Roopa Gururaj Column: ಲೇಡಿ ಮೆಹರ್ʼಬಾಯಿ ಟಾಟಾ ಮತ್ತು ಜುಬಿಲಿ ವಜ್ರ
ಇದು ಕೇವಲ ಒಂದು ವಜ್ರದ ಕಥೆಯಲ್ಲ; ಆ ವಜ್ರದ ಹೊಳಪನ್ನು ಮೀರಿಸಿದ ಭಾರತೀಯ ನಾರಿ ಯೊಬ್ಬರ ವಿಶಾಲ ಹೃದಯದ ಕಥೆ. ಮೆಹರ್‌ಬಾಯಿ ಅವರು ಭಾರತದ ಕೈಗಾರಿಕಾ ಪಿತಾಮಹ ಜಮ್ಸಡ್ಜಿ ಟಾಟಾ ಅವರ ಹಿರಿಯ ಸೊಸೆ ಹಾಗೂ ಸರ್ ದೊರಾಬ್ಜಿ ಟಾಟಾ ಅವರ ಧರ್ಮಪತ್ನಿ. ಮೆಹರ್‌ಬಾಯಿ ಅವರು ಕೇವಲ ಸುಂದರಿಯಷ್ಟೇ ಅಲ್ಲ, ಅತ್ಯಂತ ವಿದ್ಯಾವಂತ ಹಾಗೂ ಸಮಾಜ ಸೇವಕಿಯಾಗಿದ್ದರು.
-
ಒಂದೊಳ್ಳೆ ಮಾತು
ಭಾರತದ ಕೈಗಾರಿಕಾ ಇತಿಹಾಸದಲ್ಲಿ ‘ಟಾಟಾ’ ಸಂಸ್ಥೆಯ ಹೆಸರು ಎಷ್ಟು ಪ್ರಮುಖವೋ, ದೇಶದ ಜನರ ಕಷ್ಟಕ್ಕೆ ಹೆಗಲು ಕೊಡುವ ಅವರ ಲೋಕೋಪಕಾರಿ ಗುಣವೂ ಅಷ್ಟೇ ಪ್ರಸಿದ್ಧ. ಈ ಉದಾತ್ತ ಪರಂಪರೆಯ ಹಿಂದೆ ಕೇವಲ ಪುರುಷರ ಶ್ರಮ ಮಾತ್ರವಿರಲಿಲ್ಲ, ಅದಕ್ಕೆ ಅಡಿಪಾಯ ಹಾಕಿದ ಕರುಣಾಮಯಿ ಮಹಿಳೆಯರ ತ್ಯಾಗವೂ ಇತ್ತು. ಅಂತಹ ಒಂದು ಅಪರೂಪದ, ಕಣ್ಣೀರು ತರಿಸುವ ಮತ್ತು ಪ್ರೇರಣೆ ನೀಡುವ ಭಾವುಕ ಕಥೆಯೇ ಲೇಡಿ ಮೆಹರ್‌ಬಾಯಿ ಟಾಟಾ ಅವರ ಜೀವನ ಗಾಥೆ.
ಇದು ಕೇವಲ ಒಂದು ವಜ್ರದ ಕಥೆಯಲ್ಲ; ಆ ವಜ್ರದ ಹೊಳಪನ್ನು ಮೀರಿಸಿದ ಭಾರತೀಯ ನಾರಿ ಯೊಬ್ಬರ ವಿಶಾಲ ಹೃದಯದ ಕಥೆ. ಮೆಹರ್‌ಬಾಯಿ ಅವರು ಭಾರತದ ಕೈಗಾರಿಕಾ ಪಿತಾಮಹ ಜಮ್ಸಡ್ಜಿ ಟಾಟಾ ಅವರ ಹಿರಿಯ ಸೊಸೆ ಹಾಗೂ ಸರ್ ದೊರಾಬ್ಜಿ ಟಾಟಾ ಅವರ ಧರ್ಮಪತ್ನಿ. ಮೆಹರ್‌ಬಾಯಿ ಅವರು ಕೇವಲ ಸುಂದರಿಯಷ್ಟೇ ಅಲ್ಲ, ಅತ್ಯಂತ ವಿದ್ಯಾವಂತ ಹಾಗೂ ಸಮಾಜ ಸೇವಕಿಯಾಗಿದ್ದರು.
1900ರ ದಶಕದ ಆರಂಭದಲ್ಲಿ ಅವರ ಪತಿ ದೊರಾಬ್ಜಿ ಟಾಟಾ ಅವರು ಮೆಹರ್‌ಬಾಯಿ ಅವರಿಗೆ ಜಗತ್ತಿನ ಅತ್ಯಂತ ಅಪರೂಪದ ವಜ್ರವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅದುವೇ ‘ಜುಬಿಲಿ ಡೈಮಂಡ್’ ಸುಮಾರು 245 ಕ್ಯಾರೆಟ್ ತೂಕದ ಈ ವಜ್ರವು ಜಗತ್ಪ್ರಸಿದ್ಧ ‘ಕೊಹಿನೂರ್’ ವಜ್ರಕ್ಕಿಂತಲೂ ದುಪ್ಪಟ್ಟು ದೊಡ್ಡದಾಗಿತ್ತು.
ಇದನ್ನೂ ಓದಿ: Roopa Gururaj Column: ಆರ್.ಕೆ.ನಾರಾಯಣರ ಮಾಲ್ಗುಡಿ ಡೇಸ್ ಹುಟ್ಟಿದ ಕಥೆ
ಯಾವುದೇ ಸಭೆ-ಸಮಾರಂಭಗಳಿಗೆ ಹೋದಾಗ ಮೆಹರ್‌ಬಾಯಿ ಅವರು ಈ ಭವ್ಯವಾದ ವಜ್ರದ ಹಾರವನ್ನು ಧರಿಸುತ್ತಿದ್ದರು. ಅದು ಅವರ ಸೌಂದರ್ಯಕ್ಕೆ ಮತ್ತು ಟಾಟಾ ಸಾಮ್ರಾಜ್ಯದ ವೈಭವಕ್ಕೆ ಹಿಡಿದ ಕನ್ನಡಿಯಾಗಿತ್ತು. ಕಾಲ ಉರುಳಿತು. 1920ರ ದಶಕದಲ್ಲಿ ಮೊದಲ ಮಹಾಯುದ್ಧ ಮುಗಿದ ನಂತರ, ಭಾರತದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಯಿತು.
ಟಾಟಾ ಸಂಸ್ಥೆಯ ಹೆಮ್ಮೆಯ ಉದ್ಯಮವಾದ ‘ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿ’ (TISCO - ಇಂದಿನ ಟಾಟಾ ಸ್ಟೀಲ್) ಭಾರಿ ನಷ್ಟವನ್ನು ಅನುಭವಿಸಿತು. ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ, ಕಂಪನಿಯ ಸಾವಿರಾರು ಕಾರ್ಮಿಕರಿಗೆ ಸಂಬಳ ನೀಡಲು ಕೂಡ ಹಣವಿರಲಿಲ್ಲ. ಬ್ಯಾಂಕುಗಳು ಸಾಲ ನೀಡಲು ನಿರಾಕರಿಸುತ್ತಿದ್ದವು.
ಇಡೀ ಟಾಟಾ ಸಾಮ್ರಾಜ್ಯವೇ ಮುಳುಗುವ ಭೀತಿಯಲ್ಲಿತ್ತು. ಈ ಸಂಕಷ್ಟದ ಸಮಯದಲ್ಲಿ ಲೇಡಿ ಮೆಹರ್‌ಬಾಯಿ ಅವರು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಪತಿಯ ಅಸಹಾಯಕತೆಯನ್ನು ಕಂಡ ಅವರು, ತಮಗಿಷ್ಟವಾದ ಇಡೀ ಜಗತ್ತೇ ಬೆರಗಾಗುತ್ತಿದ್ದ ಆ 245 ಕ್ಯಾರೆಟ್‌ನ ಜುಬಿಲಿ ವಜ್ರ ಸೇರಿದಂತೆ ತಮ್ಮ ಬಳಿಯಿದ್ದ ಎಲ್ಲ ವೈಯಕ್ತಿಕ ಆಭರಣಗಳನ್ನು ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಅಡವಿಡಲು ಮುಂದಾದರು.
ನನ್ನ ಆಭರಣಗಳಿಗಿಂತ ನನ್ನ ದೇಶದ ಉದ್ಯಮ ಮತ್ತು ನಮ್ಮನ್ನು ನಂಬಿದ ಕಾರ್ಮಿಕರ ಹೊಟ್ಟೆ ಮುಖ್ಯ ಎಂಬುದು ಅವರ ಉದಾತ್ತ ಚಿಂತನೆಯಾಗಿತ್ತು. ಆ ಒಡವೆಗಳನ್ನು ಅಡವಿಟ್ಟು ತಂದ ಹಣದಿಂದ ಕಂಪನಿಯು ಚೇತರಿಸಿಕೊಂಡಿತು, ಕಾರ್ಮಿಕರ ಸಂಬಳ ಪಾವತಿಯಾಯಿತು. ದೇಶದ ಅತಿ ದೊಡ್ಡ ಉದ್ಯಮವೊಂದು ಮುಚ್ಚಿಹೋಗ ದಂತೆ ಒಬ್ಬ ಮಹಿಳೆಯ ತ್ಯಾಗ ಅಂದು ಕಾಪಾಡಿತ್ತು.
ಟಾಟಾ ಕಂಪನಿಯೇನೋ ಬದುಕಿತು, ಆದರೆ ದುರದೃಷ್ಟವಶಾತ್ ಮೆಹರ್‌ಬಾಯಿ ಅವರ ಆಯುಷ್ಯ ಮುಗಿಯುತ್ತಾ ಬಂದಿತ್ತು. 1930ರ ದಶಕದ ಆರಂಭದಲ್ಲಿ ಅವರಿಗೆ ಲ್ಯುಕೇಮಿಯಾ ಕಾಯಿಲೆ ಇರುವುದು ಪತ್ತೆಯಾಯಿತು. ಅಂದು ಭಾರತದಲ್ಲಿ ಕ್ಯಾನ್ಸರ್‌ಗೆ ಯಾವುದೇ ಸೂಕ್ತ ಚಿಕಿತ್ಸೆ ಇರಲಿಲ್ಲ. ತೀವ್ರವಾಗಿ ಬಳಲಿದ ಮೆಹರ್‌ಬಾಯಿ ಅವರು 1931ರಲ್ಲಿ, ತಮ್ಮ 52ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಪತ್ನಿಯ ಅಗಲಿಕೆಯಿಂದ ಸರ್ ದೊರಾಬ್ಜಿ ಟಾಟಾ ಅವರು ಸಂಪೂರ್ಣವಾಗಿ ಜರ್ಜರಿತ ರಾದರು. ತನ್ನ ಹೆಂಡತಿಯನ್ನು ಬಲಿಪಡೆದ ಈ ಭೀಕರ ಕಾಯಿಲೆ ಭಾರತದ ಇನ್ಯಾವ ನಾಗರಿಕರಿಗೂ ಬರಬಾರದು, ಬಂದರೆ ಅವರಿಗೆ ದೇಶದ ಉತ್ತಮ ಚಿಕಿತ್ಸೆ ಸಿಗಬೇಕು ಎಂದು ಅವರು ನಿರ್ಧರಿಸಿದರು. ಅದಕ್ಕಾಗಿ ದೊರಾಬ್ಜಿ ಅವರು ತಮ್ಮ ಪತ್ನಿಯ ಪ್ರೀತಿಯ ಸಂಕೇತವಾಗಿದ್ದ ಆ ಜುಬಿಲಿ ವಜ್ರ ಮತ್ತು ಇತರ ಎಲ್ಲ ಒಡವೆಗಳನ್ನು ಜಗತ್ತಿನ ಮಾರುಕಟ್ಟೆಯಲ್ಲಿ ಮಾರಿ ಕೋಟ್ಯಂತರ ರುಪಾಯಿ ಹಣವನ್ನು ಸಂಗ್ರಹಿಸಿದರು.
ಆ ಒಡವೆಗಳನ್ನು ಮಾರಿದ ಹಣದಿಂದ ದೊರಾಬ್ಜಿ ಟಾಟಾ ಅವರು ಕ್ಯಾನ್ಸರ್ ಸಂಶೋಧನೆ ಮತ್ತು ಚಿಕಿತ್ಸೆಗಾಗಿ ಒಂದು ಬೃಹತ್ ನಿಧಿಯನ್ನು ಸ್ಥಾಪಿಸಿದರು. ಇದೇ ಮುಂದೆ ಮುಂಬೈನಲ್ಲಿ ಲಕ್ಷಾಂತರ ಬಡ ಕ್ಯಾನ್ಸರ್ ರೋಗಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಮರುಜೀವ ನೀಡುತ್ತಿರುವ ಜಗತ್ಪ್ರಸಿದ್ಧ ‘ಟಾಟಾ ಮೆಮೋರಿಯಲ್ ಆಸ್ಪತ್ರೆ’ಯಾಗಿ ರೂಪಾಂತರಗೊಂಡಿತು.
ತಮ್ಮ ಸಾವಿಗೂ ಮುನ್ನ (1932ರಲ್ಲಿ) ದೊರಾಬ್ಜಿ ಅವರು ತಮ್ಮ ಇಡೀ ಆಸ್ತಿಯನ್ನು ಸೇರಿಸಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಅನ್ನು ಸ್ಥಾಪಿಸಿದರು. ಇದು ಇಂದಿಗೂ ಭಾರತದ ಅತ್ಯಂತ ದೊಡ್ಡ ಲೋಕೋಪಕಾರಿ ಟ್ರಸ್ಟ್ ಆಗಿದೆ. ಒಂದು ವಜ್ರದ ಹಾರ ಕೇವಲ ಆಡಂಬರದ ವಸ್ತುವಾಗಿ ಉಳಿಯದೆ, ಒಂದು ದೇಶದ ಉದ್ಯಮವನ್ನು ಬದುಕಿಸಿತು ಮತ್ತು ಇಂದಿಗೂ ಕೋಟ್ಯಂತರ ಜನರ ಜೀವ ಉಳಿಸು ತ್ತಿರುವ ಆಸ್ಪತ್ರೆಯಾಗಿ ಮಾರ್ಪಟ್ಟಿತು. ಮೆಹರ್‌ಬಾಯಿ ಅವರ ತ್ಯಾಗ ಮತ್ತು ಅವರ ಪತಿಯ ಅಮರ ಪ್ರೇಮದ ಸಂಕೇತವಾಗಿ ಈ ಕಥೆ ಇತಿಹಾಸದಲ್ಲಿ ಸದಾ ಹೊಳೆಯುತ್ತಿರುತ್ತದೆ.