ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಸಮಾಜ ವಿಜ್ಞಾನ ಕಲಿಸುವ ಕನ್ನಡ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳ ವಿರೋಧ
ಕೆಲ ವರ್ಷದ ಹಿಂದೆ ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಎನ್ನುವ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ರೀಲ್‌ನಲ್ಲಿ ನಡೆದಿದ್ದ ಘಟನೆಯೇ ಇದೀಗ ರಿಯಲ್ ಲೈಫ್ ನಲ್ಲಿ, ಅದರಲ್ಲಿಯೂ ಶಿಕ್ಷಣ ಸಚಿವ ತವರು ಜಿಲ್ಲೆಯಲ್ಲಿಯೇ ನಡೆಯುತ್ತಿದೆ. ಅಲ್ಲಿ ಮಲಯಾಳಂ ಟೀಚರ್ ನಿಂದ ಪಾಠವೆಂದಾದರೆ, ಇಲ್ಲಿ ಉರ್ದು ಶಿಕ್ಷಕರಿಂದ ಪಾಠ ಎನ್ನುವುದಷ್ಟೇ ವ್ಯತ್ಯಾಸ. ಶಿವಮೊಗ್ಗ ಜಿಲ್ಲೆಯ ಹೊಸನಗರದ ಪ್ರೌಢ ಶಾಲೆಯೊಂದರಲ್ಲಿ 330ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಐವರು ವಿದ್ಯಾರ್ಥಿಗಳು ಉರ್ದು ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಇನ್ನುಳಿದ 325 ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಈ ಶಾಲೆಯಲ್ಲಿ ಸಮಾಜ ವಿಜ್ಞಾನವನ್ನು ಬೋಧಿಸಲು ತಲಾ ಒಂದೊಂದು ಮಾಧ್ಯಮಕ್ಕೆ ಒಬ್ಬೊಬ್ಬರಂತೆ ಕನ್ನಡ, ಇಂಗ್ಲಿಷ್ ಹಾಗೂ ಉರ್ದುವಿಗೆ ಶಿಕ್ಷಕರಿದ್ದಾರೆ. ಆದರೀಗ ‘ಹೆಚ್ಚುವರಿ’ಯ ನೆಪದಲ್ಲಿ ಕನ್ನಡ ಬೋಧಕರನ್ನು ವರ್ಗಾಯಿಸಲು ಇಲಾಖೆ ಮುಂದಾಗಿರುವುದು ವಿದ್ಯಾರ್ಥಿಗಳ ಆಕ್ಷೇಪಕ್ಕೆ ಕಾರಣವಾಗಿದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರನ್ನು ವರ್ಗಾಯಿಸಿ, ಅವರ ಬದಲಿಗೆ ಉರ್ದು ಶಿಕ್ಷಕರಿಂದ ಸಮಾಜ ವಿಜ್ಞಾನವನ್ನು ಬೋಧಿಸಲು ಸ್ಥಳೀಯ ಆಡಳಿತ ಹಾಗೂ ಶಾಲೆ ಮುಂದಾಗಿದೆ.
ಇದನ್ನೂ ಓದಿ: Ranjith H Ashwath Column: ಎಲ್ಲದಕ್ಕೂ ಸಿಬಿಐ ತನಿಖೆಯೊಂದೇ ಪರಿಹಾರವೇ ?
ಆದರೆ ಉರ್ದು ಶಿಕ್ಷಕರಿಗೆ ಕನ್ನಡ ಅಥವಾ ಇಂಗ್ಲಿಷ್ ಬಾರದಿರುವುದರಿಂದ, ಅವರು ಉರ್ದು ವಿನಲ್ಲಿಯೇ ಪಾಠ ಮಾಡುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆತಂಕ. ಉರ್ದು ಶಿಕ್ಷಕರಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ, ಕನ್ನಡವೂ ಗೊತ್ತಿಲ್ಲ. ಅವರು ಉರ್ದುವಿನಲ್ಲಿಯೇ ಪಾಠ ಮಾಡಿದರೆ, ನಮಗೆ ಅರ್ಥವಾಗುವುದಿಲ್ಲ.
ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಮಾಡಿದರೂ ಗ್ರಾಮೀಣ ಭಾಗದಿಂದ ಬಂದಿರುವ ನಮಗೆ ಪೂರ್ಣ ಪ್ರಮಾಣದಲ್ಲಿ ಅರ್ಥವಾಗುವುದಿಲ್ಲ. ಆದ್ದರಿಂದ ಕನ್ನಡ ಮಾಧ್ಯಮದ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ವರ್ಗಾಯಿಸಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಬಿಇಒ ಕಚೇರಿ ಮುಂಭಾಗ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕನ್ನಡ ಮಾಧ್ಯಮದ ಶಿಕ್ಷಕರನ್ನು ವರ್ಗಾಯಿಸಬಾರದು ಎಂದು ಸ್ಥಳೀಯ ಶಾಸಕರಿಗೆ ವಿದ್ಯಾರ್ಥಿ ಗಳು ಮನವಿ ಮಾಡಿದ್ದಾರೆ. ಆದರೆ ಪೂರಕ ಪ್ರತಿಕ್ರಿಯೆ ಬಾರದಿರುವುದರಿಂದ ಬಿಇಒ ಕಚೇರಿ ಮುಂಭಾಗದಲ್ಲಿಯೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ವರ್ಗಾವಣೆ ಮಾಡುವುದಿಲ್ಲ ವೆಂದು ಶಾಸಕರು ಭರವಸೆ ನೀಡಿದ್ದರೂ, ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆ ಮಾಡಿದರೆ ಕಷ್ಟವಾಗುತ್ತದೆ ಎನ್ನುವುದು ವಿದ್ಯಾರ್ಥಿಗಳ ಆತಂಕವಾಗಿದೆ.
ಕನ್ನಡದಲ್ಲಿ ಗಂಧಗಾಳಿ ಇಲ್ಲ: ಉರ್ದು ಶಿಕ್ಷಕ ಮೊದಲಿನಿಂದಲೂ ಉರ್ದು ಮಾಧ್ಯಮದಲ್ಲಿಯೇ ಓದಿರುವುದರಿಂದ ಕನ್ನಡದ ‘ಜ್ಞಾನ’ವೇ ಇಲ್ಲ. ಪಾಠ ಮಾಡುವುದು ಹೋಗಲಿ, ಉರ್ದು ಶಿಕ್ಷಕರಿಗೆ ಕನ್ನಡದಲ್ಲಿ ತಮ್ಮ ಹೆಸರನ್ನೇ ಬರೆಯಲು ಬರುವುದಿಲ್ಲವಂತೆ. ಹೀಗಿರುವಾಗ, ಅವರು ವಿದ್ಯಾರ್ಥಿ ಗಳಿಗೆ ಯಾವ ರೀತಿಯಲ್ಲಿ ಪಾಠ ಮಾಡುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆತಂಕವಾಗಿದೆ.
*
ಎಂಟನೇ ತರಗತಿಗೆ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದ್ದರೂ ನಮಗೆ ಪೂರ್ಣ ಪ್ರಮಾಣದಲ್ಲಿ ಇಂಗ್ಲಿಷ್ ಅರ್ಥವಾಗುವುದಿಲ್ಲ. ಇಂಗ್ಲಿಷ್ ನೊಂದಿಗೆ ಕನ್ನಡದಲ್ಲಿ ಪಾಠ ಮಾಡಿದರೆ ಮಾತ್ರ ಅರ್ಥವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕನ್ನಡದ ಶಿಕ್ಷಕರನ್ನು ವರ್ಗಾಯಿಸಬಾರದು.
- ವಿದ್ಯಾರ್ಥಿನಿ