ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಮಹಿಳೆಯರ ಮುಟ್ಟಿನ ಸ್ಥಿತಿ ಈಗ ಇನ್ನೂ ಅಯೋಮಯ

ಆರಂಭದಲ್ಲಿ ನಗೆಪಾಟಲಿಗೆ ಈಡಾದರೂ, ತಮ್ಮ ಪ್ರಯತ್ನ ಬಿಡದೆ ಮಹಿಳೆಯರ ಮನವೊಲಿಸುತ್ತ ಕಡಿಮೆ ಬೆಲೆಯ, ಸುರಕ್ಷತೆ ದೃಷ್ಟಿಯಿಂದ ಉತ್ತಮವಾದ ಪ್ಯಾಡುಗಳನ್ನು ಮಾರುವಲ್ಲಿ ಯಶಸ್ವಿ ಯಾಗುತ್ತಾರೆ. ಮುಂದೆ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರದ ಸಂಶೋಧಕರಾಗಿ ಹೊರಹೊಮ್ಮುತ್ತಾರೆ ಮತ್ತು ಗ್ರಾಮೀಣ ಭಾರತದಲ್ಲಿ ಮುಟ್ಟಿನ ವಿಚಾರವಾಗಿ ಸಾಂಪ್ರದಾಯಿಕವಾದ, ಅಶುದ್ಧವಾದ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಲು ತಳಮಟ್ಟದ ಕಾರ್ಯ ವಿಧಾನಗಳನ್ನು ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಗಂಟಾಘೋಷ

ಮಹಿಳೆಯರ ಮಾಸಿಕ ಸಮಸ್ಯೆ ಮತ್ತು ಸ್ವಚ್ಛತೆ ಕುರಿತಂತೆ ಜಾಗೃತಿ ಏನೋ ಮೂಡುತ್ತಿದೆ. ಆದರೆ ಅವಧಿಪೂರ್ವ ಋತುಮತಿ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಯಂದಿ ರಲ್ಲಿ ಆತಂಕ ಮೂಡಿದೆ. ಅಪ್ರಾಪ್ತ ವಯಸ್ಸಿನಲ್ಲಿ ಪ್ರೌಢರಾಗುತ್ತಿರುವವರ ದೈಹಿಕ ಬದಲಾವಣೆಗೆ ವೈದ್ಯಕೀಯ ಕಾರಣ-ಪರಿಹಾರಗಳನ್ನು ಹುಡುಕಬೇಕಿದೆ.

ಮಹಿಳೆಯರ ಆರೋಗ್ಯ ಸುರಕ್ಷೆ ಮತ್ತು ಸ್ವಚ್ಛತೆಯ ವಿಚಾರ ಬಂದಾಗ, ಪ್ರತಿಯೊಬ್ಬರ ಮನಃ ಪಟಲದಲ್ಲಿ 2018ರ ಹಿಂದಿಯ ಪ್ಯಾಡ್ ಮ್ಯಾನ್ ಸಿನಿಮಾ ನೆನಪಾಗುತ್ತದೆ. ತಮಿಳುನಾಡಿನ ಕೊಯ ಮತ್ತೂರು ನಿವಾಸಿಯಾದ ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಅರುಣಾಚಲಂ ಮುರುಗನಾಥನ್ ಅವರ ನಿಜ ಜೀವನದ ವೃತ್ತಾಂತ ಆಧರಿಸಿ ಈ ಸಿನಿಮಾ ಮಾಡಲಾಗಿತ್ತು.

ಮಹಿಳೆಯರ ಖಾಸಗಿ ಸುರಕ್ಷತೆ ಬಗ್ಗೆ ಕಾಳಜಿ ತೋರುವುದಿರಲಿ, ಆ ಕುರಿತು ಮಾತನಾಡುವುದೇ ಅಪರಾಧ ಎಂಬ ಮನಸ್ಥಿತಿ ನಮ್ಮ ಸಮಾಜದಲ್ಲಿತ್ತು. ಈಗಲೂ ಕೆಲವೆಡೆ ಮಾಸಿಕ ಮುಟ್ಟು ಕುರಿತು ಮಾತಾಡುವುದು, ಅದರ ಸುರಕ್ಷೆ ಬಗ್ಗೆ ಅರಿವು ಮೂಡಿಸುವುದಕ್ಕೂ ನಿರ್ಬಂಧಿಸಲಾಗಿದೆಯೇನೋ ಎಂಬಂತೆ ನಡೆದುಕೊಳ್ಳಲಾಗುತ್ತಿದೆ.

ಇಂತಹ ಸಂದಿಗ್ಧ ಪರಿಸ್ಥಿತಿ ಎದುರಿಸಿದ ಅರುಣಾಚಲಂ ಪತ್ನಿಯು, ತಮ್ಮ ಮಾಸಿಕ ವಿಚಾರದಲ್ಲಿ ಸ್ವಚ್ಛತೆ ಕಾಪಾಡದೆ ಕೆಲ ವೈರಲ್ ದೋಷದ ಕಾಯಿಲೆಗೆ ತುತ್ತಾಗುತ್ತಾರೆ. ಅಂದಿನ ಸ್ಯಾನಿಟರಿ ಪ್ಯಾಡ್ ಸಾಮಾನ್ಯ ಕುಟುಂಬದ ಮಹಿಳೆಯರಿಗೆ ದುಬಾರಿಯಾಗಿರುತ್ತವೆ. ಇದರಿಂದ ಆಘಾತಕ್ಕೊಳಗಾದ ಅರುಣಾಚಲಂ, ಸ್ವತಃ ಕಡಿಮೆ ಬೆಲೆಯ ಪ್ಯಾಡ್‌ಗಳನ್ನು ತಯಾರಿಸಿ ಕೊಡುವುದಲ್ಲದೆ, ಇತರೆ ಮಹಿಳೆಯರು ಇಂತಹ ಸಮಸ್ಯೆಗಳನ್ನು ಎದುರಿಸಬಾರದೆಂದು ಸುತ್ತಮುತ್ತಲಿನ ಹಳ್ಳಿಗಳಿಗೆ ಜಾಗೃತಿ ಮೂಡಿಸುತ್ತ, ಸ್ಯಾನಿಟರಿ ಪ್ಯಾಡುಗಳನ್ನು ಹಂಚಲು ಶುರು ಮಾಡುತ್ತಾರೆ, ಇದನ್ನೇ ಉದ್ಯಮವನ್ನಾ ಗಿಯೂ ಆರಂಭಿಸುತ್ತಾರೆ.

ಇದನ್ನೂ ಓದಿ: Gururaj Gantihole Column: ಕಾಂತಾರ- ನಂಬಿಕೆಗಳ ನಡುವೆ ಕ್ರಾಂತಿಯಲ್ಲವೇ ?

ಆರಂಭದಲ್ಲಿ ನಗೆಪಾಟಲಿಗೆ ಈಡಾದರೂ, ತಮ್ಮ ಪ್ರಯತ್ನ ಬಿಡದೆ ಮಹಿಳೆಯರ ಮನವೊಲಿಸುತ್ತ ಕಡಿಮೆ ಬೆಲೆಯ, ಸುರಕ್ಷತೆ ದೃಷ್ಟಿಯಿಂದ ಉತ್ತಮವಾದ ಪ್ಯಾಡುಗಳನ್ನು ಮಾರುವಲ್ಲಿ ಯಶಸ್ವಿ ಯಾಗುತ್ತಾರೆ. ಮುಂದೆ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರದ ಸಂಶೋಧಕ ರಾಗಿ ಹೊರಹೊಮ್ಮುತ್ತಾರೆ ಮತ್ತು ಗ್ರಾಮೀಣ ಭಾರತದಲ್ಲಿ ಮುಟ್ಟಿನ ವಿಚಾರವಾಗಿ ಸಾಂಪ್ರದಾಯಿಕವಾದ, ಅಶುದ್ಧವಾದ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಲು ತಳಮಟ್ಟದ ಕಾರ್ಯ ವಿಧಾನಗಳನ್ನು ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ವಾಣಿಜ್ಯ ಪ್ಯಾಡ್‌ಗಳ ವೆಚ್ಚದ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್‌ ಗಳನ್ನು ತಯಾರಿಸಬಹುದಾದ ಮಿನಿ ಯಂತ್ರಗಳನ್ನು ಭಾರತದ 28 ರಾಜ್ಯಗಳಲ್ಲಿ 23 ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಈ ಯಂತ್ರಗಳ ಉತ್ಪಾದನೆಯನ್ನು 106 ರಾಷ್ಟ್ರಗಳಿಗೆ ವಿಸ್ತರಿಸಲು ಯೋಜಿಸುತ್ತಿದ್ದಾರೆ.

ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್ ಚಲನಚಿತ್ರವು 2018ರ ಅತ್ಯುತ್ತಮ ಸಾಕ್ಷ್ಯಚಿತ್ರ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಕ್ಷಯಕುಮಾರ್ ನಟಿಸಿದ 2018ರ ಹಿಂದಿ ಚಲನಚಿತ್ರ ಪ್ಯಾಡ್‌ ಮ್ಯಾನ್ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿತು.

ಟೈಮ್ ನಿಯತಕಾಲಿಕೆಯು 2014ರಲ್ಲಿ, ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಅರುಣಾಚಲಂ ಮುರುಗನಾಥನ್ ಕೂಡ ಸೇರಿಸಲ್ಪಟ್ಟರು. 2016ರಲ್ಲಿ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇಷ್ಟಿದ್ದರೂ ನಮ್ಮ ಗ್ರಾಮೀಣ ಪ್ರದೇಶದ ಸಹೋದರಿ ಯರಿಗೆ ಇನ್ನೂ ಹೆಚ್ಚಿನ ಜಾಗೃತಿ, ಸೌಲಭ್ಯಗಳ ತಲುಪಿಸುವ ಅಗತ್ಯವಿದೆ. ‌

ಇಂದಿನ ಪೀಳಿಗೆ ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದರೂ, ಹಿರಿಯರ ಕೆಲ ನಿರ್ಬಂಧಗಳು, ಕಟ್ಟುಪಾಡುಗಳು ಇಂದಿನವರನ್ನು ಕಟ್ಟಿಹಾಕಿದಂತೆ ಭಾಸವಾಗುತ್ತವೆ. ತಮ್ಮ ಖಾಸಗಿ ವಿಚಾರಗಳನ್ನು ಮನೆಯಲ್ಲಿ ಹೇಳಿಕೊಳ್ಳದೇ ಇರುವುದರಿಂದಾಗಿ ಪರಸ್ಪರ ಸಹಾಯ, ಸಹಕಾರ, ಜಾಗೃತಿ ಮೂಡಬೇಕಾದಲ್ಲಿಯೇ ಸಂಪರ್ಕ ಸಂವಹನದ ಕೊರತೆ ಕಾಣುತ್ತಿರುತ್ತದೆ.

ಮಹಿಳೆ ನಮಗೆಲ್ಲ ತಾಯಿಯ ರೂಪದಲ್ಲಿ, ಹೆಂಡತಿ, ಸಹೋದರಿ, ಮಗಳಾಗಿ ನಮ್ಮ ಮನೆ-ಮನ, ಬದುಕಿನ ಅವಿಭಾಜ್ಯ ಅಂಗವಾಗಿ ನಿಂತಿzಳೆ. ಇಂತಹ ಶಕ್ತಿದಾತೆಗೆ ಪ್ರಕೃತಿಯು ವರವಾಗಿ ಕೊಟ್ಟಿರುವ ಮಾಸಿಕ ಮುಟ್ಟು ಎಂಬುದು ದೈಹಿಕ ಆರೋಗ್ಯ ಸಂಬಂಽತ ವಿಚಾರವಾಗಿದೆ. ರಜಸ್ವಲೆ ಅಥವಾ ಮುಟ್ಟಿನ ಚಕ್ರವು ಹಾರ್ಮೋನುಗಳ ಏರಿಕೆ ಮತ್ತು ಇಳಿಕೆಯಿಂದ ನಿರೂಪಿಸಲ್ಪಟ್ಟಿದ್ದು, ಪ್ರೊಜೆಸ್ಟ ರಾನ್ ಮಟ್ಟ ಕಡಿಮೆಯಾಗುವುದರಿಂದ ಮುಟ್ಟು ಉಂಟಾಗುತ್ತದೆ ಮತ್ತು ಮುಟ್ಟಾಗುವುದು ಗರ್ಭ ಧಾರಣೆಯಾಗಿಲ್ಲ ಎಂಬುದರ ಸಂಕೇತವಾಗಿದೆ.

ಸಾಮಾನ್ಯವಾಗಿ, 11 ರಿಂದ 13ನೇ ವರ್ಷ ವಯಸ್ಸಿನ ನಡುವೆ ಪ್ರೌಢಾವಸ್ಥೆಯಲ್ಲಿ ಮುಟ್ಟು ಪ್ರಾರಂಭ ವಾಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸರಾಸರಿ ವಯಸ್ಸಿಗಿಂತ ಮೊದಲೇ ಕಂಡುಬರು ತ್ತಿದ್ದು, ಈ ಲಕ್ಷಣವೀಗ ಭಾರತದಲ್ಲೂ ಗೋಚರಿಸುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳಲ್ಲೂ ಬೇಗ ಋತುಮತಿಯಾಗುತ್ತಿರುವ ಸಂದರ್ಭಗಳು ಹೆಚ್ಚು ಕಂಡುಬರುತ್ತಿವೆ. ಒಂದು ಮುಟ್ಟಿನ ಮೊದಲ ದಿನ ಮತ್ತು ನಂತರದಲ್ಲಿ ಬರುವ ಮುಟ್ಟಿನ ಮೊದಲ ದಿನದ ನಡುವಿನ ಅವಧಿಯನ್ನು ಮಾಸಿಕವೆಂದೂ ಕರೆಯಲಾಗುತ್ತಿದ್ದು, ದೊಡ್ಡಮಟ್ಟದಲ್ಲಿ ಅಧ್ಯಯನ ನಡೆಸಿ, ಸರಾಸರಿ ಋತು ಚಕ್ರದ ಅವಧಿಯು 29.3 ದಿನಗಳು ಎಂದು ದಾಖಲಿಸಲಾಗಿದ್ದು, ಸಾರ್ವತ್ರಿಕವಾಗಿ 28 ದಿನಗಳ ಲೆಕ್ಕ ಹಾಕಲಾಗುತ್ತದೆ.

ಬಹುತೇಕ ಶೇ.80ರಷ್ಟು ಮಹಿಳೆಯರು ಮುಟ್ಟಿನ ಸಮಯದಲ್ಲಿ ಅಥವಾ ಮುಟ್ಟಿನ ಹಿಂದಿನ ದಿನಗಳಲ್ಲಿ ದಿನನಿತ್ಯ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವಷ್ಟು ಸಮಸ್ಯೆಗಳನ್ನು ಎದುರಿಸ ದಿರುವುದು ಸಮಾಧಾನ ತರುವ ವಿಷಯವಾಗಿದೆ. ಮುಟ್ಟಿನ ಮೊದಲು ಬರುವ ನೋವಿನಂಥ ಲಕ್ಷಣಗಳನ್ನು Pre Menstrual Syndrome (PMS) ಎಂದು ಕರೆಯಲಾಗುತ್ತದೆ. ಸುಮಾರು 20% ರಿಂದ 30% ಮಹಿಳೆಯರು ಈ ಸಮಸ್ಯೆಗಳನ್ನು ಎದುರಿಸುತ್ತಾರೆ.

ಅದರಲ್ಲೂ 3% ರಿಂದ 8%ರಷ್ಟು ಜನರು ಮೊಡವೆಗಳು, ವಿಪರೀತ ದಣಿದ ಭಾವನೆ, ಕಿರಿಕಿರಿ ಮತ್ತು ಮನಸ್ಥಿತಿ ಬದಲಾವಣೆಯಂತಹ ತೀವ್ರ ಲಕ್ಷಣಗಳನ್ನು ಅನುಭವಿಸುತ್ತಾರೆ. ಕೆಲವರಿಗೆ ಕೋಪ ಬಂದು ಕಾರಣವಿಲ್ಲದೆ ಜಗಳ ಮಾಡುವ ಸ್ಥಿತಿ ಉಂಟಾದರೆ, ಇನ್ನೂ ಕೆಲವರು ಹೊಟ್ಟೆಯ ನೋವು ತಾಳಲಾರದೆ ಆತ್ಮಹತ್ಯೆಗೂ ಪ್ರಯತ್ನಿಸಿದ ಉದಾಹರಣೆಗಳಿವೆ.

ಆರೋಗ್ಯ ಸೂಕ್ಷ್ಮತೆಗಳನ್ನು ಪ್ರತಿಮನೆಯ ಸದಸ್ಯರು ಮೌನದ ಕಂದಕವನ್ನು ತೊಡೆದು ಹಾಕಿ ಮನೆಮಕ್ಕಳ, ಮನೆಗೆ ಬಂದ ಸೊಸೆಯಂದಿರ ಜೊತೆಗೆ ಆಪ್ತತೆಯಿಂದ ಮಾತಾನಾಡಿ, ಅವರ ದೈಹಿಕ, ಮಾನಸಿಕ ಆರೋಗ್ಯ ಸ್ಥಿತಿಯನ್ನು ಅರಿಯುವುದು ಇಂದಿನ ಆರೋಗ್ಯ ಸೂಕ್ಷ್ಮಕಾಲದಲ್ಲಿ ಅತಿ ಅಗತ್ಯವಾಗಿದೆ.

ಬಹುತೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವ ಅನುಭವಿಸುತ್ತಾರೆ ಮತ್ತು ಮುಟ್ಟಿನ ಚಕ್ರದ ಯಾವುದೇ ಸಮಯದಲ್ಲಿ ಅಸಹಜ ಆರೋಗ್ಯ ವಿಪತ್ತುಗಳನ್ನು ತಂದೊಡ್ಡ ಬಲ್ಲದ್ದಾಗಿದೆ. 15ನೇ ವಯಸ್ಸಿನಲ್ಲಿ ಮುಟ್ಟು ಸಂಭವಿಸದಿದ್ದಾಗ ಮತ್ತು 90 ದಿನಗಳಲ್ಲಿ ಮತ್ತೆ ಸಂಭವಿಸದಿದ್ದಾಗ ಮುಟ್ಟಿನ ಕೊರತೆ ಎನ್ನಲಾಗುತ್ತಿದ್ದು, ಇದನ್ನು ಅಮೆನೋರಿಯಾ ಎನ್ನಲಾಗುತ್ತದೆ.

ಮುಟ್ಟು ಇಲ್ಲದ ಒಂದು ವರ್ಷ ಮತ್ತು 45 ರಿಂದ 55 ವರ್ಷಗಳ ಅವಧಿಯನ್ನು ಋತುಬಂಧ ಎಂದು ಕರೆಯಲಾಗುತ್ತಿದ್ದು, ಇದು ವೈದ್ಯಕೀಯ ವ್ಯಾಖ್ಯಾನವಾಗಿದೆ. ಋತುಬಂಧಕ್ಕೆ ಕಾರಣ ವಾಗುವ ಪರಿವರ್ತನೆಯ ಹಂತ, ಹಾರ್ಮೋನುಗಳ ಬದಲಾವಣೆಗಳು ಮತ್ತು ಅನಿಯಮಿತ ಮುಟ್ಟಿನ ಚಕ್ರಗಳಿಂದ ಕೂಡಿದ್ದು, ಮಹಿಳೆಯು ಮುಟ್ಟನ್ನು ಸಂಪೂರ್ಣವಾಗಿ ನಿಲ್ಲಿಸಿದಾಗ, ಮುಂದೆ ಮಕ್ಕಳಾಗದಿರುವ ಈ ಹಂತವನ್ನು ಪೆರಿಮೆನೋಪಾಸ್ ಎಂದು ಕರೆಯುತ್ತಾರೆ.

ಮುಟ್ಟಿನಲ್ಲಿ ದ್ರವವು ಮುಖ್ಯವಾಗಿ ನೀರು, ಸಾಮಾನ್ಯ ಎಲೆಕ್ಟ್ರೊಲೈಟ್, ಅಂಗಾಂಗ ಭಾಗಗಳು ಮತ್ತು ಗ್ಲೈಕೋಪ್ರೋಟೋನ್ ಸೇರಿದಂತೆ ಕನಿಷ್ಠ 14 ಪ್ರೋಟೋಗಳನ್ನು ಒಳಗೊಂಡಿರುತ್ತದೆ. ಎಂಡೋ ಮೆಟ್ರಿಯಲ್‌ನಲ್ಲಿರುವ ಪ್ಲಾಸ್ಮಿನ್ ಎಂಬ ಕಿಣ್ವವು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.

ಇದು ಮುಟ್ಟಿನ ಸಂದರ್ಭದಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತದೆ. ಮುಟ್ಟಿನ ನೋವು, ಸೆಳೆತ (ಡಿಸ್ಮೆನೋರಿಯಾ) ಅಥವಾ ಎಂಡೋಮೆಟ್ರಿಯೋಸಿಸ್‌ನಂತಹ ತೀವ್ರವಾದ ದುರ್ಬಲತೆ ಪ್ರಾಣಾಪಾಯಕ್ಕೆ ಎಡೆಮಾಡಿಕೊಡಬಲ್ಲದು.

Pre Menstrual Dysphoric Disorder (PMDD) ಎಂಬುದು ಇಂತಹ ಸಂದರ್ಭದಲ್ಲಿ ಉಂಟಾಗುವ ತೀವ್ರತರ ಮಾನಸಿಕ ಅಸ್ವಸ್ಥ ಲಕ್ಷಣಗಳನ್ನು ಹೊಂದಿದ್ದು, ಮಗುವನ್ನು ಹೆರುವ ವಯಸ್ಸಿನ ಶೇ.3ರಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರಬಲ್ಲದು. ಮುಟ್ಟಿನ ಸೆಳೆತಕ್ಕೆ ಸಾಮಾನ್ಯ ಚಿಕಿತ್ಸೆ ಯಾಗಿ *NonSteroid ಉರಿಯೂತದ ಔಷಧಿಗಳನ್ನು (NSAID) ಕೆಲವೊಮ್ಮೆ ಬಳಸಲಾಗುತ್ತದೆ.

ಇದೆಲ್ಲ ಒಂದು ಹಂತವಾದರೆ, ಪ್ರಸ್ತುತ ದಿನಗಳಲ್ಲಿ ಅತೀ ಚಿಕ್ಕ ವಯಸ್ಸಿನ ಬಾಲಕಿಯರಲ್ಲಿ ಋತುಮತಿಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು ಇದು ಇನ್ನೊಂದು ಹಂತದ ಮಹಿಳೆಯರ ಸಮಸ್ಯೆಯಾಗಿ ಪ್ರಾರಂಭವಾದಂತಿದೆ. ಬೆಳೆಯುತ್ತಿರುವ ಹೆಣ್ಣುಮಕ್ಕಳ ವಿಚಾರದಲ್ಲಿ ತಾಯಂದಿರಿಗೆ ಒಂದು ನಿಶ್ಚಿತ ವಯಸ್ಸನಲ್ಲಿ ಇದು ಘಟಿಸುತ್ತದೆ ಎಂಬ ಸಮಾಧಾನವಿರುತ್ತಿತ್ತು.

ಇಂದು, ಯಾವ ವಯಸ್ಸಲ್ಲಿ ನಮ್ಮ ಮಕ್ಕಳಿಗೆ ಮುಟ್ಟು ಕಂಡುಬಂದೀತು ಎಂಬ ಆತಂಕದಿಂದಲೇ ಇರುವಂತಾಗಿದೆ. ಬದಲಾದ ಆಹಾರ ಪದ್ಧತಿ, ನೈಸರ್ಗಿಕ ವಾತಾವರಣ, ಕುಟುಂಬದಲ್ಲಿನ ಒತ್ತಡ ಹಾಗೂ ಮಾನಸಿಕ ಆರೋಗ್ಯ ಮುಂತಾದ ಹಲವು ವಿಚಾರಗಳು ಸೇರಿಕೊಂಡು ಇತ್ತೀಚಿನ ಯುವತಿ ಯರಲ್ಲಿ ಸರಾಸರಿ ವಯಸ್ಸಿಗಿಂತ ಮೊದಲೇ ನಿಶ್ಚಿತ ಅವಧಿಪೂರ್ವ ಮುಟ್ಟಾಗುವಿಕೆ ಕಂಡು ಬರುತ್ತಿದೆ. ಈ ರೀತಿಯ ಬೆಳವಣಿಗೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಬಹುತೇಕ ನಿಸರ್ಗವೇ ಮುಟ್ಟಾಗುವ ವಯಸ್ಸಿನ ಮಿತಿಯನ್ನು ಕಡಿಮೆಗೊಳಿಸುತ್ತಿದೆಯೇ ಎಂಬಂತಹ ಅಭಿಪ್ರಾಯಗಳು ಕೇಳಿಬರುತ್ತಿವೆ.

ಅತಿ ಚಿಕ್ಕವಯಸ್ಸಿನ ಹೆಣ್ಣುಮಕ್ಕಳಿಗೆ ಮುಟ್ಟು ಆರಂಭವಾಗುತ್ತಿರುವುದು ಆಧುನಿಕ ಸಮಾಜದಲ್ಲಿ ಹೆಚ್ಚಾಗುತ್ತಿರುವ ಸಾಮಾನ್ಯ ಸಮಸ್ಯೆಯಾಗಿದ್ದು, ಇದಕ್ಕೆ ಹಲವು ಆಧಾರಗಳನ್ನು ನಾವು ಗುರುತಿಸ ಬಹುದು. ಸಾಮಾನ್ಯವಾಗಿ, ಹೆಣ್ಣುಮಕ್ಕಳಿಗೆ 12 ರಿಂದ 13 ವರ್ಷದ ಮಧ್ಯದಲ್ಲಿ ಮೊದಲ ಬಾರಿಗೆ ಮುಟ್ಟು ಆರಂಭವಾಗುತ್ತದೆ.

ಆದರೆ ಇತ್ತೀಚೆಗೆ ಕೆಲವೊಂದು ಹುಡುಗಿಯರಲ್ಲಿ 8 ವರ್ಷಕ್ಕೆ ಅಥವಾ ಅದರ ಹಿಂದೆ ಕೂಡ ಮುಟ್ಟು ಬರುತ್ತಿದೆ, ಇದನ್ನು ಪ್ರೌಢಾವಸ್ಥೆಯ ಅಕಾಲಿಕ ಆರಂಭ ( precocious puberty) ಎನ್ನುತ್ತಾರೆ. ಬಾಲಿಕೆಯರ ದೇಹದಲ್ಲಿ ಎಸ್ಟ್ರೋಜನ್, ಪ್ರೊಜೆಸ್ಟೆರೋನ್ ಹಾಗೂ ಇತರ ಲೈಂಗಿಕ ಹಾರ್ಮೋನು ಗಳು ಬೇಗನೆ ಹೊರಹೊಮ್ಮುವಾಗ ಮುಟ್ಟು ಆರಂಭವಾಗಬಹುದು.

ತಾಯಿಗೆ ಅಥವಾ ಕುಟುಂಬದ ಮಹಿಳೆಯರಿಗೆ ಬೇಗನೆ ಮುಟ್ಟು ಆಗಿದ್ದರೆ, ಮಗಳಿಗೆ ಕೂಡ ಇದು ಸಂಭವಿಸಬಹುದು. ವಿಪರೀತ ತೂಕವಿರುವ (Obesity) ಬಾಲಕಿಯರಲ್ಲಿ ಎಸ್ಟ್ರೋಜನ್ ಮಟ್ಟ ಹೆಚ್ಚಾಗುವುದರಿಂದಲೂ ಮುಟ್ಟು ಬೇಗ ಬರುತ್ತದೆ. ಸೂಕ್ತ ನಿದ್ರೆ ಇಲ್ಲದಿದ್ದರೂ, ಮಾನಸಿಕ ಒತ್ತಡ ಹೆಚ್ಚಾದರೂ, ದೇಹದ ಹಾರ್ಮೋನ್ ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು.

ಪ್ರಸ್ತುತ ದಿನಗಳಲ್ಲಿ ಆಹಾರ ಮತ್ತು ಬದಲಾದ ಜೀವನಶೈಲಿ ಪದ್ಧತಿಯಿಂದಾಗಿ, ಜಂಕ್ ಫುಡ್, ಕ್ಯಾಲೋರಿಯುಕ್ತ ಆಹಾರ ಸೇವನೆ, ರಾಸಾಯನಿಕಗಳ ಸೇವನೆ, ಹವಾಮಾಲಿನ್ಯ, Instant food ಗಳಲ್ಲಿ ಸಾಲ್ವೆಂಟ್/ಪೆಸ್ಟಿಸೈಡ್ ಮಿಶ್ರಣಗಳ ಕಾರಣಗಳಿಂದಾಗಿಯೂ ಸಹ ಹಾರ್ಮೋನಲ್ ಬದಲಾವಣೆಗೆ ಕಾರಣವಾಗಬಹುದು.

ಮುಟ್ಟಿನ ವಿಚಾರದಲ್ಲಿ ಶುಚಿತ್ವ ಕಾಪಾಡದಿದ್ದರೆ, *UTI, PCOD, PCOS ನಂತಹ ಗಂಭೀರ ಖಾಯಿಲೆ ಗಳಿಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ. ಜೊತೆಗೆ ಆರೋಗ್ಯಕರ ಆಹಾರ ಮತ್ತು ನಿತ್ಯದ ವ್ಯಾಯಾಮ ವನ್ನು ಇಂದಿನ ಮಕ್ಕಳಿಗೆ ಕಲಿಸಬೇಕು. ಜಂಕ್ ಫುಡ್, ಕೆಮಿಕಲ್ ಸಂರಕ್ಷಿತ ಆಹಾರಗಳ ಬಳಕೆ ಕಡಿಮೆ ಮಾಡುವುದು ಮತ್ತು ಪ್ಲಾಸ್ಟಿಕ್ ಆಧಾರಿತ ಉತ್ಪನ್ನರಹಿತ ಬದುಕನ್ನು ನಾವು ರೂಢಿಸಿಕೊಳ್ಳ ಬೇಕು ಜೊತೆಗೆ ಮಕ್ಕಳಿಗೂ ಅದರ ಮಹತ್ವ ಹೇಳಿಕೊಡಬೇಕು.

ವೈದ್ಯಕೀಯ ಸಂಸ್ಥೆಗಳು ಈ ವಿಚಾರದಲ್ಲಿ ಉನ್ನತಮಟ್ಟದ ಸಂಶೋಧನೆಗಳನ್ನು ಕೈಗೊಳ್ಳುವ ಅಗತ್ಯವಿದೆ. ಆರೋಗ್ಯ ಇಲಾಖೆಗಳು ಅಪ್ರಾಪ್ತ ವಯಸ್ಸಲ್ಲಿ ಋತುಮತಿಯಾಗುತ್ತಿರುವ ಗಂಭೀರ ಸಮಸ್ಯೆಗಳ ಪ್ರಕರಣಗಳನ್ನು ಅಧಿಕೃತವಾಗಿ ದಾಖಲೆ ಮಾಡಿಕೊಂಡು, ಸೂಕ್ತ ಚಿಕಿತ್ಸೋಪಾಯ ಗಳನ್ನು ಹುಡುಕಬೇಕಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರು-ಮಕ್ಕಳ ನಡುವೆ ಆಪ್ತ ಸಮಾಲೋಚನೆಗಳಂತಹ ಸಂಭಾಷಣೆ ಗಳು ನಡೆಯುವುದು ಇಂದಿನ ದಿನಗಳಲ್ಲಿ ಹೆಚ್ಚು ಅಗತ್ಯವಿದೆ. ಈ ರೀತಿಯಾಗಿ, ಅತಿ ಚಿಕ್ಕ ವಯಸ್ಸಿ ನಲ್ಲಿ ಮುಟ್ಟು ಆಗುವುದಕ್ಕೆ ಸಾಮಾಜಿಕ, ದೈಹಿಕ, ಜೀವವಿಜ್ಞಾನ, ಆಹಾರ ಹಾಗೂ ಪರಿಸರ ಸೇರಿದಂತೆ ಅನೇಕ ಕಾರಣಗಳಿವೆ. ಈ ಬಗ್ಗೆ ಪೋಷಕರು ಜಾಗರೂಕರಾಗಿದ್ದು ಆರೋಗ್ಯಕರ ಜೀವನ ಶೈಲಿ ರೂಪಿಸುವ ಅಗತ್ಯವಿದೆ.

ಗುರುರಾಜ್ ಗಂಟಿಹೊಳೆ

View all posts by this author