Padayatra reached 5th Day: ಬಿರು ಬಿಸಿಲಲ್ಲೂ ಬಿಜೆಪಿ ಜಾಥಾ, ಶಿಕ್ಷಕರ ದಿನಾಚರಣೆಯಲ್ಲಿ ಬಿವೈವಿ ಭಾಗಿ: ಪಾದಯಾತ್ರೆ ಮಧ್ಯೆ ರೈತರ ಜತೆ ಸಂವಾದ
ಮರಳಿ ಗ್ರಾಮದಲ್ಲಿ ನವಲಿ ಜಲಾಶಯ ನಿರ್ಮಾಣದ ಸಾಧಕ- ಬಾಧಕಗಳ ಕುರಿತು ರೈತ ಸಂಘಟನೆ ಮುಖಂಡರೊಂದಿಗೆ ಸಂವಾದ ನಡೆಸಿದರು. ಶನಿವಾರ ಬೆಳಗ್ಗೆ ಪಾದಯಾತ್ರೆ ಆರಂಭಕ್ಕೂ ಮೊದಲು ಎಪಿಎಂಸಿ 1ನೇ ಗೇಟ್ ನ ಶಿವಕಿರಣ ಟ್ರೇಡಿಂಗ್ ಸಮೀಪ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾದ ರಾಜ್ಯಾಧ್ಯಕ್ಷ ಬಿವೈವಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು.
-
ಶರಣಬಸವ ಹುಲಿಹೈದರ
ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರಕಾರದ ‘ಜನ ವಿರೋಧಿ ನೀತಿ’ ವಿರೋಧಿಸಿ ರಾಜ್ಯ ಬಿಜೆಪಿ ಕೈಗೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆ 5ನೇ ದಿನ ಕೊಪ್ಪಳ ಜಿಲ್ಲೆಯಲ್ಲಿ ಮುಂದುವರಿದಿದೆ. ಕಾರಟಗಿ ಪಟ್ಟಣದ ಕನಕದಾಸ ವೃತ್ತದಲ್ಲಿ ಆರಂಭಗೊಂಡ 5ನೇ ದಿನದ ಪಾದಯಾತ್ರೆ 22 ಕಿ.ಮೀ ಕ್ರಮಿಸಿ ಗಂಗಾವತಿ ತಾಲೂಕು ಜಂಗಮರ ಕಲ್ಗುಡಿ ಗ್ರಾಮದಲ್ಲಿ ಸಮಾರೋಪಗೊಂಡಿತು. ಇದರ ನಡುವೆಯೇ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡರು.
ಮರಳಿ ಗ್ರಾಮದಲ್ಲಿ ನವಲಿ ಜಲಾಶಯ ನಿರ್ಮಾಣದ ಸಾಧಕ- ಬಾಧಕಗಳ ಕುರಿತು ರೈತ ಸಂಘಟನೆ ಮುಖಂಡರೊಂದಿಗೆ ಸಂವಾದ ನಡೆಸಿದರು. ಶನಿವಾರ ಬೆಳಗ್ಗೆ ಪಾದಯಾತ್ರೆ ಆರಂಭಕ್ಕೂ ಮೊದಲು ಎಪಿಎಂಸಿ 1ನೇ ಗೇಟ್ ನ ಶಿವಕಿರಣ ಟ್ರೇಡಿಂಗ್ ಸಮೀಪ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾದ ರಾಜ್ಯಾಧ್ಯಕ್ಷ ಬಿವೈವಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು , ಶಿಕ್ಷಕರೆಂದರೆ ಕೇವಲ ಪಾಠ ಹೇಳಿ ಕೊಡುವವರಲ್ಲ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಮಹತ್ತರ ಕಾರ್ಯ ನಿರ್ವಹಿಸುತ್ತಾರೆ ಎಂದು ಶ್ಲಾಘಿಸಿದರು. ಮಕ್ಕಳ ವ್ಯಕ್ತಿತ್ವ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಗಮನಾರ್ಹ. ಒಳ್ಳೆಯ ಶಿಕ್ಷಕ ಒಂದು ಪೀಳಿಗೆಯನ್ನು ಬದಲಾಯಿಸಬಲ್ಲರು. ಪ್ರಧಾನಿ ನರೇಂದ್ರ ಮೋದಿ ಅವರು 2047ರಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ಯುವಶಕ್ತಿ ಸರಿದಾರಿಯಲ್ಲಿ ಒಯ್ಯಬಲ್ಲ ಮಹತ್ವದ ಕಾರ್ಯ ಶಿಕ್ಷಕರು ಮಾಡುತ್ತಾರೆ ಎಂದು ಹೇಳಿರುವುದನ್ನು ಉಲ್ಲೇಖಿಸಿದರು.
ನಂತರ ಕಾರಟಗಿ ಪಟ್ಟಣದ ಆರಾಧ್ಯ ದೈವ ಶ್ರೀ ಶರಣ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಕನಕದಾಸ ವೃತ್ತದಿಂದ ಪಾದಯಾತ್ರೆ ಆರಂಭಿಸಿದರು. ಪಾದಯಾತ್ರೆ ಶುರು ಆಗುತ್ತಿದ್ದಂತೆಯೇ ಬಿಜೆಪಿ ಪರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಮುಗಿಲು ಮುಟ್ಟಿದ್ದವು. 5ನೇ ದಿನವೂ ಬಿಜೆಪಿ ಪಾದಯಾತ್ರೆಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು. ಕನಕಗಿರಿ ಮತ್ತು ಗಂಗಾವತಿ ವಿಧಾನಸಭೆ ಕ್ಷೇತ್ರದ ನೂರಾರು ಬಿಜೆಪಿ ಕಾರ್ಯಕರ್ತರು, ಪಾದಯಾತ್ರೆ ಯಲ್ಲಿ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಉತ್ಸಾಹ 5ನೇ ದಿನವೂ ಸ್ವಲ್ಪವೂ ಕುಗ್ಗಿರಲಿಲ್ಲ. ಸುಮಾರು 2 ಕಿ.ಮೀ ವರೆಗೆ ಜನದಟ್ಟಣೆ ಕಂಡು ಬಂತು.
ರೈತರೊಂದಿಗೆ ಸಂವಾದ: ಮರಳಿ ಸಮೀಪದ ಜಮೀನಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನವಲಿ ಜಲಾಶಯ ನಿರ್ಮಾಣದ ಸಾಧಕ- ಬಾಧಕಗಳ ಕುರಿತು ರೈತ ಸಂಘಟನೆ ಮುಖಂಡರೊಂದಿಗೆ ಸಂವಾದ ನಡೆಸಿದರು. ಪ್ರಸ್ತಾವಿತ ನವಲಿ ಜಲಾಶಯದ ಹಿನ್ನೀರು ಮತ್ತು ಮುಂದಿನ ಭಾಗದ ರೈತರು ಜಲಾಶಯ ನಿರ್ಮಾಣದಿಂದ ಆಗುವ ಲಾಭ ಮತ್ತು ನಷ್ಟಗಳ ಬಗ್ಗೆ ಚರ್ಚಿಸಿದರು. ಸಂವಾದದ ನಂತರ ಮಾತನಾಡಿದ ಬಿ.ವೈ. ವಿಜಯೇಂದ್ರ, ಟಿಬಿ ಡ್ಯಾಂನಲ್ಲಿ ಸುಮಾರು 34 ಟಿಎಂಸಿ ಹೂಳು ತುಂಬಿದೆ. ಇದರಿಂದ ನೀರಿನ ಸಂಗ್ರಹ ಕಡಿಮೆ ಆಗಿದೆ. ಆದ್ದರಿಂದ ನವಲಿ ಸಮಾನಾಂತರ ಜಲಾಶಯದ ಅಗತ್ಯವಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಆಲೋಚನೆ ಮಾಡಿದ್ದರು. ನಂತರ ಯಾವುದೇ ಕ್ರಮ ಆಗಲೇ ಇಲ್ಲ ಎಂದರು.
ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ರಾಜ್ಯ ಸರಕಾರ ತೀರ್ಮಾನ ಮಾಡಿ, ಬಜೆಟ್‌ನಲ್ಲಿ ಹಣ ಮೀಸಲು ಇಡಬೇಕಿತ್ತು. ಇಲ್ಲದಿದ್ದರೆ ಬರದ ಸಂದರ್ಭದಲ್ಲಿ ರೈತರಿಗೆ ನೀರಿಲ್ಲದೆ ತೊಂದರೆ ಯಾಗಲಿದೆ. ಕೇವಲ ಘೋಷಣೆ ಮಾಡಿದರೆ ಸಾಲದು. ಬದಲಿಗೆ ಯೋಜನೆ ಕಾರ್ಯರೂಪಕ್ಕೆ ಬರಬೇಕು ಎಂದು ಆಗ್ರಹಿಸಿದರು. ನವಲಿ ಜಲಾಶಯದಂತಹ ಪರ್ಯಾಯ ವ್ಯವಸ್ಥೆ ಇದ್ದರೆ ಅನುಕೂಲವಾಗಲಿದೆ ಎಂದು ಪ್ರತಿಪಾದಿಸಿದರು. ಸಮಾನಾಂತರ ಜಲಾಶಯ ಬೇಕೋ ಅಥವಾ ಟಿಬಿ ಡ್ಯಾಂನ ಹೂಳು ತೆಗೆಯಬಹುದೊ ಎಂಬುದರ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು.
ಜಲಾಶಯದಲ್ಲಿ ನೀರು ಇzಗ ಹೂಳು ತೆಗೆಯಲು ಆಗುವುದಿಲ್ಲ. ನೀರು ಇಲ್ಲದಿದ್ದಾಗ ಹೂಳು ತೆಗೆಯಬಹುದು. ಯೋಜನೆ ಬಗ್ಗೆ ರೈತ ಮುಖಂಡರಲ್ಲಿ ಗೊಂದಲ ಬೇಡ ಎಂದು ಹೇಳಿದರು. ಮಾಜಿ ಶಾಸಕ ಬಸವರಾಜ ಧಡೇಸೂಗುರು, ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ಕ್ಯಾವಟರ, ರೈತರಾದ ಮರಿಯಪ್ಪ, ದುರ್ಗೇಶ ಹೊಸಗೇರಿ ಸೇರಿ ಇತರರು ಇದ್ದರು. ಮಾಜಿ ಸಚಿವ ಬಿ.ಶ್ರೀರಾಮುಲು, , ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಸಂಸದ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಮಾಜಿ ಶಾಸಕರಾದ ಎಂ.ಪಿ.ರೇಣುಕಾ ಚಾರ್ಯ, ಅನಿಲ್ ಬೆನಕೆ, ಬಂಗಾರು ಹನುಮಂತು ಸೇರಿ ಇತರರು ಪಾದಯಾತ್ರೆಯಲ್ಲಿ ಭಾಗಿಯಾದರು.
ಮರಳಿ ಗ್ರಾಮದಲ್ಲೇ ಸಮಾರೋಪ
ಮರಳಿ ಗ್ರಾಮದಲ್ಲಿ ಜೆಸಿಬಿ ಮೂಲಕ ಬೃಹತ್ ಹೂವಿನ ಹಾರ ಹಾಕಿ, ವಿಜಯೇಂದ್ರ ಅವರನ್ನು ಸ್ವಾಗತಿಸಲಾಯಿತು. ಬಿಜೆಪಿ ಪ್ರವಾಸ ಪಟ್ಟಿಯಂತೆ 5ನೇ ದಿನದ ಪಾದಯಾತ್ರೆ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸುವ ಮೂಲಕ ಸಮಾರೋಪ ಗೊಳ್ಳಬೇಕಿತ್ತು. ಆದರೆ, ಜಂಗಮರ ಕಲ್ಗುಡಿ ಗ್ರಾಮದಲ್ಲಿ ರಸ್ತೆ ಇಕ್ಕಟ್ಟಾಗಿದ್ದರಿಂದ ಮರಳಿ ಗ್ರಾಮದ ಬಸ್ ನಿಲ್ದಾಣದ ಬಹಿರಂಗ ಸಮಾರಂಭ ನಡೆಯಿತು. ನಂತರ ನಿಗದಿಯಂತೆ ಪಾದಯಾತ್ರೆ ಜಂಗಮರ ಕಲ್ಗುಡಿ ಗ್ರಾಮದ ವರೆಗೆ ನಡೆದು, ಸಮಾರೋಪಗೊಂಡಿತು.
![]()
ಬಿಜೆಪಿ ಪಾದಯಾತ್ರೆ ಆರಂಭಿಸಿದ ನಂತರ ವಿಶೇಷ ಅಧಿವೇಶನ ನಡೆಸಲು ಆಗ್ರಹಿಸಿದ್ದೆವು. ಈ ಮೂಲಕ ರೈತರ ಸಮಸ್ಯೆ ಚರ್ಚಿಸಲು ಕೇಳಿಕೊಂಡಿzವು. ಇದೀಗ ಸಿಎಂ ವಿಶೇಷ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. ಈ ವಿಶೇಷ ಅಧಿವೇಶನದಲ್ಲಿ ನವಲಿ ಸಮನಾಂತರ ಜಲಾಶಯದ ಬಗ್ಗೆಯೂ ಮಾತನಾಡುತ್ತೇವೆ. ಮೂರು ತಿಂಗಳಿಂದ ಬೆಂಗಳೂರು ಬಿಟ್ಟು ಹೊರಗೆ ಬಂದಿರದ ಸಿಎಂ ಡಿ. ಕೆ.ಶಿವಕುಮಾರ ಅವರು ನಮ್ಮ ಪಾದಯಾತ್ರೆಯಿಂದ ವಿಚಲಿತಗೊಂಡಿದ್ದಾರೆ. ಈಗ ಉತ್ತರ ಕರ್ನಾಟಕ ಭಾಗದ ಕಡೆ ಮುಖ ಮಾಡಿರುವುದು ಒಳ್ಳೆಯ ಬೆಳವಣಿಗೆ.
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ