Vishweshwar Bhat Column: ನಾವು ನಗುವುದೇಕೆ ?
ರಾಬರ್ಟ್ ಪ್ರೊವಿನ್ ಬರೆದ Laughter: A Scientific Investigation ಪುಸ್ತಕವು ಮನುಷ್ಯನ ನಗುವಿನ ಹಿಂದಿರುವ ವಿಕಸನೀಯ ಮತ್ತು ಸಾಮಾಜಿಕ ರಹಸ್ಯಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ಪರಿಚಯಿಸಿದ ಕೃತಿ. ನಗು ಎನ್ನುವುದು ಕೇವಲ ಹಾಸ್ಯ ಚಟಾಕಿಗಳಿಗೆ ನೀಡುವ ಪ್ರತಿಕ್ರಿಯೆಯಲ್ಲ, ಬದಲಿಗೆ ಮನುಷ್ಯರ ನಡುವಿನ ಸಾಮಾಜಿಕ ಬಾಂಧವ್ಯವನ್ನು ಬೆಸೆಯುವ ಪ್ರಬಲ ಮಾಧ್ಯಮ ಎಂದು ಪ್ರೊವಿನ್ ಪ್ರತಿಪಾದಿಸುತ್ತಾರೆ.
-
ಸಂಪಾದಕೀಯ ಸದ್ಯಶೋಧನೆ
ರಾಬರ್ಟ್ ಪ್ರೊವಿನ್ ಬರೆದ Laughter: A Scientific Investigation ಪುಸ್ತಕವು ಮನುಷ್ಯನ ನಗುವಿನ ಹಿಂದಿರುವ ವಿಕಸನೀಯ ಮತ್ತು ಸಾಮಾಜಿಕ ರಹಸ್ಯಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ಪರಿಚಯಿಸಿದ ಕೃತಿ. ನಗು ಎನ್ನುವುದು ಕೇವಲ ಹಾಸ್ಯ ಚಟಾಕಿಗಳಿಗೆ ನೀಡುವ ಪ್ರತಿಕ್ರಿಯೆಯಲ್ಲ, ಬದಲಿಗೆ ಮನುಷ್ಯರ ನಡುವಿನ ಸಾಮಾಜಿಕ ಬಾಂಧವ್ಯವನ್ನು ಬೆಸೆಯುವ ಪ್ರಬಲ ಮಾಧ್ಯಮ ಎಂದು ಪ್ರೊವಿನ್ ಪ್ರತಿಪಾದಿಸುತ್ತಾರೆ.
ಈ ಸತ್ಯವನ್ನು ಸಾಬೀತುಪಡಿಸಲು ಅವರು ಬಳಸಿಕೊಂಡ ಕ್ಷೇತ್ರ ಅಧ್ಯಯನಗಳು, ನೈಜ ಪ್ರಸಂಗಗಳು ಹಾಗೂ ವಿಚಿತ್ರ ಸನ್ನಿವೇಶಗಳು ಗಂಭೀರ ವಿeನದಷ್ಟೇ ಅಪಾರ ತಮಾಷೆಯನ್ನೂ ಒಳಗೊಂಡಿವೆ. ಅಂಥದ್ದೇ ಒಂದು ರೋಚಕ ಪ್ರಸಂಗವೆಂದರೆ ಪ್ರೊವಿನ್ ತಮ್ಮ ವಿದ್ಯಾರ್ಥಿ ಗಳೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಗುಟ್ಟಾಗಿ ಹಿಂಬಾಲಿಸಿ ನಗುವಿನ ಮೂಲವನ್ನು ಪತ್ತೆ ಹಚ್ಚಲು ನಡೆಸಿದ ರಹಸ್ಯ ಬೇಹುಗಾರಿಕೆ.
ಪ್ರೊವಿನ್ ತಮ್ಮ ಸಂಶೋಧನೆಯನ್ನು ಪ್ರಯೋಗಾಲಯದ ನಾಲ್ಕು ಗೋಡೆಗಳ ಮಧ್ಯೆ ಕೂತು ನಡೆಸಲು ಬಯಸಲಿಲ್ಲ. ಹಾಗೆಂದು ಜನರನ್ನು ಲ್ಯಾಬ್‌ಗೆ ಕರೆಸಿ ಹಾಸ್ಯ ಪ್ರದರ್ಶನ ತೋರಿಸಿ ನಗಿಸಿದರೆ ಅದು ಕೃತಕವಾಗುತ್ತದೆ. ಹೀಗಾಗಿ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಶಾಪಿಂಗ್ ಮಾಲ್‌ಗಳು, ನಗರದ ಕಾಫಿ ಅಂಗಡಿಗಳು, ಕಾಲೇಜು ಕ್ಯಾಂಪಸ್‌ಗಳು ಹಾಗೂ ಪಾರ್ಕ್‌ಗಳಲ್ಲಿ ಜನರ ನಡುವೆ ಸುಳಿದಾಡಲು ಆರಂಭಿಸಿದರು.
ಇದನ್ನೂ ಓದಿ: Vishweshwar Bhat Column: ಏನಿದು ಡೀಪ್ ಸ್ಟೇಟ್? ಪ್ರಜಾಸತ್ತೆಯೊಳಗಿನ ರಹಸ್ಯ ಅಧಿಕಾರ ಜಾಲ
ಜನರು ದಿನನಿತ್ಯದ ಮಾತುಕತೆಯಲ್ಲಿ ಯಾವಾಗ ನಗುತ್ತಾರೆ ಎಂಬುದನ್ನು ತಿಳಿಯಲು ವಿದ್ಯಾರ್ಥಿ ಗಳು ಸದ್ದಿಲ್ಲದೆ ಜನರ ಬಳಿ ನಿಂತು ಅವರ ಸಂಭಾಷಣೆಯನ್ನು ಕದ್ದು ಕೇಳಿ, ಯಾರು ನಕ್ಕರು ಮತ್ತು ನಗುವಿಗೆ ಮುನ್ನ ಯಾವ ಮಾತು ಬಂತು ಎಂಬುದನ್ನು ತಮ್ಮ ಪುಟ್ಟ ಪುಸ್ತಕಗಳಲ್ಲಿ ಟಿಪ್ಪಣಿ ಮಾಡಿಕೊಳ್ಳ ತೊಡಗಿದರು. ಈ ವಿಚಿತ್ರ ಚಟುವಟಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಹಲವು ಹಾಸ್ಯಾಸ್ಪದ ಪ್ರಸಂಗಗಳಿಗೆ ಕಾರಣವಾಯಿತು.
ಸ್ನೇಹಿತರೋ, ಪ್ರೇಮಿಗಳೋ ಗಂಭೀರವಾಗಿ ಹರಟುತ್ತಿರುವಾಗ, ಅಪರಿಚಿತ ಯುವಕನೊಬ್ಬ ಪಕ್ಕದ ನಿಂತು ಅವರ ಪ್ರತಿಯೊಂದು ಮಾತನ್ನು ಸೂಕ್ಷ್ಮವಾಗಿ ಕಿವಿಗೊಟ್ಟು ಕೇಳುತ್ತಾ, ಅವರು ನಕ್ಕ ತಕ್ಷಣ ಜೇಬಿನಿಂದ ಪೆನ್ನು-ಡೈರಿ ತೆಗೆದು ಬರೆಯುತ್ತಿದ್ದರೆ ಹೇಗಿರಬೇಡ!
ಜನರು ಇವರನ್ನು ಖಾಸಗಿ ಪತ್ತೇದಾರಿಗಳೆಂದು ಭಾವಿಸಿ ಸಂಶಯದಿಂದ ನೋಡುತ್ತಿದ್ದರು. ಇನ್ನು ಕೆಲವರು ಕಳ್ಳರೆಂದು ಭಾವಿಸಿ ತಮ್ಮ ಬ್ಯಾಗುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಮತ್ತೆ ಕೆಲವರು ಗಾಬರಿಯಿಂದ ಜಾಗ ಖಾಲಿ ಮಾಡುತ್ತಿದ್ದರು. ಇಡೀ ತಂಡ ಜನರನ್ನು ನಗಿಸಲು ಹೊರಟ ವರಂತೆ ಅಲ್ಲ, ತಾವೇ ಒಂದು ಹಾಸ್ಯಮಯ ಗೂಢಚಾರ ಪಡೆಯಂತೆ ಕಾಣುತ್ತಿತ್ತು. ಈ ರೀತಿಯ ಸತತ ಬೇಹುಗಾರಿಕೆಯಿಂದ ಪ್ರೊವಿನ್ ತಂಡ ಸುಮಾರು 1200ಕ್ಕೂ ಹೆಚ್ಚು ನಗುವಿನ ನೈಜ ಪ್ರಸಂಗಗಳನ್ನು ದಾಖಲಿಸಿತು. ಈ ಫಲಿತಾಂಶಗಳನ್ನು ಪರಿಶೀಲಿಸಿದಾಗ ವಿಜ್ಞಾನಿಗಳಿಗೆ ದೊಡ್ಡ ಆಶ್ಚರ್ಯ ಕಾದಿತ್ತು.
ನಾವೆಲ್ಲರೂ ನಂಬಿರುವಂತೆ ಜನರು ದೊಡ್ಡ ಜೋಕ್‌ಗಳು ಅಥವಾ ಬುದ್ಧಿವಂತಿಕೆಯ ವಿಡಂಬನೆ ಗಳನ್ನು ಕೇಳಿ ನಗುತ್ತಿರಲಿಲ್ಲ. ವಾಸ್ತವದಲ್ಲಿ ಕೇವಲ ಹತ್ತರಿಂದ ಇಪ್ಪತ್ತು ಪ್ರತಿಶತ ನಗು ಮಾತ್ರ ತಮಾಷೆಯ ಜೋಕ್‌ಗಳಿಂದ ಹುಟ್ಟುತ್ತಿತ್ತು. ಉಳಿದ 80ಕ್ಕೂ ಹೆಚ್ಚು ಪ್ರತಿಶತ ನಗುಗಳು ತೀರಾ ಸಾಮಾನ್ಯ, ನೀರಸ ಮತ್ತು ದಿನನಿತ್ಯದ ಸಹಜ ಮಾತುಗಳ ಬೆನ್ನ ಬರುತ್ತಿದ್ದವು. ಜನರು ಯಾವ ಹಾಸ್ಯವೂ ಇಲ್ಲದ ತೀರ ಸಪ್ಪೆ ವಾಕ್ಯಗಳಿಗೂ ಮುಕ್ತವಾಗಿ ಗಹಗಹಿಸಿ ನಗುತ್ತಿದ್ದರು.
ಪ್ರೊವಿನ್ ದಾಖಲಿಸಿದ ‘ಆ ನಗು ತರಿಸಿದ ಮಾತುಗಳು’ ಎಷ್ಟು ಅಸಂಬದ್ಧ ಮತ್ತು ತಮಾಷೆಯಾಗಿ ದ್ದವು ಎಂದರೆ, ಅವುಗಳನ್ನು ಓದಿದ ಯಾರಿಗಾದರೂ ನಗು ಬಾರದೆ ಇರದು. ಉದಾಹರಣೆಗೆ, ಒಬ್ಬ ವ್ಯಕ್ತಿ ‘ನಾನು ಈಗಷ್ಟೇ ಕಾರು ಪಾರ್ಕ್ ಮಾಡಿ ಬಂದೆ’ ಎಂದಾಗ ಎದುರಿಗಿದ್ದವರು ಜೋರಾಗಿ ನಕ್ಕಿದ್ದರು. ಇನ್ನೊಬ್ಬಳು ‘ನನ್ನ ಬಳಿ ಹೆಚ್ಚುವರಿ ರಬ್ಬರ್ ಬ್ಯಾಂಡ್ ಇದೆಯೇ ನೋಡ್ತೀನಿ’ ಎಂದಾಗ ಗುಂಪಿನಲ್ಲಿ ನಗುವಿನ ಅಲೆ ಎದ್ದಿತ್ತು.
‘ಇವತ್ತು ಮಳೆ ಬರುವ ಹಾಗಿದೆ’, ‘ನೀನು ಆ ಕೆಂಪು ಶರ್ಟ್ ಹಾಕಿಕೊಂಡಿದ್ದೀಯಾ?’, ‘ನನಗೆ ಹೊಟ್ಟೆ ಹಸಿಯುತ್ತಿದೆ’ ಎಂಬಂಥ ಮಾತುಗಳ ನಂತರವೂ ಜನರು ಕಿಲಕಿಲನೆ ನಕ್ಕಿದ್ದರು. ಮನುಷ್ಯರು ಹಾಸ್ಯ ಕ್ಕಾಗಿ ನಗುತ್ತಿಲ್ಲ, ಬದಲಾಗಿ ಪರಸ್ಪರ ಸ್ನೇಹ ಬೆಳೆಸಲು ನಗುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟ ವಾಯಿತು. ಈ ಅಧ್ಯಯನದ ಮತ್ತೊಂದು ತಮಾಷೆಯ ಸಂಗತಿಯೆಂದರೆ, ಮಾತನಾಡು ವವನು ಮತ್ತು ಕೇಳುಗನ ನಡುವಿನ ನಗುವಿನ ಸಮೀಕರಣ.
ಸಾಮಾನ್ಯವಾಗಿ ಕೇಳುಗರು ನಗುತ್ತಾರೆ ಎಂದು ಭಾವಿಸಲಾಗುತ್ತದೆ. ಆದರೆ ಪ್ರೊವಿನ್ ಕಂಡು ಕೊಂಡಂತೆ, ಮಾತನಾಡುತ್ತಿದ್ದ ವ್ಯಕ್ತಿಯೇ ಕೇಳುಗರಿಗಿಂತ ಸುಮಾರು 46 ಪ್ರತಿಶತ ಹೆಚ್ಚು ನಗುತ್ತಿದ್ದ! ತಾನೇ ಹೇಳಿದ ನೀರಸ ಮಾತಿಗೆ ತಾನೇ ಮೊದಲು ನಕ್ಕು, ನಂತರ ಇತರರನ್ನು ನಗುವಂತೆ ಪ್ರೇರೇಪಿಸುತ್ತಿದ್ದ.