#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Yagati Raghu Nadig Column: ಬಣ್ಣದ ಲೋಕದ ಒಂದೆರಡು ಕಪ್ಪು-ಬಿಳುಪು ಕಥೆಗಳು

ನೇರನುಡಿಗೆ ಹೆಸರಾಗಿದ್ದ ಕಲ್ಪನಾ ಅವರು ಚದುರಂಗರ ಕಣ್ಣುಗಳನ್ನೇ ದಿಟ್ಟಿಸುತ್ತಾ, “ಚದುರಂಗರೇ, ನೀವೊ ಬ್ಬರು ದೊಡ್ಡ ಸಾಹಿತಿ ಮತ್ತು ದೊಡ್ಡ ಮನುಷ್ಯ ಅಂದುಕೊಂಡಿದ್ದೆ. ಆದರೆ ನೀವು ಕೂಡ, ಒಬ್ಬ ಕಮರ್ಷಿಯಲ್ ಫಿಲ್ಮ್ ಡೈರೆಕ್ಟರ್ ಥರ, ‘ರವಿಕೆಯನ್ನು ಬಿಚ್ಚಿ ಬೆನ್ನಿನ ಭಾಗವನ್ನು ಬೆತ್ತಲೆಯಾಗಿಸಿ ಕೂರಬೇಕು’ ಅನ್ನುತ್ತಿದ್ದೀರಲ್ಲಾ? ಜೊಲ್ಲು ಸುರಿಸಿಕೊಂಡು ನೋಡುವ ಪ್ರೇಕ್ಷಕರಿಗೆಂದು ಚಿತ್ರದಲ್ಲಿ ರಸವತ್ತಾದ ಕ್ಷಣವನ್ನು ತುಂಬಿಸ ಬೇಕೆಂಬ ಗೀಳಿಗೆ ನೀವೂ ಬಲಿಯಾಗಿಬಿಟ್ಟಿರಾ...?" ಎಂಬರ್ಥದಲ್ಲಿ ಕೂರಂಬನ್ನು ತೂರಿ ಬಿಟ್ಟರು

Yagati Raghu Nadig Column: ಬಣ್ಣದ ಲೋಕದ ಒಂದೆರಡು ಕಪ್ಪು-ಬಿಳುಪು ಕಥೆಗಳು

ಅಂಕಣಕಾರ ಯಗಟಿ ರಘು ನಾಡಿಗ್

Profile Ashok Nayak Jan 26, 2025 7:19 AM

ರಸದೌತಣ

ಯಗಟಿ ರಘು ನಾಡಿಗ್‌

naadigru@gmail.com

ಇದು 1967ರಲ್ಲಿ ನಡೆದ ಪ್ರಸಂಗ. ಡಾ.ರಾಜ್ ಕುಮಾರ್ ಮತ್ತು ಕಲ್ಪನಾ ಅಭಿನಯದ ‘ಸರ್ವ ಮಂಗಳಾ’ ಚಲನಚಿತ್ರದ ಸನ್ನಿವೇಶವೊಂದರ ಚಿತ್ರೀಕರಣಕ್ಕೆ ತಂಡದವರು ಸಜ್ಜಾಗುತ್ತಿದ್ದರು. ಇದು ‘ಚದುರಂಗ’ ಎಂದೇ ಖ್ಯಾತರಾಗಿದ್ದ ಸಾಹಿತಿ ಸುಬ್ರಹ್ಮಣ್ಯರಾಜೇ ಅರಸ್ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ್ದ ಚಿತ್ರ. ಸ್ವತಃ ಚದುರಂಗರೇ ನಿರ್ದೇಶಕರ ಕ್ಯಾಪ್ ತೊಟ್ಟಿದ್ದರು. ಮೈಸೂರಿನ ಪಶ್ಚಿಮಕ್ಕೆ, ಕೊಡಗಿಗೆ ತಾಗಿಕೊಂಡಂತಿರುವ ಕಲ್ಲಹಳ್ಳಿಯ ಪರಿಸರದಲ್ಲಿ 1930ರ ಆಸು ಪಾಸಿನಲ್ಲಿ ನಡೆಯುವ ಕಥೆಯನ್ನು ಒಳಗೊಂಡಿತ್ತು ‘ಸರ್ವಮಂಗಳಾ’. ಕಾದಂಬರಿಯಾಗಿ ಅಪಾರ ಜನಮೆಚ್ಚುಗೆ ಪಡೆದಿದ್ದ ‘ಸರ್ವಮಂಗಳಾ’ಳನ್ನು ಬೆಳ್ಳಿತೆರೆಯ ಮೇಲೂ ಕಣ್ತುಂಬಿಕೊಳ್ಳಲು ಚಿತ್ರರ ಸಿಕರು ಬಯಸಿದಾಗ, ಕಾದಂಬರಿಕಾರ ಚದುರಂಗರೇ ಚಿತ್ರವನ್ನೂ ನಿರ್ದೇಶಿಸಲಿ ಎಂಬ ಆಶಯ ಹೊಮ್ಮಿತು. ಅಂತೆಯೇ ಈ ನೊಗವನ್ನು ಹೊರಲು ಮುಂದಾದರು ಚದುರಂಗರು.

ಕಥೆಯ ಪ್ರಕಾರ, ಈ ಚಿತ್ರದ ಒಂದು ಸನ್ನಿವೇಶದಲ್ಲಿ, ಕಥಾನಾಯಕಿ ಕಲ್ಪನಾ ಅವರು ಬೆನ್ನಿಗೆ ಉಪ್ಪಿನ ಶಾಖ ಕೊಡಿಸಿಕೊಳ್ಳುವ ದೃಶ್ಯ ಬರುತ್ತದೆ. ಆ ಸಂದರ್ಭವನ್ನು ಕಲ್ಪನಾರಿಗೆ ವಿವರಿಸಲು ಮುಂದಾದ ಚದುರಂಗರು, “ನೀವು ಈ ದೃಶ್ಯದಲ್ಲಿ ರವಿಕೆಯನ್ನು ಬಿಚ್ಚಿ ಬೆನ್ನಿನ ಭಾಗವನ್ನು ಬೆತ್ತಲೆ ಯಾಗಿಸಿ ಕೂತಿರಬೇಕು, ಮತ್ತೊಬ್ಬ ಪಾತ್ರಧಾರಿ ಬೆನ್ನಿನ ಹಿಂದಿದ್ದು ಉಪ್ಪಿನ ಶಾಖ ಕೊಡುತ್ತಾರೆ..." ಎಂದು ಹೇಳುತ್ತಾ ಹೋದರು. ಅಷ್ಟನ್ನೂ ತದೇಕಚಿತ್ತರಾಗಿ ಕೇಳಿಸಿಕೊಂಡ ಮತ್ತು ನೇರನುಡಿಗೆ ಹೆಸರಾಗಿದ್ದ ಕಲ್ಪನಾ ಅವರು ಚದುರಂಗರ ಕಣ್ಣುಗಳನ್ನೇ ದಿಟ್ಟಿಸುತ್ತಾ, “ಚದುರಂಗರೇ, ನೀವೊ ಬ್ಬರು ದೊಡ್ಡ ಸಾಹಿತಿ ಮತ್ತು ದೊಡ್ಡ ಮನುಷ್ಯ ಅಂದುಕೊಂಡಿದ್ದೆ. ಆದರೆ ನೀವು ಕೂಡ, ಒಬ್ಬ ಕಮರ್ಷಿಯಲ್ ಫಿಲ್ಮ್ ಡೈರೆಕ್ಟರ್ ಥರ, ‘ರವಿಕೆಯನ್ನು ಬಿಚ್ಚಿ ಬೆನ್ನಿನ ಭಾಗವನ್ನು ಬೆತ್ತಲೆಯಾಗಿಸಿ ಕೂರಬೇಕು’ ಅನ್ನುತ್ತಿದ್ದೀರಲ್ಲಾ? ಜೊಲ್ಲು ಸುರಿಸಿಕೊಂಡು ನೋಡುವ ಪ್ರೇಕ್ಷಕರಿಗೆಂದು ಚಿತ್ರದಲ್ಲಿ ರಸವತ್ತಾದ ಕ್ಷಣವನ್ನು ತುಂಬಿಸ ಬೇಕೆಂಬ ಗೀಳಿಗೆ ನೀವೂ ಬಲಿಯಾಗಿಬಿಟ್ಟಿರಾ...?" ಎಂಬರ್ಥದಲ್ಲಿ ಕೂರಂಬನ್ನು ತೂರಿ ಬಿಟ್ಟರು.

ವಯಸ್ಸಿನಲ್ಲಿ ತಮಗಿಂತ ಸಾಕಷ್ಟು ವರ್ಷ ಚಿಕ್ಕವರಾಗಿದ್ದ ಕಲ್ಪನಾ ಆಡಿದ ಅಷ್ಟೂ ಮಾತುಗಳನ್ನು ಶಾಂತಚಿತ್ತರಾಗಿಯೇ ಕೇಳಿಸಿಕೊಂಡ ಚದುರಂಗರು ತಮ್ಮ ಸ್ವಭಾವ-ಸಹಜ ನವಿರುದನಿಯಲ್ಲಿ, “ತಾಯೀ, ಇದು 1930ರ ಆಸುಪಾಸಿನಲ್ಲಿ, ಗ್ರಾಮೀಣ ಪರಿಸರದಲ್ಲಿ ನಡೆಯುವ ಕಥೆ. ನೀವು ಹೇಳಿ ದಂಥ ಚಪಲ ನನಗಿಲ್ಲ ಕಣವ್ವಾ. ಸಾಕಷ್ಟು ಗಟ್ಟಿಯಾಗಿರುವ ‘ಸರ್ವಮಂಗಳಾ’ ಕಥೆಯ ಪ್ರಸ್ತುತಿಗೆ ಅಂಥ ಚೀಪ್ ಗಿಮಿಕ್‌ನ ಅಗತ್ಯವೂ ಇಲ್ಲ. ಪಾತ್ರಧಾರಿಯು ನಿಮ್ಮ ಬೆನ್ನಿಗೆ ಉಪ್ಪಿನಶಾಖ ಕೊಡು ವಾಗ ನೀವು ಪ್ರೇಕ್ಷಕರಿಗೆ ಆ ಬೆನ್ನು ತೋರಿಸಿ ಕೊಂಡು ಕೂತಿರುವುದಿಲ್ಲ, ಬದಲಿಗೆ ಮನದಾಳದ ನೋವನ್ನು-ಭಾವನೆಗಳನ್ನು ಬಿಂಬಿಸುವ ನಿಮ್ಮ ಮುಖದ ರೇಖೆಗಳನ್ನು ಕ್ಯಾಮರಾ ಸೆರೆಹಿಡಿ ಯುತ್ತಿರುತ್ತದೆ. ಹಾಗೊಮ್ಮೆ ನಿಮ್ಮ ಬೆತ್ತಲೆ ಮೈಯನ್ನು ತೋರಿಸಬೇಕೆಂಬ ಕೀಳುಕಾಮನೆ ನನ್ನಲ್ಲಿ ಇದ್ದಿದ್ದರೆ, ಬೆನ್ನಿನ ಬದಲು ದೇಹದ ಮುಂಭಾಗವನ್ನು ಬೆತ್ತಲೆಯಾಗಿಸಿ ಅದರ ಮೇಲೆ ಕ್ಯಾಮರಾ ಕಣ್ಣು ಹರಿದಾಡುವಂತೆ ಮಾಡುತ್ತಿದ್ದೆ..." ಎಂದು ಶಿಷ್ಟಭಾಷೆಯಲ್ಲೇ ಮನವರಿಕೆ ಮಾಡಿಕೊಟ್ಟರು. ಚದುರಂಗರ ಮಾತು ಮುಗಿಯುವ ಹೊತ್ತಿಗಾಗಲೇ ಕಲ್ಪನಾರ ಕಣ್ಣುಗಳು ಅಕ್ಷರಶಃ ಕೊಳಗಳಾಗಿ ದ್ದವು. “ನನ್ನನ್ನು ಕ್ಷಮಿಸಿಬಿಡಿ ಚದುರಂಗರೇ, ಚಿತ್ರೋದ್ಯಮದಲ್ಲಿ ಇಷ್ಟೂ ವರ್ಷ ಕೆಲವೊಂದು ಆಷಾಢಭೂತಿಗಳನ್ನು ನೋಡಿಕೊಂಡೇ, ನೋವನ್ನು ನುಂಗಿಕೊಂಡೇ ಬಂದ ನಾನು, ನೀವೂ ಹಾಗೆಯೇ ಅಂತ ತಪ್ಪಾಗಿ ತಿಳ್ಕೊಂಡುಬಿಟ್ಟಿದ್ದೆ, ನನ್ನ ಉದ್ಧಟತನವನ್ನು ಮನ್ನಿಸಿ..." ಎಂದು ಹೇಳಿ ಎದ್ದುನಿಂತು ಕೈಮುಗಿದರು!

“ಪರವಾಗಿಲ್ಲ ಕಣಮ್ಮಾ, ನಿಮ್ಮ ಸಂದೇಹ ಪರಿಹಾರವಾಯ್ತಲ್ಲಾ, ನನಗಷ್ಟು ಸಾಕು" ಎನ್ನುತ್ತಾ ಚದುರಂಗರು ಮುಂದಿನ ದೃಶ್ಯದ ಸಂಯೋಜನೆಗೆಂದು ಛಾಯಾಗ್ರಾಹಕರ ಜತೆ ಸಮಾಲೋಚಿಸಲು ತೆರಳಿದರು. ಇತ್ತ ಕಲ್ಪನಾ ಅವರು ಬಹಳ ಕಾಲದವರೆಗೂ ಚದುರಂಗರನ್ನೇ ಕೃತಜ್ಞತಾಪೂರ್ವಕ ಭಾವದಿಂದ ನೋಡುತ್ತಿದ್ದರು...

1968ರಲ್ಲಿ ‘ಸರ್ವಮಂಗಳಾ’ ಬಿಡುಗಡೆಯಾಯಿತು. 1930ರ ಕಾಲಘಟ್ಟದಲ್ಲಿನ ಕಲ್ಲಹಳ್ಳಿಯ ಪರಿಸರದ ದಟ್ಟ ವಿವರವನ್ನು, ಹರೆಯದ ಬೆಚ್ಚನೆಯ ಭಾವನೆಗಳು, ಭಗ್ನಪ್ರೇಮ, ಸಮಾಜದ ನೈತಿಕತೆಯ ಚೌಕಟ್ಟುಗಳ ಚಿತ್ರಣದೊಂದಿಗೆ ಹದವಾಗಿ ಮಿಳಿತಗೊಳಿಸಿಕೊಂಡಿದ್ದ, ಅದುವರೆಗೂ ಪುಸ್ತಕ ರೂಪದಲ್ಲಿ ಓದುಗರನ್ನು ರಂಜಿಸಿದ್ದ ‘ಸರ್ವಮಂಗಳಾ’, ರಾಜ್‌ಕುಮಾರ್ ಹಾಗೂ ಕಲ್ಪನಾ ರ ಶ್ರೇಷ್ಠ ಅಭಿನಯದಿಂದಾಗಿ ಚಿತ್ರರಸಿಕರನ್ನೂ ಮನರಂಜಿಸಿದಳು. ರಾಜ್ಯ ಸರಕಾರದ ವತಿಯಿಂದ ‘ತೃತೀಯ ಅತ್ಯುತ್ತಮ ಚಿತ್ರ’ ಪುರಸ್ಕಾರವನ್ನು ನಿರ್ಮಾತೃಗಳಿಗೆ ದಕ್ಕಿಸಿಕೊಟ್ಟಿದ್ದರ ಜತೆಗೆ, ಉತ್ತಮ ಕಥೆ ಹಾಗೂ ಸಂಭಾಷಣೆಗೆಂದು ಚದುರಂಗರಿಗೆ 2 ಪ್ರಶಸ್ತಿಗಳನ್ನು ಮೊಗೆದುಕೊಟ್ಟಳು ‘ಸರ್ವ ಮಂಗಳಾ’...

“ಸಿನಿಮಾ ಮಾಡೋಣ ಅಂದ್ರೆ ಕನ್ನಡದಲ್ಲಿ ಒಳ್ಳೆಯ ಕಥೆಗಳೇ ಸಿಗೋದಿಲ್ಲ" ಎಂದು ಕುಂಟುನೆಪ ಹೇಳುವವರು ಇಂದು ಸಾಕಷ್ಟು ಸಿಗುತ್ತಾರೆ. ಅನರ್ಘ್ಯ ಮುತ್ತುಗಳನ್ನು ಹೆಕ್ಕಬೇಕು ಎಂದರೆ ಸೊಂಟ ಕ್ಕೆ ಹಗ್ಗಬಿಗಿದುಕೊಂಡು ಕಡಲಾಳಕ್ಕೆ ಧುಮುಕಲೇಬೇಕು ಎಂಬ ಸಾರ್ವಕಾಲಿಕ ಸತ್ಯವನ್ನು ಇಂಥ ಪ್ರಭೃತಿಗಳಿಗೆ ಮನವರಿಕೆ ಮಾಡಿಕೊಡುವವರು ಯಾರು? ಆದರೆ, ಇಂಥ ಸಾಧ್ಯತೆಯನ್ನು 1968 ರಲ್ಲೇ ತೋರಿಸಿಕೊಟ್ಟವರು ಚದುರಂಗರು. ಈ ಪರಂಪರೆಗೆ ಸಾಥ್ ಕೊಟ್ಟವರಲ್ಲಿ ಪುಟ್ಟಣ್ಣ ಕಣಗಾ ಲರು, ಎಸ್.ಸಿದ್ದಲಿಂಗಯ್ಯ, ದೊರೆ-ಭಗವಾನ್, ಕೆ.ವಿ.ಜಯರಾಂ ಮುಂತಾದ ನಿರ್ದೇಶಕರೂ ಸೇರಿ ದ್ದಾರೆ ಎಂಬುದನ್ನು ಮರೆಯಲಾಗದು.

***

ಈಗ ಹೇಳಲಿರುವ ಪ್ರಸಂಗವು ಈಗಾಗಲೇ ಬಹುತೇಕರು ಮೆಲುಕುಹಾಕಿರುವಂಥದ್ದೇ. ಆದರೂ, ಆ ಊಟವನ್ನು ಮಿಸ್ ಮಾಡಿಕೊಂಡವರಿಗಾಗಿ ಮತ್ತೊಮ್ಮೆ ಈ ಕೈತುತ್ತು! ಅದೊಂದು ಭಕ್ತಿಪ್ರಧಾನ ಚಲನಚಿತ್ರದ ನಿರ್ಮಾಣ-ಪೂರ್ವ ಸಂದರ್ಭ. ಚಿತ್ರದ ಚಿತ್ರೀಕರಣಕ್ಕೆ ತೆರಳುವುದಕ್ಕೂ ಮೊದಲು ಗೀತೆಗಳ ರಚನೆ ಆಗಬೇಕಿತ್ತು. ಆದರೆ ಗೀತರಚನೆಕಾರರು ಎಷ್ಟು ತಿಣುಕಾಡಿದರೂ ಪದಗಳೇ ಹೊಮ್ಮುತ್ತಿಲ್ಲ. ಅಷ್ಟೊತ್ತಿಗಾಗಲೇ ಸಾಕಷ್ಟು ಚಿತ್ರಗಳಿಗೆ ಕಥೆ-ಚಿತ್ರಕಥೆ-ಸಂಭಾಷಣೆ-ಗೀತೆ-ನಿರ್ದೇ ಶನವನ್ನು ನೀಡಿದ್ದ ದೈತ್ಯಪ್ರತಿಭೆ ಅದು, ಆದರೂ ಅಂದೇಕೋ ಏನೂ ಗಿಟ್ಟಲಿಲ್ಲ. ಬಹಳ ಹೊತ್ತಿ ನಿಂದ ಅವರ ತೊಳಲಾಟವನ್ನು ನೋಡುತ್ತಲೇ ಇದ್ದ ಸಂಗೀತ ನಿರ್ದೇಶಕರು, “ಒಂದು ಸಲ ದಮ್ ಹೊಡಿ, ಏನಾದ್ರೂ ಐಡಿಯಾ ಹೊಳೆಯಬಹುದು" ಎಂದು ತಿದಿಯೊತ್ತಿದರು. ಅಂತೆಯೇ ಸದರಿ ಚಿತ್ರಸಾಹಿತಿ ಸಿಗರೇಟನ್ನು ಹಚ್ಚಿ ತುಟಿಗಿಟ್ಟುಕೊಂಡರು. ದಮ್ ಎಳೆಯುವಾಗೊಮ್ಮೆ ಸಿಗರೇಟಿನ ಕಿಡಿ ಬಿದ್ದು ಚರ್ಮ ಸುಟ್ಟುಹೋಯಿತು. ಇತ್ತ ಸಂಗೀತ ನಿರ್ದೇಶಕರು ಗಾಬರಿಗೊಂಡರೆ, ಗೀತ ಸಾಹಿತಿಯ ಮುಖದಲ್ಲಿ ಮಂದಹಾಸ ಅರಳಿತ್ತು. ಕಾರಣ, ಗೀತೆಯ ಆರಂಭಿಕ ಸಾಲು ಮನದಲ್ಲಿ ಸುರಿಸಿತ್ತು. ಅದುವೇ, “ಮಾನವ ದೇಹವು ಮೂಳೆ ಮಾಂಸದ ತಡಿಕೆ, ಇದರ ಮೇಲಿದೆ ತೊಗಲಿನ ಹೊದಿಕೆ, ತುಂಬಿದೆ ಒಳಗೆ ಕಾಮಾದಿ ಬಯಕೆ" ಎಂಬ ಫಿಲಾಸಫಿಕಲ್ ಹೂರಣದ ಒಬ್ಬಟ್ಟು! ಸಿಗರೇ ಟಿನ ಕಿಡಿಯನ್ನು ಹಾಗೆ ಚರ್ಮದ ಮೇಲೆ ಬೀಳಿಸಿಕೊಂಡು ಸುಟ್ಟುಕೊಂಡು ಇಂಥ ಅನು ಪಮ ಗೀತೆಯನ್ನು ಕಟ್ಟಿಕೊಟ್ಟವರು ಅಭಿಜಾತ ಪ್ರತಿಭೆ ಹುಣಸೂರು ಕೃಷ್ಣಮೂರ್ತಿಯವರು. ಅದಕ್ಕೆ ಲಗತ್ತಾದ ರಾಗ ಸಂಯೋಜಿಸಿ, ಸಾಹಿತ್ಯದ ಮೌಲ್ಯವನ್ನು ಮತ್ತಷ್ಟು ಉನ್ನತೀಕರಿಸಿದವರು ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರು. ಈ ಎರಡೂ ರಸಗಳನ್ನು ಸಮರ್ಥವಾಗಿಯೇ ಮೈಗಿಳಿಸಿ ಕೊಂಡು ಅಭಿನಯದಲ್ಲಿ ಸಮರ್ಥ ರಸಾನುಭೂತಿ ಮೂಡಿಸಿದವರು ಡಾ.ರಾಜ್ ಕುಮಾರ್ ಅವರು! ಆ ಚಿತ್ರವೇ ‘ಭಕ್ತ ಕುಂಬಾರ’ ಎಂಬುದು ನಿಮಗೀಗಾಗಲೇ ಗೊತ್ತಾಗಿರಲಿಕ್ಕೂ ಸಾಕು!

ಸಾಕಷ್ಟು ತಿಂಗಳ ಕಾಲ ಧೇನಿಸಿ ಹಾಡು ಬರೆಯುವುದಕ್ಕೆ ಅನುವು ಮಾಡಿಕೊಡದ, ಆಶುಸಾಹಿತ್ಯಕ್ಕೇ ಬಹುತೇಕ ಮಣೆ ಹಾಕಬೇಕಾಗಿ ಬರುವ, ಇಷ್ಟು ಸಾಲದೆಂಬಂತೆ ಪೂರ್ವಭಾವಿಯಾಗಿ ಸಿದ್ಧಪಡಿಸ ಲಾದ ಟ್ಯೂನ್‌ಗಳಿಗೆ ‘ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದಂತೆ’ ಹಾಡಿನ ಸಾಲುಗಳನ್ನು ಹೊಸೆಯಬೇಕಾದ ಅನಿವಾರ್ಯತೆಯಿರುವ ಚಲನಚಿತ್ರರಂಗದಲ್ಲಿ, ಇಂಥ ಎಲ್ಲ ಸವಾಲುಗಳ ನಡುವೆಯೂ ಅನುಪಮ ಗೀತೆಗಳನ್ನು ಹುಣಸೂರರು ಕಟ್ಟಿಕೊಟ್ಟರೆಂದರೆ, ಅವರ ಓದಿನ ಆಳ, ಅಧ್ಯಯನದಲ್ಲಿನ ತಾಳ್ಮೆ ಮತ್ತು ಏಕಾಗ್ರತೆಯ ತಾಕತ್ತು ಅದಿನ್ನೆಷ್ಟಿರಬೇಕು ಎಂಬುದನ್ನೊಮ್ಮೆ ಕಲ್ಪಿಸಿಕೊಳ್ಳಿ.

ತಮಾಷೆಯೆಂದರೆ, ಹುಣಸೂರು ಕೃಷ್ಣಮೂರ್ತಿಯವರ ಈ ‘ಸಿಗರೇಟು ಕಿಡಿ’ಯ ಪ್ರಸಂಗವನ್ನು ಕೇಳಿ ತಿಳಿದುಕೊಂಡ ಕೆಲವರು, ಗೀತೆ ರಚನೆಯ ವೇಳೆ ‘ಸ್ಪೂರ್ತಿಗೆ’ ಎಂದು ನೆಪ ಹೇಳಿ ಪ್ಯಾಕುಗಟ್ಟಲೆ ಸಿಗರೇಟು ಸೇದಿದ್ದಿದೆ. ಆದರೆ ಇಂಥ ಬಹುತೇಕ ಸಂದರ್ಭಗಳಲ್ಲಿ ಸೃಷ್ಟಿಯಾಗಿರುವುದು ‘ಸಿಗರೇಟಿನ ಬೂದಿಯಂಥ’ ಸಾಹಿತ್ಯವಷ್ಟೇ ಎಂಬುದು ವಿಪರ್ಯಾಸ!

ಗೀತೆಯೊಂದರ ರಚನೆಯ ಹಿಂದೆ ಇರುವ ಶ್ರಮವೆಷ್ಟು ಎಂಬುದನ್ನು ಅರ್ಥಮಾಡಿಕೊಳ್ಳದ ಚಿತ್ರೋದ್ಯಮದ ಕೆಲವೊಂದು ಬೃಹಸ್ಪತಿಗಳು Two Minute Noodles ತಯಾರಿಸುವ ರೀತಿಯಲ್ಲೇ ಗೀತೆಯನ್ನು ಹೊಸೆಯಲು ಹೇಳಿದಾಗ, ಹೊಟ್ಟೆಪಾಡಿನ ಕಾರಣಕ್ಕೋ, ಸ್ನೇಹದ ಹಂಗಿಗೋ, ಅವಕಾಶ ಕೊಡುತ್ತಿದ್ದಾರಲ್ಲಾ ಎಂಬ ದಾಕ್ಷಿಣ್ಯಕ್ಕೋ ಹಾಗೆ ಆಶುಕವಿತೆಗಳನ್ನು ರಚಿಸಿದವರಲ್ಲಿ ಎದ್ದುಕಾಣುವ ಹೆಸರು ಚಿ.ಉದಯಶಂಕರ್ ಅವರದ್ದು. ಹಾಡಿನ ಸಂದರ್ಭವನ್ನು ಒಮ್ಮೆ ವಿವರಿಸಿ ಟ್ಯೂನ್ ನೀಡಿಬಿಟ್ಟರೆ ಒಂದರ ಹಿಂದೆ ಒಂದರಂತೆ ಮೂರ‍್ನಾಲ್ಕು ಗೀತೆಗಳನ್ನೂ, ಅದಕ್ಕೆ ಸಾಕಷ್ಟು ‘ಪರ್ಯಾಯ ಪಲ್ಲವಿ’ಗಳನ್ನೂ ಮೊಗೆದು ಕೊಡುತ್ತಿದ್ದ ಸಾಹಿತ್ಯದೈತ್ಯ ಅವರು. “ಚಿ.ಉದಯಶಂಕರ್ ಅವರು ತಮ್ಮದೇ 10 ಗೀತೆಗಳನ್ನು ಇಟ್ಟುಕೊಂಡು 11ನೆಯ ಗೀತೆಯನ್ನು ರಚಿಸಿಬಿಡುತ್ತಾರೆ" ಎಂಬ ಟೀಕೆಗಳು ಈ ಸಂದರ್ಭದಲ್ಲಿ ಹೊಮ್ಮಿದರೂ ನೊಂದುಕೊಳ್ಳದೆ, ಅಕ್ಷರಕೃಷಿಯನ್ನೇ ನೆಚ್ಚಿದ್ದ ಜೀವವದು. “ನಿಮ್ಮ ಹಾಡುಗಳಲ್ಲಿ ‘ಸಂತೋಷ-ಉಲ್ಲಾಸ’, ‘ಆಟ-ನೋಟ’, ‘ಆಸೆ-ಭಾಷೆ’ ಇಂಥ ಸರಳ ಪದಗಳೇ ತುಂಬಿಕೊಂಡಿರುತ್ತವಲ್ಲಾ? ಗಹನ ಸಾಹಿತ್ಯವನ್ನು ನೀಡೋಕ್ಕೆ ನಿಮಗೆ ಬರೋಲ್ವಾ?" ಎಂದೂ ಕೆಲವರು ಉದಯಶಂಕರರ ಕಾಲೆಳೆದಿದ್ದುಂಟು. ಆಗೆಲ್ಲಾ ಉದಯಶಂಕರ್, “ನೋಡೀ, ಚಲನಚಿತ್ರವನ್ನು ವೀಕ್ಷಿಸಲು ಅಕ್ಷರಸ್ಥರು, ಭಾರಿ ವಿದ್ಯಾವಂತರು ಮಾತ್ರವೇ ಬರೋಲ್ಲ; ಓದು-ಬರಹ ಅರಿಯದವರೂ ಚಿತ್ರಮಂದಿರದಲ್ಲಿ ಸಾಕಷ್ಟು ತುಂಬಿಕೊಂಡಿರ‍್ತಾರೆ. ನಾನು ಹಾಡು ಬರೆಯುವಾಗ ‘ತಿಣುಕಿ ತಿಣುಕಿ’ ಬರೆದ್ರೆ, ಇಂಥ ಪ್ರೇಕ್ಷಕರು ಅದನ್ನು ಅರ್ಥಮಾಡಿಕೊಳ್ಳುವಾಗಲೂ ತಿಣುಕಬೇಕಾಗುತ್ತೆ. ಹೀಗಾಗಿ ಲಭ್ಯವಿರುವ ಸಮಯದಲ್ಲೇ ಸರಳ ಪದಗಳಿಂದ ಹಾಡು ಕಟ್ಟೋದು ನನ್ನ ಶೈಲಿ" ಎಂದು ಉತ್ತರಿಸಿದ್ದುಂಟು. ಈ ಕಾರಣಕ್ಕೇ ಇರಬೇಕು, “ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ?" ಎಂಬ ಅಲ್ಲಮಪ್ರಭುಗಳ ವಚನವನ್ನು ಓದಲರಿಯ ದವರು, “ಮಾಮರವೆಲ್ಲೋ ಕೋಗಿಲೆಯೆಲ್ಲೋ, ಏನೀ ಸ್ನೇಹ ಸಂಬಂಧ, ಎಲ್ಲಿಯದೋ ಈ ಅನು ಬಂಧ" (ಚಿತ್ರ: ದೇವರಗುಡಿ) ಎಂಬ ಹಾಡನ್ನು ಸುಲಭವಾಗಿ ಗುನುಗುತ್ತಾರೆ, ಅದರ ಸಾರವನ್ನು ಸಾಧ್ಯವಾದಷ್ಟರ ಮಟ್ಟಿಗೆ ಗ್ರಹಿಸುತ್ತಾರೆ. ಅಂತೆಯೇ, “ನೆಲ ಹೊತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹೊತ್ತಿ ಉರಿದಡೆ ನಿಲಲುಬಾರದು" ಎಂಬ ಬಸವಣ್ಣನವರ ವಚನವು ‘ಎರಡು ಕನಸು’ ಚಿತ್ರದ ‘ಬಾಡಿಹೋದ ಬಳ್ಳಿಯಿಂದ’ ಗೀತೆಯಲ್ಲಿ “ಹಣತೆಯಲ್ಲಿ ದೀಪ ಉರಿಯೆ ಬೆಳಕಿನಲ್ಲಿ ಬಾಳುವೆ, ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ?" ಎಂಬ ಸಾಲಾಗಿ ಚಿತ್ರಪ್ರೇಮಿಗಳ ನಾಲಿಗೆ ಯಲ್ಲೂ ನಲಿದಾಡುತ್ತದೆ. ಈ ಎರಡೂ ಗೀತೆಗಳನ್ನು ರಚಿಸಿದವರು ಚಿ.ಉದಯಶಂಕರ್ ಅವರೇ!

ಚದುರಂಗರಂಥ ಸಾಹಿತಿ ಮತ್ತು ನಿರ್ದೇಶಕರಿಗೆ, ಹುಣಸೂರು ಕೃಷ್ಣಮೂರ್ತಿ ಹಾಗೂ ಚಿ.ಉದಯ ಶಂಕರರಂಥ ಚಿತ್ರಸಾಹಿತಿಗಳಿಗೆ ಜನ್ಮವಿತ್ತ ‘ಕರುನಾಡು’ ನಮ್ಮದು ಎಂಬುದು ಹೆಮ್ಮೆಪಡುವ ಸಂಗತಿ ಯಲ್ಲವೇ?