ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

R T Vittalmurthy Column: ಸಂಪುಟ ಸರ್ಕಸ್ಸು ಏಕೆ ಮುಗಿಯುತ್ತಿಲ್ಲ?

ಕಳೆದ ಶನಿವಾರ ರಾಜ್ಯ ಬಿಜೆಪಿ ಪಾಳಯದಲ್ಲಿ ಕುತೂಹಲಕಾರಿ ಸುದ್ದಿಯೊಂದು ತೇಲಿ ಬಂತು. ಕರ್ನಾಟಕದಲ್ಲಿ ಪಕ್ಷದ ವಿದ್ಯಮಾನಗಳನ್ನು ಗಮನಿಸಲು ವರಿಷ್ಟರು ವೀಕ್ಷಕರ ತಂಡವನ್ನು ಕಳಿಸಲು ನಿರ್ಧರಿಸಿzರೆ ಎಂಬುದು ಈ ಸುದ್ದಿ. ಜುಲೈ ಇಪ್ಪತ್ತೈದರ ಹೊತ್ತಿಗೆ ಕರ್ನಾಟಕಕ್ಕೆ ಆಗಮಿಸ ಲಿರುವ ಈ ವೀಕ್ಷಕರ ಪಡೆ ಇಲ್ಲಿ ವಿವಿಧ ಹಂತದ ನಾಯಕರ ಅಭಿಪ್ರಾಯ ಸಂಗ್ರಹಿಸಿ, ಆನಂತರ ದಿಲ್ಲಿಗೆ ಮರಳಲಿದೆ.

R T Vittalmurthy Column: ಸಂಪುಟ ಸರ್ಕಸ್ಸು ಏಕೆ ಮುಗಿಯುತ್ತಿಲ್ಲ?

-

ಮೂರ್ತಿ ಪೂಜೆ

ಕಳೆದ ಶನಿವಾರ ರಾಜ್ಯ ಬಿಜೆಪಿ ಪಾಳಯದಲ್ಲಿ ಕುತೂಹಲಕಾರಿ ಸುದ್ದಿಯೊಂದು ತೇಲಿ ಬಂತು. ಕರ್ನಾಟಕದಲ್ಲಿ ಪಕ್ಷದ ವಿದ್ಯಮಾನಗಳನ್ನು ಗಮನಿಸಲು ವರಿಷ್ಟರು ವೀಕ್ಷಕರ ತಂಡವನ್ನು ಕಳಿಸಲು ನಿರ್ಧರಿಸಿzರೆ ಎಂಬುದು ಈ ಸುದ್ದಿ. ಜುಲೈ ಇಪ್ಪತ್ತೈದರ ಹೊತ್ತಿಗೆ ಕರ್ನಾಟಕಕ್ಕೆ ಆಗಮಿಸ ಲಿರುವ ಈ ವೀಕ್ಷಕರ ಪಡೆ ಇಲ್ಲಿ ವಿವಿಧ ಹಂತದ ನಾಯಕರ ಅಭಿಪ್ರಾಯ ಸಂಗ್ರಹಿಸಿ, ಆನಂತರ ದಿಲ್ಲಿಗೆ ಮರಳಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಬಿನ್ ಅವರಿಗೆ ವರದಿ ಸಲ್ಲಿಸಲಿದೆ ಎಂಬುದು ಈ ಸುದ್ದಿಯ ವಿಸ್ಕೃತ ಭಾಗ.

ಅಂದ ಹಾಗೆ ದಿಲ್ಲಿಯಿಂದ ಪಕ್ಷದ ವೀಕ್ಷಕರು ಕರ್ನಾಟಕಕ್ಕೆ ಬರಲು ಏನು ಕಾರಣ? ಅಂತ ಕೇಳಿದರೆ ನಾಯಕತ್ವದ ವಿಷಯವನ್ನು ಸೆಟ್ಲ್ ಮಾಡುವುದೇ ಮುಖ್ಯ ಕಾರಣ ಎಂದು ಬಿಜೆಪಿಯ ಮೂಲಗಳು ಹೇಳುತ್ತಿವೆ.

ಅವುಗಳ ಪ್ರಕಾರ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಪ್ರತ್ಯಕ್ಷವಾಗಿ ಮತ್ತು ಪರೋಕ್ಷ ವಾಗಿ ಹಲವರು ಹೋರಾಡುತ್ತಲೇ ಬಂದಿದ್ದಾರಲ್ಲ? ಇವರೆಲ್ಲ ಸೇರಿ ಪಕ್ಷದ ವರಿಷ್ಟರ ಮೇಲೆ ಹೇರಿರುವ ಒತ್ತಡ ಕೆಲಸ ಮಾಡಿದೆ. ಮತ್ತದರ ಪರಿಣಾಮವಾಗಿ ವರಿಷ್ಟರು ಕರ್ನಾಟಕಕ್ಕೆ ವೀಕ್ಷಕರನ್ನು ಕಳಿಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಹೀಗೆ ದಿಲ್ಲಿಯಿಂದ ವೀಕ್ಷಕರು ಬಂದು ಅಭಿಪ್ರಾಯ ಸಂಗ್ರಹಿಸುವ ಮುನ್ನಿನ ಸ್ಥಿತಿ ಹೇಗಿದೆ ಎಂದರೆ ವಿಜಯೇಂದ್ರ ಅಧ್ಯಕ್ಷರಾಗಿರುವುದರನ್ನು ಪಕ್ಷದ ಬಹುತೇಕ ಹಿರಿಯರು ಇಷ್ಟಪಡುತ್ತಿಲ್ಲ. ಹೀಗಾಗಿ ಅವರ ಜಾಗಕ್ಕೆ ಪರ್ಯಾಯ ನಾಯಕರೊಬ್ಬರು ಬರುವ ತನಕ ಇದೇ ಅನಿಶ್ಚಿತತೆ ಮುಂದುವರಿ ಯುತ್ತದೆ ಎಂಬುದು ಈ ಮೂಲಗಳ ಮಾತು.

ಇದನ್ನೂ ಓದಿ: R T Vittalmurthy Column: ‘ಸಿರಾ-ಶಿಕು’ ಸೇತುವೆಗೆ ‘ಡಿಕೆ’ ಸಿಮೆಂಟು

ಇದರ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ, ಮುರುಗೇಶ್ ನಿರಾಣಿ ಅವರ ಹೆಸರುಗಳು ಫ್ರಂಟ್ ಲೈನಿಗೆ ಬಂದಿರುವುದು ಸಹಜ ಎಂಬುದು ಅವುಗಳ ಮಾತು. ಕುತೂಹಲದ ಸಂಗತಿ ಎಂದರೆ ರಾಜ್ಯ ಬಿಜೆಪಿಯ ಮತ್ತೊಂದು ಬಣ ಇದನ್ನೊಪ್ಪುವುದಿಲ್ಲ. ಅದರ ಪ್ರಕಾರ, ವಿಜಯೇಂದ್ರ ಅವರನ್ನು ಹೊರತುಪಡಿಸಿ ಬೇರೊಬ್ಬರು ಪಕ್ಷದ ರಾಜ್ಯಾಧ್ಯಕ್ಷರಾದರೆ ಆಪತ್ತು ನಿಶ್ಚಿತ.

ಕಾರಣ? ಇವತ್ತು ಪ್ರಬಲ ಲಿಂಗಾಯತ ಮತಗಳನ್ನು ಕನ್‌ಸಾಲಿಡೇಟ್ ಮಾಡುವ ಶಕ್ತಿ ಇರುವುದು ಕೇವಲ ಯಡಿಯೂರಪ್ಪ ಹೆಸರಿಗೆ ಮಾತ್ರ. ಹೀಗಾಗಿ ಇವತ್ತು ಆ ಹೆಸರು ವಿಜಯೇಂದ್ರ ಅವರ ಪಾಲಿನ ಪ್ರಭಾವಳಿಯಾಗಿ ಲಕಲಕಿಸುತ್ತಿದೆ. ಒಂದು ವೇಳೆ ವಿಜಯೇಂದ್ರ ಅವರನ್ನು ಕೆಳಗಿಳಿಸಿದರೆ ವಿಜಯೇಂದ್ರ ಅವರ ಹಿಂದಿನ ಪ್ರಭಾವಳಿ ಮಸುಕಾಗುತ್ತದಷ್ಟೇ ಅಲ್ಲ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಿಕೆ ನೇತೃತ್ವದ ಕಾಂಗ್ರೆಸ್‌ಗೆ ಪ್ಲಸ್ ಆಗಲಿದೆ.

ಇದು ಹೇಗೆ ಎಂಬುದಕ್ಕೆ ವಿಶೇಷ eನವೇನೂ ಬೇಕಾಗಿಲ್ಲ. ಯಾಕೆಂದರೆ ವಿಜಯೇಂದ್ರ ಕೆಳಗಿಳಿಯು ತ್ತಿದ್ದಂತೆ ಪಕ್ಷದಲ್ಲಿರುವ ದೊಡ್ಡ ಗುಂಪು ಚುನಾವಣೆಯ ವೇಳೆಗೆ ಬಂಡಾಯವೇಳುತ್ತದೆ ಮತ್ತು ಬಹುತೇಕ ಕ್ಷೇತ್ರಗಳಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುವವರ ಬೆನ್ನಿಗೆ ನಿಲ್ಲುತ್ತದೆ. ಹಾಗಾದಾಗ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳು ಗೆಲುವಿಗಾಗಿ ಪರದಾಡಬೇಕಾಗುತ್ತದೆ ಎಂಬುದು ಈ ಬಣದ ಮಾತು.

ಅರ್ಥಾತ್, ವೀಕ್ಷಕರು ಕರ್ನಾಟಕಕ್ಕೆ ಬಂದು ಅಭಿಪ್ರಾಯ ಸ್ವೀಕರಿಸುವ ಮುನ್ನ ಇಂತದೊಂದು ಆತಂಕದ ಭೂತ ಮೇಲೆದ್ದು ನಿಲ್ಲಲಿದೆ. ಹೀಗಾಗಿ ಕರ್ನಾಟಕಕ್ಕೆ ಬರಲಿರುವ ವೀಕ್ಷಕರು ಯಾವ ರೀತಿಯ ರಿಪೋರ್ಟು ಕೊಂಡೊಯ್ಯಬಹುದು? ಎಂಬುದೇ ಸದ್ಯದ ಕುತೂಹಲ.

BSY and BY

ಬಿಜೆಪಿ-ಜೆಡಿಎಸ್ ಮೈತ್ರಿಯ ಕತೆ?

ಈ ಮಧ್ಯೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ನಡುವಣ ಮೈತ್ರಿಯ ಕತೆ ಎತ್ತ ಸಾಗುತ್ತಿದೆ ಎಂಬುದೇ ಹಲವು ಅನುಮಾನಗಳನ್ನು ಸೃಷ್ಟಿಸಿದೆ.

ಮೇಲ್ನೋಟಕ್ಕೇನೋ ಉಭಯ ಪಕ್ಷಗಳ ನಡುವಣ ಮೈತ್ರಿ ಮುಂದುವರಿಸುವ ವಿಷಯದಲ್ಲಿ ತಮಗೆ ಬದ್ಧತೆ ಇದೆ ಅಂತ ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ಮಾತನಾಡುತ್ತಿದ್ದಾರೆ. ಆದರೆ ಆಳದಲ್ಲಿ ಉಭಯ ಪಕ್ಷಗಳ ಹೆಜ್ಜೆಯನ್ನು ಗುರುತಿಸಿದರೆ ನಾನೊಂದು ತೀರ, ನೀನೊಂದು ತೀರ ಎನ್ನುವಂತಿದೆ. ಇದಕ್ಕೆ ಬಿಡದಿ ಟೌನ್ ಶಿಪ್ ವಿಷಯದಲ್ಲಿ ಅವು ನಡೆದುಕೊಂಡ ರೀತಿಯೇ ಸಾಕ್ಷಿ.

ಅಂದ ಹಾಗೆ ಈ ವಿಷಯದಲ್ಲಿ ಒಗ್ಗೂಡಿ ಸರಕಾರದ ವಿರುದ್ಧ ಹೋರಾಟ ರೂಪಿಸಬೇಕಿದ್ದ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಹೋರಾಟ ನಡೆಸಿದ್ದು ಮಾತ್ರವಲ್ಲ ತಮ್ಮ ಭವಿಷ್ಯದ ದಾರಿ ಬೇರೆ ಬೇರೆ ಎಂಬಂತೆ ನಡೆದುಕೊಂಡಿವೆ.

ಅಂದ ಹಾಗೆ ಮೈತ್ರಿಯ ವಿಷಯದಲ್ಲಿ ಕುಮಾರಸ್ವಾಮಿ ಕಮಿಟೆಡ್ ಆಗಿರುವುದು ನಿಜವಾದರೂ ಬಿಜೆಪಿ ಪಾಳಯಕ್ಕೆ ಈ ಕಮಿಟ್‌ಮೆಂಟ್ ಇರುವಂತೆ ಕಾಣುತ್ತಿಲ್ಲ. ಕಾರಣ? ಭವಿಷ್ಯದಲ್ಲಿ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಸಿಎಂ ಅಗಬಹುದು ಎಂಬ ಆತಂಕ. ಹೀಗಾಗಿ ವಿಜಯೇಂದ್ರ ಬಣ ಮಾತ್ರವಲ್ಲ, ವಿಜಯೇಂದ್ರ ವಿರೋಧಿ ಬಣದ ಬಹಳಷ್ಟು ನಾಯಕರು ಕೂಡಾ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿಕೆ ವಿಷಯದಲ್ಲಿ ಒಲವು ಹೊಂದಿಲ್ಲ.

ಈ ಮಧ್ಯೆ ಉಭಯ ಪಕ್ಷಗಳ ಮಧ್ಯೆ ಹೊಂದಾಣಿಕೆಯಾದರೆ ತಮಗೆ ಟಿಕೆಟ್ ಸಿಗುವುದು ಕಷ್ಟ ಎಂಬ ಭಾವನೆ ಇರುವ ಸ್ಥಳೀಯ ಮಟ್ಟದ ನಾಯಕರು ಮೈತ್ರಿ ಬೇಡವೇ ಬೇಡ ಅಂತ ವಿಜಯೇಂದ್ರ ಅವರ ಮೇಲೆ ಒತ್ತಡ ಹೇರುತ್ತಿzರೆ. ಇದೇ ಪರಿಪಾಠ ಜೆಡಿಎಸ್ ಪಾಳಯದಲ್ಲೂ ಕಾಣಿಸಿಕೊಂಡಿದ್ದು ಇದರ ಪರಿಣಾಮವಾಗಿ ಕೈ ಪಾಳಯಕ್ಕೆ ಪಾಸಿಟಿವ್ ಸಿಗ್ನಲ್ಲು ರವಾನೆಯಾಗುತ್ತಿದೆ.

ಅರ್ಥಾತ್, ಉಭಯ ಪಕ್ಷಗಳಲ್ಲಿ ಕಂಡು ಬರುತ್ತಿರುವ ಈ ಧೋರಣೆ ಅಂತಿಮವಾಗಿ ತಮಗೆ ಪ್ಲಸ್ ಆಗಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

ಅದರ ಪ್ರಕಾರ, ಇವತ್ತಿನ ಮನಃಸ್ಥಿತಿಯ ನಡುವೆಯೂ ಮೈತ್ರಿ ಮುಂದುವರಿದರೆ ಉಭಯ ಪಕ್ಷಗಳ ಅತೃಪ್ತರು ತಮ್ಮ ಕಡೆ ವಾಲಬಹುದು. ಒಂದು ವೇಳೆ ಮೈತ್ರಿ ಕಟ್ ಆದರೂ ಉಭಯ ಪಕ್ಷಗಳ ಮತ ಬ್ಯಾಂಕುಗಳನ್ನು ಒಂದು ಮಟ್ಟದಲ್ಲಿ ಒಡೆದು ಲಾಭ ಮಾಡಿಕೊಳ್ಳಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ.

ಮೋದಿ ಸಂಪುಟಕ್ಕೆ ಯಾರು ಸೇರುತ್ತಾರೆ?

ಈ ಮಧ್ಯೆ ಕೇಂದ್ರ ಸಚಿವ ಸಂಪುಟಕ್ಕೆ ಸೇರಲು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಟ್ರೈ ಕೊಡುತ್ತಿದ್ದಾರೆ. ಅಂದ ಹಾಗೆ 2024ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂತಲ್ಲ? ಆ ಸಂದರ್ಭದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಮಂತ್ರಿಗಿರಿಗೆ ಪ್ರಯತ್ನಿಸಿದ್ದರು.

ಆದರೆ ಅಷ್ಟೊತ್ತಿಗಾಗಲೇ ಕರ್ನಾಟಕದಿಂದ ಪ್ರಹ್ಲಾದ್ ಜೋಷಿ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಲು ತೀರ್ಮಾನಿಸಲಾಗಿತ್ತಲ್ಲ? ಹೀಗಾಗಿ ಅವತ್ತು ಉಳಿದಿದ್ದು ರಾಜ್ಯ ದರ್ಜೆಯ ಸಚಿವ ಸ್ಥಾನಗಳು ಮಾತ್ರ. ಆದರೆ ಆ ಸ್ಥಾನಗಳಿಗೆ ಬೊಮ್ಮಾಯಿ, ಶೆಟ್ಟರ್ ಅವರನ್ನು ಪರಿಗಣಿಸುವುದು ಹೇಗೆ? ಎಂಬ ಪ್ರಶ್ನೆ ವರಿಷ್ಟರಿಗೆ ಎದುರಾಗಿದೆ. ಯಾಕೆಂದರೆ ಈ ಇಬ್ಬರೂ ಮುಖ್ಯಮಂತ್ರಿ ಪಟ್ಟಕ್ಕೇರಿದವರು.

ಹೀಗಾಗಿ ಮಂತ್ರಿಗಳಾಗಿಯೇ ಬಿಡುತ್ತೇವೆ ಅಂತ ಅವತ್ತು ಕನಸು ಕಂಡಿದ್ದ ಈ ಇಬ್ಬರಿಗೂ ನಿರಾಸೆ ಯಾಗಿತ್ತು. ಆದರೆ ಈಗ ದಿಲ್ಲಿಯಲ್ಲಿ ಪ್ರಬಲವಾಗಿ ಹಬ್ಬಿರುವ ವರ್ತಮಾನದ ಪ್ರಕಾರ, ಸದ್ಯದ ಶುರುವಾಗಲಿರುವ ಸಂಸತ್ ಅಧಿವೇಶನದ ನಂತರ, ಅಂದರೆ ಆಗ ಅಂತ್ಯದ ಹೊತ್ತಿಗೆ ಇಲ್ಲವೇ ಸೆಪ್ಟೆಂಬರ್ ಮೊದಲ ವಾರದ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟಕ್ಕೆ ಸರ್ಜರಿ ನಡೆಯಲಿದೆ.

ಈ ಸಂದರ್ಭದಲ್ಲಿ ಕರ್ನಾಟಕದಿಂದ ಸಚಿವರಾದವರ ಪೈಕಿ ಇಬ್ಬರನ್ನು ಕೈ ಬಿಟ್ಟು ಹೊಸತಾಗಿ ಇಬ್ಬರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಜಾಸ್ತಿ. ಹೀಗಾಗಿಯೇ ಕರ್ನಾಟಕದ ಬಾಬತ್ತಿನಿಂದ ಖಾಲಿಯಾಗುವ ಒಂದು ಸಂಪುಟ ದರ್ಜೆ ಸಚಿವ ಸ್ಥಾನಕ್ಕಾಗಿ ಬೊಮ್ಮಾಯಿ, ಶೆಟ್ಟರ್ ಇಬ್ಬರೂ ಟ್ರೈ ಮಾಡುತ್ತಿದ್ದಾರೆ.

ಅಂದ ಹಾಗೆ ಬೊಮ್ಮಾಯಿ ಅವರಿಗೆ ಈ ಹಿಂದೆ ಆರೆಸ್ಸೆಸ್‌ನ ಪವರ್ ಫುಲ್ ನಾಯಕ ದತ್ತಾತ್ತೇಯ ಹೊಸಬಾಳೆ ಅವರ ಸಪೋರ್ಟು ಇತ್ತು. ವಾಸ್ತವವಾಗಿ ಬೊಮ್ಮಾಯಿ ಕರ್ನಾಟಕದ ಸಿಎಂ ಆಗಲು ದತ್ತಾತ್ರೇಯ ಹೊಸಬಾಳೆ ಅವರ ಪಾತ್ರ ಬಹುಮುಖ್ಯವಾಗಿತ್ತು. ಆದರೆ ಈಗ ಮೋದಿಯವರ ಸಂಪುಟಕ್ಕೆ ಸೇರುವ ವಿಷಯದಲ್ಲಿ ಬೊಮ್ಮಾಯಿ ಅವರಿಗೆ ದತ್ತಾತ್ರೇಯ ಹೊಸಬಾಳೆ ಪವರ್ ತುಂಬುವ ಸಾಧ್ಯತೆ ಕಡಿಮೆ.

ಹೀಗಾಗಿ ತಮಗಿರುವ ಸಂಪರ್ಕಗಳ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತಲುಪಲು ಬೊಮ್ಮಾಯಿ ಕಸರತ್ತು ನಡೆಸುತ್ತಿದ್ದಾರೆ. ಇನ್ನು ಈ ವಿಷಯದಲ್ಲಿ ಜಗದೀಶ್ ಶೆಟ್ಟರ್ ದೊಡ್ಡ ಮಟ್ಟದ ಲಾಬಿ ಮಾಡುತ್ತಿಲ್ಲವಾದರೂ, ಕಾಂಗ್ರೆಸ್ಸಿಗೆ ಹೋಗಿದ್ದ ತಮ್ಮನ್ನು ಮರಳಿ ಬಿಜೆಪಿಗೆ ಕರೆತರುವಾಗ ಅಮಿತ್ ಶಾ ಕೊಟ್ಟ ಭರವಸೆ ವರ್ಕ್ ಔಟ್ ಆಗುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ, ಅವತ್ತು ಶೆಟ್ಟರ್ ಅವರನ್ನು ಪಕ್ಷಕ್ಕೆ ಮರಳಿ ಕರೆತಂದಿದ್ದ ಅಮಿತ್ ಶಾ, ‘ನೀವು ಸೆಂಟ್ರಲ್ ಮಿನಿಸ್ಟರ್ ಆಗುತ್ತೀರಿ. ಯೋಚಿಸಬೇಡಿ’ ಎಂದಿದ್ದರಂತೆ. ಹೀಗಾಗಿ ಅವತ್ತು ಅವರು ಕೊಟ್ಟ ಭರವಸೆ ಈ ಬಾರಿ ವರ್ಕ್ ಔಟ್ ಆಗಬಹುದು ಎಂಬುದು ಶೆಟ್ಟರ್ ಲೆಕ್ಕಾಚಾರ.

ಹೀಗೆ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸಂಪುಟ ದರ್ಜೆಯ ಸಚಿವರಾಗಲು ಕಸರತ್ತು ನಡೆಸುತ್ತಿದ್ದರೆ, ಮತ್ತೊಂದು ಕಡೆಯಿಂದ, ಖಾಲಿಯಾಗುವ ರಾಜ್ಯ ದರ್ಜೆಯ ಸಚಿವ ಸ್ಥಾನಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಹೆಸರು ಕೇಳಿ ಬರತೊಡಗಿದೆ. ಮುಂದೇನಾಗುತ್ತದೊ? ಕಾದು ನೋಡಬೇಕು.

ಇನ್ನೆಷ್ಟು ದಿನ ಸಂಪುಟ ಸರ್ಕಸ್?

ಇನ್ನು ರಾಜ್ಯ ಸಚಿವ ಸಂಪುಟದ ವಿಸ್ತರಣೆ ಸರ್ಕಸ್ ಮುಗಿಯದೆ ಇರುವುದು ಹಲವು ಕುತೂಹಲ ಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರ ಪ್ರಕಾರ, ಕಳೆದ ವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ದಿಡೀರನೆ ಬೆಂಗಳೂರಿಗೆ ಎದ್ದು ಹೋಗದೆ ಇದ್ದಿದ್ದರೆ ವಿಸ್ತರಣೆ ಸರ್ಕಸ್ಸು ಮುಗಿಯು ತ್ತಿತ್ತು.

ಆದರೆ ಮೂಲಗಳ ಪ್ರಕಾರ, ಖರ್ಗೆಯವರು ಬೆಂಗಳೂರಿಗೆ ವಾಪಸ್ಸಾಗುವುದಕ್ಕೂ ವಿಸ್ತರಣೆ ಸರ್ಕಸ್ ಮುಂದುವರಿದಿರುವುದಕ್ಕೂ ಸಂಬಂಧವಿಲ್ಲ. ಬದಲಿಗೆ ಯಾರು ಸಂಪುಟ ಸೇರಬೇಕು ಎಂಬ ವಿಷಯ ದಲ್ಲಿ ನಾಯಕರು ಹಿಡಿದ ಪಟ್ಟು ಇಂತಹ ವಿಳಂಬಕ್ಕೆ ಕಾರಣವಾಗಿದೆ.

ಉದಾಹರಣೆಗೆ ಸಿದ್ದರಾಮಯ್ಯ ಅವರನ್ನೇ ತೆಗೆದುಕೊಳ್ಳಿ. ಭವಿಷ್ಯದಲ್ಲಿ ಪಕ್ಷಕ್ಕೆ ಅನುಕೂಲವಾಗ ಬೇಕು ಅಂತಿದ್ದರೆ ನಾನು ಹೇಳಿದ ಏಳು ಮಂದಿಗೆ ಮಂತ್ರಿಗಿರಿ ಕೊಡಿ ಅಂತ ಪಟ್ಟಾಗಿ ಹೇಳಿದ್ದಾರೆ. ಅರಸೀಕೆರೆಯ ಶಿವಲಿಂಗೇಗೌಡ, ಚಾಮರಾಜ ನಗರದ ಪುಟ್ಟರಂಗಶೆಟ್ಟಿ, ಪಿರಿಯಾಪಟ್ಟಣದ ಕೆ.ವೆಂಕಟೇಶ್, ಶಿವಾಜಿ ನಗರದ ರಿಜ್ವಾನ್ ಆರ್ಷದ್, ಕೊಡಗಿನ ಪೊನ್ನಣ್ಣ, ಕುರುಬರ ಕೋಟಾದಲ್ಲಿ ಶಿವಣ್ಣನವರ್, ಇಂಡಿಯ ಯಶವಂತರಾಯ ಗೌಡ ಪಾಟೀಲರಿಗೆ ಮಂತ್ರಿಗಿರಿ ಕೊಡಬೇಕು ಎಂಬುದು ಸಿದ್ದರಾಮಯ್ಯ ವಾದ.

ಹೀಗೆ ಸಿದ್ದರಾಮಯ್ಯ ಒಂದು ಪಟ್ಟಿಯನ್ನಿಟ್ಟರೆ ಮಲ್ಲಿಕಾರ್ಜುನ ಖರ್ಗೆ ಮತ್ತೊಂದು ಪಟ್ಟಿಯನ್ನು ಮುಂದಿಟ್ಟಿದ್ದಾರೆ. ಈ ಮಧ್ಯೆ ಸಿಎಂ ಡಿ.ಕೆ.ಶಿವಕುಮಾರ್ ಸುಮ್ಮನಿರಲು ಸಾಧ್ಯವೇ? ಅವರು ಕೂಡಾ ತಮ್ಮ ಪಟ್ಟಿಗೆ ಆದ್ಯತೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಉಳಿದಂತೆ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ.ಸಿ.ವೇಣುಗೋಪಾಲ್ ಅವರ ಮಿನಿ ಪಟ್ಟಿಯೂ ಪ್ರತ್ಯಕ್ಷವಾಗಿ ಸಂಪುಟ ವಿಸ್ತರಣೆ ಸರ್ಕಸ್ಸು ಮುಂದುವರಿದಿದೆ.

ಈ ಪೈಪೋಟಿಯ ರೂಪ ಹೇಗಿದೆ ಎಂದರೆ ಮುಸ್ಲಿಮರ ಕೋಟಾದಲ್ಲಿ ರಿಜ್ವಾನ್ ಆರ್ಷದ್‌ಗೆ ಸಿದ್ದರಾಮಯ್ಯ ಬೆಂಬಲವಾಗಿದ್ದರೆ ಎನ್.ಎ.ಹ್ಯಾರೀಸ್ ಮಂತ್ರಿಯಾಗ್ಲೇಬೇಕು ಅಂತ ಡಿಕೆ ಪಟ್ಟು ಹಿಡಿದಿದ್ದಾರೆ. ಉಳಿದಂತೆ ಮಲ್ಲಿಕಾರ್ಜುನ ಖರ್ಗೆಯವರು ಖನೀಜ್ ಫಾತಿಮಾ ಅವರ ಪರವಾಗಿದ್ದರೆ, ಕೆ.ಸಿ.ವೇಣುಗೋಪಾಲ್ ಅವರು ಜಮೀರ್ ಅಹ್ಮದ್ ಖಾನ್ ಮಿನಿಸ್ಟರ್ ಆಗ್ಲೇಬೇಕು ಅಂತ ಹೇಳುತ್ತಿದ್ದಾರೆ.

ಮಹಿಳೆಯರ ಕೋಟಾ ವಿಷಯ ಬಂದಾಗ ಒಬ್ಬ ನಾಯಕರು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪರವಾ ಗಿದ್ದರೆ, ಇನ್ನೊಬ್ಬರು ರೂಪಕಲಾ ಶಶಿಧರ್ ಪರವಾಗಿದ್ದಾರೆ. ಈ ಮಧ್ಯೆ ಖರ್ಗೆಯವರು ಖನೀಜ್ ಫಾತಿಮಾ ಕ್ಯಾಬಿನೆಟ್ಟಿಗೆ ಬಂದ್ರೆ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಂತಾಗುತ್ತದೆ. ಅರ್ಥಾತ್, ಮುಸ್ಲಿಮರ ಕೋಟಾ, ಮಹಿಳೆಯರ ಕೋಟಾ ಎರಡೂ ಸೆಟ್ಲಾದಂತೆ ಆಗುತ್ತದೆ ಎನ್ನುತ್ತಿದ್ದಾರೆ.

ಪರಿಣಾಮ? ಕಳೆದ ವಾರ ಮುಗಿಯಬೇಕಿದ್ದ ಸಂಪುಟ ವಿಸ್ತರಣೆ ಕಸರತ್ತು ಈ ವಾರವೂ ಮುಂದು ವರಿದಿದೆ. ಅದು ಮುಗಿದು ಈ ವಾರ ಸಂಪುಟ ವಿಸ್ತರಣೆ ಆಗುತ್ತದೋ? ಅಥವಾ ಮುಂದಿನ ವಾರವೂ ಮುಂದು ವರಿಯುತ್ತದೋ? ಎಂಬುದೇ ಸದ್ಯದ ಕುತೂಹಲ.