಲ್ಲಿ 16640, ಈ ವರ್ಷ ಡಾ.ನರಸಿಂಹನ್ ರವಾನಿಸಿರುವ ಪಕ್ಷಿ ಸಂದೇಶದ ಚಿತ್ರಗಳ ಸಂಂಖ್ಯೆಯೇ 1208.
ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರದಲ್ಲಿ ವನ್ಯಜೀವಿ ಸಪ್ತಾಹದ ಪ್ರಯುಕ್ತ ಡಾ.ನರಸಿಂಹನ್ ವನ್ಯಜೀವಿ ಸಂದೇಶ ಹೊತ್ತಿರುವ ಚಿತ್ರಗಳನ್ನು ಆಸಕ್ತರಿಗೆ ತಲುಪಿಸುತ್ತಾ ಬರುತ್ತಿದ್ದಾರೆ. ಡಾ.ನರಸಿಂಹನ್ ಅವರ ಈ ಕಾರ್ಯಕ್ಕೆ ಲಿಮ್ಕಾ ಬುಕ್ ಆಫ್ ವಲ್ಡ್ ರೆಕಾರ್ಡ್, ಅತ್ಯಧಿಕ ಸಂಖ್ಯೆಯಲ್ಲಿ ವನ್ಯಜೀವಿಗಳ ಚಿತ್ರಗಳ ಕಾರ್ಡ್ ರಚಿಸುವ ಕಲಾವಿದ ಎಂಬ ಪ್ರತಿಷ್ಟಿತ ದಾಖಲೆ ಪತ್ರ ನೀಡಿದೆ.
ವಿರಾಜಪೇಟೆಯಲ್ಲಿ 4 ದಶಕಗಳ ಹಿಂದೆ ತರಂಗ ಎಂಬ ಸಾಂಸ್ಕೃತಿಕ ಸಂಘ ಇತ್ತು. ಈ ಸಮಾನ ಮನಸ್ಕರ ಸಂಘದ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಗೆ ಜಿಂಕೆಯ ಚಿತ್ರ ಬಿಡಿಸಿದ್ದೆ. ಇದು ಸಂಘದ ಸದಸ್ಯರಿಂದ ಅಪಾರ ಮೆಚ್ಚುಗೆಗೆ ಕಾರಣವಾಗಿತ್ತು. ಇದೇ ಉಮೇದಿನಲ್ಲಿ ವನ್ಯಜೀವಿಗಳ ಚಿತ್ರ ರೂಪಿಸತೊಡಗಿದೆ. ಆರಂಭಿಕ ವರ್ಷ ಜಿಂಕೆ ಚಿತ್ರವಿರುವ 150 ಚಿತ್ರಗಳನ್ನು ರಚಿಸಿದ್ದೆ ಎಂದು ನರಸಿಂಹನ್ ಸ್ಮರಿಸಿಕೊಂಡರು.
ಇದನ್ನೂ ಓದಿ: Raghav Sharma Nidle Column: ಮೋದಿ- ನಿತೀಶರ ಆ 2 ಚಿತ್ರಗಳು
ಪ್ರತೀ ವರ್ಷವೂ ಡಾ.ನರಸಿಂಹನ್ ಬೇರೆ ಬೇರೆ ಪಕ್ಷಿಗಳನ್ನು ಆಯಾ ವರ್ಷದ ಸಂದೇಶದ ಪಕ್ಷಿ ಗಳಾಗಿ ಆಯ್ಕೆ ಮಾಡಿಕೊಂಡು ಆ ಹಕ್ಕಿ ಗಳಿಗಿರುವ ಮಹತ್ವವನ್ನೂ ಸಂದೇಶ ಪತ್ರದಲ್ಲಿ ತಿಳಿಸು ತ್ತಾರೆ. ಈ ವರ್ಷ ಡಾಕ್ಟರ್ ಆಯ್ಕೆ ಮಾಡಿಕೊಂಡ ಪಕ್ಷಿಯ ಹೆಸರು ಬಾಲದ ದೇವನಕ್ಕಿ.
ಭಾರತದಲ್ಲಷ್ಟೆ ಅಲ್ಲದೇ ಉಷ್ಣ ವಲಯದ ಏಷ್ಯಾದಲ್ಲಿ ಕಾಣಸಿಗುವ, ನೋಡಲು ಆಪ್ಯಾಯಮಾನ ವಾದ ಪಕ್ಷಿಯಾಗಿರುವ ಬಾಲದ ದೇವನಕ್ಕಿ, ತಾವರೆ, ಅಂತರಗಂಗೆ, ಹಯಾಸಿಂತ್ ಮುಂತಾದ ತೇಲುವ ಸಸ್ಯವರ್ಗವನ್ನು ಹೊಂದಿದ ಸರೋವರಗಳು ಮತ್ತು ಕೊಳಗಳ ಮೇಲೆ ವಾಸಿಸುತ್ತವೆ. ಅವುಗಳಿಗೆ ಉದ್ದವಾದ ಕಾಲ್ಬೆರಳುಗಳು ಮತ್ತು ಉಗುರುಗಳಿದ್ದು, ತೇಲುವ ಎಲೆಗಳ ಮೇಲೆ ನಡೆಯಲು ಅವಕಾಶ ಮಾಡಿಕೊಡುತ್ತದೆ.
ಪ್ರಜನನ ಕಾಲದಲ್ಲಿ ಗಂಡು ಹಕ್ಕಿಯ ಉದ್ದನೆಯ ಬಾಲ ಬಹಳ ಆಕರ್ಷಕವಾಗಿರುತ್ತದೆ. ಶ್ವೇತವರ್ಣ, ಕಪ್ಪುದೇಹ, ಕಪ್ಪುರೆಕ್ಕೆಯ ಮೇಲೆ ದೊಡ್ಡ ಬಿಳಿ ಪಟ್ಟಿ, ಉಜ್ವಲ ಹಳದಿ ಕುತ್ತಿಗೆ ಮೊದಲಾದ ಲಕ್ಷಣ ಗಳಿಂದ ಈ ದೇವನಕ್ಕಿಯನ್ನು ಸುಲಭವಾಗಿ ಗುರುತಿಸಲು ಸಾಧ್ಯ. ಇದು ನೀರಿನಲ್ಲಿರುವ ಜಲಸಸ್ಯ ಗಳನ್ನಲ್ಲದೇ ಅವುಗಳ ಬೀಜ, ಕೀಟ, ಮೃದ್ವಂಗಿ, ಮುಂತಾದವುಗಳನ್ನು ತಿನ್ನುತ್ತದೆ.
ಇದು ಅಪರೂಪಕ್ಕೆ ಹಾಡುತ್ತದೆ. ಹೀಗಾಗಿ ಇಂಥ ಅಪರೂಪದ ದೇವನಕ್ಕಿಯನ್ನೇ ಈ ವರ್ಷದ ಸಂದೇಶವಾಹಕ ಪಕ್ಷಿಯನ್ನಾಗಿ ಬಳಸಿಕೊಂಡಿದ್ದೇನೆಂದು ಡಾ.ನರಸಿಂಹನ್ ತಿಳಿಸಿದರು. ವಿಶ್ವದ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ವಿಶಿಷ್ಟ ಗುಣಇದೆ. ಅದರದ್ದೇ ಆದ ನಿಯಮಗಳಿದೆ. ಈ ನಿಯಮಗಳಿಗೆ ಅನುಗುಣವಾಗಿಯೇ ಸಕಲ ವಸ್ತುಗಳು ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಾ ಬರುತ್ತಿವೆ.
ಒಂದು ಜೀವಿ ಮತ್ತೊಂದು ಜೀವಿಗೆ ಆಧಾರ, ಒಂದು ಜೀವಿ ಮತ್ತೊಂದು ಜೀವಿಯ ಆಹಾರ. ಇದು ಪ್ರಾಕೃತಿಕ ನಿಯಮ. ವೈರುದ್ಯ, ವೈರತ್ವಗಳ ನಡುವೇ ಎಲ್ಲಾ ಜೀವಿಗಳು ಈ ಪೃಥ್ವಿಯ ಮೇಲೆ ಒಗ್ಗಟ್ಟಿನಿಂದ ಜೀವಿಸುತ್ತಿವೆ. ಸಹಭಾಳ್ನೆ, ಸಾಮರಸ್ಯ, ಸಹಭಾಗಿತ್ಯ ಗುಣವೇ ಇದಕ್ಕೆಲ್ಲಾ ಕಾರಣ. ಇವೆಲ್ಲಾ ಪ್ರಕೃತಿಯು ನಿಶ್ಯಬ್ದವಾಗಿ ನಮಗೆ ಕಲಿಸಿದ ಅಪೂರ್ವ ಪಾಠ.
ಇಂಥ ಕಾರ್ಯಕ್ಕೆ ಅಡ್ಡಗಾಲು ಹಾಕುವ, ಇಲ್ಲಿ ನಡೆಯುವ ಬಾಳಿನ ಆಟವನ್ನು ಏರುಪೇರು ಮಾಡುವ ವಿಕಸಿತ ಜೀವಿಯೇ ಮಾನವನಾಗಿದ್ದಾನೆ. ಇಂಥ ಮನಸ್ಥಿತಿ ಭವಿಷ್ಯದಲ್ಲಿ ತನ್ನ ಜೀವಕ್ಕೆ ಮಾರಕ ಎಂಬುದರ ಸ್ಪಷ್ಟ ಅರಿವಿದ್ದರೂ, ಆಗಿಂದಾಗ್ಗೆ ಪ್ರಕೃತಿಯು ನೀಡುತ್ತಿರುವ ಎಚ್ಚರಿಕೆಯ ಗಂಟೆ ಯನ್ನೂ ನಿರ್ಲಕ್ಷಿಸುತ್ತಾ ಮುಂದೆ ಸಾಗುತ್ತಿರುವ ಮನುಕುಲಕ್ಕೆ ಎಚ್ಚರಿಕೆಯನ್ನು ಕಾಲ ದಿಂದ ಕಾಲಕ್ಕೆ ನೀಡಲೇಬೇಕಾಗಿದೆ.
ಅಕ್ಟೋಬರ್ ನಲ್ಲಿ ಅಂಚೆ ಮೂಲಕ ರವಾನೆ
ತಾನು ತನ್ನ ಕೈಲಾದ ಕಾರ್ಯವಾಗಿ ಪ್ರತಿವರ್ಷ ವನ್ಯಜೀವಿ ಸಂದೇಶವುಳ್ಳ ಪರಿಸರ ಕಾಳಜಿಯ ಅಂಚೆ ಕಾರ್ಡ್‌ಗಳನ್ನು ಆಸಕ್ತರಿಗೆ ರವಾನಿಸುತ್ತಿ ರುವುದಾಗಿ ಡಾ.ನರಸಿಂಹನ್ ಹೇಳುತ್ತಾರೆ. ವರ್ಷ ದಲ್ಲಿ ಸಮಯ ಸಿಕ್ಕಾಗಲೆಲ್ಲಾ ವಿರಾಜಪೇಟೆಯಲ್ಲಿನ ತನ್ನ ಮನೆಯ ಕೋಣೆಯಲ್ಲಿ ಕುಳಿತು ವನ್ಯಜೀವಿಗಳ ಚಿತ್ರಗಳನ್ನು ಬಿಡಿಸುತ್ತಾ ಅಕ್ಟೋಬರ್ ಬಂದೊಡನೆ ಆ ಚಿತ್ರಗಳನ್ನು ವ್ಯವಸ್ಥಿತವಾಗಿ ಅಂಚೆ ಮೂಲಕ ನರಸಿಂಹನ್ ಕಳುಹಿಸುತ್ತಾರೆ. ನರಸಿಂಹನ್ ರಚಿಸಿರುವ ಕೊಡಗಿನ ಪಕ್ಷಿ ಸಂಕುಲದ ಅಮೂಲ್ಯ ಕೃತಿಯಾಗಿರುವ ಕೊಡಗಿನ ಖಗರತ್ನಗಳು ಒಂದು ಅಪೂರ್ವ ದಾಖಲೆ ಯಾಗಿದೆ. ಇದು ನರಸಿಂಹನ್ ಪಾಲಿಗೆ ಪ್ರತಿ ವರ್ಷದ ಕಾಯಕವಾಗಿದೆ. ವರ್ಷದಲ್ಲಿ ಮಳೆ ತಪ್ಪಬಹುದು, ಗಾಳಿಯಲ್ಲಿ ಏರಿಳಿತವಾಗಬಹುದು, ಆದರೆ ನರಸಿಂಹನ್ ಕಾಳಜಿಯ ಚಿತ್ರಗಳಲ್ಲಿ ಮಾತ್ರ ಲವವೇಶವೂ ಹೆಚ್ಚು ಕಮ್ಮಿಯಾಗುವುದಿಲ್ಲ. ಶಿಸ್ತುಬದ್ದ ಕೈಂಕರ್ಯಕ್ಕೆ ಮಾದರಿಯಾಗಿ ಡಾ.ನರಸಿಂಹನ್ ಕಂಡುಬರುತ್ತಾರೆ. ಡಾ.ನರಸಿಂಹನ್ ಸಂಪರ್ಕ ಸಂಖ್ಯೆ-೯ 9480730884.
*
ನನ್ನ ಚಿತ್ರ ಸಂದೇಶದಿಂದಾಗಿ ಕೆಲವರಲ್ಲಾದರೂ ಪ್ರಾಣಿ, ಪಕ್ಷಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗ್ರತಿ ಮೂಡಿದರೆ ನನ್ನ ಪ್ರಯತ್ನಕ್ಕೆ ಅಷ್ಟರ ಮಟ್ಟಿಗೆ ಸಾರ್ಥಕತೆ ದೊರಕಿದಂತಾಗುತ್ತದೆ. ಹೀಗಾಗಿಯೇ ಏನೇ ಸಮಸ್ಯೆಯಿದ್ದರೂ ಪ್ರತೀ ವರ್ಷ ವನ್ಯಜೀವಿ ಸಂದೇಶದ ಕಾರ್ಡ್ ಗಳನ್ನು ತಪ್ಪದೇ ರವಾನಿ ಸುತ್ತಾ ಬಂದಿದ್ದೇನೆ. ಜಗತ್ತಿನಲ್ಲಿರುವ ಪ್ರತಿ ಅಣುವೂ ಸುಖ, ಶಾಂತಿಯಿಂದ ಸಹಬಾಳ್ವೆ ನಡೆಸುವಂತೆ ಮಾಡಬೇಕೆಂಬ ಆಶಯ ಕೂಡ ನನ್ನ ಚಿತ್ರಗಳಲ್ಲಿದೆ.
-ಡಾ.ಎಸ್. ವಿ.ನರಸಿಂಹನ್