Kasargod Kannadigas: ಕಾಸರಗೋಡಿನ ಕನ್ನಡಿಗರು ಬರೀ ವೋಟ್ ಬ್ಯಾಂಕ್
ಚಂದ್ರಗಿರಿ ನದಿಯ ಉತ್ತರ ಭಾಗ ಕನ್ನಡಿಗರ ಪ್ರಾಬಲ್ಯ ಪ್ರದೇಶವಾಗಿದ್ದರೂ ಅವರ ಒಗ್ಗಟ್ಟನ್ನು ತಮ್ಮ ಪಕ್ಷದ ಸಿದ್ಧಾಂತಕ್ಕನುಗುಣವಾಗಿ ಮುರಿಯುವುದು ಬಹಳ ಸುಲಭ ಎಂದು ಕೇರಳದ ಮೂರು ಪಕ್ಷಗಳೂ ಸುಲಭವಾಗಿ ಅರಿತಿರುವುದೇ ಕಾಸರಗೋಡಿನಲ್ಲಿ ಕನ್ನಡ ಅವಗಣನೆಗೆ ಬಹುಮುಖ್ಯ ಕಾರಣ. ಹಾಗಾಗಿ ಚುನಾವಣೆ ಬಂದಾಗಲೂ ಕೂಡಾ ಕಾಸರಗೋಡು ಕನ್ನಡಿಗರ ಪರಿಸ್ಥಿತಿ ಆಟಕ್ಕುಂಟು, ಭಾಷಾಭಿವೃದ್ಧಿಯ ವಿಷಯದಲ್ಲಿ ಲೆಕ್ಕಕ್ಕಿಲ್ಲ ಎಂಬಂತಾಗಿರುವುದಾಗಿದೆ.
-
-ನರೇಂದ್ರ ಪಾರೆಕಟ್
ಕೇರಳದ ಕಣ್ಣೂರು ಜಿಲ್ಲೆಯಿಂದ ಪ್ರತ್ಯೇಕಿಸಿ ಸ್ವತಂತ್ರ ಜಿಲ್ಲೆಯಾಗಿ ಕಾಸರಗೋಡು ಅಸ್ತಿತ್ವಕ್ಕೆ ಬಂದು ಬರೋಬ್ಬರಿ 42 ವರ್ಷಗಳಾಗುತ್ತಿವೆ. ಈ ದೀರ್ಘ ಅವಧಿಯಲ್ಲಿ ಕನ್ನಡ ಗಡಿನಾಡು ಪ್ರದೇಶವು ಸತತವಾಗಿ ಕೇರಳದ ಉಳಿದ ಎಲ್ಲಾ ಜಿಲ್ಲೆಗಳಿಗಿಂತ ಏಕೆ ಅವಗಣನೆಗೊಳಪಟ್ಟಿದೆ ಎಂಬುದನ್ನು ತಿಳಿಯೋಣ ಬನ್ನಿ..!
ಹಲವಾರು ಮಲಯಾಳಂ ಸಿನಿಮಾಗಳಲ್ಲಿ ಕಳೆದ ಇಪ್ಪತ್ತು-ಮೂವತ್ತು ವರ್ಷಗಳಿಂದಲೂ ಈ ಒಂದು ದೃಶ್ಯ ಮತ್ತು ಸಂಭಾಷಣೆ ಅದೆಷ್ಟೋ ಬಾರಿ ಬಂದು ಹೋಗಿದ್ದಿದೆ, ಅದೇನೆಂದರೆ ಕೇರಳದ ಸರಕಾರಿ ಉದ್ಯೋಗಿಯೊಬ್ಬ ಏನಾದರೊಂದು ತಪ್ಪು ಮಾಡಿದಾಗ ಆತನ ಮೇಲಧಿಕಾರಿ ಹೇಳುವ ಮಾತದು, ‘ನಿನ್ನನ್ನು ಈಗ್ಲೇ ಕಾಸರಗೋಡಿಗೆ ವರ್ಗಾವಣೆ ಮಾಡಿ ಬಿಡ್ತೀನಿ....’
ಇದೊಂದೇ ಸಾಕು, ಕೇರಳದಲ್ಲಿ ಆಡಳಿತಕ್ಕೆ ಬಂದಿದ್ದ ರಾಜ್ಯ ಸರಕಾರಗಳು ಗಡಿನಾಡು ಕನ್ನಡ ಪ್ರದೇಶ ಎನಿಸಿದ್ದ ಕಾಸರಗೋಡಿಗೆ ಈ ವರೆಗೂ ಮಾಡಿರುವ ಅವಗಣನೆಯ ಸ್ಯಾಂಪಲ್.
ಯಾವುದೇ ರಾಜ್ಯದಲ್ಲಿರಲಿ, ಪ್ರತಿಯೊಂದು ಗಡಿ ಜಿಲ್ಲೆಯೂ ಇಂತಹ ಸವಾಲನ್ನು ಎದುರಿಸುವುದು ಸರ್ವೇಸಾಮಾನ್ಯ ಎಂಬುವುದು ಸಾರ್ವತ್ರಿಕವಾಗಿ ಕೇಳಿ ಬರುವ ಮಾತಿರ ಬಹುದು. ಆದರೆ ಕಾಸರಗೋಡಿನಲ್ಲಿ ಅದರ ಪ್ರಮಾಣ ಬಹಳ ಹೆಚ್ಚು ಎಂಬುದು ಕಾಸರಗೋಡು ಜಿಲ್ಲಾ ಕೇಂದ್ರವನ್ನೊಮ್ಮೆ ಸುತ್ತಿ ಬಂದಾಗಷ್ಟೇ ಸುಲಭವಾಗಿ ಅರ್ಥ ಮಾಡಲು ಸಾಧ್ಯ.
ಚಂದ್ರಗಿರಿ ನದಿಯ ಉತ್ತರ ಭಾಗ ಕನ್ನಡಿಗರ ಪ್ರಾಬಲ್ಯ ಪ್ರದೇಶವಾಗಿದ್ದರೂ ಅವರ ಒಗ್ಗಟ್ಟನ್ನು ತಮ್ಮ ಪಕ್ಷದ ಸಿದ್ಧಾಂತಕ್ಕನುಗುಣವಾಗಿ ಮುರಿಯುವುದು ಬಹಳ ಸುಲಭ ಎಂದು ಕೇರಳದ ಮೂರು ಪಕ್ಷಗಳೂ ಸುಲಭವಾಗಿ ಅರಿತಿರುವುದೇ ಕಾಸರಗೋಡಿನಲ್ಲಿ ಕನ್ನಡ ಅವಗಣನೆಗೆ ಬಹುಮುಖ್ಯ ಕಾರಣ. ಹಾಗಾಗಿ ಚುನಾವಣೆ ಬಂದಾಗಲೂ ಕೂಡಾ ಕಾಸರಗೋಡು ಕನ್ನಡಿಗರ ಪರಿಸ್ಥಿತಿ ಆಟಕ್ಕುಂಟು, ಭಾಷಾಭಿವೃದ್ಧಿಯ ವಿಷಯದಲ್ಲಿ ಲೆಕ್ಕಕ್ಕಿಲ್ಲ ಎಂಬಂತಾಗಿರುವುದಾಗಿದೆ.
ಇದನ್ನೂ ಓದಿ: Election in Kerala: 'ದೇವರ ನಾಡಿ’ನಲ್ಲೀಗ ರಂಗೇರಿರುವ ಚುನಾವಣಾ ಕಾವು
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಈ ವರ್ಷದ ಮತದಾರರ ಪಟ್ಟಿಯ ಪ್ರಕಾರ 210000 ಮತದಾರರಿದ್ದಾರೆ. ಆ ಪೈಕಿ 105000 ಪುರುಷ ಮತದಾರರಿದ್ದರೆ, ಅಷ್ಟೇ ಸಂಖ್ಯೆ ಮಹಿಳಾ ಮತದಾರರೂ ಇಲ್ಲಿದ್ದಾರೆ. ಕಾಸರಗೋಡು ನಗರಸಭೆ, ಮಧೂರು ಗ್ರಾಮ ಪಂಚಾ ಯತ್, ಬದಿಯಡ್ಕ ಗ್ರಾಮ ಪಂಚಾಯತ್, ಬೆಳ್ಳೂರು ಗ್ರಾಮ ಪಂಚಾಯತ್, ಚೆಂಗಳ ಗ್ರಾಮ ಪಂಚಾಯತ್, ಕಾರಡ್ಕ ಗ್ರಾಮ ಪಂಚಾಯತ್, ಕುಂಬ್ಡಾಜೆ ಗ್ರಾಮ ಪಂಚಾಯತ್, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್‌ಗಳು ಕಾಸರಗೋಡು ವಿಧಾನಸಭಾ ವ್ಯಾಪ್ತಿಗೆ ಬರುತ್ತದೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ, ಮಲಯಾಳಂ, ಹವ್ಯಕ, ತುಳು, ಬ್ಯಾರಿ ಭಾಷೆಗಳನ್ನು ಮನೆಯಲ್ಲಿ ಮಾತನಾಡುವವರಾದರೂ, 60% ಜನ ಕನ್ನಡ ಭಾಷೆಯನ್ನೇ ಕಲಿತಿರುವವರು. ಹಾಗಾಗಿ ಈ ಕ್ಷೇತ್ರದಲ್ಲೂ ಕನ್ನಡಿಗ ಮತದಾರರದ್ದೇ ಪ್ರಾಬಲ್ಯ ವೆಂಬುವುದು ನಿರ್ವಿವಾದ.
ಕಳೆದ 5 ದಶಕದಲ್ಲಾದರೂ ಕನ್ನಡಿಗರೆಲ್ಲರೂ ಒಟ್ಟಾಗಿ ಕನ್ನಡದ ಧುರೀಣರೊಬ್ಬರನ್ನು ಪಕ್ಷೇತರ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳುಹಿಸುವ ಅವಕಾಶಗಳು ಇತ್ತಾದರೂ, ಪಕ್ಷಗಳ ಸಿದ್ಧಾಂತಕ್ಕೆ ಕಟ್ಟು ಬಿದ್ದು ಪಕ್ಷಗಳನ್ನು ಬೆಂಬಲಿಸಿರುವುದು ಕಾಸರಗೋಡಿನಲಿರುವ ಕನ್ನಡಿಗರ ಇಂದಿನ ದುಸ್ಥಿತಿಗೆ ಪ್ರಮುಖ ಕಾರಣವೂ ಹೌದು!
1956ರಲ್ಲಿ ಕಣ್ಣೂರು ಜಿಲ್ಲೆಗೊಳಪಟ್ಟಿದ್ದ ಕಾಸರಗೋಡು ವಿಧಾನಸಭೆಗೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಆಯ್ಕೆ ಆದವರು ಕಾಂಗ್ರೆಸ್ ಪಕ್ಷದ ಆಗಿನ ಧುರೀಣ ಎಂ.ಎಸ್.ಮೊಗ್ರಾಲ್. ಆ ಬಳಿಕ 1957ರಲ್ಲಿ ಕುಂಞಕೃಷ್ಣನ್ ಚೇರಿಪ್ಪಾಡಿ ಆಯ್ಕೆಯಾದರೆ, 1960ರಲ್ಲಿ ನಡೆದ ಚುನಾವಣೆಯಲ್ಲಿ ಕುಂಞಕೃಷ್ಣನ್ ನಂಬಿಯಾರ್ ಕಾಸರಗೋಡು ವಿಧಾನಸಭಾ ಕ್ಷೇತ್ರ ದಿಂದ ಆಯ್ಕೆ ಆದವರು.
ಮತ್ತೆ ಮುಂದಿನ ಮೂರು ವಿಧಾಸಸಭಾ ಚುನಾವಣೆಗಲ್ಲಿ ಕಾಸರಗೋಡಿನ ಮತದಾರರು ಸ್ವತಂತ್ರ ಅಭ್ಯರ್ಥಿಗಳಿಗೆ ಮಣೆ ಹಾಕಿದರೆಂಬುದು ವಿಶೇಷ.
1963ರಲ್ಲಿ ಇ. ಅಬ್ದುಲ್ ಖಾದರ್ ಆಯ್ಕೆಯಾದರೆ, 1967ರಲ್ಲಿ ನಡೆದ ಚುನಾವಣೆಯಲ್ಲಿ ಕಾಸರಗೋಡಿನ ಕನ್ನಡ ಧುರೀಣ ಯು.ಪಿ. ಕುಣಿಕುಳ್ಳಾಯ ವಿಧಾನಸಭೆಗೆ ಆಯ್ಕೆಯಾದರು. 1970ರಲ್ಲಿ ಅಬ್ದುಲ್ ರಹಮಾನ್ ಸ್ವತಂತ್ರ ಅಭ್ಯರ್ಥಿಯಾಗಿ ಕಾಸರಗೋಡಿನಿಂದ ಕೇರಳ ವಿಧಾನಸಭೆ ಪ್ರವೇಶಿಸಿದರು.
1977ರ ಬಳಿಕ ಇಲ್ಲಿಯವರೆಗೂ ಕಾಸರಗೋಡು ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಕ್ಕೂಟವು ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್ (ಐಯು ಎಂಎಲ್) ಪಕ್ಷಕ್ಕೆ ಬಿಟ್ಟುಕೊಡುತ್ತಾ ಬಂದಿದೆ. ಹಾಗಾಗಿ ಸತತವಾಗಿ ಕಾಸರಗೋಡು ವಿಧಾನ ಸಭಾ ಕ್ಷೇತ್ರದಲ್ಲಿ ಮುಸ್ಲಿಂಲೀಗ್ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ.
1977ರಲ್ಲಿ ನಡೆದ ಚುನಾವಣೆಯಲ್ಲಿ ಟಿ.ಎ.ಇಬ್ರಾಹಿಂ ಗೆಲ್ಲುವಲ್ಲಿ ಸಫಲರಾದರೆ, 1980, 1982, 1987, 1991 ಮತ್ತು 1996 ಮತ್ತು 2001ರಲ್ಲಿ ಸಿ.ಟಿ ಅಹಮ್ಮದ್ ಆಲಿ ಐದು ಬಾರಿ ಕಾಸರಗೋಡು ಕ್ಷೇತ್ರವನ್ನು ಕೇರಳ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಅಜಾತಶತ್ರು ಎಂದೇ ಖ್ಯಾತರಾಗಿದ್ದ ಸಿ.ಟಿ ಅಹಮ್ಮದ್ ಆಲಿಯವರು ಯುಡಿಎಫ್ ಸರಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದರು.
2ನೇ ಸ್ಥಾನದಲ್ಲಷ್ಟೇ ಬಿಜೆಪಿ: 80ರ ದಶಕದಲ್ಲಿ ಕಾಸರಗೋಡಿನಲ್ಲೂ ಬಿಜೆಪಿ ಬೇರು ಮಟ್ಟದಿಂದ ಪಕ್ಷ ಸಂಘಟನೆ ಕಾರ್ಯ ಆರಂಭಿಸಿತ್ತು. ಕ್ಷೇತ್ರದಲ್ಲಿರುವ ಒಟ್ಟಾರೆ ಇರುವ ಕನ್ನಡಿಗರ ಪೈಕಿ ಅರ್ಧದಷ್ಟು ಮಂದಿ ಬಿಜೆಪಿ ಬೆಂಬಲಿತರಾದ ಕಾರಣ ಬಿಜೆಪಿಗೆ ಕನ್ನಡಿಗರೇ ಪ್ರಮುಖ ವೋಟ್‌ಬ್ಯಾಂಕ್. ಹಾಗಾಗಿ 1987ರಿಂದ ಬಿಜೆಪಿ ಸತತವಾಗಿ ಹತ್ತರಿಂದ ಹದಿನೈದು ಸಾವಿರದ ಅಂತರದಲ್ಲಿ ಇಲ್ಲಿ 2ನೇ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ.
ಕಾಸರಗೋಡು ನಗರಸಭೆ ಸೇರಿದಂತೆ ಮಧೂರು, ಕಾರಡ್ಕ, ಕುಂಬ್ಡಾಜೆ, ಬದಿಯಡ್ಕ, ಬೆಳ್ಳೂರು ಗ್ರಾಮ ಪಂಚಾಯತ್‌ಗಳಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚೆಂಗಳ ಮತ್ತು ಮೊಗ್ರಾಲ್‌ಪುತ್ತೂರು ಪಂಚಾಯತ್‌ಗಳಲ್ಲಿ ಇರುವ ಬಹುತೇಕ ಮುಸ್ಲಿಮರು ಮಲಯಾಳಂ ಮತ್ತು ಉರ್ದು ಭಾಷೆಯನ್ನು ಕಲಿತವರು.
ಕನ್ನಡಿಗರ ಒಡಕಿನ ಲಾಭ: ಕಾಸರಗೋಡಿನ ಕನ್ನಡಿಗರ ಗುಂಪನ್ನು ಮುರಿಯುವ ಜಾಣ್ಮೆ ಮೊದಲಿನಿಂದಲೂ ಇಲ್ಲಿನ ರಾಜಕೀಯ ಪಕ್ಷಗಳಿಗೆ ಕರಗತವಾಗಿದೆ. ಹಾಗಾಗಿ ಇಲ್ಲಿನ ಕನ್ನಡಿ ಗರು ಅವಕಾಶ ವಂಚಿತರಾಗಿ, ಅವಗಣನೆಯನ್ನು ಸತತವಾಗಿ ಎದುರಿಸುತ್ತಾ ಬಂದಿದ್ದಾರೆ. ತಾವು ಕನ್ನಡ ಹೋರಾಟಗಾರರೆಂದು ಬಿಂಬಿಸುತ್ತಿರುವ ಕೆಲವರು ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷಗಳೊಂದಿಗೆ ಶಾಮೀಲಾಗಿರುವ ಕಾರಣ ಕಾಸರಗೋಡಿನಲ್ಲಿ ಕನ್ನಡ ಪಕ್ಷೇತರ ಅಭ್ಯರ್ಥಿಯ ಹೆಸರು ಬ್ಯಾಲೆಟ್ ಪೇಪರ್‌ನಲ್ಲಿ ಇಲ್ಲದೆ ಅದೆಷ್ಟೋ ವರ್ಷಗಳು ಸಂದಿವೆ.
ಹಿಂದೆಯೆಲ್ಲಾ ಕಾಸರಗೋಡಿನ ಕನ್ನಡಿಗರಿಗೆ ಕುತ್ತು ಬಂದಾಗಲೆಲ್ಲಾ ಒಗ್ಗಟ್ಟಿನ ಮಂತ್ರ ಎಲ್ಲೆಡೆಯೂ ಕೇಳಿ ಬರುವ ಸಂಪ್ರದಾಯವಿತ್ತು, ಹೋರಾಟದ ಕಾವಿತ್ತು. ಕಳೆದ ಮಾಚ್೯ ನಲ್ಲಿ ಕೇರಳ ಸರಕಾರವು ಮಲಯಾಳಂ ಭಾಷಾ ಮಸೂದೆಯನ್ನು ರಾಜ್ಯಾದ್ಯಂತ ಜಾರಿ ಗೊಳಿಸಲು ಮುಂದಾದಾಗ ಅದು ಸುದ್ದಿಗೆ ಗ್ರಾಸವಾಯಿತು. ಅದರ ಪ್ರಕಾರ ಕಾಸರಗೋಡಿನ ಶಾಲೆಯಲ್ಲಿ ಇನ್ನು ಮುಂದೆ ಕಲಿಯುವ ವಿದ್ಯಾರ್ಥಿಗಳು ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಿತ್ತು. ಆ ಕಿಚ್ಚು ಹೊತ್ತಿದೊಡನೆ ಕಾಸರಗೋಡಿನ ಹಲವೆಡೆ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿತೇ ವಿನಃ ಕನ್ನಡಿಗರ ಪ್ರತಿಭಟನೆ ಕೇರಳ ವಿಧಾನಸಭೆ ಇರುವ ತಿರುವನಂತಪುರಂನಲ್ಲಿ ಕಾಣಿಸಿಕೊಳ್ಳಲಿಲ್ಲ. ಈ ಹಿಂದಿನಿಂದಲೂ ಕನ್ನಡ ಪರ ಹೋರಾಟಕ್ಕೆ ಕರ್ನಾಟಕ ಸರಕಾರಗಳ ನಿರೀಕ್ಷಿತ ಬೆಂಬಲ ತಮಗಿಲ್ಲ ಎಂದೇ ಕಾಸರಗೋಡಿನಲ್ಲಿ ಕೊರಗುತ್ತಿರುವವರ ಸಂಖ್ಯೆಯೇ ಹೆಚ್ಚು.
ಹೊಸ ಅಭ್ಯರ್ಥಿಗೆ ಮಣೆ ಹಾಕಿದ ಮುಸ್ಲಿಂ ಲೀಗ್: ಈ ಸಲ ಕೇರಳದ ಯುಡಿಎಫ್ ಮೈತ್ರಿ ಪಕ್ಷವಾದ ಮುಸ್ಲಿಂಲೀಗ್, ಇಲ್ಲಿನ ಶಾಸಕ ಎನ್.ಎ ನೆಲ್ಲಿಕುನ್ನು ಅವರನ್ನು ಕೈಬಿಟ್ಟು ಕಲ್ಲಟ್ರ ಮಾಹಿನ್ ಹಾಜಿ ಅವರನ್ನು ಮೊದಲ ಬಾರಿಗೆ ಕಾಸರಗೋಡಿನಲ್ಲಿ ಚುನಾವಣಾ ಕಣಕ್ಕಿಳಿಸಿದೆ.
ಹಾಜಿಯವರು ಮುಸ್ಲಿಂ ಲೀಗ್ ಪಕ್ಷಕ್ಕಾಗಿ ಮೂರಾಲ್ಕು ದಶಕಗಳಿಂದ ಆ ಬೆವರಿಳಿಸಿ ದುಡಿದವರು. ಅಷ್ಟೇ ಅಲ್ಲದೆ ಕಾಸರಗೋಡಿನ ಯುಡಿಎಫ್ ಕ್ಯಾಂಪ್‌ನಲ್ಲೂ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲೂ ಅವರು ಸುಪರಿಚಿತರು. ಆ ಕಾರಣಕ್ಕಾಗಿ ಈ ನಿಕಟ ಪೈಪೋಟಿ ಇಲ್ಲದೆಯೇ, ತಮ್ಮ ಪಕ್ಷದ ಅಭ್ಯರ್ಥಿ ವಿಧಾನಸಭೆ ಪ್ರವೇಶಿಸಲಿದ್ದಾರೆ ಎಂಬುವುದು ಯುಡಿಎಫ್ ಲೆಕ್ಕಾಚಾರ.
ಅಶ್ವಿನಿ ಬಿಜೆಪಿ ಅಭ್ಯರ್ಥಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡಿನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷೆ, ಕನ್ನಡಿಗರಾಗಿರುವ ಮಹಿಳಾ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಈ ಸಲ ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಹುರಿಯಾಳು. ಮೂಲತ: ಅವರು ಕಾಸರಗೋಡಿನವರಾಗಿದ್ದರೂ, ಹಲವಾರು ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದವರು. ಕಳೆದ ಎರಡೂವರೆ ವರ್ಷಗಳಿಂದ ಕಾಸರಗೋಡಿನಲ್ಲಿ ನೆಲೆಸಿ ಬಿಜೆಪಿಯನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಕೇರಳ ಸರಕಾರದ ಮಲೆಯಾಳಂ ಭಾಷಾ ಮಸೂದೆ ಕೂಡ ಅವರ ಒಂದು ಚುನಾವಣಾ ಪ್ರಚಾರ ಭಾಷಣದ ಒಂದು ಅಸ್ತ್ರವಾಗಿದೆ.
ಹಾಗಾಗಿ ಈ ಬಾರಿ ಕನ್ನಡತಿಯಾದ ತನ್ನನ್ನು ಕೇರಳ ವಿಧಾನಸಭೆಗೆ ಕಾಸರಗೋಡಿನಿಂದ ಮತದಾರರು ಆರಿಸಿ ಕಳುಹಿಸುತ್ತಾರೆ ಎಂಬುದು ಅವರ ಆತ್ಮವಿಶ್ವಾಸವಾಗಿದೆ.
ಶಾನವಾಸ್ ಎಲ್‌ಡಿಎಫ್ ಅಭ್ಯರ್ಥಿ: ಇದುವರೆಗೂ ಎಲ್‌ಡಿಎಫ್ ತನ್ನ ಒಕ್ಕೂಟದ ಇಂಡಿಯನ್ ನ್ಯಾಶನಲ್ ಲೀಗ್‌ಗೆ (ಐಎನ್‌ಎಲ್) ಕಾಸರಗೋಡು ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಡುವ ಸಂಪ್ರದಾಯವಿತ್ತು. ಆದರೆ ಈ ಸಲ ಸಿಪಿಐಎಂ ಕಾಸರಗೋಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಶಾನವಾಸ್ ಪಾದೂರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪ್ರಚಾರಸಭೆ ಗಳಲ್ಲಿ ಸಕ್ರಿಯರಾಗಿದ್ದಾರೆ. ಹಿಂದೊಮ್ಮೆ ಕಾಂಗ್ರೆಸ್‌ನಲ್ಲಿದ್ದ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷಗಾದಿಯ ಚುನಾವಣಾ ವೇಳೆ ಎಲ್‌ಡಿಎಫ್ ತೆಕ್ಕೆಗೆ ಬಂದವರು. ಕೇರಳ ಸರಕಾರ ಕಳೆದ 10 ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಕಾರಣಕ್ಕೆ ಮತದಾರರು ತನ್ನ ಕೈ ಹಿಡಿಯಲಿದ್ದಾರೆ ಎಂಬುದು ಇವರ ನಿರೀಕ್ಷೆ.
ಕಾಸರಗೋಡಿನವರಿಗೆ ಮಂಗಳೂರೇ ಕರ್ಮಭೂಮಿ
ಕಾಸರಗೋಡಿನಲ್ಲಿ ವಾಸಿಸುವ ಹೆಚ್ಚಿನ ಕನ್ನಡಿಗರು ಉದ್ಯೋಗಕ್ಕಾಗಿ 50 ಕಿ.ಮೀ ದೂರದ ಮಂಗಳೂರನ್ನೇ ಆಶ್ರಯಿಸಿಕೊಂಡಿದ್ದಾರೆ. ಕೇರಳದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ತಾವೇನೂ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳುವ ಅಗತ್ಯವಿಲ್ಲವೆಂಬುವುದು ಇಲ್ಲಿನ ಬಹುತೇಕ ಕನ್ನಡಿಗರ ಮನದಾಳದ ಅನಿಸಿಕೆ.
ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕುಸಿತ
‘ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ’ ಸಿನೆಮಾದಲ್ಲಿ ತೋರಿಸಿದಂತೆ ಕಾಸರಗೋಡಿ ನಲ್ಲಿ ಕಳೆದ ಹತ್ತು ವರ್ಷಗಳಿಂದ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಕನ್ನಡ ಕಲಿತರೆ ಕೇರಳದಲ್ಲಿ ಇಲ್ಲವೇ ಕರ್ನಾಟಕದಲ್ಲೂ ವೃತ್ತಿ ಅವಕಾಶ ಕಡಿಮೆ ಎಂದರಿತ ನೂರಾರು ಕುಟುಂಬಗಳು ಕಾಸರ ಗೋಡಿನಿಂದ ದ.ಕ.ಕ್ಕೆ ವಲಸೆ ಹೋಗಿ ತಮ್ಮ ಮಕ್ಕಳನ್ನು ದ.ಕ ಜಿಲ್ಲೆಯ ವಿವಿಧ ಶಾಲೆಗಳಿಗೆ ಸೇರಿಸಿ ಭವಿಷ್ಯ ಅರಸುವ ಪ್ರಯತ್ನವನ್ನೂ ಮಾಡುತ್ತಿರುವುದು ಕನ್ನಡ ಪ್ರದೇಶವಾದ ಕಾಸರಗೋಡಿನ ಸದ್ಯದ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.