T20 World Cup: ಭಾರತೀಯ ವನಿತೆಯರಿಗೀಗ ಟಿ20 ವಿಶ್ವಕಪ್ ಗೆಲ್ಲುವ ಛಲ
ಎರಡು ಗುಂಪುಗಳಾಗಿ ಎಲ್ಲಾ ತಂಡಗಳನ್ನು ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಗ್ರೂಪ್ ಗಳಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿ ಸಿರುವ ಈ ಮಹತ್ವದ ಪಂದ್ಯಾವಳಿಯು ಜುಲೈ 5ರ ವರೆಗೆ ನಡೆಯಲಿದ್ದು, ಒಟ್ಟು 33 ಪಂದ್ಯಗಳ ನ್ನೊಳಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಬರ್ಮಿಂಗ್ ಹ್ಯಾಂನ ಎಡ್ಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಶ್ರೀಲಂಕಾವನ್ನು ಎದುರಿಸಲಿದೆ.
-
-ನರೇಂದ್ರ ಪಾರೆಕಟ್
ಮಹಿಳಾ ಟಿ20 ವಿಶ್ವಕಪ್‌ನ ರೋಚಕ ಚುಟುಕು ಕದನಕ್ಕೆ ಮೈದಾನವೀಗ ಸಿದ್ಧವಾಗಿದೆ. ನಾಳೆಯಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗುತ್ತಿರುವ ಈ ಸಲದ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ 12 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಅತಿಥೇಯ ಇಂಗ್ಲೆಂಡ್ ಸೇರಿದಂತೆ ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಐರ್ಲೆಂಡ್, ನೆದರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈ ಚುಟುಕು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳು ತ್ತಿವೆ.
ಎರಡು ಗುಂಪುಗಳಾಗಿ ಎಲ್ಲಾ ತಂಡಗಳನ್ನು ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಗ್ರೂಪ್ ಗಳಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿಸಿರುವ ಈ ಮಹತ್ವದ ಪಂದ್ಯಾವಳಿಯು ಜುಲೈ 5ರ ವರೆಗೆ ನಡೆಯಲಿದ್ದು, ಒಟ್ಟು 33 ಪಂದ್ಯಗಳನ್ನೊಳಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಬರ್ಮಿಂಗ್ ಹ್ಯಾಂನ ಎಡ್ಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಶ್ರೀಲಂಕಾವನ್ನು ಎದುರಿಸಲಿದೆ.
ಟಿ 20 ವಿಶ್ವಕಪ್ ಹಿನ್ನೋಟ: ಟಿ20 ಮಹಿಳಾ ವಿಶ್ವಕಪ್ ಪಂದ್ಯಾವಳಿ 2009ರಲ್ಲಿ ಆರಂಭವಾಯಿತು. ಈಗಾಗಲೇ ಒಟ್ಟು 9 ಸಲ ನಡೆದಿದ್ದು, ಇದೀಗ ನಡೆಯುತ್ತಿರುವುದು 10ನೇ ಆವೃತ್ತಿಯಾಗಿದೆ.
ಚೊಚ್ಚಲ ಟೂರ್ನಿಯಲ್ಲಿ ಅತಿಥೇಯ ಇಂಗ್ಲೆಂಡ್ ತಂಡವು ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡ ವನ್ನು ಮಣಿಸಿ ಟ್ರೋಫಿಯನ್ನು ತನ್ನದನ್ನಾಗಿಸಿತು. 2ನೇ ಪಂದ್ಯಾವಳಿ 2010ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆಯಿತು. ಆ ಸಲ ನ್ಯೂಜಿಲೆಂಡ್ ತಂಡವನ್ನು ಆಸ್ಟ್ರೇಲಿಯಾ ಮಣಿಸಿ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿತು. ಮೂರನೇ ಟೂರ್ನಿ ಶ್ರೀಲಂಕಾದಲ್ಲಿ ನಡೆದದ್ದು 2012ರಲ್ಲಿ. ಆ ಸಲ ಫೈನಲ್‌ನಲ್ಲಿ ಇಂಗ್ಲೆಂಡನ್ನು ಮಣಿಸಿ ಆಸೀಸ್ ಗೆಲುವು ಪಡೆಯಿತು. 2014ರಲ್ಲಿ ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಮಣಿಸಿದ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಹ್ಯಾಟ್ರಿಕ್ ಟ್ರೋಫಿಯನ್ನು ತನ್ನದನ್ನಾಗಿರಿಸುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ: Narendra Parekat Column: ಭಾರತ-ಪಾಕ್ ಸರ್ ಕ್ರೀಕ್ ವಿವಾದ: ಏನಿದು ಸಮಸ್ಯೆ? ಭಾರತ ಕೊಟ್ಟ ಎಚ್ಚರಿಕೆ ಏನು?
2016ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ವೆಸ್ಟ್ ಇಂಡೀಸ್ ಮೊದಲ ಬಾರಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿತು. 2018, 2020 ಮತ್ತು 2023ರಲ್ಲೂ ಮತ್ತೊಮ್ಮೆ ಆಸ್ಟ್ರೇಲಿಯಾ ತಂಡ ಹ್ಯಾಟ್ರಿಕ್ ಮಹಿಳಾ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
2024ರಲ್ಲಿ ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ದ. ಆಫ್ರಿಕಾವನ್ನು ಮಣಿಸಿದ ನ್ಯೂಜಿಲೆಂಡ್ ಟಿ20 ವಿಶ್ವಕಪ್ ಅನ್ನು ತನ್ನ ತೆಕ್ಕೆಗೆ ಪಡೆಯಿತು.
ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಭಾರತ: 2009ರ ಚೊಚ್ಚಲ ವಿಶ್ವಕಪ್‌ನಲ್ಲಿ ಮತ್ತು 2010ರಲ್ಲಿ ಭಾರತದ ನಾರಿಯರ ತಂಡ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ 2012, 2014 ಮತ್ತು 2016ರಲ್ಲಿ ಭಾರತ ಮಹಿಳಾ ತಂಡ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು. 2018ರಲ್ಲಿ ಮತ್ತೆ ಭಾರತ ತಂಡ ಸೆಮೀಸ್ ಪ್ರವೇಶಿಸಿದ್ದರೆ, 2020ರಲ್ಲಿ ರನ್ನರ್ ಅಪ್ ಆಗುವಲ್ಲಿ ಯಶಸ್ವಿಯಾಯಿತು. 2023ರಲ್ಲಿ ಸೆಮೀಸ್‌ನಿಂದ ನಿರ್ಗಮಿಸಿದರೆ, 2024ರ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರ ಬಿತ್ತು.
ಕೌರ್ ಪಡೆಗೆ ಪ್ರತಿಷ್ಠೆ: ಚುಟುಕು ಕ್ರಿಕೆಟ್ ಸಾಮ್ರಾಜ್ಯದ ಮೇಲೆ ಕಣ್ಣಿಟ್ಟಿರುವ ಭಾರತ ತಂಡವು ಹರ್ಮನ್ ಪ್ರೀತ್ ಕೌರ್ ನಾಯಕತ್ವದಲ್ಲಿ ಈ ಸಲ ಸೆಣಸಾಡಿ, ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲಲು ಸಿದ್ಧವಾಗಿದೆ. ತಂಡದಲ್ಲಿ ಸ್ಮೃತಿ ಮಂಧಾನಾ, ಜೆಮಿನಾ ರೋಗ್ರಿಗಸ್, ರೇಣುಕಾ ಸಿಂಗ್, ಶ್ರೇಯಾಂಕ ಪಾಟೀಲ್‌ರಂತಹ ಅನುಭವಿ ಆಟಗಾರರಿದ್ದಾರೆ. ಅದೇ ರೀತಿ ನಂದಿನಿ ಶರ್ಮಾರಂತಹ ಹೊಸಮುಖ ವನ್ನೂ ತಂಡ ಹೊಂದಿದೆ. ಕಳೆದ ನವೆಂಬರ್‌ನಲ್ಲಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಭಾರತಕ್ಕೆ ತಂದುಕೊಟ್ಟ ಹೆಚ್ಚಿನ ಆಟಗಾರರು ಈ ಸಲದ ಟಿ20 ತಂಡದಲ್ಲೂ ಇರುವ ಕಾರಣ ಟ್ರೋಫಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಬೇಕೆನ್ನುವ ಉಮ್ಮಸ್ಸು ನಮ್ಮ ವನಿತಾ ತಂಡದಲ್ಲಿದೆ.
ಜೂ.14ರಂದು ತನ್ನ ಮೊದಲ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿ ಎದುರಿಸಲಿದೆ. ಬಳಿಕ ಗ್ರೂಪ್ ಹಂತದ ಮುಂದಿನ ಪಂದ್ಯಗಳಲ್ಲಿ ನೆದರ್ಲೆಂಡ್, ದ. ಆಫ್ರಿಕಾ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಈಗಾಗಲೇ ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆದ್ದ ಆತ್ಮವಿಶ್ವಾಸ ಭಾರತ ತಂಡದ ಆಟಗಾರರಲ್ಲಿದೆ. ಹಾಗಾಗಿ ಈ ಸಲ ಚೊಚ್ಚಲ ಬಾರಿಗೆ ಟಿ20 ಟ್ರೋಫಿ ಗೆದ್ದು ಕ್ರಿಕೆಟ್ ಇತಿಹಾಸದಲ್ಲಿ ಹೊಸತೊಂದು ದಾಖಲೆ ಬರೆಯುವುದು ನಮ್ಮ ಮಹಿಳಾ ತಂಡಕ್ಕೆ ಬಹುದೊಡ್ಡ ಸವಾಲೇನಲ್ಲ..!
ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ಕೀಪರ್), ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ (ಕೀಪರ್), ನಂದಿನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್.
ಭಾರತದ ಪಂದ್ಯಗಳು
ಜೂ. 14: ಭಾರತ-ಪಾಕಿಸ್ತಾನ
ಜೂ. 17: ಭಾರತ-ನೆದರ್ಲೆಂಡ್ಸ್
ಜೂ. 21: ಭಾರತ-ದ. ಆಫ್ರಿಕಾ
ಜೂ. 25: ಭಾರತ-ಬಾಂಗ್ಲಾದೇಶ
ಜೂ. 28: ಭಾರತ-ಆಸ್ಟ್ರೇಲಿಯಾ
ನಗದು ಬಹುಮಾನ ಏರಿಕೆ
ವಿಶ್ವಕಪ್ ಟೂರ್ನಿಯ ಈ ಆವೃತ್ತಿಯ ನಗದು ಬಹುಮಾನ ಕಳೆದ ಬಾರಿಗಿಂತ 10ರಷ್ಟು ಏರಿಕೆಯಾಗಿದೆ. ಒಟ್ಟು 81 ಕೋಟಿ ಬಹುಮಾನದ ಮೊತ್ತವನ್ನು ಐಸಿಸಿ ಘೋಷಿಸಿದ್ದು ಈ ಸಲ ವಿಜೇತ ತಂಡ ಸುಮಾರು 21.85 ಕೋಟಿ ರು. ಬಹುಮಾನದ ಮೊತ್ತವನ್ನು ಜೇಬಿಗಿಳಿಸಲಿದೆ. ರನ್ನರ್ ತಂಡಕ್ಕೆ 10.62 ಕೋಟಿ ರು. ದೊರೆಯಲಿದೆ. ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ 6.30 ಕೋಟಿ, ಗುಂಪು ಹಂತದಲ್ಲಿ ಪ್ರತೀ ಗೆಲುವಿಗೆ 29.08 ಲಕ್ಷ ಸಿಗಲಿದೆ.
ಗ್ರೂಪ್ ಎ:
ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದ. ಆಫ್ರಿಕಾ, ಬಾಂಗ್ಲಾದೇಶ, ನೆದರ್ಲೆಂಡ್.
ಗ್ರೂಪ್-ಬಿ:
ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್
ಉದ್ಘಾಟನಾ ಪಂದ್ಯ
ಜೂ.12
ಸೆಮಿ ಫೈನಲ್-1:
ಜೂ.30
ಸೆಮಿ ಫೈನಲ್-2:
ಜುಲೈ-2
ಫೈನಲ್ ಪಂದ್ಯ:
ಜುಲೈ-5