ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surendra Pai Column: ಇಗ್‌ ನೊಬೆಲ್‌ ಪ್ರಶಸ್ತಿ ತಮಾಷೆಯಾದರೂ ವಿಜ್ಞಾನ !

ನೆಲದ ಮೇಲೆ ಬಿದ್ದ ಆಹಾರವನ್ನು ಐದು ಸೆಕೆಂಡುಗಳೊಳಗೆ ತೆಗೆದುಕೊಂಡರೆ ಅದು ಕಲುಷಿತ ವಾಗುವು ದಿಲ್ಲ ಎಂಬ ವೈಜ್ಞಾನಿಕ ಲೋಕದಲ್ಲಿನ ಅಪರೂಪದ ವಿಷಯದ ಕುರಿತಾಗಿ ತಮಾಷೆಯ ಆವಿಷ್ಕಾರ ಮಾಡಿದ್ದೀರಾ? ಹಾಗಾದರೆ ನೀವು ಇಗ್ ನೊಬೆಲ್ ಪ್ರಶಸ್ತಿಗೆ ಪ್ರಯತ್ನಿಸಬಹುದು.

ಸುರೇಂದ್ರ ಪೈ, ಭಟ್ಕಳ

ವಿಚಿತ್ರಾತಿ ವಿಚಿತ್ರ ಶೋಧಗಳಿಗೆ ಇಲ್ಲಿ ಆದ್ಯತೆ, ಪ್ರಶಸ್ತಿ ಪಡೆಯುವಾಗ ಜಾಸ್ತಿ ಮಾತಾಡಿದ್ರೆ ಸ್ವೀಟಿ ಮಗು ಅಳುತ್ತೆ!

ನೊಬೆಲ್ ವಿಜೇತರಿಂದ ಇಗ್ ನೊಬೆಲ್ ಪ್ರದಾನ | ನೊಬೆಲ್, ಇಗ್ ನೊಬೆಲ್ ಪಡೆದ ಏಕೈಕ ವ್ಯಕ್ತಿ ಆಂಡ್ರೆ ಗೀಮ್!

ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಜೀವಮಾನದಲ್ಲಿ ಒಮ್ಮೆ ಪ್ರಶಸ್ತಿ ಗೆಲ್ಲಬೇಕೆಂಬ ಕನಸು ಇದ್ದೇ ಇರುತ್ತದೆ. ಅದರಲ್ಲೂ ವಿಶ್ವದ ಶ್ರೇಷ್ಠ ಪ್ರಶಸ್ತಿ ಎಂದು ಪರಿಗಣಿಸಲ್ಪಡುವ ನೊಬೆಲ್ ಅನ್ನು ಪಡೆದು ಕೊಳ್ಳಬೇಕೆಂಬ ಮಹದಾಸೆ ಯಾರಿಗಿಲ್ಲ ಹೇಳಿ? ಇತ್ತೀಚೇಗೆ ನಮ್ಮ ಟ್ರಂಪಣ್ಣ ಕೂಡ ಭಾರತ ಹಾಗೂ ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ತನಗೆ ಶಾಂತಿ ನೊಬೆಲ್ ನೀಡಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ಆದರೆ ವಿಜ್ಞಾನ ಲೋಕದಲ್ಲಿ ನೊಬೆಲ್ ಸಿಕ್ಕಿ ಎಂದು ಬೇಸರಿಸಿಕೊಳ್ಳಬೇಕಿಲ್ಲ.

ನೀವೇನಾದರೂ ನಾಯಿಗಳು ಮಲವಿಸರ್ಜನೆ ಮಾಡು ವಾಗ ಯಾವ ದಿಕ್ಕಿನಲ್ಲಿ ನಿಲ್ಲುತ್ತವೆ, ನಾಣ್ಯವನ್ನು ಮೇಲೆ ಟಾಸ್ ಮಾಡಿದಾಗ ಅದು ಯಾವ ಕಡೆ ಅದು ಹೆಚ್ಚಾಗಿ ಬೀಳುತ್ತದೆ. ನೆಲದ ಮೇಲೆ ಬಿದ್ದ ಆಹಾರವನ್ನು ಐದು ಸೆಕೆಂಡುಗಳೊಳಗೆ ತೆಗೆದುಕೊಂಡರೆ ಅದು ಕಲುಷಿತವಾಗುವು ದಿಲ್ಲ ಎಂಬ ವೈಜ್ಞಾನಿಕ ಲೋಕದಲ್ಲಿನ ಅಪರೂಪದ ವಿಷಯದ ಕುರಿತಾಗಿ ತಮಾಷೆಯ ಆವಿಷ್ಕಾರ ಮಾಡಿದ್ದೀರಾ? ಹಾಗಾದರೆ ನೀವು ಇಗ್ ನೊಬೆಲ್ ಪ್ರಶಸ್ತಿಗೆ ಪ್ರಯತ್ನಿಸಬಹುದು.

ಮೊನ್ನೆ ಸೆ.18ಕ್ಕೆ ಇಗ್ ನೊಬೆಲ್ ನೀಡಲಾಯಿತು. ಇದರ ಬಗ್ಗೆ ಯೋಚಿಸುತ್ತಿದ್ದೀರಾ? ‘ವಿಜ್ಞಾನ ಕ್ಷೇತ್ರದ ಮೂರ್ಖ/ವಿಡಂಬನಾ ತ್ಮಕ ಪ್ರಶಸ್ತಿ’ ಎಂದೇ ಖ್ಯಾತಿ ಹೊಂದಿರುವ ‘ಇಗ್ ನೊಬೆಲ್’ ಬಗ್ಗೆ ಒಂದು ನೋಟ ನಿಮಗಾಗಿ...

ಇದನ್ನೂ ಓದಿ: Surendra Pai Column: ನಮ್ಮೆಲ್ಲರ ಮನೆಯೊಳಗಿರುವ ಟಿಕ್‌ ಟಿಕ್‌ ಟೈಮ್‌ ಬಾಂಬ್‌ !

ಏನಿದು ಇಗ್ ನೊಬೆಲ್? ಇಗ್ ನೊಬೆಲ್ ಪ್ರಶಸ್ತಿ ( Ig Nobel Prize) ಎನ್ನುವುದು ವೈಜ್ಞಾನಿಕ ಸಂಶೋಧನೆಯಲ್ಲಿ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು, ಮೊದಲು ನಗಿಸುವ, ನಂತರ ಚಿಂತನೆಗೆ ಹಚ್ಚುವ ಸಂಶೋಧನೆಗಳನ್ನು ಗುರುತಿಸಿ ನೀಡಲಾಗುವ ಒಂದು ವಿಡಂಬನಾತ್ಮಕ ಬಹುಮಾನ.

ಸ್ಥಾಪಕರು ಇವರೇ ನೋಡಿ

ಇಗ್ ನೊಬೆಲ್‌ಗಳನ್ನು 1991ರಲ್ಲಿ ಜರ್ನಲ್ ಆಫ್‌ ಇರ್ಪ್ರೊಡ್ಯೂಸಿಬಲ್ ರಿಸಲ್ಟ್ಸ್‌ನ ಪ್ರಧಾನ ಸಂಪಾದಕ ಮತ್ತು ಆನಲ್ಸ್‌ ಆಫ್ ಇಂಪ್ರೂವೇಬಲ್ ರೀಸರ್ಚ್‌ನ ಸಹ-ಸಂಸ್ಥಾಪಕ ಮಾರ್ಕ್ ಅಬ್ರಹಾಮ್ಸ್ ಸ್ಥಾಪಿಸಿದರು.

ಪ್ರಶಸ್ತಿ ನೀಡುವುದೆಲ್ಲಿ?

ಪ್ರತಿ ವರ್ಷ, ಇಗ್ ನೊಬೆಲ್ ಪ್ರಶಸ್ತಿ ಕಾರ್ಯಕ್ರಮವನ್ನು ಅಮೆರಿಕದ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ‌ ನಡೆಸಲಾಗುತ್ತದೆ. ಅಲ್ಲಿ ನಿಜವಾದ ನೊಬೆಲ್ ಪ್ರಶಸ್ತಿ ವಿಜೇತರು ಬಹುಮಾನಗಳನ್ನು ಪ್ರದಾನ ಮಾಡುತ್ತಾರೆ.

ಪ್ರಾಯೋಜಕರು ಯಾರು?

ಈ ಸಮಾರಂಭವನ್ನು ಹಾರ್ವರ್ಡ್ ಕಂಪ್ಯೂಟರ್ ಸೊಸೈಟಿ, ಹಾರ್ವರ್ಡ್ -ರಾಡ್ಕ್ಲಿಫ್- ಸೈನ್ಸ್ ಫಿಕ್ಷನ್‌ ಅಸೋಸಿಯೇಷನ್ ಮತ್ತು ಸೊಸೈಟಿ ಆಫ್ ಫಿಸಿಕ್ಸ್ ಸ್ಟೂಡೆಂಟ್ಸ್ ಸಹ ಪ್ರಾಯೋಜಿಸುತ್ತವೆ.

ಇವು ವಿಶೇಷತೆಗಳು

ಈ ಪ್ರಶಸ್ತಿ ಪ್ರದಾನ ಸಮಾರಂಭವು ಚಿಕಣಿ ಒಪೆರಾ‌ಗಳು, ವೈಜ್ಞಾನಿಕ ಪ್ರದರ್ಶನಗಳು ಮತ್ತು 24/7 ಉಪನ್ಯಾಸಗಳನ್ನು ಒಳಗೊಂಡಿದೆ. ಇದರಲ್ಲಿ ತಜ್ಞರು ತಮ್ಮ ಕೆಲಸವನ್ನು ಎರಡು ಬಾರಿ ವಿವರಿಸ ಬೇಕು. 24 ಸೆಕೆಂಡು ಗಳಲ್ಲಿ ಒಮ್ಮೆ ಮತ್ತು ಎರಡನೆಯದು ಕೇವಲ ಏಳು ಪದಗಳಲ್ಲಿ. ಸ್ವೀಕಾರ ಭಾಷಣಗಳು 60 ಸೆಕೆಂಡುಗಳಿಗೆ ಸೀಮಿತವಾಗಿರುತ್ತವೆ. ಯಾರಾದರೂ ಹೆಚ್ಚು ಹೊತ್ತು ಮಾತನಾಡಿ ದರೆ, ‘ಮಿಸ್ ಸ್ವೀಟಿ ಪೂ’ ಎಂಬ ಪುಟ್ಟ ಹುಡುಗಿ ನನಗೆ ಬೇಸರವಾಗುತ್ತಿದೆ ಎಂದು ಹೇಳುತ್ತಾಳೆ. ಈ ಮೂಲಕ ಆ ಹುಡುಗಿ ಸಮಯ ಉಳಿತಾಯ ಮಾಡಿಸುವಲ್ಲಿ, ಭಾಷಣಕಾರರು ತಮ್ಮ ಭಾಷಣ ಗಳನ್ನು ಸಂಕ್ಷಿಪ್ತವಾಗಿ ಮತ್ತು ಸ್ವಾರಸ್ಯಕರವಾಗಿ ಮುಗಿಸುವಂತೆ ಸಹಾಯ ಮಾಡುತ್ತಾಳೆ.

ಬಹುಮಾನದ ಮೊತ್ತ ಎಷ್ಟು?

ಪ್ರಶಸ್ತಿ ವಿಜೇತರು ಜಿಂಬಾಬ್ವೆಯ 10 ಟ್ರಿಲಿಯನ್ ಡಾಲರ್ ನೋಟನ್ನು ಬಹುಮಾನವಾಗಿ ಪಡೆಯು ತ್ತಾರೆ. ಇದು ಕೇವಲ ನಾಮ್‌ಕೇವಾಸ್ತೆ ಮೊತ್ತ ಬಿಟ್ಟರೆ, ಇದಕ್ಕೆ ಯಾವ ಮೌಲ್ಯವೂ ಇಲ್ಲ. ಸಂಗ್ರಹ ಕ್ಕಷ್ಟೇ ಯೋಗ್ಯ.

ವಾಜಪೇಯಿ, ಮೋದಿಗೂ ಇಗ್ ನೊಬೆಲ್!

ಪರಮಾಣು ಪರೀಕ್ಷೆಯನ್ನು ಶಾಂತಿಯುತವಾಗಿ ನಡೆಸಿದ್ದಕ್ಕಾಗಿ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (ಶಾಂತಿ, 1998)ಗೆ ಪ್ರಶಸ್ತಿ ನೀಡಲಾಗಿದೆ. ಇವರು ಇಗ್ ನೊಬೆಲ್ ಗೆದ್ದ ಭಾರತದ ಮೊದಲ ಪ್ರಧಾನಿ. ವೈದ್ಯಕೀಯ ಶಿಕ್ಷಣಕ್ಕೆ ನೀಡಿದ ಕೊಡುಗೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2020ರ ಇಗ್ ನೊಬೆಲ್ ಪ್ರಶಸ್ತಿ ಯನ್ನು ನೀಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ಮೋದಿ ಜನರಲ್ಲಿ ಅರಿವು ಮೂಡಿಸಲು ಪ್ರಮುಖ ಪಾತ್ರ ವಹಿಸಿದ ಹಿನ್ನೆಲೆ ಯಲ್ಲಿ ಈ ಗೌರವ ಸಂದಿದೆ.

ಇವರು ಇಗ್ ನೊಬೆಲ್ ಪಡೆದ ಎರಡನೇ ಭಾರತದ ಪ್ರಧಾನಿ. ಹದಿಹರೆಯದವರು ಹೆಚ್ಚಾಗಿ ಮೂಗಿನೊಳಗೆ ಬೆರಳು ಇಟ್ಟುಕೊಳ್ಳುತ್ತಾರೆ ಎಂದು ಕಂಡುಕೊಂಡಿದ್ದಕ್ಕಾಗಿ ಚಿತ್ತರಂಜನ್ ಅಂದ್ರಾದೆ ಮತ್ತು ಬಿ.ಎಸ್.ಶ್ರೀಹರಿ (ಸಾರ್ವಜನಿಕ ಆರೋಗ್ಯ, 2001), ಆನೆಗಳ ಮೇಲ್ಮೈ ವಿಸ್ತೀರ್ಣ ವನ್ನು ಅಂದಾಜು ಮಾಡಿದ್ದಕ್ಕಾಗಿ ಕೆ.ಪಿ. ಶ್ರೀಕುಮಾರ್ ಮತ್ತು ಜಿ.ನಿರ್ಮಲನ್ (ಗಣಿತ, 2002) ಮತ್ತು ಸತ್ತ ಜನರ ಸಂಘವನ್ನು ರಚಿಸಿದ್ದಕ್ಕಾಗಿ ಲಾಲ್ ಬಿಹಾರಿ (ಶಾಂತಿ, 2003) ಪ್ರಶಸ್ತಿ ಪಡೆದ ಭಾರತೀಯ ರಾಗಿದ್ದಾರೆ.

ಶೂ ವಾಸನೆ ತಡೆವ ರ‍್ಯಾಕ್‌ಗೆ ಪ್ರಶಸ್ತಿ

ಉತ್ತರಪ್ರದೇಶದ ಶಿವ ನಾಡಾರ್ ವಿಶ್ವವಿದ್ಯಾಲಯದಲ್ಲಿ, ಸಹಾಯಕ ಪ್ರಾಧ್ಯಾಪಕ ವಿಕಾಸ್ ಕುಮಾರ್ ಮತ್ತು ಅವರ ವಿದ್ಯಾರ್ಥಿ ಸಾರ್ಥಕ್ ಮಿತ್ತಲ್, ‌ ಹುಡುಗರು ತಮ್ಮ ಹಾಸ್ಟೆಲ್ ಕೊಠಡಿಗಳ ಹೊರಗೆ ಶೂಗಳನ್ನು ರಾಶಿ ಹಾಕಿರುವುದನ್ನು ಗಮನಿಸಿದರು.

ಕಾರಣ ಸ್ಥಳಾವಕಾಶದ ಕೊರತೆಯಲ್ಲ, ಬದಲಾಗಿ ಕೆಟ್ಟ ವಾಸನೆ. ಶೂಗಳ ಒಳಗೆ ಗಾಳಿ ಆಡದಿದ್ದರೆ ಅಥವಾ ಸಮಯಕ್ಕೆ ಸರಿಯಾಗಿ ತೊಳೆಯದಿದ್ದರೆ, ಕೈಟೊ ಕೊಕಸ್ ಸೆಡೆಂಟೇರಿಯಸ್ ಎಂಬ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇದು ಭಯಾನಕ ವಾಸನೆಯನ್ನು ಉಂಟು ಮಾಡುತ್ತದೆ.

ವಿಕಾಸ್ ಮತ್ತು ಸಾರ್ಥಕ್ 149 ವಿದ್ಯಾರ್ಥಿಗಳ ಶೂಗಳನ್ನು ಅಧ್ಯಯನ ಮಾಡಿದರು. ಇದರಿಂದ ಅವರಿಗೆ ವಾಸನೆ ನಿರೋಧಕ ಶೂ ರ‍್ಯಾಕ್ ತಯಾರಿಸುವ ಕಲ್ಪನೆ ಬಂದಿತು. ಅವರು ಬ್ಯಾಕ್ಟೀರಿಯಾ ವನ್ನು ಕೊಲ್ಲುವ ಯುವಿ ಬೆಳಕಿನಿಂದ ಶೂ ರ‍್ಯಾಕ್‌ಗಳನ್ನು ವಿನ್ಯಾಸ ಗೊಳಿಸಿದರು. ಫಲಿತಾಂಶ - ವಾಸನೆ ಕೇವಲ 2-2 ನಿಮಿಷಗಳಲ್ಲಿ ಕಣ್ಮರೆಯಾಯಿತು. ಈ ಪ್ರಯೋಗವು 2025ರ ಇಗ್ ನೊಬೆಲ್ ಅನ್ನು ಗೆದ್ದುಕೊಂಡಿತು.

ಇಗ್ ನೊಬೆಲ್ ಪಡೆದ ತಮಾಷೆಯ ಆವಿಷ್ಕಾರಗಳು

(ನೀವು ಇದನ್ನು ಓದುವಾಗ ಆಶ್ಚರ್ಯ ದೊಂದಿಗೆ ‘ಹೋ! ಹೀಗೂ ಉಂಟೇ!’ ಎಂದು ನಗುವಿರಿ)

1 ಪ್ರಪಂಚದಲ್ಲಿರುವ ಎಲ್ಲ ಪ್ರಾಣಿಗಳ ಮೂತ್ರ ವಿಸರ್ಜನೆಯ ಸರಾಸರಿ ಅವಧಿಯನ್ನು ಶೋಧಿಸಿದ ಸಂಶೋಧನೆಗೂ ಇಗ್ ನೊಬೆಲ್ ಪ್ರಶಸ್ತಿ ಲಭಿಸಿದೆ. ಎಲ್ಲ ಜೀವಿಗಳ ಸರಾಸರಿ ಮೂತ್ರ ವಿಸರ್ಜನಾ ಅವಧಿ ಕೇವಲ 21 ಸೆಕೆಂಡುಗಳಾಗಿದ್ದು, ಆನೆ ಯಾಗಲಿ ಮಗುವಾಗಲಿ ಅದಕ್ಕಿಂತ ಬೇಗ ಮುಗಿಸ ಲಾಗುವುದಿಲ್ಲ ಎಂದು ಪ್ರತಿಪಾದಿಸಿರುವ ವಿಜ್ಞಾನಿ ಗಳಿಗೆ ಜೀವಶಾಸ್ತ್ರದ ಇಗ್ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

೨. ಜರ್ಮನಿ ಮತ್ತು ಆಸ್ಟ್ರಿಯಾದ ಗಣಿತಜ್ಞರು ಪ್ರಶಸ್ತಿ ಗಿಟ್ಟಿಸಿದ್ದಾರೆ. 1672ರಲ್ಲಿ ಹುಟ್ಟಿ 55 ವರ್ಷ ಬಾಳಿದ 17ನೇ ಶತಮಾನದ ಮೊರಾಕ್ಕೊ ಸಾಮ್ರಾಟ ದೈಹಿಕವಾಗಿ ಪ್ರತಿ ದಿನ 2 ಬಾರಿ ಸೆಕ್ಸ್ ನಡೆಸಿದ್ದಲ್ಲಿ 600 ಮಕ್ಕಳಿಗೆ ಜನ್ಮ ನೀಡಬತ ನಾಗಿದ್ದನೆಂದು ಸಂಶೋ ಧನೆ ನಡೆಸಿದ್ದಕ್ಕೂ ಪ್ರಶಸ್ತಿ ಲಭಿಸಿದೆ.

3 ಹುಹ್ ( Huh ?) ಎಂಬ ಇಂಗ್ಲಿಷ್ ಉದ್ಗಾರ ಕಂಡುಹಿಡಿದ ಮೂವರು ಸಂಶೋಧಕರಿಗೆ ಸಾಹಿತ್ಯ ಇಗ್ ನೊಬೆಲ್ ನೀಡಲಾಗಿದೆ

೪ ಭೂಕಂಪ, ಸುನಾಮಿ ಮುಂತಾದ ನೈಸರ್ಗಿಕ ವಿಕೋಪದಲ್ಲಿ ಬದುಕುಳಿವ ಮಕ್ಕಳು ಭವಿಷ್ಯದಲ್ಲಿ ಭಾರಿ ಉದ್ಯಮಿಗಳಾಗುತ್ತಾರೆಂದು ಕಂಡುಹಿಡಿದ ಸಂಶೋಧಕರಿಗೆ ಮ್ಯಾನೇಜ್ಮೆಂಟ್ ಇಗ್ ನೊಬೆಲ್ ಸಿಕ್ಕಿದೆ.

೫ ಕೋಕಾಕೋಲವನ್ನು ವೀರ್ಯನಾಶಕ್ಕೆ ಬಳಸಬಹುದೆಂಬ ಪ್ರಯೋಗವೂ ಪ್ರಶಸ್ತಿ ಗಿಟ್ಟಿಸಿಕೊಂಡದ್ದಿದೆ.

೬ ನೂರಾರು ಬಾರಿ ಜೇನ್ನೊಣದಿಂದ (೩೮ ದಿನ ದೇಹದ ೨೫ ಭಾಗಕ್ಕೆ) ದೇಹದ ಸೂಕ್ಷ್ಮ ಭಾಗಗಳಿಗೆ ಕಚ್ಚಿಸಿಕೊಂಡು ಜೇನ್ನೊಣದ ಕೊಂಡಿಗಳು ಯಾವ ಪರಿ ನೋವು ನೀಡುತ್ತವೆಂದು ಸಂಶೋಧಿಸಿದ ಕೀಟಶಾಸಜ್ಞ ಜಸ್ಟಿನ್ ಶಿಮಿಟ್, ಕಾರ್ನೆಲ್ ಮತ್ತು ಮೈಕೆಲ್ ಸ್ಮಿತ್ ಒಬ್ಬರ ಮೇಲೊಬ್ಬರು ಪ್ರಯೋಗ ನಡೆಸಿಕೊಂಡು ನೀಡಿದ ವರದಿಗೆ ಗೌರವ ದಕ್ಕಿದೆ.

೭ ಕಪ್ಪೆಯನ್ನು ಮೇಲಕ್ಕೆತ್ತಲು ಆಯಸ್ಕಾಂತಗಳನ್ನು ಬಳಸಿದ್ದಕ್ಕಾಗಿ ಭೌತಶಾಸ್ತ್ರ ಇಗ್ ನೊಬೆಲ್ ಪ್ರಶಸ್ತಿಯನ್ನು ಆಂಡ್ರೆ ಗೀಮ್ ಪಡೆದಿದ್ದರು.

೮ ಹಸುಗಳಿಗೆ ಜೀಬ್ರಾ ತರಹದ ಪಟ್ಟೆಗಳನ್ನು ಚಿತ್ರಿಸುವ ಮೂಲಕ ವಿಜ್ಞಾನಿಗಳು ಸಾಕು ಪ್ರಾಣಿಗಳಿಗೆ ಸೊಳ್ಳೆಗಳು ಮತ್ತು ಕೀಟಗಳು ಕಡಿಮೆ ತೊಂದರೆ ನೀಡುತ್ತವೆ ಎಂಬುದನ್ನು ಸಂಶೋಧಿಸಿದಕ್ಕೆ ಜೀವ ಶಾಸ್ತ್ರದ ವಿಭಾಗದಲ್ಲಿ ಇಗ್ ನೊಬೆಲ್ ಲಭಿಸಿದೆ.

೯ ರಷ್ಯಾದ ವಿಜ್ಞಾನಿ ಆಂಡ್ರೆ ಗೀಮ್ 2000ರಲ್ಲಿ ಇಗ್ ನೊಬೆಲ್ ಮತ್ತು 2010ರಲ್ಲಿ ನಿಜವಾದ ನೊಬೆಲ್ ಎರಡನ್ನು ಪಡೆದ ಏಕೈಕ ವ್ಯಕ್ತಿ.