Singer Zubeen Garg: ಸ್ಕೂಬಾ ಡೈವಿಂಗ್ ವೇಳೆ ಅಪಘಾತ! ಖ್ಯಾತ ಗಾಯಕ ಜುಬೀನ್ ಗರ್ಗ್ ನಿಧನ
ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಉಂಟಾದ ಅಪಘಾತದಲ್ಲಿ ಖ್ಯಾತ ಗಾಯಕ ಜುಬೀನ್ ಗರ್ಗ್ ಸಾವನ್ನಪ್ಪಿದ್ದಾರೆ. ಅವರಿಗೆ 52 ವರ್ಷವಾಗಿತ್ತು. ಈಶಾನ್ಯ ಉತ್ಸವದಲ್ಲಿ ಪ್ರದರ್ಶನ ನೀಡುವ ವೇಳೆ ಸ್ಕೂಬಾ ಡೈವಿಂಗ್ ಮಾಡುವಾಗ ಸಮುದ್ರಕ್ಕೆ ಬಿದ್ದಿದ್ದಾರೆ. ಕೂಡಲೇ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

-

ಸಿಂಗಾಪುರ: ಯಾ ಅಲಿ.. ಹಾಡಿನ ಮೂಲಕ ರಾಷ್ಟ್ರ ಮಟ್ಟದ ಖ್ಯಾತಿ ಪಡೆದಿದ್ದ ಗಾಯಕ ಜುಬೀನ್ ಗರ್ಗ್ (Assamese singer Zubeen Garg) ಅವರು ಸಿಂಗಾಪುರದಲ್ಲಿ (Singapore) ಸ್ಕೂಬಾ ಡೈವಿಂಗ್ (Scuba diving accident) ವೇಳೆ ಉಂಟಾದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 52 ವರ್ಷವಾಗಿತ್ತು. ಅವರು ಶುಕ್ರವಾರ ಈಶಾನ್ಯ ಉತ್ಸವದಲ್ಲಿ (North East Festival) ಪ್ರದರ್ಶನ ನೀಡುವ ವೇಳೆ ಸ್ಕೂಬಾ ಡೈವಿಂಗ್ ಮಾಡುವಾಗ ಸಮುದ್ರಕ್ಕೆ ಬಿದ್ದಿದ್ದಾರೆ. ಕೂಡಲೇ ಪೊಲೀಸರು ಅವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಅವರ ಹಠಾತ್ ಸಾವು ಅವರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ.
ಈಶಾನ್ಯ ಉತ್ಸವದ ಆಯೋಜಕರು ಈ ಕುರಿತು ಹೇಳಿಕೆ ನೀಡಿದ್ದು, ಜುಬೀನ್ ಗಾರ್ಗ್ ಅವರ ನಿಧನದ ಸುದ್ದಿಯನ್ನು ನಾವು ತುಂಬಾ ದುಃಖದಿಂದ ಹಂಚಿಕೊಳ್ಳುತ್ತೇವೆ. ಸ್ಕೂಬಾ ಡೈವಿಂಗ್ ಮಾಡುವಾಗ ಅವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಸಿಂಗಾಪುರ ಜನರಲ್ ಆಸ್ಪತ್ರೆಗೆ ಸಾಗಿಸುವ ಮೊದಲು ಅವರಿಗೆ ಸಿಪಿಆರ್ ನೀಡಲಾಯಿತು. ಅವರನ್ನು ಉಳಿಸುವ ಪ್ರಯತ್ನ ಮಾಡಲಾಯಿತು ಆದರೂ ಅವರು ಭಾರತೀಯ ಕಾಲಮಾನ ಮಧ್ಯಾಹ್ನ 2.30ರ ಸುಮಾರಿಗೆ ಐಸಿಯುನಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದೆ.
ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಜುಬೀನ್ ಗಾರ್ಗ್ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ಅಸ್ಸಾಂ ಇಂದು ತನ್ನ ನೆಚ್ಚಿನ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿತು. ಇದು ಅವರಿಗೆ ಹೋಗಲು ಸೂಕ್ತ ವಯಸ್ಸಾಗಿರಲಿಲ್ಲ. ಜುಬೀನ್ ಅವರ ಧ್ವನಿಯು ಜನರನ್ನು ಚೈತನ್ಯಗೊಳಿಸುವ ಸಾಟಿಯಿಲ್ಲದ ಸಾಮರ್ಥ್ಯವನ್ನು ಹೊಂದಿತ್ತು ಮತ್ತು ಅವರ ಸಂಗೀತವು ನಮ್ಮ ಮನಸ್ಸು ಮತ್ತು ಆತ್ಮಗಳೊಂದಿಗೆ ನೇರವಾಗಿ ಮಾತನಾಡಿತು.
ಮಾಜಿ ರಾಜ್ಯಸಭಾ ಸಂಸದ ರಿಪು ಬೋರಾ ಅವರು ಸಾಮಾಜಿಕ ಮಾಧ್ಯಮದ ಮೂಲಕ ಗಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ನಮ್ಮ ಸಾಂಸ್ಕೃತಿಕ ಐಕಾನ್ ಜುಬೀನ್ ಗಾರ್ಗ್ ಅವರ ಅಕಾಲಿಕ ನಿಧನದಿಂದ ತೀವ್ರ ಆಘಾತ ಮತ್ತು ದುಃಖಿತನಾಗಿದ್ದೇನೆ. ಅವರ ಧ್ವನಿ, ಸಂಗೀತ ಮತ್ತು ಅದಮ್ಯ ಚೈತನ್ಯವು ಅಸ್ಸಾಂ ಮತ್ತು ಅದರಾಚೆಗಿನ ಪೀಳಿಗೆಗೆ ಸ್ಫೂರ್ತಿ ನೀಡಿತು ಎಂದು ತಿಳಿಸಿದ್ದಾರೆ.
শব্দ আজি নিজেই নিজত আবদ্ধ
— Himanta Biswa Sarma (@himantabiswa) September 19, 2025
Today Assam lost one of its favourite sons. I am in a loss of words to describe what Zubeen meant for Assam. He has gone too early, this was not an age to go.
Zubeen's voice had an unmatched ability to energise people and his music spoke directly to…
ನಟ ಆದಿಲ್ ಹುಸೇನ್ ಅವರು ಕೂಡ ಗಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಿಂಗಾಪುರದಲ್ಲಿ ಅಪಘಾತದಲ್ಲಿ ಜುಬೀನ್ ಗಾರ್ಗ್ ಅವರ ಹಠಾತ್ ಮರಣದ ಸುದ್ದಿಯಿಂದ ಆಘಾತಕ್ಕೊಳಗಾಗಿದ್ದೇನೆ. ನನಗೆ ತುಂಬಾ ದುಃಖವಾಗಿದೆ... ಅಸ್ಸಾಮೀಸ್ ಸಂಗೀತ ಮತ್ತು ಸಂಸ್ಕೃತಿಗೆ ಅವರ ಕೊಡುಗೆ ಅಸಾಧಾರಣವಾಗಿದೆ. ಅವರು ತಮ್ಮ ಹಾಡುಗಳ ಮೂಲಕ ನಮ್ಮ ನಡುವೆ ಬದುಕುತ್ತಾರೆ. ಪ್ರಿಯ ಜುಬೀನ್ ನಾನು ನಿಮ್ಮನ್ನು ತುಂಬಾ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Robo Shankar: ತಮಿಳಿನ ಖ್ಯಾತ ಹಾಸ್ಯನಟ ಇನ್ನಿಲ್ಲ! ಮಗಳನ್ನೇ ಚುಂಬಿಸಿ ವಿವಾದಕ್ಕೀಡಾಗಿದ್ದ ರೋಬೋ ಶಂಕರ್
ಅಸ್ಸಾಂನ ಧ್ವನಿ ಎಂದೇ ಕರೆಯಲ್ಪಡುವ ಜುಬೀನ್ ಗಾರ್ಗಿ ಅವರು ಗ್ಯಾಂಗ್‌ಸ್ಟರ್ ಚಿತ್ರದ ಯಾ ಅಲಿ.. ಹಾಡಿನಿಂದ ಖ್ಯಾತಿಯನ್ನು ಪಡೆದರು. ಕ್ರಿಶ್ ೩ ಚಿತ್ರದಲ್ಲಿ ದಿಲ್ ತು ಹಿ ಬಾತಾ.., ಪ್ಯಾರ್ ಕೆ ಸೈಡ್ ಎಫೆಕ್ಟ್ಸ್ ನ ಜಾನೆ ಕ್ಯಾ ಚಾಹೆ ಮನ್.. ನಂತಹ ಹಲವು ಬಾಲಿವುಡ್ ಹಿಟ್‌ಗಳನ್ನು ಸಹ ಅವರು ನೀಡಿದ್ದಾರೆ. ಹಿಂದಿ ಸಿನಿಮಾ ಜೊತೆಗೆ ಅವರು ಅಸ್ಸಾಮೀಸ್, ಬಂಗಾಳಿ, ನೇಪಾಳಿ ಮತ್ತು ಹಲವಾರು ಇತರ ಪ್ರಾದೇಶಿಕ ಭಾಷೆಗಳಲ್ಲಿ ಹಾಡುಗಳನ್ನು ಕೂಡ ಹಾಡಿದ್ದರು.