ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಎಲ್ಲದಕ್ಕೂ ಸಿಬಿಐ ತನಿಖೆಯೊಂದೇ ಪರಿಹಾರವೇ ?

ಧರ್ಮಸ್ಥಳ ಬುರುಡೆ ಪ್ರಕರಣ ಹೋಗಲಿ, ಕೆಲ ದಿನಗಳ ಹಿಂದೆ ಕೋಲಾರದಲ್ಲಿ ಪ್ರೀತಿಯ ವಿಷಯ ದಲ್ಲಿ ನಡೆದ ಕೊಲೆಯನ್ನೂ ಎನ್‌ಐಎಗೆ ವಹಿಸಬೇಕು ಎನ್ನುವ ಆಗ್ರಹವನ್ನು ಬಿಜೆಪಿ ನಾಯಕರು ಮಾಡಿ ದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷದ ಅವಧಿಯಲ್ಲಿ ಕನಿಷ್ಠ 10 ಪ್ರಕರಣಗಳನ್ನು ಸಿಬಿಐಗೆ ವಹಿಸ ಬೇಕು ಎಂದು ಬಿಜೆಪಿಗರು ಆಗ್ರಹಿಸಿದ್ದರು.

ಎಲ್ಲದಕ್ಕೂ ಸಿಬಿಐ ತನಿಖೆಯೊಂದೇ ಪರಿಹಾರವೇ ?

-

ಆಶ್ವತ್ಥಕಟ್ಟೆ

ranjith.hoskere@gmail.com

ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ‘ಬುರುಡೆ’ ಪ್ರಕರಣದ ಆರೋಪಗಳೆಲ್ಲ ‘ಬುರುಡೆ’ ಎನ್ನುವುದು ಸಾಬೀತಾಗುತ್ತಿದ್ದಂತೆ, ಎಚ್ಚೆತ್ತಿರುವ ಬಿಜೆಪಿ ನಾಯಕರು ಇದೀಗ ಸಿಬಿಐ, ಎನ್‌ಐಎ ಸಂಸ್ಥೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಇದೇ ವಿಷಯದಲ್ಲಿ ‘ಸ್ಪಷ್ಟ’ ನಿಲುತಾಳದೇ, ರಾಜ್ಯ ಸರಕಾರ ಎಸ್‌ಐಟಿಯನ್ನು ನೇಮಿಸಿದಾಗಲೂ ಮೌನವಾಗಿಯೇ ಪ್ರಕರಣ ವನ್ನು ಸ್ವಾಗತಿಸಿದ್ದ ಬಿಜೆಪಿಗರು, ಧರ್ಮಸ್ಥಳದ ವಿಷಯದಲ್ಲಿ ಮಾಸ್ಕ್ ಮ್ಯಾನ್ ನೀಡಿದ್ದೆಲ್ಲ ಸುಳ್ಳು ಮಾಹಿತಿ ಎನ್ನುವುದು ಖಾತ್ರಿಯಾದ ಬಳಿಕ ಎಚ್ಚೆತ್ತುಕೊಂಡಿದ್ದಾರೆ.

ಇದೀಗ ಸಿಬಿಐ ತನಿಖೆಗೆ ಆಗ್ರಹಿಸುವ ಮೂಲಕ ‘ರಾಜಕೀಯ’ ಲಾಭ-ನಷ್ಟದ ಲೆಕ್ಕಾಚಾರವನ್ನು ಶುರುಮಾಡಿದ್ದಾರೆ. ಈ ಲಾಭ-ನಷ್ಟದ ಲೆಕ್ಕಾಚಾರಗಳನ್ನು ಮೀರಿ ನೋಡಿದಾಗ, ಎಲ್ಲ ಪ್ರಕರಣ ಗಳನ್ನು ಸಿಬಿಐಗೆ ಕೊಡಲು ಸಾಧ್ಯವೇ? ಕೊಟ್ಟರೂ ಸಿಬಿಐನ ವರಿಗೆ ಈ ಎಲ್ಲ ಪ್ರಕರಣಗಳನ್ನು ತನಿಖೆ ಮಾಡುವಷ್ಟು ಸಮಯವಿದೆಯೇ? ಎನ್ನುವ ಅನುಮಾನ ಬರುವುದರಲ್ಲಿ ಎರಡನೇ ಮಾತಿಲ್ಲ.

ಆರಂಭದಲ್ಲಿ, ಮಾಸ್ಕ್ ಮ್ಯಾನ್ ಚಿನ್ನಯ್ಯ ಬುರುಡೆ ತರುತ್ತಿದ್ದಂತೆ ಸೌಜನ್ಯ ಪ್ರಕರಣಕ್ಕೆ ಜೀವ ಬಂದಿತ್ತು. ಈ ಬುರುಡೆಗಳೊಂದಿಗೆ ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡುವಂತೆ, ಸಿಬಿಐ ನಿಂದಲೇ ತನಿಖೆ ನಡೆಸುವಂತೆ ಬುರುಡೆ ಗ್ಯಾಂಗ್ ಆಗ್ರಹಿಸಿತ್ತು. ರಾಜ್ಯ ಸರಕಾರವು ಆರಂಭ ದಲ್ಲಿ ಸ್ಥಳೀಯ ಪೊಲೀಸರೇ ತನಿಖೆ ನಡೆಸುತ್ತಾರೆಂದು ಹೇಳಿ, ಬಳಿಕ ಎಸ್‌ಐಟಿಯನ್ನು ರಚಿಸಿದಾಗಲೂ ಯಾರೊಬ್ಬರೂ ಪ್ರಶ್ನಿಸಲಿಲ್ಲ.

Ranjith H A

ಆದರೆ ಯಾವಾಗ ಸರಣಿ ಗುಂಡಿ ಅಗೆದರೂ ಏನೂ ಸಿಗಲಿಲ್ಲವೆಂಬುದು ಖಾತ್ರಿಯಾಯಿತೋ ಆಗ ಬಿಜೆಪಿಗರಿಗೆ ಸಿಬಿಐ ನೆನಪಾಯಿತು. ಅಲ್ಲಿಯವರೆಗೂ ನಮಗೂ, ಧರ್ಮಸ್ಥಳಕ್ಕೂ ಸಂಬಂಧ ವಿಲ್ಲ ವೆನ್ನುವಂತಿದ್ದ ಬಹುತೇಕ ನಾಯಕರು ಅಲ್ಲಿಂದ ಧರ್ಮಸ್ಥಳದ ಪರ ಬ್ಯಾಟ್ ಬೀಸಲು ಶುರು ಮಾಡಿದರು.

ಇಂಥ ಯಾವುದೇ ಸೂಕ್ಷ್ಮ ಪ್ರಕರಣಗಳು ಮುನ್ನೆಲೆಗೆ ಬಂದರೂ ಪ್ರತಿಪಕ್ಷಗಳು ಸಹಜವಾಗಿ ಹೇಳುವುದು, “ಪ್ರಕರಣವನ್ನು ಸಿಬಿಐಗೆ ಕೊಡಿ" ಅಂತ. ಧರ್ಮಸ್ಥಳ ಅಥವಾ ಇನ್ಯಾವುದೇ ವಿಷಯ ದಲ್ಲಿರಲಿ ಸಿಬಿಐ ಅಥವಾ ಎನ್‌ಐಎನಿಂದ ತನಿಖೆಯಾಗಬೇಕು ಎನ್ನುವ ಆಗ್ರಹ ಹೊಸದೇನೂ ಅಲ್ಲ. ಹಾಗೆ ನೋಡಿದರೆ, ಈ ಹಿಂದೆ ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಿಸಬೇಕು ಎನ್ನುವ ಆಗ್ರಹ ಬಂದಾಗ ಇದೇ ಬಿಜೆಪಿಯ ಹಲವರು ಸಿಬಿಐ ತನಿಖೆ ಅನಗತ್ಯ ಎನ್ನುವ ಮಾತನ್ನಾಡಿದ್ದರು. ಆದರೆ ಪ್ರಕರಣದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎನ್ನುವ ವಿಷಯ ಹೊರಬರುತ್ತಿದ್ದಂತೆ, ಸಿಬಿಐಗೆ ವಹಿಸಬೇಕೆಂಬ ಆಗ್ರಹವನ್ನು ಶುರುಮಾಡಿದ್ದಾರೆ.

ಧರ್ಮಸ್ಥಳ ಬುರುಡೆ ಪ್ರಕರಣ ಹೋಗಲಿ, ಕೆಲ ದಿನಗಳ ಹಿಂದೆ ಕೋಲಾರದಲ್ಲಿ ಪ್ರೀತಿಯ ವಿಷಯ ದಲ್ಲಿ ನಡೆದ ಕೊಲೆಯನ್ನೂ ಎನ್‌ಐಎಗೆ ವಹಿಸಬೇಕು ಎನ್ನುವ ಆಗ್ರಹವನ್ನು ಬಿಜೆಪಿ ನಾಯಕರು ಮಾಡಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷದ ಅವಧಿಯಲ್ಲಿ ಕನಿಷ್ಠ 10 ಪ್ರಕರಣಗಳನ್ನು ಸಿಬಿಐಗೆ ವಹಿಸ ಬೇಕು ಎಂದು ಬಿಜೆಪಿಗರು ಆಗ್ರಹಿಸಿ ದ್ದರು.

ಇದನ್ನೂ ಓದಿ: Ranjith H Ashwath Column: ಬೌ ಬೌ ಸಂಘರ್ಷ ಗಂಭೀರವಾದುದು

ಹಾಗೆ ನೋಡಿದರೆ, ಯಾವುದೇ ಗಲಾಟೆ, ಘಟನೆ ನಡೆದಾಗ ಏನಾಗಿದೆ ಎನ್ನುವುದನ್ನು ಆಲೋಚಿ ಸುವ ಮೊದಲೇ, ಪ್ರತಿಪಕ್ಷ ಸ್ಥಾನದಲ್ಲಿರುವವರು “ಪ್ರಕರಣವನ್ನು ಸಿಬಿಐಗೆ ವಹಿಸಿ" ಎನ್ನುವ ಹೇಳಿಕೆ ನೀಡಿಯೇ ಬಳಿಕ ಮುಂದೇನು ಎನ್ನುವುದನ್ನು ಯೋಚಿಸುತ್ತಾರೆ ಎನ್ನುವಂತೆ ನಡೆದುಕೊಳ್ಳುತ್ತಾರೆ. ಅದರಲ್ಲಿಯೂ ಇತ್ತೀಚಿನ ದಿನದಲ್ಲಿ ‘ಧರ್ಮ’ದ ವಿಷಯದಲ್ಲಿ ಹುಲ್ಲು ಕಡ್ಡಿ ಅಲ್ಲಾಡಿದರೂ ಬಿಜೆಪಿಯ ಕೆಲವರು ‘ಎನ್‌ಐಎಗೆ ಪ್ರಕರಣ ವಹಿಸುವಂತೆ ಕೇಂದ್ರ’ಕ್ಕೊಂದು ಪತ್ರ ಬರೆದೇ ಮುಂದಿನ ಮಾತಾಡಬೇಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ.

ಈ ರೀತಿ ಸಿಬಿಐ, ಎನ್‌ಐಎಗೆ ಪ್ರಕರಣಗಳನ್ನು ವಹಿಸಬೇಕು ಎನ್ನುವ ಆಗ್ರಹವು ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಬಹುತೇಕ ರಾಜ್ಯಗಳಲ್ಲಿ ಕೇಳಿಬರುವ ಪ್ರತಿಪಕ್ಷಗಳ ಪ್ರತಿನಿತ್ಯದ ಕೂಗಾಗಿದೆ. ಇದು ಬಿಜೆಪಿ ಮಾತ್ರವಲ್ಲದೇ, ಯಾವುದೇ ಪಕ್ಷವು ಪ್ರತಿಪಕ್ಷ ಸ್ಥಾನದಲ್ಲಿ ಕೂತಾಗ ಹೊಮ್ಮಿಸುವ ಸರ್ವೇಸಾಮಾನ್ಯ ಮಾತು.

ಹಾಗೆಂದ ಮಾತ್ರಕ್ಕೆ, ಪ್ರತಿಪಕ್ಷಗಳು ಕೇಳುವಂತೆ ಎಲ್ಲ ಪ್ರಕರಣಗಳನ್ನೂ ಕೇಂದ್ರ ತನಿಖಾ ಸಂಸ್ಥೆಗಳಿಗೆ ವಹಿಸಬೇಕು ಎಂದಿಲ್ಲ. ಅನೇಕ ಪ್ರಕರಣಗಳಲ್ಲಿ, ರಾಜ್ಯ ಸರಕಾರವು ಸಿಬಿಐಗೆ ವಹಿಸಿದರೂ, ಸಿಬಿಐ ಪ್ರಕರಣವನ್ನು ದಾಖಲಿಸಿಕೊಳ್ಳುವುದಿಲ್ಲ. ಬದಲಿಗೆ

ನಿಮ್ಮ ಪೊಲೀಸರಿಂದಲೇ ತನಿಖೆ ನಡೆಸಿ ಎನ್ನುವ ಹಿಂಬರಹವನ್ನು ಕೊಟ್ಟು ಸಾಗಹಾಕುತ್ತದೆ. ಏಕೆಂದರೆ ‘ರಾಜಕೀಯ’ ಕಾರಣಗಳಿಗಾಗಿ ಆಗ್ರಹಿಸಿದ ಅಥವಾ ಶಿಫಾರಸು ಮಾಡಿದ ಪ್ರಕರಣಗಳನ್ನು ಸಿಬಿಐ ತನಿಖೆ ಮಾಡುವುದಕ್ಕೆ ಅದರ ಬಳಿ ಸಮಯವೂ ಇಲ್ಲ, ಮಾನವ ಸಂಪನ್ಮೂಲವೂ ಇರುವು ದಿಲ್ಲ. ಹಾಗೆ ನೋಡಿದರೆ, ಇತ್ತೀಚಿನ ದಿನಗಳಲ್ಲಿ ಸಿಬಿಐ ಎಲ್ಲ ಪ್ರಕರಣವನ್ನೂ ವಹಿಸಿಕೊಳ್ಳುವ ಆಸಕ್ತಿಯನ್ನು ತೋರುತ್ತಿಲ್ಲ.

ಇದಕ್ಕೆ ಉದಾಹರಣೆಯ ರೀತಿಯಲ್ಲಿ ಕಳೆದ ವರ್ಷ ಸಿಬಿಐನ ಬೆಂಗಳೂರು ವಿಭಾಗದ ಮುಖ್ಯಸ್ಥರು ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದು, ಕರ್ನಾಟಕ ಸರಕಾರದಿಂದ ಸಿಬಿಐಗೆ ಹಸ್ತಾಂತರವಾಗಿರುವ ಪ್ರಕರಣಗಳ ತನಿಖೆಗೆ ನಮ್ಮ ಬಳಿ ಮಾನವ ಸಂಪನ್ಮೂಲದ ಕೊರತೆಯಿದೆ. ಆದ್ದರಿಂದ ಗೃಹ ಇಲಾಖೆಯ ಅಧಿಕಾರಿ ಹಾಗೂ ವಾಹನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಮನವಿ ಮಾಡಿದ್ದರು.

ಕರ್ನಾಟಕ ಸರಕಾರವು ಸಿಬಿಐಗೆ ಶಿಫಾರಸು ಮಾಡಿರುವ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಲು ಐದು ಡಿವೈಎಸ್‌ಪಿ, 25 ಇನ್ಸ್‌ಪೆಕ್ಟರ್, 25 ಎಸ್‌ಐ, 50 ಪೇದೆಗಳು ಹಾಗೂ ಇಬ್ಬರು ಆಡಿಟರ್‌ ಗಳು ಬೇಕೆಂದು ವರ್ಷದ ಹಿಂದೆಯೇ ಮನವಿ ಮಾಡಲಾಗಿದೆ. ಹೆಚ್ಚು ಪ್ರಕರಣಗಳನ್ನು ಕೊಟ್ಟಷ್ಟೂ ಹೆಚ್ಚುವರಿ ಅಧಿಕಾರಿಗಳನ್ನು ನೀಡಬೇಕೆಂಬ ‘ಷರತ್ತು’ ವಿಧಿಸಿರುವುದನ್ನು ಗಮನಿಸಿ ದರೆ ಸಿಬಿಐ ಬಳಿಯಿರುವ ‘ಕಾರ್ಯ’ದ ಭಾರವನ್ನು ನಿಭಾಯಿಸಲು ಇರುವ ಸಮಸ್ಯೆ ಸ್ಪಷ್ಟವಾಗಿ ತಿಳಿಯುತ್ತದೆ.

ಬಿಜೆಪಿಯವರು ಮಾಡುತ್ತಿರುವ ಈ ಕೆಲಸವನ್ನು ಈ ಹಿಂದೆ ಕಾಂಗ್ರೆಸ್ ನಾಯಕರು ಮಾಡಿದ್ದರು. ಅದಕ್ಕೂ ಮೊದಲು ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಬಿಜೆಪಿ ನಾಯಕರೂ ಇದೇ ಕೆಲಸವನ್ನು ಮಾಡಿಕೊಂಡೇ ಬಂದಿದ್ದಾರೆ. ಸಿಬಿಐಗೆ ವಹಿಸಬೇಕು ಎನ್ನುವ ಕೂಗು ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ.

ಕೇಂದ್ರ ಹಾಗೂ ರಾಜ್ಯದಲ್ಲಿ ಭಿನ್ನ ಪಕ್ಷಗಳು ಅಧಿಕಾರದಲ್ಲಿದ್ದಾಗ ಪ್ರತಿಪಕ್ಷವು ‘ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎನ್ನುವ ಆಗ್ರಹವನ್ನು ಮಾಡುವುದು ಸಾಮಾನ್ಯ. ಈ ಹಿಂದೆ 2013ರಿಂದ 18ರವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ, ಗಣಪತಿ ಆತ್ಮಹತ್ಯೆ ಪ್ರಕರಣ, ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣ, ಪರೇಶ್ ಮೆಹ್ತಾ ಕೊಲೆ ಪ್ರಕರಣ ಸೇರಿದಂತೆ ಹತ್ತಾರು ಪ್ರಕರಣಗಳನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿ, ಅದರಲ್ಲಿ ಯಶಸ್ವಿಯಾಗಿತ್ತು.

ಈ ಎಲ್ಲ ಪ್ರಕರಣಗಳಲ್ಲಿ ಸರಕಾರ ಹಾಗೂ ಸಚಿವರ ವಿರುದ್ಧದ ದೂರಿತ್ತು. ಆದರೆ ಅಂತಿಮವಾಗಿ ಬಹುತೇಕ ಪ್ರಕರಣಗಳು ‘ಬಿ’ ರಿಪೋರ್ಟ್ ಸಲ್ಲಿಕೆಯ ಮೂಲಕ ಅಥವಾ ನ್ಯಾಯಾಲಯದಲ್ಲಿ ಖುಲಾಸೆಯಾಗುವ ಮೂಲಕ ಅಂತ್ಯವಾಗಿವೆ.

ಧರ್ಮಸ್ಥಳದ ಬುರುಡೆ ಪ್ರಕರಣವನ್ನು ಎನ್‌ಐಎ ಅಥವಾ ಸಿಬಿಐಗೆ ವಹಿಸುವಂತೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರಿಗೆ ಟಕ್ಕರ್ ಕೊಡಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಬಿಐ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಪ್ರಮುಖವಾಗಿ ಈಗಾಗಲೇ ಕೊಟ್ಟಿ ರುವ ಪ್ರಕರಣಗಳೇ ‘ತಾರ್ಕಿಕ’ ಅಂತ್ಯ ಕಾಣದೇ ಅತಂತ್ರ ಸ್ಥಿತಿಯಲ್ಲಿವೆ.

ಹೀಗಿರುವಾಗ ಹೊಸ ಪ್ರಕರಣಗಳನ್ನು ನೀಡುವುದಾದರೂ ಏಕೆ ಎನ್ನುವುದು ಅವರ ವಾದವಾಗಿದೆ. ಈಗಾಗಲೇ ಗುರು ರಾಘವೇಂದ್ರ ಬ್ಯಾಂಕ್, ಶ್ರೀ ಗುರು ಸೌರ್ವಭೌಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ಗಳ ಅವ್ಯವಹಾರಕ್ಕೆ ಸಂಬಂಧಿಸಿದಂತೆ 2020ರಲ್ಲಿಯೇ ದಾಖಲಾಗಿರುವ ಪ್ರಕರಣಗಳನ್ನು ತನಿಖೆಗೆಂದು ಸಿಬಿಐಗೆ ವಹಿಸಲಾಗಿತ್ತು.

ನಾಲ್ಕು ವರ್ಷ ಕಳೆದರೂ ಸಿಬಿಐ ತನಿಖೆಯಲ್ಲಿ ಮಹತ್ವದ ಪ್ರಗತಿಯಾಗಿಲ್ಲ. ಅದೇ ರೀತಿ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರ ಮಾರ್ಚ್‌ನಲ್ಲಿ ನಡೆದ ಪ್ರಕರಣ, ಪಾಪ್ಯುಲರ್ ಫೈನಾನ್ಸ್ ಹಗರಣಗಳನ್ನೆಲ್ಲ ಸಿಬಿಐಗೆ ವಹಿಸಲಾಗಿದೆ. ಆದರೂ, ಯಾವುದೇ ಕ್ರಮವಾಗಿಲ್ಲ. ಹೀಗಿರುವಾಗ ಹೊಸದಾಗಿ ಪ್ರಕರಣಗಳನ್ನು ನೀಡಿದರೆ ಅದರ ಫಲಿತಾಂಶ ಯಾವಾಗ? ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.

ಪ್ರತಿಪಕ್ಷ ಸ್ಥಾನದಲ್ಲಿರುವಾಗ ಬಿಜೆಪಿಯವರಾಗಲಿ, ಕಾಂಗ್ರೆಸ್‌ನವರಾಗಲಿ ‘ಆಗ್ರಹಿಸುವ’ ಅನೇಕ ಪ್ರಕರಣಗಳನ್ನು ಸಿಬಿಐಗೆ ವಹಿಸುವ ಅಗತ್ಯವಿರುವುದಿಲ್ಲ. ಈ ಸತ್ಯವು ನಾಯಕರಿಗೆ ಗೊತ್ತಿರುತ್ತದೆ. ಆದರೆ ಅಂದಿನ ಪರಿಸ್ಥಿತಿಯಲ್ಲಿ ಸರಕಾರವನ್ನು ಟೀಕಿಸುವ ಅಥವಾ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಕ್ರಿಯೆ ಭಾಗವಾಗಿ ‘ಸಿಬಿಐ ತನಿಖೆ’ ಎನ್ನುವ ಆಗ್ರಹದ ಮಾತುಗಳನ್ನು ಆಡುತ್ತಾರಷ್ಟೇ. ಸದ್ಯ ಕರ್ನಾಟಕದ ವಿಷಯದಲ್ಲಿ ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ಅಥವಾ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿಯವರು ಆಗ್ರಹಿಸುತ್ತಿದ್ದಾರೆ.

ಆದರೆ ನಿಜವಾಗಿಯೂ ಬುರುಡೆ ಪ್ರಕರಣವನ್ನು ಎನ್‌ಐಎಗೆ ವಹಿಸಲು ಬರುವುದೇ ಎನ್ನುವ ಪ್ರಶ್ನೆಗೆ ಬಹುತೇಕ ನಾಯಕರ ಬಳಿ ಉತ್ತರವಿಲ್ಲ. ಒಂದು ವೇಳೆ ಈ ಪ್ರಕರಣದಲ್ಲಿ ಕೇಂದ್ರ ಸರಕಾರದ ಅಂಗ ಸಂಸ್ಥೆಗಳನ್ನು ತರಲೇಬೇಕು ಎನ್ನುವ ಹಠವಿದ್ದರೆ, ಜಾರಿ ನಿರ್ದೇಶನಾಲಯವು (ಇ.ಡಿ.) ಎಂಟ್ರಿ ಯಾಗುವಂತೆ ನೋಡಿಕೊಳ್ಳಲು ಅವಕಾಶವಿದೆ. ಏಕೆಂದರೆ, ಬುರುಡೆ ಪ್ರಕರಣಕ್ಕೆ ವಿದೇಶದಿಂದ ‘ಫಂಡಿಂಗ್’ ಅಥವಾ ಭಾರಿ ಪ್ರಮಾಣದಲ್ಲಿ ಹಣದ ವ್ಯವಹಾರ ನಡೆದಿರುವ ಅನುಮಾನಗಳು ಬರುತ್ತಿರುವುದರಿಂದ, ಈ ವಿಷಯವನ್ನು ಮುಂದಿಟ್ಟುಕೊಂಡು ಪ್ರಕರಣದಲ್ಲಿ ಇ.ಡಿ. ಪ್ರವೇಶ ವಾಗುವಂತೆ ನೋಡಿಕೊಳ್ಳಬಹುದು.

ಆದರೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೊರತುಪಡಿಸಿ, ಬಹುತೇಕ ಬಿಜೆಪಿಗರು ಈ ಆಯಾಮದಲ್ಲಿ ಪ್ರಕರಣವನ್ನು ನೋಡಿಯೇ ಇಲ್ಲ. ಬದಲಿಗೆ ಬಿಜೆಪಿಯ ಬಳಿಯಿದ್ಧ ‘ಸಿದ್ಧ’ ಅಸ್ತ್ರದ ರೀತಿಯಲ್ಲಿ ಪ್ರಕರಣವನ್ನು ಸಿಬಿಐ ಅಥವಾ ಎನ್‌ಐಎಗೆ ವಹಿಸಬೇಕು ಎನ್ನುವ ಆಗ್ರಹ ವನ್ನು ಮುಂದುವರಿಸಿದ್ದಾರೆ.

ಯಾವುದೇ ಪ್ರಕರಣವಿರಲಿ, ಯಾರಿಂದ ತನಿಖೆಯಾಗುತ್ತಿದೆ ಎನ್ನುವುದಕ್ಕಿಂತ, ಯಾವ ಆಯಾಮ ದಲ್ಲಿ ಅದು ಸಾಗುತ್ತಿದೆ ಹಾಗೂ ತಾರ್ಕಿಕ ಅಂತ್ಯಕ್ಕೆ ತನಿಖೆ ಹೋಗುತ್ತಿದೆಯೇ ಎನ್ನುವುದನ್ನು ಗಮನಿಸಬೇಕಿದೆ. ಆದರೆ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ‘ತಾರ್ಕಿಕ’ ಅಂತ್ಯ ಎನ್ನುವುದಕ್ಕಿಂತ ಹೆಚ್ಚಾಗಿ, ಅಂದಿನ ರಾಜಕೀಯ ಹೋರಾಟದ ಅಸ್ತ್ರದ ಆಯಾಮದಲ್ಲಿ ಬಹುತೇಕ ನಾಯಕರು ಆಲೋಚಿಸುವುದಿಲ್ಲ. ಇಂದು ಬಿಜೆಪಿ ಪ್ರತಿಪಕ್ಷದಲ್ಲಿದ್ದುಕೊಂಡು ಕೇಳುತ್ತಿರುವ ಮಾತುಗಳನ್ನೇ ಮುಂದೊಂದು ದಿನ ಕಾಂಗ್ರೆಸಿಗರು ತಾವು ಪ್ರತಿಪಕ್ಷದಲ್ಲಿ ಕೂತಾಗ ಕೇಳುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಕೊನೆಯದಾಗಿ, ಯಾವುದೇ ಪ್ರಕರಣವಿರಲಿ, ಆರೋಪವಿರಲಿ ತನಿಖೆ ಹೇಗಾಯಿತು ಎನ್ನುವುದಕ್ಕಿಂತ ಮುಖ್ಯವಾಗಿ ತನಿಖೆಯಿಂದ ಬಂದ ‘ಫಲಿತಾಂಶ’ವೇನು ಎನ್ನುವುದರ ಕಡೆಗೆ ಗಮನಹರಿಸ ಬೇಕಾಗುತ್ತದೆ...