ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮರಳಿ ನಾಂದಣಿಗೆ ಬರುವಳೇ ಮಹಾದೇವಿ ?

ಮಹಾರಾಷ್ಟ್ರದ ಕೊಲ್ಹಾಪುರದ ನಾಂದಣಿಯಲ್ಲಿ ಜೈನ ಧಾರ್ಮಿಕ ಕೇಂದ್ರವಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟದ ಲಕ್ಷಾಂತರ ಭಕ್ತರನ್ನು ಹೊಂದಿದೆ. ಮೂರು ದಶಕಗಳ ಹಿಂದೆ ಮಹಾದೇವಿ ಹೆಸರಿನ ಆನೆ ತರಲಾಗಿತ್ತು. ಅವತ್ತಿನಿಂದಲೂ ಜನರ ಜತೆ ಉತ್ತಮ ಒಡನಾಟ ಹೊಂದಿದ್ದ ಆನೆಗೆ ಭಕ್ತರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಮರಳಿ ನಾಂದಣಿಗೆ ಬರುವಳೇ ಮಹಾದೇವಿ ?

Ashok Nayak Ashok Nayak Aug 7, 2025 9:35 AM

ವಿನಾಯಕ ಮಠಪತಿ ಬೆಳಗಾವಿ

ಅಂಬಾನಿ ವನತಾರಾ ಸೇರಿರುವ ಮಹಾದೇವಿ ಆನೆ

ವಾಪಸ್ ಮಠಕ್ಕೆ: ಸಿಎಂ ದೇವೇಂದ್ರ ಫಡ್ನವಿಸ್ ಭರವಸೆ

ಬಾಯ್ಕಾಟ್ ಜಿಯೋ ಕೂಗು

ಮಹಾರಾಷ್ಟ್ರದ ನಾಂದಣಿ ಮಠದ ಆನೆ ಮಹಾದೇವಿಯನ್ನು ಅನಂತ ಅಂಬಾನಿ ಒಡೆತನದ ವನತಾರಾ ವನ್ಯಜೀವಿ ಸಂರಕ್ಷಣಾ ತಾಣಕ್ಕೆ ಹಸ್ತಾಂತರಿಸಿ ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು. ವನತಾರಾ ವಿರುದ್ಧ ಆಕ್ರೋಶ ಭುಗಿಲೆದಿದ್ದ ಬೆನ್ನಲ್ಲೇ, ಜನರ ಒತ್ತಡಕ್ಕೆ ಮಣಿದು ವನತಾರಾ ಪ್ರಾಣಿ ಸಂರಕ್ಷಣಾ ತಾಣ ಆನೆ ಮಹಾದೇವಿಯನ್ನು ನಾಂದಣಿ ಮಠಕ್ಕೆ ಮರಳಿಸುವ ‘ಪ್ರಸ್ತಾವ’ವನ್ನು ಮುಂದಿಟ್ಟಿದೆ.

ಮಠದ ಆನೆ ಕುರಿತ ಎದ್ದಿರುವ ಜನಾಕ್ರೋಶದ ವಿಚಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವನತಾರಾ ಆಡಳಿತ ಮಂಡಳಿ ಜತೆ ಮಾತನಾಡಿದ್ದಾರೆ. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ, ವನತಾರಾ ಕೊಲ್ಹಾಪುರದ ನಾಂದಣಿ ಯಲ್ಲಿ ಸ್ಯಾಟ್‌ಲೈಟ್ ಸಂರಕ್ಷಣಾಲಯ ನಿರ್ಮಾಣ ಮಾಡಿ ಆನೆಯನ್ನು ಮರಳಿ ನೀಡುವ ಭರವಸೆ ನೀಡಿದೆ. ಸುಪ್ರೀಂಕೋರ್ಟ್ ಹಾಗೂ ಮಹಾರಾಷ್ಟ್ರ ಸರಕಾರ ಸಹಯೋಗ ನೀಡಿದರೆ, ಮರಳಿ ನಾಂದಣಿ ಮಠದ ಮಹಾದೇವಿ ಆನೆಯನ್ನು ಕಳುಹಿಸುವುದಾಗಿ ಹೇಳಿದೆ ಎಂದಿದ್ದಾರೆ.

ಇದನ್ನೂ ಓದಿ: Vinayaka Mathapathy Column: ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?

ಏನಿದು ಮಹಾದೇವಿ ಆನೆ ವಿವಾದ: ಮಹಾರಾಷ್ಟ್ರದ ಕೊಲ್ಹಾಪುರದ ನಾಂದಣಿಯಲ್ಲಿ ಜೈನ ಧಾರ್ಮಿಕ ಕೇಂದ್ರವಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟದ ಲಕ್ಷಾಂತರ ಭಕ್ತರನ್ನು ಹೊಂದಿದೆ. ಮೂರು ದಶಕಗಳ ಹಿಂದೆ ಮಹಾದೇವಿ ಹೆಸರಿನ ಆನೆ ತರಲಾಗಿತ್ತು. ಅವತ್ತಿನಿಂದಲೂ ಜನರ ಜತೆ ಉತ್ತಮ ಒಡನಾಟ ಹೊಂದಿದ್ದ ಆನೆಗೆ ಭಕ್ತರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಆನೆಯ ಆರೋಗ್ಯ ಸ್ಥಿತಿ ಸೇರಿದಂತೆ ವಿವಿಧ ಕಾರಣ ನೀಡಿ ಬಾಂಬೆ ಹೈಕೋರ್ಟ್ ಮಹಾದೇವಿ ಯನ್ನು ಗುಜರಾತಿನ ವನತಾರ ಪುನರ್ವಸತಿಗೆ ಕಳುಹಿಸುಂತೆ ಆದೇಶ ಹೊರಡಿಸಿತ್ತು. ಸದ್ಯ ಈ ಘಟನೆ ಅಸಂಖ್ಯಾತ ನಾಂದಣಿ ಮಠದ ಭಕ್ತರಿಗೆ ನೋವುಂಟು ಮಾಡಿದೆ. ಕೋರ್ಟ್ ಆದೇಶಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿವೆ.

ಪೆಟಾ ಇಂಡಿಯಾ ಸಂಸ್ಥೆಯಿಂದ ಮೋಸ: ಆನೆ ಆರೋಗ್ಯ ಕುರಿತು ಅಧ್ಯಯನ ನಡೆಸಲು ಕೊಲ್ಹಾಪುರದ ನಾಂದಣಿ ಮಠಕ್ಕೆ ಭೇಟಿ ನೀಡಿದ್ದ ಪೆಟಾ ಸ್ವಯಂ ಸೇವಾ ಸಂಸ್ಥೆ ಮಠದಲ್ಲಿ ಆನೆ ಆರೋಗ್ಯವಾಗಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಬಳಿಕ ಕೋರ್ಟ್‌ಗೆ ವರದಿ ಸಲ್ಲಿಸಿ ವಾದ ಮಂಡಿಸುವ ವೇಳೆ ಧಾರ್ಮಿಕ ಭಾವನೆ ಹೆಸರಿನಲ್ಲಿ ಮಹಾದೇವಿ ಆನೆಗೆ ಚಿತ್ರಹಿಂಸೆ ನೀಡ ಲಾಗುತ್ತಿದೆ ಎಂದಿತ್ತು. ಈ ಎಲ್ಲಾ ವಾದವನ್ನು ಆಲಿಸಿದ್ದ ಬಾಂಬೆ ಹೈಕೋರ್ಟ್ ಜುಲೈ 16 ರಂದು ನಾಂದಣಿ ಮಠದ ಆನೆಯನ್ನು ವನತಾರಾ ಪುನರ್ವಸತಿಗಾಗಿ ಕಳುಹಿಸುವಂತೆ ಆದೇಶ ನೀಡಿತ್ತು. ಹೈಕೋರ್ಟ್ ವಾದವನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಅನಂತ ಅಂಬಾನಿ ಒಡೆತನದ ವನತಾರಾ ಕೂಡ ಆನೆ ಸುಪರ್ದಿಗಾಗಿ ಪಟ್ಟು ಹಿಡಿದಿತ್ತು ಎನ್ನುವ ಆರೋಪವೂ ಇದೆ.

ಕರ್ನಾಟಕದ ಮಹಾದೇವಿ: ಅಸಂಖ್ಯಾತ ಭಕ್ತರನ್ನು ಹೊಂದಿರುವ ಕೊಲ್ಹಾಪುರ ನಾಂದಣಿ ಮಠದ ಆನೆ ಮಹಾದೇವಿ (ಮಾಧುರಿ) ಮೂಲತಃ ಕರುನಾಡಿನವಳು. ಕಳೆದ 30 ವರ್ಷಗಳ ಹಿಂದೆ 1992 ರಲ್ಲಿ ಕರ್ನಾಟಕದಿಂದ ಆನೆಯನ್ನು ಕೊಲ್ಹಾಪುರದ ನಾಂದಣಿ ಮಠಕ್ಕೆ ಕಳುಹಿಸಲಾಗಿತ್ತು. ಆಗ ಆನೆಯ ವಯಸ್ಸು ಕೇವಲ ಮೂರು ವರ್ಷ. ನಂತರ ಮಠಕ್ಕೆ ಬರುವ ಭಕ್ತರ ಜೊತೆ ಬೆರೆತು ಸ್ನೇಹದಿಂದ ವರ್ತನೆ ಮಾಡುತ್ತಿತ್ತು. ಮಹಾದೇವಿ ಹೆಸರಿನಿಂದ ಕರಿಯುತ್ತಿದ್ದ ಹೆಣ್ಣು ಆನೆಗೆ ಅಪಾರ ಅಭಿಮಾನಿಗಳಿರುವುದು ಇನ್ನೊಂದು ವಿಶೇಷ.

ಜಿಯೋ ನೆಟ್ವರ್ಕ್‌ನಿಂದ ಹೊರಬಂದ ಜನ

ಯಾವಾಗ ನಾಂದಣಿ ಮಠದ ಆನೆ ಮಹಾದೇವಿಯನ್ನು ಗುಜರಾತಿನಲ್ಲಿರುವ ಅಂಬಾನಿ ಒಡೆತನದ ವನತಾರಾ ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರಕ್ಕೆ ಹಸ್ತಾಂತರಿಸಿ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ಮೂರು ದಶಕಗಳಿಂದ ಆನೆಯೊಂದಿಗೆ ಒಡನಾಟ ಹೊಂದಿರುವ ನಾಂದನಿ ಮಠದ ಭಕ್ತರನ್ನು ಕೆರಳಿಸಿದೆ. ಈ ಹಿನ್ನಲೆಯಲ್ಲಿ ಸಾವಿರಾರು ಜೈನ ಧರ್ಮಿಯರು ಜಿಯೋ ನೆಟ್ವರ್ಕ್ ನಿಂದ ಹೊರಬಂದಿದ್ದಾರೆ. ಬಾಯ್ಕಟ್ ಜಿಯೋ ಅಭಿಯಾವನ್ನು ಶುರು ಮಾಡಿ ದ್ದಾರೆ. ನಾಂದಣಿ ಮಠದ ಆನೆಯನ್ನು ಮರಳಿಸುವಂತೆ ಆಗ್ರಹಿಸಿ ಸ್ವಸ್ತಿಶ್ರೀ ಭಟ್ಟಾರಕ ಪಟ್ಟಾ ಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಾಂದಣಿ ಮಠದಿಂದ ಕೊಲ್ಹಾಪುರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಮಹಾರಾಷ್ಟ್ರ ಜೈನ ಸಮುದಾಯದ ಜತೆ ಕರ್ನಾಟಕದ ಭಕ್ತರೂ ಕೈಜೋಡಿಸಿದ್ದು ಅಂಬಾನಿ ಒಡೆತನದ ಜಿಯೋ ನೆಟ್ವರ್ಕ್‌ನಿಂದ ಮಠದ ಆನೆಗಾಗಿ ಒಂದಾದ ಜನ ಹೊರಬರುತ್ತಿದ್ದಾರೆ.

ಮಠದ ಆನೆಗಾಗಿ ಒಂದಾದ ಕರ್ನಾಟಕ-ಮಹಾರಾಷ್ಟ್ರ ಭಕ್ತರು

ಸದಾಕಾಲವೂ ಗಡಿಯಲ್ಲಿ ಭಾಷೆ ವಿಷಯಕ್ಕೆ ನಿರಂತರ ಸಂಘರ್ಷಕ್ಕೆ ಕಾರಣವಾಗಿದ್ದ ಗಡಿಭಾಗ ಸದ್ಯ ಒಂದು ಆನೆಯ ವಿಚಾರವಾಗಿ ಒಂದಾಗಿದೆ. ನಾಂದಣಿ ಮಠದ ಆನೆ ಮಹಾದೇವಿಯನ್ನು ವನ್ಯಜೀವಿ ಸಂರಕ್ಷಣಾ ತಾಣಕ್ಕೆ ನೀಡಿರುವ ಆದೇಶ ದಿಂದ ಮಹಾರಾಷ್ಟ್ರದ ಹಾಗೂ ಕರ್ನಾಟಕದ ಭಕ್ತರು ಒಗ್ಗಟ್ಟಿನ ಹೋರಾಟ ಮುಂದುವರಿಸಿದ್ದಾರೆ. ರಾಜ್ಯದ ನಿಪ್ಪಾಣಿ, ಕಾಗವಾಡ, ಹುಕ್ಕೇರಿ, ಚಿಕ್ಕೋಡಿ, ಅಥಣಿ ಭಾಗದ ಅಸಂಖ್ಯಾತ ಭಕ್ತರು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಿದ್ದು ನಾಂದಣಿ ಮಠಕ್ಕೆ ಆನೆ ಮರಳಿಸುವಂತೆ ಆಗ್ರಹಿಸುತ್ತಿದ್ದಾರೆ.

*

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಾಂದಣಿ ಮಠದ ಆನೆ ಮಹಾದೇವಿಯನ್ನು ದೂರ ಮಾಡಿದ್ದು ನಮಗೆ ನೋವು ತರಿಸಿದೆ. ಸುಮಾರು 743 ಗ್ರಾಮಗಳ ಭಕ್ತರಿಗೆ ಇದೊಂದು ಕರಾಳ ನೆನಪು. ಮಹಾದೇವಿ ಮರಳಿ ಮಠಕ್ಕೆ ಪಡೆಯುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ.

- ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸಂಸ್ಥಾನಮಠ ನಾಂದಣಿ

ಕಳೆದ ಮೂರು ದಶಕಗಳಿಂದ ನಾಂದಣಿ ಮಠದಲ್ಲಿದ್ದ ಆನೆ ಆರೋಗ್ಯದಿಂದ ಇತ್ತು. ಮಠದ ಶ್ರೀಗಳು ಹಾಗೂ ಭಕ್ತರ ಪ್ರೀತಿಗೆ ಪಾತ್ರವಾದ ಆನೆಯನ್ನು ದೂರ ಮಾಡಿದ್ದು ಅಸಂಖ್ಯಾತ ಭಕ್ತರ ಬಾವನೆಗೆ ನೋವು ತರಿಸಿದೆ. ಕೂಡಲೇ ಆನೆಯನ್ನು ನಾಂದಣಿ ಮಠಕ್ಕೆ ಮರಳಿಸುವ ಕೆಲಸವಾಗಬೇಕು. ಇಲ್ಲವಾದರೆ ಸಮುದಾಯದ ಜನರ ಹೋರಾಟ ಮುಂದುವರಿಯಲಿದೆ.

-ಅರುಣ ಯಲಗುದ್ರಿ ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕ

ನಾಂದಣಿ ಮಠದ ಸಂಪ್ರದಾಯ ಹಾಗೂ ಸ್ಥಳೀಯ ಭಕ್ತರ ಭಾವನಾತ್ಮಕ ವಿಚಾರಕ್ಕೆ ನಾವು ಬೆಲೆ ನೀಡುತ್ತೇವೆ. ಮಹಾದೇವಿ ಆನೆಯನ್ನು ಮರಳಿ ಮಠಕ್ಕೆ ತರುವ ನಿಟ್ಟಿನಲ್ಲಿ ಕಾನೂನು ಹೋರಾಟ ಮಾಡಲಾಗುತ್ತದೆ.

-ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ