Vishweshwar Bhat Column: ನಡೆಯುವಾಗ ನಮ್ಮ ಶೂಲೇಸ್ ತನ್ನಷ್ಟಕ್ಕೆ ಬಿಚ್ಚಿಕೊಳ್ಳುತ್ತದಲ್ಲ, ಏಕೆ ?
ಎಲ್ಲ ಗಂಟುಗಳು ಒಂದೇ ರೀತಿ ಇರುವುದಿಲ್ಲ. ಶೂಲೇಸ್ ಕಟ್ಟುವಲ್ಲಿ ಎರಡು ಪ್ರಮುಖ ವಿಧಗಳಿವೆ. ಮೊದಲನೆಯದು, ಗಟ್ಟಿ ಗಂಟು. ಇದರಲ್ಲಿ ಮೇಲೆ ಹಾಕುವ ಗಂಟು ಮತ್ತು ಕೆಳಗಿನ ಗಂಟು ವಿರುದ್ಧ ದಿಕ್ಕಿನಲ್ಲಿರುತ್ತವೆ. ಇದು ಸುಲಭವಾಗಿ ಬಿಚ್ಚಿಕೊಳ್ಳುವುದಿಲ್ಲ. ಎರಡನೆಯದು, ದುರ್ಬಲ ಗಂಟು. ಇದರಲ್ಲಿ ಎರಡೂ ಗಂಟುಗಳು ಒಂದೇ ದಿಕ್ಕಿನಲ್ಲಿರುತ್ತವೆ. ಇದು ಓಡುವಾಗ ಅಥವಾ ನಡೆಯುವಾಗ ಅತಿ ಬೇಗನೆ ಸಡಿಲಗೊಳ್ಳುತ್ತದೆ.
-
ಇದೇ ಅಂತರಂಗ ಸುದ್ದಿ
ಸಹಾರಾ ಮರುಭೂಮಿಯ ಸುಡುವ ಮರಳುಗಾಡಿನಲ್ಲಿ ಕೇವಲ ಚಿನ್ನ, ಡ್ರಗ್ಸ್ ಅಥವಾ ಶಸ್ತ್ರಾಸ್ತ್ರ ಗಳು ಮಾತ್ರ ಕಳ್ಳಸಾಗಣೆಯಾಗುವುದಿಲ್ಲ. ಬದಲಿಗೆ ನಾವು ಅಡುಗೆ ಮನೆಯಲ್ಲಿ ಬಳಸುವ ‘ಸ್ಪಾಗೆಟ್ಟಿ’ ಅಥವಾ ಪಾಸ್ತಾದಂಥ ಪದಾರ್ಥಗಳು ಕೂಡ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಗಡಿ ದಾಟುತ್ತವೆ! ಮನುಷ್ಯನ ಅಜಾಗರೂಕತೆ, ಜಾಗತಿಕ ವ್ಯಾಪಾರ ಮತ್ತು ಪ್ರಕೃತಿಯ ವಿಚಿತ್ರ ಹೊಂದಾಣಿಕೆ ಹೇಗೆ ಒಂದು ಸಣ್ಣ ಜೀವಿಯನ್ನು ಜಾಗತಿಕವಾಗಿ ಆಕ್ರಮಣಕಾರಿಯನ್ನಾಗಿ ಮಾಡಿದೆ ಎಂಬುದು ಕುತೂಹಲಕಾರಿ.
ನಿಮಗೂ ಅನಿಸಿರಬಹುದು, ನಾವು ನಡೆಯುತ್ತಿರುವಾಗ ಶೂಲೇಸ್‌ಗಳು ತಾವಾಗಿಯೇ ಬಿಚ್ಚಿಕೊಳ್ಳು ತ್ತವೆ ತಾನೇ? ಏಕೆ? ಇದು ನಮಗೆಲ್ಲರಿಗೂ ಕಾಡುವ ಒಂದು ನಿಗೂಢ ಪ್ರಶ್ನೆ. ನಾವು ಎಷ್ಟು ಗಟ್ಟಿ ಯಾಗಿ ಗಂಟು ಹಾಕಿದರೂ, ಕೆಲವೊಮ್ಮೆ ಕೆಲಸದ ನಡುವೆ ಅಥವಾ ಓಡುತ್ತಿರುವಾಗ ಅವು ಸಡಿಲ ಗೊಂಡು ಕಳಚಿಕೊಳ್ಳುತ್ತವೆ. ಈ ಸಮಸ್ಯೆಯನ್ನು ಶೂ ಧರಿಸಿದವರೆಲ್ಲ ಒಂದಲ್ಲ, ಒಂದು ಸಂದರ್ಭ ದಲ್ಲಿ ಅನುಭವಿಸಿದವರೇ.
ಇದರ ಹಿಂದೆ ರೋಚಕವಾದ ಭೌತವಿಜ್ಞಾನ ಅಡಗಿದೆ ಅಂದರೆ ತುಸು ಸೋಜಿಗವಾಗಬಹುದು. ಈ ಬಗ್ಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಆಳವಾದ ಅಧ್ಯಯನವನ್ನು ಬೇರೆ ನಡೆಸಿದ್ದಾರೆ. ನಾವು ನಡೆಯುವಾಗ ಅಥವಾ ಓಡುವಾಗ ನಮ್ಮ ಪಾದಗಳು ನೆಲಕ್ಕೆ ಅಪ್ಪಳಿಸುತ್ತವೆ. ಈ ಕ್ರಿಯೆಯು ಶೂಲೇಸ್‌ನ ಗಂಟಿನ ಮೇಲೆ ಎರಡು ರೀತಿಯ ಬಲಗಳನ್ನು ಪ್ರಯೋಗಿಸುತ್ತದೆ.
ಮೊದಲನೆಯದು, ಇಂಪ್ಯಾಕ್ಟ್ ಫೋರ್ಸ್. ನಮ್ಮ ಪಾದ ನೆಲಕ್ಕೆ ತಾಕಿದಾಗ ಉಂಟಾಗುವ ಆಘಾತವು ಗಂಟನ್ನು ಸಡಿಲಗೊಳಿಸಲು ಪ್ರಾರಂಭಿಸುತ್ತದೆ. ಸಂಶೋಧನೆಯ ಪ್ರಕಾರ, ಒಬ್ಬ ಮನುಷ್ಯ ಓಡು ವಾಗ ಅವನ ಪಾದ ನೆಲಕ್ಕೆ ಅಪ್ಪಳಿಸುವ ಬಲವು ಗುರುತ್ವಾಕರ್ಷಣೆಯ ಏಳು ಪಟ್ಟು ಇರುತ್ತದೆ (7g). ಈ ಬಲವು ಗಂಟಿನ ಎಳೆಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಎಳೆಯುತ್ತದೆ.
ಪಾದವು ಮುಂದಕ್ಕೆ ಚಲಿಸುವಾಗ ಶೂಲೇಸ್‌ನ ತುದಿಗಳು ತಮ್ಮ ಜಡತ್ವದ ಕಾರಣದಿಂದ ಹಿಂದಕ್ಕೆ ಅಥವಾ ಮುಂದಕ್ಕೆ ಸರಿಯುತ್ತವೆ. ಇದು ಗಂಟಿನ ಒಳಗಿರುವ ಎಳೆಗಳನ್ನು ಹೊರಕ್ಕೆ ಎಳೆಯುವಂತೆ ಮಾಡುತ್ತದೆ.
ಎರಡನೆಯದು, ಅದೃಶ್ಯ ಕೈಗಳ ಸನ್ನೆ (The Invisible Hands). ಶೂಲೇಸ್ ಬಿಚ್ಚಿಕೊಳ್ಳುವ ಪ್ರಕ್ರಿಯೆ ಯನ್ನು ಸಂಶೋಧಕರು ‘ಅದೃಶ್ಯ ಕೈಗಳು ಗಂಟನ್ನು ಎಳೆಯುವುದು’ ಎಂದು ಬಣ್ಣಿಸಿದ್ದಾರೆ. ಇಲ್ಲಿ ಎರಡು ಹಂತದ ಪ್ರಕ್ರಿಯೆ ನಡೆಯುತ್ತವೆ. ಮೊದಲನೆಯದಾಗಿ, ಪಾದ ನೆಲಕ್ಕೆ ಅಪ್ಪಳಿಸಿದಾಗ ಗಂಟು ಸಡಿಲಗೊಳ್ಳುತ್ತದೆ.
ಇದನ್ನೂ ಓದಿ: Vishweshwar Bhat Column: ಫ್ರಾಂಜ್ ಕಾಫ್ಕಾ ಮತ್ತು ಒಂದು ಗೊಂಬೆಯ ಕಥೆ
ಎರಡನೆಯದಾಗಿ, ನಾವು ಕಾಲು ಮುಂದಕ್ಕೆ ಇಟ್ಟಾಗ ಶೂಲೇಸ್‌ನ ತುದಿಗಳು ಜೋಲಾಡುತ್ತವೆ. ಈ ಜೋಲಾಟವು ಸಡಿಲಗೊಂಡ ಗಂಟಿನ ಎಳೆಗಳನ್ನು ಹೊರಕ್ಕೆ ಎಳೆಯುತ್ತದೆ. ಒಮ್ಮೆ ಗಂಟು ಸ್ವಲ್ಪ ಸಡಿಲಗೊಂಡರೆ ಸಾಕು, ನಂತರದ ಕೆಲವು ಹೆಜ್ಜೆಗಳಲ್ಲಿ ಸಂಪೂರ್ಣ ಕಳಚಿಕೊಳ್ಳುತ್ತದೆ. ಇದು ಒಂದೇ ಸಮನೆ ನಡೆಯುವ ಪ್ರಕ್ರಿಯೆಯಲ್ಲ; ಬದಲಿಗೆ ಗಂಟು ಬಹಳ ಹೊತ್ತು ಗಟ್ಟಿಯಾಗಿದ್ದು, ಒಮ್ಮೆ ಸಡಿಲಗೊಳ್ಳಲು ಶುರುವಾದ ತಕ್ಷಣ ಸೆಕೆಂಡುಗಳ ಅಂತರದಲ್ಲಿ ಬಿಚ್ಚಿಕೊಳ್ಳುತ್ತದೆ.
ಎಲ್ಲ ಗಂಟುಗಳು ಒಂದೇ ರೀತಿ ಇರುವುದಿಲ್ಲ. ಶೂಲೇಸ್ ಕಟ್ಟುವಲ್ಲಿ ಎರಡು ಪ್ರಮುಖ ವಿಧಗಳಿವೆ. ಮೊದಲನೆಯದು, ಗಟ್ಟಿ ಗಂಟು. ಇದರಲ್ಲಿ ಮೇಲೆ ಹಾಕುವ ಗಂಟು ಮತ್ತು ಕೆಳಗಿನ ಗಂಟು ವಿರುದ್ಧ ದಿಕ್ಕಿನಲ್ಲಿರುತ್ತವೆ. ಇದು ಸುಲಭವಾಗಿ ಬಿಚ್ಚಿಕೊಳ್ಳುವುದಿಲ್ಲ. ಎರಡನೆಯದು, ದುರ್ಬಲ ಗಂಟು. ಇದರಲ್ಲಿ ಎರಡೂ ಗಂಟುಗಳು ಒಂದೇ ದಿಕ್ಕಿನಲ್ಲಿರುತ್ತವೆ. ಇದು ಓಡುವಾಗ ಅಥವಾ ನಡೆಯುವಾಗ ಅತಿ ಬೇಗನೆ ಸಡಿಲಗೊಳ್ಳುತ್ತದೆ.
ಹೆಚ್ಚಿನವರು ಅಜಾಗರೂಕತೆಯಿಂದ ‘ದುರ್ಬಲ ಗಂಟು’ ಹಾಕುವುದರಿಂದಲೇ ಈ ಸಮಸ್ಯೆ ಎದುರಾ ಗುತ್ತದೆ. ಶೂಲೇಸ್ ಬಿಚ್ಚಿಕೊಳ್ಳುವುದು ‘ಒಂದು ರೀತಿಯ ಯಾಂತ್ರಿಕ ವೈಫಲ್ಯ’. ಗಂಟಿನ ಒಳಗಿನ ಘರ್ಷಣೆ (Friction) ಮತ್ತು ಹೊರಗಿನಿಂದ ಪ್ರಯೋಗವಾಗುವ ಬಲಗಳ ನಡುವಿನ ಸಮತೋಲನ ತಪ್ಪಿದಾಗ ಈ ವೈ-ಲ್ಯ ಸಂಭವಿಸುತ್ತದೆ. ಪಾದದ ಚಲನೆಯು ಘರ್ಷಣೆಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ ಮತ್ತು ಒಂದು ಹಂತದಲ್ಲಿ ಘರ್ಷಣೆಗಿಂತ ಎಳೆಯುವ ಬಲ ಹೆಚ್ಚಾದಾಗ ಗಂಟು ಬಿಚ್ಚಿಕೊಳ್ಳುತ್ತದೆ.
ಇದನ್ನು ತಡೆಯುವುದು ಹೇಗೆ?
ಈ ಭೌತವಿಜ್ಞಾನದ ಸಮಸ್ಯೆಗೆ ಪರಿಹಾರ ಸರಳವಾಗಿದೆ. ಗಟ್ಟಿ ಗಂಟು ಹಾಕಬೇಕು. ನೀವು ಗಂಟು ಹಾಕುವ ವಿಧಾನವನ್ನು ಗಮನಿಸಿ, ಅದು ಪಾದರಕ್ಷೆಯ ಉದ್ದಕ್ಕೆ ಲಂಬವಾಗಿರುವಂತೆ ನೋಡಿ ಕೊಳ್ಳಿ. ಮೆಟೀರಿಯಲ್‌ನ್ನು ಗಮನಿಸಬೇಕು. ನೈಲಾನ್‌ನಂಥ ನುಣುಪಾದ ಲೇಸ್‌ಗಳಿಗಿಂತ ಹತ್ತಿಯ ಲೇಸ್‌ಗಳು ಹೆಚ್ಚು ಘರ್ಷಣೆಯನ್ನು ಹೊಂದಿರುತ್ತವೆ, ಆದ್ದರಿಂದ ಅವು ಬೇಗ ಬಿಚ್ಚಿಕೊಳ್ಳುವುದಿಲ್ಲ.
ಕ್ರೀಡಾಪಟುಗಳು ಸಾಮಾನ್ಯವಾಗಿ ಸುರಕ್ಷತೆಗಾಗಿ ಎರಡು ಬಾರಿ ಗಂಟು ಹಾಕುತ್ತಾರೆ, ಇದು ಬಲ ಗಳನ್ನು ಸಮರ್ಥವಾಗಿ ಎದುರಿಸುತ್ತದೆ. ಶೂಲೇಸ್ ಬಿಚ್ಚಿಕೊಳ್ಳುವುದು ಕೇವಲ ಒಂದು ಸಣ್ಣ ಘಟನೆಯಂತೆ ಕಂಡರೂ, ಅದು ಸಂಕೀರ್ಣವಾದ ಡೈನಾಮಿಕ್ಸ್ ಮತ್ತು ಭೌತವಿಜ್ಞಾನದ ತತ್ವ ಗಳನ್ನು ಒಳಗೊಂಡಿದೆ.
ನಾವು ನಡೆಯುವ ಪ್ರತಿಯೊಂದು ಹೆಜ್ಜೆಯೂ ನಮ್ಮ ಪಾದರಕ್ಷೆಯ ಗಂಟಿನ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿರುತ್ತದೆ. ವಿಜ್ಞಾನವು ಈ ಸಣ್ಣ ವಿಷಯವನ್ನು ಅರ್ಥಮಾಡಿಕೊಳ್ಳುವ ಮೂಲಕ ಬ್ರಹ್ಮಾಂಡದ ದೊಡ್ಡ ಭೌತಿಕ ಸಂರಚನೆಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
ಸ್ಪಾಗೆಟ್ಟಿ ಕಳ್ಳಸಾಗಣೆ
ಸಹಾರಾ ಮರುಭೂಮಿಯ ಸುಡುವ ಮರಳುಗಾಡಿನಲ್ಲಿ ಕೇವಲ ಚಿನ್ನ, ಡ್ರಗ್ಸ್ ಅಥವಾ ಶಸ್ತ್ರಾಸ್ತ್ರ ಗಳು ಮಾತ್ರ ಕಳ್ಳಸಾಗಣೆಯಾಗುವುದಿಲ್ಲ. ಬದಲಿಗೆ ನಾವು ಅಡುಗೆ ಮನೆಯಲ್ಲಿ ಬಳಸುವ ‘ಸ್ಪಾಗೆಟ್ಟಿ’ ಅಥವಾ ಪಾಸ್ತಾದಂಥ ಪದಾರ್ಥಗಳು ಕೂಡ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಗಡಿ ದಾಟುತ್ತವೆ!
ಕೇಳಲು ಇದು ವಿಚಿತ್ರವಾಗಿ ಕಂಡರೂ, ಆಫ್ರಿಕಾದ ಆರ್ಥಿಕತೆ ಮತ್ತು ರಾಜಕೀಯದ ದೃಷ್ಟಿಯಿಂದ ಇದು ಅತ್ಯಂತ ಗಂಭೀರವಾದ ವಿಷಯ. ಸಹಾರಾ ಮರುಭೂಮಿಯ ಉದ್ದಕ್ಕೂ ನಡೆಯುವ ಈ ‘ಸ್ಪಾಗೆಟ್ಟಿ ಕಳ್ಳಸಾಗಣೆ’ಯ ಹಿಂದೆ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿವೆ.
ಈ ಕಳ್ಳಸಾಗಣೆಗೆ ಮೂಲ ಪ್ರೇರಣೆ ದೇಶಗಳ ನಡುವಿನ ಬೆಲೆ ವ್ಯತ್ಯಾಸ. ಉತ್ತರ ಆಫ್ರಿಕಾದ ದೇಶ ಗಳಾದ ಅಲ್ಜೀರಿಯಾ ಮತ್ತು ಲಿಬಿಯಾಗಳಲ್ಲಿ ಗೋಧಿ ಮತ್ತು ಪಾಸ್ತಾದಂಥ ಆಹಾರ ಪದಾರ್ಥ ಗಳ ಮೇಲೆ ಸರಕಾರವು ಭಾರಿ ಪ್ರಮಾಣದ ಸಬ್ಸಿಡಿ ನೀಡುತ್ತದೆ. ಈ ದೇಶಗಳಲ್ಲಿ ಆಹಾರವು ಅತ್ಯಂತ ಅಗ್ಗದ ದರದಲ್ಲಿ ಸಿಗುತ್ತದೆ. ಆದರೆ, ಅವುಗಳ ಪಕ್ಕದ ದೇಶಗಳಾದ ಮಾಲಿ, ನೈರ್ಜ ಅಥವಾ ಚಾಡ್ ಗಳಲ್ಲಿ ಇಂಥ ಸಬ್ಸಿಡಿಗಳಿಲ್ಲ. ಅಲ್ಲಿ ಆಹಾರದ ಬೆಲೆಗಳು ತುಂಬಾ ಹೆಚ್ಚು. ಈ ಬೆಲೆಗಳ ವ್ಯತ್ಯಾಸದ ಲಾಭ ಪಡೆಯಲು ಕಳ್ಳಸಾಗಣೆದಾರರು ಅಲ್ಜೀರಿಯಾದಿಂದ ಅಗ್ಗವಾಗಿ ಸ್ಪಾಗೆಟ್ಟಿ ಖರೀದಿಸಿ, ಸಹಾರಾ ಮರುಭೂಮಿಯ ಮೂಲಕ ನೆರೆ ರಾಷ್ಟ್ರಗಳಿಗೆ ಸಾಗಿಸಿ ಅಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡು ತ್ತಾರೆ.
ಸಹಾರಾ ಮರುಭೂಮಿಯ ದಕ್ಷಿಣ ಭಾಗದಲ್ಲಿರುವ ಅನೇಕ ಪ್ರದೇಶಗಳು ತಮ್ಮದೇ ದೇಶದ ಮುಖ್ಯ ಭೂಭಾಗದಿಂದ ಕಡಿತಗೊಂಡಿವೆ. ಉದಾಹರಣೆಗೆ, ಉತ್ತರ ಮಾಲಿಯ ಕೆಲವು ನಗರಗಳಿಗೆ ಅವುಗಳ ರಾಜಧಾನಿ ಬಮಾಕೋದಿಂದ ಆಹಾರ ತರಿಸುವುದಕ್ಕಿಂತ ಪಕ್ಕದ ದೇಶವಾದ ಅಲ್ಜೀರಿಯಾದಿಂದ ತರಿಸುವುದು ಸುಲಭ ಮತ್ತು ಅಗ್ಗ. ಇಲ್ಲಿ ಯಾವುದೇ ಅಧಿಕೃತ ರಸ್ತೆಗಳಿಲ್ಲದಿದ್ದರೂ, ಶತಮಾನ ಗಳಿಂದ ಇರುವ ಮರುಭೂಮಿಯ ಹಾದಿಗಳಲ್ಲಿ ಟ್ರಕ್ ಗಳು ಮತ್ತು ಒಂಟೆಗಳ ಮೂಲಕ ಆಹಾರ ವನ್ನು ಸಾಗಿಸಲಾಗುತ್ತದೆ. ಇದನ್ನು ಅಧಿಕೃತವಾಗಿ ‘ವ್ಯಾಪಾರ’ ಎಂದು ಕರೆಯುವ ಬದಲು ‘ಕಳ್ಳಸಾಗಣೆ’ ಎಂದು ಕರೆಯಲಾಗುತ್ತದೆ. ಏಕೆಂದರೆ ಇದಕ್ಕೆ ಯಾವುದೇ ಸುಂಕ ಪಾವತಿಸುವುದಿಲ್ಲ.
ಸಹಾರಾ ಮರುಭೂಮಿಯ ಸುತ್ತಮುತ್ತ ಬದುಕುವ ಜನರಿಗೆ ಉದ್ಯೋಗದ ಅವಕಾಶಗಳು ಕಡಿಮೆ. ಇಂಥ ಪರಿಸ್ಥಿತಿಯಲ್ಲಿ ಸ್ಪಾಗೆಟ್ಟಿ, ಸಕ್ಕರೆ ಅಥವಾ ಹಿಟ್ಟನ್ನು ಸಾಗಿಸುವುದು ಅಲ್ಲಿನ ಯುವಕರಿಗೆ ಒಂದು ಪ್ರಮುಖ ಆದಾಯದ ಮೂಲವಾಗಿದೆ. ಸುಡುವ ಬಿಸಿಲು, ಮರಳಿನ ಬಿರುಗಾಳಿ ಮತ್ತು ದರೋಡೆಕೋರರ ನಡುವೆ ನೂರಾರು ಕಿಲೋಮೀಟರ್ ದೂರ ಟ್ರಕ್‌ಗಳಲ್ಲಿ ಈ ಪದಾರ್ಥಗಳನ್ನು ಸಾಗಿಸುತ್ತಾರೆ. ದೊಡ್ಡ ಪ್ರಮಾಣದ ಡ್ರಗ್ಸ್ ಕಳ್ಳಸಾಗಣೆಗಿಂತಲೂ ಈ ಆಹಾರದ ಕಳ್ಳಸಾಗಣೆಯು ಸ್ಥಳೀಯ ಬಡ ಜನರಿಗೆ ಉಪಜೀವನ ನೀಡುತ್ತದೆ.
ಲಿಬಿಯಾದಂಥ ದೇಶಗಳಲ್ಲಿ ನಡೆಯುವ ಅಂತರ್ಯುದ್ಧದ ಸಮಯದಲ್ಲಿ ಸರಕಾರಿ ನಿಯಂತ್ರಣ ತಪ್ಪಿದಾಗ, ಗೋದಾಮುಗಳಿಂದ ಲೂಟಿ ಮಾಡಿದ ಅಥವಾ ಅಕ್ರಮವಾಗಿ ಸಂಗ್ರಹಿಸಲಾದ ಆಹಾರ ಪದಾರ್ಥಗಳು ಕಳ್ಳಸಾಗಣೆದಾರರ ಕೈ ಸೇರುತ್ತವೆ. ಮಾಲಿಯಂಥ ದೇಶಗಳಲ್ಲಿ ಉಗ್ರಗಾಮಿ ಗುಂಪು ಗಳು ಮತ್ತು ಸಶಸ್ತ್ರ ಪಡೆಗಳು ಈ ಕಳ್ಳಸಾಗಣೆ ಮಾರ್ಗಗಳ ಮೇಲೆ ತೆರಿಗೆ ವಸೂಲಿ ಮಾಡುವ ಮೂಲಕ ತಮ್ಮ ಚಟುವಟಿಕೆಗಳಿಗೆ ಹಣವನ್ನು ಕ್ರೋಢೀಕರಿಸುತ್ತವೆ.
ಹೀಗಾಗಿ, ಒಂದು ಪ್ಯಾಕೆಟ್ ಸ್ಪಾಗೆಟ್ಟಿ ಕೇವಲ ಆಹಾರವಾಗಿ ಉಳಿಯದೆ, ಆ ಪ್ರದೇಶದ ರಾಜಕೀಯ ಮತ್ತು ಭದ್ರತೆಯ ಭಾಗವಾಗಿ ಬದಲಾಗುತ್ತದೆ. ಈ ಅಕ್ರಮ ವ್ಯಾಪಾರದಿಂದ ಅಲ್ಜೀರಿಯಾದಂಥ ದೇಶಗಳ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುತ್ತದೆ. ತಮ್ಮ ದೇಶದ ಬಡ ಜನರಿಗಾಗಿ ಸರಕಾರ ನೀಡುವ ಸಬ್ಸಿಡಿ ಹಣದ ಪ್ರಯೋಜನವು ಬೇರೆ ದೇಶದ ಜನರಿಗೆ ಮತ್ತು ಕಳ್ಳಸಾಗಣೆದಾರರಿಗೆ ಸಿಗುತ್ತಿದೆ ಎಂಬುದು ದೊಡ್ಡ ಆತಂಕ.
ಇದನ್ನು ತಡೆಯಲು ಗಡಿಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಇಡಲಾಗಿದ್ದರೂ, ವಿಶಾಲವಾದ ಮರು ಭೂಮಿಯನ್ನು ಸಂಪೂರ್ಣವಾಗಿ ಬಂದ್ ಮಾಡುವುದು ಅಸಾಧ್ಯ. ಸಹಾರಾ ಮರುಭೂಮಿ ಯ ಮೂಲಕ ಸ್ಪಾಗೆಟ್ಟಿ ಕಳ್ಳಸಾಗಣೆಯಾಗುವುದು ಜಾಗತಿಕ ಹಸಿವು ಮತ್ತು ಆರ್ಥಿಕ ಅಸಮಾನತೆಯ ಪ್ರತಿಬಿಂಬ. ಒಂದು ದೇಶದಲ್ಲಿ ಅಗ್ಗವಾಗಿ ಸಿಗುವ ಆಹಾರ ಇನ್ನೊಂದು ದೇಶದಲ್ಲಿ ಚಿನ್ನದಂತೆ ಬೆಲೆಬಾಳುವುದಾದರೆ, ಅಕ್ರಮ ವ್ಯವಹಾರಗಳು ನಡೆಯುವುದು ಸಹಜ.
ಇದು ಕೇವಲ ಒಂದು ಅಪರಾಧವಲ್ಲ, ಬದಲಿಗೆ ಸಾವಿರಾರು ಕುಟುಂಬಗಳ ಹೊಟ್ಟೆ ತುಂಬಿಸುವ ಮತ್ತು ಮರುಭೂಮಿಯ ಕಠಿಣ ಪರಿಸ್ಥಿತಿಯಲ್ಲಿ ಬದುಕುಳಿಯಲು ನಡೆಯುವ ಹೋರಾಟವೂ ಹೌದು. ವಿಶ್ವದ ಅತ್ಯಂತ ದೊಡ್ಡ ಮರುಭೂಮಿಯಲ್ಲಿ ಅಲೆಯುವ ಟ್ರಕ್ʼಗಳ ಒಳಗೆ ಕೇವಲ ಇಟಾಲಿಯನ್ ಶೈಲಿಯ ಸ್ಪಾಗೆಟ್ಟಿ ಮಾತ್ರ ಇರುವುದಿಲ್ಲ, ಬದಲಿಗೆ ಆಫ್ರಿಕಾದ ಸಂಕೀರ್ಣ ಆರ್ಥಿಕತೆ ಯ ಕಥೆಯೂ ಇರುತ್ತದೆ.
ಇರುವೆಗಳ ‘ವಿಶ್ವ ಸಮರ’ ಇರುವೆಗಳ ಪ್ರಪಂಚವು ನಮಗೆ ಮೇಲ್ನೋಟಕ್ಕೆ ಶಿಸ್ತಿನ ಮತ್ತು ಪರಿಶ್ರಮ ದ ಸಂಕೇತವಾಗಿ ಕಂಡರೂ, ಅದರ ಆಳದಲ್ಲಿ ಒಂದು ಮಹಾನ್ ‘ವಿಶ್ವಯುದ್ಧ’ ನಡೆಯುತ್ತಿದೆ ಅಂದರೆ ಆಶ್ಚರ್ಯವಾಗಬಹುದು. ಈ ಯುದ್ಧವು ಯಾವುದೇ ದೇಶದ ಗಡಿಗಳಿಗೆ ಸೀಮಿತವಾಗಿಲ್ಲ. ಇದು ಖಂಡಾಂತರಗಳನ್ನೇ ವ್ಯಾಪಿಸಿರುವ ಬೃಹತ್ ಸಂಘರ್ಷ. ಈ ರೋಚಕ ಕಥೆಯ ಕೇಂದ್ರಬಿಂದು ‘ಅರ್ಜೆಂಟೈನ್ ಇರುವೆ’ಗಳು.
ಮನುಷ್ಯನ ಅಜಾಗರೂಕತೆ, ಜಾಗತಿಕ ವ್ಯಾಪಾರ ಮತ್ತು ಪ್ರಕೃತಿಯ ವಿಚಿತ್ರ ಹೊಂದಾಣಿಕೆ ಹೇಗೆ ಒಂದು ಸಣ್ಣ ಜೀವಿಯನ್ನು ಜಾಗತಿಕವಾಗಿ ಆಕ್ರಮಣಕಾರಿಯನ್ನಾಗಿ ಮಾಡಿದೆ ಎಂಬುದು ಕುತೂಹಲಕಾರಿ. ಹೆಸರೇ ಸೂಚಿಸುವಂತೆ, ಈ ಇರುವೆಗಳ ಮೂಲ ದಕ್ಷಿಣ ಅಮೆರಿಕದ ಅರ್ಜೆಂಟೀನಾ ಮತ್ತು ಬ್ರೆಜಿಲ್ ಪ್ರದೇಶಗಳು. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಜಾಗತಿಕ ವ್ಯಾಪಾರವು ಚುರುಕುಗೊಂಡಾಗ, ಇವು ಹಡಗುಗಳಲ್ಲಿದ್ದ ಸಕ್ಕರೆ ಅಥವಾ ಕಾಫಿ ಮೂಟೆಗಳ ಮೂಲಕ ಅಚಾನಕ್ಕಾಗಿ ಜಗತ್ತಿನ ವಿವಿಧ ಭಾಗಗಳಿಗೆ ಪ್ರಯಾಣ ಬೆಳೆಸಿದವು.
ಇಂದು ಇವು ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ವಿಶ್ವದ ಎಲ್ಲ ಖಂಡಗಳಲ್ಲೂ ಭದ್ರವಾಗಿ ನೆಲೆಗೊಂಡಿವೆ. ಸಾಮಾನ್ಯವಾಗಿ ಇರುವೆಗಳು ತಮ್ಮದೇ ಕಾಲೋನಿಯ ಸದಸ್ಯರನ್ನು ಮಾತ್ರ ಗುರುತಿಸುತ್ತವೆ ಮತ್ತು ಬೇರೆ ಕಾಲೋನಿಯ ಇರುವೆಗಳು ಕಂಡರೆ ಯುದ್ಧ ಮಾಡುತ್ತವೆ. ಆದರೆ, ಅರ್ಜೆಂಟೈನ್ ಇರುವೆಗಳ ವಿಷಯದಲ್ಲಿ ಪರಿಸ್ಥಿತಿ ತದ್ವಿರುದ್ಧ.
ಕ್ಯಾಲಿಫೊರ್ನಿಯಾದಲ್ಲಿರುವ ಇರುವೆಗಳು, ಯುರೋಪ್‌ನ ಮೆಡಿಟರೇನಿಯನ್ ಕರಾವಳಿಯಲ್ಲಿರುವ ಇರುವೆಗಳು ಮತ್ತು ಜಪಾನ್‌ನಲ್ಲಿರುವ ಇರುವೆಗಳು ಪರಸ್ಪರ ಭೇಟಿಯಾದಾಗ ಅವು ಕಾಳಗ ಮಾಡು ವುದಿಲ್ಲ!
ಬದಲಿಗೆ ಅವು ಹಳೆಯ ಸ್ನೇಹಿತರಂತೆ ವರ್ತಿಸುತ್ತವೆ. ಯುರೋಪ್‌ನಲ್ಲಿ ಇವು ನಿರ್ಮಿಸಿರುವ ಕಾಲೋನಿಯು ಸುಮಾರು 6000 ಕಿಲೋ ಮೀಟರ್‌ಗಳಷ್ಟು ಉದ್ದವಾಗಿದೆ (ಇಟಲಿಯಿಂದ ಸ್ಪೇನ್ʼ ವರೆಗೆ). ಇದು ಜಗತ್ತಿನ ಅತಿದೊಡ್ಡ ಸಹಕಾರಿ ಸಮಾಜ. ಈ ಇರುವೆಗಳು ತಳಿಶಾಸ್ತ್ರದಂತೆ ಎಷ್ಟು ಹತ್ತಿರವಾಗಿವೆ ಎಂದರೆ, ಇಡೀ ಜಗತ್ತಿನ ಈ ಇರುವೆಗಳೆಲ್ಲವೂ ಒಂದು ಬೃಹತ್ ಸಾಮ್ರಾಜ್ಯದ ಭಾಗ ವಾಗಿವೆ. ಈ ಇರುವೆಗಳು ಪರಸ್ಪರ ಸಹಕರಿಸುವುದೇ ಇತರ ಸ್ಥಳೀಯ ಇರುವೆಗಳಿಗೆ ಶಾಪ ವಾಗಿದೆ. ಈ ಅರ್ಜೆಂಟೈನ್ ಇರುವೆಗಳು ‘ಸಂಖ್ಯಾ ಬಲ’ದ ಮೂಲಕ ಯುದ್ಧ ಮಾಡುತ್ತವೆ.
ಇವು ಯಾವುದಾದರೂ ಹೊಸ ಪ್ರದೇಶಕ್ಕೆ ಕಾಲಿಟ್ಟರೆ, ಅಲ್ಲಿನ ಸ್ಥಳೀಯ ಇರುವೆ ತಳಿಗಳನ್ನು ಗುಂಪು ದಾಳಿಯ ಮೂಲಕ ಕೊಲ್ಲುತ್ತವೆ. ಇವುಗಳ ನಡುವೆ ನಡೆಯುವ ಈ ಸಂಘರ್ಷವನ್ನು ವಿಜ್ಞಾನಿಗಳು ’ The Global Ant War’ ಎಂದು ಕರೆಯುತ್ತಾರೆ. ಸ್ಥಳೀಯ ಇರುವೆಗಳು ಪರಸ್ಪರ ಕಿತ್ತಾಡುತ್ತಾ ಶಕ್ತಿ ಕಳೆದುಕೊಳ್ಳುತ್ತವೆ. ಆದರೆ, ಅರ್ಜೆಂಟೈನ್ ಇರುವೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಒಂದಾಗಿ ದಾಳಿ ಮಾಡುವುದರಿಂದ ಇವುಗಳನ್ನು ಸೋಲಿಸುವುದು ಅಸಾಧ್ಯವಾಗಿದೆ.
ಈ ಇರುವೆಗಳ ಹಾವಳಿ ಕೇವಲ ಕೀಟಗಳ ಪ್ರಪಂಚಕ್ಕೆ ಸೀಮಿತವಾಗಿಲ್ಲ, ಇದು ಇಡೀ ಪರಿಸರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಈ ಇರುವೆಗಳು ಗಿಡಗಳಿಗೆ ಅಂಟುವ ‘ಏಫಿಕ್ಸ್’ ಎಂಬ ಸಣ್ಣ ಕೀಟಗಳನ್ನು ರಕ್ಷಿಸುತ್ತವೆ, ಏಕೆಂದರೆ ಆ ಕೀಟಗಳು ಬಿಡುವ ಸಿಹಿಯಾದ ದ್ರವ ಇವುಗಳಿಗೆ ಆಹಾರ. ಇದರಿಂದ ರೈತರ ಬೆಳೆಗಳಿಗೆ ಕೀಟಬಾಧೆ ಹೆಚ್ಚಾಗುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಹಲ್ಲಿಗಳು ಈ ಇರುವೆಗಳ ದಾಳಿಯಿಂದಾಗಿ ಆಹಾರವಿಲ್ಲದೇ ಸಾಯುತ್ತಿವೆ ಅಥವಾ ಮರಿ ಹಾಕಲು ಸಾಧ್ಯ ವಾಗುತ್ತಿಲ್ಲ.
ಅನೇಕ ಸಸ್ಯಗಳ ಬೀಜಗಳನ್ನು ಸ್ಥಳೀಯ ಇರುವೆಗಳು ಹರಡುತ್ತವೆ. ಆದರೆ ಅರ್ಜೆಂಟೈನ್ ಇರುವೆ ಗಳು ಆ ಬೀಜಗಳನ್ನು ತಿಂದು ಹಾಕುವುದರಿಂದ ಕಾಡುಗಳ ಪುನರ್ ಉತ್ಪತ್ತಿಗೆ ಅಡ್ಡಿಯಾಗುತ್ತಿವೆ. ಈ ಹಸಿರು ಆಕ್ರಮಣಕಾರರನ್ನು ತಡೆಯುವುದು ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿದೆ.
ಇವುಗಳ ಕಾಲೋನಿಗಳು ಎಷ್ಟು ವಿಶಾಲವಾಗಿವೆ ಎಂದರೆ ವಿಷ ಹಾಕುವುದು ಅಥವಾ ಬಲೆ ಬೀಸು ವುದು ಕೇವಲ ತಾತ್ಕಾಲಿಕ ಪರಿಹಾರವಷ್ಟೇ. ಪ್ರಸ್ತುತ ವಿಜ್ಞಾನಿಗಳು ‘ಜೈವಿಕ ನಿಯಂತ್ರಣ’ ಅಥವಾ ತಳೀಯ ಮಾರ್ಪಾಡುಗಳ ಮೂಲಕ ಇವುಗಳ ಸಂತಾನೋತ್ಪತ್ತಿಯನ್ನು ತಡೆಯಲು ಸಂಶೋಧನೆ ನಡೆಸುತ್ತಿದ್ದಾರೆ.
ಅರ್ಜೆಂಟೈನ್ ಇರುವೆಗಳ ಈ ಕಥೆಯು ಜಾಗತೀಕರಣದ ಇನ್ನೊಂದು ಕರಾಳ ಮುಖವನ್ನು ತೋರಿಸುತ್ತದೆ. ಮನುಷ್ಯ ತನ್ನ ಲಾಭಕ್ಕಾಗಿ ಸರಕುಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವಾಗ, ನಿಸರ್ಗದ ನಿಯಮಗಳನ್ನು ಮೀರಿ ಕೆಲವು ಜೀವಿಗಳನ್ನು ‘ವಿಶ್ವ ವಿಜೇತ’ರನ್ನಾಗಿ ಮಾಡುತ್ತಿದ್ದಾನೆ. ಈ ಸಣ್ಣ ಇರುವೆಗಳ ವಿಶ್ವಯುದ್ಧವು ನಮಗೆ ನೀಡುವ ಎಚ್ಚರಿಕೆ ಏನೆಂದರೆ - ನಾವು ಪ್ರಕೃತಿಯಲ್ಲಿ ಮಾಡುವ ಸಣ್ಣ ಬದಲಾವಣೆಯೂ ಕೂಡ ಜಾಗತಿಕ ಮಟ್ಟದ ಅನಾಹುತಕ್ಕೆ ಅಥವಾ ಬದಲಾವಣೆಗೆ ಕಾರಣವಾಗಬಲ್ಲದು.
ವಿಶ್ವದ ಅತಿ ಎತ್ತರದ ಕಸ ರಾಶಿ
ಮೌಂಟ್ ಎವರೆ, ಜಗತ್ತಿನ ಅತ್ಯುನ್ನತ ಶಿಖರ ಮತ್ತು ಸಾಹಸಿಗಳ ಪಾಲಿನ ಸ್ವರ್ಗ. ಆದರೆ ಇಂದು ಇದು ಕೇವಲ ಹಿಮದ ಶಿಖರವಾಗಿ ಉಳಿದಿಲ್ಲ. ಇದು ‘ಜಗತ್ತಿನ ಅತಿ ಎತ್ತರದ ಕಸದ ರಾಶಿ’ (Highest Garbage Dump) ಎಂಬ ಕುಖ್ಯಾತಿಗೂ ಒಳಗಾಗಿದೆ. ಎವರೆಸ್ಟ್ ಆರೋಹಣವು ಇಂದು ಒಂದು ಬೃಹತ್ ವಾಣಿಜ್ಯ ಉದ್ಯಮವಾಗಿ ಬೆಳೆದಿರುವ ಬೆನ್ನ, ಅಲ್ಲಿನ ಪರಿಸರ ಮಾಲಿನ್ಯ ಮತ್ತು ಕಸದ ಆರ್ಥಿಕತೆ ಒಂದು ಕರಾಳ ಅಧ್ಯಾಯವಾಗಿ ಮಾರ್ಪಟ್ಟಿದೆ.
ಎವರೆಸ್ಟ್ ಶಿಖರದ ಹಾದಿಯಲ್ಲಿ, ವಿಶೇಷವಾಗಿ ನಾಲ್ಕನೇ ಕ್ಯಾಂಪ್ ಸುತ್ತಮುತ್ತ ನೂರಾರು ಟನ್ ಗಳಷ್ಟು ಕಸ ಶೇಖರಣೆಯಾಗಿದೆ. ಇವುಗಳ ಪೈಕಿ ಖಾಲಿಯಾದ ಆಕ್ಸಿಜನ್ ಸಿಲಿಂಡರ್‌ಗಳು, ಹರಿದ ಟೆಂಟ್‌ಗಳು, ಪ್ಲಾಸ್ಟಿಕ್ ಬಾಟಲಿಗಳು, ಅಲ್ಯೂಮಿನಿಯಂ ಏಣಿಗಳು, ಪಾದರಕ್ಷೆಗಳು ಮತ್ತು ಆಹಾರದ ಪ್ಯಾಕೆಟ್‌ಗಳು ಮುಖ್ಯವಾದವು.
ಅತ್ಯಂತ ಆಘಾತಕಾರಿ ವಿಷಯವೆಂದರೆ ಮೈನಸ್ ಡಿಗ್ರಿ ತಾಪಮಾನದಲ್ಲಿ ಕೊಳೆಯದ ಮಾನವ ತ್ಯಾಜ್ಯ (ಮಲ-ಮೂತ್ರ). ಇದು ಹಿಮದೊಂದಿಗೆ ಬೆರೆತು ಸ್ಥಳೀಯ ನದಿಗಳ ನೀರನ್ನು ಕಲುಷಿತ ಗೊಳಿಸುತ್ತಿದೆ.
ಕಸದ ಹಾವಳಿಯನ್ನು ತಡೆಯಲು ನೇಪಾಳ ಸರಕಾರವು ಒಂದು ವಿಶೇಷ ಕಾನೂನನ್ನು ಜಾರಿಗೆ ತಂದಿದೆ. ಪ್ರತಿ ಆರೋಹಿ ಅಥವಾ ತಂಡವು ಸುಮಾರು 4000 ಡಾಲರ್(ಅಂದಾಜು 3.3 ಲಕ್ಷ ರೂಪಾಯಿ) ಠೇವಣಿಯನ್ನು ಇಡಬೇಕು. ಶಿಖರದಿಂದ ಇಳಿದು ಬರುವಾಗ ಪ್ರತಿ ಆರೋಹಿಯು ಕನಿಷ್ಠ 8 ಕೆಜಿ ಕಸವನ್ನು ಹೊತ್ತು ತರಬೇಕು. ಹಾಗೆ ತಂದರೆ ಮಾತ್ರ ಅವರ ಠೇವಣಿ ಹಣವನ್ನು ವಾಪಸ್ ನೀಡಲಾಗುತ್ತದೆ. ಆದರೆ, ಅನೇಕ ಶ್ರೀಮಂತ ಆರೋಹಿಗಳು ಆ ಹಣದ ಬಗ್ಗೆ ತಲೆಕೆಡಿಸಿ ಕೊಳ್ಳದೇ ಕಸವನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ.
ಇದರಿಂದಾಗಿ ಎವರೆ ಮೇಲಿರುವ ಕಸವು ಇಂದು ಒಂದು ವಿಲಕ್ಷಣ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಎವರೆ ಹಾದಿಯಲ್ಲಿ ಸಾವಿರಾರು ಆಕ್ಸಿಜನ್ ಸಿಲಿಂಡರ್‌ಗಳು ಬಿದ್ದಿವೆ. ಕೆಲವು ಗೈಡ್‌ಗಳು ಮತ್ತು ಸ್ಥಳೀಯ ಏಜೆನ್ಸಿಗಳು ಈ ಹಳೆಯ ಸಿಲಿಂಡರ್‌ಗಳನ್ನು ಕದ್ದು ತಂದು, ಅವುಗಳನ್ನು ಮರುಪೂರಣ ( Refill) ಮಾಡಿ ಹೊಸಬರಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
ಇದು ಅತ್ಯಂತ ಅಪಾಯಕಾರಿ, ಏಕೆಂದರೆ ಹಳೆಯ ಸಿಲಿಂಡರ್‌ಗಳು ಹೆಚ್ಚಿನ ಒತ್ತಡದಲ್ಲಿ ಸ್ಫೋಟ ಗೊಳ್ಳುವ ಅಥವಾ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಬೆಲೆಬಾಳುವ ಗೇರ್‌ಗಳನ್ನು (Climbing gear) ಅಲ್ಲಿಯೇ ಬಿಟ್ಟು ಹೋಗುವ ಆರೋಹಿಗಳ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಮಾರುವ ದೊಡ್ಡ ಜಾಲವೇ ನೇಪಾಳದ ಕಠ್ಮಂಡುವಿನಲ್ಲಿದೆ.
ಎವರೆಸ್ಟ್ ಸ್ವಚ್ಛಗೊಳಿಸುವ ಕೆಲಸವು ಕೇವಲ ಯಂತ್ರಗಳಿಂದ ಸಾಧ್ಯವಿಲ್ಲ. ಇಲ್ಲಿ ಸ್ಥಳೀಯ ‘ಶೇರ್ಪಾ’ ಜನಾಂಗದವರು ತಮ್ಮ ಜೀವವನ್ನು ಪಣಕ್ಕಿಟ್ಟು ಕಸವನ್ನು ಕೆಳಕ್ಕೆ ಹೊತ್ತು ತರುತ್ತಿದ್ದಾರೆ. 8000 ಮೀಟರ್‌ಗಿಂತಲೂ ಎತ್ತರದ ಡೆತ್ ಝೋನ್‌ನಿಂದ ಭಾರವಾದ ಸಿಲಿಂಡರ್‌ಗಳನ್ನು ಹೊತ್ತು ತರುವುದು ಅತ್ಯಂತ ಕಠಿಣ ಕೆಲಸ. ಸರಕಾರವು ಪ್ರತಿ ಕಿಲೋ ಕಸಕ್ಕೆ ಇಂತಿಷ್ಟು ಹಣವನ್ನು ನೀಡುವ ಮೂಲಕ ಇವರನ್ನು ಉತ್ತೇಜಿಸುತ್ತಿದೆ.
ಎವರೆಸ್ಟ್ ಹತ್ತಲು ನೀಡುವ ಪ್ರತಿ ಪರ್ಮಿಟ್‌ಗೆ ನೇಪಾಳ ಸರಕಾರವು 11000 ಡಾಲರ್ ಶುಲ್ಕ ವಿಧಿಸುತ್ತದೆ. ಇದೊಂದು ದೊಡ್ಡ ಆದಾಯದ ಮೂಲವಾಗಿರುವುದರಿಂದ, ಸರಕಾರ ಆರೋಹಿಗಳ ಸಂಖ್ಯೆಯನ್ನು ನಿಯಂತ್ರಿಸಲು ಹಿಂಜರಿಯುತ್ತಿದೆ. ಆದರೆ, ಅತಿಯಾದ ಪ್ರವಾಸೋದ್ಯಮವು ಹಿಮನದಿಗಳು ಕರಗಲು ಮತ್ತು ಪರ್ವತದ ನೈಸರ್ಗಿಕ ಸೌಂದರ್ಯ ನಾಶವಾಗಲು ಕಾರಣವಾಗು ತ್ತಿದೆ.
ಹೀಗಾಗಿ ಮೌಂಟ್ ಎವರೆಸ್ಟ್ ಇಂದು ಕೇವಲ ಸಾಹಸದ ಸಂಕೇತವಾಗಿ ಉಳಿದಿಲ್ಲ, ಅದು ಮನುಷ್ಯನ ದುರಾಸೆ ಮತ್ತು ಪರಿಸರದ ಕಡೆಗಣನೆಯ ಸ್ಮಾರಕವಾಗುತ್ತಿದೆ. ‘ಕಸ ಮುಕ್ತ ಎವರೆಸ್ಟ್’ ಅಭಿಯಾನ ಗಳು ನಡೆಯುತ್ತಿದ್ದರೂ, ಪ್ರವಾಸೋದ್ಯಮದ ಈ ಬೃಹತ್ ಉದ್ಯಮವು ಪರಿಸರದ ಮೇಲಿನ ತನ್ನ ದಾಳಿಯನ್ನು ಮುಂದುವರಿಸಿದೆ.