Harish Kera Column: ಬಾಳುವಂಥ ಹೂವೇ, ಬಾಡುವಾಸೆ ಏಕೆ ?
ಚಂದವಾಗಿ ಬದುಕಿ ಬಾಳ ಬೇಕಾದ ಈ ಮನಸ್ಸುಗಳ ಒಳಗೆ ಅದು ಯಾವ ಕ್ಷೋಭೆಯ ಕಡಲುಗಳು ಉಕ್ಕುತ್ತಿವೆ? ಹಸಿ ಮಣ್ಣಿನಂಥ ಈ ಮೆದುಳುಗಳ ಒಳಗೆ ಶಾಶ್ವತ ಶೂನ್ಯದ ಬೀಜ ಹೇಗೆ ಮೊಳಕೆಯೊಡೆ ಯಿತು? ಇದನ್ನು ನೋಡಬೇಕಲ್ಲವೇ. ಮೊದಮೊದಲು ಪತ್ರಿಕೆಗಳಲ್ಲಿ ‘ಜೀವನದಲ್ಲಿ ಜಿಗುಪ್ಸೆ’ ಯಿಂದ ಆತ್ಮಹತ್ಯೆ ಮಾಡಿಕೊಂಡರು ಎಂದು ಓದುತ್ತಿದ್ದೆವು.


ಕಾಡುದಾರಿ
ಅವನು ಬಯಸಿದ ಯಾವುದನ್ನೂ ಬೇಡ ಅನ್ನಲಿಲ್ಲ. ಹೈಸ್ಕೂಲಿಗೆ ಹೋಗುವುದಕ್ಕೆ ಬೈಕ್ ಬೇಕು ಎಂದಿದ್ದ, ಕೊಡಿಸಿದ್ದೆ. ಅವನು ಬಯಸಿದ ಹೈಸ್ಕೂಲಿಗೇ ಸೇರಿಸಿದ್ದೆ. ದುಬಾರಿ ಸ್ಮಾಟ್ ಫೋನ್, ಅದಕ್ಕೆ ತಿಂಗಳ ಪ್ಯಾಕ್, ಒಳ್ಳೇ ಬಟ್ಟೆಬರೆ- ಯಾವುದಕ್ಕೂ ಬೇಡವೆಂದಿರಲಿಲ್ಲ. ಆದ್ರೂ ಸಣ್ಣ ವಿಷಯಕ್ಕೆ ಕೋಪಿಸಿಕೊಂಡು ಹೋಗಿ ಬಿಟ್ಟ ಸರ್. ಪರೀಕ್ಷೆಗೆ ಇನ್ನೊಂದು ತಿಂಗಳಿದೆ, ಯಾವಾಗ ಓದ್ತೀಯ, ಸದಾ ಫೋನ್‌ನ ಇರ್ತೀಯಲ್ಲ ಅಂತ ಗದರಿದ್ದಷ್ಟೇ. ನೇಣು ಹಾಕಿಕೊಂಡ ನೋಡಿ ಎಂದು ಆ ಹುಡುಗನ ಅಪ್ಪ ರೋದಿಸುತ್ತಿದ್ದರು.
ಎಸ್ಸೆಸ್ಸೆಲ್ಸಿಯಲ್ಲಿದ್ದ ಅವರ ಮಗ ತಿರುಗಿ ಬಾರದ ಸಾವಿನ ಮನೆಗೆ ಹೋಗಿ ಇವರಿಗೆ ನಿತ್ಯಶೋಕ ವನ್ನು ದಯಪಾಲಿಸಿದ್ದ. ಬೇರೆ ಮಕ್ಕಳೂ ಇಲ್ಲದ ಇವರ ಮುಂದೆ ದೊಡ್ಡ ಶೂನ್ಯವೊಂದು ನಿಂತಿ ತ್ತು. ಹದಿಮೂರು ವರ್ಷದ ಹುಡುಗನೊಬ್ಬ ಪ್ರೌಢರಂತೆ ‘ಇದನ್ನು ನೀವು ಓದುವಾಗ ನಾನು ಸ್ವರ್ಗ ದಲ್ಲಿ ಖುಷಿಯಾಗಿರುತ್ತೇನೆ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಚೆನ್ನಾಗಿ ಓದಿಕೋ ಎಂದು ಪೋಷಕರು ಹೇಳಿದ್ದಕ್ಕೆ ಹೈಸ್ಕೂಲ್ ಹುಡುಗಿಯೊಬ್ಬಳು ಬಾವಿಗೆ ಹಾರುತ್ತಾಳೆ. ಐಐಟಿ ವಿದ್ಯಾರ್ಥಿಯೊಬ್ಬ ಕಾಲೇಜಿನ 10ನೇ ಮಹಡಿಯಿಂದ ಜಿಗಿದು ಜೀವ ಕಳೆದು ಕೊಳ್ಳುತ್ತಾನೆ. ಸಿಇಟಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಬಂದಾತ ಪ್ರೇಮ ವೈಫಲ್ಯದಿಂದ ನೊಂದು ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾಯುತ್ತಾನೆ.
ಇಂಥ ಒಂದಲ್ಲ ಒಂದು ಸುದ್ದಿಯನ್ನು ಪ್ರತಿದಿನ ಓದುತ್ತೇವೆ. ಮನೆಯಲ್ಲಿ ಆ ಪ್ರಾಯದ ಮಕ್ಕಳಿದ್ದರೆ ಸ್ವಲ್ಪ ಎಚ್ಚರಿಕೆ ವಹಿಸುತ್ತೇವೆ. ಕೆಲವರು ಅದನ್ನೂ ಮಾಡುವುದಿಲ್ಲ. ನಿನ್ನೆಯವರೆಗೂ ಚೆನ್ನಾಗಿದ್ದ ಹುಡುಗಿ ಇಂದು ಇದ್ದಕ್ಕಿದ್ದಂತೆ ಜಗತ್ತಿನಿಂದ ಕಣ್ಮರೆಯಾಗುತ್ತಾಳೆ. ಇಂದು ಬೆಳಗ್ಗಿನವರೆಗೂ ನಗು ನಗುತ್ತ ಮಾತಾಡುತ್ತಿದ್ದ ಹುಡುಗ ಕ್ಷಣಾರ್ಧದಲ್ಲಿ ಮಂಕಾಗಿ ಸಂಜೆ ಜೀವ ತೆಗೆದುಕೊಳ್ಳುತ್ತಾನೆ.
ಇದನ್ನೂ ಓದಿ: Harish Kera Column: ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ
ಚಂದವಾಗಿ ಬದುಕಿ ಬಾಳ ಬೇಕಾದ ಈ ಮನಸ್ಸುಗಳ ಒಳಗೆ ಅದು ಯಾವ ಕ್ಷೋಭೆಯ ಕಡಲುಗಳು ಉಕ್ಕುತ್ತಿವೆ? ಹಸಿ ಮಣ್ಣಿನಂಥ ಈ ಮೆದುಳುಗಳ ಒಳಗೆ ಶಾಶ್ವತ ಶೂನ್ಯದ ಬೀಜ ಹೇಗೆ ಮೊಳಕೆ ಯೊಡೆಯಿತು? ಇದನ್ನು ನೋಡಬೇಕಲ್ಲವೇ. ಮೊದಮೊದಲು ಪತ್ರಿಕೆಗಳಲ್ಲಿ ‘ಜೀವನದಲ್ಲಿ ಜಿಗುಪ್ಸೆ’ ಯಿಂದ ಆತ್ಮಹತ್ಯೆ ಮಾಡಿಕೊಂಡರು ಎಂದು ಓದುತ್ತಿದ್ದೆವು.
ವಯಸ್ಕರು ಹಾಗೆ ಮಾಡಬಹುದು, ಆದರೆ ಮಗು ಎಷ್ಟು ಮಹಾ ಜೀವನ ನೋಡಿರುತ್ತದೆ ಎಂಬ ಪ್ರಶ್ನೆ ದೊಡ್ಡವರದು. ಪ್ರತಿ ಜೀವಕ್ಕೂ ಅದರ ಜೀವನ ದೊಡ್ಡದೇ. ಮಕ್ಕಳು ಸಣ್ಣ ಸಂಗತಿಗಳಿಗೂ ಅತಿಯಾಗಿ ಪ್ರತಿಕ್ರಿಯಿಸುತ್ತಿzರಾ, ಸಣ್ಣ ಗದರಿಕೆಯನ್ನೂ ಸಹಿಸುತ್ತಿಲ್ಲವಾ ಎಂಬಂಥ ಆತಂಕಗಳು ಕಣ್ಣೆದುರಿಗಿವೆ. ಗದರಿದರೆ, ಸಣ್ಣದೊಂದು ಅವಮಾನವಾದರೆ ಕಳೆದುಕೊಳ್ಳಬಹುದಾದಷ್ಟು ಪ್ರಾಣ ಅಗ್ಗವಾದುದು ಯಾವಾಗ? ಏನು ಇವರನ್ನು ಹೀಗೆ ಮಾಡುವಂತೆ ಪ್ರಚೋದಿಸುತ್ತಿದೆ? ಇವರು ಸದಾ ನೋಡುತ್ತಿರುವ ರೀಲ್‌ಗಳೇ? ಸಾಮಾಜಿಕ ಜಾಲತಾಣಗಳಲ್ಲಿ ಇವರು ಇತರರೊಂದಿಗೆ ತಮ್ಮನ್ನು ನಿರಂತರವಾಗಿ ಹೋಲಿಸಿಕೊಂಡು ಕೀಳರಿಮೆಗೆ ಒಳಗಾಗುತ್ತಿರುವುದೇ? ಏನೆ ಇದರ ಹಿಂದಿದೆ? ಅಂಕಿ- ಅಂಶಗಳಿಲ್ಲದೇ ಈ ವಿಚಾರವನ್ನು ಮುಂದುವರಿಸಲಾಗುವುದಿಲ್ಲ.

ನಿಮಗೆ ಈ ಸಮೀಕ್ಷೆಯ ವಿವರವೊಂದು ಗೊತ್ತಿರಲಿ. ಭಾರತದ ಕಾಲೇಜು ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯ ಪ್ರವೃತಿಯ ಕುರಿತು ಇತ್ತೀಚೆಗೆ ನಡೆದ ಒಂದು ಸಮೀಕ್ಷೆ. ಕಳೆದ ವರ್ಷದಲ್ಲಿ (2024) 10 ವಿದ್ಯಾರ್ಥಿಗಳಲ್ಲಿ ಒಬ್ಬ/ಳು ಆತ್ಮಹತ್ಯೆಯ ಆಲೋಚನೆ ಹೊಂದಿದ್ದರು ಎಂಬುದು ಅಧ್ಯಯನದ ಫಲಿತಾಂಶ.
ಅಂದರೆ, ನಿಮ್ಮೂರಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿದ್ದಾರೆ ಎಂದಿಟ್ಟುಕೊಳ್ಳಿ. ಅವರಲ್ಲಿ ಆತ್ಮಹತ್ಯೆಯ ಯೋಚನೆ ಹೊಂದಿರುವವರು ನೂರು ಮಂದಿ ಎಂದು ಹೇಳಿದರೆ ಸಮಸ್ಯೆಯ ಗಂಭೀ ರತೆ ನಿಮಗೆ ಅರ್ಥವಾಗಬಹುದು. ಸಂಶೋಧಕರ ಪ್ರಕಾರ ಭಾರತವು ವಿಶ್ವದ ಅತಿ ಹೆಚ್ಚು ಆತ್ಮಹತ್ಯೆ ಪ್ರಮಾಣ ಹೊಂದಿರುವ ದೇಶಗಳಲ್ಲಿ ಒಂದು.
ಮೆಲ್ಬೋರ್ನ್ ವಿವಿ, ನಿಮ್ಹಾನ್ಸ್ ಮತ್ತು ಹಲವಾರು ಭಾರತೀಯ ವೈದ್ಯಕೀಯ ಕಾಲೇಜುಗಳು ಸೇರಿಕೊಂಡು ಒಂಬತ್ತು ರಾಜ್ಯಗಳಲ್ಲಿ 30 ವಿಶ್ವವಿದ್ಯಾಲಯಗಳ 8542 ವಿದ್ಯಾರ್ಥಿಗಳನ್ನು ಮಾತಾ ಡಿಸಿ ಮಾಡಿದ ಸಮೀಕ್ಷೆ ಇದು. ಕಳೆದ ವರ್ಷ ಶೇ.12ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಯ ಆಲೋಚನೆ ಮಾಡಿದ್ದಾರೆ.
ಶೇ.5ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಂದರೆ 40 ವಿದ್ಯಾರ್ಥಿಗಳಿರುವ ತರಗತಿಯಲ್ಲಿ ಕನಿಷ್ಠ ಐದು ವಿದ್ಯಾರ್ಥಿಗಳು ತಮ್ಮ ಪ್ರಾಣ ತೆಗೆದುಕೊಳ್ಳುವ ಬಗ್ಗೆ ಯೋಚಿಸಿದ್ದಾರೆ. ಇಬ್ಬರು ಈಗಾಗಲೇ ಪ್ರಯತ್ನಿಸಿರಬಹುದು. ಇವು ಕೇವಲ ಅಂಕಿಅಂಶಗಳು ಅನಿಸುತ್ತದೆಯೇ? ಅಥವಾ ನಮ್ಮ ಒಟ್ಟು ಶೈಕ್ಷಣಿಕ- ಸಾಮಾಜಿಕ- ಕೌಟುಂಬಿಕ ವ್ಯವಸ್ಥೆಯ ದುರಂತ, ಮೌನ ಯಾತನೆಯ ಕಥೆ ಅನಿಸುತ್ತದೆಯೋ? ಇದು ಆಶ್ಚರ್ಯ ಮೂಡಿಸದಿದ್ದರೆ, ಇನ್ನೊಂದು ಸಂಗತಿ ಹೇಳುತ್ತೇನೆ ಕೇಳಿ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ದತ್ತಾಂಶದ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳ ಆತ್ಮಘಾತಕತನದ ವರದಿಗಳು ಎರಡು ಪಟ್ಟು ಹೆಚ್ಚಾಗಿವೆ. ನಿಖರ ಲೆಕ್ಕ ನೋಡ ಬೇಕೆಂದಿದ್ದರೆ, ದೇಶದಲ್ಲಿ 2013ರಲ್ಲಿ 6644 ಆತ್ಮಹತ್ಯೆಗಳಾಗಿದ್ದರೆ, 2022ರಲ್ಲಿ ಅದು 13044ಕ್ಕೆ ಏರಿಕೆ ಯಾಗಿದೆ.
2022ರ ಒಟ್ಟು ಆತ್ಮಹತ್ಯೆಗಳಲ್ಲಿ ವಿದ್ಯಾರ್ಥಿಗಳ ಪ್ರಮಾಣ ಶೇಕಡಾ 10. ಹೆಚ್ಚಿನ ಅಪಾಯದ ರಾಜ್ಯ ಗಳಲ್ಲಿ ಕರ್ನಾಟಕದ ಹೆಸರು ಮೇಲಿದೆ. ನಂತರ ಮಹಾರಾಷ್ಟ್ರ ಮತ್ತು ತಮಿಳುನಾಡು. 15-29 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಇದರಲ್ಲಿ ಹೆಚ್ಚು ಬಾಧಿತರು. ಐಸಿ೩ ಸಂಸ್ಥೆ ನೀಡಿರುವ 2024ರ ವರದಿಯ ಪ್ರಕಾರ ವಿದ್ಯಾರ್ಥಿಗಳ ಆತ್ಮಹತ್ಯೆಗಳು ವಾರ್ಷಿಕವಾಗಿ ಶೇಕಡಾ 4ರಷ್ಟು ಹೆಚ್ಚುತ್ತಿವೆ.
ಇನ್ನೂ ಒಂದು ಸಂಗತಿ. ನಾವು ಯಾವುದನ್ನೆಲ್ಲ ‘ಗಣ್ಯ’ ‘ಪ್ರತಿಷ್ಠಿತ’ ವಿದ್ಯಾಸಂಸ್ಥೆಗಳು ಎಂದು ಕರೆಯುತ್ತೇವೆಯೋ, ಅಂಥ ಸಂಸ್ಥೆಗಳಲ್ಲಿ ಈ ಬಿಕ್ಕಟ್ಟು ತೀವ್ರವಾಗಿದೆಯಂತೆ. 2019 ಮತ್ತು 2023ರ ನಡುವೆ ಐಐಟಿಗಳು, ಎನ್‌ಐಟಿಗಳು ಮತ್ತು ಐಐಎಂಗಳಲ್ಲಿ 98 ಆತ್ಮಹತ್ಯೆಗಳು ವರದಿಯಾಗಿವೆ. ಅದರಲ್ಲಿ ಐಐಟಿಗಳಲ್ಲಿ 39 ಸಾವು. ಅತಿ ಹೆಚ್ಚು ಐಐಟಿ ಮದ್ರಾಸ್. ಐಐಟಿಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಶೇ. 61ರಷ್ಟು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಒತ್ತಡ ಪ್ರಮುಖ ಪ್ರಚೋದನೆ.
ಜೊತೆಗೆ ಉದ್ಯೋಗ ಮಾರುಕಟ್ಟೆಯ ಅಸ್ಥಿರತೆ. ಇದು ಇನ್ನಷ್ಟು ಹದಗೆಡಿಸುವ ಸಂಗತಿ. 25 ವರ್ಷ ದೊಳಗಿನ ಶೇ. 42ರಷ್ಟು ಯುವಕರು ನಿರುದ್ಯೋಗಿಗಳು. ಮೇಲಿನವು ಬರಿದೇ ಒಣ ಅಂಕಿ ಅಂಶಗಳು ಎಂದು ದಯವಿಟ್ಟು ಬದಿಗಿಡಬೇಡಿ. ಸಾವಿಗೀಡಾದ ಮಗುವಿನ ಮನೆಯವರಿಗೆ ಇದು ಅಂಕಿಯಲ್ಲ, ಎದೆಗೆ ಇರಿದ ಮುಳ್ಳು. ಇನ್ನು ಮುಂದಿನ ಮಾತುಗಳು ನನ್ನದಲ್ಲ, ಆತ್ಮಹತ್ಯೆಗಳನ್ನು ಅಧ್ಯಯನ ಮಾಡುತ್ತ ಬಂದಿರುವ ನಾನಾ ತಜ್ಞರದು.
ಶೈಕ್ಷಣಿಕ ಒತ್ತಡ ಮತ್ತು ಉದ್ಯೋಗದ ಒತ್ತಡಗಳು ಹೆಚ್ಚಿನ ಸಾವಿಗೆ ಕಾರಣ ಎಂಬುದು ಮೇಲಿನ ಅಂಶಗಳಲ್ಲಿ ಮನದಟ್ಟಾಗುತ್ತದೆ. ಆದರೆ ಈ ಒತ್ತಡವನ್ನು ಸೃಷ್ಟಿಸುತ್ತಿರುವವರು ಯಾರು? ಒಟ್ಟಾರೆ ವ್ಯವಸ್ಥೆಯೇ ಈ ವಿಷಯದಲ್ಲಿ ಖಳನಾಯಕ ಎಂಬುದು ನಿಮಗೆ ಗೊತ್ತಿರುವಂಥದೇ.
ಎಸ್ಸೆಸ್ಸೆಲ್ಸಿಯಲ್ಲಿ ಮಕ್ಕಳು ಒಂದು ಅಂಕ ಕಡಿಮೆ ಬಂದರೆ ತಮಗಾದ ಸಾರ್ವಜನಿಕ ಅವಮಾನ ಎಂದು ಭಾವಿಸುವ ಪೋಷಕರ ನಿರೀಕ್ಷೆ ಇಲ್ಲಿ ಮೊದಲ ಆರೋಪಿ ನಂಬರ್ ವನ. ಅಷ್ಟು ಅಂಕ ದೊರೆಯದಿದ್ದರೆ ನಮ್ಮಲ್ಲಿ ಸೇರಿಸಿಕೊಳ್ಳುವುದಿಲ್ಲ ಎನ್ನುವ ಪ್ರತಿಷ್ಠಿತ ಸಂಸ್ಥೆಗಳು ಆರೋಪಿ ನಂಬರ್ ಟೂ.
ಬದುಕನ್ನು ಇಂಥ ಅಂಕಿಗಳ ಮಾರಣಾಂತಿಕ ಹಂಗರ್ ಗೇಮ್ ಆಟವಾಗಿಸಿರುವ ಒಟ್ಟಾರೆ ಔದ್ಯೋ ಗಿಕ ವಾತಾವರಣ ಇದನ್ನೆಲ್ಲ ಆವರಿಸಿರುವ ರಕ್ತಬೀಜ. ವೈಫಲ್ಯವನ್ನು ನಾಚಿಕೆಗೇಡಿನ ಸಂಗತಿ ಎಂದು ನೋಡುವ ಪೋಷಕರು ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯ ಅಪಾಯ ವನ್ನು ಹೆಚ್ಚಿಸುತ್ತಾರೆ.
ಶೈಕ್ಷಣಿಕ ಕೌನ್ಸೆಲಿಂಗ್ ಎಂಬುದು ನಮ್ಮಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿರುವ ಪರಿಕಲ್ಪನೆ. ಇನ್ನು ಮಾನಸಿಕ ಆರೋಗ್ಯ ಬೆಂಬಲ ಅಥವಾ ಸೈಕಾಲಜಿಸ್ಟರ ಸಹಾಯ ಪಡೆಯುವುದು ಎಂಬುದು ದೂರದ ಮಾತು ಅಥವಾ ಎಲ್ಲವೂ ಕೈಚೆಲ್ಲಿದ ಮೇಲಿನ ಸಂಗತಿ. 15-24 ವರ್ಷ ವಯಸ್ಸಿನವರಲ್ಲಿ ಹೀಗೆ ಬೆಂಬಲ ಪಡೆಯಲು ಮುಂದೆ ಬರುವವರು ಕೇವಲ 41 ಪ್ರತಿಶತ. ಐಐಟಿಗಳು, ಎನ್ ಐಟಿ ಗಳಲ್ಲಿ ಕೌನ್ಸೆಲರ್- ವಿದ್ಯಾರ್ಥಿ ಅನುಪಾತ ಅತಿ ಕಡಿಮೆ. ಇದೆಲ್ಲವೂ ವಿದ್ಯಾರ್ಥಿಗಳ ಮಾನಸಿಕ ಕುಸಿತಕ್ಕೆ ಮೂಲ.
ಇತ್ತೀಚಿನ ಅಧ್ಯಯನಗಳ ಪ್ರಕಾರ ಕೌಟುಂಬಿಕ ಸಂಬಂಧಗಳ ಗುಣಮಟ್ಟವೂ ಆತ್ಮಹತ್ಯೆಯ ಸಾಧ್ಯತೆಯನ್ನು ಸೂಚಿಸುವ ಸಂಗತಿಗಳಲ್ಲಿ ಒಂದು. ಕುಟುಂಬದೊಂದಿಗೆ ನಮ್ಮ ಸಂಬಂಧ ಏನೇನೂ ಚೆನ್ನಾಗಿಲ್ಲ ಎನ್ನುವ ಅಥವಾ ಹಾಗೆ ಭಾವಿಸಿದ ವಿದ್ಯಾರ್ಥಿಗಳು ಸಾವಿನತ್ತ ಸರಿಯುವ ಪ್ರಯತ್ನ ಮನಮಾಡುವ ಸಾಧ್ಯತೆ ಗಮನಾರ್ಹವಾಗಿ ಹೆಚ್ಚು.
ಭಾರತದ ಸಮಾಜದಲ್ಲಿ ಕುಟುಂಬವೇ ಭಾವನಾತ್ಮಕ ಮತ್ತು ಆರ್ಥಿಕ ಬೆಂಬಲದ ಪ್ರಾಥಮಿಕ ಮೂಲ. ಕುಟುಂಬ ಸರಿಯಾಗಿ ಕೆಲಸ ಮಾಡದೆ ಹೋದರೆ ಯುವಕರು ಹೆಚ್ಚೆಚ್ಚು ಅಂಚಿಗೆ ಸರಿಯುತ್ತಾ ಹೋಗಬಹುದು. ಮನೆಯಲ್ಲಿ ದಬ್ಬಾಳಿಕೆಯ ವಾತಾವರಣ, ತಲೆಮಾರುಗಳ ನಡುವಿನ ಘರ್ಷಣೆಗಳು, ಭಾವನಾತ್ಮಕ ನಿರ್ಲಕ್ಷ್ಯ ಇದೆಲ್ಲ ಅಸಹನೀಯ ಒಂಟಿತನದ ಭಾವನೆ ಉಂಟು ಮಾಡಬಹುದು.
ಇದು ಮಾನಸಿಕ ಆರೋಗ್ಯ ತಜ್ಞರು ದೀರ್ಘಕಾಲದಿಂದ ಹೇಳುತ್ತ ಬಂದಿರುವ ಮಾತು. ಆರೋಪಿಗಳ ಸಾಲಿನಲ್ಲಿ ಇರುವ ಇನ್ನೊಂದು ಸಂಗತಿಯೆಂದರೆ ಆತ್ಮಹತ್ಯೆಯ ಅಲೆಗಳ ಗುಣ. ಒಂದು ಆತ್ಮಹತ್ಯೆ ಇನ್ನೊಂದನ್ನು ಪ್ರಚೋದಿಸಬಹುದು! ವಿದ್ಯಾರ್ಥಿಯ ಸ್ನೇಹಿತರೋ ತಿಳಿದವರೋ ಪ್ರಾಣ ತೆಗೆದು ಕೊಂಡರೆ, ಅಂಥ ಸಾವುಗಳ ಬಗ್ಗೆ ಸದಾ ಮಾತಾಡುತ್ತಿದ್ದರೆ, ಅದರ ಆಲೋಚನೆಗಳು ಸದಾ ಬರುತ್ತಿದ್ದರೆ, ಆ ಬಗೆಗಿನ ಸುದ್ದಿಗಳನ್ನು ಕೇಳುತ್ತಿದ್ದರೆ ಇದೆಲ್ಲದರಿಂದ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆ ಗಣನೀಯವಾಗಿ ಹೆಚ್ಚಾಗುತ್ತದಂತೆ.
ಒಬ್ಬ ದುಃಖಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸಾವು ಹಾಗೆ ಸದ್ದಿಲ್ಲದೆ ದಾಟಿಕೊಳ್ಳುತ್ತದೆ ಭಾವನಾತ್ಮಕ ನೋವೇ ಹೆಚ್ಚಾಗಿ ಮೂಲ ಕಾರಣವಾಗಿದ್ದರೂ, ಆತ್ಮಹತ್ಯೆಗೆ ವೇಗವರ್ಧಕಗಳಾಗಿ ಕೆಲಸ ಮಾಡು ವುದು ಮಾದಕ ವಸ್ತುಗಳು. ಹೆಚ್ಚಿದ ಮದ್ಯ ಸೇವನೆ ಮತ್ತು ಆತ್ಮಹತ್ಯೆಯ ಪ್ರಯತ್ನಗಳ ನಡುವೆ ಸ್ಪಷ್ಟವಾದ ಸಂಬಂಧಗಳನ್ನು ಸಮೀಕ್ಷೆಗಳು ಕಂಡುಹಿಡಿದಿವೆ.
ಈ ಮಾದಕ ವಸ್ತುಗಳು ನೋವನ್ನು ಮರೆಸುವ ಬದಲು, ಮನಸ್ಸಿನ ಪ್ರಕ್ಷುಬ್ಧತೆಯನ್ನು ಹೆಚ್ಚಿಸುತ್ತವೆ. ರ‍್ಯಾಗಿಂಗ್, ಬುಲ್ಲೀಯಿಂಗ್, ಕಿರುಕುಳ, ಶಾಲೆಯಲ್ಲಿ ತಾರತಮ್ಯ ಇವೆಲ್ಲವೂ ಆತ್ಮಹತ್ಯೆಯ ಇನ್ನಿತರ ಕಾರಣಗಳು. ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ ಎಂಬುದನ್ನು ನಾವು ಮತ್ತೆ ಮತ್ತೆ ನೋಡಿಕೊಳ್ಳ ಬೇಕಾದ ಕಾಲವಿದು.
ಇಷ್ಟು ಅಂಕ ತೆಗೆದರೆ ಮಾತ್ರ ನೀನು ಯಶಸ್ವಿ ಎಂಬ ಭಾವನೆ ಬರುವ ಹಾಗೆ ಸದಾ ಮಾತನಾಡು ವುದು ತಪ್ಪು. ನೀನು ಹತ್ತು ಸಲ ಬಿದ್ದರೂ ಹನ್ನೊಂದನೇ ಸಲ ಎದ್ದು ನಿಲ್ಲು, ಆಗ ಗೆಲುವು ನಿನ್ನದಾಗಬಹುದು ಎಂದು ಹುರಿದುಂಬಿಸುವ, ನಿನ್ನೊಂದಿಗೆ ಸದಾ ನಾವಿರುತ್ತೇವೆ ಎಂದು ಭರವಸೆ ನೀಡುವ, ನಿನ್ನ ಸೋಲು- ಗೆಲುವು ನಮಗೆ ಮುಖ್ಯವಲ್ಲ ಬದಲಾಗಿ ನೀನೇ ಮುಖ್ಯ ಎನ್ನುವ ಪೇರೆಂ ಟಿಂಗ್ ಇಂದಿನ ಅಗತ್ಯ. ಮಕ್ಕಳಿಗೆ ಕೌನ್ಸೆಲಿಂಗ್ ಅಗತ್ಯವಿದೆ, ನಮಗೂ ಇದೆ ಎಂದು ಗುರುತಿಸಿಕೊಳ್ಳು ವುದೂ ಜವಾಬ್ದಾರಿ ಯುತ ಪೇರೆಂಟಿಂಗ್‌ನ ಒಂದು ಭಾಗ. ಶಾಲೆಗಳು, ವಿವಿಗಳು ವಿದ್ಯಾರ್ಥಿಗಳಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸುರಕ್ಷಿತ ಸ್ಥಳ ನೀಡಬೇಕು. ಮಕ್ಕಳಲ್ಲಿ ಖಿನ್ನತೆಯ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸುವ ತರಬೇತಿ ಅಧ್ಯಾಪಕರಿಗೂ ಇರಬೇಕು.