Harish Kera Column: ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ
ಜಪಾನಿನ ಒಕಿನಾವ ಪ್ರಾಂತ್ಯದ ಮುಸಾಫುಮಿ ನಾಗಸಾಕಿ ಎಂಬಾತ 1989ರಲ್ಲಿ ತಮ್ಮ ಫೋಟೊ ಗ್ರಾಫರ್ ಕೆಲಸ, ಮಡದಿ, ಇಬ್ಬರು ಮಕ್ಕಳನ್ನು ಸದ್ದಿಲ್ಲದೆ ತೊರೆದು, ಆಧುನಿಕ ಜೀವನಶೈಲಿಯನ್ನು ತ್ಯಜಿಸಿ, ಸುಮಾರು ಒಂದೂವರೆ ಚದರ ಕಿಲೋಮೀಟರ್ ವಿಸ್ತಾರದ ದ್ವೀಪವೊಂದಕ್ಕೆ ಹೋಗಿ ಅಲ್ಲಿ ಉಳಿದ. ಮುಂದಿನ 29 ವರ್ಷ ಕಾಲ ಸೊಟೊಬನಾರಿ ಎಂಬ ಆ ದ್ವೀಪದಲ್ಲಿ ಅವನು ದಿನ ಕಳೆದ. ಆ ದ್ವೀಪದಲ್ಲಿ ಕಾಡು ಮತ್ತು ಸಮುದ್ರ ತೀರ ಬಟ್ಟರೆ ಇನ್ನೇನೂ ಇರಲಿಲ್ಲ


ಕಾಡು ದಾರಿ
ನೀವು ಕ್ಯಾಸ್ಟ್ ಅವೇ (Cast away) ಎಂಬ ಸಿನಿಮಾ ನೋಡಿರಬಹುದು. ಇದು ಛಿದ್ರಗೊಂಡ ನೌಕೆ ಯಿಂದ ಸಮುದ್ರಕ್ಕುರುಳಿ ನಿರ್ಜನ ದ್ವೀಪವೊಂದನ್ನು ಸೇರಿ ಹೇಗೋ ಬದುಕಿ ಉಳಿದು ಅಲ್ಲಿ ದಿನಗಳೆಯುವ, ಮರಳಿ ಜನಜೀವನದತ್ತ ಹೋಗಲು ತವಕಿಸುವವನ ಕತೆ. ನಾನೀಗ ಹೇಳಲು ಹೊರಟದ್ದು ಅದಕ್ಕೆ ತದ್ವಿರುದ್ಧ. ಇವರು ತಾವಾಗಿಯೇ ಈ ಜನರ ನಡುವಿನಿಂದ ಆಚೆಗೆ ಉಳಿಯಲು ಬಯಸಿ ಕಡು ದೀರ್ಘ ಏಕಾಂತಕ್ಕೆ ತಮ್ಮನ್ನು ತೆತ್ತುಕೊಂಡವರು. ವರ್ಷಾಂತರಗಳ ಕಾಲ ದ್ವೀಪ ಗಳಲ್ಲಿ, ಕಾಡುಗಳಲ್ಲಿ ಏಕಾಂಗಿಯಾಗಿ ಬದುಕಿದವರು. ಇಂಥ ಕೆಲವು ಘಟನೆಗಳನ್ನು ನೋಡೋಣ.
ಜಪಾನಿನ ಒಕಿನಾವ ಪ್ರಾಂತ್ಯದ ಮುಸಾಫುಮಿ ನಾಗಸಾಕಿ ಎಂಬಾತ 1989ರಲ್ಲಿ ತಮ್ಮ ಫೋಟೊ ಗ್ರಾಫರ್ ಕೆಲಸ, ಮಡದಿ, ಇಬ್ಬರು ಮಕ್ಕಳನ್ನು ಸದ್ದಿಲ್ಲದೆ ತೊರೆದು, ಆಧುನಿಕ ಜೀವನಶೈಲಿಯನ್ನು ತ್ಯಜಿಸಿ, ಸುಮಾರು ಒಂದೂವರೆ ಚದರ ಕಿಲೋಮೀಟರ್ ವಿಸ್ತಾರದ ದ್ವೀಪವೊಂದಕ್ಕೆ ಹೋಗಿ ಅಲ್ಲಿ ಉಳಿದ. ಮುಂದಿನ 29 ವರ್ಷ ಕಾಲ ಸೊಟೊಬನಾರಿ ಎಂಬ ಆ ದ್ವೀಪದಲ್ಲಿ ಅವನು ದಿನ ಕಳೆದ. ಆ ದ್ವೀಪದಲ್ಲಿ ಕಾಡು ಮತ್ತು ಸಮುದ್ರ ತೀರ ಬಟ್ಟರೆ ಇನ್ನೇನೂ ಇರಲಿಲ್ಲ. ಪುಟ್ಟ ಗವಿಯಂಥ ಜಾಗದಲ್ಲಿ ಅಷ್ಟೂ ವರ್ಷಗಳು ಮೌನವಾಗಿ ಇದ್ದ. ಅವನ ಬಟ್ಟೆಗಳು ಒಮ್ಮೆ ಸುಂಟರಗಾಳಿಯಲ್ಲಿ ಹಾರಿಹೋದವು. ಅಂದಿನಿಂದ ಬತ್ತಲೆಯಾಗಿಯೇ ಇದ್ದ. ಇಂಥ ದ್ವೀಪಗಳಿಗೆ ಜನರನ್ನು ರಜಾ ಕಳೆಯಲು ಕರೆದೊಯ್ಯುವ ಅಲ್ವರೋ ಸೆರೆಜೋ ಎಂಬ ವ್ಯಕ್ತಿ ಆಗಾಗ ಬಂದು ಇವನ್ನು ಮಾತನಾಡಿಸುತ್ತಿದ್ದ. ಅವನು ಈತನ ಜೀವನವನ್ನು ಪೂರ್ತಿ ಡಾಕ್ಯುಮೆಂಟರಿ ಮಾಡಿದ್ದಾನೆ.
ಇದನ್ನೂ ಓದಿ: Harish Kera Column: ಇಷ್ಟೊಂದು ಮಿನುಗುತಾರೆ, ಎಲ್ಲಿವರೆಗೆ ಇರುತಾರೆ?
ಅವನಿಗೆ ಹಣ ಬೇಕಿರಲಿಲ್ಲ. ಬೇಕಿದ್ದುದು ನಾಲ್ಕು ಜೊತೆ ರೊಟ್ಟಿ, ಕುಡಿಯುವ ನೀರು. ಅತ್ಯಲ್ಪ ಸಂಗತಿಗಳಲ್ಲಿ ಅವನ ಜೀವನ ಸಾಗುತ್ತಿತ್ತು. ಮನದಣಿಯೆ ಕಡಲಿನಲ್ಲಿ ಈಜುತ್ತಿದ್ದ. ದ್ವೀಪದ ಬಳಿಗೆ ಯಾರದಾರರೂ ದೋಣಿ ಬಂದರೆ ಕಾಡಿನೊಳಗೆ ಸಾಗುತ್ತಿದ್ದ. 2108ರಲ್ಲಿ ಇವನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಡಲ ದಂಡೆಯಲ್ಲಿ ಬಿದ್ದಿದ್ದುದನ್ನು ಮೀನುಗಾರರು ಗಮನಿಸಿ, ಎತ್ತಿ ಕೊಂಡೊಯ್ದು ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಪ್ರಜ್ಞೆ ಬಂದವನೇ ಜನರನ್ನು ಕಂಡು ಗಾಬರಿಯಾದ. ಒಂಟಿಯಾಗಿ ಉಳಿಯಬಯಸಿದ. ಮುಂದಿನ ಎರಡು ವರ್ಷಗಳ ಕೋವಿಡ್ ಐಸೋಲೇಶನ್ ಅವನ ಏಕಾಂತ ವಾಸದ ಆಸೆಯನ್ನು ಇನ್ನಷ್ಟು ಪೂರೈಸಿತು. 2022ರಲ್ಲಿ ಇವನೇ ಬಯಸಿ ಒಮ್ಮೆ ದ್ವೀಪಕ್ಕೆ ಹೋಗಿ ಗುಡ್‌ಬೈ ಹೇಳಿಬಂದ. ಇವನ ವಯಸ್ಸೀಗ 90. ದ್ವೀಪದಲ್ಲೇ ಬದುಕಿಗೆ ಗುಡ್‌ಬೈ ಹೇಳುವ ಆಸೆ ಅವನದು.
ನಾಗಸಾಕಿಯ ಜೀವನದ ಫಿಲಾಸಫಿ ಏನಿತ್ತು ಹಾಗಾದರೆ? ಅವನೇನೂ ಮರುಳನಾಗಿರಲಿಲ್ಲ. ಮನುಷ್ಯರನ್ನು ದ್ವೇಷಿಸುವ ವ್ಯಕ್ತಿ ಆಗಿರಲಿಲ್ಲ. ʼಸಮಾಜ ಹೇಳುವ ಸಂಗತಿಗಳನ್ನು ನಾನು ಮಾಡುವುದಿಲ್ಲ. ಆದರೆ ಪ್ರಕೃತಿ ಹೇಳುವ ಸಂಗತಿಗಳನ್ನು ಪಾಲಿಸುತ್ತೇನೆ. ಇಲ್ಲಿಗೆ ಬಂದು ನಾನು ಕಲಿತದ್ದು ಅಷ್ಟನ್ನೇ. ಅದಕ್ಕೇ ನಾನಿಲ್ಲಿ ಉಳಿಯಲು ಸಾಧ್ಯವಾಯಿತು. ಒಮ್ಮೆ ಸತ್ತ ಹಕ್ಕಿ ನೋಡಿ ದುಃಖವಾಯಿತು. ಅಷ್ಟೆ. ಇಲ್ಲಿ ಯಾವತ್ತೂ ಬೇಸರವಿಲ್ಲ, ವಿಷಾದವಿಲ್ಲ. ಅಂಥ ರೊಮ್ಯಾಂಟಿಕ್ ಭಾವನೆಗಳಿಗೆ ಅಲ್ಲಿ ಜಾಗವಿಲ್ಲ. ಹಾಗಿದ್ದರೆ ನಾನು ಉಳಿಯುತ್ತಿರಲಿಲ್ಲʼ ಎಂದ ನಾಗಸಾಕಿಯ ಟೆಂಟ್ ಒಳಗೆ ಆಗಾಗ ಹಾವುಗಳು ನುಸುಳಿದ್ದುಂಟು. ʼಆದರೆ ಯಾವ ಹಾವೂ ನನಗೆ ಕಡೆಗಣಿಸಲಿಲ್ಲ. ಹಾವುಗಳು ಮನುಷ್ಯನಂತೆ ದುಷ್ಟ ಜೀವಿಗಳಲ್ಲʼ ಎನ್ನುತ್ತಾನೆ. ನಾಗರಿಕತೆಗೆ ಮರಳಿ ಬಂದ ನಂತರದ ಅವನ ಫೇವರಿಟ್ ಪಾಸ್‌ಟೈಮ್ ಎಂದರೆ ಬೀದಿಗಳಲ್ಲಿ ಬಿದ್ದಿರುವ ಕಸ ಹೆಕ್ಕಿ ಶುಚಿಗೊಳಿಸುವುದು. ಕಸ ಎಂದರೆ ಅವನಿಗೆ ರೇಜಿಗೆ.
ಇನ್ನೊಬ್ಬನ ಕತೆ ಕೇಳಿ. ಅಮೆರಿಕದ ಮಸಾಚುಸೆಟ್ಸ್ ರಾಜ್ಯದಲ್ಲಿ ಜೀವಿಸುತ್ತಿದ್ದ 20 ವರ್ಷದ ಯುವಕ ಕ್ರಿಸ್ಟೋಫರ್ ನೈಟ್ ಎಂಬವನು 1986ರಲ್ಲಿ ಇದ್ದಕ್ಕಿದ್ದಂತೆ ತನ್ನ ಕಾರು ತೆಗೆದುಕೊಂಡು ಮೈನೆ ಎಂಬಲ್ಲಿಗೆ ಪ್ರಯಾಣಿಸಿ, ಅಲ್ಲಿ ತನ್ನ ಕಾರನ್ನು ಕಾಡಂಚಿನಲ್ಲಿ ನಿಲ್ಲಿಸಿ ದಟ್ಟ ಕಾಡನ್ನು ಹೊಕ್ಕು ಬಿಟ್ಟ. ಅದೇ ಕಾಡಂಚಿನ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ನಾಲ್ವರು ಅಣ್ಣಂದಿರ ನಂತರ ಹುಟ್ಟಿ ಬೆಳೆದ ಈತನಿಗೆ ಮನುಷ್ಯರ ಜೊತೆಗೆ ಬೆರೆಯುವುದು ಎಂದರೆ ರೇಜಿಗೆ; ಆದರೆ ಮನುಷ್ಯ ಲೋಕದ ಎಲ್ಲ ನಡವಳಿಕೆಗಳೂ, ಕಾರು ರಿಪೇರಿ ಕೂಡ ಚಿರಪರಿಚಿತ. ಇವನು ಕಾಡು ಹೊಕ್ಕದ್ದೂ ಯಾರಿಗೂ ತಿಳಿಯಲಿಲ್ಲ; ಸತ್ತಿದ್ದಾನೆಂದೇ ಭಾವಿಸಿದರು. ಮುಂದಿನ 27 ವರ್ಷ ಕಾಲ ಇವನನ್ನು ಯಾರೂ ಮುಖಾಮುಖಿಯಾಗಲಿಲ್ಲ. ಯಾರಿಗೂ ಫೋನ್, ಇಮೇಲ್ ಮಾಡಲಿಲ್ಲ. ಹಾಯ್ ಎನ್ನಲಿಲ್ಲ. ಯಾರಿಗಾದರೂ ಕೇಳಿಸೀತು ಎಂದು ದೊಡ್ಡ ದನಿಯಲ್ಲಿ ಹಾಡಲಿಲ್ಲ. ಯಾರಾದರೂ ಪತ್ತೆ ಹಚ್ಚಬಹುದು ಎಂಬ ಕಾರಣಕ್ಕಾಗಿ ರಾತ್ರಿ ಲ್ಯಾಂಪ್ ಕೂಡ ಉರಿಸಲಿಲ್ಲ. ಕತ್ತಲಾಗುವ ಮೊದಲು ತಾನೇ ಕಟ್ಟಿಕೊಂಡ ಟೆಂಟ್ ಹೊಕ್ಕು ಬಿಡುತ್ತಿದ್ದ. ಬರಬರುತ್ತಾ ಕತ್ತಲಲ್ಲಿ ಕೂಡ ಕಾಡಿನಲ್ಲಿ ಓಡಾಡುವುದು ಅವನಿಗೆ ಅಭ್ಯಾಸವಾಯಿತು.
ಹೊಟ್ಟೆಪಾಡಿಗೆ ಅವನೇನು ಮಾಡುತ್ತಿದ್ದ. ಅವನು ಟೆಂಟ್ ಹಾಕಿಕೊಂಡಿದ್ದ ದಟ್ಟ ಕಾಡಿಗೆ ಕೆಲವೇ ಮೈಲು ದೂರದಲ್ಲಿ ವೀಕೆಂಡ್ ವಿಹಾರಕ್ಕೆ ಬರುತ್ತಿದ್ದ ನಾಗರಿಕರಿಗಾಗಿ ಕಟ್ಟಲಾಗಿದ್ದ ಕ್ಯಾಬಿನ್ ಗಳಿದ್ದವು. ಅವನು ಈ ಕ್ಯಾಬಿನ್‌ಗಳಿಗೆ ಯಾರೂ ಇಲ್ಲದಾಗ ಹೊಕ್ಕು, ತನಗೆ ಒಂದು ವಾರಕ್ಕೆ ಎಷ್ಟು ಬೇಕೋ ಅಷ್ಟು ಆಹಾರ, ಕೆಲವೊಮ್ಮೆ ಬಟ್ಟೆ, ಬ್ಯಾಟರಿ, ಓದಲು ಪುಸ್ತಕಗಳನ್ನು ಕದಿಯುತ್ತಿದ್ದ. 27 ವರ್ಷದಲ್ಲಿ ಒಮ್ಮೆಯೂ ಯಾರಿಗೂ ಸಿಕ್ಕಿ ಬೀಳಲಿಲ್ಲ. ಕ್ಯಾಬಿನ್‌ಗಳ ಒಂದು ಗಾಜನ್ನೂ ಒಡೆಯಲಿಲ್ಲ, ಬಾಗಿಲು ಮುರಿಯಲಿಲ್ಲ. ಯಾರನ್ನೂ ನೋಯಿಸಲಿಲ್ಲ; ಒಂದು ಆಯುಧವನ್ನೂ ಹೊಂದಿರಲಿಲ್ಲ. ಮೈನೆ ಪ್ರದೇಶದಲ್ಲಿ ಚಳಿಗಾಲದಲ್ಲಿ ಅತೀವ ಶೀತ ಆವರಿಸುತ್ತದೆ. ನೆಲ ಹಿಮಾವೃತವಾಗುತ್ತದೆ. ಆದರೆ ಇವನು ಮುಂಜಾನೆ ಎರಡು ಗಂಟೆಗೆ ಎದ್ದು ಸ್ಟೌ ಉರಿಸಿಕೊಂಡು ನೀರು ಕಾಯಿಸಿ ಕುಡಿಯುತ್ತಿದ್ದ. ಕಾಡಿನಲ್ಲಿ ಬೆಕ್ಕಿನಂತೆ ಸದ್ದಿಲ್ಲದೆ ಮೈಲುಗಟ್ಟಲೆ ನಡೆಯುತ್ತಿದ್ದ. ಫ್ರಾಸ್ಟ್‌ಬೈಟ್ ಎನ್ನಲಾಗುವ ಹಿಮಕೊಳೆತ ಅವನನ್ನು ಕಾಡಲಿಲ್ಲ. ಬೊಜ್ಜು ಆವರಿಸಲಿಲ್ಲ; ರೋಗಗಳು ಮುತ್ತಲಿಲ್ಲ. ಅವನು ಲೇಖಕನಲ್ಲ. ತನ್ನ ಏಕಾಂತ ಜೀವನದ ಬಗ್ಗೆ ಒಂದಕ್ಷರವನ್ನೂ ಬರೆಯಲಿಲ್ಲ. ಅವನು ಒಂದು ಫೋಟೋವನ್ನೂ ಕ್ಲಿಕ್ಕಿಸಲಿಲ್ಲ.
ಕ್ಯಾಬಿನ್‌ಗಳಲ್ಲಿ ಆಗುತ್ತಿರುವ ಕಳವಿನ ಬಗ್ಗೆ ಲೋಕಲ್ ಜನತೆಗೆ ಗೊತ್ತಾಯಿತು. ಆದರೆ ಬೆಲೆ ಬಾಳುವಂಥದ್ದೇನೂ ಕಳವಾಗುತ್ತಿರಲಿಲ್ಲವಾದ್ದರಿಂದ ಯಾರೂ ದೂರು ನೀಡುತ್ತಿರಲಿಲ್ಲ. ಕಳ್ಳನ ಬಗ್ಗೆ ಯಾರಿಗೂ ಏನೂ ತಿಳಿದಿರಲಿಲ್ಲ. ಆದರೆ ಈತ ‘ನಾರ್ತ್ ಪಾಂಡ್ ಸನ್ಯಾಸಿ’ ಎಂದೇ ಪ್ರಸಿದ್ಧನಾದ. ಕೊನೆಗೊಮ್ಮೆ ಸ್ಥಳೀಯ ಪೊಲೀಸ್ ಅಧಿಕಾರಿ ಗಮನಕ್ಕೆ ಇದು ಬಂತು; ಇದಕ್ಕೊಂದು ಅಂತ್ಯ ಹಾಡಲೇಬೇಕು ಎಂದು ಆತ ನಿರ್ಧರಿಸಿ ಕ್ಯಾಬಿನ್‌ಗಳ ಬಳಿ ಅಲ್ಲಲ್ಲಿ ಕ್ಯಾಮೆರಾ ಅಳವಡಿಸಿದ. ಕೊನೆಗೆ 2013ರಲ್ಲಿ ಈತ ಸಿಕ್ಕಿಬಿದ್ದ. ನೈಟ್ ಪ್ರತಿಭಟಿಸಲಿಲ್ಲ, ಕೂಗಾಡಲಿಲ್ಲ, ಓಡಿ ಹೋಗಲಿಲ್ಲ. ಅವನೇನೂ ಅಷ್ಟೊಂದು ವರ್ಷಗಳ ಏಕಾಂತವಾಸದಿಂದ ಹುಚ್ಚನಾಗಿ ಪರಿವರ್ತಿತನಾಗಿರಲಿಲ್ಲ. ಸಮಚಿತ್ತದಿಂದಲೇ ಇದ್ದ. ಆದರೆ ಅಷ್ಟು ಕಾಲ ಮಾತನಾಡದೆ ಇದ್ದುದರ ಪರಿಣಾಮ, ಮಾತನಾಡುವ ಕೌಶಲ ಅವನಲ್ಲಿ ನಶಿಸಿತ್ತು. ಹಾಗಂತ ಅವನು ಮನುಷ್ಯದ್ವೇಷಿಯೂ ಆಗಿರಲಿಲ್ಲ.
ಹಾಗಿದ್ದರೆ ಅವನು ಕಾಡಿಗೆ ಹೋದದ್ದೇಕೆ, ಸಮಾಜದಿಂದ ದೂರವಿದ್ದದ್ದೇಕೆ? ಅವನಿಗೆ ಈ ಸಮಾಜ ಬೇಕಿರಲಿಲ್ಲ. ಎರಡು ವರ್ಷ ಕಾಲ ಕಾಡಿನಲ್ಲಿ ಒಬ್ಬಂಟಿಯಾಗಿ ವಾಸಿಸಿದ್ದ ಹೆನ್ರಿ ಡೇವಿಡ್ ಥೋರೋ ಎಂಬ ಮಹಾಲೇಖಕ ಇವನಿಗೆ ಪ್ರೇರಣೆಯಾಗಿದ್ದ. ಆದರೆ ಥೋರೋ ಕೂಡ ಪ್ರದರ್ಶನ ಪ್ರಿಯನಾಗಿದ್ದ ಎಂಬುದು ನೈಟ್‌ನ ಆರೋಪ. ಯಾಕೆಂದರೆ ಅವನು ಆ ಬಗ್ಗೆ ‘ವಾಲ್ಡೆನ್’ ಎಂಬ ಪುಸ್ತಕ ಬರೆದಿದ್ದ. ನೈಟ್ ಕ್ಯಾಬಿನ್‌ನಿಂದ ಕದ್ದ ಪುಸ್ತಕಗಳನ್ನು ಓದುತ್ತಿದ್ದ. ಅವನಿಗೆ ಕ್ಯಾಬಿನ್ ಗಳಿಂದ ವಸ್ತು ಕದಿಯುತ್ತಿದ್ದುದಕ್ಕೆ ಶಿಕ್ಷೆಯಾಗಬೇಕು ಎಂದು ಕೆಲವರು ಹೇಳಿದರು; ಆದರೆ ಅವನೇನೂ ಯಾರಿಗೂ ಹಾನಿ ಮಾಡುವಂಥ ವ್ಯಕ್ತಿಯಾಗಿರಲಿಲ್ಲ. ಕೊಂಚ ಕಾಲ ಜೈಲಿನಲ್ಲಿದ್ದ ಅವನು ತನ್ನ ಸಹವಾಸಿಗಳು ಅವನಿಗೆ ಮೊಬೈಲ್ ತೋರಿಸಿದರೆ ಭೀತನಾಗುತ್ತಿದ್ದ. ಎದುರಿಗೆ ಸಿಕ್ಕವರ ಜೊತೆ ಮಾತನಾಡುವುದಲ್ಲದೆ ದೂರವಿರುವವರ ಜೊತೆಗೂ, ಮೊಬೈಲ್‌ನಲ್ಲೂ ಮಾತಾಡಬೇಕೆ ಎಂಬುದು ಅವನ ಪ್ರಶ್ನೆ. ಕಡೆಗೆ ಅವನ ಸನ್ನಡತೆಗಾಗಿ ಬಿಡುಗಡೆ ಮಾಡಲಾಯಿತು. ಸೋದರರ ಜೊತೆಗೆ ಈಗ ಕಾರು ರಿಪೇರಿಯಲ್ಲಿ ತೊಡಗಿರುವ ಅವನ ದೇಹ ಮಾತ್ರ ಇಲ್ಲಿದೆ; ಆತ್ಮವೆಲ್ಲ ಈಗಲೂ ಕಾಡಲ್ಲೇ ಇದೆ.
ನೈಟ್‌ಗೆ ಬಹುಶಃ, ಮನುಷ್ಯನ ಸಂತಸದ ಬಿಂದುಗಳು ಎಲ್ಲಿವೆ ಎಂದು ಗೊತ್ತಿತ್ತೋ ಏನೋ. ಅವನು ಕಾಡಿನಲ್ಲಿ ಖುಷಿಯಾಗಿದ್ದ. ಇದ್ದ ಸೀಮಿತ ವಸ್ತುಗಳಲ್ಲಿ ಸಂತೃಪ್ತನಾಗಿದ್ದ. ತಾನು ಹಾಗೆ ಎಷ್ಟು ವರ್ಷ ಇದ್ದೆ ಎಂಬುದು ಅವನಿಗೆ ಗೊತ್ತಿರಲಿಲ್ಲ; ಆದರೆ ಇದ್ದಷ್ಟು ಕಾಲ ಸಂತೋಷವಾಗಿದ್ದ. ಬದುಕುವುದಕ್ಕಾಗಿ, ಇನ್ನೊಬ್ಬರ ಕೈಕೆಳಗೆ ಮೂರು ಹೊತ್ತು ದುಡಿದು ಮುಖ ಹಿಂಡಿಕೊಂಡು ಮನೆಗೆ ಹೋಗುವುದು, ಎಲ್ಲರ ಮೇಲೂ ರೇಗುವುದು, ಕೊರಗುತ್ತಾ ಬದುಕಿ ಒಂದು ದಿನ ಸಾಯುವುದು- ಇದೆಲ್ಲ ಅವನಿಗೆ ಬೇಕಿರಲಿಲ್ಲ. ಹಾಗಂತ ಅವನು ಅಧ್ಯಾತ್ಮಿಕ ವ್ಯಕ್ತಿಯೇನೂ ಆಗಿರಲಿಲ್ಲ. ದೇವರ ಬಗ್ಗೆ ಮಾತಾಡುವುದು ಅವನಿಗೆ ಇಷ್ಟವಿಲ್ಲ. ದೇವರ ಬಗ್ಗೆ, ಸಮಾಜದ ಬಗ್ಗೆ ಅವನು ಯಾವ ಅಭಿಪ್ರಾಯವನ್ನೂ ಮಂಡಿಸುವುದಿಲ್ಲ. ಇಷ್ಟು ಕಾಲದ ಏಕಾಂತವಾಸದಿಂದ ಅವನಲ್ಲಿ ಅಗಾಧ ತಾಳ್ಮೆ, ನೆಮ್ಮದಿಯ ಭಾವ ಉತ್ಪತ್ತಿಯಾಗಿತ್ತು. ಅವನು ಪ್ರತಿಕ್ಷಣವೂ ಕಾಡಿನ ಮೌನದಲ್ಲಿ ತಾನು ಮುಳುಗಿಹೋಗಿರುವ ಭಾವವನ್ನು ಅನುಭವಿಸುತ್ತಿದ್ದ. ‘‘ನನ್ನ ದೃಷ್ಟಿಕೋನ ವಿಸ್ತರಿಸಿತ್ತು. ವಿಚಿತ್ರವೆಂದರೆ, ಅದರಲ್ಲಿ ‘ನಾನೇ’ ಇರಲಿಲ್ಲ. ನಾನು ನನ್ನನ್ನು ಯಾರಿಗೂ ವಿವರಿಸಿಕೊಳ್ಳ ಬೇಕಿರಲಿಲ್ಲ. ನಾನು ಅಪ್ರಸ್ತುತನಾಗಿದ್ದೆ. ನನಗೊಂದು ಹೆಸರಿರಲಿಲ್ಲ. ನಾನು ಸಂಪೂರ್ಣ ಮುಕ್ತನಾಗಿರುತ್ತಿದ್ದೆ,’’ ಎನ್ನುತ್ತಿದ್ದ.
ಗೋಕರ್ಣದ ಬಳಿಯ ಕಾಡಿನಲ್ಲಿ ಒಬ್ಬಳು ರಷ್ಯನ್ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆಗೆ ಗುಹೆಯಲ್ಲಿ ವಾಸಿಸುತ್ತಿದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ಮರಳಿ ಕಳುಹಿಸಲು ಸಿದ್ಧತೆ ನಡೆದಿದೆ. ಈ ವಿಷಯವನ್ನು ಹಿಂಬಾಲಿಸಿ ಮೇಲಿನ ಎರಡು ಘಟನೆಗಳು ನೆನಪಾದವು. ಇದರ ಜೊತೆಗೆ ಈಗಾಗಲೇ ಜನಪ್ರಿಯವಾದ ʼಇನ್ ಟೂ ದಿನ ವೈಲ್ಡ್ʼ ಎಂಬ ಸಿನಿಮಾ ಆಗಿರುವ ಕ್ರಿಸ್ಟೋ ಫರ್ ಮೆಕಾಂಡಲ್ಸ್‌ನ ಕತೆಯನ್ನೂ ಜೋಡಿಸಿಕೊಳ್ಳಬಹುದು. ಅಲಾಸ್ಕದ ಕಾಡಿನಲ್ಲಿ ಒಂಟಿಯಾಗಿ ಇರಬಯಸಿದ್ದ ಇವನು 113 ದಿನಗಳಿದ್ದು ಬಳಿಕ ಹಸಿವಿನಿಂದ ಸತ್ತುಹೋದ. ಸಾಯುವವರೆಗಿನ ಕ್ಷಣಗಳನ್ನು ಡೈರಿ ಬರೆದಿಟ್ಟಿದ್ದ. ಅದು ನಮಗೆ ಸಿಕ್ಕಿ ಪುಸ್ತಕವಾಯಿತು, ಸಿನಿಮಾ ಆಯಿತು. ಇವರೆಲ್ಲ ಯಾಕೆ ಹೀಗೆ ಎಂಬ ಪ್ರಶ್ನೆ, ಅವರು ಬಯಸುವ ನಿಸರ್ಗದ ನಡುವಿನ ಮೌನ, ಏಕಾಂತ, ಪ್ರಶಾಂತತೆ, ಆಧುನಿಕತೆಯ ಜೀವನದಿಂದ ವಿಮುಖತೆಯಲ್ಲೇ ಉತ್ತರವಿದೆ.