ದೇಶದ ಪ್ರಮುಖ ನಗರಗಳಿಗೆ ತಲುಪಿದ ಗಂಗಸಂದ್ರದಲ್ಲಿ ಬೆಳೆದ ಸೀಬೆ-ದಾಳಿಂಬೆ: ಲಾಭದಾಯಕ ಸಮಗ್ರ ಬೆಳೆಗೆ ರೈತ ಯೋಗೀಶ್ ಸಾಕ್ಷಿ
ಮೂರು ಎಕರೆ ಪ್ರದೇಶದಲ್ಲಿ ಜಾಪಿಸ್ ರೆಡ್, ಡೈಮಂಡ್ ರೆಡ್ ತಳಿಯ ಸೀಬೆ ಬೆಳೆದು ಉತ್ತಮ ಫಸಲು ಗಳಿಸಿ ಒಳ್ಳೆಯ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ದಲ್ಲಾಳಿಗಳ ಹಾವಳಿಯ ಮಧ್ಯೆ ಉತ್ತಮ ದಲ್ಲಾಳಿಗಳ ಸಂಪರ್ಕ ಬೆಳೆಸುವುದು ರೈತನ ಎಚ್ಚರಿಕೆ ನಡೆಯಾಗಿರಬೇಕು ಎಂದು ಸಲಹೆ ಎಲ್ಲರಿಗೂ ನೀಡುತ್ತಾರೆ.
-
ಕೋಟೆ ರಂಗಸ್ವಾಮಿ
ಗುಬ್ಬಿ: ತೋಟಗಾರಿಕೆ ಬೆಳೆ(Horticultural crop)ಯಿಂದ ರೈತನ ಆರ್ಥಿಕ ಚೇತರಿಕೆ ಸಾಧ್ಯವಿದೆ ಎಂದು ರುಜುವಾತು ಮಾಡಿದ ಗುಬ್ಬಿ ತಾಲ್ಲೂಕು ಕಡಬ ಹೋಬಳಿ ಗಂಗಸಂದ್ರ ರೈತ ಯೋಗೀಶ್ ಸೀಬೆ, ದಾಳಿಂಬೆ, ಬಾಳೆ ಹಾಗೂ ಹೂವಿನ ಕೃಷಿ ಎಂದಿಗೂ ನಷ್ಟ ಕಾಣದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಅವರ ಪರಿಶ್ರಮಕ್ಕೆ ತಕ್ಕ ಫಲವಾಗಿ ಇಂದು ಅವರ ತೋಟದ ಸೀಬೆ ದಾಳಿಂಬೆ ದೇಶದ ಎಲ್ಲಾ ಬೃಹತ್ ನಗರಗಳಿಗೆ ತಲುಪಿ ಈ ಹಣ್ಣಿನ ಬೇಡಿಕೆಯಿಂದ ವಿದೇಶಕ್ಕೆ ರಫ್ತು ಮಾಡುವ ಹಂತ ತಲುಪಿದೆ.
ಮೂರು ಎಕರೆ ಪ್ರದೇಶದಲ್ಲಿ ಜಾಪಿಸ್ ರೆಡ್, ಡೈಮಂಡ್ ರೆಡ್ ತಳಿಯ ಸೀಬೆ ಬೆಳೆದು ಉತ್ತಮ ಫಸಲು ಗಳಿಸಿ ಒಳ್ಳೆಯ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ದಲ್ಲಾಳಿಗಳ ಹಾವಳಿಯ ಮಧ್ಯೆ ಉತ್ತಮ ದಲ್ಲಾಳಿಗಳ ಸಂಪರ್ಕ ಬೆಳೆಸುವುದು ರೈತನ ಎಚ್ಚರಿಕೆ ನಡೆಯಾಗಿರಬೇಕು ಎಂದು ಸಲಹೆ ಎಲ್ಲರಿಗೂ ನೀಡುತ್ತಾರೆ.
ಸುಮಾರು 1700 ಸೀಬೆ ಸಸಿಗಳನ್ನು ನೆಟ್ಟು ಮೂರು ವರ್ಷದಲ್ಲಿ ಎರಡು ಬೆಳೆಗಳನ್ನು ಕೊಯ್ದು ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ ಲಾಭ ಕಂಡಿದ್ದಾರೆ. ಸೀಬೆ ಅಂದರೆ ಸೀಸನ್ ಹಣ್ಣು ಎಂಬ ಮಾತಿಗೆ ತದ್ವಿರುದ್ಧವಾಗಿ ಅಚ್ಚುಕಟ್ಟು ನಿರ್ವಹಣೆ ಮಾಡಿದಲ್ಲಿ ವರ್ಷ ಪೂರ್ತಿ ಸೀಬೆ ಹಣ್ಣು ಬೆಳೆಯಬಹುದು ಎಂಬುದು ಸಾಬೀತು ಮಾಡಿದ್ದಾರೆ.
ಇದನ್ನೂ ಓದಿ: Ranjith H Ashwath Column: ಮೇಲ್ಮನೆಯ ಫಲಿತಾಂಶದ ಲಾಭ-ನಷ್ಟ !
ಕಳೆದ 14 ವರ್ಷದಿಂದ ದಾಳಿಂಬೆ ಬೆಳೆದು ಅದು ಕೂಡ ಉತ್ತಮ ಹಣ್ಣಿನ ತಳಿಗಳನ್ನು ಆಯ್ಕೆ ಮಾಡಿ ಅತ್ಯುತ್ತಮ ದಾಳಿಂಬೆ ಹಣ್ಣುಗಳನ್ನು ದೇಶದೆಲ್ಲೆಡೆ ಮಾರುಕಟ್ಟೆ ಒದಗಿಸಿಕೊಂಡಿದ್ದಾರೆ. ಒಂದು ಮಟ್ಟದ ಬಂಡವಾಳ ಹೂಡಿ ಎಕರೆಗೆ ಐದು ಲಕ್ಷದಂತೆ ಲಾಭ ಕಂಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುವ ರೈತ ಯೋಗೀಶ್ ದಾಳಿಂಬೆ ಕೂಡಾ ಉತ್ತಮ ಲಾಭ ತಂದುಕೊಟ್ಟಿದೆ.
ದಾಳಿಂಬೆ ಸಸಿಗಳಿಗೆ ಕಾಡುವ ಬೇರು ಗಂಟು ಹಾಗೂ ಟಿಪ್ಸ್ ಕಾಯಿಲೆ ತಡೆಗೆ ಉತ್ತಮ ಮಾರ್ಗವಾಗಿ ದಾಳಿಂಬೆ ಸಸಿಯ ಅಕ್ಕಪಕ್ಕ ಚೆಂಡು ಹೂವು ಬೆಳೆದು ಆರೋಗ್ಯದಾಯಕ ದಾಳಿಂಬೆ ಕಂಡಿದ್ದಾರೆ. ಈ ಜೊತೆಗೆ ಚೆಂಡು ಹೂವಿನ ಕೃಷಿ ಕೂಡಾ ಜೊತೆಯಲ್ಲಿ ನಡೆಸಿ ಹೂವಿನ ಕೃಷಿಯಿಂದ ಹಬ್ಬಗಳ ಸೀಸನ್ ನಲ್ಲಿ ಲಾಭ ಕಂಡಿದ್ದಾರೆ. ಸಮಗ್ರ ಬೆಳೆ ಮಾಡುವ ಕಲೆ ಬಗ್ಗೆ ರೈತರಿಗೆ ಟಿಪ್ಸ್ ನೀಡುತ್ತಾ ಶ್ರಮ ಹಾಗೂ ಗಿಡಗಳ ಆರೈಕೆ ಬಹುಮುಖ್ಯ. ಇದುವೇ ಲಾಭದಾಯಕ ತೋಟಗಾರಿಕಾ ಕೃಷಿ ಎನ್ನುತ್ತಾರೆ.
ಹೊಸ ಪ್ರಯೋಗದಲ್ಲಿ ಯಶಸ್ಸು ಕಂಡ ಯೋಗೀಶ್..
ಯಾವುದೇ ಬೆಳೆಗೆ ನೀರಿನ ಅವಶ್ಯ ಇದ್ದೇ ಇದೆ. ದಾಳಿಂಬೆಗೆ ನೀರು ಬೇಕಿಲ್ಲ ಎಂಬ ಮಾತುಗಳು ಹೇಳುತ್ತಾರೆ. ಆದರೆ ನೀರು ಕೊಟ್ಟಷ್ಟು ಹಣ್ಣುಗಳು ತೂಕವಾಗಿ ಬೆಳೆದು ಲಾಭ ತಂದು ಕೊಡುತ್ತದೆ. ಸೀಬೆಗೆ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಕೊಡಬೇಕು. ಈ ನಿಟ್ಟಿನಲ್ಲಿ ಹಣ್ಣುಗಳ ರಕ್ಷಣೆಗೆ ಫಾಗ್ ವ್ಯವಸ್ಥೆಯನ್ನು ಪ್ರತಿ ಗಿಡಕ್ಕೂ ಮಾಡಿದ್ದಾರೆ. ಬೇಸಿಗೆ ಸಮಯ ಸನ್ ಸ್ಟ್ರೋಕ್ ಕಾಯಿಗಳಿಗೆ ತಗುಲಿ ಇಳುವರಿ ಕುಂಠಿತವಾಗುತ್ತದೆ. ಈ ಬಗ್ಗೆ ಹೆಚ್ಚು ಗಮನ ನೀಡಿ ಫಾಗ್ ವ್ಯವಸ್ಥೆ ಮಾಡಿ ಗಿಡ ಹಾಗೂ ಸೀಬೆ ಹಣ್ಣು ರಕ್ಷಣೆ ಮಾಡಲಾಗಿದೆ. ಹೆಚ್ಚು ದಪ್ಪವಾಗಿ ಹಾಗೂ ಶೈನಿಂಗ್ ಹೊಂದಿ ಮಾರುಕಟ್ಟೆ ಸಿಗಲಿದೆ ಎಂದು ತಮ್ಮ ಹೊಸ ಪ್ರಯೋಗದ ಬಗ್ಗೆ ರೈತರಿಗೆ ತಿಳುವಳಿಕೆ ನೀಡುತ್ತಿದ್ದಾರೆ.
ವಿನೂತನ ಔಷಧಿ ಸಿಂಪಡಣೆ ಗನ್ ಸಿದ್ಧಪಡಿಸಿದ ಯೋಗೀಶ್..
2500 ದಾಳಿಂಬೆ ಗಿಡಗಳು, 1700 ಸೀಬೆ ಗಿಡಗಳು ಜೊತೆಗೆ ಬಾಳೆ ಗಿಡಗಳ ರಕ್ಷಣೆ ಸುಲಭದ ಮಾತಲ್ಲ. ಈ ಕಾರ್ಯಕ್ಕೆ ಟ್ರ್ಯಾಕ್ಟರ್ ಸೇರಿದಂತೆ ಕೂಲಿ ಕಾರ್ಮಿಕರ ವ್ಯವಸ್ಥೆ ಮಾಡಲು 12 ಲಕ್ಷ ವ್ಯಯ ಮಾಡಬೇಕಿತ್ತು. ಈ ವಿಚಾರ ರೈತ ಯೋಗೀಶ್ ಅವರಿಗೆ ಸವಾಲಾಗಿ ಪರಿಣಮಿಸಿತ್ತು. ತಮ್ಮದೇ ಆಲೋಚನೆಯಲ್ಲಿ ವಿನೂತನ ಸ್ಪ್ರೆಯರ್ ಗನ್ ಸಿದ್ಧಪಡಿಸಲು ಮುಂದಾಗಿ ಯಶಸ್ವಿಯಾಗಿ ಗನ್ ಸಿದ್ಧಪಡಿಸಿ ಮೂರು ಎಕರೆ ಪ್ರದೇಶಕ್ಕೆ ಔಷಧಿ ಸಿಂಪಡಣೆ ಕೇವಲ ಒಂದೂವರೆ ತಾಸಿನಲ್ಲಿ ಒಬ್ಬ ವ್ಯಕ್ತಿ ಮಾಡುವ ರೀತಿ ಆವಿಷ್ಕಾರ ಮಾಡಿ ಆಧುನಿಕ ರೈತ ಎನಿಸಿದ್ದಾರೆ. ಟ್ರ್ಯಾಕ್ಟರ್ ಬಳಸಿ ಮಾಡುತ್ತಿದ್ದ ನಾಲ್ಕು ತಾಸು ಕೆಲಸಕ್ಕೆ ಬ್ರೇಕ್ ಹಾಕಿದ್ದಾರೆ.
ರೈತ ಯೋಗೀಶ್ ಯಶಸ್ವಿ ಕಾರ್ಯದಲ್ಲಿ ಪತ್ನಿ ವೀಣಾ ಸಾಥ್..
ಪ್ರತಿ ನಿತ್ಯ ತೋಟದಲ್ಲೇ ಹೆಚ್ಚು ಸಮಯ ವ್ಯಯ ಮಾಡುವ ಯೋಗೀಶ್ ಅವರ ಕೃಷಿ ಕೆಲಸಕ್ಕೆ ಅವರ ಪತ್ನಿ ವೀಣಾ ಅವರ ಸಹಕಾರ ಗಣನೀಯವಾಗಿದೆ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ವ್ಯವಸ್ಥೆ ಮಾಡುವ ಅವರು ಕೃಷಿ ಕೆಲಸದಲ್ಲಿ ಹೆಗಲು ಕೊಟ್ಟು ಹಲವು ಸಲಹೆಗಳನ್ನು ನೀಡುತ್ತಾ ತೋಟಗಾರಿಕೆ ಕೃಷಿ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ರೈತ ಮಹಿಳೆಯಾಗಿ ದಾಳಿಂಬೆ ಸೀಬೆ ಕೃಷಿ ಜೊತೆ ವಾಣಿಜ್ಯ ಬೆಳೆ ತೆಂಗು ಅಡಿಕೆ ಬಗ್ಗೆ ಹೆಚ್ಚಿನ ಗಮನ ಹರಿಸಿ ಒಟ್ಟಾರೆ ಗಂಗಸಂದ್ರ ರೈತ ದಂಪತಿ ತಾಲ್ಲೂಕಿಗೆ ಮಾದರಿ ಎನಿಸಿದ್ದಾರೆ.