Hari Paraak Column: ʼಟಿಕೆಟ್ʼ ಸೇಲ್ ಆಗಲಿಲ್ಲ-ಯಶ್
ನಮ್ಮ ಸಾರಿಗೆ ವ್ಯವಸ್ಥೆ, ಅಂಗಡಿಗಳು, ಸಿನಿಮಾ ಮಂದಿರಗಳನ್ನು ಮುಚ್ಚಿದರೆ ಅದು ತಮಿಳರಿಗೆ ಯಾವ ರೀತಿ ಅಫೆಕ್ಟ್ ಆಗುತ್ತೆ. ನಮ್ಮ ಚಿತ್ರೋದ್ಯಮದವರು ಸುಮ್ಮನೇ ಬೆಂಗಳೂರು, ಮೈಸೂರಿನಲ್ಲಿ ಮೆರವಣಿಗೆ ಮಾಡಿದರೆ ಏನು ಲಾಭ, ನಾವು ಸಾಮಾನ್ಯ ನಾಗರಿಕರು ಸೇರಿದಂತೆ, ಬಂದ್‌ಗೆ ಕರೆ ಕೊಟ್ಟು ನ್ಯಾಯಕ್ಕಾಗಿ ಹೋರಾಡಿದ ಅನೇಕ ಸಂಘಟನೆಗಳ ಕಾರ್ಯಕರ್ತರು, ನಿಜಕ್ಕೂ ರಿಸ್ಕ್ ತೆಗೆದುಕೊಳ್ಳುವಂಥವರಾಗಿದ್ದರೆ ಇದೇ ಬಂದ್ ಅನ್ನು ತಮಿಳುನಾಡಿನಲ್ಲಿ ಹೋಗಿ ಮಾಡಬೇಕು.
-
ತುಂಟರಗಾಳಿ
ಸಿನಿಗನ್ನಡ
ಕಾವೇರಿ ವಿವಾದದ ವಿಷಯದಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲರೂ ಬಂದ್‌ನಲ್ಲಿ ಪಾಲ್ಗೊಳ್ಳು ತ್ತಾರೆ. ಬಂದ್ ಯಶಸ್ವಿಯಾಗಿಯೇ ನಡೆಯುತ್ತೆ. ಎಂದಿನಂತೆ ಕೆಲವು ತಲೆಗಳು ಕಾಣದೇ ಇದ್ದುದಕ್ಕೆ ಅಸಮಾಧಾನ ವ್ಯಕ್ತವಾದರೂ ಅದಕ್ಕೆ ಶಿವರಾಜ್‌ಕುಮಾರ್ ನಾವು ಬಂದರೆ ಅವರೂ ಬಂದಂತೆ. ನಾವೆಲ್ಲರೂ ಒಂದು ಎಂದು ಸಮಜಾಯಿಷಿ ಕೊಡುತ್ತಾರೆ. ಆದರೆ ವಿಷಯ ಇದಲ್ಲ. ನಮಗೆ ಅನ್ಯಾಯ ಆಗಿದೆ ಅಂತ ನಮಗೆ ನಾವೇ ಶಿಕ್ಷೆ ಕೊಟ್ಟುಕೊಳ್ಳುವುದರಿಂದ ಏನು ಪ್ರಯೋಜನವಿದೆ.
ನಮ್ಮ ಸಾರಿಗೆ ವ್ಯವಸ್ಥೆ, ಅಂಗಡಿಗಳು, ಸಿನಿಮಾ ಮಂದಿರಗಳನ್ನು ಮುಚ್ಚಿದರೆ ಅದು ತಮಿಳರಿಗೆ ಯಾವ ರೀತಿ ಅಫೆಕ್ಟ್ ಆಗುತ್ತೆ. ನಮ್ಮ ಚಿತ್ರೋದ್ಯಮದವರು ಸುಮ್ಮನೇ ಬೆಂಗಳೂರು, ಮೈಸೂರಿನಲ್ಲಿ ಮೆರವಣಿಗೆ ಮಾಡಿದರೆ ಏನು ಲಾಭ, ನಾವು ಸಾಮಾನ್ಯ ನಾಗರಿಕರು ಸೇರಿದಂತೆ, ಬಂದ್‌ಗೆ ಕರೆ ಕೊಟ್ಟು ನ್ಯಾಯಕ್ಕಾಗಿ ಹೋರಾಡಿದ ಅನೇಕ ಸಂಘಟನೆಗಳ ಕಾರ್ಯಕರ್ತರು, ನಿಜಕ್ಕೂ ರಿಸ್ಕ್ ತೆಗೆದುಕೊಳ್ಳುವಂಥವರಾಗಿದ್ದರೆ ಇದೇ ಬಂದ್ ಅನ್ನು ತಮಿಳುನಾಡಿನಲ್ಲಿ ಹೋಗಿ ಮಾಡಬೇಕು. ಅಲ್ಲಿನ ಅಂಗಡಿ, ಚಿತ್ರಮಂದಿರಗಳನ್ನು ಮುಚ್ಚಿಸಬೇಕು. ಅಲ್ಲಿ ರಸ್ತೆ ತಡೆ ಮಾಡಬೇಕು. ಅಲ್ಲಿನ ಪೊಲೀಸರನ್ನು ಎದುರಿಸಬೇಕು.
ಚಿತ್ರರಂಗದ ಪ್ರಮುಖರು ಅಲ್ಲಿನ ಚಿತ್ರರಂಗದ ತಮ್ಮ ಸ್ನೇಹಿತರೊಂದಿಗೆ ಮಾತನಾಡಿ ಅವರ ಮನವೊಲಿಸ ಬೇಕು. ನಮ್ಮ ಸಮಸ್ಯೆಯನ್ನು ಹೇಳಿ ಅವರ ಬೆಂಬಲ ಗಳಿಸಬೇಕು. ಇಲ್ಲದಿದ್ದರೆ ಅವರ ತಮಿಳು ಚಿತ್ರಗಳಿಗೆ ನಾವು ಕೊಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕು. ಈ ಮೂಲಕ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇದೆಲ್ಲ ಬಿಟ್ಟು ನಮ್ಮದೇ ಜನಗಳಿಗೆ ತೊಂದರೆ ಕೊಟ್ಟು ಏನನ್ನು ಸಾಧಿಸಿದಂತಾಗುತ್ತದೆ? ಇದು ಗಾಂಽಜಿ ಅವರ ಅಹಿಂಸಾ ಪಾಲಿಸಿಯ ಕಾಲ ಅಲ್ಲ, ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವ ಕಾಲವೂ ಅಲ್ಲ ಅಲ್ಲವೇ?
ಇದನ್ನೂ ಓದಿ: Hari Paraak Column: ವಿಡಿಯೋ ? ಸೆಂಡ್ ಮೀ, ಸೆಂಡ್ ಮೀ
ಲೂಸ್ ಟಾಕ್-ಯಶ್
ಏನು ಯಶ್ ಅವರೇ ನಿಮ್ಮ ಟಾಕ್ಸಿಕ್ ಸಿನಿಮಾ ಅಷ್ಟಕ್ಕಷ್ಟೇ ಅನ್ನೋ ಥರ ಆಯ್ತಲ್ಲ?
- ಏನ್ ಮಾಡೋದು, ಸಿನಿಮಾ ಬಗ್ಗೆ ಜನ ಆಸಕ್ತಿ ತೋರಿಸಿದ್ರು. ಆದ್ರೆ ಅಂದುಕೊಂಡಂತೆ ‘ಟಿಕೆಟ್’ ಸೇಲ್ ಆಗಲಿಲ್ಲ.
ಡೈರೆಕ್ಟ್ರು ಕೈ ಕೊಟ್ರು ಅನ್ಸುತ್ತಾ?
- ಹುಡುಗೀರು ಅಂದಮೇಲೆ ಕೈ ಕೊಡೋದು ಕಾಮನ್ ಬಿಡಿ. ಆದ್ರೆ ಈಗ ಪ್ರಾಬ್ಲಂ ಅಂದ್ರೆ ಸಿನಿಮಾ ಚೆನ್ನಾಗಿತ್ತೋ ಚೆನ್ನಾಗಿರಲಿಲ್ವೋ ಅಂತ ನಂಗೇ ಕನ್ಯೂಸ್ ಆಗ್ತಿದೆ.
ಟಾಕ್ಸಿಕ್ ಸಿನಿಮಾದ ಫಲಿತಾಂಶ ನಿಮ್ಮ ಇಮೇಜಿನ ಮೇಲೆ ಯಾವ ಪರಿಣಾಮ ಬೀರುತ್ತೆ?
- ಯಾವ ಹೊಸ ಪರಿಣಾಮನೂ ಇಲ್ಲ, ರಾಯನ ಪಾತ್ರ ಮಾಡಿದ ನಾನು ಈಗಲೂ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ‘ರಾಯ’ಭಾರಿನೇ.
ಸರಿ, ಟಾಕ್ಸಿಕ್ ಫಲಿತಾಂಶದ ಬಗ್ಗೆ ನಿಮ್ಮ ಧರ್ಮ ಪತ್ನಿ ಏನಂದ್ರು?
- ಇದರ ಬಗ್ಗೆ ರಾಧಿಕಾ ಪಂಡಿತ್ ಏನ್ ಹೇಳಿದ್ಳು ಅನ್ನೋದು ಮುಖ್ಯ ಅಲ್ಲ, ಸಿನಿಮಾ ಪಂಡಿತರು ಏನ್ ಹೇಳ್ತಾರೆ ಅನ್ನೋದೇ ಮುಖ್ಯ.
ಸರಿ, ನಿಮ್ಮ ಮುಂದಿನ ಯೋಜನೆ?
- ಇನ್ನೂ ಯೋಚನೆ ಮಾಡಿಲ್ಲ. ಸದ್ಯಕ್ಕೆ ಟಾಕ್ಸಿಕ್ ನಂತರ ಬಾಡಿ ಮತ್ತು ಮೈಂಡ್‌ನ ‘ಡೀಟಾP’ ಮಾಡಿಕೊಳ್ತಾ ಇದ್ದೀನಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಕಾಲೇಜಿನಲ್ಲಿದ್ದಾಗ ಖೇಮು ಪ್ಲೇ ಬಾಯ್ ಅಂತನೇ ಗುರುತಿಸಿಕೊಂಡಿದ್ದ. ಹೀಗೇ ಅವನ ಕಾಲೇಜು ಗೆಳೆಯರು ಒಂದು ಪಾರ್ಟಿ ಅಂತ ಮಾಡೋಕೆ ರೆಡಿಯಾದ್ರು. ಖೇಮು ಕೂಡ ಬರ್ತೀನಿ ಅಂತ ಹೇಳಿದ್ದ. ಆದರೆ ಯಾವುದೋ ಅರ್ಜಂಟ್ ಕೆಲಸ ಅಂತ ಊರಿಗೆ ಹೋದ ಖೇಮುಗೆ ಸಮಯಕ್ಕೆ ಸರಿಯಾಗಿ ಬರಲಾಗಲಿಲ್ಲ. ಸರಿ, ಇಲ್ಲಿ ಖೇಮು ಇಲ್ಲದೆ ಹುಡುಗ ಹುಡುಗಿಯರ ಪಾರ್ಟಿ ಶುರುವಾ ಯಿತು. ಆ ಪಾರ್ಟಿಯ ವಿಶೇಷ ಎಂದರೆ ಅಲ್ಲಿದ್ದುದು ಬಹುತೇಕ ಕಪಲ್‌ಗಳೇ. ಹೀಗೆ ಬಾಯ್-ಫ್ರೆಂಡ್ ಗಳೆ ತಮ್ಮ ಗರ್ಲ್ -ಫ್ರೆಂಡ್‌ಗಳ ಜೊತೆ ಪಾರ್ಟಿ ಶುರು ಮಾಡಿದರು. ಮೋಜು ಮಸ್ತಿ ಎಲ್ಲ ನಡೆಯಿತು.
ಕೊನೆಗೆ ಎಲ್ಲರೂ ಏನಾದರೂ ಆಟ ಆಡೋಣ ಅಂದರು. ಸರಿ ಯಾವ ಆಟ ಆಡೋಣ ಅಂತ ಯೋಚನೆ ಮಾಡಿದಾಗ, ಗರ್ಲ್ ಫ್ರೆಂಡ್‌ಗಳೇ ಇರದಿದ್ದ ಸೋಮು ಒಂದು ರೀತಿಯ ಕಣ್ಣಾಮುಚ್ಚಾಲೆ ಆಟ ಆಡೋಣ ಅಂತ ಹೇಳಿದ. ಸರಿ ಅಂತ ಎಲ್ಲರೂ ಒಪ್ಪಿದರು. ಅದರ ಪ್ರಕಾರ ಎಲ್ಲರೂ ತಮ್ಮ ತುಟಿ ಮಾತ್ರ ಕಾಣುವಂತೆ ಬಿಟ್ಟು ದೇಹದ ಉಳಿದೆಲ್ಲ ಭಾಗಗಳಿಗೂ ಬಟ್ಟೆ ಸುತ್ತಿಕೊಂಡು ಬರಬೇಕು.
ಪ್ರತಿ ಹುಡುಗಿಯರೂ ಕೇವಲ ತುಟಿಗಳನ್ನು ನೋಡಿ ಅದು ಯಾರು ಅಂತ ಕಂಡುಹಿಡಿಯಬೇಕು ಅನ್ನೋದು ಆಟ. ಸರಿ ಆಟ ಶುರುವಾಯ್ತು. ಎಲ್ಲ ಹುಡುಗಿಯರೂ ತುಟಿಗಳನ್ನು ನೋಡಿ ಹೆಸರು ಗಳನ್ನು ಹೇಳಿದರು. ಅದನ್ನು ಕೇಳಿ ಸೋಮು ಎದ್ದು ಗಾಬರಿಯಾಗಿ ಹೊರಗೆ ಬಂದ. ಅದೇ ಸಮಯಕ್ಕೆ ಖೇಮು ಊರಿಂದ ವಾಪಸ್ ಬಂದ. ಏನೋ ಪಾರ್ಟಿ ಮುಗೀತಾ? ಅಂತ ಕೇಳಿದ.
ಅದಕ್ಕೆ ಸೋಮು, ‘ಪಾರ್ಟಿ ಮುಗೀತು. ಆದರೆ ಈಗ ನೀನು ಇಲ್ಲೇ ಇದ್ದರೆ ನಿನ್ನ ಕತೆ ಮುಗಿಯುತ್ತೆ’ ಅಂದ. ‘ಯಾಕೋ?’ ಅಂತ ಖೇಮು ಕೇಳಿದ್ದಕ್ಕೆ ಸೋಮು ಹೇಳಿದ ‘ಹೀಗೀಗೆ ಒಂದು ಆಟ ಆಡಿದಿವಿ. ಆದರೆ ಅದರಲ್ಲಿ ಏಳು ಜನ ಹುಡುಗೀರು ಯಾರ ತುಟಿ ಅಂತ ಕೇಳಿದಾಗ ನಿನ್ನ ಹೆಸರು ಹೇಳಿದರು. ಈಗ ಅವರ ಬಾಯ್ -ಫ್ರೆಂಡ್‌ಗಳೆಲ್ಲಾ ನಿನ್ನ ಹುಡುಕ್ತಾ ಇದಾರೆ’
ಲೈನ್ ಮ್ಯಾನ್
ಭೂಮಿ ಒಬ್ಬರ ಹೆಸರಿನಿಂದ ಇನ್ನೊಬ್ಬರ ಹೆಸರಿಗೆ ಟ್ರಾನ್ಸ್ʼಫರ್ ಆಗುತ್ತಿರುತ್ತೆ.
- ಹೌದು, ಬದಲಾವಣೆ ‘ಜಾಗದ’ ನಿಯಮ
ಎಫ್ ಎಂ ರೇಡಿಯೋಗಳ ಮಧ್ಯಾಹ್ನದ ಶೋಗೊಂದು ಹೆಸರು
- ‘ಹಾಡು’ ಹಗಲು
ಮುಂಗಾರು ಮಳೆ ಪಾರ್ಟ್ 3 ಸಿನಿಮಾ ಬಂದ್ರೆ
- ಮಳೆಯೊಂದು ಮೂರು ಭಾಗಗಳು.
ಮಳೆಯ ಬಗೆಗಿನ ಸಿನಿಮಾಗಳನ್ನು ಕಲೆಕ್ಟ್ ಮಾಡಿಟ್ಟುಕೊಂಡರೆ ಅದು
- ಮಳೆನೀರು ಸಂಗ್ರಹ
ವಿನಾಶಿನಿ ಅನ್ನೋ ಸಿನಿಮಾ ಫ್ಲಾಪ್ ಆದ್ರೆ
- ಅಯ್ಯೋ ಪಾಪ...ವಿನಾಶಿನಿ
ಪ್ರಪಂಚದಲ್ಲಿ ಎಲ್ಲಕ್ಕಿಂತ ಸಮಾಜಮುಖಿ ಆಟ ಯಾವುದು?
- ಟೆನ್ನಿಸ್, ಯಾಕಂದ್ರೆ ಅವು ‘ಲವ್ ಆಲ್’ ಅಂತಾನೇ ಆಟ ಶುರು ಮಾಡ್ತಾರೆ.
ನಮಗೆ ಮೋಜಿನ ಆಟಗಳು ಗೊತ್ತು. ಆದ್ರೆ ಮೇಜಿನ ಆಟ?
- ಟೇಬಲ್ ಟೆನ್ನಿಸ್
ಕೇಜ್ರಿವಾಲ್ ಇನ್‌ಡೈರೆಕ್ಟ್ ಆಗಿ ಯಾರಿಗಾದ್ರೂ ಬೈದ್ರೆ ಅದು
- ‘ಮಫ್ಲರ್’ ಸುತ್ಕಂಡ್ ಹೊಡೆದಂಗೆ.
ಜಿಯೋ ಸಿಮ್ ಬಗ್ಗೆ ಸಲ್ಮಾನ್ ಖಾನ್, ಧೋನಿ ತಮ್ಮ ರಿವೈಟಲ್ ಟ್ಯಾಬ್ಲೆಟ್ ಜಾಹೀರಾತಿನ ಶೈಲಿಯಲ್ಲಿ ಏನು ಹೇಳುತ್ತಾರೆ?
- ಜಿಯೋ 4ಜಿ ಭರ್ ಕೇ