ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vinayaka Mathapathy Column: ವಿಶ್ವೇಶ್ವರ ಭಟ್ಟರು ಲಿಂಗಾಯತ ವಿರೋಧಿಯಾಗಿದ್ದರೆ ಇದೆಲ್ಲ ಸಾಧ್ಯವೇ ?

ಸ್ವಾಮೀಜಿಗಳ ಕುರಿತು ಎಷ್ಟೇ, ಸುದ್ದಿ, ಅಂಕಣ, ವಿಶೇಷ ಬರಹ ಬರೆದು ಕೊಟ್ಟರೂ ಮರು ಮಾತಾಡದೆ ಪ್ರಕಟಿಸಿದ ಕೀರ್ತಿ ವಿಶ್ವೇಶ್ವರ ಭಟ್ಟರಿಗೆ ಸಲ್ಲುತ್ತದೆ. ತಾವು ಬೇಕಾದರೆ ಲಿಂಗಾಯತ ಮಠದ ಸ್ವಾಮೀಜಿ ಗಳನ್ನು ಕೇಳಬಹುದು. ಯಾವತ್ತಾದರೂ ನಿಮಗೆ ವಿಶ್ವವಾಣಿ ಪತ್ರಿಕೆ ಸುದ್ದಿ ವಿಚಾರವಾಗಿ ತಕರಾರು ಮಾಡಿದ್ದು ಇದೆಯೇ ಎಂದು. ಅದು ಬಿಡಿ, ಅನೇಕ ಸ್ವಾಮೀಜಿಗಳಿಗೆ ಟೈಪಿಸಲು ಬರದ ಕಾರಣಕ್ಕೆ ನಾನೇ ಖುದ್ದಾಗಿ ಅವರ ಬಳಿ ಹೋಗಿ ಅಭಿಪ್ರಾಯ ಬರೆದು ಪ್ರಕಟಿಸಿದ್ದೇನೆ.

ವಿಶ್ವೇಶ್ವರ ಭಟ್ಟರು ಲಿಂಗಾಯತ ವಿರೋಧಿಯಾಗಿದ್ದರೆ ಇದೆಲ್ಲ ಸಾಧ್ಯವೇ ?

-

Profile
Ashok Nayak Nov 25, 2026 7:32 AM

ರಾಜಬೀದಿ

ವಿನಾಯಕ ಮಠಪತಿ

ಪರ, ವಿರೋಧ ಚರ್ಚೆಗಳು ನಡೆದಾಗಲೇ ವ್ಯಕ್ತಿ ಹಾಗೂ ವ್ಯಕ್ತಿತ್ವದ ಚಿತ್ರಣದ ಮೇಲೆ ಬೆಳಕು ಹರಿಯುತ್ತದೆ. ಅಂತಹ ಚರ್ಚೆಗಳಿಗೆ ಅವಕಾಶ ನೀಡುವುದೇ ಮಹಾ ಅಪರಾಧ ಎಂಬ ರೀತಿಯಲ್ಲಿ ಬಿಂಬಿಸುವುದು ನಮ್ಮ ಭಾರತೀಯ ಸಂಸ್ಕೃತಿಗೆ ವಿರುದ್ಧವೇ ಸರಿ. ಪತ್ರಿಕಾ ಧರ್ಮಕ್ಕೆ ಅದರದೇ ಆದ ಮಹತ್ವ ಇದೆ. ದಶಕಗಳ ಕಾಲ ಓರ್ವ ಪತ್ರಕರ್ತ ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗಳ ಕುರಿತು ಬರವಣಿಗೆ ಮಾತ್ರವಲ್ಲದೆ ಇತರರನ್ನು ಬರವಣಿಗೆಗೆ ಪ್ರೇರೇಪಿಸುವುದು ಸಣ್ಣ ಕೆಲಸವಲ್ಲ. ಅತ್ಯಂತ ಚಿಕ್ಕ ವಯಸ್ಸಿಗೆ ರಾಜ್ಯದ ಪ್ರತಿಷ್ಠಿತ ಪತ್ರಿಕೆಯ ಪ್ರಧಾನ ಸಂಪಾದಕ ಹುದ್ದೆ ಅಲಂಕರಿಸಿದ ವಿಶ್ವೇಶ್ವರ ಭಟ್ಟರು ಈವರೆಗೆ ಎಷ್ಟು ಬರಹಗಾರರಿಗೆ ವೇದಿಕೆ ಕಲ್ಪಿಸಿ, ಪ್ರೋತ್ಸಾಹಿಸಿ ಬೆನ್ನು ತಟ್ಟಿ ಈ ನಾಡಿಗೆ ಪರಿಚಯಿಸಿಲ್ಲ ಹೇಳಿ.

ಇಂತಹ ವ್ಯಕ್ತಿತ್ವಕ್ಕೆ ಮಸಿ ಬಳೆಯುವ ಉದ್ದೇಶದಿಂದ ಕೆಲವರು ನಿರಂತರವಾಗಿ ಪ್ರಯತ್ನಿಸುತ್ತಾ ಬಂದರೂ ನಾಡಿನ ಪ್ರಜ್ಞಾವಂತ ಓದುಗ ಬಳಗ ಅವರನ್ನು ಮೂಲೆಗೆ ತಳ್ಳಿ ಭಟ್ಟರನ್ನು ಅಪ್ಪಿಕೊಂಡಿದ್ದು ತಮಗೆಲ್ಲ ಗೊತ್ತಿರುವ ವಿಷಯ. ಕಳೆದ ಒಂದು ವಾರದ ಹಿಂದೆ ವಿಶ್ವವಾಣಿ ಪುಸ್ತಕ ಪ್ರಕಾಶನದಿಂದ ಬಿಡುಗಡೆಯಾದ ಬಸವ ಮಂಟಪ ಕೃತಿಯಿಂದ ಸೃಷ್ಟಿಸಲಾದ ವಿವಾದಕ್ಕೆ ವಿಶ್ವೇಶ್ವರ ಭಟ್ಟರನ್ನು ತಳಕು ಹಾಕುವ ಕೆಲಸ ಕೆಲವರಿಂದ ನಡೆಯುತ್ತಿದೆ.

ಅಷ್ಟೇ ಅಲ್ಲದೆ ಭಟ್ಟರು ಒಂದು ಸಮುದಾಯದ ವಿರೋಧಿ ಎಂಬಂತೆ ಬಿಂಬಿಸುವ ಕೆಲವರ ಪ್ರಯತ್ನಕ್ಕೆ ಅಲ್ಲಲ್ಲಿ ಪ್ರಜ್ಞಾವಂತ ಓದುಗ ಬಳಗ ಸರಿಯಾದ ಉತ್ತರವನ್ನೇ ನೀಡುತ್ತಿದೆ. ಅಷ್ಟೇ ಅಲ್ಲದೆ ವಿಶ್ವೇಶ್ವರ ಭಟ್ಟರ ಬರವಣಿಗೆಯಿಂದ ಪ್ರೇರಣೆ ಪಡೆದ ಅನೇಕರು ಈ ಎಲ್ಲಾ ಕೃತಕ ವಿರೋಧಕ್ಕೆ ತಮ್ಮದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡುವ ಕೆಲಸ ಮಾಡುತ್ತಿರುವುದು ಭಟ್ಟರು ಈವರೆಗೆ ಪಡೆದ ಓದುಗ ವರ್ಗದ ಪ್ರೀತಿ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: Vinayak Mathapati Column: ರೈತರು ಬಾರುಕೋಲು ಬೀಸುವವರೆಗೆ ಕಾಯುವಿರಾ ?

ನನ್ನ ಪತ್ರಿಕೋದ್ಯಮ ಅಧ್ಯಯನ ಮುಗಿಸಿ ಒಂದು ಮಾಧ್ಯಮ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದೆ. ಇದಾದ ನಂತರ ಪತ್ರಿಕೆಯಲ್ಲಿ ಕೆಲಸ ಮಾಡಬೇಕೆಂಬ ಹುಮ್ಮಸ್ಸಿನಲ್ಲಿದ್ದ ನಾನು ನೇರವಾಗಿ ಹೋಗಿದ್ದು ವಿಶ್ವೇಶ್ವರ ಭಟ್ಟರ ಬಳಿ. ಆಗ ಭಟ್ಟರು ಮರುಮಾತನಾಡದೆ ಅಂದು ಕೊಟ್ಟ ಅವಕಾಶ ನನಗೆ ಬದುಕಿನ ಅಮೂಲ್ಯ ಘಟ್ಟಗಳಲ್ಲಿ ಒಂದು.

ಬೆಳಗಾವಿ ಜಿಲ್ಲಾ ವರದಿಗಾರನಾಗಿ ನಾನು ಕಳೆದ ಎಂಟು ವರ್ಷಗಳಿಂದ ವಿಶ್ವವಾಣಿಯಲ್ಲಿ ಕೆಲಸ ಮಾಡುತ್ತಿರುವೆ. ವೀರಶೈವ ಲಿಂಗಾಯತ ಬಡ ಕುಟುಂಬದಲ್ಲಿ ಜನಿಸಿದ ನನಗೆ ನಾಡಿನ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ಟರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ರೀತಿ ನಿಜಕ್ಕೂ ಅವಿಸ್ಮರಣೀಯ.

ಕಳೆದ ಎಂಟು ವರ್ಷಗಳಿಂದ ಭಟ್ಟರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವೆ. ನನಗೆ ಯಾವತ್ತೂ ವಿಶ್ವೇಶ್ವರ ಭಟ್ಟರು ಜಾತಿವಾದಿಯಾಗಿ ಕಾಣಲಿಲ್ಲ. ಯಾವುದನ್ನಾದರೂ ಪತ್ರಿಕೆಯಲ್ಲಿ ಬರೆಯ ಬೇಕಾದರೆ ಇದು ಯಾಕೆಂದು ಪ್ರಶ್ನೆ ಮಾಡಿದವರಲ್ಲ. ಕಳೆದ ಎಂಟು ವರ್ಷಗಳಿಂದ ಭಟ್ಟರ ವಿರುದ್ಧ ಮಾತನಾಡುವ ಅನೇಕ ವ್ಯಕ್ತಿಗಳ ಸುದ್ದಿಗಳು ನಾನು ಕೆಲಸ ಮಾಡುವ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದರೂ ಒಂದು ಸಲವು ಈ ಕುರಿತು ಭಟ್ಟರಿಂದ ಪ್ರಶ್ನೆ ಬಂದ ಉದಾಹರಣೆ ಇಲ್ಲ.

72 Bhat with

ನಾನು ಕೆಲಸ ಮಾಡುವ ಬೆಳಗಾವಿ ಜಿಲ್ಲೆಯಲ್ಲಿ ಭಾಗಶಃ ತಾಲೂಕಿನ ಪ್ರತಿ ಐದು ಹಳ್ಳಿಗೊಂದು ವೀರಶೈವ ಲಿಂಗಾಯತ ವಿರಕ್ತ ಮಠಗಳಿವೆ. ಅವುಗಳಲ್ಲಿ ತುಂಬಾ ವಿವಾದಾತ್ಮಕ ಸ್ವಾಮೀಜಿ ಎಂದೇ ಖ್ಯಾತಿ ಹೊಂದಿರುವ ನಿಜಗುಣಾನಂದ ಸ್ವಾಮೀಜಿ ಮಠವೂ ಕಿತ್ತೂರು ತಾಲೂಕಿಗೆ ಹೊಂದಿ ಕೊಂಡಿದೆ. ಉಳಿದಂತೆ ನಾಗನೂರು ರುದ್ರಾಕ್ಷಿ ಮಠ, ಹುಕ್ಕೇರಿ ಹಿರೇಮಠ, ಅಥಣಿ ಗಚ್ಚಿನ ಮಠ, ಗೋಕಾಕ್ ಶೂನ್ಯ ಸಂಪಾದನಾ ಮಠ, ನಿಡಸೋಸಿ ದುರುದುಂಡೇಶ್ವರ ಮಠ, ಬೈಲಹೊಂಗಲ ಮೂರುಸಾವಿರ ಮಠ, ಮುಗಳಖೋಡದ ಮುರುಘರಾಜೇಂದ್ರ ಸ್ವಾಮಿ ಮಠ, ಹೀಗೆ ಹೇಳುತ್ತಾ ಹೋದರೆ ಬೆಳಗಾವಿ ಜಿಲ್ಲೆಯ ಮಠಗಳ ದೊಡ್ಡ ಪಟ್ಟಿ ಕೊಡಬಹುದು.

ಬಹುತೇಕ ವಿರಕ್ತ ಲಿಂಗಾಯತ ಪರಂಪರೆಯ ಮಠಗಳ ಜೊತೆ ನನಗೊಂದು ಅನ್ಯೋನ್ಯತೆ ಇದೆ. ಹಲವು ಸ್ವಾಮೀಜಿಗಳು ವೈಯಕ್ತಿಕ ಕರೆ ಮಾಡಿ ಮಠಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹಂಚಿಕೊಳ್ಳುವ ಮಟ್ಟಿಗೆ ಸಂಬಂಧ ಉಳಿಸಿಕೊಂಡಿದ್ದೇನೆ. ಪ್ರತಿದಿನವೂ ಒಂದಿಂದು ಸ್ವಾಮೀಜಿ ಸುದ್ದಿಗಳು ನಮ್ಮ ಪತ್ರಿಕೆಯಲ್ಲಿ ಪ್ರಕಟ ಆಗುತ್ತಲೇ ಇರುತ್ತವೆ.

ಕೆಲವು ಸಂದರ್ಭಗಳಲ್ಲಿ ಬೆಳಗಾವಿ ಪುಟದಲ್ಲಿ ಸಂಪೂರ್ಣ ಮಠಗಳ ಸುದ್ದಿಗಳೇ ಇರುವ ಅನೇಕ ಉದಾಹರಣೆಗಳು ಇವೆ. ಇಷ್ಟೆ ವಿಷಯ ಯಾಕೆಂದರೆ ಯಾವತ್ತೂ ಸಂಸ್ಥೆ ಸುದ್ದಿ ವಿಷಯದಲ್ಲಿ ಜಾತಿ, ಧರ್ಮ ಎಂದು ವಿಭಜನೆ ಮಾಡಿಲ್ಲ. ಅನೇಕ ಸ್ವಾಮೀಜಿಗಳ ಕುರಿತು ಅದೆಷ್ಟೋ ಬರಹಗಳನ್ನು ನಾನು ವೈಯಕ್ತಿಕವಾಗಿ ಬರೆದು ವಿಶ್ವವಾಣಿಯಲ್ಲಿ ಪ್ರಕಟ ಮಾಡಿದ್ದೇನೆ. ಅನೇಕ ಲಿಂಗಾಯತ ಸ್ವಾಮೀಜಿಗಳ ಕುರಿತಾದ ಲೇಖನಗಳನ್ನು ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ್ದೇನೆ.

ಸ್ವಾಮೀಜಿಗಳ ಕುರಿತು ಎಷ್ಟೇ, ಸುದ್ದಿ, ಅಂಕಣ, ವಿಶೇಷ ಬರಹ ಬರೆದು ಕೊಟ್ಟರೂ ಮರು ಮಾತಾಡದೆ ಪ್ರಕಟಿಸಿದ ಕೀರ್ತಿ ವಿಶ್ವೇಶ್ವರ ಭಟ್ಟರಿಗೆ ಸಲ್ಲುತ್ತದೆ. ತಾವು ಬೇಕಾದರೆ ಲಿಂಗಾಯತ ಮಠದ ಸ್ವಾಮೀಜಿಗಳನ್ನು ಕೇಳಬಹುದು. ಯಾವತ್ತಾದರೂ ನಿಮಗೆ ವಿಶ್ವವಾಣಿ ಪತ್ರಿಕೆ ಸುದ್ದಿ ವಿಚಾರವಾಗಿ ತಕರಾರು ಮಾಡಿದ್ದು ಇದೆಯೇ ಎಂದು. ಅದು ಬಿಡಿ, ಅನೇಕ ಸ್ವಾಮೀಜಿಗಳಿಗೆ ಟೈಪಿಸಲು ಬರದ ಕಾರಣಕ್ಕೆ ನಾನೇ ಖುದ್ದಾಗಿ ಅವರ ಬಳಿ ಹೋಗಿ ಅಭಿಪ್ರಾಯ ಬರೆದು ಪ್ರಕಟಿಸಿದ್ದೇನೆ.

ಒಂದು ವೇಳೆ ವಿಶ್ವೇಶ್ವರ ಭಟ್ಟರು ಲಿಂಗಾಯತ ವಿರೋಧಿ ಆಗಿದ್ದರೆ ಇಷ್ಟೆ ಪ್ರಕಟಣೆಗಳಿಗೆ ಸಹಾಯ ನೀಡುತ್ತಿರಲಿಲ್ಲ. ಇನ್ನೊಂದು ಹಾಸ್ಯಾಸ್ಪದ ವಿಷಯ: ಅಥಣಿ ಮೋಟಗಿಮಠದ ಚನ್ನಬಸವ ಸ್ವಾಮೀಜಿ ಬಸವ ಮಠಪ ಪುಸ್ತಕದ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಲೇಖಕರ ಕುರಿತು ಆಕ್ರೋಶ ಹೊರ ಹಾಕುವ ಭರದಲ್ಲಿ ವಿಶ್ವೇಶ್ವರ ಭಟ್ಟರ ಕುರಿತು ಕೆಲವು ಮಾತಾಡಿದರು. ಅವರಿಗೆ ಮಠದಿಂದ ಕೊಟ್ಟ ಬಸವ ಭೂಷಣ ಪ್ರಶಸ್ತಿ ವಾಪಸ್ ಪಡೆಯುತ್ತೇನೆ ಎಂದರು.

ಸ್ವಾಮೀಜಿ ತಮ್ಮದೇ ಒಂದು ಕೃತಿ ಹೊರತಂದಾಗ ಇದೇ ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಒಂದು ವೇದಿಕೆ ಸೃಷ್ಟಿಸಿ ತಮ್ಮ ಹಾಗೂ ಕೃತಿಯ ಕುರಿತು ಭಟ್ಟರು ಆಡಿದ ಮಾತುಗಳನ್ನು ಮರೆತರಾ? ಲಿಂಗಾಯತರ ಮೇಲೆ ದ್ವೇಷ ಇದ್ದಿದ್ದರೆ ಭಟ್ಟರು ನಿಮಗೆ ವೇದಿಕೆ ಕೊಡುತ್ತಿದ್ದಾರಾ ಹೇಳಿ..? ಅದು ಬಿಡಿ, ಅಥಣಿ ತಾಲೂಕಿನ ಶೇಗುಣಸಿ ವಿರಕ್ತ ಮಠದ ಅಭಿನವ ಸ್ವಾಮೀ ವಿವೇಕಾನಂದರು ಎಂದು ಕರೆಯುವ ಮಹಾಂತಪ್ರಭುಗಳ ಲೇಖನ, ಬೈಲಹೊಂಗಲ ಮೂರು ಸಾವಿರ ಮಠದ ಪ್ರಭು ನೀಲಕಂಠ ಶ್ರೀಗಳ ಜೀವನಾಧಾರಿತ ಪುಸ್ತಕ ಹಾಗೂ ಸರಣಿ ಅಂಕಣ ವಿಶ್ವವಾಣಿಯಲ್ಲಿ ಪ್ರಕಟ ವಾಗಲೂ ಇದೇ ವಿಶ್ವೇಶ್ವರ ಭಟ್ಟರು ಕಾರಣ.

ಇಷ್ಟೆ ಇದ್ದರೂ ವಿಶ್ವೇಶ್ವರ ಭಟ್ಟರನ್ನು ಲಿಂಗಾಯತ ವಿರೋಧಿ ಹಣೆಪಟ್ಟಿ ಕಟ್ಟಲು ಹೊರಟ ಕೆಲ ಧರ್ಮದ್ರೋಹಿಗಳಿಗೆ ಏನನ್ನಬೇಕು? ನಾನು ವಿಶ್ವೇಶ್ವರ ಭಟ್ಟರನ್ನು ಹತ್ತಿರದಿಂದ ನೋಡಿದಂತೆ ಹಲವಾರು ಲಿಂಗಾಯತ ವಿರಕ್ತ ಮಠದ ಸ್ವಾಮೀಜಿಗಳು, ಸಮಾಜದ ಗಣ್ಯರು ಇವರ ಆಪ್ತಬಳಗ ದಲ್ಲಿದ್ದಾರೆ. ಅಷ್ಟೇ ಅಲ್ಲದೆ ಲಿಂಗಾಯತ ಮಠಗಳ ವಿಷಯದಲ್ಲಿ ಭಟ್ಟರು ಯಾವತ್ತೂ ವಿರೋಧ ಹೊಂದಿದವರಲ್ಲ. ಅನೇಕ ಸ್ವಾಮೀಜಿಗಳ ಭಾವಚಿತ್ರ ಹೊತ್ತ ಮುಖಪುಟದ ವಿಶೇಷ ಸಂಚಿಕೆಗಳು ವಿಶ್ವವಾಣಿಯಲ್ಲಿ ಪ್ರಕಟವಾಗಿವೆ.

ವಿಭಿನ್ನ ವಿಚಾರಧಾರೆ ಹೊಂದಿರುವ ನಾಗನೂರು ರುದ್ರಾಕ್ಷಿ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಅನೇಕ ಸುದ್ದಿಗಳನ್ನೂ ನಮ್ಮಲ್ಲಿ ಪ್ರಕಟಿಸಲಾಗಿದೆ. ಹಾಗಾದರೆ ಭಟ್ಟರು ಲಿಂಗಾಯತ ವಿರೋಧಿಗಳೆನ್ನುವ ಕೆಲವರ ಹಿಂದಿನ ಹಿಡನ್ ಅಜೆಂಡಾ ಏನು? ಕೆಲವು ವಿಚಾರದಲ್ಲಿ ಬಸವಣ್ಣವರ ಹೆಸರು ಹೇಳಿಕೊಂಡು ಇನ್ನೊಂದು ಧರ್ಮವನ್ನು ಹೀಯಾಳಿಸುವ, ಬೆರಳೆಣಿಕೆಯಷ್ಟು ಇರುವ ಜನರ ಮುಖವಾಡವನ್ನು ಇದೇ ವಿಶ್ವವಾಣಿ ಬಯಲು ಮಾಡಿದೆ.

ಸಾಣೆಹಳ್ಳಿ ಸ್ವಾಮೀಜಿ ಹಿಂದೂ ದೇವತೆ ಗಣೇಶನಿಗೆ ಅವಮಾನ ಮಾಡಿದಾಗ ಇದೇ ಭಟ್ಟರು ಲೇಖನ ಪ್ರಕಟಿಸಿದ್ದರ ಸಿಟ್ಟನ್ನು ತೀರಿಸಿಕೊಳ್ಳಲು ಈಗ ಲಿಂಗಾಯತರನ್ನು ಎತ್ತಿ ಕಟ್ಟಿ ಪ್ರಚೋದನೆ ನೀಡುತ್ತಿದ್ದಾರೆ. ಲಿಂಗಾಯತ ಹಾಗೂ ವೀರಶೈವ ಎರಡೂ ಕಡೆಯವರಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ವಿಶ್ವವಾಣಿ ವೇದಿಕೆ ಸೃಷ್ಟಿಸಿದೆ. ಅದರಂತೆ ಅನೇಕರು ಲೇಖನ ಪ್ರಕಟಿಸಿದ್ದಾರೆ.

ಪರ, ವಿರೋಧ ಚರ್ಚೆಗೆ ಸದಾಕಾಲವೂ ವಿಶ್ವವಾಣಿ ತೆರೆದ ಬಾಗಿಲು. ಇದೇ ಪ್ರತ್ಯೇಕ ಲಿಂಗಾಯತ ಬಳಗ ಸ್ವತಂತ್ರ ಧರ್ಮ ಮಾಡಲು ಹೊರಟಾಗ ವಿಶ್ವವಾಣಿ ಪತ್ರಿಕೆ ಕೊಟ್ಟ ಪ್ರಚಾರದ ಕುರಿತು ಯಾಕೆ ಮಾತನಾಡುವುದಿಲ್ಲ? ಆಗ ಇವರಿಗೆ ಎಲ್ಲವೂ ಚೆನ್ನಾಗಿತ್ತಾ? ವಿಶ್ವೇಶ್ವರ ಭಟ್ಟರು ಯಾವತ್ತೂ ಹೊಸತನ ಬಯಸುವ ಅಪರೂಪದ ಪತ್ರಕರ್ತ. ಅಭಿಪ್ರಾಯ ಹೇಳುವವರಿಗೆ ಮುಕ್ತ ಅವಕಾಶ ನೀಡುವ ಅವರನ್ನು ಅನವಶ್ಯಕವಾಗಿ ತೆಗಳುವ ಕೆಲಸ ಮಾಡಿದರೆ ಏನೂ ಪ್ರಯೋಜನವಿಲ್ಲ. ಸೈದ್ಧಾಂತಿಕವಾಗಿ ಹಾಗೂ ಬರವಣಿಗೆ ಮೂಲಕ ವಿರೋಧಿಸಲು ಸಾಧ್ಯವಾಗ ಕೆಲವು ಅತೃಪ್ತ ಆತ್ಮಗಳು ಅವಹೇಳನಕ್ಕೆ ಇಳಿದಿದ್ದಾರೆ.

ಇದರಲ್ಲಿ ಕೆಲವು ದೇಶ ವಿರೋಧಿ, ಧರ್ಮವಿರೋಧಿ ಹಾಗೂ ಕಮ್ಯುನಿಸ್ಟ್ ಮನಸ್ಥಿತಿಯ ಜನರೂ ಇದ್ದಾರೆ. ಅನೇಕ ವರ್ಷಗಳಿಂದ ವಿಶ್ವೇಶ್ವರ ಭಟ್ಟರನ್ನು ಹತ್ತಿರದಿಂದ ನೋಡಿದ ನನಗೆ ಅನಿಸಿದ್ದನ್ನು ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ. ‌

ಲಂಡನ್ ಬಸವ ಪ್ರತಿಮೆ ಪ್ರತಿಷ್ಠಾಪನೆ: ಹಾಗೇ ಸುಮ್ಮನೆ ವಿಶ್ವೇಶ್ವರ ಭಟ್ಟರ ಫೇಸ್ಬುಕ್ ಪೋಟೋ ಗ್ಯಾಲರಿ ಮೇಲೆ ಕಣ್ಣಾಡಿಸುವಾಗ ಅಚಾನಕ್ಕಾಗಿ ಎರಡು ಫೋಟೋ ಕಣ್ಣಿಗೆ ಬಿದ್ದವು. 2022ರಲ್ಲಿ ಲಂಡನ್‌ನ ಥೇಮ್ಸ ನದಿ ದಡದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಮುಂದೆ ಭಟ್ಟರು ನಿಂತಿರುವ ಚಿತ್ರವದು. ಈ ಫೋಟೋ ಹಿಂದೆ ಒಂದು ಕಥೆ ಇದೆ. ಇಂದು ಭಟ್ಟರನ್ನು ಬಸವ ವಿರೋಧಿ ಎಂದು ಬಿಂಬಿಸುವವರಿಗೆ, ಐತಿಹಾಸಿಕ ಬಸವೇಶ್ವರರ ಮೂರ್ತಿ ನಿರ್ಮಾಣದ ಹಿಂದೆ ಡಾ. ನೀರಜ್ ಪಾಟೀಲರ ಜೊತೆ ವಿಶ್ವೇಶ್ವರ ಭಟ್ಟರ ಪ್ರಯತ್ನ ಎಷ್ಟಿದೆ ಎಂಬುದರ ಸಣ್ಣ ಅರಿವೂ ಇಲ್ಲ.

ಪ್ರತಿಮೆ ನಿರ್ಮಾಣಕ್ಕಾಗಿ ಪಟ್ಟ ಪರಿಶ್ರಮದ ಕುರಿತು ಭಟ್ಟರು ಎಲ್ಲಿಯೂ ಹೇಳಿಕೊಂಡಂತಿಲ್ಲ. ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿ ಮೊದಲ ಸಂಸತ್ ನಿರ್ಮಾಣದ ಹೆಗ್ಗಳಿಕೆ ಪಡೆದ ಬಸವಣ್ಣನವರ ಪ್ರತಿಮೆ ಲಂಡನ್ ನಗರದಲ್ಲಿ ನಿರ್ಮಾಣವಾಗಿದ್ದರ ಹಿಂದೆ ಇದೇ ಭಟ್ಟರು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ.

ಲಂಡನ್ ಬಸವೇಶ್ವರ ಪುತ್ಥಳಿ ಅಂದ್ರೆ ನಮಗೆಲ್ಲ ನೆನಪಿಗೆ ಬರುವ ಹೆಸರು ಲಂಡನ್‌ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ. ಬಸವಣ್ಣನ ಪ್ರತಿಮೆ ನಿರ್ಮಾಣದ ಕನಸು ಹೊತ್ತು ಡಾ.ಪಾಟೀಲರು ಬೆಂಗಳೂರಿಗೆ ಬಂದಾಗ, ನೇರವಾಗಿ ಹೋಗಿದ್ದು ವಿಜಯ ಕರ್ನಾಟಕ ಕಚೇರಿಗೆ. ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾಗಿದ್ದರು. ನೀರಜ್ ಪಾಟೀಲರಿಗೆ ಆಗ ಬೆಂಗಳೂರಿನಲ್ಲಿ ಬೇರೆ ಯಾವ ವ್ಯಕ್ತಿಯ ಪರಿಚಯ ಅಷ್ಟಾಗಿ ಇರಲಿಲ್ಲ.

ನೀರಜ್ ಪಾಟೀಲರು ಮೇಯರ್ ಆದ ಸುದ್ದಿಯನ್ನು ಅವರ ಸಂದರ್ಶನ ಸಮೇತ ಅಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸಿ ಕರ್ನಾಟಕಕ್ಕೆ ಪರಿಚಯಿಸಿದರು. ಲಂಡನ್ ಸಂಸತ್ ಭವನದ ಮುಂಭಾಗ ಬಸವೇಶ್ವರ ಪುತ್ಥಳಿ ನಿರ್ಮಾಣದ ಕನಸನ್ನು ಡಾ. ನೀರಜ್ ಪಾಟೀಲ್ ಹೇಳಿಕೊಂಡಾಗ, ವಿಶ್ವೇಶ್ವರ ಭಟ್ಟರು ಡಾ. ನೀರಜ್ ಅವರನ್ನು ಕರೆದುಕೊಂಡು ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿಸಿದರು. ಬಸವೇಶ್ವರ ಪುತ್ಥಳಿ ನಿರ್ಮಾಣದ ಡಾ.ಪಾಟೀಲರ ಮಹತ್ವಾಕಾಂಕ್ಷೆಯನ್ನು ಭಟ್ಟರು ವಿವರಿಸಿದರು. ಭಟ್ಟರು ನಿಜಕ್ಕೂ ಬಸವಣ್ಣನ ವಿರೋಧಿಯೇ ಆಗಿದ್ದರೆ ನೀರಜ್ ಪಾಟೀಲ್ ಅವರನ್ನು ಯಡಿಯೂರಪ್ಪನವರ ಬಳಿ ಕರೆದೊಯ್ಯುತ್ತಿರಲಿಲ್ಲ. ಬೇಕಿದ್ದರೆ ಈ ವಿಷಯವನ್ನು ನೀರಜ್ ಪಾಟೀಲರ ಬಳಿ ಕೇಳಿನೋಡಿ. ಪುತ್ಥಳಿ ನಿರ್ಮಾಣದ ವಿಷಯ ಇಷ್ಟಕ್ಕೆ ನಿಲ್ಲಲಿಲ್ಲ.

ಯಡಿಯೂರಪ್ಪನವರ ಭೇಟಿ ನಂತರ ವಿಜಯ ಕರ್ನಾಟಕ ಪತ್ರಿಕೆಯ ಮುಖಪುಟದಲ್ಲಿ ಲಂಡನ್ ಸಂಸತ್ತಿನ ಮುಂಭಾಗ ಬಸವೇಶ್ವರ ಪುತ್ಥಳಿ ನಿರ್ಮಾಣದ ಮಹತ್ವ ಹಾಗೂ ಸರ್ಕಾರದಿಂದ ಆಗಬೇಕಾದ ಕ್ರಮಗಳ ಕುರಿತು ಭಟ್ಟರು ಬರೆದು, ಸರಕಾರಕ್ಕೂ ಮನವರಿಕೆ ಮಾಡಿಕೊಟ್ಟರು. 2015ರ ನವೆಂಬರ್ 14ರಂದು ಪ್ರಧಾನಿ ನರೇಂದ್ರ ಮೋದಿ, ಬಸವೇಶ್ವರರ ಪುತ್ಥಳಿಯನ್ನು ಲಂಡನ್ ಸಂಸತ್ ಮುಂದೆ ಅನಾವರಣಗೊಳಿಸಿದರು. ಆ ದಿನವನ್ನು ಕರುನಾಡು ಸಡಗರದಿಂದ ಸಂಭ್ರಮಿಸಿತು.

ಇಷ್ಟೊಂದು ಮಹತ್ವದ ಕೆಲಸದ ಹಿಂದೆ ನೀರಜ್ ಪಾಟೀಲ್ ಅವರ ಪ್ರಯತ್ನದ ಜೊತೆ ಭಟ್ಟರು ಸಲ್ಲಿಸಿದ ನಿಸ್ವಾರ್ಥ ಪರಿಶ್ರಮ ಇತ್ತು ಎಂಬುದನ್ನು ಮರೆಯಲು ಸಾಧ್ಯವೆ? ಧಾರ್ಮಿಕ ಅಭಿಪ್ರಾಯ ಹಂಚಿಕೊಳ್ಳಲು ಪರ, ವಿರೋಧದ ಚರ್ಚೆಗೆ ಅವಕಾಶ ನೀಡಿದ ಪತ್ರಕರ್ತ ವಿಶ್ವೇಶ್ವರ ಭಟ್ಟರನ್ನು ಬಸವಣ್ಣನ ವಿರೋಧಿ ಎಂದು ಬಿಂಬಿಸಲು ಹೊರಟ ಕೆಲವರು ತಮ್ಮ ಆತ್ಮವನ್ನು ಒಮ್ಮೆ ಪ್ರಶ್ನಿಸಿಕೊಳ್ಳಿ.

ನಮ್ಮನ್ನಾಳಿದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಅಂಗಳದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವೇಶ್ವರರ ಪುತ್ಥಳಿ ನಿರ್ಮಾಣದಂತಹ ಅದ್ಭುತ ಕಾರ್ಯದ ಹಿಂದೆ ಭಟ್ಟರ ಪರಿಶ್ರಮವನ್ನು ನೆನೆಯದೆ ಲಿಂಗಾಯತ ವಿರೋಧಿ ಹಣೆಪಟ್ಟಿ ಕಟ್ಟುವವರು ವಿಶ್ವಗುರು ಬಸವಣ್ಣನವರಿಗೆ ಅಪಚಾರ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈ ವಿಚಾರವಾಗಿ ಈಗಲೂ ಮಾಜಿ ಸಿಎಂ ಯಡಿಯೂ ರಪ್ಪ ಹಾಗೂ ಡಾ. ನೀರಜ್ ಪಾಟೀಲರು ಸಾಕ್ಷಿಯಾಗಿದ್ದಾರೆ. ಅವರನ್ನು ಕೇಳಿದರೆ ತಿಳಿಯುತ್ತದೆ, ಅಂದು ವಿಶ್ವೇಶ್ವರ ಭಟ್ಟರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಗೆ ಹಾಕಿದ ಶ್ರಮ ಏನು, ಎಷ್ಟು ಎಂಬುದು. ನನಗೆ ವೈಯಕ್ತಿಕವಾಗಿಯೂ ನೀರಜ್ ಪಾಟೀಲರ ಪರಿಚಯ ಇದೆ.

ತಮ್ಮ the Lambeth Basaweshwara Foundation ನಲ್ಲಿ ನಡೆಯುವ ಕಾರ್ಯಕ್ರಮಗಳ ಸುದ್ದಿಗಳನ್ನು ಪ್ರಕಟಿಸಲು ಕಳುಹಿಸುತ್ತಾರೆ. ನಮ್ಮವರ ಒಳ್ಳೆಯ ಕೆಲಸವನ್ನು ಹೊಗಳಲು ನಮಗ್ಯಾರ ಗೊಡವೆ? ಒಬ್ಬ ವ್ಯಕ್ತಿಯನ್ನು ದಶಕಗಳ ಕಾಲ ಸೈದ್ಧಾಂತಿಕವಾಗಿ ಎದುರಿಸಲಾಗದೆ ಇದ್ದವರು ಇಂದು ಬಸವಣ್ಣ, ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ. ಅಪಪ್ರಚಾರ ಅಸ್ತ್ರ ಹಿಡಿದು ಸಾಗುತ್ತಿದ್ದಾರೆ ಹೊರತು ಇವರಿಂದ ಬೇರೆ ಏನೂ ಸಾಧ್ಯವಿಲ್ಲ ಎಂಬುದಂತು ಸ್ಪಷ್ಟ. ಭಟ್ಟರನ್ನು ಹತ್ತಿರದಿಂದ ಬಲ್ಲ ನಮಗೆ ಅವರ ಸಾಮಾಜಿಕ ಬದ್ಧತೆಯ ಅರಿವಿದೆ. ಬಸವಣ್ಣನ ಕುರಿತು ಅವರಿಗಿರುವ ಅಭಿಮಾನ ಈ ಪ್ರತ್ಯೇಕವಾದಿಗಳಿಗಿಲ್ಲ ಎಂಬುದು ಬೇಸರದ ಸಂಗತಿ.