ಬಿಹಾರದಲ್ಲಿ ಮಾಂಜಿಗಳ (ಮುಸಹರ) ಬದುಕು ಎಷ್ಟೊಂದು ಶೋಚನೀಯವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಮುಸಹರ ಟೋಲಿಗಳಿಗೆ (ಸಣ್ಣಸಣ್ಣ ಹಳ್ಳಿಗಳು) ಭೇಟಿ ನೀಡಬೇಕು. ಪರಿಶಿಷ್ಟ ಜಾತಿ ವ್ಯಾಪ್ತಿಯ ಮಾಂಜಿಗಳನ್ನು "ಇಲಿ ತಿಂದು ಬದುಕುವವರು" ಎಂದೇ ಗುರುತಿಸಲಾಗಿದೆ. ಬಿಹಾರದ ಅನೇಕ ಕಡೆ ಮುಸಹರರಿದ್ದಾರೆ. ವಿದೇಶದ ಹಲವು ಸಂಶೋಧಕರು ಈ ಇಲಿ ತಿನ್ನುವ ಮಾನವರನ್ನು ಹುಡುಕಿಕೊಂಡು ಬಂದಿದ್ದುಂಟು. ಸರ್ಕಾರಗಳು ಅಭಿವೃದ್ಧಿಯಿಂದ ಅತಿ ದೂರವಿಟ್ಟದ್ದರಿಂದ ಪ್ರಗತಿಯ ಬೆಳಕನ್ನೇ ಕಾಣದೆ, ನತದೃಷ್ಟ ಬದುಕು ಸಾಗಿಸುತ್ತಿದ್ದಾರೆ ಈ ಮಾಂಜಿಗಳು. ಪಾಳು ಬಿದ್ದ ಮನೆಗಳು, ದುಃಖ, ವೇದನೆ, ಹತಾಶೆ, ನಿರುದ್ಯೋಗ, ಶೋಷಣೆಯಿಂದ ಜರ್ಝರಿತರಾಗಿರುವ ಇಲ್ಲಿನ ಮುಸಹರ ರಿಗೆ ಭವಿಷ್ಯವೂ ಕತ್ತಲೆ ಎನಿಸಿದೆ.
ಭೋಜ್‌ಪುರ ಜಿಲ್ಲೆಯಿಂದ ಪಟ್ನಾಕ್ಕೆ ಬರುವಾಗ ಮನೇರ್ ವಿಧಾನಸಭೆ ವ್ಯಾಪ್ತಿಯ ಅಹಿಯಾಪುರ ಮಾಂಜಿ ಟೋಲಿಗೆ ನಾನು ಭೇಟಿ ನೀಡಿದೆ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಈ ಟೋಲಿ ಯಲ್ಲಿ ಮಾಂಜಿಗಳ ಪಾಡನ್ನು ಕೇಳುವವರಿಲ್ಲ. ವಿವಿಧ ತಲೆಮಾರುಗಳು ಇಲ್ಲಿ ಕಷ್ಟದಿಂದ ಜೀವಿಸಿ ಹೋದರೂ, ಸರ್ಕಾರ, ಸ್ಥಳೀಯಾಡಳಿತಗಳು ಮಾತ್ರ ಈ ಶಾಪಗ್ರಸ್ಥರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನೆಮ್ಮದಿಯಿಂದ ಬದುಕಲು ಸೂರು ಕಟ್ಟಿಕೊಡಲಿಲ್ಲ ಎನ್ನುವುದು ಇವರ ಬಹುದೊಡ್ಡ ಗೋಳು. ಇಟ್ಟಿಗೆಗಳಲ್ಲಿ ಕಟ್ಟಿದ ಮನೆಗಳೆಲ್ಲವೂ ಇಂದೋ-ನಾಳೆಯೋ ಎಂಬಂತಿವೆ. ಮಳೆ ಬಂದರಂತೂ ಕೇಳುವುದೇ ಬೇಡ. ಓಣಿಗಳಲ್ಲಿ ನೀರು ತುಂಬಿ ಮನೆಯೊಳಗೆ ನುಗ್ಗಿಬಿಡುತ್ತವೆ. ನಂತರ ಅಲ್ಲಿ ಜೀವಿಸುವವರದ್ದು ನಾಯಿಪಾಡು.
    
ಅಹಿಯಾಪುರ ಟೋಲಿಯಲ್ಲಿ ಸುಮಾರು 1400 ಮತದಾರರಿದ್ದಾರೆ. ಎನ್ಡಿಎ ಮೈತ್ರಿಕೂಟ, ಇಂಡಿ ಒಕ್ಕೂಟ, ಜನ ಸುರಾಜ್ ಪಾರ್ಟಿ ಸೇರಿ ಯಾವ ಪಕ್ಷದವರೂ ಈವರೆಗೆ ಇಲ್ಲಿ ಮತ ಕೇಳಲು ಬಂದಿಲ್ಲ. ಮತ ಕೇಳಲು ಬರುವ, ನಮ್ಮ ಸಮಸ್ಯೆಗಳನ್ನು ಆಲಿಸುವ ಮಂದಿಗೆ ಮತ ಹಾಕುತ್ತೇವೆ ಎಂದು ನಿವಾಸಿಗರು ವಿಶ್ವವಾಣಿ ಜತೆ ಮಾತನಾಡಿದರು. ಅಷ್ಟಕ್ಕೂ, ಮತ ಹಾಕಿ ಏನು ಪ್ರಯೋಜನ ಹೇಳಿ? ನಮ್ಮ ಜೀವನ ಹೀಗೆ ಇರುತ್ತದಲ್ಲ ಎನ್ನುತ್ತಾರೆ ಅವರು.
"ಗಟ್ಟಿ ಮೇಲ್ಛಾವಣಿ, ಕಿಟಕಿ, ಸರಿಯಾದ ಬಾಗಿಲುಗಳಿಲ್ಲದ ನಿಕೃಷ್ಟ ಸ್ಥಿತಿಯಲ್ಲಿರುವ ಮನೆಗಳಲ್ಲಿ ತಲೆಮಾರುಗಳಿಂದ ಬದುಕುತ್ತಿದ್ದೀರಿ. ನೀವು ಸರ್ಕಾರಗಳಿಗೆ ಮನೆ ಕಟ್ಟಿ ಕೊಡಿ ಎಂದು ಮನವಿ ನೀಡಿಲ್ಲವೇ? ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿಲ್ಲವೇ" ಎಂದು ನಾವು ಕೇಳಿದ್ದಕ್ಕೆ, "ಅರ್ಜಿಗಳನ್ನು ಕೊಟ್ಟಿದ್ದೇವೆ ಸರ್. ಆದರೆ ನಮ್ಮ ಗ್ರಾಮ ಮುಖಿಯಾ ಅವರ ಕೆಲಸ ದಲ್ಲೇ ಬ್ಯುಸಿ ಇರುತ್ತಾರೆ. ನಮಗೆ ಯಾರೂ ಮನೆ ಕಟ್ಟಿಕೊಡಲಿಲ್ಲ. ನೀವೇ ನೋಡಿ, ಈ ಮನೆಗಳಲ್ಲಿ ಬದುಕಲು ಸಾಧ್ಯ ಉಂಟೇ" ಎಂದು ಗದ್ಗದಿತ ದನಿಯಲ್ಲಿ ಹೇಳಿದರು ಚನರ್ ದೇವ್ ಮಾಂಜಿ.
ಇದನ್ನೂ ಓದಿ:Bihar Election ground report by Raghav Sharma Nidle: ಎನ್‌ಡಿಎನಲ್ಲೂ ಇದ್ದಾರೆ ಜಂಗಲ್ ರಾಜ್ ರೂವಾರಿಗಳು
ಬಿಹಾರದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆ ಬಿದ್ದ ಪರಿಣಾಮ ಇಲ್ಲಿನ ಓಣಿಗಳು ಕೆಸರುಮಯ ವಾಗಿವೆ. ಈ ಕೆಸರನ್ನು ತುಳಿದುಕೊಂಡೇ ಮನೆಗಳಿಗೆ ಹೋಗಬೇಕು. ಚಮಾರ್ ಮಾಂಜಿ ಎಂಬವರ ಮನೆ ಒಳಗಿನ ಅಡುಗೆ ಕೋಣೆಯ ಒಂದು ಬದಿಯಲ್ಲಿ ಇಟ್ಟಿಗೆ ಕಡಿಮೆಯಾಗಿ ಗೋಡೆ ತೆರೆದು ಕೊಂಡಿರುವ ಸ್ಥಿತಿಯಲ್ಲಿದೆ. ಇದರಿಂದಾಗಿ, ಮಳೆ ನೀರು ನೇರವಾಗಿ ಮನೆ ಒಳಗೇ ಬೀಳುತ್ತದೆ. ಅಲ್ಲಿ ಮಳೆ ನೀರು ಬಿದ್ದು ಕೆಸರು ತುಂಬಿದ್ದು, ಇನ್ನೂ ಒಣಗಿಲ್ಲ. ಹೀಗಾಗಿ, ಅಲ್ಲಿ ಕಾಲಿಡಲೇ ಸಾಧ್ಯವಿಲ್ಲ.
ಕೆಲ ಹಳೆ ತಲೆಮಾರಿನವರ 2-3 ಮಕ್ಕಳು ಮದುವೆಯಾಗಿ ನಂತರ ಮೊಮ್ಮಕ್ಕಳೂ ಸೇರಿಕೊಳ್ಳುವು ದರಿಂದ ಸಣ್ಣ ಸಣ್ಣ ಜೋಪಡಿಗಳಲ್ಲಿ ಬದುಕಲೇ ಇಕ್ಕಟ್ಟಿನ ಸ್ಥಿತಿ ಇದೆ.
ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷದ ಹಿಂದುಸ್ತಾನಿ ಅವಾಮಿ ಮೋರ್ಚಾದ ನಾಯಕ ಜೀತನ್ ರಾಮ್ ಮಾಂಜಿ ಇದೇ ಮಾಂಜಿ ಸಮುದಾಯದ ಅತಿದೊಡ್ಡ ನಾಯಕ. ೨೦೧೪ರಲ್ಲಿ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ಮುಖ್ಯಮಂತ್ರಿಯನ್ನಾಗಿ ಜೀತನ್ ರಾಮ್ ಮಾಂಜಿಯವನ್ನು ಆಯ್ಕೆ ಮಾಡಿದ್ದರು. ಸದ್ಯ ಜೀತನ್ ಮಾಂಜಿ ಕೇಂದ್ರ ಸಚಿವರೂ ಆಗಿದ್ದಾರೆ. ಆದರೆ, ಬಿಹಾರದ ಮಾಂಜಿಗಳ ಬದುಕು ಮಾತ್ರ ಹಿಂದೆ ಹೇಗಿತ್ತೋ ಹಾಗೆಯೇ ಇದೆ ಎನ್ನುವುದಕ್ಕೆ ಅಹಿಯಾಪುರ ಮಾಂಜಿ ಟೋಲಿಯೇ ಸಾಕ್ಷಿ.
ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಪಕ್ಕದ ಸರ್ಕಾರಿ ಶಾಲೆಗೆ ಹೋಗುತ್ತಾರೆ. ಈ ಟೋಲಿಯಲ್ಲಿ ಪದವಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲ. ಹೀಗಾಗಿ, ಒಳ್ಳೆಯ ಉದ್ಯೋಗದಲ್ಲಿ ಇರುವ ಪ್ರಶ್ನೆಯೇ ಇಲ್ಲ. ಇಲ್ಲಿ ಮಾಂಜಿಗಳು ಜಮೀನು ಮಾಲೀಕರ ಕೃಷಿಯಲ್ಲಿ ಕೆಲಸ ಅಥವಾ ಇನ್ನಿತರ ದಿನಗೂಲಿ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. 2023ರ ಬಿಹಾರ ಸರ್ಕಾರದ ಜನಗಣತಿ ವರದಿ ಪ್ರಕಾರ ೧೩.೦೭ ಕೋಟಿ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಶೇ.19.65ರಷ್ಟಿದೆ. ಅದರಲ್ಲಿ ಮುಸಹರರ ಪಾಲು ಶೇ.೩.೦೮ ಎಂದು ದಾಖಲಾಗಿದೆ.
    
ಶೌಚಾಲಯವಿಲ್ಲ-ಯುವಕರು ಛೇಡಿಸುತ್ತಾರೆ!
ಒಂದೆಡೆ ಕೇಂದ್ರ ಸರ್ಕಾರ ದೇಶದೆಲ್ಲೆಡೆ ಬಡವರ ಮನೆಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಟ್ಟ ಬಗ್ಗೆ ಹೇಳುತ್ತದೆ. ರಾಜ್ಯ ಸರ್ಕಾರಗಳೂ ಈ ಬಗ್ಗೆ ಅಭಿಯಾನ ನಡೆಸುತ್ತವೆ. ಆದರೆ, ರಾಜಧಾನಿ ಪಟ್ನಾದಿಂದ ಕೇವಲ ೪೫ ಕಿಮೀ ದೂರದ ಮಾಂಜಿ ಸಮುದಾಯದ ಟೋಲಿಯ ಯಾರ ಮನೆ ಯಲ್ಲೂ ಶೌಚಾಲಯ ಕಾಣುವುದಿಲ್ಲ. ಇಲ್ಲಿ ನೀರು ಹರಿದು ಹೋಗಲೇ ಸೂಕ್ತ ವ್ಯವಸ್ಥೆ ಇಲ್ಲ. ಇನ್ನು ಶೌಚಾಲಯ ಹೇಗೆ ನಿರ್ಮಾಣ ಮಾಡುವುದು? ಹೀಗಾಗಿ, ನಾವು ಬಯಲು ಪ್ರದೇಶಕ್ಕೆ ಹೋಗುತ್ತೇವೆ. ಆದರೆ, ಅಲ್ಲೂ ಹುಡುಗರು, ಯುವಕರು ಬಂದು ನಮ್ಮನ್ನು ಛೇಡಿಸುತ್ತಾರೆ. ನಮಗೆ ನಾಚಿಕೆಯಾಗುತ್ತದೆ. ಕನಿಷ್ಠ ನೀರು ಹರಿದುಹೋಗಲು ವ್ಯವಸ್ಥೆಯಾದಲ್ಲಿ ಶೌಚಾಲಯ ನಾವೇ ನಿರ್ಮಿಸುತ್ತೇವೆ" ಎಂದರು ಜೂಲಿ ಕುಮಾರಿ. ಜೂಲಿ ಕುಮಾರಿ ಅವರ ಮನೆಯ ಇಟ್ಟಿಗೆ ಮೇಲ್ಛಾ ವಣಿ ಕುಸಿದು ಬಿದ್ದದ್ದರಿಂದ ಅದೇ ಗಲ್ಲಿಯ ಬೇರೊಬ್ಬರ ಮನೆಯಲ್ಲಿ ಬಾಡಿಗೆಗಿದ್ದಾರೆ. ಜೂಲಿಯಂತೆ ಅನೇಕರ ಮನೆ ಮೇಲ್ಚಾವಣಿ ಮನೆಗೆ ಕುಸಿದು ಬಿದ್ದಿರುವುದನ್ನು ಇಲ್ಲಿ ಕಾಣಬಹುದು.
    
ವಿಕಲಾಂಗನ ಗೋಳು
ಅಪಘಾತದಲ್ಲಿ ವರ್ಷಗಳ ಹಿಂದೆ ಕಾಲು ಕಳೆದುಕೊಂಡ ವೃದ್ಧ ಸುದರ್ಶನ್ ಮಾಂಜಿ ಮನೆ ಯಂತೂ ದೊಡ್ಡ ಮಳೆ ಬಂದರೆ ಕುಸಿದುಬೀಳಲಿದೆ. ಮನೆಗೆ ಬಾಗಿಲುಗಳಿಲ್ಲ. ಎತ್ತರದ ಗೋಡೆ ಗಳಲ್ಲ. ಮಣ್ಣು, ಇಟ್ಟಿಗೆಗಳು ಯಾವಾಗ ಬೇಕಾದರೂ ಉದುರಬಹುದು. ಮನೆ ಮೇಲೆ ಪ್ಲಾಸ್ಟಿಕ್ ಶೀಟು, ಕಟ್ಟಿಗೆಗಳನ್ನು ಹಾಕಿ ಮಳೆಯಿಂದ ರಕ್ಷಣೆ ಪಡೆದುಕೊಂಡರೂ, ಜೋರು ಮಳೆ ಬಂದರೆ, ಮನೆಯೊಳಗೆಲ್ಲಾ ರಸ್ತೆ ನೀರು ಹರಿದುಬರುತ್ತದೆ. ತನ್ನ ಕಷ್ಟ ಹೇಳಿಕೊಂಡರೂ ತನ್ನ ಜೀವನದಲ್ಲಿ ಪರಿವರ್ತನೆ ಆದೀತು ಎಂಬ ಭರವಸೆ ಆತನಲ್ಲಿ ಕಾಣಲಿಲ್ಲ.
    
೯೦ರ ದಶಕದಲ್ಲಿ ಲಾಲೂ ಕೊಟ್ಟಿದ್ದು
೯೦ರ ದಶಕದ ನಂತರ ಲಾಲು ಪ್ರಸಾದ್ ಯಾದವ್ ರಾಜ್ಯದ ಸಿಎಂ ಆದ ಮೇಲೆ ಇಟ್ಟಿಗೆಗಳ ಮನೆ ನಿರ್ಮಾಣಕ್ಕೆ ಹಣ ಕೊಟ್ಟರು. ಅವರಿಂದಾಗಿ ನಮಗೆ ಇಷ್ಟಾದರೂ ಇದೆ. ಮಳೆ ಬಂದು ಮನೆಗೆ ನೀರು ತುಂಬಿದಾಗ ಇಲ್ಲಿನ ರಸ್ತೆಯ ಮತ್ತೊಂದು ಬದಿಯಲ್ಲಿರುವ ಸಿಮೆಂಟ್ ಕಟ್ಟಡದೊಳಗೆ ಸೇರಿಕೊಳ್ಳು ತ್ತಾರೆ. ಸಣ್ಣ ಅಂಗನವಾಡಿ ಕಟ್ಟಡವನ್ನು ಲಾಲೂ ಕಟ್ಟಿಸಿಕೊಟ್ಟಿದ್ದರು ಎನ್ನುವ ಸ್ಥಳೀಯರು, ಇದು ಇಲ್ಲದಿದ್ದರೆ ನಾವು ಬೀದಿಯಲ್ಲೇ ಬದುಕಬೇಕು ಎಂದರು.
**
"ನಮ್ಮಲ್ಲಿ ನಲ್ಲಿಗಳಿಲ್ಲದೆ, ನೀರು ಪೂರೈಕೆ ಸರಿಯಾಗಿಲ್ಲ. ನೀರು ಪೂರೈಕೆಗೆ ವ್ಯವಸ್ಥೆಯಾದರೆ ಅನುಕೂಲ. ಈ ರೀತಿ ಬದುಕಿ ಸಾಕಾಗಿದೆ. ಇನ್ನಾದರೂ ಕನಿಷ್ಠ ವ್ಯವಸ್ಥೆಗಳನ್ನು ಹೊಂದಿ ನೆಮ್ಮದಿ ಯಿಂದ ಬದುಕಬೇಕು ಅನಿಸುತ್ತದೆ"
- ಸರಿತಾ ದೇವಿ, ಅಹಿಯಾಪುರ್ ಮಾಂಜಿ ಟೋಲಿ ನಿವಾಸಿ
"ಲಾಲೂ ಅಧಿಕಾರಕ್ಕೆ ಬರುವ ಮುನ್ನ ಮೇಲ್ಜಾತಿಯವರು ನಮ್ಮ ಟೋಲಿಗೆ ಬಂದಾಗ ಕುರ್ಚಿಯಲ್ಲಿ ಕೂರುತ್ತಿದ್ದರು. ನಾವು ನೆಲದಲ್ಲಿರುತ್ತಿದ್ದೆವು. ಲಾಲೂ ಬಂದ ಮೇಲೆ ಸ್ವಾಭಿಮಾನದಿಂದ ಬದುಕು ವಂತೆ ಮಾಡಿದರು. ಮೊದಲು ಜಮೀನು ಮಾಲೀಕರು ಕರೆದಾಗ ಕೆಲಸಕ್ಕೆ ಹೋಗಲೇಬೇಕಿತ್ತು. ಈಗ ಗೌರವದಿದ ಕೆಲಸಕ್ಕೆ ಬರುತ್ತೀರಾ ಎಂದು ಕೇಳುತ್ತಾರೆ. ಇಷ್ಟವಿದ್ದರಷ್ಟೇ ನಾವು ಹೋಗುತ್ತೇವೆ"
- ಗೋಪಿ ಮಾಂಜಿ ಮತ್ತು ಮಂತು ಮಾಂಜಿ, ಅಹಿಯಾಪುರ