ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಡಿನ ಜಿಲ್ಲೆಗೆ ವಿಷ ಪ್ರಾಶನದ ಕಳಂಕ

ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಬೀಟ್ ನಲ್ಲಿ ಸತ್ತ ಹಸುವಿಗೆ ವಿಷ ಹಾಕಿ ತಾಯಿ ಹುಲಿಯೊಂದಿಗೆ ನಾಲ್ಕು ಮರಿ ಹುಲಿಗಳು ಮೃತಪಟ್ಟವು. ಇನ್ನು ಸತ್ತು ಬಿದ್ದ ಹಸುವಿನ ಹತ್ತಿರವೇ ಐದು ಹುಲಿಗಳು ಸತ್ತು ಬಿದ್ದ ದೃಶ್ಯ ಎಂಥವರನ್ನು ಮರಗುವಂತೆ ಮಾಡಿತ್ತು. ಇನ್ನು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಘಟನೆ ಆತಂಕ ಪಡುವಂತೆ ಮಾಡಿದೆ. ಪರಿಸರ ಪ್ರೇಮಿಗಳು ಹಾಗೂ ಪರಿಸರ ವಾದಿಗಳು ತೀವ್ರ ಆಕ್ರೋಶ ಕೂಡ ಹೊರಹಾಕಿದ್ದಾರೆ

ಕಾಡಿನ ಜಿಲ್ಲೆಗೆ ವಿಷ ಪ್ರಾಶನದ ಕಳಂಕ

Profile Ashok Nayak Jul 5, 2025 6:58 PM

ದೇವನೂರು ಶ್ರೀನಿವಾಸ್‌, ಚಾಮರಾಜನಗರ

ಕೊನೆಗೂ ಸೆರೆ ಸಿಕ್ಕರು ಹುಲಿ ಹಂತಕರು

ಕೊನೆಗೆ ೨೦ ಕೋತಿಗಳೂ ಬಲಿಯಾದವು

ಇದು ಅಪ್ಪಟ ಕಾಡಿನ ಜಿಲ್ಲೆ. ಶೇ.52ರಷ್ಟು ಕಾಡನ್ನೇ ಹೊಂದಿದೆ. ಅದರಲ್ಲೂ ಎರಡು ಹೊರ ರಾಜ್ಯಗಳ ಸಂಪರ್ಕಕೊಂಡಿಯಾಗಿ ಗಡಿ ಜಿಲ್ಲೆ ಕೂಡ. ಈ ಜಿಲ್ಲೆಗೆ ಮತ್ತೊಂದು ಗರಿ ಕೂಡ ಇದೆ. ಅದೇನೆಂದರೆ ಎರಡು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಹೊಂದಿದೆ. ಇದು ವನ್ಯ ಜೀವಿಗಳ ಧಾಮ ಕೂಡ ಎಂಬ ಹೆಗ್ಗಳಿಕೆಯೂ ಇದೆ.

ಜಿಲ್ಲೆಗೆ ಕಳಂಕದ ಘಟನೆ

ಜಿಲ್ಲೆಯ ಐದು ತಾಲೂಕುಗಳಾದ ಚಾಮರಾಜ ನಗರ, ಯಳಂದೂರು, ಕೊಳ್ಳೇಗಾಲ, ಹನೂರು ಹಾಗೂ ಗುಂಡ್ಲುಪೇಟೆಗಳು ಕಾಡಿನ ನಂಟಿನೊಂದಿಗೆ ಬೆಳೆದಿವೆ. ಇಲ್ಲಿನ ಜನರಿಗೆ ಪ್ರಾಣಿಗಳ ಮೇಲಿನ ಪ್ರೀತಿ, ಗೌರವ ಹಾಗೂ ಹೆಮ್ಮೆ. ಇದುವರೆಗೂ ಪ್ರಾಣಿಗಳ ಸಂಕುಲಕ್ಕೆ ವೀರಪನ್ ಹೋದ ನಂತರ ಯಾವುದೇ ಉಪದ್ರವ ಇರಲಿಲ್ಲ. ಆದರೆ ಯಾಕೋ ಏನೋ ಇತ್ತೀಚಿಗೆ ಜಿಲ್ಲೆಗೆ ಅಪಕೀರ್ತಿ ತರುವ ಘಟನೆ ಸಂಭವಿಸಿವೆ.

ಇಡೀ ರಾಜ್ಯದ ಜನತೆಯನ್ನೇ ಬೆಚ್ಚಿಬೀಳುವಂತೆ ಮಾಡಿವೆ. ಒಂದೇ ವಾರದ ಅಂತರದಲ್ಲಿ ಎರಡು ಕಡೆ ಕಾಡುಪ್ರಾಣಿಗಳಿಗೆ ವಿಷ ಹಾಕಿ ಕೊಂದ ಘಟನೆ ಇಡೀ ದೇಶವೇ ಜಿಲ್ಲೆಯತ್ತ ತಿರುಗಿ ನೋಡು ವಂತೆ ಮಾಡಿದೆ!

ಐದು ಹುಲಿಗಳ ಪ್ರಕರಣ

ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಬೀಟ್ ನಲ್ಲಿ ಸತ್ತ ಹಸುವಿಗೆ ವಿಷ ಹಾಕಿ ತಾಯಿ ಹುಲಿಯೊಂದಿಗೆ ನಾಲ್ಕು ಮರಿ ಹುಲಿಗಳು ಮೃತಪಟ್ಟವು. ಇನ್ನು ಸತ್ತು ಬಿದ್ದ ಹಸುವಿನ ಹತ್ತಿರವೇ ಐದು ಹುಲಿಗಳು ಸತ್ತು ಬಿದ್ದ ದೃಶ್ಯ ಎಂಥವರನ್ನು ಮರಗುವಂತೆ ಮಾಡಿತ್ತು. ಇನ್ನು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಘಟನೆ ಆತಂಕ ಪಡುವಂತೆ ಮಾಡಿದೆ. ಪರಿಸರ ಪ್ರೇಮಿಗಳು ಹಾಗೂ ಪರಿಸರ ವಾದಿಗಳು ತೀವ್ರ ಆಕ್ರೋಶ ಕೂಡ ಹೊರ ಹಾಕಿದ್ದಾರೆ.

ಇದನ್ನೂ ಓದಿ: Naveen Sagar Column: ಸಾಲುತಿಲ್ಲವೇ.. ಸಾಲುತಿಲ್ಲವೇ.. ಎಂಬ ಶುದ್ಧ ಕಳ್ಳನೆಪ !

ಮೂವರು ಹಂತಕರ ಬಂಧನ

ಎರಡು ದಿನಗಳ ಕಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅರಣ್ಯ ಇಲಾಖೆ ಎರಡು ದಿನ ಗಳಲ್ಲೇ ಬಂಽಸುವಲ್ಲಿ ಯಶಸ್ವಿಯಾಯಿತು. ಹನೂರು ತಾಲೂಕಿನ ಕೊಪ್ಪ ಗ್ರಾಮದ ಹಸುವಿನ ಮಾಲೀಕ ಕೋನಪ್ಪ, ಹಸುವಿಗೆ ವಿಷ ಹಾಕಿದ ಮಾದುರಾಜ್, ಶಿವಣ್ಣ ಹಾಗೂ ನಾಗರಾಜು, ಪೂಜಾರಿ ಗೌಡ ಎಂಬ ದನಗಾಹಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾ ಯಿತು. ಇದೀಗ ನ್ಯಾಯಾಂಗ ಬಂಧನವಾಗಿ ಜೈಲಿನಲ್ಲಿ ಮುದ್ದು ಮುರಿಯುತ್ತಿದ್ದಾರೆ.

ಹುಲಿಗಳಿಗೆ ವಿಷ ಹಾಕಿದ್ದೇಕೆ?

ಹನೂರು ತಾಲೂಕಿನ ಮೀಣ್ಯಂ ಸಮೀಪವೇ ಕೊಪ್ಪ ಗ್ರಾಮವಿದ್ದು ಜಾನುವಾರುಗಳಿಗೆ ಹುಲಿ ಉಪಟಳ ಕೊಡುತ್ತಿದೆ. ಅಲ್ಲದೇ ಸಾಕಷ್ಟು ಜಾನುವಾರುಗಳನ್ನ ಕೊಂದು ತಿಂದಿದೆ ಎಂಬ ಕೋಪ ವಿತ್ತು. ಅದೇ ದ್ವೇಷವಿಟ್ಟುಕೊಂಡ ಕಿಡಿಗೇಡಿಗಳು ಹುಲಿಗೆ ಬಾಯಿಗೆ ಬಲಿಯಾದ ಹಸುವಿನ ದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿದ್ದರು. ಇದರಿಂದ ಬೇಟೆಗೆ ಬಂದ ಹುಲಿಗಳು ಸ್ಥಳದಲ್ಲೇ ಅಸುನೀಗಿದ್ದವು. ಘಟನೆ ಸಂಬಂಧ ಸಮೀಪದ ಗ್ರಾಮಗಳಾದ ಕೊಪ್ಪ, ಮೀಣ್ಯಂ ಹಾಗೂ ಗಾಜನೂರು ಗ್ರಾಮಗಳಲ್ಲಿ ಹಲವು ದನಗಾಹಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ಮೊದಲಿಗೆ ಕೊಪ್ಪ ಗ್ರಾಮದ ಐವರನ್ನು ಬಂಧಿಸಿದ್ದ ಅರಣ್ಯಾಧಿಕಾರಿಗಳು ತೀವ್ರ ಕಾರ್ಯಾಚರಣೆ ನಡೆಸಿ ಹಸುವಿನ ಮಾಲೀಕರನ್ನು ಮೊದಲಿಗೆ ಪತ್ತೆ ಮಾಡಿಕೊಂಡು ನಂತರ ಉಳಿದವರನ್ನು ಬಿಡುಗಡೆಗೊಳಿಸಿದ್ದರು. ಹಸುವಿನ ಮಾಲೀಕ ಕೋನಪ್ಪ ಎಂಬುದು ಖಚಿತವಾಗುತ್ತಿದ್ದಂತೆ ಹುಲಿಗಳ ಸಾವಿಗೆ ಕಾರಣರಾದ ಮಾದುರಾಜ್ ಮತ್ತು ನಾಗರಾಜು ಎಂಬವರನ್ನು ಕೂಡ ಹೆಡೆಮುರಿ ಕಟ್ಟಿದ್ದರು.

ಗೊಬ್ಬರ ದಂಧೆಗೆ ಹುಲಿಗಳು ಬಲಿ

ಇನ್ನು ಈ ಭಾಗದಲ್ಲಿ ತಮಿಳುನಾಡಿನ ಬಂಡವಾಳ ಶಾಹಿಗಳು ದನಗಳನ್ನು ಇಲ್ಲಿಗೆ ತಂದು ಇಲ್ಲಿ ಬಡಜನರನ್ನು ಕೂಲಿಕಾರರಾಗಿ ಮಾಡಿಕೊಂಡು ಗೊಬ್ಬರ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಅದರ ಬಗ್ಗೆ ತನಿಖಾ ತಂಡ ಕ್ರಮ ಜರುಗಿಸಲಿದೆ. ತಮಿಳುನಾಡಿನಲ್ಲಿ ಕಾಡಿಗೆ ಜಾನುವಾರುಗಳನ್ನು ಬಿಡುವುದಿಲ್ಲ. ಹೀಗಾಗಿ ನಮ್ಮ ರಾಜ್ಯದ ಈ ಗಡಿ ಭಾಗದಲ್ಲಿ ದನಗಳನ್ನು ತಂದು ಬಿಡುತ್ತಾರೆ. ಇಲ್ಲಿ ಕೂಲಿ ಲೆಕ್ಕದಲ್ಲಿ ಹಸುಗಳ ಸಾಕಣೆ ಮಾಡಿಸುತ್ತಾರೆ. ಇಂಥಾದ್ದೊಂದು ಜಾಲ ಇಲ್ಲಿ ದಟ್ಟವಾಗಿದೆ.

ಕರ್ನಾಟಕದ ಕಾಡು ತಮಿಳುನಾಡಿನ ದನಗಳಿಗೆ ಮೇವಿನ ತಾಣವಾಗಿದೆ. ತಮಿಳುನಾಡಿನ ದನ ಗಳನ್ನು ತಂದು ಸಾಕಲು ಕಡಿವಾಣ ಹಾಕಬೇಕೆಂದು ಮಾಜಿ ಶಾಸಕ ನರೇಂದ್ರ ಒತ್ತಾಯಿಸಿದ್ದಾರೆ.

೨೫೦ ಹಸುಗಳ ಸಾಕಣೆ

ಹನೂರು ತಾಲೂಕಿನ ಕೊಪ್ಪ ಗ್ರಾಮದ ಶಿವಣ್ಣಗೌಡ, ಕುನ್ನಪ್ಪ ಸರಿಸುಮಾರು 250ಕ್ಕೂ ಅಧಿಕ ಹಸುಗಳನ್ನು ಸಾಕುತ್ತಿದ್ದಾರೆ. ಹಸುಗಳನ್ನು ಬರಗೂರು ಸಂಗಳ ಬೆಟ್ಟದ ಕಾರ್ತಿಕ್, ಈತನ ಸಹೋದರ ಮಾದೇಶ್ ಎಂಬಿಬ್ಬರು ಹಸುಗಳನ್ನು ಮೇಯಿಸಲು ಸೇರಿಕೊಂಡಿದ್ದರು. ಇವರ ಸ್ವ ಗ್ರಾಮದಲ್ಲಿ ಶುಭ ಕಾರ್ಯ ಇದ್ದಿದ್ದರಿಂದ ಭಾನುವಾರ ಗ್ರಾಮಕ್ಕೆ ತೆರಳಿದ್ದರು. ಇವರ ಬದಲಾಗಿ ಮಾಧುರಾಜು ಹಾಗೂ ಕುನ್ನಪ್ಪ ಹಸುಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದ ವೇಳೆ ಹಸುಗಳು ದಿಕ್ಕಾಪಾಲಾಗಿ ಓಡಿಹೋದದ್ದನ್ನು ಕಂಡು ಪರಿಶೀಲನೆ ನಡೆಸಿದಾಗ ಹಸು ಹುಲಿ ದಾಳಿಗೆ ಮೃತ ಪಟ್ಟಿತ್ತು. ಕಳೆದ ವಾರವೂ ಮಾಧುರಾಜು ಗೂಳಿ ಮೇಲೆ ಹುಲಿ ದಾಳಿ ನಡೆಸಿತ್ತು. ಇದರಿಂದ ರೊಚ್ಚಿ ಗೆದ್ದಿದ್ದ ಮಾಧುರಾಜು ಕ್ರಿಮಿನಾಶಕವನ್ನು ಹಸುವಿನ ತೊಡೆಯ ಭಾಗಕ್ಕೆ ಹಾಕಿದ್ದರು. ಇದನ್ನು ವಿಚಾರಣೆಯಲ್ಲಿ ಬಾಯ್ಬಿಟಿದ್ದಾರೆ.

ಹುಲಿ ಬರುವ ನಂಬಿಕೆ

ಬೇಟೆಯಾಡಿದ್ದ ಹಸುವನ್ನು ಮತ್ತೇ ತಿನ್ನಲು ಬಂದ ಹುಲಿ ಮತ್ತು ಮರಿಗಳು ಕ್ರಿಮಿನಾಶಕ ಹಾಕಿದ್ದ ಮಾಂಸವನ್ನು ತಿಂದು ಮೃತಪಟ್ಟಿವೆ. ಮರಣೋತ್ತರ ಪರೀಕ್ಷೆಯಲ್ಲಿ ವಿಷದಿಂದಲೇ ಹುಲಿಗಳು ಮೃತಪಟ್ಟಿರುವುದು ದೃಢಪಟ್ಟಿದೆ.

ಪ್ರಸಾದಕ್ಕೆ 17 ಜೀವ ಬಲಿ

ಇದೇ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ 2009ರಲ್ಲಿ ಎರಡು ಗುಂಪುಗಳ ಒಳ ಜಗಳಕ್ಕೆ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರಸಾದದಲ್ಲಿ ವಿಷ ಬೆರೆಸಿ ಹದಿನೇಳು ಜೀವ ಗಳು ಬಲಿಯಾಗಿದ್ದವು. ಅದಕ್ಕೆ ಕಾರಣರಾದವರು ಒಬ್ಬ ಸ್ವಾಮೀಜಿ. ಇನ್ನೂ ಜೈಲಿನಲ್ಲೇ ಮುದ್ದೆ ಮುರಿಯುತ್ತಿದ್ದಾರೆ. ಈಗ ಮತ್ತೊಂದು ವಿಷಪಾಶನ ಘಟನೆ ನಡೆದಿರುವುದು ವಿಪರ್ಯಾಸವೇ ಸರಿ.

20 ಕೋತಿಗಳ ಮರಣ

ಐದು ಹುಲಿಗಳ ಸಾವು ಮಾಸುವ ಮುನ್ನವೇ ಮತ್ತೊಂದು ಪ್ರಕರಣದಲ್ಲಿ ಗುಂಡ್ಲುಪೇಟೆ ತಾಲೂ ಕಿನ ಕಂದೇಗಾಲ ಸಮೀಪ ಕೋತಿಗಳ ಮಾರಣ ಹೋಮದ ಘಟನೆ ನಡೆದಿದೆ. ಎರಡು ಚೀಲಗಳಲ್ಲಿ ಕೋತಿಗಳ ಶವವನ್ನು ಕಟ್ಟಿಟ್ಟು ಬಿಸಾಡಿ ಹೋಗಿದ್ದಾರೆ. ಮೇಲ್ನೋಟಕ್ಕೆ ವಿಷ ಪ್ರಶಾನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬ-ರ್ ವಲಯಕ್ಕೆ ಬರಲಿದೆ. ಅರಣ್ಯಾಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹನೂರು ಭಾಗದ ವಿಷದ ಪ್ರಕರಣ ಇದೀಗ ಬಂಡೀಪುರಕ್ಕೂ ವ್ಯಾಪಿಸಿದ್ದು, ಇಂಥ ಘಟನೆ ನಡೆಯಂತೆ ನೋಡಿಕೊಳ್ಳ ಬೇಕು ಎಂದು ವನ್ಯಜೀವಿಗಳ ಪ್ರೇಮಿಗಳು ಸರಕಾರವನ್ನ ಒತ್ತಾಯಿಸಿದ್ದಾರೆ.